ಮುರಿದ ಬಾಗಿಲು, ಅಸ್ತವ್ಯಸ್ತವಾಗಿ ಹರಡಿದ ಕಲ್ಲುಗಳು ಹಾಗೂ ಅನೇಕ ತಗ್ಗುಗಳಿಂದ ಕೂಡಿದ ಮಣ್ಣಿನ ನೆಲ, ಕಪ್ಪು ವರ್ಣದ ಹರಿದ ಪ್ಲಾಸ್ಟಿಕ್‌ ಹಾಳೆಯನ್ನು ಹೊದಿಸಿದ ಮುರಿದ ಚಾವಣಿಗಳನ್ನೊಳಗೊಂಡ ಒಣಹುಲ್ಲಿನ ಗುಡಿಸಲಿನಲ್ಲಿ ಅಮೋಲ್‌ ಬರ್ಡೆ, ‘ಪ್ರತ್ಯೇಕ ವಾಸದಲ್ಲಿದ್ದಾರೆ.’

ತಾವು, ಕೋವಿಡ್‌—ಪಾಸಿಟಿವ್‌ ಎಂಬುದಾಗಿ ತಿಳಿದುಬಂದ ನಂತರ ಮೇ ಒಂದರಂದು ಇವರು ಮಹಾರಾಷ್ಟ್ರದ ಶಿರೂರ್‌ ತಾಲ್ಲೂಕಿನ ಈ ಖಾಲಿ ಗುಡಿಸಲಿಗೆ ಸ್ಥಳಾಂತರಗೊಂಡರು.

ಮೇ ತಿಂಗಳಿನ ಧಗೆಯಿಂದಾಗಿ, ಗುಡಿಸಲಿನ ಒಳಗೆ ಇರುವುದು ಪ್ರಯಾಸಕರವೆನಿಸಿದ ಕಾರಣ, “ನಾನು, ಕೆಲವು ಹೆಜ್ಜೆಗಳಷ್ಟು ದೂರದಲ್ಲಿರುವ ಆಲದ ಮರದ ಕೆಳಗೆ ಪ್ಲಾಸ್ಟಿಕ್‌ ಚಾಪೆಯೊಂದರ ಮೇಲೆ, ಬೆಳಿಗ್ಗೆ ೧೧ರಿಂದ ಮಧ್ಯಾಹ್ನ 4ರವರೆಗೂ ಮಲಗುತ್ತೇನೆ” ಎಂಬುದಾಗಿ ಅವರು ತಿಳಿಸಿದರು.

ಮೇ ಒಂದರಂದು, 19ರ ವಯಸ್ಸಿನ ಅಮೋಲ್‌ ಹಾಸಿಗೆ ಬಿಟ್ಟೇಳುತ್ತಿದ್ದಂತೆಯೇ ಜ್ವರ, ತಲೆನೋವು ಮತ್ತು ಮೈಕೈ ನೋವಿನ ಕಾರಣ, ತಕ್ಷಣವೇ, ಸಹಭಾಜಿತ (shared) ಜೀಪೊಂದರಲ್ಲಿ ತಮ್ಮ ಗುಡಿಸಲಿನಿಂದ ಹನ್ನೆರಡು ಕಿ. ಮೀ. ದೂರದ ಶಿರೂರ್‌ ಗ್ರಾಮೀಣ ಆಸ್ಪತ್ರೆಗೆ ಪ್ರಯಾಣಿಸಿದರು.

Rapid Antigen ತಪಾಸಣೆಯಲ್ಲಿ ಇವರು ಪಾಸಿಟಿವ್‌ ಎಂಬುದಾಗಿ ತಿಳಿದುಬಂದಿತು. ನಂತರ ತಾವೇನು ಮಾಡಬೇಕೆಂಬುದು ಇವರು ಆಸ್ಪತ್ರೆಯ ವೈದ್ಯರನ್ನು ಕೇಳಲಾಗಿ ಅವರು, “ಹತ್ತು ದಿನಗಳ ಔಷಧಿಯನ್ನು ಖರೀದಿಸಿ, 14-15 ದಿನಗಳವರೆಗೆ ನಮ್ಮ ಕುಟುಂದಿಂದ ದೂರದಲ್ಲಿ, ಪ್ರತ್ಯೇಕ ಕೊಠಡಿಯೊಂದರಲ್ಲಿ ವಾಸಿಸುವಂತೆ” ತಿಳಿಸಿದರು ಎಂಬುದಾಗಿ ಅಮೋಲ್‌ ತಿಳಿಸಿದರು.

