ನಾಗಿರೆಡ್ಡಿಯವರು ಇರುವುದು ತಮಿಳುನಾಡಿನಲ್ಲಿ. ಅವರು ಕನ್ನಡ ಮಾತನಾಡುತ್ತಾರೆ ಮತ್ತು ತೆಲುಗು ಓದಬಲ್ಲರು. ಕಳೆದ ಡಿಸೆಂಬರ್‌ ತಿಂಗಳ ಒಂದು ಬೆಳಗು ನಾವು ಅವರನ್ನು ಹುಡುಕಿ ಹೊರಟಿದ್ದೆವು. ಅಂದು ನಾವು ಆಗಲೇ ಸಾಕಷ್ಟು ದೂರ ನಡೆದಿದ್ದೆವು. ಅವರು ಮನೆ “ಇಲ್ಲೇ ಹತ್ತಿರದಲ್ಲಿದೆ,” ಎನ್ನುತ್ತಿದ್ದರು. ಆದರೆ ನಿಜವಾಗಿ ಅದು ಉಕ್ಕಿ ಹರಿಯುತ್ತಿದ್ದ ಕೆರೆ, ಹುಣಿಸೆ ಮರ, ಒಂದು ನೀಲಗಿರಿ ಗುಡ್ಡ, ಇನ್ನೊಂದು ಮಾವಿನ ತೋಪು, ಅಲ್ಲಿಂದ ಒಂದು ಕಾವಲು ನಾಯಿ, ಇನ್ನೊಂದು ಸಣ್ಣ ನಾಯಿ ಮತ್ತು ದನದ ಕೊಟ್ಟಿಗೆಯನ್ನು ದಾಟಿ ಹೋದ ನಂತರ ಸಿಕ್ಕಿತು.

ದೇಶದ ಯಾವುದೇ ರೈತನು ಎದುರಿಸುವ ಎಲ್ಲಾ ಸಾಮಾನ್ಯ ಸಮಸ್ಯೆಗಳು ಮತ್ತು ತಲೆನೋವುಗಳ ಜೊತೆಗೆ, ನಾಗಿ ರೆಡ್ಡಿಗೆ ತಾನು ಬೆಳೆಯುವ ಬೆಳೆಗಳನ್ನು ಬದಲಾಯಿಸಬೇಕಾದ ಹಂತಕ್ಕೆ ಅವರನ್ನು ಕಾಡುವ ಮತ್ತೊಂದು ಅಂಶವಿದೆ. ಅವರನ್ನು ಮೂರು ಕಠಿಣ ಮತ್ತು ಭಯಭೀತ ಪಾತ್ರಗಳು ಬೇಟೆಯಾತ್ತಿವೆ: ಮೊಟ್ಟೈ ವಾಲ್, ಮಖಾನಾ ಮತ್ತು ಗಿರಿ.

ಸಾಂಕೇತಿಕವಾಗಿ ಅಥವಾ ಅಕ್ಷರಶಃ - ಈ ಮೂವರನ್ನು ಲಘುವಾಗಿ ತೆಗೆದುಕೊಳ್ಳಬಾರದು ಎನ್ನುವುದನ್ನು ಇಲ್ಲಿನ ರೈತರು ಕಲಿತಿದ್ದಾರೆ. ಅದರಲ್ಲೂ ಅವರಲ್ಲಿ ಒಬ್ಬೊಬ್ಬರು 4,000 ಮತ್ತು 5,000 ಕಿಲೋಗಳ ನಡುವೆ ತೂಕವನ್ನು ಹೊಂದಿರುವಾಗ ನಿರ್ಲಕ್ಷಿಸಲು ಸಾಧ್ಯವೇ ಇಲ್ಲ. ಈ ಮಾರಕ ಆನೆಗಳ ನಿಖರವಾದ ತೂಕ ಮತ್ತು ಎತ್ತರವನ್ನು ಪರಿಶೀಲಿಸುವಲ್ಲಿ ನನ್ನ ಉತ್ಸಾಹದ ಕೊರತೆಯನ್ನು ಸ್ಥಳೀಯರು ಕ್ಷಮಿಸಲಿ.

ತಮಿಳುನಾಡು ಮತ್ತು ಕರ್ನಾಟಕ ಎನ್ನುವ ಎರಡು ರಾಜ್ಯಗಳ ಗಡಿಯಲ್ಲಿರುವ ಕೃಷ್ಣಗಿರಿ ಜಿಲ್ಲೆಯಲ್ಲಿ ನಾವಿದ್ದೇವೆ. ಮತ್ತು ನಾಗಿ ರೆಡ್ಡಿಯವರ ಕುಗ್ರಾಮ, ಡೆಂಕಣಿಕೋಟೆ ತಾಲೂಕಿನ ವಡ್ಡರ ಪಾಳಯಂ, ಕಾಡಿನಿಂದ ಹೆಚ್ಚು ದೂರದಲ್ಲಿಲ್ಲ, ಆನೆಗಳಿಂದಲೂ ದೂರವಿಲ್ಲ, ಮತ್ತು ನಾವು ಕುಳಿತಿರುವ ಅವರ ಸಿಮೆಂಟ್ ವರಾಂಡವು ಅವರ ಹೊಲಗಳಿಂದ ಕೆಲವು ಮೀಟರ್‌ಗಳಷ್ಟು ದೂರದಲ್ಲಿದೆ. ನಾಗಣ್ಣ ಎಂದು ಗ್ರಾಮಸ್ಥರಿಂದ ಕರೆಯಲ್ಪಡುವ ನಾಗಿ ರೆಡ್ಡಿಯವರು, 86 ವರ್ಷ ವಯಸ್ಸಿನವರು ಮತ್ತು ಹೆಚ್ಚು ಪೌಷ್ಟಿಕಾಂಶವುಳ್ಳ ರಾಗಿ ಬೆಳೆಯುವ ರೈತ. ಅವರು ದಶಕಗಳಿಂದ ಕೃಷಿಯಲ್ಲಿನ ಪ್ರತಿಯೊಂದು ಕದಲುವಿಕೆಯನ್ನು ನೆನಪಿಸಿಕೊಳ್ಳಬಲ್ಲ ಸಾಕ್ಷಿಯಾಗಿದ್ದಾರೆ. ಅವುಗಳಲ್ಲಿ ಕೆಲವು ಒಳ್ಳೆಯದು, ಕೆಟ್ಟದು ಮತ್ತು ಕೆಲವೊಮ್ಮೆ, ಭಯಾನಕ.

“ನಾನು ಸಣ್ಣವನಿದ್ದಾಗ ಆನೆಗಳು ರಾಗಿ ಹೂವಿನ ಪರಿಮಳ ಬರುವ ಕಾಲದಲ್ಲಷ್ಟೇ ಅದನ್ನು ಹುಡುಕಿ ಬರುತ್ತಿದ್ದವು. ಆದ್ರೆ ಈಗ? ಯಾವಾಗಂದ್ರೆ ಆಗ ಬರ್ತಾವೆ. ಅವುಗಳಿಗೆ ನಮ್ಮ ಬೆಳೆ, ಹಣ್ಣು ಎಲ್ಲ ತಿಂದು ಅಭ್ಯಾಸ ಆಗಿಬಿಟ್ಟಿದೆ.”

ಇದಕ್ಕೆ ಎರಡು ಕಾರಣಗಳಿವೆ ಎಂದು ನಾಗಣ್ಣ ತಮಿಳಿನಲ್ಲಿ ವಿವರಿಸುತ್ತಾರೆ. “1990ರ ನಂತರ, ಈ ಕಾಡಿನಲ್ಲಿ ಆನೆಗಳ ಸಂಖ್ಯೆ ಹೆಚ್ಚಾಯಿತು, ಆದರೆ ಕಾಡಿನ ಗಾತ್ರ ಮತ್ತು ಗುಣಮಟ್ಟ ಕಡಿಮೆಯಾಯಿತು. ಆದ್ದರಿಂದ, ಅವು ತಮ್ಮ ಆಹಾರಕ್ಕಾಗಿ ಇಲ್ಲಿ ಕಾಣಿಸಿಕೊಳ್ಳುತ್ತವೆ. ಮತ್ತು ನೀವು ಒಳ್ಳೆಯ ಹೋಟೆಲ್‌ಗೆ ಹೋದಾಗ ನಿಮ್ಮ ಸ್ನೇಹಿತರಿಗೆ ಹೇಳುವಂತೆ, ಅವು ಕೂಡಾ ತಾವು ಹೋದ ಜಾಗದ ಬಗ್ಗೆ ಹೇಳ್ತವೆ,” ಅವರು ನಿಟ್ಟುಸಿರು ಮತ್ತು ನಗುವನ್ನು ಒಮ್ಮೆಲೆ ಹೊರಸೂಸುತ್ತಾರೆ. ಈ ವ್ಯಂಗ್ಯಾತ್ಮಕ ಹೋಲಿಕೆ ಅವರನ್ನು ರಂಜಿಸಿದರೆ ನನ್ನನ್ನು ಆಶ್ಚರ್ಯಗೊಳಿಸುತ್ತದೆ.

PHOTO • M. Palani Kumar
PHOTO • Aparna Karthikeyan

ಎಡ: ನಾಗಿ ರೆಡ್ಡಿಯವರ ಹೊಲಗಳಲ್ಲಿ ಕಟಾವಿಗೆ ಸಿದ್ಧವಾಗಿರುವ ರಾಗಿ ಬೆಳೆ. ಬಲ: ಆನೆಗಳನ್ನು ಓಡಿಸಲು ಅರಣ್ಯ ಇಲಾಖೆ ನೀಡಿದ ಎಲ್ಇಡಿ ಟಾರ್ಚಿನ ಪ್ರಕಾಶಮಾನತೆಯನ್ನು ಅವರ ಮಗ ಆನಂದರಾಮು ಪ್ರದರ್ಶಿಸುತ್ತಿದ್ದಂತೆ ನಾಗಿ ರೆಡ್ಡಿ ನೋಡುತ್ತಿರುವುದು

ಹಾಗಿದ್ದರೆ ಅವುಗಳನ್ನು ಕಾಡಿಗೆ ವಾಪಸ್ ಕಳುಹಿಸುವುದು ಹೇಗೆ? “ನಾವು ಕೂಚಲ್ [ಬಹಳಷ್ಟು ಶಬ್ದ] ಮಾಡುತ್ತೇವೆ. ಬ್ಯಾಟರಿ ಬೆಳಗಿಸುತ್ತೇವೆ,” ಎಂದು ಎಲ್ಇಡಿ ಟಾರ್ಚ್ ತೋರಿಸುತ್ತಾ ಅವರು ವಿವರಿಸುತ್ತಾರೆ. ಆನಂದ ಎಂದು ಕರೆಯಲ್ಪಡುವ ಅವರ ಮಗ ಆನಂದರಾಮು ಅರಣ್ಯ ಇಲಾಖೆ ನೀಡಿದ ದೀಪವನ್ನು ಆನ್ ಮಾಡಿ ತೋರಿಸಿದರು. ಇದು ಪ್ರಕಾಶಮಾನವಾದ, ಬಿಳಿ ಬೆಳಕನ್ನು ಹೊರಡಿಸುತ್ತದೆ. "ಆದರೆ ಈ ಬೆಳಕಿಗೆ ಎರಡು ಆನೆಗಳು ಮಾತ್ರ ಹೋಗುತ್ತವೆ" ಎಂದು ನಾಗಣ್ಣ ಹೇಳುತ್ತಾರೆ.

"ಈ ಮೊಟ್ಟೈ ವಾಲ್ ಮುಖ ತಿರುಗಿಸಿ, ತನ್ನ ಕಣ್ಣುಗಳಿಗೆ ಬೆಳಕು ಬೀಳದ ಹಾಗೆ ಮಾಡಿಕೊಂಡು ತಿನ್ನುವುದನ್ನು ಮುಂದುವರಿಸುತ್ತದೆ," ಎನ್ನುತ್ತಾ ಆನಂದ್ ವರಾಂಡಾದ ಒಂದು ಮೂಲೆಗೆ ನಡೆದು, ಟಾರ್ಚ್ಗೆ ಬೆನ್ನು ತಿರುಗಿಸುತ್ತಾರೆ. "ಮೊಟ್ಟೈ ವಾಲ್ ಪೂರ್ತಿಯಾಗಿ ತಿನ್ನುವವರೆಗೂ ಹೋಗುವುದಿಲ್ಲ, ಅದು: ʼನೀನು ನಿನ್ನ ಕೆಲಸ ಮಾಡು - ಟಾರ್ಚ್ ಹಚ್ಚು, ಮತ್ತೆ ನಾನು ನನ್ನದು ಮಾಡ್ತೀನಿ- ನನ್ನ ಹೊಟ್ಟೆ ತುಂಬುವವರೆಗೆ ತಿನ್ನುತ್ತೇನೆ,ʼ ಎನ್ನುವ ಹಾಗೆ ತಿನ್ನುತ್ತಲೇ ಇರುತ್ತದೆ"

ದೊಡ್ಡ ಹೊಟ್ಟೆಯಾದ್ದರಿಂದ ಮೊಟ್ಟೈ ವಾಲ್ ಸಿಕ್ಕಿದ್ದನ್ನೆಲ್ಲಾ ತಿನ್ನುತ್ತದೆ. ರಾಗಿ ಇದರ ಅಚ್ಚುಮೆಚ್ಚಿನ ಆಹಾರ. ಹಲಸು ಕೂಡ ಹಾಗೆಯೇ. ಎತ್ತರದ ಕೊಂಬೆಗಳನ್ನು ತಲುಪಲು ಸಾಧ್ಯವಾಗದಿದ್ದರೆ, ಅದು ತನ್ನ ಮುಂಭಾಗದ ಕಾಲುಗಳನ್ನು ಮರದ ಮೇಲೆ ಇಡುತ್ತದೆ, ತನ್ನ ಉದ್ದವಾದ ಸೊಂಡಿಲು ಬಳಸಿ ಕೀಳುತ್ತದೆ. ಮರವು ಇನ್ನೂ ಎತ್ತರವಾಗಿದ್ದರೆ, ಆಗಲೂ ಬಿಡುವುದಿಲ್ಲ, ಮರವನ್ನು ಅಲ್ಲಾಡಿಸಿ ಹಣ್ಣು ಉದುರಿಸಿ ಅಲ್ಲೇ ಹಬ್ಬ ಮಾಡುತ್ತದೆ. ಮೊಟ್ಟೈ ವಾಲ್ 10 ಅಡಿ ಎತ್ತರವಿದೆ ಎನ್ನುತ್ತಾರೆ ನಾಗಣ್ಣ. "ಮತ್ತು ಅದು ಎರಡು ಕಾಲುಗಳಲ್ಲಿ ನಿಂತರೆ, ಇನ್ನೂ ಆರು ಅಥವಾ ಎಂಟು ಅಡಿಗಳನ್ನು ತಲುಪಬಲ್ಲದು" ಎಂದು ಆನಂದ್ ಹೇಳುತ್ತಾರೆ.

ಆದರೆ ಮೊಟ್ಟೈ ವಾಲ್ ಮನುಷ್ಯರ ಮೇಲೆ ದಾಳಿ ಮಾಡುವುದಿಲ್ಲ. ಜೋಳ, ಮಾವಿನ ಕಾಯಿ ತಿಂದು, ಜಮೀನಿನಲ್ಲಿ ಏನೇ ಬೆಳೆ ಇದ್ದರೂ ತುಳಿದು ಹಾಕುತ್ತದೆ, ಆನೆ ಬಿಟ್ಟಿದ್ದನ್ನು ಮಂಗ, ಕಾಡು ಹಂದಿಗಳು ತಿಂದು ಮುಗಿಸುತ್ತವೆ’ ಎನ್ನುತ್ತಾರೆ ನಾಗಣ್ಣ. ನಾವು ಸದಾ ಕಾವಲು ಕಾಯಬೇಕು. ಇಲ್ಲದೇ ಹೋದಲ್ಲಿ ಮಂಗಗಳು ಅಡುಗೆ ಮನೆಗೆ ನುಗ್ಗಿ ಹಾಲು, ಮೊಸರು ಕೂಡ ಮಾಯವಾಗುತ್ತದೆ.

“ಇದು ಸಾಲದು ಎಂಬಂತೆ ಕಾಡು ನಾಯಿಗಳು ನಮ್ಮ ಕೋಳಿಗಳನ್ನು ತಿನ್ನುತ್ತವೆ. ಮತ್ತು ಚಿರತೆಗಳು ಕೆಳಗೆ ಬಂದು ನಮ್ಮ ಕಾವಲು ನಾಯಿಗಳನ್ನು ತಿನ್ನುತ್ತವೆ. ಕಳೆದ ವಾರವಷ್ಟೇ...” ಎನ್ನುತ್ತಾ ಅವರ ತೋರುಬೆರಳು ದೊಡ್ಡ ಬೆಕ್ಕಿನ ಬೇಟೆಯ ಮಾರ್ಗವನ್ನು ಗುರುತಿಸುತ್ತಿತ್ತು ಮತ್ತು ನಾನು ನಡುಗಿಹೋಗಿದ್ದೆ. ಇಲ್ಲಿ ಬೆಳಗಿನ ಚಳಿಯಷ್ಟೇ ಅಲ್ಲ ಇಂತಹ ಕಾಡಿನಂಚಿನಲ್ಲಿ ಅನಿಶ್ಚಿತತೆಗಳ ನಡುವೆ ಬದುಕುವ ಆಲೋಚನೆಯೂ ನಡುಗಿಸಬಲ್ಲದು.

ಅವರು ಇದನ್ನೆಲ್ಲ ಹೇಗೆ ನಿಭಾಯಿಸುತ್ತಾರೆ? ನಾನು ಕುತೂಹಲದಿಂದ ಕೇಳಿದೆ. "ನಾವು ನಮ್ಮ ಮನೆಗೆ ಸಾಕಾಗುವಷ್ಟು ರಾಗಿಯನ್ನು ಅರ್ಧ ಎಕರೆಯಲ್ಲಿ ಬೆಳೆಯುತ್ತಿದ್ದೇವೆ" ಎಂದು ಆನಂದ ವಿವರಿಸುತ್ತಾರೆ. “80 ಕಿಲೋ ರಾಗಿ ಚೀಲಕ್ಕೆ 2,200 ರೂಪಾಯಿಗಳ ಬೆಲೆಯಲ್ಲಿ, ಲಾಭವನ್ನು ನೋಡಲು ಸಾಧ್ಯವಿಲ್ಲ. ಜೊತೆಗೆ, ಈ ಅಕಾಲಿಕ ಮಳೆ ಕೂಡಾ ಕಾಡುತ್ತದೆ. ಹಾಗೋ ಹೀಗೋ ಬೆಳೆ ಉಳಿದರೆ ಪ್ರಾಣಿಗಳು ತಿನ್ನುತ್ತವೆ,” ಅವರು ಹೇಳುತ್ತಾರೆ, “ನಾವು ನಮ್ಮ ಹೊಲಗಳಲ್ಲಿ ನೀಲಗಿರಿ ಮರಗಳನ್ನು ಬೆಳೆಯುತ್ತಿದ್ದೇವೆ. ಮತ್ತು ಈ ಪ್ರದೇಶದಲ್ಲಿನ ಇತರರು ರಾಗಿಯಿಂದ ಗುಲಾಬಿ ಬೆಳೆಗೆ ಬದಲಾಯಿಸಿಕೊಂಡಿದ್ದಾರೆ.”

