ಐದು ತಿಂಗಳ ಗರ್ಭಿಣಿಯಾಗಿದ್ದ ಪಲ್ಲವಿ ಗವಿತ್ ಅವರು ಖಾಟ್ (ಹಗ್ಗದ ಮಂಚ) ಮೇಲೆ ಮೂರು ಗಂಟೆಗಳ ಕಾಲ ನೋವಿನಿಂದ ಬಳಲುತ್ತಿದ್ದರು. ಪಲ್ಲವಿಯವರ ಗರ್ಭಕೋಶವು ಯೋನಿಯಿಂದ ಜಾರಿಬಿದ್ದಾಗ, ಐದು ತಿಂಗಳ ಜೀವವಿಲ್ಲದ ಗಂಡು ಭ್ರೂಣವು ಒಳಗಿತ್ತು. ಆಕೆಯ ಅತ್ತಿಗೆ ಸಪ್ನಾ ಗರೆಲ್, 45, ಅವರ ಜೊತೆಯಲ್ಲಿದ್ದರು. ಅಸಹನೀಯ ನೋವು, ರಕ್ತ ಮತ್ತು ಸ್ರಾವದಿಂದಾಗಿ ಪಲ್ಲವಿ ಪ್ರಜ್ಞೆ ತಪ್ಪಿದರು.
ಅಂದು ಜುಲೈ 25, 2019ರಂದು ಮುಂಜಾನೆ 3 ಗಂಟೆ ಆಗಿತ್ತು. ಹೆಂಗ್ಲಾಪಾನಿಯಲ್ಲಿರುವ ಪಲ್ಲವಿಯವರ ಗುಡಿಸಲಿನ ಮೇಲೆ ಮಳೆ ಒಂದೇ ಸಮನೇ ಸುರಿಯುತ್ತಿತ್ತು, ಈ 55 ಭಿಲ್ ಕುಟುಂಬಗಳ ಕುಗ್ರಾಮವು ಸತ್ಪುರಾ ಬೆಟ್ಟಗಳ ಸಾಲಿನಲ್ಲಿದೆ. ವಾಯುವ್ಯ ಮಹಾರಾಷ್ಟ್ರದ ನಂದುರ್ಬಾರ್ ಜಿಲ್ಲೆಯ ದುರ್ಗಮ ಪ್ರದೇಶವಾದ ಈ ಭಾಗದಲ್ಲಿ ಒಳ್ಳೆಯ ರಸ್ತೆಗಳಿಲ್ಲ, ಮೊಬೈಲ್ ನೆಟ್‌ವರ್ಕ್ ಸಹ ಇಲ್ಲ. "ತುರ್ತು ಪರಿಸ್ಥಿತಿಗಳು ನಮ್ಮ ಆಹ್ವಾನದಂತೆ ಬರುವುದಿಲ್ಲ ಅವು ಯಾವ ಸಂದರ್ಭದ್ಲಲಿಯೂ ಎದುರಾಗಬಹುದು" ಎಂದು ಪಲ್ಲವಿಯವರ ಪತಿ ಗಿರೀಶ್ ಹೇಳುತ್ತಾರೆ. (ಈ ಲೀಖನದಲ್ಲಿ ಎಲ್ಲ ಹೆಸರುಗಳನ್ನೂ ಬದಲಾಯಿಸಲಾಗಿದೆ) "ನೆಟ್‌ವರ್ಕ್ ಕವರೇಜ್ ಇಲ್ಲದೆ, ನಾವು ಆಂಬುಲೆನ್ಸ್ ಅಥವಾ ವೈದ್ಯರನ್ನು ಕರೆಸುವುದಾದರೂ ಹೇಗೆ?"
"ನಾನು ಭಯಭೀತನಾಗಿದ್ದೆ, ನನಗೆ ಅವಳನ್ನು ಕಳೆದುಕೊಳ್ಳುವುದು ಬೇಕಿರಲಿಲ್ಲ." 30 ವರ್ಷದ ಗಿರೀಶ್ ಮುಂದುವರಿಸುತ್ತಾರೆ. ಮುಂಜಾನೆ ಬೆಳಗಿನ ಜಾವ 4 ಗಂಟೆಗೆ ಕತ್ತಲೆಯಲ್ಲಿ ಸುರಿಯುವ ಮಳೆಯಲ್ಲೇ ಬಿದಿರು ಮತ್ತು ಬೆಡ್‌ಶೀಟ್‌ನಿಂದ ತಯಾರಿಸಿದ ಸ್ಟ್ರೆಚರ್‌ನಲ್ಲಿ 105 ಕಿಲೋಮೀಟರ್ ದೂರದಲ್ಲಿರುವ ಧಡ್ಗಾಂವ್ ಕಡೆಗೆ ಕೆಸರಿನಿಂದ ಕೂಡಿದ ಸತ್ಪುರಾ ಬೆಟ್ಟಗಳ ಮೂಲಕ ಕರೆದೊಯ್ದರು.