“ಹಾಸಿಗೆಯು ಲಭ್ಯವಿರಲಿಲ್ಲ” ಎಂತಲೂ ಅವರು ತಿಳಿಸಿದರು. ಶಿರೂರ್‌ ಗ್ರಾಮೀಣ ಆಸ್ಪತ್ರೆಯಲ್ಲಿ, ಆಮ್ಲಜನಕದ ಸೌಲಭ್ಯವನ್ನೊಳಗೊಂಡ ೨೦ ಹಾಸಿಗೆಗಳಿದ್ದು, 10 ಪ್ರತ್ಯೇಕಿತ ಹಾಸಿಗೆಗಳಿವೆಯೆಂದು ಅಲ್ಲಿನ ವೈದ್ಯಕೀಯ ಅಧೀಕ್ಷಕರು ನನಗೆ ತಿಳಿಸಿದರು.  ಹೀಗಾಗಿ, ಅಮೋಲ್‌, ವೈದ್ಯರ ನಿರ್ದೇಶನಗಳನ್ನು ಅನುಸರಿಸಿ, ಆಸ್ಪತ್ರೆಯ ಪಕ್ಕದಲ್ಲಿದ್ದ ಔಷಧಿ ಅಂಗಡಿಯವನಿಂದ ಔಷಧಗಳನ್ನು ಕೊಂಡು ತಂದರು. ತಮ್ಮ ಸ್ವಂತ ಚಿಕ್ಕ ಗುಡಿಸಲಿನಲ್ಲಿ ಪ್ರತ್ಯೇಕವಾಸವು ಸಾಧ್ಯವಿರದ ಕಾರಣ, ನೆರೆಯವರ ಖಾಲಿ ಗುಡಿಸಲಿಗೆ ಅವರು ಸ್ಥಳಾಂತರಗೊಂಡರು. “ಏಪ್ರಿಲ್‌ನಲ್ಲಿ ಕೆಲವು ತಿಂಗಳುಗಳವರೆಗೆ ಅವರು ಕೆಲಸದ ಮೇಲೆ ಹೊರಗೆ ಹೋಗಿದ್ದರು. ಕೋವಿಡ್‌ ಚಿಕಿತ್ಸೆಯ ಅವಧಿಯನ್ನು ಪೂರೈಸುವವರೆಗೆ ಅಲ್ಲಿ ನೆಲೆಸಲು ಅವಕಾಶ ನೀಡಬೇಕಾಗಿ ಅವರಿಗೆ ಕರೆಮಾಡಿದೆ” ಎಂದರು ಅಮೋಲ್‌.

With no hospital bed available, Amol Barde isolated himself in this neighbour’s hut with a broken door, damaged roof and stone-strewn floor
PHOTO • Jyoti
With no hospital bed available, Amol Barde isolated himself in this neighbour’s hut with a broken door, damaged roof and stone-strewn floor
PHOTO • Jyoti

ಆಸ್ಪತ್ರೆಯ ಹಾಸಿಗೆಯು ಲಭ್ಯವಿಲ್ಲದ ಕಾರಣ, ಮುರಿದ ಬಾಗಿಲು ಹಾಗೂ ಛಾವಣಿ, ಮತ್ತು ಕಲ್ಲುಗಳು ಹರಡಿದ್ದ ನೆಲವನ್ನೊಳಗೊಂಡ ನೆರೆಯವರ ಗುಡಿಸಲಿನಲ್ಲಿ ಅಮೋಲ್‌ ಬರ್ಡೆ, ಪ್ರತ್ಯೇಕ ವಾಸಕ್ಕೆ ತೊಡಗಿದರು