ಪುಣ್ಯಕ್ಕೆ ಆನೆಗಳು ಇನ್ನೂ ಹೂಗಳ ಮೇಲೆ ಕಣ್ಣು ಹಾಕಿಲ್ಲ….

PHOTO • M. Palani Kumar

ಆನಂದರಾಮು ಆನೆಗಳ ಹಾದಿಯನ್ನು ತೋರಿಸುತ್ತಿರುವುದು. ಬೆಳೆಗಳು ಮತ್ತು ಹಣ್ಣುಗಳನ್ನು ತಿನ್ನಲು ಈ ಪ್ರಾಣಿಗಳು ಆಗಾಗ್ಗೆ ಬರುತ್ತವೆ

*****

ರಾಗಿ ಹೊಲದ ಪಕ್ಕದಲ್ಲಿ ಜೋಕಾಲಿಯಾಡುತ್ತಾ
ಗಿಳಿಗಳ ಓಡಿಸುತ್ತಾ ಅವನಿಗಾಗಿ ಕಾಯುತ್ತಿದ್ದೆ
ಅವನು ಬಂದಾಗ ಜೋಕಾಲಿ ತಳ್ಳೆಂದು ಕರೆದೆ
ಆಗಲಿಯೆಂದು ಜೋಕಾಲಿ ನೂಕಿದನು ಅವನು!
ಜೋಲಿ ತಪ್ಪಿದವಳದಂತೆ ನಟಿಸುತ್ತಾ ಬಿದ್ದೆ ಅವನ ಮೇಲೆ
ಬಿದ್ದೆನೆಂದುಕೊಂಡ ಅವನು ನನ್ನ ಬಿಗಿಯಾಗಿ ತಬ್ಬಿ ಹಿಡಿದ
ಇದನ್ನೇ ಕಾಯುತ್ತಿದ್ದ ನಾನು ಮೂರ್ಛೆ ಹೋದವಳಂತೆ
ಅವನ ಎದೆಯ ಹರವಿಗೆ ಒರಗಿ ಮಲಗಿದ್ದೆ

ಈ ರಸಿಕ ಸಾಲುಗಳು 2,000 ವರ್ಷಗಳಷ್ಟು ಹಳೆಯವು, ಇದು ಕಪಿಲರ್ ಬರೆದ ಸಂಗಮ್ ಯುಗದ ಕವನವಾದ ‘ಕ ಳಿತ್ತೋಕೈ ’ನ ಸಾಲುಗಳು. ಸಾಹಿತ್ಯದಲ್ಲಿ ರಾಗಿಯ ಉಲ್ಲೇಖವು ಅಸಾಮಾನ್ಯವೇನಲ್ಲ, ಎಂದು ಸಂಗಮ್ ಸಾಹಿತ್ಯದ ಕಾವ್ಯಾತ್ಮಕ ಕೃತಿಗಳ ಅನುವಾದಗಳನ್ನು ಹೊಂದಿರುವ OldTamilPoetry.com ಬ್ಲಾಗ್ ನಡೆಸುತ್ತಿರುವ ಚೆಂತಿಲ್ ನಾಥನ್ ಹೇಳುತ್ತಾರೆ.

"ಸಂಗಮ್ ಸಾಹಿತ್ಯದಲ್ಲಿ ರಾಗಿ ಹೊಲಗಳು ಪ್ರೇಮ ಕವಿತೆಗಳ ಹಿನ್ನೆಲೆಯಾಗಿದೆ" ಎಂದು ಚೆಂತಿಲ್ ನಾಥನ್ ಹೇಳುತ್ತಾರೆ. "ಒಂದು ಸಣ್ಣ ಹುಡುಕಾಟದಡಿಯಲ್ಲಿ ಸಾಹಿತ್ಯದಲ್ಲಿ ರಾಗಿಯನ್ನು 125 ಬಾರಿ ಉಲ್ಲೇಖಿಸಲಾಗಿರುವುದನ್ನು ಕಾಣಬಹುದು, ಇದು ಅಕ್ಕಿಯ ಉಲ್ಲೇಖಗಳ ಸಂಖ್ಯೆಗಿಂತ ಸ್ವಲ್ಪ ಹೆಚ್ಚು. ಹೀಗಾಗಿ ಸಂಗಮ್ ಯುಗದ (ಸುಮಾರು 200 BCE - 200 CE) ಜನರ ಪಾಲಿಗೆ ರಾಗಿ ಪ್ರಮುಖ ಆಹಾರ ಧಾನ್ಯವಾಗಿತ್ತು ಎಂದು ಊಹಿಸುವುದು ಸುಲಭ. ಆ ಗುಂಪಿನಲ್ಲಿ, ಥಿನೈ (ನವಣೆ) ಪ್ರಧಾನವಾಗಿ, ನಂತರ ವರಗು (ರಾಗಿ ಅಥವಾ ಅರ್ಕ) ಇರುತ್ತದೆ.

ರಾಗಿಯ ಉಗಮವು ಪೂರ್ವ ಆಫ್ರಿಕಾದ ಉಗಾಂಡಾದಲ್ಲಿ ಆಯಿತು ಎಂದು ಕೆ.ಟಿ. ಅಚ್ಚಯ್ಯ ಅವರು ತಮ್ಮ ಇಂಡಿಯನ್ ಫುಡ್: ಎ ಹಿಸ್ಟಾರಿಕಲ್ ಕಂಪ್ಯಾನಿಯನ್ ಪುಸ್ತಕದಲ್ಲಿ ಬರೆಯುತ್ತಾರೆ. ಇದು ಹಲವು ಸಾವಿರ ವರ್ಷಗಳ ಹಿಂದೆ ದಕ್ಷಿಣ ಭಾರತಕ್ಕೆ ಬಂತು ಮತ್ತು "ಕರ್ನಾಟಕದ ತುಂಗಭದ್ರಾ ನದಿಯ ಹಳ್ಳೂರ್ ಸೈಟ್ (1800 BCE) ಮತ್ತು "ತಮಿಳುನಾಡಿನ ಪೈಯಂಪಲ್ಲಿ (1390 BCE)"ಯಲ್ಲಿ ಕಂಡುಬಂದಿದೆ. ಈ ಊರು ನಾಗಣ್ಣನವರ ಮನೆಯಿಂದ ಸುಮಾರು 200 ಕಿಲೋಮೀಟರ್ ದೂರದಲ್ಲಿದೆ.

ಭಾರತದಲ್ಲಿ ರಾಗಿ ಉತ್ಪಾದನೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದ್ದರೆ, ತಮಿಳುನಾಡು ಎರಡನೇ ಸ್ಥಾನದಲ್ಲಿದೆ ಮತ್ತು ವಾರ್ಷಿಕ ಫಸಲು 2.745 ಲಕ್ಷ ಮೆಟ್ರಿಕ್ ಟನ್‌ಗಳನ್ನು ಮುಟ್ಟುತ್ತದೆ. ನಾಗಿ ರೆಡ್ಡಿ ಅವರ ಗ್ರಾಮವಿರುವ ಕೃಷ್ಣಗಿರಿ ಜಿಲ್ಲೆಯೊಂದೇ ರಾಜ್ಯದ ರಾಗಿ ಉತ್ಪಾದನೆಯ 42 ಪ್ರತಿಶತದಷ್ಟನ್ನು ಉತ್ಪಾದಿಸುತ್ತದೆ.

ಯುನೈಟೆಡ್ ನೇಷನ್ಸ್ ಫುಡ್ ಅಂಡ್ ಅಗ್ರಿಕಲ್ಚರಲ್ ಆರ್ಗನೈಸೇಶನ್ (FAO) ರಾಗಿಯ ಅನೇಕ 'ವಿಶೇಷ ವೈಶಿಷ್ಟ್ಯಗಳನ್ನು' ಎಣಿಕೆ ಮಾಡುತ್ತದೆ. ಅವುಗಳಲ್ಲಿ, ರಾಗಿಯನ್ನು ದ್ವಿದಳ ಧಾನ್ಯಗಳೊಂದಿಗೆ ಅಂತರ ಬೆಳೆಯಾಗಿ ಬೆಳೆದು ಹೆಚ್ಚುವರಿ ಆದಾಯವನ್ನು ಗಳಿಸಬಹುದು. ಇದು ಕಡಿಮೆ ಒಳಸುರಿಯೊಂದಿಗೆ ಸಮಂಜಸವಾದ ಇಳುವರಿಯನ್ನು ಉತ್ಪಾದಿಸುತ್ತದೆ ಮತ್ತು ಕಡಿಮೆ ಫಲವತ್ತತೆಯ ಮಣ್ಣಿನಲ್ಲಿಯೂ ಬೆಳೆಯುತ್ತದೆ.

PHOTO • Aparna Karthikeyan
PHOTO • Aparna Karthikeyan

ರಾಗಿ ಬೆಳೆ (ಎಡ) ಮತ್ತು ಅದರ ತೆನೆ. ಕೃಷ್ಣಗಿರಿ ಜಿಲ್ಲೆ ತಮಿಳುನಾಡಿನ ರಾಗಿ ಉತ್ಪಾದನೆಯ 42 ಪ್ರತಿಶತದಷ್ಟನ್ನು ಉತ್ಪಾದಿಸುತ್ತದೆ

ಇದಲ್ಲದೆ, ರಾಗಿ ಉತ್ಪಾದನೆ ಮತ್ತು ಜನಪ್ರಿಯತೆಯಲ್ಲಿಯೂ ಕುಸಿದಿದೆ. ಆಶ್ಚರ್ಯವೇನು ಇಲ್ಲದಂತೆ, ಆ ಕುಸಿತವು ಹಸಿರು ಕ್ರಾಂತಿಯೊಂದಿಗೆ ಕಂಡುಬಂದ ಅಕ್ಕಿ ಮತ್ತು ಗೋಧಿಯ ಹೆಚ್ಚುತ್ತಿರುವ ಜನಪ್ರಿಯತೆಯೊಡನೆ ಈ ಕುಸಿತ ಹೊಂದಿಕೆಯಾಗುತ್ತದೆ. ಇವು ಸಾರ್ವಜನಿಕ ವಿತರಣಾ ವ್ಯವಸ್ಥೆಯ (PDS) ಮೂಲಕ ಅವುಗಳ ಸುಲಭ ಲಭ್ಯತೆಯನ್ನು ಕಂಡವು.

ಭಾರತದಾದ್ಯಂತ ಖಾರಿಫ್ ಋತುವಿನಲ್ಲಿ ರಾಗಿ ಉತ್ಪಾದನೆಯು ಕಳೆದ ಕೆಲವು ವರ್ಷಗಳಲ್ಲಿ ಏರಿಳಿತಗಳನ್ನು ಕಂಡಿದೆ ಆದರೆ 2021ರಲ್ಲಿ ಇಳುವರಿಯು 2 ಮಿಲಿಯನ್ ಟನ್‌ಗೆ ಹತ್ತಿರದಲ್ಲಿದೆ ಎಂದು ಅಂದಾಜಿಸಲಾಗಿದೆ. ಆದಾಗ್ಯೂ, 2022ರ ಮೊದಲ ಅಂದಾಜುಗಳು ಕುಸಿತವನ್ನು ಸೂಚಿಸುತ್ತವೆ. 2010ರ ಅಂಕಿ ಅಂಶವು 1.89 ಮಿಲಿಯನ್ ಟನ್ ಆಗಿತ್ತು. 2022ರ ಆರ್ಥಿಕ ವರ್ಷಕ್ಕೆ ಯೋಜಿಸಲಾಗಿರುವ ಮೊದಲ ಅಂದಾಜು - ಸುಮಾರು 1.52 ಮಿಲಿಯನ್ ಟನ್.

ಕಿರುಧಾನ್ಯಗಳ ಕುರಿತು ಕೆಲಸ ಮಾಡುವ ಅಭಿವೃದ್ಧಿ ಸಂಸ್ಥೆಯಾದ ಧಾನ್ ಫೌಂಡೇಶನ್ ಪ್ರಕಾರ, "ಅವುಗಳ ಪೌಷ್ಟಿಕಾಂಶದ ಗುಣಗಳು ಮತ್ತು ಹವಾಮಾನ ಸ್ಥಿತಿಸ್ಥಾಪಕತ್ವದ ಹೊರತಾಗಿಯೂ, ಭಾರತದಲ್ಲಿ ರಾಗಿಯ ಬಳಕೆ ಶೇಕಡಾ 47ರಷ್ಟು ಕಡಿಮೆಯಾಗಿದೆ , ಆದರೆ ಕಳೆದ ಐದು ದಶಕಗಳಲ್ಲಿ ಇತರ ಸಣ್ಣ ಧಾನ್ಯಗಳ ಸೇವನೆಯು ಶೇಕಡಾ 83 ರಷ್ಟು ಕಡಿಮೆಯಾಗಿದೆ.

ದೇಶದಲ್ಲೇ ಅತಿ ಹೆಚ್ಚು ರಾಗಿ ಬೆಳೆಯುವ ನೆರೆಯ ಕರ್ನಾಟಕದಲ್ಲಿ 2004-05ರಲ್ಲಿ 1.8 ಕೆಜಿ ಇದ್ದ ರಾಗಿಯ ಸರಾಸರಿ ಮಾಸಿಕ ಬಳಕೆಯು 2011-12ರಲ್ಲಿ 1.2 ಕೆ.ಜಿ.ಗೆ ಇಳಿದಿದೆ.

ಕೆಲವು ಸಮುದಾಯಗಳು ಮತ್ತು ಭೌಗೋಳಿಕ ಪ್ರದೇಶಗಳು ರಾಗಿಯನ್ನು ಬೆಳೆಯುವುದನ್ನು ಮತ್ತು ತಿನ್ನುವುದನ್ನು ಮುಂದುವರಿಸಿದ್ದರಿಂದ ಈ ಬೆಳೆ ಉಳಿದುಕೊಂಡಿದೆ. ಅವುಗಳಲ್ಲಿ ಕೃಷ್ಣಗಿರಿಯೂ ಒಂದು.

*****

ಮೇವಿನ ಕೊರತೆಯಿಂದಾಗಿ ಜನರು ತಮ್ಮ ಜಾನುವಾರುಗಳನ್ನು ಮಾರಾಟ ಮಾಡುತ್ತಿದ್ದಾರೆ. ಆದರೆ ನೀವು ಹೆಚ್ಚು ರಾಗಿಯನ್ನು ಬೆಳೆದಷ್ಟೂ, ಹೆಚ್ಚು ಜಾನುವಾರುಗಳನ್ನು ಪೋಷಿಸಬಹುದು, ಮತ್ತು [ಇದರಿಂದ] ಸಾಪ್ತಾಹಿಕ ಆದಾಯವನ್ನೂ ಸುಧಾರಿಸಬಹುದು.
ಗೋಪಕುಮಾರ್ ಮೆನನ್, ಲೇಖಕ ಮತ್ತು ಕೃಷಿಕ

PHOTO • Aparna Karthikeyan
PHOTO • Aparna Karthikeyan

ಎಡಕ್ಕೆ: ಗೊಲ್ಲಪಲ್ಲಿ ಗ್ರಾಮದ ತನ್ನ ಜಮೀನಿನಲ್ಲಿ ರಾಗಿ ಗಿಡದೊಂದಿಗೆ ಗೋಪಕುಮಾರ್ ಮೆನನ್. ಬಲಗಡೆ: ಮಳೆಯಿಂದ ಹಾನಿಗೀಡಾದ ರಾಗಿ ಯ ತೆನೆ

ನಾನು ನಾಗಣ್ಣನವರ ಮನೆಗೆ ಭೇಟಿ ನೀಡುವ ಹಿಂದಿನ ರಾತ್ರಿ, ಈ ಪ್ರದೇಶದ ನಮ್ಮ ಆತಿಥೇಯರಾದ ಗೋಪಕುಮಾರ್ ಮೆನನ್ ನನಗೆ ರೋಮಾಂಚಕ ಆನೆ ಕಥೆಯೊಂದನ್ನು ಹೇಳಿದರು. ಅದು ಡಿಸೆಂಬರ್ ತಿಂಗಳ ಆರಂಭವಾಗಿತ್ತು. ನಾವು ಗೊಲ್ಲಪಲ್ಲಿ ಗ್ರಾಮದ ಅವರ ಮನೆಯ ಟೆರೇಸ್ ಮೇಲೆ ಕುಳಿತಿದ್ದೆವು. ಸುತ್ತಲೂ ಕತ್ತಲೆ ಕವಿದಿತ್ತು. ಚಳಿಯ ರಾತ್ರಿ ಸುತ್ತಲಿನ ವಾತಾವರಣ ವಿಲಕ್ಷಣವಾಗಿ ಸುಂದರವಾಗಿತ್ತು. ಅಲ್ಲಿ ಸಣ್ಣ ಮಟ್ಟಿಗಷ್ಟೇ ನೈಟ್‌ ಲೈಫ್‌ ಎನ್ನುವುದು ಎಚ್ಚರವಾಗಿತ್ತು. ನಿಶಾಚರಿಗಳ ಸಣ್ಣಗೆ ಹಾಡುತ್ತಿದ್ದವು, ಗುನುಗುತ್ತಿದ್ದವು. ಅದು ಏಕಕಾಲದಲ್ಲಿ ಭರವಸೆ ನೀಡುವುದು ಮತ್ತು ಗಮನ ಸೆಳೆಯುವುದು ಎರಡನ್ನೂ ಮಾಡುತ್ತಿತ್ತು.

