ಸಂಪಾದಕರ ಟಿಪ್ಪಣಿ:
ಈ ಹಾಡು ಮತ್ತು ವಿಡಿಯೋ 19 ನೇ ಶತಮಾನದ ಉತ್ತರಾರ್ಧದಲ್ಲಿ ಉತ್ತರ ಇಟಲಿಯ ಪೊ ಕಣಿವೆಯಲ್ಲಿ ಮಹಿಳಾ ರೈತರ ನಡುವೆ ಹುಟ್ಟಿಕೊಂಡ ಜನಪದ ಬಂಡಾಯ ಗೀತೆಯಾದ ಬೆಲ್ಲಾ ಚಾವೋ (ಗುಡ್ಬೈ ಬ್ಯೂಟಿಫುಲ್)ನ ಅದ್ಬುತ ಪಂಜಾಬಿ ರೂಪಾಂತರವಾಗಿದೆ. ಅದರ ನಂತರ ಇಟಲಿಯ ಫ್ಯಾಸಿಸ್ಟ್ ವಿರೋಧಿ ದಂಗೆಯ ಸದಸ್ಯರು ಈ ಹಾಡಿನ ಸಾಹಿತ್ಯವನ್ನು ಬದಲಾಯಿಸಿ ಮುಸೊಲಿನಿಯ ಸರ್ವಾಧಿಕಾರದ ವಿರುದ್ಧದ ಹೋರಾಟದಲ್ಲಿ ಈ ಹಾಡನ್ನು ಬಳಸಿಕೊಳ್ಳಲಾಯಿತು. ಈ ಆವೃತ್ತಿಯ ವಿವಿಧ ಪ್ರಕಾರಗಳನ್ನು ಸ್ವಾತಂತ್ರ್ಯ ಮತ್ತು ಫ್ಯಾಸಿಸಂ ವಿರುದ್ಧದ ದಂಗೆಯ ಸಂಕೇತವಾಗಿ ಪ್ರಪಂಚದಾದ್ಯಂತ ಹಾಡಲಾಗುತ್ತಿದೆ.
ಪಂಜಾಬಿಯಲ್ಲಿರುವ ಈ ಗೀತೆಯನ್ನು ಪೂಜನ್ ಸಾಹಿಲ್ ಬರೆದು ಅದ್ಭುತವಾಗಿ ಹಾಡಿದ್ದಾರೆ. ಹರ್ಷ್ ಮಂದರ್ ನೇತೃತ್ವದ ಅಭಿಯಾನವಾದ ಕಾರವಾನ್ ಇ ಮೊಹಬ್ಬತ್ ಮಾಧ್ಯಮ ತಂಡ ಈ ವಿಡಿಯೋವನ್ನು ಅದ್ಭುತವಾಗಿ ಚಿತ್ರೀಕರಿಸುವುದರೊಂದಿಗೆ ಸಂಪಾದನೆ ಮತ್ತು ನಿರ್ಮಾಣವನ್ನೂ ಮಾಡಿದೆ. ಐಕಮತ್ಯ, ಸಮಾನತೆ, ಸ್ವಾತಂತ್ರ್ಯ, ನ್ಯಾಯ ಹಾಗೂ ಭಾರತೀಯ ಸಂವಿಧಾನದ ಸಾರ್ವತ್ರಿಕ ಮೌಲ್ಯಗಳಿಗೆ ಈ ಗೀತೆಯನ್ನು ಅರ್ಪಿಸಿದೆ.
ಕೃಷಿ ರಾಜ್ಯ ವಿಷಯವಾಗಿದ್ದರೂ, ಕೇಂದ್ರ ಸರ್ಕಾರ ಸೆಪ್ಟೆಂಬರ್ನಲ್ಲಿ ಸಂಸತ್ತಿನಲ್ಲಿ ಮೂರು ಹೊಸ ಕೃಷಿ ಕಾನೂನುಗಳನ್ನು ಮಂಡಿಸಿ ಅನುಮೋದನೆ ಪಡೆದು ರೈತರ ಮೇಲೆ ಹೇರಿದೆ. ಈ ಕಾನೂನುಗಳು ರೈತರಿಗೆ ಅನಾನುಕೂಲವನ್ನು ಉಂಟುಮಾಡಲಿದ್ದು ಈ ಕುರಿತು ಇತ್ತೀಚಿನ ಕೆಲವು ವಾರಗಳಲ್ಲಿ, ದೆಹಲಿ-ಹರಿಯಾಣ, ಪಂಜಾಬ್ ಮತ್ತು ದೇಶದ ಇತರ ಭಾಗಗಳಲ್ಲಿ ನಿರಂತರ ಮತ್ತು ವ್ಯಾಪಕವಾದ ಪ್ರತಿಭಟನೆ ನಡೆಯುತ್ತಿದೆ. ಈ ಕೆಳಗಿನ ವೀಡಿಯೊ ಮತ್ತು ಹಾಡು ಆ ಕಾನೂನುಗಳನ್ನು ರದ್ದುಗೊಳಿಸಬೇಕೆಂಬ ಆಗ್ರಹವನ್ನು ಸಾಹಿತ್ಯ ಮತ್ತು ದೃಶ್ಯ ರೂಪದಲ್ಲಿ ನಮ್ಮ ಮುಂದಿಡುತ್ತದೆ.
ಅನುವಾದ: ಶಂಕರ ಎನ್. ಕೆಂಚನೂರು