"ನಾವು ರಹಸ್ಯ ಮಾರ್ಗದ ಮೂಲಕ ಹೊರಗ ಬಂದ್ವಿ, ಆದರೆ ನಾವರss ಏನ್ ಮಾಡಬೇಕು ಹೇಳರ್ರೀ? ಕನಿಷ್ಠ ನಮ್ಮ ಕಡೆ ವಸ್ತು ಇದ್ದಿದ್ರ, ನಾವ್ ಮನ್ಯಾಗ್ ಕುಂತು ಬುಟ್ಟಿ ನೇಯ್ದು ಅವುಗಳನ್ನ ತಯಾರ್ ಮಾಡಿ ಇಟ್ಕೋಬಹುದಿತ್ತು” ಎಂದು ತೆಲಂಗಾಣದ ಕಂಗಲ್ ಹಳ್ಳಿಯ ಬುಟ್ಟಿ ತಯಾರಕರ ಗುಂಪು ಹೇಳಿತು. ಅಂದ ಹಾಗೆ ಅವರ ರಹಸ್ಯ ಮಾರ್ಗ ಯಾವುದೆಂದರೆ, ಅಲ್ಲಿ ಪೋಲೀಸರ ಬ್ಯಾರಿಕೇಡ್ಗಳಾಗಲಿ ಅಥವಾ ಗ್ರಾಮಸ್ಥರು ದಾರಿಗೆ ಅಡ್ಡಲಾಗಿ ಹಾಕಿರುವ ಯಾವುದೇ ಮುಳ್ಳಿನ ಬೇಲಿಗಳಾಗಲಿ ಇರುವುದಿಲ್ಲ.
ಏಪ್ರಿಲ್ 4ರಂದು, ಈಚಲು ಮರದ ಗರಿಗಳನ್ನು ಸಂಗ್ರಹಿಸಲು ಕಂಗಾಲಿನಿಂದ ಏಳು ಕಿಲೋಮೀಟರ್ ದೂರದಲ್ಲಿರುವ ಕುಗ್ರಾಮ ವೆಳ್ಳಿದಂಡುಪಾಡುಗೆ ಹೋಗಲು, ಇತರ ನಾಲ್ಕು ಮಹಿಳೆಯರು ಮತ್ತು ಒಬ್ಬ ವ್ಯಕ್ತಿಯೊಂದಿಗೆ, ನೇಲಿಗುಂದರಾಶಿ ರಾಮುಲಮ್ಮ ಆಟೋರಿಕ್ಷಾವನ್ನು ಹತ್ತಿದರು. ಇದರ ಗರಿಯಿಂದ ಅವರು ಬುಟ್ಟಿಗಳನ್ನು ನೇಯುತ್ತಾರೆ. ಅವರು ಸಾಮಾನ್ಯವಾಗಿ ಈ ಗರಿಗಳನ್ನು ಸಾರ್ವಜನಿಕ ಜಮೀನಿನಿಂದ ಅಥವಾ ಕೆಲವೊಮ್ಮೆ ಕೃಷಿ ಭೂಮಿಯಿಂದ ಸಂಗ್ರಹಿಸಿ, ಅದಕ್ಕೆ ಪ್ರತಿಯಾಗಿ ಕೆಲವು ಬುಟ್ಟಿಗಳನ್ನು ರೈತರ ಜೊತೆಗೆ ವಿನಿಮಯ ಮಾಡಿಕೊಳ್ಳುತ್ತಾರೆ.
ತೆಲಂಗಾಣದಲ್ಲಿ ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿರುವ ಯೆರುಕುಲ ಸಮುದಾಯದಲ್ಲಿನ ಕಂಗಲ್ ಬುಟ್ಟಿ ತಯಾರಕರಿಗೆ ಮಾರ್ಚಿಯಿಂದ ಮೇ ತಿಂಗಳ ಅವಧಿಯು ತಮ್ಮ ಬುಟ್ಟಿಗಳನ್ನು ಮಾರಾಟ ಮಾಡಲು ನಿರ್ಣಾಯಕ ಸಮಯವಾಗಿದೆ. ಈ ತಿಂಗಳುಗಳಲ್ಲಿರುವ ಬಿಸಿ ತಾಪಮಾನವು ಕೂಡ ಗರಿಗಳನ್ನು ಒಣಗಿಸಲು ಸೂಕ್ತವಾಗಿದೆ.
ವರ್ಷದ ಉಳಿದ ದಿನಗಳಲ್ಲಿ, ಅವರು ಸಾಮಾನ್ಯವಾಗಿ ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ, ಇದರಿಂದ ದಿನಗೂಲಿಯಂತೆ ಅವರು 200 ರೂ. ಸಂಪಾದಿಸುತ್ತಾರೆ. ಡಿಸೆಂಬರ್ನಿಂದ ಫೆಬ್ರುವರಿ ಹತ್ತಿ ಕೊಯ್ಲಿನ ಅವಧಿಯಾಗಿರುವುದರಿಂದ ಆ ಒಂದು ತಿಂಗಳ ಅವಧಿಯಲ್ಲಿ ಕೆಲವೊಮ್ಮೆ ದಿನಕ್ಕೆ 700-800 ರೂ.ಗಳನ್ನು ಸಂಪಾದಿಸುತ್ತಾರೆ. ಆದರೆ ಇದೆಲ್ಲವೂ ಕೆಲಸ ಲಭ್ಯತೆ ಮೇಲೆ ಅವಲಂಬಿತವಾಗಿರುತ್ತದೆ.
ಈ ವರ್ಷ, ಕೋವಿಡ್ -19 ಲಾಕ್ಡೌನ್ ಅವರ ಬುಟ್ಟಿ ಮಾರಾಟದಿಂದ ಬರುವ ಅವರ ಗಳಿಕೆಯನ್ನು ಸಂಪೂರ್ಣ ಸ್ಥಗಿತಗೊಳಿಸಿದೆ. "ಈಗ ಯಾರ ಕಡೆ ರೊಕ್ಕಾ ಐತಿ, ಅವ್ರು ಮಾತ್ರ ಊಟ ಮಾಡಾಕುಂತಾರ, ಆದರೆ ನಾವು ಮಾಡಲ್ಲ, ಹಂಗಾಗಿ ನಾವು ಈ ಗರಿ ತರಾಕ್ ಹೊರಗ ಬಂದೇವಿ, ಇಲ್ಲಾಂದ್ರ ನಾವ್ ಯಾಕ್ ಬರತಿದ್ವಿ ಹೇಳಿ ?" ಎಂದು ಸುಮಾರು 70 ವರ್ಷ ವಯಸ್ಸಿನ ರಾಮುಲಮ್ಮ ಹೇಳುತ್ತಿದ್ದರು.