ಸ್ವಲ್ಪ ದೂರದಲ್ಲಿರುವ ಮಾವಿನ ಮರವನ್ನು ತೋರಿಸುತ್ತಾ "ಮೊಟ್ಟೈ ವಾಲ್ ಇಲ್ಲಿ ಬಂದಿತ್ತು" ಎಂದು ಹೇಳುತ್ತಾ, "ಅದಕ್ಕೆ ಮಾವಿನಹಣ್ಣು ಬೇಕಿತ್ತು ಆದರೆ ಹಣ್ಣನ್ನು ಕೀಳಲು ಎಟುಕುತ್ತಿರಲಿಲ್ಲ. ಕೊನೆಗೆ ಅದು ಇಡೀ ಮರವನ್ನೇ ಕೆಡವಿತು. ನಾನು ಗಾಬರಿಯಿಂದ ಒಮ್ಮೆ ಸುತ್ತಲೂ ನೋಡಿದೆ. ಎಲ್ಲವೂ ಆನೆಯ ಆಕಾರದಲ್ಲಿ ಕಾಣುತ್ತಿತ್ತು. "ಹೆದರಬೇಡಿ, ಅದು ಇಲ್ಲಿಗೆ ಬಂದರೆ ನಿಮಗೆ ಗೊತ್ತಾಗುತ್ತದೆ" ಎಂದು ಗೋಪ ಭರವಸೆ ನೀಡಿದರು.

ಮುಂದಿನ ಒಂದು ಗಂಟೆ ಗೋಪ ನನಗೆ ಅನೇಕ ಕಥೆಗಳನ್ನು ಹೇಳಿದರು. ಅವರು ಸಂಪನ್ಮೂಲ ವ್ಯಕ್ತಿ, ಬರಹಗಾರ ಮತ್ತು ಅನ್ವಯಿಕ ಅರ್ಥಶಾಸ್ತ್ರದಲ್ಲಿ ಕಾರ್ಪೊರೇಟ್ ಫೆಸಿಲಿಟೇಟರ್. ಸುಮಾರು 15 ವರ್ಷಗಳ ಹಿಂದೆ ಗೊಲ್ಲಪಲ್ಲಿಯಲ್ಲಿ ಸ್ವಲ್ಪ ಜಮೀನು ಖರೀದಿಸಿದ್ದರು. ಕೊನೆಗೆ ಕೃಷಿ ಮಾಡಬೇಕೆಂದು ಯೋಚಿಸಿದರು. ಆಗಲೇ ಅವರಿಗೆ ಕೃಷಿ ಎಷ್ಟು ಕಷ್ಟ ಎಂಬುದು ಅರಿವಾಯಿತು. ಅವರು ಈಗ ತಮ್ಮ ಎರಡು ಎಕರೆ ಭೂಮಿಯಲ್ಲಿ ನಿಂಬೆ ಗಿಡಗಳು ಮತ್ತು ಹುರುಳಿ ಬೆಳೆಗೆ ಅಂಟಿಕೊಂಡಿದ್ದಾರೆ. ಆದಾಯದ ಮೇಲೆ ಅವಲಂಬಿತರಾಗಿರುವ ಪೂರ್ಣ ಸಮಯದ ರೈತರಿಗೆ ಇದು ತುಂಬಾ ಕಷ್ಟಕರ. ಪ್ರತಿಕೂಲವಾದ ನೀತಿ ನಿರ್ದೇಶನ, ಹವಾಮಾನ ಬದಲಾವಣೆ, ಕಳಪೆ ಖರೀದಿ ಬೆಲೆ ಮತ್ತು ಮಾನವ-ಪ್ರಾಣಿ ಸಂಘರ್ಷದ ಸಂಯೋಜನೆಯು ಸಾಂಪ್ರದಾಯಿಕ ರಾಗಿ ಬೆಳೆಯನ್ನು ನಾಶಪಡಿಸಿದೆ ಎಂದು ಅವರು ಹೇಳುತ್ತಾರೆ.

"ಉದ್ದೇಶಿತ ಮತ್ತು ರದ್ದಾದ ಕೃಷಿ ಕಾನೂನುಗಳು ಏಕೆ ಯೋಗ್ಯವಾಗಿರಲಿಲ್ಲ ಎಂಬುದಕ್ಕೆ ರಾಗಿ ಅತ್ಯುತ್ತಮ ಉದಾಹರಣೆಯಾಗಿದೆ" ಎಂದು ಗೋಪ ಹೇಳುತ್ತಾರೆ. "ನೀವು ಅದನ್ನು ಯಾರಿಗೆ ಬೇಕಿದ್ದರೂ ಮಾರಾಟ ಮಾಡಬಹುದು ಎಂದು ಕಾನೂನು ಹೇಳಿದೆ. ತಮಿಳುನಾಡು ತೆಗೆದುಕೊಳ್ಳಿ. ಇದು ಸಾಧ್ಯವಾಗಿದ್ದರೆ, ರೈತರು ಹೆಚ್ಚು ರಾಗಿಯನ್ನು ಬೆಳೆಯುತ್ತಿದ್ದರು, ಹೌದಲ್ಲವೇ? ಕ್ವಿಂಟಾಲಿಗೆ ಕನಿಷ್ಠ 3,377 ರೂಪಾಯಿಗಳ ಬೆಂಬಲ ಬೆಲೆ ಇರುವ ಕರ್ನಾಟಕಕ್ಕೆ ಅವರು ಅದನ್ನು ಏಕೆ ಕಳ್ಳಸಾಗಣೆ ಮಾಡುತ್ತಾರೆ (ಆನಂದ ಅವರು ಹೇಳುವ ತಮಿಳುನಾಡಿನಲ್ಲಿನ ಅತ್ಯಂತ ಕಡಿಮೆ ಮೊತ್ತಕ್ಕೆ ವಿರುದ್ಧವಾಗಿ)?"

ತಮಿಳುನಾಡಿನ ಈ ಭಾಗದಲ್ಲಿ ಜನರು ಬೆಂಬಲ ಬೆಲೆಯನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಇದರಿಂದ ತಿಳಿಯುತ್ತದೆ. ಅದಕ್ಕಾಗಿಯೇ, ಗೋಪ ಮೆನನ್ ಹೇಳುವಂತೆ, ಕೆಲವರು ಅದನ್ನು ಗಡಿಯಾಚೆಗೆ ಕಳ್ಳಸಾಗಣೆ ಮಾಡುತ್ತಾರೆ.

PHOTO • M. Palani Kumar
PHOTO • M. Palani Kumar

ಗೊಲ್ಲಪಲ್ಲಿಯ ಹೊರವಲಯದಲ್ಲಿ ರೈತ ಶಿವ ಕುಮಾರನ್ ಗುತ್ತಿಗೆ ಪಡೆದ ಹೊಲಗಳಲ್ಲಿ ರಾಗಿ ಬೆಳೆಯನ್ನು ಕೊಯ್ಲು ಮಾಡುತ್ತಿರುವ ಕಾರ್ಮಿಕರು

ಪ್ರಸ್ತುತ, ತಮಿಳುನಾಡಿನ ಹೊಸೂರು ಜಿಲ್ಲೆಯಲ್ಲಿ, “80 ಕೆಜಿ ಉತ್ತಮ ಗುಣಮಟ್ಟದ ರಾಗಿ ಬೆಲೆ 2,200 ರೂ. ಮತ್ತು ಇತರ ಗುಣಮಟ್ಟದ 2,000 ರೂ. ಪರಿಣಾಮವಾಗಿ, ಪ್ರತಿ ಕೆಜಿಗೆ 25 ರಿಂದ 27 ರೂ. ಇದೆ,” ಎಂದು ಆನಂದ ಹೇಳುತ್ತಾರೆ.

ಇದು ಕಮಿಷನ್ ಏಜೆಂಟ್ ಅವರ ಮನೆ ಬಾಗಿಲಿನಲ್ಲಿ ಕೊಂಡು ಪಾವತಿಸುವ ಬೆಲೆಯಾಗಿದೆ. ಅವನು ಕೂಡಾ ಲಾಭ ಇಟ್ಟುಕೊಂಡಿರುತ್ತಾನೆ. ಆನಂದ್ ಅವರ ಅಂದಾಜಿನ ಪ್ರಕಾರ ಪ್ರತಿ ಚೀಲಕ್ಕೆ 200 ರೂ. ಸಿಗುತ್ತದೆ. ರೈತರು ನೇರವಾಗಿ ಮಂಡಿಯಲ್ಲಿ ಮಾರಾಟ ಮಾಡಲು ಹೋದರೆ, ಉತ್ತಮ ಗುಣಮಟ್ಟದ ರಾಗಿಗೆ (80 ಕೆಜಿ ಚೀಲಕ್ಕೆ) 2,350 ರೂ. ಬೆಲೆಯಿದೆ. ಆದರೆ ಅದರಿಂದ ಯಾವ ಉಪಯೋಗವೂ ಅವರಿಗೆ ಕಾಣುತ್ತಿಲ್ಲ. "ಹೇಗಿದ್ದರೂ ಮಂಡಿಯಲ್ಲಿ ಲೋಡಿಂಗ್, ಟೆಂಪೋ ಮತ್ತು ಕಮಿಷನ್ ಕೊಡಲೇಬೇಕು..."

ಕರ್ನಾಟಕದಲ್ಲಿಯೂ ಸಹ, ಕನಿಷ್ಟ ಬೆಂಬಲ ಬೆಲೆ ತಮಿಳುನಾಡಿನಲ್ಲಿಗಿಂತ ಉತ್ತಮವಾಗಿದ್ದರೂ ಕೆಲವು ರೈತರು ಖರೀದಿ ವಿಳಂಬದಿಂದಾಗಿ ಬೆಂಬಲ ಬೆಲೆಗಿಂತ ಶೇಕಡಾ 35ರಷ್ಟು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.

"ಎಲ್ಲೆಡೆ ಸರಿಯಾದ ಕನಿಷ್ಟ ಬೆಂಬಲ ಬೆಲೆ ಜಾರಿಗೆ ತನ್ನಿ" ಎಂದು ಗೋಪ ಮೆನನ್ ಹೇಳುತ್ತಾರೆ. ನೀವು ಕಿಲೋಗೆ 35 ರೂಪಾಯಿಯಂತೆ ಖರೀದಿಸಿದರೆ, ಜನರು ಅದನ್ನು ಬೆಳೆಯುತ್ತಾರೆ. ನೀವು ಹಾಗೆ ಮಾಡದಿದ್ದರೆ, ಈ ಪ್ರದೇಶದಲ್ಲಿ ಏನಾಗುತ್ತಿದೆ - ಅಲ್ಲಿ ಜನರು ಹೂವುಗಳು, ಟೊಮೇಟೊ ಮತ್ತು ಫ್ರೆಂಚ್ ಬೀನ್ಸ್ ಇತ್ಯಾದಿ ಬದಲಿ ಬೆಳೆ ಬೆಳೆಯುತ್ತಿದ್ದಾರೆ - ಅದೇ ಶಾಶ್ವತವಾಗುತ್ತದೆ."

ಊರಿನಲ್ಲಿ ಅವರ ನೆರೆಹೊರೆಯವರಾದ ಸೀನಪ್ಪ, ಮಧ್ಯವಯಸ್ಕ ಸಣ್ಣ ರೈತ, ಹೆಚ್ಚು ಟೊಮೆಟೊಗಳನ್ನು ಬೆಳೆಯಲು ಬಯಸುತ್ತಾರೆ. "ಇದು ಲಾಟರಿ ಇದ್ದಂತೆ" ಎಂದು ಸೀನಪ್ಪ ಹೇಳುತ್ತಾರೆ. "ಪ್ರತಿಯೊಬ್ಬ ರೈತನೂ ಟೊಮೇಟೊ ಬೆಳೆದು 3 ಲಕ್ಷ ಸಂಪಾದನೆ ಮಾಡಿದ ಒಬ್ಬ ರೈತನಿಂದ ಪ್ರಭಾವಿತನಾಗಿದ್ದಾನೆ. ಆದರೆ ಒಳಸುರಿ ವೆಚ್ಚಗಳು ತುಂಬಾ ಹೆಚ್ಚಾಗಿವೆ. ಮತ್ತು ಬೆಲೆಯ ಏರಿಳಿತವು ನಂಬಲಸಾಧ್ಯವಾಗಿದೆ, ಇದು ಕಿಲೋಗೆ ಒಂದು ರೂಪಾಯಿಯ ತೀರಾ ಕನಿಷ್ಟ ಮಾರಾಟ ಬೆಲೆಯಿಂದ ಕಿಲೋಗೆ 120 ರೂಪಾಯಿಗಳ ಗರಿಷ್ಠಕ್ಕೆ ತೂಗಾಡುತ್ತಿರುತ್ತದೆ."

ಸೀನಪ್ಪ ನ್ಯಾಯಯುತ ಬೆಲೆ ಸಿಕ್ಕರೆ, ಟೊಮೆಟೊವನ್ನು ನಿಲ್ಲಿಸಿ ಹೆಚ್ಚು ರಾಗಿಯನ್ನು ಬೆಳೆಯಲು ಸಿದ್ಧರಿದ್ದಾರೆ. "ನೀವು ಹೆಚ್ಚು ರಾಗಿಯನ್ನು ಬೆಳೆದಷ್ಟೂ, ಹೆಚ್ಚು ಜಾನುವಾರುಗಳನ್ನು ಸಾಕಬಹುದು, ಮತ್ತು ಹೆಚ್ಚು ವಾರದ ಆದಾಯವನ್ನು ಪಡೆಯಬಹುದು. ಮೇವಿನ ಕೊರತೆಯಿಂದಾಗಿ ಜನರು ಜಾನುವಾರುಗಳನ್ನು ಮಾರಾಟ ಮಾಡಿದ್ದಾರೆ.”

PHOTO • M. Palani Kumar
PHOTO • Aparna Karthikeyan

ಎಡ: ಕಟಾವು ಮಾಡಿದ ಬೆಳೆಯನ್ನು ಹೊರೆ ಮಾಡಿರುವುದು. ರಾಗಿ ಕಾಳುಗಳನ್ನು ಎರಡು ವರ್ಷಗಳವರೆಗೆ ಸಂಗ್ರಹಿಸಿಡಬಹುದು. ಬಲ: ಪೈರುಗಳನ್ನು ಕಟ್ಟಿಡಲಾಗುತ್ತದೆ ಮತ್ತು ಅದನ್ನು ಜಾನುವಾರುಗಳ ಮೇವಾಗಿ ಬಳಸಲಾಗುತ್ತದೆ

ಇಲ್ಲಿನ ಎಲ್ಲಾ ಜನರಿಗೆ ರಾಗಿ ಪ್ರಧಾನ ಆಹಾರವಾಗಿದೆ ಎಂದು ಗೋಪ ಮೆನನ್ ಹೇಳುತ್ತಾರೆ. "ನಿಮಗೆ ಹಣದ ಅಗತ್ಯವಿದ್ದರೆ ಮಾತ್ರ ನೀವು ರಾಗಿಯನ್ನು ಮಾರಾಟ ಮಾಡುತ್ತೀರಿ. ಇದನ್ನು ಎರಡು ವರ್ಷಗಳವರೆಗೆ ಸಂಗ್ರಹಿಸಿಡಬಹುದು ಮತ್ತು ಅಗತ್ಯವಿದ್ದಾಗ ಹಿಟ್ಟು ಮಾಡಿಸಿ ತಿನ್ನಬಹುದು. ಇತರ ಬೆಳೆಗಳು ಇಷ್ಟು ಕಾಲ ಬಾಳಿಕೆ ಬರುವುದಿಲ್ಲ. ಒಂದೋ ನಿಮಗೆ ಇಂದು ಜಾಕ್ ಪಾಟ್ ಹೊಡೆಯುತ್ತದೆ, ಅಥವಾ ಎಲ್ಲವನ್ನೂ ಕಳೆದುಕೊಳ್ಳುತ್ತೀರಿ."

ಈ ಪ್ರದೇಶದಲ್ಲಿನ ಸಂಘರ್ಷಗಳು ಅನೇಕ ರೀತಿಯಲ್ಲಿವೆ ಮತ್ತು ಅವು ಸಂಕೀರ್ಣವಾಗಿವೆ. "ಇಲ್ಲಿ ಬೆಳೆದ ಹೂವುಗಳು (Cut flowers) ಮುಖ್ಯವಾಗಿ ಚೆನ್ನೈ ಮಾರುಕಟ್ಟೆಗೆ ಹೋಗುತ್ತವೆ" ಎಂದು ಗೋಪ ಮೆನನ್ ಹೇಳುತ್ತಾರೆ. "ಒಂದು ವಾಹನವು ಹೊಲದ ಬಾಗಿಲಿಗೆ ಬರುತ್ತದೆ ಮತ್ತು ನೀವು ನಿಮ್ಮ ಪಾಲಿನ ಹಣವನ್ನು ಅಲ್ಲೇ ಪಡೆಯುತ್ತೀರಿ. ಆದರೆ, ಅತ್ಯಂತ ಬೆಲೆಬಾಳುವ ಬೆಳೆಯಾದ ರಾಗಿಗೆ ಯಾವುದೇ ಭರವಸೆ ಇಲ್ಲ, ಮತ್ತು ಇದರಲ್ಲಿ ಸ್ಥಳೀಯ ತಳಿ, ಹೈಬ್ರಿಡ್ ಅಥವಾ ಸಾವಯವ ಎಲ್ಲದಕ್ಕೂ ಒಂದೇ ಬೆಲೆಯಾಗಿದೆ."

"ಶ್ರೀಮಂತ ರೈತರು ವಿದ್ಯುತ್ ಬೇಲಿಗಳು ಮತ್ತು ಗೋಡೆಗಳನ್ನು ಹಾಕಿದ್ದಾರೆ ಮತ್ತು ಆನೆಗಳನ್ನು ಬಡ ರೈತರ ಪ್ರದೇಶಗಳತ್ತ ತಿರುಗಿಸಿದ್ದಾರೆ. ಶ್ರೀಮಂತ ರೈತರು ಬೇರೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಬಡ ಕೃಷಿಕರು ರಾಗಿ ಬೆಳೆಯುತ್ತಿದ್ದಾರೆ." ಆದರೂ, ಗೋಪ ಮುಂದುವರೆದು ಹೇಳುತ್ತಾರೆ, "ಇಲ್ಲಿನ ರೈತರು ಆನೆಗಳ ವಿಷಯದಲ್ಲಿ ನಂಬಲಾಗದಷ್ಟು ಸಹಿಷ್ಣುರಾಗಿದ್ದಾರೆ. ಅವರ ಸಮಸ್ಯೆಯೆಂದರೆ ಆನೆಗಳು ತಿನ್ನುವ ಪ್ರಮಾಣವು ಆನೆಗಳು ನಡೆದು ಉಂಟಾಗುವ ಹಾನಿಯ ಹತ್ತನೇ ಒಂದು ಭಾಗದಷ್ಟಿರುತ್ತದೆ. ನಾನು 25 ಅಡಿ ದೂರದಿಂದ ಮೊಟ್ಟೈ ವಾಲ್ ಆನೆಯನ್ನು ನೋಡಿದ್ದೇನೆ" ಎಂದು ಅವರು ಹೇಳುತ್ತಾರೆ, ಮತ್ತು ಆನೆಯ ಕಥೆಗಳು ಮತ್ತೆ ವಿಸ್ತಾರಗೊಳ್ಳುತ್ತದೆ. "ಜನರಂತೆ, ಮೊಟ್ಟೈ ವಾಲ್ ಒಂದಕ್ಕಿಂತ ಹೆಚ್ಚು ರಾಜ್ಯಗಳಿಗೆ ಸೇರಿದೆ. ಅದು ತಮಿಳುನಾಡಿನ ನಿವಾಸಿ. ಜೊತೆಗೆ ಗೌರವಾನ್ವಿತ ಕನ್ನಡಿಗನೂ ಹೌದು. ಮಖಾನಾ ಅದರ ಡೆಪ್ಯುಟಿ. ವಿದ್ಯುತ್ ಬೇಲಿಯನ್ನು ದಾಟುವುದು ಹೇಗೆಂದು ಮಖಾನಾಗೆ ತೋರಿಸಿಕೊಡುತ್ತದೆ."

