ಜೈಪುರದಲ್ಲಿರುವ ಉಚ್ಚ ನ್ಯಾಯಾಲಯವು ಒಳ್ಳೆಯ ಆಹ್ಲಾದಕರ ಪರಿಸರದಲ್ಲಿದೆ. ಆದರೆ ಇಲ್ಲಿಯ ಉದ್ಯಾನದಲ್ಲಿರುವ ಒಂದು ಅಂಶವು ಮಾತ್ರ ರಾಜಸ್ಥಾನದಲ್ಲಿರುವ ಬಹುತೇಕರನ್ನು ಬೆಚ್ಚಿಬೀಳಿಸುತ್ತಿರುವುದು ಸತ್ಯ. ಅದೇನೆಂದರೆ ತನ್ನ ಆವರಣದಲ್ಲಿ ಮನುವಿನ ಮೂರ್ತಿಯನ್ನು ಹೊಂದಿರುವ ನ್ಯಾಯಾಲಯವೊಂದು ಇಡೀ ದೇಶದಲ್ಲಿ ಪ್ರಾಯಶಃ ಬೇರೆ ಇರಲಿಕ್ಕಿಲ್ಲ (ಮುಖಪುಟ ಚಿತ್ರವನ್ನು ಗಮನಿಸಿ).
ಮನು ಎಂಬಾತ ನಿಜಕ್ಕೂ ಈ ಜಗತ್ತಿನಲ್ಲಿದ್ದ ಎಂಬ ಬಗ್ಗೆ ನಂಬಲರ್ಹ ಸಾಕ್ಷಿಗಳು ಲಭ್ಯವಿಲ್ಲದಿದ್ದರೂ, ಈ ಮೂರ್ತಿಯು ಕಲಾವಿದನೊಬ್ಬನ ಕಲ್ಪನೆಯ ಕೂಸಾಗಿದೆ. ಆದರೂ ಒಂದು ರೀತಿಯಲ್ಲಿ ಇದು ಪರಿಮಿತ ಕಲ್ಪನೆಯೇ ಸರಿ. ಏಕೆಂದರೆ ಇಲ್ಲಿರುವ ಮನುವಿನ ಮೂರ್ತಿಯು ಜನಪ್ರಿಯ ಸಿನೆಮಾ ಕಲ್ಪನೆಗಳಲ್ಲಿರುವ "ಋಷಿ"ಯೊಬ್ಬನನ್ನು ಹೋಲುತ್ತಿದೆ.
ಪುರಾಣಗಳ ಪ್ರಕಾರ ಈ ಹೆಸರಿನ ವ್ಯಕ್ತಿಯೊಬ್ಬ "ಮನುಸ್ಮøತಿ" ಎಂಬ ಗ್ರಂಥವನ್ನು ರಚಿಸಿದ್ದ. ಈ ಸ್ಮøತಿಯಲ್ಲಿರುವುದೇನೆಂದರೆ ಶತಮಾನಗಳ ಹಿಂದೆ ಆ ಕಾಲದಲ್ಲಿ ಬ್ರಾಹ್ಮಣರು ಸಮಾಜದ ಇತರರ ಮೇಲೆ ಹೇರಿದ್ದ ನಿಯಮಗಳು. ಜಾತಿವಾದವನ್ನು ಉಗ್ರವಾಗಿ ಬೆಂಬಲಿಸುವ ನಿಯಮಗಳಿವು. ಕ್ರಿಸ್ತಪೂರ್ವ 200 ರಿಂದ ಕ್ರಿಸ್ತಶಕ 1000 ರ ನಡುವೆ ಇಂಥಾ ಹಲವು ಸ್ಮøತಿಗಳನ್ನು ರಚಿಸಲಾಗಿತ್ತು. ಕಾಲಾಂತರದಲ್ಲಿ ಹಲವು ಲೇಖಕರು ಇಂಥಾ ನಿಯಮಗಳನ್ನು ರೂಪಿಸಿ ಈ ಸ್ಮøತಿಗಳನ್ನು ರಚಿಸಿದ್ದರು. ಇವುಗಳಲ್ಲಿ ಬಹಳ ಖ್ಯಾತಿಯನ್ನು ಪಡೆದ ಸ್ಮøತಿಯೇ ಮನುಸ್ಮøತಿ. ಜಾತಿಗಳ ಆಧಾರದಲ್ಲಿ ಒಂದೇ ಬಗೆಯ ಅಪರಾಧಕ್ಕಾಗಿ ವಿವಿಧ ಶಿಕ್ಷೆಗಳನ್ನು ರೂಪಿಸಿದ್ದ ಮನುಸ್ಮøತಿಯು ಉಳಿದೆಲ್ಲವುಗಳಿಗಿಂತ ವಿಭಿನ್ನವಾಗಿ ನಿಂತಿದ್ದು ಸತ್ಯ.
