ಈ ಹೂವು ಕಿರುಬೆರಳಿನ ಉಗುರಿನಷ್ಟೂ ದೊಡ್ಡದಿರುವುದಿಲ್ಲ, ಮೊಗ್ಗುಗಳು ಮಸುಕು ಬಿಳುಪಿನ ಬಣ್ಣದಲ್ಲಿದ್ದು ಮುದ್ದಾಗಿರುತ್ತವೆ. ಹೊಲದಲ್ಲಿ ಅಲ್ಲಲ್ಲಿ ಅರಳಿ ನಿಂತ ಹೂವುಗಳು ಬಳಿ ಸುಳಿಯುವರ ಮೂಗಿಗೆ ಸೌಗಂಧವನ್ನು ಉಣಬಡಿಸುತ್ತವೆ. ಅರಳಿದ ಹೂಗಳು ಚಿಕ್ಕೆಯಂತೆ ಹೊಳೆಯುತ್ತಿರುತ್ತವೆ. ಮಲ್ಲಿಗೆ ಹೂವೆನ್ನುವುದು ಧೂಳು ತುಂಬಿದ ನೆಲ, ದಪ್ಪನೆಯ ಗಿಡ, ಮೋಡ ತುಂಬಿದ ಆಕಾಶ ನಮಗೆ ಅದ್ಭುತ ಉಡುಗೊರೆ.
ಆದರೆ ಇಲ್ಲಿನ ಕೆಲಸಗಾರರಿಗೆ ಇಂತಹ ಕವಿ ಸಮಯಕ್ಕೆ ಪುರುಸೊತ್ತಿಲ್ಲ. ಮಲ್ಲಿಗೆಯ ಮೊಗ್ಗು ಅರಳು ಮೊದಲು ಅದನ್ನು ಪೂಕಡೈ (ಹೂವಿನ ಮಾರುಕಟ್ಟೆ)ಗೆ ಸಾಗಿಸುವ ಅವಸರವಿದೆ. ಅದು ಚೌತಿಯ ಸಮಯವಾಗಿತ್ತು. ಈ ಸಮಯದಲ್ಲಿ ಹೂವನ್ನು ಮಾರುಕಟ್ಟೆಗೆ ತಲುಪಿಸಿದರೆ ಒಂದಷ್ಟು ಉತ್ತಮ ಬೆಲೆಯನ್ನೂ ಎದುರು ನೋಡಬಹುದು.
ಹೆಂಗಸರು ಮತ್ತು ಗಂಡಸರು ತಮ್ಮ ಹೆಬ್ಬೆರಳು ಮತ್ತು ತೋರುಬೆರಳುಗಳನ್ನು ಬಳಸಿ ಮೊಗ್ಗುಗಳನ್ನು ಗಡಿಬಿಡಿಯಿಂದ ಕೀಳುತ್ತಾರೆ. ಮೊಗ್ಗುಗಳು ಮುಷ್ಟಿ ತುಂಬಿದಂತೆ ಕಿತ್ತ ಮೊಗ್ಗುಗಳನ್ನು ತಮ್ಮ ಲುಂಗಿಯ ಮಡಚಿನೊಳಗೋ ಅಥವಾ ಸೀರೆಯ ಸೆರಗಿನ ತುದಿಗೋ ಸುರಿಯುತ್ತಾರೆ. ನಂತರ ಅದನ್ನು ಚೀಲಕ್ಕೆ ತುಂಬಿಕೊಳ್ಳುತ್ತಾರೆ. ಈ ಮೊಗ್ಗು ಆರಿಸುವ ಕೆಲಸಕ್ಕೂ ಒಂದು ಶಿಸ್ತಿದೆ: ಗಿಡದ ಕೊಂಬೆಗಳನ್ನು ಸರಿಸಿ ಮೊಗ್ಗುಗಳನ್ನು ಕೀಳಲಾಗುತ್ತದೆ. ನಂತರ ಮುಂದಿನ ಗಿಡಕ್ಕೆ ಸಾಗಲಾಗುತ್ತದೆ. ಮೂರುವ ವರ್ಷದಷ್ಟು ಮಗುವಿನಷ್ಟು ಎತ್ತರವಿರುವ ಗಿಡಗಳ ಮೊಗ್ಗನ್ನು ಕೀಳುತ್ತಾ ಮಾತಾಡುತ್ತಾ ಕೆಲಸ ಮಾಡುತ್ತಾರೆ. ಜೊತೆಗೆ ಸೂರ್ಯ ಪೂರ್ವದಲ್ಲಿ ಮೇಲೆ ಬರುವ ಹೊತ್ತಿಗೆ ರೇಡಿಯೋದಲ್ಲಿ ಬರುವ ಜನಪ್ರಿಯ ತಮಿಳು ಹಾಡುಗಳನ್ನು ಸಹ ಕೇಳಲಾಗುತ್ತದೆ.
ಇದು ಮುಂಗಿದ ನಂತರ ಕೂಡಲೇ ಮೊಗ್ಗುಗಳನ್ನು ಮಧುರೈ ನಗರದ ಮಟ್ಟುತವಾನಿ ಮಾರುಕಟ್ಟೆಗೆ ಸಾಗಿಸಲಾಗುತ್ತದೆ. ಅಲ್ಲಿಂದ ಈ ಮೊಗ್ಗುಗಳು ತಮಿಳುನಾಡಿನ ಇತರ ನಗರಗಳಿಗೆ ಪ್ರಯಾಣಿಸುತ್ತವೆ. ಇನ್ನೂ ಕೆಲವೊಮ್ಮೆ ಸಾಗರದಾಚೆಯ ನಾಡುಗಳಿಗೂ ಕಳಿಸಲ್ಪಡುತ್ತವೆ.
2021, 2022 ಮತ್ತು 2023ರಲ್ಲಿ ಮಧುರೈ ಜಿಲ್ಲೆಯ ತಿರುಮಂಗಲಂ ಮತ್ತು ಉಸಿಲಂಪಟ್ಟಿ ತಾಲ್ಲೂಕುಗಳಿಗೆ ಪರಿ ಭೇಟಿ ನೀಡಿತ್ತು. ಮಲ್ಲಿಗೆ ಹೊಲಗಳು ಮಧುರೈ ನಗರದಿಂದ ಒಂದು ಗಂಟೆಗಿಂತಲೂ ಕಡಿಮೆ ಪ್ರಯಾಣದ ದೂರದಲ್ಲಿವೆ. ಮಧುರೈ ನಗರ ಅಪ್ರತಿಮ ಮೀನಾಕ್ಷಿ ಅಮ್ಮನ್ ದೇವಾಲಯ ಮತ್ತು ಗದ್ದಲದ ಹೂವಿನ ಮಾರುಕಟ್ಟೆಯನ್ನು ಹೊಂದಿದೆ. ಅಲ್ಲಿ ಮಲ್ಲಿಯನ್ನು ಜನರು ಬೊಗಸೆಗಳಷ್ಟು ಮತ್ತು ರಾಶಿಗಳಷ್ಟು ಮಾರಾಟ ಮಾಡುತ್ತಾರೆ.




