ಅದನ್ನೆಲ್ಲ ಕೇಳುತ್ತಿರುವಂತೆ ಮೊಟ್ಟೈ ವಾಲ್‌ ಪಕ್ಕದಲ್ಲೇ ಇರುವಂತೆ ಭಾಸವಾಯಿತು. “ನಾನು ಹೊಸೂರಿಗೆ ಹೋಗಿ ಕಾರಿನಲ್ಲಿ ಮಲಗುವುದೇ ಸರಿಯೆನ್ನಿಸುತ್ತದೆ,” ಎಂದು ಆತಂಕದಿಂದ ನಗುತ್ತಾ ಹೇಳಿದೆ. ಗೋಪ ಅಚ್ಚರಿಯಿಂದ, ಆನೆಯಂತೆ ಸದ್ದು ಮಾಡುತ್ತಾ, “ಮೊಟ್ಟೈ ವಾಲ್‌ ತುಂಬಾ ದೊಡ್ಡ ಮನುಷ್ಯ, ತುಂಬಾ ದೊಡ್ಡ ಗಾತ್ರ ಅವನದು. ಆದರೆ ಅವನು ತುಂಬಾ ಒಳ್ಳೆಯವನು,” ಎಂದರು. ನಾನು ಮನಸ್ಸಿನಲ್ಲೇ ಆ ಆನೆಯಾಗಲೀ ಇತರ ಆನೆಯಾಗಲಿ ಕಾಣಿಸಿದಿದ್ದರೆ ಸಾಕು ಎಂದುಕೊಳ್ಳುತ್ತಿದ್ದೆ. ಆದರೆ ದೇವರ ಯೋಜನೆ ಬೇರೆಯೇ ಇತ್ತು…

*****

ಮೂಲ ಸ್ಥಳೀಯ ರಾಗಿ ಇಳುವರಿ ಕಡಿಮೆ ಕೊಡುತ್ತಿತ್ತು, ಆದರೆ ರುಚಿ ಮತ್ತು ಪೌಷ್ಠಿಕಾಂಶವು ಹೆಚ್ಚಾಗಿತ್ತು.
ನಾಗಿ ರೆಡ್ಡಿ, ಕೃಷ್ಣಗಿರಿಯ ರಾಗಿ ಬೆಳೆಗಾರ

PHOTO • M. Palani Kumar

ಎಡಗಡೆಯಿಂದ: ವಡ್ಡರ ಪಾಳ್ಯಂನಲ್ಲಿರುವ ತಮ್ಮ ಮನೆಯ ವರಾಂಡದಲ್ಲಿ ನಾಗಣ್ಣ (ನಾಗಿ ರೆಡ್ಡಿ), ಸೊಸೆ ಪ್ರಭಾ ಮತ್ತು ಮಗ ಆನಂದ. 'ನನಗೆ ಐದು ವಿಧದ ರಾಗಿಗಳು ನೆನಪಿವೆ' ಎಂದು ನಾಗಣ್ಣ ಹೇಳುತ್ತಾರೆ

ನಾಗಣ್ಣ ಯುವಕನಾಗಿದ್ದ ಕಾಲದಲ್ಲಿ, ರಾಗಿ ಅವರ ಎದೆಯಷ್ಟು ಎತ್ತರಕ್ಕೆ ಬೆಳೆಯುತ್ತಿತ್ತು. ಅವರು ಎತ್ತರವಾದ ಮನುಷ್ಯ - ಸುಮಾರು 5 ಅಡಿ ಮತ್ತು 10 ಇಂಚುಗಳು - ಮತ್ತು ತೆಳ್ಳಗೆ. ಅವರು ಧೋತಿ ಮತ್ತು ಅಂಗಿಯನ್ನು ಧರಿಸುತ್ತಾರೆ, ಕುತ್ತಿಗೆಯ ಸುತ್ತ ಟವೆಲ್ ಸುತ್ತಿಕೊಂಡಿರುತ್ತಾರೆ. ಅವರು ಕೆಲವೊಮ್ಮೆ ಕೋಲನ್ನು ಜೊತೆಯಲ್ಲಿ ಒಯ್ಯುತ್ತಾರೆ, ಮತ್ತು ಸಾಮಾಜಿಕ ಭೇಟಿಗಳಿಗಾಗಿ, ಕಲೆರಹಿತ ಬಿಳಿ ಅಂಗಿಯನ್ನು ಧರಿಸುತ್ತಾರೆ.

"ನನಗೆ ಐದು ವಿಧದ ರಾಗಿಗಳು ನೆನಪಿವೆ" ಎಂದು ಅವರು ತಮ್ಮ ಜಗಲಿಯ ಮೇಲೆ ಕುಳಿತು, ಹಳ್ಳಿ, ಮನೆ ಮತ್ತು ಅಂಗಳವನ್ನು ಏಕಕಾಲದಲ್ಲಿ ಗಮನಿಸುತ್ತಾ ಹೇಳುತ್ತಾರೆ. "ಮೂಲ ನಾಟಿ (ಸ್ಥಳೀಯ) ರಾಗಿಗೆ ಕೇವಲ ನಾಲ್ಕೈದು ಕೊಂಬುಗಳಿದ್ದವು. ಇಳುವರಿಯು ಕಡಿಮೆ ಇತ್ತು, ಆದರೆ ರುಚಿ ಮತ್ತು ಪೌಷ್ಠಿಕಾಂಶವು ಹೆಚ್ಚಾಗಿತ್ತು."

ಹೈಬ್ರಿಡ್ ತಳಿಗಳು 1980ರಲ್ಲಿ ಕಾಣಿಸಿಕೊಂಡವು ಎಂದು ಅವರು ನೆನಪಿಸಿಕೊಳ್ಳುತ್ತಾರೆ. ಅವು ಎಂಆರ್, ಎಚ್ಆರ್ - ಹೆಸರುಗಳಾಗಿ ಮೊದಲಾಕ್ಷರಗಳನ್ನು ಹೊಂದಿದ್ದವು ಮತ್ತು ಹೆಚ್ಚು ಕೊಂಬುಗಳನ್ನು ಹೊಂದಿದ್ದವು. ತಲಾ 80 ಕಿಲೋ ತೂಕದ ಐದು ಮೂಟೆಗಳಿಂದ 18 ಮೂಟೆಗಳವರೆಗೆ ಕೊಯ್ಲು ಹೆಚ್ಚಾಯಿತು. ಆದರೆ ಸುಧಾರಿತ ಇಳುವರಿಯು ರೈತರನ್ನು ಬೆಳೆಯುವಂತೆ ಉತ್ತೇಜಿಸುವುದಿಲ್ಲ - ಏಕೆಂದರೆ ವಾಣಿಜ್ಯಿಕವಾಗಿ ಬೆಳೆಯಬಹುದಾದಷ್ಟು ಬೆಲೆಯು ಹೆಚ್ಚಿರುವುದಿಲ್ಲ.

ಅವರು ಕೃಷಿ ಮಾಡಿದ 74 ವರ್ಷಗಳಲ್ಲಿ - 12 ವರ್ಷದವರಾಗಿದ್ದಾಗ ಬೇಸಾಯ ಪ್ರಾರಂಭಿಸಿದರು - ನಾಗಣ್ಣ ಅನೇಕ ಬೆಳೆಗಳನ್ನು ಬೆಳೆದಿದ್ದಾರೆ. "ನಮ್ಮ ಕುಟುಂಬವು ನಮಗೆ ಬೇಕಾದ ಎಲ್ಲವನ್ನೂ ಬೆಳೆಯುತ್ತಿತ್ತು. ನಾವು ನಮ್ಮ ಹೊಲಗಳಲ್ಲಿ ಕಬ್ಬಿನಿಂದ ಬೆಲ್ಲವನ್ನು ತಯಾರಿಸಿದ್ದೇವೆ. ಎಳ್ಳನ್ನು ಬೆಳೆದೆವು ಮತ್ತು ಬೀಜಗಳಿಂದ ಮರದ ಗಿರಣಿಯಲ್ಲಿ ಎಣ್ಣೆ ತೆಗೆದಿದ್ದೆವು. ರಾಗಿ, ಅಕ್ಕಿ, ಹುರುಳಿಕಾಳು, ಮೆಣಸಿನಕಾಯಿ, ಬೆಳ್ಳುಳ್ಳಿ, ಈರುಳ್ಳಿ... ನಮ್ಮಲ್ಲಿ ಎಲ್ಲವೂ ಇತ್ತು."

ಹೊಲವೇ ಅವರ ಪಾಲಿನ ಶಾಲೆಯಾಗಿತ್ತು. ಔಪಚಾರಿಕ ಶಾಲೆಗಳು ದೂರದಲ್ಲಿದ್ದವು ಮತ್ತು ಅಲ್ಲಿಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಅವರು ದನಕರುಗಳು ಮತ್ತು ಮೇಕೆಗಳು ಸೇರಿದಂತೆ ಕುಟುಂಬದ ಜಾನುವಾರುಗಳನ್ನು ಸಹ ನೋಡಿಕೊಳ್ಳುತ್ತಿದ್ದರು. ಅದೊಂದು ಬಿಡುವಿಲ್ಲದ ಜೀವನವಾಗಿತ್ತು. ಎಲ್ಲರಿಗೂ ಕೆಲಸವಿತ್ತು.

ನಾಗಣ್ಣನವರ ಅವಿಭಕ್ತ ಕುಟುಂಬ ದೊಡ್ಡದಾಗಿತ್ತು. ಅವರೆಲ್ಲರೂ - ಅವರು 45 ಸದಸ್ಯರಿದ್ದರೆಂದು ನೆನಪಿಸಿಕೊಳ್ಳುತ್ತಾರೆ - ಅವರ ಅಜ್ಜ ನಿರ್ಮಿಸಿದ ದೊಡ್ಡ ಮನೆಯಲ್ಲಿ ವಾಸಿಸುತ್ತಿದ್ದರು. ಇದು ಓಣಿಯ ಉದ್ದಕ್ಕೂ ಇದೆ, ದನದ ಕೊಟ್ಟಿಗೆ ಮತ್ತು ಹಳೆಯ ಎತ್ತಿನ ಬಂಡಿಯೊಂದಿಗೆ 100 ವರ್ಷಗಳಷ್ಟು ಹಳೆಯದಾದ ಕಟ್ಟಡ ಮತ್ತು ವಾರ್ಷಿಕ ರಾಗಿ ಬೆಳೆಯನ್ನು ಸಂಗ್ರಹಿಸಲು ವರಾಂಡದಲ್ಲಿ ನಿರ್ಮಿಸಲಾದ ಉಗ್ರಾಣಗಳು ಕೂಡಾ ಇದರಲ್ಲಿವೆ.

PHOTO • M. Palani Kumar
PHOTO • M. Palani Kumar

ಎಡ: ನಾಗಣ್ಣನ ಪೂರ್ವಜರ ಮನೆಯ ದನದ ಕೊಟ್ಟಿಗೆ. ಬಲ: ಹಳೆಯ ಮನೆಯ ವರಾಂಡದಲ್ಲಿ ರಾಗಿ ಇಡಲು ಉಗ್ರಾಣವನ್ನು ಕಟ್ಟಲಾಗಿದೆ

ಅವರು 15 ವರ್ಷದವರಾಗಿದ್ದಾಗ, ನಾಗಣ್ಣ ಅವರ ಕುಟುಂಬವು ಆಸ್ತಿಯನ್ನು ಅದರ ಅನೇಕ ಸದಸ್ಯರಿಗೆ ಹಂಚಿತು. ಅವರು ಒಂದು ಪಾಲನ್ನು ಹೊರತುಪಡಿಸಿ, ಆಗ ದನದ ಕೊಟ್ಟಿಗೆಯಾಗಿದ್ದದ್ದನ್ನು ಪಡೆದರು. ಮತ್ತು ಅದನ್ನು ಸ್ವಚ್ಛಗೊಳಿಸುವುದು ಮತ್ತು ಮನೆಯನ್ನು ನಿರ್ಮಿಸುವುದು ಅವರ ಕೆಲಸವಾಗಿತ್ತು. "ಆ ಸಮಯದಲ್ಲಿ, ಪ್ರತಿ ಚೀಲ ಸಿಮೆಂಟ್ ಬೆಲೆ 8 ರೂಪಾಯಿಗಳು - ಬಹಳ ದೊಡ್ಡ ಮೊತ್ತ. ಈ ಮನೆಯನ್ನು 1,000 ರೂಪಾಯಿಗಳಿಗೆ ನಿರ್ಮಿಸಲು ನಾವು ಗಾರೆ ಕೆಲಸಗಾರನೊಂದಿಗೆ ಒಪ್ಪಂದ ಮಾಡಿಕೊಂಡೆವು."

ಆದರೆ ಅದು ಪೂರ್ಣಗೊಳ್ಳಲು ವರ್ಷಗಳೇ ಬೇಕಾಯಿತು. ಒಂದು ಮೇಕೆ ಮತ್ತು 100 ತುಂಡು ಬೆಲ್ಲದ ಮಾರಾಟದ ಹಣದಿಂದ ಒಂದು ಗೋಡೆ ಕಟ್ಟಲು ಸಾಧ್ಯವಾಯಿತು. ಮಾಟು ವಂಡಿ (ಎತ್ತಿನ ಬಂಡಿ)ಯಲ್ಲಿ ವಸ್ತುಗಳು ಬರುತ್ತಿದ್ದವು. ಆಗ ಹಣ ಇರುತ್ತಿರಲಿಲ್ಲ. ಅಷ್ಟಕ್ಕೂ, ಆಗ ಒಂದು ಪಡಿ ರಾಗಿಗೆ ಕೇವಲ 8 ಆಣೆಗಳನ್ನು ಮಾತ್ರ ಕೊಡಲಾಗುತ್ತಿತ್ತು, (ಈ ರಾಜ್ಯದ ಒಂದು ಸಾಂಪ್ರದಾಯಿಕ ಅಳತೆ - 60 ಪಡಿಗಳು 100 ಕಿಲೋ).

ಅವರು ಮದುವೆಯಾಗುವ ಕೆಲವು ವರ್ಷಗಳ ಮೊದಲು - 1970ರಲ್ಲಿ - ನಾಗಣ್ಣ ಅಂತಿಮವಾಗಿ ಅವರ ಮನೆಯಲ್ಲಿ ಒಕ್ಕಲು ಹೂಡಿದರು. ಮನೆಗೆ ಯಾವುದೇ ಆಧುನಿಕ ಸ್ಪರ್ಶಗಳನ್ನು ಮತ್ತೆ ಸೇರಿಸಿಲ್ಲ, "ಇಲ್ಲಿ ಮತ್ತು ಅಲ್ಲಿ ಸ್ವಲ್ಪ" ಎಂದು ಅವರು ಹೇಳುತ್ತಾರೆ. ಅವರ ಮೊಮ್ಮಗ ತನ್ನ ಕೈಲಾದಷ್ಟು ಮಾಡಿದ್ದಾನೆ. ಹರಿತವಾದ ಆಯುಧದಿಂದ, ಅವನು ತನ್ನದೇ ಆದ ಹೆಸರನ್ನು ಕೆತ್ತಿದ್ದಾನೆ ಮತ್ತು ಪೆರೈ (ತೈಲ ದೀಪದ ಅಂಚು) ಮೇಲೆ ಸ್ಥಾನದ ಹೆಸರನ್ನು ಕೆತ್ತಿದ್ದಾನೆ: 'ದಿನೇಶ್ ಈಸ್ ದಿ ಡಾನ್'. ಆ ದಿನ ಬೆಳಿಗ್ಗೆ ನಾವು 13 ವರ್ಷದ ಹುಡುಗನನ್ನು ನೋಡಿದ್ದೆವು - ಅವನು ತನ್ನ ಶಾಲೆಗೆ ಹೋಗುವ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ, ಮತ್ತು ನೋಡಲು ಡಾನ್‌ಗಿಂತ ಹೆಚ್ಚು ಒಳ್ಳೆಯ ಹುಡುಗನಂತೆ ಕಾಣುತ್ತಿದ್ದನು - ಮತ್ತು ಅವನು ಹೆಲ್ಲೋ ಎನ್ನುತ್ತಾ ಓಡಿಹೋಗಿದ್ದನು.

ಈ ಡಾನ್‌ ಆಗಲು ಬಯಸುತ್ತಿರುವ ದಿನೇಶನ ಅಮ್ಮ, ಪ್ರಭಾ ನಮಗೆ ಟೀ ತಂದುಕೊಟ್ಟರು. ನಾಗಣ್ಣ ಹುರುಳಿ ಕಾಳು ತಂದುಕೊಡುವಂತೆ ಹೇಳಿದರು. ಆಕೆ ಡಬ್ಬವೊಂದನ್ನು ತಂದರು. ಆಕೆ ಆ ಡಬ್ಬವನ್ನು ಅಲುಗಾಡಿಸಿದಂತೆಲ್ಲ ಅದರಿಂದ ಸಂಗೀತದಂತಹ ಸದ್ದು ಬರುತ್ತಿತ್ತು. ನಾಗಣ್ಣ ಅದರಲ್ಲಿ ಸಾರು ಹೇಗೆ ಮಾಡುವುದೆಂದು ವಿವರಿಸುತ್ತಿದ್ದರು. ಹಸಿಯಾಗಿ ತಿಂದರೂ ”ಪರವಾಯಿಲ್ಲ[ಪರವಾಗಿಲ್ಲ]” ಎನ್ನುತ್ತಾರವರು. ನಾವೆಲ್ಲ ಒಂದೊಂದು ಮುಷ್ಟಿ ಎತ್ತಿಕೊಂಡೆವು. ಗರಿಗರಿಯಾಗಿ ರುಚಿಯಾಗಿತ್ತು. “ಹುರಿದು ಉಪ್ಪು ಹಾಕಿದ್ದು ರುಚಿಯಾಗಿರುತ್ತದೆ,” ಎನ್ನುತ್ತಾರೆ ನಾಗಣ್ಣ. ನಮಗೆ ಆ ಕುರಿತು ಖಂಡಿತ ಅನುಮಾನವಿಲ್ಲ.