ಈ ಸ್ಮøತಿಯ ಪ್ರಕಾರ ಕೆಳಜಾತಿಯ ಬದುಕು ಅಷ್ಟೇನೂ ಮೌಲ್ಯವುಳ್ಳದ್ದಲ್ಲ. "ಶೂದ್ರನೊಬ್ಬನ ಕೊಲೆಗೆ ಬೇಕಾಗಿರುವ ಪಶ್ಚಾತ್ತಾಪ" ವನ್ನೇ ಪರಿಗಣಿಸೋಣ. ಶೂದ್ರನೊಬ್ಬನ ಹತ್ಯೆಯು ಮನುಷ್ಯನೊಬ್ಬ ‘ಒಂದು ಕಪ್ಪೆಯನ್ನು, ಒಂದು ನಾಯಿಯನ್ನು, ಒಂದು ಗೂಬೆ ಅಥವಾ ಒಂದು ಕಾಗೆಯನ್ನು’ ಕೊಲ್ಲುವಷ್ಟೇ ಇಲ್ಲಿ ಸಮಾನ. ಹೆಚ್ಚೆಂದರೆ ‘ಸದ್ಗುಣಿಯಾದ ಶೂದ್ರನೊಬ್ಬನ ಹತ್ಯೆ’ಗೆ ಬೇಕಾಗಿರುವ ಪ್ರಾಯಶ್ಚಿತ್ತವು ಬ್ರಾಹ್ಮಣನೊಬ್ಬನನ್ನು ಕೊಂದಾಗ ಮಾಡಬೇಕಿರುವ ಪ್ರಾಯಶ್ಚಿತ್ತದ ಹದಿನಾರನೇ ಒಂದು ಭಾಗಕ್ಕೆ ಸಮಾನವಂತೆ.
ಸಮಾನತೆಯನ್ನು ಸಾರುವ ವ್ಯವಸ್ಥೆಯ ಕಾನೂನು ಅನುಸರಿಸಬೇಕಾದ ಮೌಲ್ಯವಂತೂ ಇದಲ್ಲ. ದಬ್ಬಾಳಿಕೆಯ ಸಂಕೇತದಂತಿರುವ ಈ ಮೂರ್ತಿಯನ್ನು ಕೋರ್ಟ್ ಆವರಣದಲ್ಲಿ ನೋಡಿದಾಗಲೆಲ್ಲಾ ಇಲ್ಲಿಯ ದಲಿತರ ರಕ್ತ ಕುದಿಯತೊಡಗುತ್ತದೆ. ಇದಕ್ಕಿಂತಲೂ ಗಂಭೀರವಾದ ಸಂಗತಿಯೆಂದರೆ ಭಾರತೀಯ ಸಂವಿಧಾನದ ಶಿಲ್ಪಿಯ ಕುರುಹೂ ಕೂಡ ಕೋರ್ಟ್ ಪರಿಸರದಲ್ಲಿಲ್ಲ. ಬದಲಾಗಿ ಡಾ. ಬಾಬಾಸಾಹೇಬ್ ಅಂಬೇಡ್ಕರರ ಮೂರ್ತಿಯೊಂದು ರಸ್ತೆಯ ಮೂಲೆಯಲ್ಲಿ ಟ್ರಾಫಿಕ್ ನತ್ತ ಮುಖ ಮಾಡಿ ನಿಂತಿದೆ. ನ್ಯಾಯಾಲಯಕ್ಕೆ ಬರುತ್ತಿರುವ ಎಲ್ಲರನ್ನು ಮಾತ್ರ ಮನು ಹೆಮ್ಮೆಯಿಂದ ಎದುರುಗೊಳ್ಳುತ್ತಿದ್ದಾನೆ.







