2020ರಲ್ಲಿ, ಕೊರೋನಾ ಕಾರಣದಿಂದಾಗಿ ಲಾಕ್‌ಡೌನ್ ಘೋಷಿಸಲಾಯಿತು. ದಾದಾ ಬಿದ್ದು ಕಾಲು ಮುರಿದುಕೊಂಡಿದ್ದಾರೆನ್ನುವ ಸುದ್ದಿ ಊರಿಂದ ಬಂದಿತ್ತು. ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಬಂದಿರಲಿಲ್ಲ, ಕೊರೋನಾದಿಂದಾಗಿ ಹತ್ತಿರದ ಎಲ್ಲಾ ಖಾಸಗಿ ಕ್ಲಿನಿಕ್‌ಗಳನ್ನು ಮುಚ್ಚಲಾಗಿತ್ತು. ಹೇಗೋ ಮನೆಯವರು ಅಜ್ಜನ ಮುರಿದ ಕಾಲಿಗೆ ಪ್ಲಾಸ್ಟರ್ ಮಾಡಿ ಮನೆಯಲ್ಲಿಯೇ ಆರೈಕೆ ಮಾಡತೊಡಗಿದರು. ಆದರೆ, ಕೆಲವೊಮ್ಮೆ ಜ್ವರದ ಭಾದೆ ತಡೆಯಲಾಗದೆ ಕಿರುಚುತ್ತಿದ್ದರು ಮತ್ತು ಕೆಲವೊಮ್ಮೆ ಅವನ ಕಾಲುಗಳಲ್ಲಿ ಸಹಿಸಲಾಗದ ನೋವಿನ ಕಾರಣಕ್ಕೆ ಕೂಗಾಡುತ್ತಿದ್ದರು. ದಿನಕಳೆದಂತೆ ಅವರ ದೇಹವು ದುರ್ಬಲವಾಗತೊಡಗಿತು, ಕೊನೆಗೆ ಮೇ ತಿಂಗಳ ಕೊನೆಯ ವಾರದಲ್ಲಿ ಅವರು ಕೊನೆಯುಸಿರೆಳೆದರು.
ಈ ಘಟನೆ ನಡೆದಾಗ ನಾನು ಮುಂಬೈಯಲ್ಲಿದ್ದೆ. ಏಕಾಏಕಿ ಎಲ್ಲವೂ ಬಂದ್ ಆಗಿದ್ದರಿಂದ ಜನಜೀವನದಲ್ಲಿ ಬಿರುಗಾಳಿ ಎದ್ದಿತ್ತು. ಒಂದೆಡೆ ಸಾಂಕ್ರಾಮಿಕ ರೋಗದ ಭೀತಿ ಆವರಿಸಿದರೆ, ಮತ್ತೊಂದೆಡೆ ಪೊಲೀಸರು ಬೀದಿಗಿಳಿದು ಲಾಠಿ ಪ್ರಹಾರ ನಡೆಸುತ್ತಿದ್ದರು. ಕೆಲಸ ಸ್ಥಗಿತಗೊಂಡಿತ್ತು, ವಲಸೆ ಕಾರ್ಮಿಕರು ತಮ್ಮ ಗ್ರಾಮಗಳಿಗೆ ಮರಳಲು ಪ್ರಾರಂಭಿಸಿದ್ದರು. ನಾನು ತರಕಾರಿ ವ್ಯಾಪಾರ ಮಾಡುತ್ತಿದ್ದ ಕಾರಣ ಮುಂಬಯಿಯಲ್ಲಿಯೇ ಉಳಿದುಕೊಂಡೆ, ಈ ವ್ಯಾಪಾರ ನಡೆಸಲು ಅವಕಾಶ ಇತ್ತು. ಆದರೆ, ಉತ್ತರ ಪ್ರದೇಶದ ಜೌನ್‌ಪುರ ಜಿಲ್ಲೆಯ ನನ್ನ ಹಳ್ಳಿಯಿಂದ ದಾದಾ ನಿಧನರಾದ ಸುದ್ದಿ ಬಂದಾಗ, ತಕ್ಷಣ ಮನೆಗೆ ಹೋಗಬೇಕೆನ್ನುವ ಆಸೆ ಹುಟ್ಟಿತು. ನನಗೆ ಅವರೊಂದಿಗೆ ಭಾವನಾತ್ಮಕ ಬಾಂಧವ್ಯವಿತ್ತು. ಅಲ್ಲದೆ ಅಮ್ಮನನ್ನು ಬಿಟ್ಟರೆ ಬೇರೆ ಜವಾಬ್ದಾರಿ ಹೊರಬಲ್ಲ ವ್ಯಕ್ತಿ ಊರಿನಲಿರಲಿಲ್ಲ.