ಕೃಷಿಯಲ್ಲಿ ಏನು ಬದಲಾವಣೆಯಾಗಿದೆಯೆಂದು ಅವರನ್ನು ಕೇಳಿದಾಗ, "ಎಲ್ಲವೂ," ಎಂದು ಅವರು ಸ್ಪಷ್ಟವಾಗಿ ಹೇಳುತ್ತಾರೆ. "ಕೆಲವು ಬದಲಾವಣೆಗಳು ಒಳ್ಳೆಯದು, ಆದರೆ ಜನರು," ಅವರು ತಲೆ ಅಲ್ಲಾಡಿಸಿ, "ಇನ್ನು ಮುಂದೆ ಕೆಲಸ ಮಾಡಲು ಬಯಸುವುದಿಲ್ಲ." 86 ನೇ ವಯಸ್ಸಿನಲ್ಲಿಯೂ ಸಹ, ಅವರು ಈಗಲೂ ಪ್ರತಿದಿನ ಹೊಲಕ್ಕೆ ಹೋಗುತ್ತಾರೆ ಮತ್ತು ದೈನಂದಿನ ಸಮಸ್ಯೆಗಳ ಬಗ್ಗೆ ಸ್ಪಷ್ಟವಾದ ತಿಳುವಳಿಕೆಯನ್ನು ಹೊಂದಿದ್ದಾರೆ. "ಈಗ, ನಿಮ್ಮ ಬಳಿ ಭೂಮಿ ಇದ್ದರೂ, ನಿಮಗೆ ಕೂಲಿಗೆ ಜನ ಸಿಗುವುದಿಲ್ಲ" ಎಂದು ಅವರು ವಿವರಿಸುತ್ತಾರೆ.

PHOTO • M. Palani Kumar

ಮನೆಯ ಜಗುಲಿಯಲ್ಲಿ ಕುಳಿತು ನಾಗಣ್ಣ ತನ್ನ ಚಿಕ್ಕಂದಿನ ಕಥೆಗಳನ್ನು ಹೇಳುತ್ತಾರೆ

"ರಾಗಿಯನ್ನು ಕೊಯ್ಯಲು ಯಂತ್ರಗಳಿವೆ ಎಂದು ಜನರು ಹೇಳುತ್ತಾರೆ, ಆದರೆ ಯಂತ್ರಕ್ಕೆ ಕೊಂಬುಗಳ ನಡುವೆ ವ್ಯತ್ಯಾಸ ಗೊತ್ತಾಗುವುದಿಲ್ಲ. ಒಂದೇ ಕದಿರಿನಲ್ಲಿ [ಪೈರು] ಒಂದು ಕೊಂಬು ಹಣ್ಣಾಗಿರಬಹುದು, ಇನ್ನೊಂದು ಒಣಗಿರಬಹುದು, ಇನ್ನೊಂದರಲ್ಲಿ ಈಗಿನ್ನೂ ಹಾಲು ತುಂಬಿರಬಹುದು. ಯಂತ್ರವು ಎಲ್ಲವನ್ನೂ ಒಟ್ಟಿಗೆ ಕಿತ್ತುಹಾಕುತ್ತದೆ. ಅದನ್ನು ಚೀಲದಲ್ಲಿ ಹಾಕಿದಾಗ, ಅದು ಅಂಟು ಅಂಟಾಗಿ ವಾಸನೆ ಬರುತ್ತದೆ. ಮತ್ತು ಎಲ್ಲವೂ ವ್ಯರ್ಥವಾಗುತ್ತದೆ. ಕೈಯಿಂದ ಸಂಸ್ಕರಿಸುವುದು ಪ್ರಯಾಸದಾಯಕ, "ಆದರೆ ಹೆಚ್ಚು ಕಾಲ ಬಾಳಿಕೆ ಬರುತ್ತದೆ."

ಶಿವಕುಮಾರನ್ ಅವರ ಗುತ್ತಿಗೆ ಪಡೆದ ರಾಗಿ ಹೊಲದಲ್ಲಿ ಹದಿನೈದು ಹೆಂಗಸರು ಕೈಯಿಂದ ಕೊಯ್ಲು ಮಾಡುತ್ತಿದ್ದರು. ತನ್ನ ಕುಡಗೋಲು ತನ್ನ ಕಂಕುಳಲ್ಲಿ ಸಿಕ್ಕಿಸಿಕೊಂಡು, ಮತ್ತು 'ಸೂಪರ್‌ ಡ್ರೈ ಇಂಟರ್‌ನ್ಯಾಶನಲ್' ಎಂದು ಪ್ರಿಂಟ್‌ ಇರುವ ಟಿ-ಶರ್ಟ್‌ನ ಮೇಲೆ ಟವೆಲ್ ಅನ್ನು ಸುತ್ತಿಕೊಂಡಿದ್ದ ಶಿವ ರಾಗಿಯ ಬಗ್ಗೆ ಉತ್ಸಾಹದಿಂದ ಮಾತನಾಡಿದರು.

ಗೊಲ್ಲಪಲ್ಲಿಯ ಹೊರಭಾಗದಲ್ಲಿರುವ ಅವರ ಹೊಲವು ಹಿಂದಿನ ವಾರಗಳಲ್ಲಿ ಹೆಚ್ಚು ಮಳೆ ಮತ್ತು ಗಾಳಿಯನ್ನು ಕಂಡಿದೆ. 25ರ ಹರೆಯದ ಶಿವ ಓರ್ವ ಉತ್ಕಟ ಉತ್ಸಾಹದ ರೈತನಾಗಿದ್ದು, ಮಳೆಯ ದಿನಗಳು ಮತ್ತು ಇಳುವರಿ ನಷ್ಟದ ಕುರಿತು ಮಾತನಾಡುತ್ತಾರೆ. ತೆನೆಗಳು ಬೇರೆ ಬೇರೆ ಕಡೆ ಬಿದ್ದಿದ್ದವು, ಹೆಂಗಸರು ಓಡಾಡಿಕೊಂಡು, ರಾಗಿಯನ್ನು ಕಟ್ಟುಗಳಾಗಿ ಜೋಡಿಸಿದರು. ಇಳುವರಿ ಕಡಿಮೆಯಾಗಿದೆ, ಆದರೆ ಕೊಯ್ಲು ಮಾಡುವ ಮಹಿಳೆಯರ ಕೆಲಸದ ಗಂಟೆಗಳು ಒಂದರಿಂದ ಎರಡು ದಿನಗಳವರೆಗೆ ಹೆಚ್ಚಾಗಿವೆ. ಆದಾಗ್ಯೂ, ಭೂಮಿಯ ಗುತ್ತಿಗೆ ಬೆಲೆಯು ಬದಲಾಗದೆ ಉಳಿದಿದೆ.

“ಎರಡು ಎಕರೆಗಿಂತ ಕಡಿಮೆಯಿರುವ ಈ ಹೊಲಕ್ಕೆ ನಾನು ಗುತ್ತಿಗೆಯಾಗಿ ಏಳು ಚೀಲ ರಾಗಿ ನೀಡಬೇಕಾಗಿದೆ. ಉಳಿದ 12 ಅಥವಾ 13 ಚೀಲಗಳನ್ನು ನಾನು ಇಟ್ಟುಕೊಳ್ಳಬಹುದು ಅಥವಾ ಮಾರಾಟ ಮಾಡಬಹುದು. ಆದರೆ ಕರ್ನಾಟಕದ ಬೆಲೆಯಿಂದ ಮಾತ್ರ ನೀವು ಲಾಭವನ್ನು ನೋಡಬಹುದು ಎಂದು ಅವರು ಪ್ರತಿಪಾದಿಸುತ್ತಾರೆ. ತಮಿಳುನಾಡಿನಲ್ಲಿ ಕಿಲೋಗೆ 35 ರೂಪಾಯಿ ಮಾಡಬೇಕು. ಅದನ್ನು ನೀವು ಬರೆಯಿರಿ,” ಎಂದು ಅವರು ನನಗೆ ಸೂಚಿಸಿದರು. ನಾನು ಟಿಪ್ಪಣಿ ಮಾಡಿಕೊಂಡೆ ...

ಇತ್ತ ತನ್ನ ಹಿತ್ತಲಿಗೆ ನಮ್ಮನ್ನು ಕರೆದೊಯ್ದ ನಾಗಣ್ಣ ನನಗೆ ಹಳೆಯ ರೋಣಗಲ್ಲನ್ನು ತೋರಿಸಿದರು. ಇದು ಒಂದು ದೊಡ್ಡ ಸಿಲಿಂಡರ್ ಮಾದರಿಯ ಕಲ್ಲು. ಇದಕ್ಕೆ ಎತ್ತುಗಳನ್ನು ಕಟ್ಟಿ ಕೊಯ್ಲು ಮಾಡಿದ ರಾಗಿಯ ಮೇಲೆ ಉರುಳಿಸಲಾಗುತ್ತದೆ, ವಿಶೇಷವಾಗಿ ಹಸುವಿನ ಸಗಣಿಯಿಂದ ತಯಾರಿಸಿದ ಗಟ್ಟಿಯಾದ ನೆಲದ ಮೇಲೆ ರಾಗಿಯನ್ನು ಹರಡಲಾಗುತ್ತದೆ. ಈ ವಿಧಾನದಲ್ಲಿ ನಿಧಾನವಾಗಿ, ಆದರೆ ಪರಿಣಾಮಕಾರಿಯಾಗಿ, ಕಲ್ಲು ಕೊಂಬುಗಳನ್ನು ಪುಡಿಮಾಡುತ್ತಿತ್ತು, ರಾಗಿ ಮತ್ತು ಪೈರುಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಲಾಗುತ್ತಿತ್ತು. ನಂತರ ರಾಗಿಯನ್ನು ಗಾಳಿಯಲ್ಲಿ ತೂರಿ ಮನೆಯ ಮುಂಭಾಗದ ಗುಂಡಿಗಳಲ್ಲಿ ಸಂಗ್ರಹಿಸಲಾಗುತ್ತದೆ. ಹಿಂದೆ, ಅವುಗಳನ್ನು ಸೆಣಬಿನ ಚೀಲಗಳಲ್ಲಿ ಸಂಗ್ರಹಿಸಲಾಗುತ್ತಿತ್ತು - ಮತ್ತು ಈಗ ಬಿಳಿ ಪ್ಲಾಸ್ಟಿಕ್‌ ಚೀಲದಲ್ಲಿ.

"ಈಗ ಒಳಗೆ ಬನ್ನಿ" ಎಂದು ನಾಗಣ್ಣ ನಮ್ಮನ್ನು ಆಹ್ವಾನಿಸಿದರು. "ಊಟ ಮಾಡಿ..." ಎಂದರು ಮತ್ತು ಅಡುಗೆಮನೆಯಲ್ಲಿ ಕೆಲವು ಕಥೆಗಳನ್ನು ಕೇಳಲು ಆಶಿಸುತ್ತಾ, ನಾನು ಉತ್ಸಾಹದಿಂದ ಪ್ರಭಾ ಅವರನ್ನು ಹಿಂಬಾಲಿಸಿದೆ.

PHOTO • M. Palani Kumar
PHOTO • M. Palani Kumar

ಎಡ: ಶಿವಕುಮಾರನ್ ಗೊಲ್ಲಪಲ್ಲಿ ಹೊರಗಿರುವ ತಮ್ಮ ಗುತ್ತಿಗೆ ಜಮೀನಿನಲ್ಲಿ ಮಳೆಯಿಂದ ಹಾನಿಗೀಡಾದ ರಾಗಿ ಬೆಳೆಯನ್ನು ಕಟಾವು ಮಾಡುತ್ತಿದ್ದಾರೆ. ಬಲ: ಶಿವ ಕುಮಾರನ್‌ ಅವರ ಹೊಲದಲ್ಲಿ ಪೈರನ್ನು ಕತ್ತರಿಸಿ ಕಟ್ಟುತ್ತಿರುವ ಕೆಲಸಗಾರರು

*****

ಮಳೆಯಾಶ್ರಿತ ಹೊಲಗಳಲ್ಲಿ ಬೆಳೆಯುವ
ಪಾರಿವಾಳದ ಮೊಟ್ಟೆಯಂತಹ ರಾಗಿಕಾಳುಗಳನ್ನು
ಹಾಲಿನಲ್ಲಿ ಬೇಯಿಸಿ ಜೇನುತುಪ್ಪ ಬೆರೆಸಿ
ಮತ್ತು ಸುಟ್ಟ ಎಳೆಯ ಮೊಲದ ಮಾಂಸ ಜೊತೆ,
ನನ್ನ ಕುಲದವರು ಮತ್ತು ಸಂಬಂಧಿಕರೊಂದಿಗೆ ತಿನ್ನುತ್ತೇನೆ

‘ಪುರಾಣನೂರು 34’, ಆಲತ್ತೂರು ಕಿಳಾರರ ಸಂಗಮ ಪದ್ಯ
ಅನುವಾದ: ಚೆಂತಿಲ್ ನಾಥನ್

ಹೆಚ್ಚಿನ ಕ್ಯಾಲ್ಸಿಯಂ ಮತ್ತು ಕಬ್ಬಿಣ, ಗ್ಲುಟೆನ್-ಮುಕ್ತ ಮತ್ತು ದೀರ್ಘಾವಧಿಯ ಜೀವಿತಾವಧಿಯೊಂದಿಗೆ - ಎರಡು ವರ್ಷಗಳವರೆಗೆ - ರಾಗಿಯು ಆರೋಗ್ಯಕರ ಏಕದಳ ಧಾನ್ಯವಾಗಿದೆ. 2,000 ವರ್ಷಗಳ ಹಿಂದೆ, ತಮಿಳರು ಮಾಂಸ ಮತ್ತು ಹಾಲು ಮತ್ತು ಜೇನುತುಪ್ಪದೊಂದಿಗೆ ಆಸಕ್ತಿದಾಯಕ ರಾಗಿ ಪಾಕವಿಧಾನವನ್ನು ಹೊಂದಿದ್ದರು . ಇಂದು ರಾಗಿಯನ್ನು ಊಟದಲ್ಲಿ ಬಳಸಲಾಗುತ್ತದೆ, ಶಿಶುಗಳಿಗೆ ಉಣಿಸುತ್ತಾರೆ. ತಮಿಳುನಾಡಿನ ಹಲವು ಪ್ರದೇಶಗಳು ತಮ್ಮದೇ ಆದ ಪಾಕವಿಧಾನಗಳನ್ನು ಹೊಂದಿವೆ. ಕೃಷ್ಣಗಿರಿಯಲ್ಲಿ, ರಾಗಿ ಮುದ್ದೆ ಮಾಡುತ್ತಾರೆ, ಅಥವಾ ಕಳಿ ಎಂದೂ ಕರೆಯುತ್ತಾರೆ, ಇದನ್ನು ಪ್ರಭಾ ಮಾಡಿ ತೋರಿಸಿದರು.

ನಾವು ಅವರ ಅಡುಗೆಮನೆಯಲ್ಲಿದ್ದೇವೆ, ಅಲ್ಲಿ ಸ್ಟೀಲ್ ಸ್ಟೌವ್ ಸಿಮೆಂಟ್ ಕಟ್ಟೆಯ ಮೇಲಿತ್ತು. ಅವ ಅಲ್ಯೂಮಿನಿಯಂ ಕಡಾಯಿಗೆ ನೀರನ್ನು ಸುರಿದು ಒಂದು ಕೈಯಲ್ಲಿ ಮರದ ಕೋಲು ಮತ್ತು ಇನ್ನೊಂದು ಕೈಯಲ್ಲಿ ರಾಗಿ ಹಿಟ್ಟಿನೊಂದಿಗೆ ಕಾಯತೊಡಗಿದರು.

ಮಾತುಕತೆ ಆರಂಭಿಸಲೆಂದು ನಾನು ಅವರಿಗೆ ತಮಿಳು ಬರುತ್ತದೆಯೇ ಎಂದು ಕೇಳಿದೆ. ಸಲ್ವಾರ್‌ ಕಮೀಝ್‌ ತೊಟ್ಟು, ಸರಳವಾದ ಆಭರಣಗಳು ಮತ್ತು ಮುಗುಳ್ನಗುವನ್ನು ಧರಿಸಿದ್ದ ಅವರು ತಲೆಯಾಡಿಸಿದರು. ಆದರೆ ಅವರಿಗೆ ತಮಿಳು ಅರ್ಥವಾಗುತ್ತದೆ. ನನ್ನ ಪ್ರಶ್ನೆಗಳಿಗೆ ಕನ್ನಡ ಬೆರೆಸಿದ ತಮಿಳಿನಲ್ಲೇ ಉತ್ತರಿಸಿದರು. “ನಾನು ಇದನ್ನು ಸುಮಾರು 16 ವರ್ಷಗಳಿಂದ ಮಾಡುತ್ತಿದ್ದೇನೆ,” ಎಂದರು. ಆಗ ಅವರಿಗೆ 15 ವರ್ಷ.

ನೀರು ಕುದಿಯಲು ಪ್ರಾರಂಭಿಸಿದಾಗ ಮುದ್ದೆ ತಯಾರಿಸುವಲ್ಲಿನ ಅವರ ಅನುಭವ ಕಾಣುತ್ತಿತ್ತು. ಮೊದಲು ಕುದಿವ ನೀರಿಗೆ ಒಂದು ದೊಡ್ಡ ಕಪ್ ರಾಗಿ ಹಿಟ್ಟನ್ನು ಸೇರಿಸಿದರು. ಇದು ಕಂದು ಬಣ್ಣದ ಪೇಸ್ಟ್ ಆಗಿ ಬದಲಾಗುತ್ತದೆ. ಪಾತ್ರೆಯನ್ನು ಅನ್ನು ಇಕ್ಕಳದಿಂದ ಹಿಡಿದುಕೊಂಡು, ಮರದ ಕೋಲಿನಿಂದ ಮಿಶ್ರಣವನ್ನು ಚುರುಕಾಗಿ ಬೆರೆಸತೊಡಗಿದರು. ಇದು ಭಾರೀ ಕೆಲಸ – ಮತ್ತು ಇದನ್ನು ಮಾಡಲು ಕೌಶಲ ಮತ್ತು ತ್ರಾಣ ಎರಡೂ ಬೇಕು. ರಾಗಿಯು ಕೆಲವೇ ನಿಮಿಷಗಳಲ್ಲಿ ಬೆಂದು ಹಿಟ್ಟಿನ ಕೋಲಿನ ಸುತ್ತಲೂ ಚೆಂಡಿನಂತೆ ಸುತ್ತಿಕೊಳ್ಳುತ್ತದೆ.