ಗ್ರಾಮೀಣ ಶಿರೂರಿನ 115 ಊರುಗಳಲ್ಲಿ ನೆಲೆಸಿರುವ 321,644 ನಿವಾಸಿಗಳಲ್ಲಿ (2011ರ ಜನಗಣತಿಯಂತೆ), ರೋಗದ ಸೌಮ್ಯ ಲಕ್ಷಣಗಳನ್ನು ಹೊಂದಿರುವ ಜನರಿಗೆ, 9 ಸರ್ಕಾರಿ ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ, ಒಟ್ಟಾರೆ 902 ಹಾಸಿಗೆಗಳಿದ್ದು, ರೋಗದಿಂದ ತೀವ್ರವಾಗಿ ಬಳಲುತ್ತಿರುವ ರೋಗಿಗಳಿಗೆಂದು, ಕೋವಿಡ್‌ಗೆ ಮೀಸಲಾದ 3 ಆಸ್ಪತ್ರೆಗಳಿವೆ. ಏಪ್ರಿಲ್‌ನಿಂದ ಮೇ 10ರವರೆಗೆ, ಗ್ರಾಮೀಣ ಶಿರೂರಿನಲ್ಲಿ ದಿನಂಪ್ರತಿ 300ರಿಂದ 400 ಪಾಸಿಟಿವ್‌ ಪ್ರಕರಣಗಳು ವರದಿಯಾಗುತ್ತಿದ್ದವು ಎಂಬುದಾಗಿ ಪುಣೆ ಜಿಲ್ಲೆಯ ಈ ತಾಲ್ಲೂಕಿನ ಆರೋಗ್ಯ ನಿರೀಕ್ಷಕರಾದ ಡಾ. ಬೋರೆ ಮಾಹಿತಿ ನೀಡಿದರು.

ಹಾಸಿಗೆಯು ಲಭ್ಯವಿಲ್ಲದ ಕಾರಣ, ಅಮೋಲ್‌ ನೆರೆಯವರ ಗುಡಿಸಲಿನಲ್ಲಿ ಪ್ರತ್ಯೇಕವಾಸಕ್ಕೆ ತೊಡಗಿದ್ದರಿಂದಾಗಿ, 35ರ ವಯಸ್ಸಿನ ಅವರ ತಾಯಿ ಸುನೀತ, ಸಹೋದರಿ 13 ವರ್ಷದ ಪೂಜಾ ಹಾಗೂ ೧೫ರ ವಯಸ್ಸಿನ ಸಹೋದರ ಭೈಯ, ಹತ್ತಿರದಲ್ಲಿನ ತಮ್ಮ ಚಿಕ್ಕ ಗುಡಿಸಲಿನಲ್ಲಿಯೇ ಉಳಿದುಕೊಂಡರು. ನಿರ್ಜನ ಪ್ರದೇಶದಲ್ಲಿನ ಸುಮಾರು 25 ಗುಡಿಸಲುಗಳ ಪೈಕಿ ಇದೂ ಒಂದು. ಚವ್ಹನ್‌ವಾಡಿ ಎಂಬ ಅತಿ ಹತ್ತಿರದ ಗ್ರಾಮವು, ಈ ವಾಸಸ್ಥಳದಿಂದ 8 ಕಿ.ಮೀ. ದೂರದಲ್ಲಿದೆ.

ಬರ್ಡೆ ಮನೆತನಗಳು, ಅಲೆಮಾರಿ ಪರ್ಧಿ ಬುಡಕಟ್ಟಿನ ಉಪ-ಪಂಗಡವೆನಿಸಿದ ಭಿಲ್‌ ಪರ್ಧಿಗಳೆಂಬ ಆದಿವಾಸಿ ಸಮುದಾಯ. ಅನೇಕ ವಿವಿಧ ಬುಡಕಟ್ಟುಗಳೊಂದಿಗೆ, ಅಪರಾಧಿ ಜನಜಾತಿ ಅಧಿನಿಯಮ 1952ರಂತೆ, ಬ್ರಿಟಿಷ್‌ ಸರ್ಕಾರವು, ಪರ್ಧಿಗಳಿಗೆ ‘ಅಪರಾಧಿʼಗಳೆಂಬ ಕಳಂಕವನ್ನು ಹೊರಿಸಿತು. ಭಾರತ ಸರ್ಕಾರವು ಇದನ್ನು ರದ್ದುಪಡಿಸಿ, ಈ ಬುಡಕಟ್ಟಿನವರನ್ನು ‘ವಿಮುಕ್ತ’ಗೊಳಿಸಿತು. ಇವರಲ್ಲಿನ ಕೆಲವರನ್ನು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಲ್ಲಿ ಮತ್ತು ಇನ್ನು ಕೆಲವರನ್ನು ಹಿಂದುಳಿದ ವರ್ಗಗಳಿಗೆ ಸೇರಿಸಲಾಗಿದೆ,

