2021ರ ಮೇ ತಿಂಗಳಲ್ಲಿ ರಾಜೇಂದ್ರ ಪ್ರಸಾದ್ ಅವರ ಪತ್ನಿ ಉಸಿರಾಡಲು ಕಷ್ಟಪಡುತ್ತಿದ್ದಂತೆ ಉತ್ತರ ಪ್ರದೇಶದ ಹಳ್ಳಿಯಿಂದ ಪತ್ನಿಯನ್ನು ಹತ್ತಿರದ ನಗರದಲ್ಲಿರುವ ಖಾಸಗಿ ಆಸ್ಪತ್ರೆಗೆ ತುರ್ತಾಗಿ ಕೊಂಡೊಯ್ದರು. ಹತ್ತಿರದಲ್ಲಿ ಒಂದು ಆಸ್ಪತ್ರೆ ಇದ್ದರೂ ಅವರ ಆಯ್ಕೆ ಈ ಆಸ್ಪತ್ರೆಯಾಗಿತ್ತು, ಆದರೆ ನೇಪಾಳದ ರಾಷ್ಟ್ರೀಯ ಗಡಿಯನ್ನು ದಾಟಬೇಕಾಗಿತ್ತು.
“ಗಡಿಯ ಇನ್ನೊಂದು ಭಾಗದಲ್ಲಿ ಚಿಕಿತ್ಸೆಯನ್ನು ಪಡೆಯುವುದು ನಮಗೆ ಸಾಮಾನ್ಯವಾಗಿದೆ, ಹಳ್ಳಿಯಲ್ಲಿರುವ ಅನೇಕರು ಹಲವು ವರ್ಷಗಳಿಂದ ಇದನ್ನು ಮಾಡುತ್ತಿದ್ದೇವೆ,” ಎಂದು ತಮ್ಮ ಅಸಹಜ ಆಯ್ಕೆಯ ಬಗ್ಗೆ 37 ವರ್ಷದ ರಾಜೇಂದ್ರ ಹೇಳುತ್ತಾರೆ. ರಾಜೇಂದ್ರ ಅವರ ಗ್ರಾಮವಾದ ಬಂಕಟಿಯಿಂದ 15 ಕಿಮೀ ದೂರದಲ್ಲಿ ನೇಪಾಳದ ಆಸ್ಪತ್ರೆ ಇದೆ. ನೇಪಾಳದ ಗಡಿಯಲ್ಲಿರುವ ಉತ್ತರಪ್ರದೇಶದ ಅತ್ಯಂತ ದೊಡ್ಡ ಜಿಲ್ಲೆಯಾಗಿರುವ ಬಂಕಟಿ ಲಖೀಂಪುರ್ ಖೇರಿಯಲ್ಲಿ ಬರುತ್ತದೆ, (ಅದು ಖೇರಿ ಎಂದೂ ಕರೆಯಲ್ಪಡುತ್ತದೆ)
ಭಾರತ ಹಾಗೂ ನೇಪಾಳ ನಡುವಿನ ಮುಕ್ತ ಗಡಿ ನಿಯಮವು 1950ರ ಶಾಂತಿ ಮತ್ತು ಗೆಳೆತನದ ಒಪ್ಪಂದಕ್ಕೆ ಸಹಿ ಮಾಡಿದ ನಂತರ ಜಾರಿಗೆ ಬಂತು, ಇದರಿಂದಾಗಿ ಭಾರತ ಹಾಗೂ ನೇಪಾಳದ ಜನರು ಮುಕ್ತವಾಗಿ ಎರಡೂ ಪ್ರದೇಶಗಳಲ್ಲಿ ಸಂಚರಿಸಬಹುದಾಯಿತು. ಇದು ಅವರಿಗೆ ವ್ಯಾಪಾರದಲ್ಲಿ ತೊಡಗಿಕೊಳ್ಳಲು, ಆಸ್ತಿಯನ್ನು ಹೊಂದಲು ಮತ್ತು ಉದ್ಯೋಗಗಳನ್ನು ಪಡೆಯಲು ಅವಕಾಶಮಾಡಿಕೊಟ್ಟಿತು.
ಆದರೆ ಕೋವಿಡ್-19 ಅದೆಲ್ಲವನ್ನೂ ಬದಲಾಯಿಸಿತು.
ಭಾರತದಲ್ಲಿ ಕೋವಿಡ್ ಎರಡನೇ ಅಲೆ ಉತ್ತುಂಗ ಮಟ್ಟ ತಲುಪಿರುವಾಗ ರಾಜೇಂದ್ರ ಅವರ ಪತ್ನಿ 35 ವರ್ಷದ ಗೀತಾ ದೇವಿ ಆಸ್ಪತ್ರೆಯೊಂದಕ್ಕೆ ದಾಖಲಾದರು. ಆದರೆ ಅವರಿಗೆ ಗಡಿಯನ್ನು ದಾಟಿ ಆಸ್ಪತ್ರೆಗೆ ಹೋಗಲಾಗಲಿಲ್ಲ, ಏಕೆಂದರೆ ಕೋವಿಡ್-19 ಉಲ್ಬಣಗೊಂಡ ನಂತರ 2020 ಮಾರ್ಚ್ 20ರಿಂದ ಭಾರತದ ಐದು ರಾಜ್ಯಗಳು ಸೇರಿದಂತೆ 1,850 ಕಿಮೀ ಉದ್ದದ ಗಡಿಯನ್ನು ನೇಪಾಳ ಮುಚ್ಚಿತ್ತು.
ಅದಕ್ಕೆ ರಾಜೇಂದ್ರನ ಕುಟುಂಬ ಭಾರೀ ಬೆಲೆ ತೆತ್ತಿತು.