ಅವರು ಅದನ್ನು ತಯಾರಿಸುತ್ತಿರುವುದನ್ನು ನೋಡುತ್ತಾ ಮಹಿಳೆಯರು ಇದನ್ನು ಕೆಲವು ಸಾವಿರ ವರ್ಷಗಳಿಂದ ತಯಾರಿಸಿಕೊಂಡು ಬಂದಿದ್ದಾರೆನ್ನುವುದು ನನ್ನ ಆಸಕ್ತಿಯನ್ನು ಇನ್ನಷ್ಟು ಕೆರಳಿಸಿತು

"ನಾನು ಚಿಕ್ಕವನಿದ್ದಾಗ, ಇದನ್ನು ಮಣ್ಣಿನ ಪಾತ್ರೆಯಲ್ಲಿ, ಸೌದೆ ಒಲೆಯ ಮೇಲೆ ಮಾಡಲಾಗುತ್ತಿತ್ತು" ಎಂದು ನಾಗಣ್ಣ ವಿವರಿಸುತ್ತಾರೆ. ರುಚಿ ಉತ್ತಮವಾಗಿರುತ್ತಿತ್ತು, ಅವರು ಭರವಸೆಯಿಂದ ಹೇಳುತ್ತಾರೆ. ಆನಂದ ಅಂದು ತಿನ್ನುತ್ತಿದ್ದ ದೇಶೀ ತಳಿ ಇದಕ್ಕೆ ಕಾರಣವೆನ್ನುತ್ತಾರೆ. "ವಾಸನೆ ನಿಮ್ಮನ್ನು ಮನೆಯ ಹೊರಗಿದ್ದದೂ ಸೆಳೆಯುತ್ತಿತ್ತು. ಗಮ ಗಮ ವಾಸನೈ," ಎಂದು ಅವರು ಹೇಳುತ್ತಾರೆ, ಸ್ಥಳೀಯ ರಾಗಿಯ ಸುಗಂಧ ಅಸಾಧಾರಣವೆಂದು ಅವರು ಸರ್ಟಿಫಿಕೇಟ್ ನೀಡುತ್ತಾರೆ. "ಹೈಬ್ರಿಡ್‌‌ ರಾಗಿಯ ವಾಸನೆಯು ಪಕ್ಕದ ಕೋಣೆಗೂ ಬರುವುದಿಲ್ಲ!"

PHOTO • Aparna Karthikeyan
PHOTO • Aparna Karthikeyan
PHOTO • Aparna Karthikeyan

ಎಡ: ಪ್ರಭಾ ತಯಾರಿಸಿದ ರಾಗಿ ಮುದ್ದೆ. ನಡುವೆ ಮತ್ತು ಬಲ: ಪ್ರಭಾ ಬಿಸಿ ಹಿಟ್ಟನ್ನು ತನ್ನ ಅಂಗೈಯಿಂದ ಗ್ರಾನೈಟ್ ಚಪ್ಪಡಿಯ ಮೇಲೆ ಉರುಳಿಸುವ ಮೂಲಕ ಮುದ್ದೆ ತಯಾರಿಸುತ್ತಿದ್ದಾರೆ

ಅತ್ತೆ ಮಾವ ಅಲ್ಲೇ ಇದ್ದ ಕಾರಣಕ್ಕಾಗಿಯೋ ಏನೋ, ಪ್ರಭಾ ತುಂಬಾ ಕಡಿಮೆ ಮಾತನಾಡಿದರು. ಅಡುಗೆಮನೆಯ ಒಂದು ಮೂಲೆಯಲ್ಲಿರುವ ಚೌಕಾಕಾರದ ಗ್ರಾನೈಟ್ ಕಲ್ಲಿನ ಬಳಿ ಕಡಾಯಿಯನ್ನು ತೆಗೆದುಕೊಂಡು ಹೋಗಿ ಅದರ ಮೇಲೆ ಹಬೆಯಾಡುವ ರಾಗಿ ಹಿಟ್ಟನ್ನು ಹಾಕಿದರು. ತನ್ನ ಅಂಗೈಯಿಂದ ಕುಶಲವಾಗಿ ಬಿಸಿ, ಬಿಸಿ ಹಿಟ್ಟನ್ನು ದಪ್ಪವಾದ ಕೊಳವೆಯಿಂದ ಉರುಳಿಸಿದರು. ಅದನ್ನು ತೇವಗೊಳಿಸಲು ತನ್ನ ಕೈಯನ್ನು ನೀರಿನಲ್ಲಿ ಅದ್ದಿ, ರಾಗಿಯನ್ನು ಒಂದು ದೊಡ್ಡ ತುಂಡಾಗಿ ಕತ್ತರಿಸಿಕೊಂಡು ತನ್ನ ಅಂಗೈ ಮತ್ತು ಕಲ್ಲಿನ ನಡುವೆ ಚೆಂಡಿನಂತೆ ರೂಪಿಸುತ್ತಾರೆ.

ಅವರು ಕೆಲವು ಮುದ್ದೆಗಳನ್ನು ತಯಾರಿಸಿದ ಕೂಡಲೇ ನಮಗೆ ಸ್ಟೀಲ್‌ ತಟ್ಟೆಗಳಲ್ಲಿ ಊಟ ಬಡಿಸಿ ನೀಡಲಾಯಿತು. “ಇಗೋ, ಹೀಗೆ ತಿನ್ನಿ” ಎಂದು ನನ್ನ ತಟ್ಟೆಯಲ್ಲಿದ್ದ ಮುದ್ದೆಯನ್ನು ಸಣ್ಣ ತುಣುಕುಗಳಾಗಿ ಮಾಡಿ ಹುರುಳಿ ಸಾರಿಗೆ ಅದ್ದುತ್ತಾ ನಾಗಣ್ಣ ತೋರಿಸಿಕೊಟ್ಟರು. ಪ್ರಭಾ ಸಣ್ಣ ತಟ್ಟೆಯೊಂದರಲ್ಲಿ ಹುರಿದ ಕಾಳುಗಳನ್ನು ತಂದುಕೊಟ್ಟರು. ಊಟ ಅದ್ಭುತವಾಗಿತ್ತು. ಗಂಟೆಗಳ ಕಾಲ ಇದು ಹಸಿವಾಗದಂತೆ ತಡೆಯುತ್ತದೆ.

ಸಮೀಪದ ಬರ್ಗೂರಿನಲ್ಲಿ, (ಕೃಷ್ಣಗಿರಿ ಜಿಲ್ಲೆ), ಲಿಂಗಾಯತ ಸಮುದಾಯಗಳು ರಾಗಿಯಲ್ಲಿ ರೊಟ್ಟಿ ತಯಾರಿಸುತ್ತಾರೆ. ಬಹಳ ಹಿಂದೆ ಅಲ್ಲಿಗೆ ಭೇಟಿ ನೀಡಿದಾಗ ರೈತ ಮಹಿಳೆ ಪಾರ್ವತಿ ಸಿದ್ಧಯ್ಯ ಅವರು ಅಂಗಳದ ಒಲೆಯಲ್ಲಿ ಅದನ್ನು ತಯಾರಿಸಿದ್ದರು. ಈ ದಪ್ಪ ಮತ್ತು ರುಚಿಯಾದ ಈ ರೊಟ್ಟಿಗಳು ಹಲವು ದಿನ ಬಾಳಿಕೆ ಬರುತ್ತವೆ. ಇದು ದನಗಳನ್ನು ಮೇಯಿಸಲು ಕಾಡಿಗೆ ಹೋದಾಗ ಕುರುಬರ ಕುಟುಂಬದ ಮುಖ್ಯ ಆಹಾರವಾಗಿತ್ತು.

ಚೆನ್ನೈ ಮೂಲದ ಆಹಾರ ಇತಿಹಾಸಕಾರ, ಕಥಾನಿರೂಪಕ ಮತ್ತು ಶೋ ನಿರೂಪಕ ರಾಕೇಶ್ ರಘುನಾಥನ್, ಪಾರಂಪರಿಕ ಕುಟುಂಬ ಪಾಕವಿಧಾನವನ್ನು ವಿವರಿಸುತ್ತಾರೆ: ರಾಗಿ ವೆಲ್ಲಾ ಅಡೈ. ಒಂದು ಸಿಹಿ ಪ್ಯಾನ್ ಕೇಕ್, ಈ ತಿಂಡಿಯು ರಾಗಿ ಪುಡಿ, ಬೆಲ್ಲ ಮತ್ತು ತೆಂಗಿನ ಹಾಲು ಮತ್ತು ಒಂದು ಚಿಟಿಕೆ ಏಲಕ್ಕಿ ಮತ್ತು ಒಣ ಶುಂಠಿ ಪುಡಿಯನ್ನು ಹೊಂದಿರುತ್ತದೆ. "ನನ್ನ ತಾಯಿಯ ಅಜ್ಜಿ ಅವರಿಗೆ ಈ ಅಡೈ ಮಾಡುವುದನ್ನು ಕಲಿಸಿದ್ದರು. ಇದನ್ನು ತಂಜಾವೂರು ಪ್ರದೇಶದಲ್ಲಿ ತಯಾರಿಸಲಾಗುತ್ತಿತ್ತು, ಮತ್ತು ಇದನ್ನು ಸಾಂಪ್ರದಾಯಿಕವಾಗಿ ಉಪವಾಸವನ್ನು ಮುರಿಯಲು, ಕಾರ್ತಿಗೈ ದೀಪಂ (ದೀಪಗಳ ಸಾಂಪ್ರದಾಯಿಕ ಹಬ್ಬ) ದಿನದಂದು ತಿನ್ನಲಾಗುತ್ತಿತ್ತು."ಒಂದಿಷ್ಟು ತುಪ್ಪ ಬೆರೆಸಿ ತಯಾರಿಸಲಾಗುವ ಈ ದಪ್ಪ ಪ್ಯಾನ್ ಕೇಕ್ ಗಳು ಪೋಷಕಾಂಶವುಳ್ಳವು ಮತ್ತು ಹಿತಕರವಾಗಿವೆ, ಇದು ಉಪವಾಸದ ನಂತರದ ಊಟಕ್ಕೆ ಹೇಳಿ ಮಾಡಿಸಿದಂತಿದೆ.

ಪುದುಕೊಟ್ಟೈ ಜಿಲ್ಲೆಯ ಚಿನ್ನ ವೀರಮಂಗಲಂ ಗ್ರಾಮದ, ಹಳ್ಳಿ ಅಡುಗೆಗೆ ಖ್ಯಾತವಾಗಿರುವ ವಿಲೇಜ್‌ ಕುಕಿಂಗ್‌ ಚಾನೆಲ್ಲಿನಲ್ಲಿ ರಾಗಿಮುದ್ದೆ ಮತ್ತು ಕರವಾಡು (ಒಣಗಿದ ಮೀನು) ಸಂಯೋಜನೆಯ ಆಹಾರವನ್ನು ಮಾಡಿ ತೋರಿಸಿದೆ. ಅವರ ಯೂಟ್ಯೂಬ್ ಚಾನೆಲ್‌ನ ಧ್ಯೇಯ ಸಾಂಪ್ರದಾಯಿಕ ಪಾಕವಿಧಾನಗಳನ್ನು ಪುನರುಜ್ಜೀವನಗೊಳಿಸುವುದಾಗಿ. "ನಾನು ಏಳೆಂಟು ವರ್ಷದವನಾಗುವವರೆಗೆ ಊಟದಲ್ಲಿ ಹೆಚ್ಚು ಹೆಚ್ಚು ರಾಗಿಯೇ ಇರುತ್ತಿತ್ತು. ನಂತರ ಅದು ಕಣ್ಮರೆಯಾಯಿತು, ಮತ್ತು ಅಕ್ಕಿ ನಿಧಾನವಾಗಿ ಕಾಣಿಸಿಕೊಂಡಿತು" ಎಂದು ಚಾನೆಲ್ಲಿನ ಸಹ-ಸಂಸ್ಥಾಪಕರಾದ 33 ವರ್ಷದ ಸುಬ್ರಮಣಿಯನ್ ಅವರು ದೂರವಾಣಿ ಸಂದರ್ಶನದಲ್ಲಿ ಹೇಳುತ್ತಾರೆ.

5 ಮಿಲಿಯನ್ ಚಂದಾದಾರರನ್ನು ಹೊಂದಿರುವ ಚಾನೆಲ್ಲಿನಲ್ಲಿ, ಸುಮಾರು 8 ಮಿಲಿಯನ್ ವೀಕ್ಷಣೆಗಳನ್ನು ಹೊಂದಿರುವ ಎರಡು ವರ್ಷಗಳ ಹಳೆಯ ವೀಡಿಯೊದಲ್ಲಿ ಬೀಸು ಕಲ್ಲಿನಿಂದ ರಾಗಿಯನ್ನು ಅರೆಯುವುದರಿಂದ ಹಿಡಿದು ತಾಳೆಯ ದೊನ್ನೆಯಲ್ಲಿಟ್ಟುಕೊಂಡು ತಿನ್ನುವವರೆಗೆ ಪ್ರತಿ ಹಂತವನ್ನೂ ತೋರಿಸಲಾಗಿದೆ.

PHOTO • Aparna Karthikeyan
PHOTO • Aparna Karthikeyan

ಎಡ: ಕಳೆದ ಐದು ದಶಕಗಳಲ್ಲಿ ರಾಗಿಯ ಬಳಕೆ ಕಡಿಮೆಯಾಗುತ್ತಿದೆ. ಬಲ: ನಾಗಣ್ಣನ ಅಂಗಳದಲ್ಲಿ ದನಕರುಗಳು ಎಳೆಯುತ್ತಿದ್ದ ಒಕ್ಕಣೆ ಕಲ್ಲು

ಅದರಲ್ಲಿನ ಅತ್ಯಂತ ಆಸಕ್ತಿದಾಯಕ ವಿಭಾಗವೆಂದರೆ ರಾಗಿ ಮುದ್ದೆಯನ್ನು ಬೇಯಿಸುವುದು. ಸುಬ್ರಮಣಿಯನ್ ಅವರ ಅಜ್ಜ, 75 ವರ್ಷದ ಪೆರಿಯತಂಬಿ, ಒಂದು ಹಿಡಿ ಅನ್ನ ಮತ್ತು ಬೀಸಿದ ರಾಗಿಹಿಟ್ಟಿನ ಮಿಶ್ರಣ ಮಾಡಿ, ಅದನ್ನು ಉಂಡೆಗಳನ್ನಾಗಿ ಮಾಡಿ, ಅವುಗಳನ್ನು ಅನ್ನದ ಗಂಜಿಯಲ್ಲಿ ಬಿಡುವುದನ್ನು ಮೇಲ್ವಿಚಾರಣೆ ಮಾಡುತ್ತಾರೆ. ಇದನ್ನು ಒಣಗಿದ ಮೀನುಗಳೊಂದಿಗೆ ತಿನ್ನಲಾಗುತ್ತದೆ, ಮೀನನ್ನು ಸೌದೆಯ ಬೆಂಕಿಯಲ್ಲಿ ಅದರ ಚರ್ಮವು ಸುಟ್ಟು ಚಪ್ಪಟೆಯಾಗುವವರೆಗೆ ಹದವಾಗಿ ಹುರಿಯಲಾಗುತ್ತದೆ. "ಪ್ರತಿದಿನದ ಊಟದಲ್ಲಿ ಕೇವಲ ಸಣ್ಣ ಈರುಳ್ಳಿ ಮತ್ತು ಹಸಿಮೆಣಸಿನಕಾಯಿಯಷ್ಟೇ ಇರುತ್ತದೆ" ಎಂದು ಅವರು ಹೇಳುತ್ತಾರೆ.

ಸುಬ್ರಮಣಿಯನ್ ಅವರು ಸ್ಥಳೀಯ ಅಕ್ಕಿ ಮತ್ತು ಸಿರಿಧಾನ್ಯಗಳ ಪೌಷ್ಟಿಕ ಮೌಲ್ಯದ ಬಗ್ಗೆ ಭಾವುಕರಾಗಿ ಮಾತನಾಡುತ್ತಾರೆ. ಅವರು ಮತ್ತು ಅವರ ಸಹೋದರರು ಮತ್ತು ಸೋದರಸಂಬಂಧಿಗಳು 2021ರ ವಿಧಾನಸಭಾ ಚುನಾವಣೆಗೆ ಮೊದಲು ತಮಿಳುನಾಡಿಗೆ ಭೇಟಿ ನೀಡಿದ್ದ ರಾಹುಲ್ ಗಾಂಧಿ ಅವರನ್ನು ಪ್ರಭಾವಿಸಿದರು. ಮತ್ತು ಅವರ ಚಾನೆಲ್‌ ಪ್ರತಿ ಬಾರಿಯೂ ಒಂದು ಹೊಸ ಅಡುಗೆಯೊಂದಿಗೆ ಮರೆಗೆ ಸರಿಯುತ್ತಿರುವ ಪಾಕವಿಧಾನಕ್ಕೆ ಮರುಜೀವ ನೀಡಿ ಜನರ ಮುಂದಿಡುತ್ತದೆ.

*****

ರಾಸಾಯನಿಕಗಳನ್ನು ಸಿಂಪಡಿಸುತ್ತಲೇ ಇರುವ ರೈತರು ತಮ್ಮ ಲಾಭವನ್ನು ಆಸ್ಪತ್ರೆಗಳಿಗೆ ದಾನ ಮಾಡುತ್ತಾರೆ.
ಆನಂದರಾಮು, ಕೃಷ್ಣಗಿರಿಯ ರಾಗಿ ಬೆಳೆಗಾರ

ನಾಗಣ್ಣನವರ ಊರಿನ ಸುತ್ತಲಿನ ಕೃಷಿ ಭೂಮಿಯಿಂದ ರಾಗಿ ಕಣ್ಮರೆಯಾಗಲು ಮೂರು ಮುಖ್ಯ ಕಾರಣಗಳಿವೆ: ಅರ್ಥಶಾಸ್ತ್ರ ಮತ್ತು ಆನೆಗಳು ಮತ್ತು ಇತ್ತೀಚಿಗೆ ಹೆಚ್ಚು ಪರಿಣಾಮ ಬೀರುತ್ತಿರುವ ಹವಾಮಾನ ಬದಲಾವಣೆ. ಮೊದಲನೆಯದು ತಮಿಳುನಾಡಿನ ಎಲ್ಲೆಡೆಗೂ ಅನ್ವಯಿಸುತ್ತದೆ. ಒಂದು ಎಕರೆ ರಾಗಿಗೆ ಒಳಸುರಿ ವೆಚ್ಚವು 16,000ರಿಂದ 18,000 ರೂಪಾಯಿಗಳ ನಡುವೆ ಬದಲಾಗುತ್ತದೆ. "ಮಳೆ ಅಥವಾ ಆನೆ ದಾಳಿಯಾಗಿದ್ದರೆ, ಕೊಯ್ಲಿನ ಸಮಯದಲ್ಲಿ ಎಲ್ಲರೂ ಕಾರ್ಮಿಕರ ಹುಡುಕಾಟದಲ್ಲಿರುತ್ತಾರೆ ಮತ್ತು ಇದು ಖರ್ಚಿಗೆ ಇನ್ನೂ 2,000 ರೂಪಾಯಿಗಳನ್ನು ಸೇರಿಸುತ್ತದೆ" ಎಂದು ಆನಂದ ವಿವರಿಸುತ್ತಾರೆ.

