ಯಲ್ಲಪ್ಪ ಸಿಟ್ಟು ಮತ್ತು ಗೊಂದಲದಲ್ಲಿದ್ದರು.
"ನಮ್ಮದು ಕರಾವಳಿಯಲ್ಲ, ಮೀನುಗಾರ ಸಮುದಾಯವಲ್ಲ. ನಮ್ಮನ್ನು ಏಕೆ ಸೆಂಬಾನಂದ ಮರವರರು ಅಥವಾ ಗೋಸಂಗಿ ಎಂದು ಗುರುತಿಸಲಾಗುತ್ತಿದೆ?
"ನಾವು ಶೋಲಗಾಗಳು" ಎಂದು 82 ವರ್ಷದ ಅವರು ನಿರ್ಣಾಯಕವಾಗಿ ಹೇಳುತ್ತಾರೆ. "[ಸರ್ಕಾರ] ನಮಗೆ ಪುರಾವೆಗಳನ್ನು ಕೇಳುತ್ತದೆ. ನಾವು ಇಲ್ಲಿದ್ದೇವೆ ಮತ್ತು ವಾಸಿಸುತ್ತಿದ್ದೇವೆ. ಆ ಪುರಾವೆ ಸಾಕಾಗುವುದಿಲ್ಲವೇ? ಆಧಾರ್ ಅಂತೆ ಆಧಾರ್. ಎಲ್ಲಿಂದ ತರ್ಲಿ ಆಧಾರ್? [ಪುರಾವೆ! ಪುರಾವೆ! [ಅವರಿಗೆ ಅದೇ ಬೇಕು].
ತಮಿಳುನಾಡಿನ ಮಧುರೈ ಜಿಲ್ಲೆಯ ಸಕ್ಕಿಮಂಗಲಂ ಗ್ರಾಮದ ನಿವಾಸಿಗಳಾದ ಯಲ್ಲಪ್ಪನ್ ಅವರ ಸಮುದಾಯವು ಚಾಟಿ ಬೀಸುವುದನ್ನು ಪ್ರದರ್ಶಿಸುತ್ತದೆ ಮತ್ತು ಸ್ಥಳೀಯವಾಗಿ ಅವರನ್ನು ಚಾಟೈ ಸಮುದಾಯ ಎಂದು ಕರೆಯಲಾಗುತ್ತದೆ. ಆದರೆ ಜನಗಣತಿಯಲ್ಲಿ, ಅವರನ್ನು ಸೆಂಬಾನಂದ್ ಮರವರರು ಎಂದು ಗುರುತಿಸಲಾಗಿದೆ ಮತ್ತು ಅವರನ್ನು ಅತ್ಯಂತ ಹಿಂದುಳಿದ ವರ್ಗಗಳು (ಎಂಬಿಸಿ) ವರ್ಗಕ್ಕೆ ಸೇರಿಸಲಾಗಿದೆ.
"[ಜನಗಣತಿ] ಸರ್ವೇಯರುಗಳು ನಮ್ಮನ್ನು ಭೇಟಿ ಮಾಡುತ್ತಾರೆ, ಕೆಲವು ಪ್ರಶ್ನೆಗಳನ್ನು ಕೇಳುತ್ತಾರೆ ಮತ್ತು ಅವರಿಗೆ ಇಷ್ಟ ಬಂದಂತೆ ಯಾವುದೋ ವರ್ಗದ ಅಡಿಯಲ್ಲಿ ನಮ್ಮನ್ನು ಪಟ್ಟಿ ಮಾಡುತ್ತಾರೆ" ಎಂದು ಅವರು ಹೇಳುತ್ತಾರೆ.
ತಪ್ಪಾಗಿ ಗುರುತಿಸಲ್ಪಟ್ಟ ಮತ್ತು ವರ್ಗೀಕರಿಸಲ್ಪಟ್ಟ ಅಂದಾಜು 15 ಕೋಟಿ ಭಾರತೀಯರಲ್ಲಿ ಯಲ್ಲಪ್ಪನ್ ಕೂಡ ಒಬ್ಬರು. ವಸಾಹತುಶಾಹಿ ಆಳ್ವಿಕೆಯಲ್ಲಿ ಸ್ಥಾಪಿಸಲಾದ ಕ್ರಿಮಿನಲ್ ಟ್ರೈಬ್ಸ್ ಆಕ್ಟ್, 1871 ರ ಮೂಲಕ ಈ ಸಮುದಾಯಗಳಲ್ಲಿ ಅನೇಕರಿಗೆ ಒಮ್ಮೆ 'ಆನುವಂಶಿಕ ಅಪರಾಧಿಗಳು' ಎಂದು ಹಣೆಪಟ್ಟಿ ಕಟ್ಟಲಾಯಿತು. ಈ ಕಾಯ್ದೆಯನ್ನು 1952ರಲ್ಲಿ ರದ್ದುಪಡಿಸಲಾಯಿತು ಮತ್ತು ಸಮುದಾಯಗಳನ್ನು ಡಿ-ನೋಟಿಫೈಡ್ ಬುಡಕಟ್ಟುಗಳು (ಡಿಎನ್‌ಟಿಗಳು) ಅಥವಾ ಅಲೆಮಾರಿ ಬುಡಕಟ್ಟುಗಳು (ಎನ್‌ಟಿ) ಎಂದು ಉಲ್ಲೇಖಿಸಲಾಯಿತು.
"ಅತ್ಯಂತ ಅಪೂರ್ಣವಾಗಿದೆ ಮತ್ತು ಕೆಟ್ಟದಾಗಿ ಅಸಮರ್ಪಕವಾಗಿದೆ. ಹೆಚ್ಚಿನ ಸಂದರ್ಭಗಳಲ್ಲಿ, ಅವರು ಸಾಮಾಜಿಕ ಶ್ರೇಣೀಕರಣದ ಕೆಳಸ್ತರದಲ್ಲಿ ದೃಢವಾಗಿ ಉಳಿದಿದ್ದಾರೆ, ವಸಾಹತುಶಾಹಿ ಆಳ್ವಿಕೆಯಲ್ಲಿ ಸೃಷ್ಟಿಯಾದ ಪೂರ್ವಾಗ್ರಹಗಳನ್ನು ಎದುರಿಸುತ್ತಿದ್ದಾರೆ " ಎಂದು ಡಿನೋಟಿಫೈಡ್ ಅಲೆಮಾರಿ ಮತ್ತು ಅರೆ ಅಲೆಮಾರಿ ಬುಡಕಟ್ಟುಗಳ ರಾಷ್ಟ್ರೀಯ ಆಯೋಗದ 2017ರ ಸರ್ಕಾರಿ ವರದಿ ಹೇಳುತ್ತದೆ.

