ಒಳಗೊಳಗೆ ಅನೇಕ ಸುದ್ದಿಗಳು ಓಡಾಡುತ್ತಿದ್ದ ಕಾಲವಿದು. ಕೆಲವು ಕಾರ್ಮಿಕರು ಕಾಲ್ನಡಿಗೆಯಲ್ಲಿ ತಮ್ಮ ಮನೆಗಳಿಗೆ ಹೋಗುತ್ತಿದ್ದರು ಮತ್ತು ಬಳಲಿಕೆಯಿಂದಾಗಿ ರಾತ್ರಿ ರೈಲು ಹಳಿಗಳ ಮೇಲೆ ಜನರು ಮಲಗುತ್ತಿದ್ದರು. ರೈಲು ಹರಿದು ಹಲವರು ಸತ್ತರು. ತಾಯಿಯೊಬ್ಬಳು ಧಾನ್ಯ ಮತ್ತು ನೀರಿಲ್ಲದೆ ತನ್ನ ಸೊಂಟದಲ್ಲಿ ಹಾಲು ಕುಡಿಯುವ ಮಗುವನ್ನು ಎತ್ತಿಕೊಂಡು ನಡೆಯುತ್ತಿದ್ದಳು. ದಾದಾ ಮರಣದ ನಂತರ ನಾನು ನನ್ನ ವಸ್ತುಗಳನ್ನು ಕಟ್ಟಿಕೊಂಡು ರೈಲು ಹುಡುಕಲು ಮುಂಬೈನ ಅಂಧೇರಿ (ಪಶ್ಚಿಮ)ದಲ್ಲಿರುವ ಹತ್ತಿರದ ನಿಲ್ದಾಣಕ್ಕೆ ಹೋದೆ. ಆದರೆ ಅಲ್ಲಿಗೆ ಹೋದಾಗ ಅಲಹಾಬಾದ್‌ಗೆ ಹೋಗುವ ರೈಲು ತನ್ನ ಓಡಾಟ ನಿಲ್ಲಿಸಿರುವುದು ತಿಳಿದುಬಂತು. ಇದೇ ವೇಳೆ ವಾರಣಾಸಿಯಲ್ಲಿ ರೈಲಿನೊಳಗೆ ಎರಡು ಮೃತದೇಹಗಳು ಪತ್ತೆಯಾಗಿರುವ ಸುದ್ದಿಯೂ ಬಂತು. ಅದು ಒಡಿಶಾದಿಂದ ಉತ್ತರ ಪ್ರದೇಶಕ್ಕೆ ತೆರಳಬೇಕಿದ್ದ ರೈಲು. ಮತ್ತು ನಾನು ಹಳ್ಳಿಯನ್ನು ತಲುಪಲು ಅಲಹಾಬಾದ್ (ಪ್ರಯಾಗ್ರಾಜ್)ನಿಂದ ಇನ್ನೂ 70 ಕಿಮೀ ದೂರ ಹೋಗಬೇಕಾಗಿತ್ತು, ಹೀಗಾಗಿ ಈ ಸುದ್ದಿಯು ಮತ್ತಷ್ಟು ಖಿನ್ನತೆಯನ್ನು ಹುಟ್ಟಿಸಿತು. ಟ್ಯಾಕ್ಸಿ ಬುಕ್ ಮಾಡಿ ಹೋಗಬೇಕೆಂದಿದ್ದರೆ ಹೋಗಬಹುದಿತ್ತು, ಆದರೆ ಅದಕ್ಕೆ 40-50,000 ರೂ. ಬೇಕಿತ್ತು. ಅದು ನನ್ನಿಂದ ಸಾಧ್ಯವಾಗುವ ಮಾತಾಗಿರಲಿಲ್ಲ, ಕೊನೆಗೆ ನಾನು ಹಳ್ಳಿಗೆ ಹೋಗುವ ಆಲೋಚನೆಯನ್ನು ಬಿಟ್ಟುಬಿಟ್ಟೆ. ಅದನ್ನು ಬಿಟ್ಟು ನನಗೂ ಇನ್ನೊಂದು ಆಯ್ಕೆ ಇದ್ದಿರಲಿಲ್ಲ ಎನ್ನಿ.