“ತಮಿಳುನಾಡಿನಲ್ಲಿ 80 ಕೇಜಿ ರಾಗಿ ಚೀಲವೊಂದಕ್ಕೆ 2,200 ರೂ. ಬೆಲೆಯಿದೆ. ಅಂದರೆ ಒಂದು ಕಿಲೋಗೆ 27.50 ರೂ. ನೀವು ಒಂದು ಎಕರೆಗೆ 15 ಮೂಟೆಗಳ ಇಳುವರಿ ಪೆರಯಬಹುದು. ಬೆಳೆ ಚೆನ್ನಾಗಿದ್ದಲ್ಲಿ 18. ಅದು ಕೂಡಾ ಉತ್ತಮ ಇಳುವರಿ ಕೊಡುವ ಬೀಜಗಳನ್ನು ಬಳಸಿದರೆ ಮಾತ್ರ. ಆದರೆ, ಆನಂದ ಹೇಳುವಂತೆ “ದನಗಳು ಹೈಬ್ರಿಡ್‌ ತಳಿಗಳ ಹುಲ್ಲನ್ನು ತಿನ್ನಲು ಇಷ್ಟಪಡುವುದಿಲ್ಲ. ಅವು ಸ್ಥಳೀಯ ತಳಿಗೇ ಹೆಚ್ಚು ಪ್ರಾಶಸ್ತ್ಯ ನೀಡುತ್ತವೆ.”

ಮತ್ತು ಬೆಳೆಯಲ್ಲಿ ಅದು ಪ್ರಮುಖ ಪಾತ್ರ ವಹಿಸುತ್ತದೆ. ಯಾಕೆಂದರೆ ಒಂದು ಲೋಡ್‌ ರಾಗಿ ಹುಲ್ಲಿಗೆ 15,000 ರೂಪಾಯಿಗಳಷ್ಟಿದೆ. ಒಂದು ಎಕರೆ ರಾಗಿ ಬೆಳೆದರೆ ಎರಡು ಲೋಡ್‌ ಹುಲ್ಲು ಸಿಗುತ್ತದೆ. ಜಾನುವಾರುಗಳನ್ನು ಹೊಂದಿರುವವರು ಇದನ್ನು ಮಾರುವುದಿಲ್ಲ. ಅದನ್ನು ಒಂದೆಡೆ ಸಂಗ್ರಹಿಸಿ ಇಟ್ಟು ವರ್ಷಪೂರ್ತಿ ಬಳಸುತ್ತಾರೆ. “ರಾಗಿಯನ್ನೂ ಮಾರುವುದಿಲ್ಲ,” ಎನ್ನುತ್ತಾರೆ ಆನಂದ. “ಮುಂದಿನ ವರ್ಷ ಒಳ್ಳೆಯ ಇಳುವರಿ ಬಂದರಷ್ಟೇ ಮಾರುತ್ತೇವೆ. ನಮ್ಮ ಮನೆಯಲ್ಲಿ ನಾವಷ್ಟೇ ಅಲ್ಲ. ನಮ್ಮ ಮನೆಯ ನಾಯಿ, ಕೋಳಿಗಳೂ ರಾಗಿಯನ್ನೇ ತಿನ್ನುವುದು. ಎಲ್ಲರಿಗೂ ಸಾಲುವಷ್ಟು ರಾಗಿ ಇಟ್ಟುಕೊಂಡಿರಬೇಕಾಗುತ್ತದೆ,”

PHOTO • M. Palani Kumar
PHOTO • M. Palani Kumar

ಎಡ: ಆನಂದ ಅವರ ಮನೆಯ ಕುರಿ ಮತ್ತು ಮೇಕೆಗಳೊಂದಿಗೆ; ಪ್ರಾಣಿಗಳು ರಾಗಿ ಹುಲ್ಲನ್ನು ತಿನ್ನುತ್ತವೆ. ಬಲ: ನಾಗಣ್ಣನ ಪೂರ್ವಜರ ಮನೆಯಲ್ಲಿ ಪ್ಲಾಸ್ಟಿಕ್ ಚೀಲಗಳಲ್ಲಿ ಸಂಗ್ರಹಿಸಿದ ಧಾನ್ಯ ಗಳು

ಆನಂದರಾಮು ಹಳೆಯ ಸತ್ಯವನ್ನು ಮತ್ತೊಮ್ಮೆ ದೃಢೀಕರಿಸುತ್ತಿದ್ದಾರೆ: ರಾಗಿ ಈ ಭೂಮಿಯಲ್ಲಿ ಮುಖ್ಯವಾದುದು ಮತ್ತು ಅದು ಪ್ರಾಚೀನವಾದುದಷ್ಟೇ ಅಲ್ಲ, ಗಟ್ಟಿ ಬೆಳೆ ಮತ್ತು "ಅಪಾಯ ಮುಕ್ತ" ಕೂಡಾ ಎಂದು ಆನಂದ ಹೇಳುತ್ತಾರೆ. "ಇದು ಎರಡು ವಾರಗಳವರೆಗೆ ಮಳೆ ಅಥವಾ ನೀರಿಲ್ಲದೆ ಬದುಕಬಲ್ಲದು. ಹೆಚ್ಚಿನ ಕೀಟಗಳ ಕಾಟವಿಲ್ಲ, ಆದ್ದರಿಂದ ನಾವು ಟೊಮ್ಯಾಟೊ ಅಥವಾ ಬೀನ್ಸ್‌ಗೆ ಮಾಡುವಂತೆ ರಾಸಾಯನಿಕಗಳನ್ನು ಸಿಂಪಡಿಸಬೇಕಾಗಿಲ್ಲ. ರಾಸಾಯನಿಕಗಳನ್ನು ಸಿಂಪಡಿಸುವ ರೈತರು ತಮ್ಮ ಲಾಭವನ್ನು ಆಸ್ಪತ್ರೆಗೆ ನೀಡುತ್ತಾರೆ.

ತಮಿಳುನಾಡು ಸರ್ಕಾರದ ಇತ್ತೀಚಿನ ಉಪಕ್ರಮವು ಜೀವನವನ್ನು ಸ್ವಲ್ಪ ಸುಲಭಗೊಳಿಸಬಹುದು. ರಾಜ್ಯವು ಚೆನ್ನೈ ಮತ್ತು ಕೊಯಮತ್ತೂರಿನ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮಳಿಗೆಗಳಲ್ಲಿ ಸಿರಿಧಾನ್ಯಗಳನ್ನು ವಿತರಿಸಲು ಪ್ರಾರಂಭಿಸಿದೆ. ಇದಲ್ಲದೆ, ಸಚಿವ ಎಂ.ಆರ್.ಕೆ. ಪನ್ನೀರ್ ಸೆಲ್ವಂ ಮಂಡಿಸಿದ 2022 ರ ಕೃಷಿ ಬಜೆಟ್ ಭಾಷಣದಲ್ಲಿ ಸಿರಿಧಾನ್ಯಗಳನ್ನು 16 ಬಾರಿ ಉಲ್ಲೇಖಿಸಲಾಗಿದೆ (ಅಕ್ಕಿ ಮತ್ತು ಭತ್ತ, ಒಟ್ಟಿಗೆ, 33 ಉಲ್ಲೇಖಗಳು). ಸಿರಿಧಾನ್ಯಗಳನ್ನು ಜನಪ್ರಿಯಗೊಳಿಸುವ ಪ್ರಸ್ತಾಪಗಳಲ್ಲಿ, "ಸಿರಿಧಾನ್ಯಗಳ ಪೋಷಣೆಯ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸಲು" ಎರಡು ವಿಶೇಷ ವಲಯಗಳನ್ನು ಸ್ಥಾಪಿಸುವುದು ಮತ್ತು ರಾಜ್ಯ ಮತ್ತು ಜಿಲ್ಲಾ ಮಟ್ಟದ ಉತ್ಸವಕ್ಕೆ 92 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ.

ಅಲ್ಲದೆ, FAO 2023 ಅನ್ನು ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷವೆಂದು ಘೋಷಿಸಿರುವುದು - ಭಾರತವು ಪ್ರಸ್ತಾಪಿಸಿದ ಒಂದು ಕಲ್ಪನೆ - ರಾಗಿ ಸೇರಿದಂತೆ ʼಪೌಷ್ಟಿಕ ಏಕದಳ ಧಾನ್ಯಗಳು' ಸಹ ಗಮನ ಸೆಳೆಯಬಹುದು.

ಆದರೆ ನಾಗಣ್ಣನ ಕುಟುಂಬಕ್ಕೆ ಈ ವರ್ಷ ಒಂದು ಸವಾಲಾಗಿ ಪರಿಣಮಿಸಲಿದೆ. ಅವರು ರಾಗಿಗೆಂದು ನಿಗದಿಪಡಿಸಿದ ಅರ್ಧ ಎಕರೆಯಿಂದ ಕೇವಲ ಮೂರು ಮೂಟೆಗಳನ್ನು ಕೊಯ್ಲು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಉಳಿದವರು ಮಳೆ ಮತ್ತು ಕಾಡು ಜೀವಿಗಳಿಂದ ಭಯಭೀತರಾಗಿದ್ದರು. "ರಾಗಿ ಋತುವಿನಲ್ಲಿ ಪ್ರತಿ ರಾತ್ರಿ, ನಾವು ಮಚ್ಚನ್ (ಮರದಲ್ಲಿ ನಿರ್ಮಿಸಲಾದ ವೇದಿಕೆ) ಗೆ ಹೋಗಿ ಮಲಗಿ ಕಾವಲು ಕಾಯಬೇಕು" ಎಂದು ಆನಂದ ಹೇಳುತ್ತಾರೆ.

ಅವನ ಇತರ ಒಡಹುಟ್ಟಿದವರು - ಮೂವರು ಸಹೋದರರು ಮತ್ತು ಒಬ್ಬ ಸಹೋದರಿ – ಕೃಷಿಯನ್ನು ಉದ್ಯೋಗವಾಗಿ ಆರಿಸಿಕೊಂಡಿಲ್ಲ, ಹತ್ತಿರದ ಪಟ್ಟಣವಾದ ಥಲ್ಲಿಯಲ್ಲಿ ದಿನಗೂಲಿ ಉದ್ಯೋಗಗಳನ್ನು ಆರಿಸಿಕೊಂಡಿದ್ದಾರೆ. ಆನಂದ ಕೃಷಿಯ ಬಗ್ಗೆ ಉತ್ಸುಕನಾಗಿದ್ದಾರೆ. "ನಾನು ಶಾಲೆಗೆ ಎಲ್ಲಿ ಹೋಗಿದ್ದೆ? ಮಾವಿನ ಮರಗಳನ್ನು ಏರಿ ಕುಳಿತಿರುತ್ತಿದ್ದೆ ಮತ್ತು ಅಲ್ಲಿ ಕುಳಿತು ಶಾಲೆ ಬಿಟ್ಟ ನಂತರ ಇತರ ಮಕ್ಕಳೊಂದಿಗೆ ಮನೆಗೆ ಹಿಂತಿರುಗುತ್ತಿದ್ದೆ. ಇದನ್ನೇ ನಾನು ಮಾಡಲು ಬಯಸಿದ್ದೆ" ಎಂದು ಅವರು ತಮ್ಮ ಹೊಲಗಳಲ್ಲಿ ನಡೆದುಕೊಂಡು, ತಮ್ಮ ಹುರುಳಿ ಬೆಳೆಯನ್ನು ಪರೀಕ್ಷಿಸುತ್ತಾ ಹೇಳುತ್ತಾರೆ.

PHOTO • M. Palani Kumar
PHOTO • Aparna Karthikeyan

ಎಡ: ಆನಂದ ತನ್ನ ಜಮೀನಿನಲ್ಲಿದ್ದ ಹುರುಳಿ ಬೆಳೆಯನ್ನು ಪರಿಶೀಲಿಸುತ್ತಿರುವುದು. ಬಲ: ರಾಗಿ ಋತುವಿನಲ್ಲಿ ಆನೆಗಳನ್ನು ಗುರುತಿಸಲು ನಾಗಣ್ಣನ ಹೊಲದಲ್ಲಿರುವ ಮರದಲ್ಲಿ ಮಚ್ಚನ್

ನಮಗೆ ಮಳೆ ಹಾನಿಯನ್ನು ತೋರಿಸುತ್ತಾ, "ನನ್ನ 86 ವರ್ಷಗಳ ಅನುಭವದಲ್ಲಿ ನಾನು ಇಂತಹ ಮಳೆಯನ್ನು ಎಂದೂ ನೋಡಿಲ್ಲ" ಎಂದು ದುಃಖಿತ ನಾಗಣ್ಣ ಹೇಳುತ್ತಾರೆ. ಅವರ ಪ್ರಕಾರ - ಮತ್ತು ಅವರ ವಿಶ್ವಾಸಾರ್ಹ ಪಂಚಾಂಗ, ಜ್ಯೋತಿಷ್ಯ ಕ್ಯಾಲೆಂಡರ್ ಪ್ರಕಾರ- ಈ ವರ್ಷದ ಮಳೆ 'ವಿಶಾಖ', ಪ್ರತಿ ಮಳೆಗೂ ನಕ್ಷತ್ರಗಳ ಹೆಸರನ್ನು ಇಡಲಾಗಿದೆ. "ಒರು ಮಾಸಮ್, ಮಳಯ್, ಮಳಯ್, ಮಳಯ್, ಮಳಯ್." ಇಡೀ ತಿಂಗಳು, ಕೇವಲ ಮಳೆ, ಮಳೆ, ಮಳೆ. "ಇಂದು ಮಾತ್ರ ಸೂರ್ಯನಿದ್ದಾನೆ." ಪತ್ರಿಕೆಯ ವರದಿಗಳು ಅವರ ಹೇಳಿಕೆಯನ್ನು ಪುಷ್ಟೀಕರಿಸುತ್ತವೆ. 2021ರಲ್ಲಿ ತಮಿಳುನಾಡಿನಲ್ಲಿ ಶೇಕಡಾ 57ರಷ್ಟು ಹೆಚ್ಚುವರಿ ಮಳೆಯಾಗಿದೆ ಎಂದು ಹೇಳುತ್ತವೆ .

ಗೋಪ ಮೆನನ್‌ ಅವರ ಜಮೀನಿನಲ್ಲಿ, ಶಾಲು, ಟೋಪಿ ಧರಿಸಿ ಮತ್ತು ಛತ್ರಿಗಳನ್ನು ಹಿಡಿದಿದ್ದ ಇಬ್ಬರು ಹಿರಿಯ ರೈತರನ್ನು ಭೇಟಿಯಾದೆವು. ಪರಿಶುದ್ಧ ಕನ್ನಡದಲ್ಲಿ, ಅವರು ರಾಗಿ ಬೇಸಾಯವು ಎಷ್ಟು ಕಡಿಮೆಯಾಗಿದೆ ಎಂಬುದನ್ನು ವಿವರಿಸುತ್ತಿದ್ದರೆ. ಗೋಪ ನನಗಾಗಿ ಮಾತುಗಳನ್ನು ಅನುವಾದಿಸುತ್ತಿದ್ದರು.

74 ವರ್ಷದ ಕೆ. ರಾಮ್ ರೆಡ್ಡಿ ಅವರು ಕೆಲವು ದಶಕಗಳ ಹಿಂದಿನ ಸಮಯ್ಕಕೆ ಹೋಲಿಸಿದರೆ ಇಂದು "ಅರ್ಧದಷ್ಟು ಹೊಲಗಳಲ್ಲಿ" ಮಾತ್ರವೇ ರಾಗಿಯನ್ನು ಬೆಳೆಯಲಾಗುತ್ತದೆ ಎಂದು ಖಚಿತವಾಗಿ ಹೇಳುತ್ತಾರೆ. "ಪ್ರತಿ ಕುಟುಂಬಕ್ಕೆ ಎರಡು ಎಕರೆ. ಈಗ ನಾವು ಬೆಳೆಯುತ್ತಿರುವುದು ಇಷ್ಟೇ." ಉಳಿದ ಭೂಮಿ ಟೊಮೇಟೊ ಮತ್ತು ಬೀನ್ಸ್‌ನಿಂದ ತುಂಬಿರುತ್ತವೆ. ಮತ್ತು ಈಗ ಬೆಳೆಯುವ ರಾಗಿ ಕೂಡ "ಹೈಬ್ರಿಡ್, ಹೈಬ್ರಿಡ್, ಹೈಬ್ರಿಡ್" ಮಾತ್ರ ಎಂದು 63 ವರ್ಷದ ಕೃಷ್ಣಾ ರೆಡ್ಡಿ ಒತ್ತಿ ಹೇಳುತ್ತಾರೆ.

"ನಾಟಿ ರಾಗಿ ಶಕ್ತಿ ಜಾಸ್ತಿ" ಎಂದು ರಾಮ್ ರೆಡ್ಡಿ ತನ್ನ ಶಕ್ತಿಯನ್ನು ತೋರಿಸಲು ತನ್ನ ತೋಳನ್ನು ಬಗ್ಗಿಸುತ್ತಾ ಹೇಳುತ್ತಾರೆ. ಅವರು ತನ್ನ ಉತ್ತಮ ಆರೋಗ್ಯಕ್ಕೆ ಯುವಕನಾಗಿದ್ದಾಗ ತಿಂದ ಸ್ಥಳೀಯ ರಾಗಿಯೇ ಕಾರಣ ಎನ್ನುತ್ತಾರೆ.

ಆದರೆ ಈ ವರ್ಷದ ಮಳೆಯ ಬಗ್ಗೆ ಅವರು ಅಸಮಾಧಾನಗೊಂಡಿದ್ದಾರೆ. " ಭಯಾನಕವಾಗಿದೆ" ಎಂದು ರೆಡ್ಡಿ ಗೊಣಗುತ್ತಾರೆ.

