'ಕ್ಯಾಪ್ಟನ್ ಭಾವ್' (ರಾಮಚಂದ್ರ ಶ್ರೀಪತಿ ಲಾಡ್)
ಸ್ವಾತಂತ್ರ್ಯ ಹೋರಾಟಗಾರ ಮತ್ತು ತೂಫಾನ್ ಸೇನಾದ ಮುಖ್ಯಸ್ಥರು
ಜೂನ್ 22, 1922- ಫೆಬ್ರವರಿ 5, 2022
ಕೊನೆಗೆ ಅವರು ತಾನು ಯಾವ ದೇಶಕ್ಕಾಗಿ ಹೋರಾಡಿದರೋ ಅದರಿಂದ ಗೌರವಿಸಲ್ಪಡದೆ ಹಾಗೂ ಹಾಡಿ ಹೊಗಳಿಸಿಕೊಳ್ಳದೆ ಇಲ್ಲಿಂದ ನಿರ್ಗಮಿಸಿದರು. ಆದರೆ 1940ರಲ್ಲಿ ತನ್ನ ಸಂಗಾತಿಗಳೊಡನೆ ಸೇರಿ ವಿಶ್ವದ ಪ್ರಬಲ ಪಭುತ್ವದ ವಿರುದ್ಧ ಹೋರಾಡಿದ್ದ ಈ ಮಹಾನ್ ವ್ಯಕ್ತಿಯ ಕುರಿತು ತಿಳಿದಿದ್ದ ಸಾವಿರಾರು ಜನರು ಸೇರಿ ಅವರಿಗೆ ತಮ್ಮ ಗೌರವವನ್ನು ಸಲ್ಲಿಸಿದರು. ರಾಮಚಂದ್ರ ಶ್ರೀಪತಿ ಲಾಡ್ ಅವರು 1943ರಲ್ಲಿ ಭೂಗತ ಪ್ರಾಂತೀಯ ಸರಕಾರವನ್ನು ರಚಿಸಿಕೊಂಡು ಬಲಾಢ್ಯ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಸ್ವಾತಂತ್ರ್ಯ ಘೋಷಿಸಿಕೊಂಡಿದ್ದ ಐತಿಹಾಸಿಕ ಹೋರಾಟಗಾರ ನಾನಾ ಪಾಟೀಲರ ʼಪ್ರತಿ ಸರ್ಕಾರ್ʼನ ಭಾಗವಾಗಿದ್ದರು
ಆದರೆ ಕ್ಯಾಪ್ಟನ್ ಭಾವ್ (ಅವರ ಭೂಗತ ಅಡ್ಡಹೆಸರು) ಮತ್ತು ಅವರ ಯೋಧರು ಅಲ್ಲಿಗೇ ತಮ್ಮ ಹೋರಾಟವನ್ನು ನಿಲ್ಲಿಸಿರಲಿಲ್ಲ. 1946ರವರೆಗೆ ಮೂರು ವರ್ಷಗಳ ಕಾಲ ಅವರು ಬ್ರಿಟಿಷರನ್ನು ತಡೆದು ನಿಲ್ಲಿಸಿದರು ಮತ್ತು ಸುಮಾರು 600 ಹಳ್ಳಿಗಳಲ್ಲಿ ಪ್ರತಿ ಸರ್ಕಾರ್ ತನ್ನ ಸಮಾನಾಂತರ ಸರ್ಕಾರವನ್ನು ನಡೆಸುತ್ತಿತ್ತು. ಒಂದು ಅರ್ಥದಲ್ಲಿ, ಫೆಬ್ರವರಿ 5ರಂದು ಅವರ ಸಾವಿನೊಂದಿಗೆ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಸ್ಥಾಪಿಸಿದ್ದ ಅವರ ಪ್ರತಿ ಸರ್ಕಾರ ಕೊನೆಗೊಂಡಿತು.