ಹೆಂಗ್ಲಾಪಾನಿ ಕುಗ್ರಾಮವು ಅಕ್ರಾನಿ ತಾಲ್ಲೂಕಿನ ತೋರನ್ಮಲ್ ಗ್ರಾಮ ಪಂಚಾಯತ್ ಪ್ರದೇಶದಲ್ಲಿದೆ. ತೋರನ್ಮಲ್ ಗ್ರಾಮೀಣ ಆಸ್ಪತ್ರೆ ಹತ್ತಿರವಾಗುತ್ತಿತ್ತು, ಆದರೆ ಆ ರಾತ್ರಿ ಆ ರಸ್ತೆ ಸುರಕ್ಷಿತವಾಗಿರಲಿಲ್ಲ. ಬರಿಗಾಲಿನಲ್ಲಿ (ಒದ್ದೆಯಾದ ಮಣ್ಣಿನ ಕಾರಣ ಚಪ್ಪಲಿ ಧರಿಸಲು ಕಷ್ಟವಾಗುತ್ತದೆ), ಗಿರೀಶ್ ಮತ್ತು ಅವರ ನೆರೆಹೊರೆಯವರು ಕೆಸರಿನ ಹಾದಿಯಲ್ಲಿ ಹಿಡಿತ ಸಾಧಿಸಲು ಹೆಣಗಾಡಿದರು. ಪ್ಲಾಸ್ಟಿಕ್ ಹಾಳೆಯಿಂದ ಮುಚ್ಚಲ್ಪಟ್ಟಿದ್ದ ಪಲ್ಲವಿ ನೋವಿನಿಂದ ನರಳುತ್ತಿದ್ದರು.
ಅವರು ತೋರನ್ಮಲ್ ಘಾಟ್ ರಸ್ತೆಯನ್ನು ತಲುಪುವುದಕ್ಕೆ ಸುಮಾರು ಮೂರು ಗಂಟೆಗಳ ಕಾಲ ಎತ್ತರದ ಬೆಟ್ಟವನ್ನು ಏರಿದರು. "ಸುಮಾರು 30 ಕಿಲೋಮೀಟರ್ ಬೆಟ್ಟ ಹತ್ತಬೇಕು" ಎಂದು ಗಿರೀಶ್ ಹೇಳುತ್ತಾರೆ. ಅಲ್ಲಿಂದ ದಡ್ಗಾಂವ್ ತಲುಪಲು 1,000 ರೂಪಾಯಿಗೆ ಜೀಪನ್ನು ಬಾಡಿಗೆ ಪಡೆದು ಹೊರಟರು. ಐದು ಗಂಟೆಗಳ ಪ್ರಯಾಣದ ನಂತರ ಪಲ್ಲವಿಯವರನ್ನು ಧಡ್ಗಾಂವ್‌ನ ಖಾಸಗಿ ನರ್ಸಿಂಗ್ ಹೋಂಗೆ ದಾಖಲಿಸಲಾಯಿತು - ಅಲ್ಲಿನ ಗ್ರಾಮೀಣ ಆಸ್ಪತ್ರೆಯು ಇನ್ನೂ 10 ಕಿಲೋಮೀಟರ್ ದೂರದಲ್ಲಿದೆ. "ನಾಣು ಅವಳನ್ನು ದಾರಿಯಲ್ಲಿ ಮೊದಲು ಕಾಣಿಸಿದ ದವಾಖಾನ [ಆರೋಗ್ಯ ಸೌಲಭ್ಯ]ಕ್ಕೆ ಕರೆದೊಯ್ದೆ. ಅದು ದುಬಾರಿಯಾಗಿತ್ತು ಆದರೆ ಅವರು ನನ್ನ ಪಲ್ಲವಿಯನ್ನು ಉಳಿಸಿದರು." ಎಂದು ಅವರು ಹೇಳುತ್ತಾರೆ. ವೈದ್ಯರು ಅವರಿಗೆ ಮೂರು ಸಾವಿರ ರೂಪಾಯಿಗಳ ಶುಲ್ಕವನ್ನು ವಿಧಿಸಿ ಮರುದಿನ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿದರು. "ಭಾರೀ ರಕ್ತಸ್ರಾವದಿಂದ ಅವಳು ಸಾಯುವ ಸಾಧ್ಯತೆಯಿತ್ತೆಂದು ಅವರು ಹೇಳಿದರು," ಗಿರೀಶ್ ಹಿಂದಿನದನ್ನು ನೆನಪಿಸಿಕೊಳ್ಳುತ್ತಾರೆ.

!['ನನ್ನ ಕಾಟ್ [ಗರ್ಭಕೋಶ] ಹೊರಬರುತ್ತಲೇ ಇರುತ್ತದೆ'](/_next/image?url=https%3A%2F%2Fproduction.ruralindiaonline.org%2Fuploads%2F01_Prolapsed_Uterus_JS_ea0207244e.jpg&w=1080&q=75)