ಯಾವುದೇ ಪರಿಹಾರ ಸಿಗುವ ಕುರಿತು ಅವರಿಗೆ ಖಚಿತತೆ ಇಲ್ಲ. "ನಷ್ಟಕ್ಕೆ ಕಾರಣ ಏನೇ ಇರಲಿ, ಲಂಚವಿಲ್ಲದೆ ನಮಗೆ ಏನೂ ಸಿಗುವುದಿಲ್ಲ. ಜೊತೆಗೆ, ಪಟ್ಟಾ [ಶೀರ್ಷಿಕೆ ಪತ್ರ] ನಮ್ಮ ಹೆಸರಿನಲ್ಲಿರಬೇಕು." ಇದು ಗೇಣಿದಾರ ರೈತರು ಯಾವುದೇ ಪರಿಹಾರವನ್ನು ಪಡೆಯುವುದನ್ನು ತಡೆಯುತ್ತದೆ.

PHOTO • Aparna Karthikeyan
PHOTO • Aparna Karthikeyan

ಎಡಕ್ಕೆ: ಗೊಲ್ಲಪಲ್ಲಿಯಲ್ಲಿ ರೈತರಾದ ಕೃಷ್ಣಾ ರೆಡ್ಡಿ ಮತ್ತು ರಾಮ್ ರೆಡ್ಡಿ (ಕೆಂಪು ಟೋಪಿಯಲ್ಲಿ). ಬಲಕ್ಕೆ: ಆನೆಗಳಿಂದ ಹಾನಿಗೊಳಗಾದ ಬೆಳೆಗಳ ಛಾಯಾಚಿತ್ರಗಳೊಂದಿಗೆ ಆನಂದ

ಅದು ಎಂದಿಗೂ ಸುಲಭದ ಕೆಲಸವಲ್ಲವೆಂದು ಆನಂದ ವಿಷಾದಿಂದ ವಿವರಿಸುತ್ತಾರೆ. ಅವರ ತಂದೆಗೆ ಅವರ ಚಿಕ್ಕಪ್ಪನಿಂದ ಆದ ಮೋಸವನ್ನು ನಮ್ಮೆದುರು ನಟಿಸಿ ತೋರಿಸಿದರು. ನಾಲ್ಕು ಹೆಜ್ಜೆ ಹಿಂದಕ್ಕೆ ಮತ್ತು ನಾಲ್ಕು ಹೆಜ್ಜೆ ಮುಂದಕ್ಕೆ ಚಲಿಸಿ ತೋರಿಸುತ್ತಾ “ಈ ರೀತಿಯಾಗಿ ಈ ಭಾಗ ನನ್ನದು, ಈ ಭಾಗ ನಿನ್ನದು ಎಂದು ಜಾಗ ಪಾಲು ಮಾಡಿಕೊಟ್ಟರು. ನಮ್ಮಪ್ಪ ಶಾಲೆಗೆ ಹೋದವರಲ್ಲ. ಸುಮ್ಮನೆ ಒಪ್ಪಿಕೊಂಡರು. ಈಗ ನಮ್ಮ ಬಳಿ ಕೇವಲ ನಾಲ್ಕು ಎಕರೆಗಷ್ಟೇ ರಿಜಿಸ್ಟ್ರೇಷನ್‌ ಪೇಪರ್‌ ಇದೆ.“ ವಾಸ್ತವದಲ್ಲಿ ಅವರು ಅದಕ್ಕಿಂತಲೂ ಹೆಚ್ಚಿನ ಭೂಮಿಯಲ್ಲಿ ವ್ಯವಸಾಯ ಮಾಡುತ್ತಾರೆ. ಆದರೆ ಏನಾದರೂ ಹಾನಿ ಸಂಭವಿಸಿದರೆ ಆ ಅಧಿಕೃತ ಮಾಲಿಕತ್ವವಿರುವ ನಾಲ್ಕು ಎಕರೆ ಜಮೀನಿಗೆ ಮಾತ್ರ ಪರಿಹಾರಕ್ಕೆಂದು ಅರ್ಜಿ ಸಲ್ಲಿಸಲು ಸಾಧ್ಯ.

ಅವರ ಮನೆಯ ವರಾಂಡಕ್ಕೆ ಹಿಂತಿರುಗಿ, ನಮಗೆ ಫೋಟೋಗಳು ಮತ್ತು ದಾಖಲೆಗಳನ್ನು ತೋರಿಸಿದರು. ಫೋಟೊಗಳಲ್ಲಿ ಇಲ್ಲಿ ಆನೆ ದಾಳಿ, ಅಲ್ಲಿ ಹಂದಿ ದಾಳಿ. ಬಿದ್ದ ಮರ. ತುಳಿತಕ್ಕೊಳಗಾದ ಬೆಳೆಗಳು. ಇನ್ನೊಂದರಲ್ಲಿ ಅವರ ತಂದೆ ಆನೆ ನೆಲಕ್ಕುರುಳಿಸಿದ ಹಲಸಿನ ಮರದ ಮುಂದೆ ನಿಂತಿದ್ದರು.

“ಕೃಷಿಯಲ್ಲಿ ಹಣ ಗಳಿಸುವುದು ಹೇಗೆ? ಒಂದು ಒಳ್ಳೆಯ ಗಾಡಿ ಖರೀದಿಸಲು ಸಾಧ್ಯವೆ? ಉತ್ತಮ ಬಟ್ಟೆ? ಆದಾಯವು ತುಂಬಾ ಕಳಪೆಯಾಗಿದೆ, ಮತ್ತು ಇದನ್ನು ನಾನು ಭೂಮಿ ಹೊಂದಿರುವವನಾಗಿ ಹೇಳುತ್ತೇನೆ,” ಎಂದು ನಾಗಣ್ಣ ವಾದಿಸುತ್ತಾರೆ. ಅವರು ಹೊಸ ಬಟ್ಟೆ ಹಾಕಿಕೊಂಡು ತಯಾರಾಗಿದ್ದರು: ಬಿಳಿ ಅಂಗಿ, ಹೊಸ ಧೋತಿ, ಕ್ಯಾಪ್, ಮಾಸ್ಕ್ ಮತ್ತು ಕರ್ಚೀಫ್. "ನನ್ನೊಂದಿಗೆ ದೇವಸ್ಥಾನಕ್ಕೆ ಬನ್ನಿ" ಎಂದು ಅವರು ನಮ್ಮನ್ನು ಕರೆದರು. ನಾವು ಸಂತೋಷದಿಂದ ಅವರನ್ನು ಹಿಂಬಾಲಿಸಿದೆವು. ಜಾತ್ರೆ ನಡೆಯುತ್ತಿದ್ದ ಸ್ಥಳವು ಡೆಂಕಣಿಕೋಟೆಯ ಸ್ಟಾರ್‌ (ಉತ್ತಮ ದರ್ಜೆಯ) ರಸ್ತೆಯಲ್ಲಿ ಅರ್ಧ ಗಂಟೆ ಪ್ರಯಾಣದ ದೂರದಲ್ಲಿತ್ತು.

ನಾಗಣ್ಣ ನಮಗೆ ಚುರುಕಾಗಿ ನಿರ್ದೇಶನಗಳನ್ನು ನೀಡುತ್ತಾ ಊರು ಹೇಗೆ ಬದಲಾಗುತ್ತಿದೆ ಎನ್ನುವುದರ ಕುರಿತಾಗಿಯೂ ಮಾತನಾಡುತ್ತಿದ್ದರು. ಗುಲಾಬಿ ಬೆಳೆಗಾರರು ದೊಡ್ಡ ಸಾಲಗಳನ್ನು ಮಾಡಿಕೊಂಡಿದ್ದಾರೆಂದು ಅವರು ಹೇಳುತ್ತಾರೆ. ಗುಲಾಬಿ ಹೂವಿಗೆ ಕಿಲೋ ಒಂದಕ್ಕೆ 50ರಿಂದ 150 ರೂಪಾಯಿಗಳ ತನಕ ಸಿಗುತ್ತದೆ. ಹಬ್ಬಗಳ ಸೀಸನ್ನಿನಲ್ಲಿ ಬೆಲೆ ಹೆಚ್ಚಿರುತ್ತದೆ. ಗುಲಾಬಿಯ ಕುರಿತಾದ ಅತ್ಯಂತ ಆಕರ್ಷಕ ವಿಷಯವೆಂದರೆ ಅದರ ಬಣ್ಣವಾಗಲಿ, ಪರಿಮಳವಾಗಲೀ ಅಲ್ಲ. ಅದನ್ನು ಆನೆಗಳು ತಿನ್ನಲು ಇಷ್ಟಪಡುವುದಿಲ್ಲ.

PHOTO • M. Palani Kumar
PHOTO • M. Palani Kumar

ಎಡ: ನಾಗಣ್ಣ ಡೆಂಕಣಿಕೋಟೆಯಲ್ಲಿರುವ ದೇವಾಲಯದ ಉತ್ಸವಕ್ಕೆ ಹೊರಟರು. ಬಲ: ಉತ್ಸವದ ಮೆರವಣಿಗೆಯನ್ನು ಮುನ್ನಡೆಸುತ್ತಿದ್ದ ಆನೆಯನ್ನು ಮತ್ತೊಂದು ದೇವಾಲಯದಿಂದ ತರಲಾಗಿತ್ತು

ದೇವಸ್ಥಾನಕ್ಕೆ ಹತ್ತಿರವಾದಂತೆ ಬೀದಿಗಳಲ್ಲಿ ಜನಸಂದಣಿ ಹೆಚ್ಚಿತ್ತು. ಅಲ್ಲಿ ದೀರ್ಘ ಮೆರವಣಿಗೆ ಮತ್ತು - ಆಶ್ಚರ್ಯಕರವಾಗಿ - ಆನೆಯೂ ಇತ್ತು. "ನಾವು ಆನೈಯನ್ನು ಭೇಟಿ ಮಾಡುತ್ತೇವೆ" ಎಂದು ನಾಗಣ್ಣ ಭವಿಷ್ಯ ನುಡಿದರು. ದೇವಾಲಯದ ಅಡುಗೆಮನೆಯಲ್ಲಿ ಉಪಹಾರ ಸೇವಿಸಲು ಅವರು ನಮ್ಮನ್ನು ಆಹ್ವಾನಿಸಿದರು. ಕಿಚ್ಡಿ ಮತ್ತು ಬಜ್ಜಿ ಸ್ವರ್ಗಸದೃಶವಾಗಿತ್ತು. ಶೀಘ್ರದಲ್ಲೇ, ಆನೆ - ತಮಿಳುನಾಡಿನ ಇನ್ನೊಂದು ಭಾಗದ ದೇವಸ್ಥಾನದಿಂದ - ಮಾವುತ ಮತ್ತು ಪೂಜಾರಿಯೊಂದಿಗೆ ಆಗಮಿಸುತ್ತದೆ. “ಪಳುತ ಆನೈ,” ಎನ್ನುತ್ತಾರೆ ನಾಗಣ್ಣ. ಅದರರ್ಥ ಹಳೆಯ ಆನೆ. ಆ ಆನೆ ಬಹಳ ನಿಧಾನವಾಗಿ ಹೆಜ್ಜೆ ಮೇಲೆ ಹೆಜ್ಜೆಯಿಟ್ಟು ನಡೆಯುತ್ತಿತ್ತು. ಜನರು ತಮ್ಮ ಮೊಬೈಲ್ ಫೋನ್‌ಗಳನ್ನು ಎತ್ತಿಕೊಂಡು ನೂರಾರು ಚಿತ್ರಗಳನ್ನು ತೆಗೆದುಕೊಳ್ಳುತ್ತಿದ್ದರು. ಇದು ಕಾಡಿನಿಂದ ಕೇವಲ 30 ನಿಮಿಷಗಳ ದಾರಿ, ಇಲ್ಲಿ ಆನೆಯ ಕಥೆ ತುಂಬಾ ಭಿನ್ನವಾಗಿದೆ.

ನನಗೆ ತನ್ನ ಮನೆಯ ಜಗುಲಿಯ ಮೇಲೆ ಕುಳಿತಿದ್ದ ಆನಂದ್ ಹೇಳಿದ ಮಾತುಗಳು ನೆನಪಾಗುತ್ತಿದ್ದವು. “ಒಂದು ಅಥವಾ ಎರಡು ಆನೆ ಬಂದರೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ನಡು ಪ್ರಾಯದ ಗಂಡು ಆನೆಗಳಿಗೆ ಯಾವುದೂ ತಡೆಯಲ್ಲ. ಅವು ಎಷ್ಟು ದೊಡ್ಡ ಬೇಲಿಯಿದ್ದರೂ ಅದನ್ನು ಹಾರಿ ಬೆಳೆ ತಿನ್ನುತ್ತವೆ.”

ಆನಂದ ಅವುಗಳ ಹಸಿವನ್ನು ಅರ್ಥ ಮಾಡಿಕೊಳ್ಳುತ್ತಾರೆ. “ಅರ್ಧ ಕಿಲೋ ಆಹಾರಕ್ಕಾಗಿ ನಾವು ಪರದಾಡುತ್ತೇವೆ. ಪಾಪ ಆ ಆನೆಗಳು ಏನು ಮಾಡಬೇಕು? ಅವುಗಳಿಗೆ ದಿನಕ್ಕೆ 250 ಕಿಲೋ ಆಹಾರ ಬೇಕು. ನಾವು ಒಂದು ಹಲಸಿನ ಮರದಿಂದ ವರ್ಷಕ್ಕೆ 3,000 ರೂಪಾಯಿಗಳನ್ನು ಸಂಪಾದಿಸುತ್ತೇವೆ. ಅದನ್ನ ಆನೆಗಳು ತಿಂದು ಹೋದ ವರ್ಷ ದೇವರು ಬಂದು ತಿಂದು ಹೋದ ಎಂದುಕೊಳ್ಳುತ್ತೇವೆ," ಎಂದು ಆನಂದ ನಗುತ್ತಾರೆ.

ಆದರೂ, ಅವರಿಗೊಂದು ಆಸೆಯಿದೆ: ಅದು 30 ಅಥವಾ 40 ಚೀಲ ರಾಗಿ ಬೆಳೆಯುವುದು. “ಸೇಯಣು, ಮೇಡಮ್.”‌ ನಾನು ಮಾಡಬೇಕು.”

ಮೊಟ್ಟೈ ವಾಲ್‌ ಒಪ್ಪಿಕೊಂಡರೆ….

ಈ ಸಂಶೋಧನಾ ಅಧ್ಯಯನಕ್ಕೆ ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯವು ತನ್ನ ಸಂಶೋಧನಾ ಧನಸಹಾಯ ಕಾರ್ಯಕ್ರಮ 2020ರ ಭಾಗವಾಗಿ ಧನಸಹಾಯ ನೀಡುತ್ತದೆ.

ಮುಖ್ಯ ವಿತ್ರ: ಎಮ್‌. ಪಳನಿ ಕುಮಾರ್‌

ಅನುವಾದ: ಶಂಕರ. ಎನ್. ಕೆಂಚನೂರು

Aparna Karthikeyan

ଅପର୍ଣ୍ଣା କାର୍ତ୍ତିକେୟନ ହେଉଛନ୍ତି ଜଣେ ସ୍ୱାଧୀନ ସାମ୍ବାଦିକା, ଲେଖିକା ଓ ପରୀର ବରିଷ୍ଠ ଫେଲୋ । ତାଙ୍କର ତଥ୍ୟ ଭିତ୍ତିକ ପୁସ୍ତକ ‘ନାଇନ୍‌ ରୁପିଜ୍‌ ଏ ଆୱାର୍‌’ରେ ସେ କ୍ରମଶଃ ଲୋପ ପାଇଯାଉଥିବା ଜୀବିକା ବିଷୟରେ ବର୍ଣ୍ଣନା କରିଛନ୍ତି । ସେ ପିଲାମାନଙ୍କ ପାଇଁ ପାଞ୍ଚଟି ପୁସ୍ତକ ରଚନା କରିଛନ୍ତି । ଅପର୍ଣ୍ଣା ତାଙ୍କର ପରିବାର ଓ କୁକୁରମାନଙ୍କ ସହିତ ଚେନ୍ନାଇରେ ବାସ କରନ୍ତି ।

ଏହାଙ୍କ ଲିଖିତ ଅନ୍ୟ ବିଷୟଗୁଡିକ ଅପର୍ଣ୍ଣା କାର୍ତ୍ତିକେୟନ୍
Photographs : M. Palani Kumar

ଏମ୍‌. ପାଲାନି କୁମାର ‘ପିପୁଲ୍‌ସ ଆର୍କାଇଭ୍‌ ଅଫ୍‌ ରୁରାଲ ଇଣ୍ଡିଆ’ର ଷ୍ଟାଫ୍‌ ଫଟୋଗ୍ରାଫର । ସେ ଅବହେଳିତ ଓ ଦରିଦ୍ର କର୍ମଜୀବୀ ମହିଳାଙ୍କ ଜୀବନୀକୁ ନେଇ ଆଲେଖ୍ୟ ପ୍ରସ୍ତୁତ କରିବାରେ ରୁଚି ରଖନ୍ତି। ପାଲାନି ୨୦୨୧ରେ ଆମ୍ପ୍ଲିଫାଇ ଗ୍ରାଣ୍ଟ ଏବଂ ୨୦୨୦ରେ ସମ୍ୟକ ଦୃଷ୍ଟି ଓ ଫଟୋ ସାଉଥ ଏସିଆ ଗ୍ରାଣ୍ଟ ପ୍ରାପ୍ତ କରିଥିଲେ। ସେ ପ୍ରଥମ ଦୟାନିତା ସିଂ - ପରୀ ଡକ୍ୟୁମେଣ୍ଟାରୀ ଫଟୋଗ୍ରାଫୀ ପୁରସ୍କାର ୨୦୨୨ ପାଇଥିଲେ। ପାଲାନୀ ହେଉଛନ୍ତି ‘କାକୁସ୍‌’(ଶୌଚାଳୟ), ତାମିଲ୍ ଭାଷାର ଏକ ପ୍ରାମାଣିକ ଚଳଚ୍ଚିତ୍ରର ସିନେମାଟୋଗ୍ରାଫର, ଯାହାକି ତାମିଲ୍‌ନାଡ଼ୁରେ ହାତରେ ମଇଳା ସଫା କରାଯିବାର ପ୍ରଥାକୁ ଲୋକଲୋଚନକୁ ଆଣିଥିଲା।

ଏହାଙ୍କ ଲିଖିତ ଅନ୍ୟ ବିଷୟଗୁଡିକ M. Palani Kumar
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

ଏହାଙ୍କ ଲିଖିତ ଅନ୍ୟ ବିଷୟଗୁଡିକ Shankar N. Kenchanuru