Paracetamol, ಕೆಮ್ಮಿನ ಔಷಧಿ ಮತ್ತು ವಿವಿಧ ವಿಟಮಿನ್‌ಗಳನ್ನೊಳಗೊಂಡಂತೆ, ಸುಮಾರು 2,500 ರೂ.ಗಳ ಬೆಲೆಯನ್ನು ತೆತ್ತು, 10 ದಿನಗಳಿಗಾಗುವಷ್ಟು ಔಷಧವನ್ನು ಅಮೋಲ್‌ ಕೊಂಡು ತಂದರು. “ನಾನು 7,000 ರೂ.ಗಳೊಂದಿಗೆ ತೆರಳಿದ್ದೆ. ಕೇವಲ ಒಂದೇ ದಿನದಲ್ಲಿ ಅರ್ಧದಷ್ಟು ಹಣವು ಖರ್ಚಾಗಿ ಹೋಯಿತು” ಎಂದರವರು. ಹೊಲದಲ್ಲಿನ ಕೂಲಿಯ ಹಣದಿಂದ 5,000 ರೂ.ಗಳನ್ನು ಉಳಿಸಲು ಅವರಿಗೆ ಸುಮಾರು 9 ತಿಂಗಳು ಹಿಡಿಯಿತು. ಅವರ ತಾಯಿಯು, ಉಳಿದ 2,000 ರೂ.ಗಳನ್ನು ನೆರೆಯವರಿಂದ ಸಾಲವಾಗಿ ಪಡೆದು, ಮಗನಿಗೆ ಆಸ್ಪತ್ರೆಯ ಖರ್ಚಿಗೆಂದು ನೀಡಿದ್ದರು.

ಹತ್ತಿರದ ಹಳ್ಳಿಗಳಲ್ಲಿನ ಹೊಲಗಳಲ್ಲಿ, ತಿಂಗಳಿಗೆ ಸುಮಾರು 20 ದಿನಗಳ ತಮ್ಮ ದುಡಿಮೆಯಿಂದ ಅಮೋಲ್‌ ಹಾಗೂ ಆತನ ತಾಯಿ ಸುನೀತ, ದಿನಂಪ್ರತಿ 150 ರೂ.ಗಳನ್ನು ಸಂಪಾದಿಸುತ್ತಾರೆ. 8 ವರ್ಷಗಳ ಹಿಂದೆ ಪತಿ ಕೈಲಾಶ್‌, ತನ್ನನ್ನು ಹಾಗೂ ಮಕ್ಕಳನ್ನು ತ್ಯಜಿಸಿ, “ಬೇರೊಬ್ಬಳನ್ನು ಮದುವೆಯಾದರು” ಎಂಬುದಾಗಿ ಸುನೀತ ತಿಳಿಸಿದರು. ಅಮೋಲ್‌ ಪ್ರತ್ಯೇಕ ವಾಸದಲ್ಲಿದ್ದು, ಆತನ ಕಾಳಜಿ ವಹಿಸುತ್ತಿರುವ ಕಾರಣದಿಂದಾಗಿ ಕೂಲಿಯ ಕೆಲಸವು ತಪ್ಪಿಹೋಗುತ್ತಿದೆ ಎಂದ ಆಕೆ, “ಆತನ ಗುಡಿಸಲಿಗೆ ಊಟ ಹಾಗೂ ನೀರನ್ನು ಕೊಂಡೊಯ್ಯುತ್ತಿದ್ದೇನೆ” ಎಂದರು.

ಭಿಲ್‌ ಪರ್ಧಿಗಳ ರೂಢಿಯಂತೆ, ಈ ಕುಟುಂಬವು ಪ್ರತಿ ವರ್ಷವೂ ಒಂದು ಸ್ಥಳದಿಂದ ಮತ್ತೊಂದಕ್ಕೆ ಸಾಗುತ್ತದೆ. ಶಿರೂರಿನಲ್ಲಿ ಆಕೆಯ ಪ್ರಸ್ತುತ ವಾಸಸ್ಥಳದಲ್ಲಿ ನೆಲೆಸಿರುವ ಯಾವ ನೆಲಸಿಗರೂ ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ ಅಥವಾ ಆಧಾರ್‌ ಕಾರ್ಡುಗಳನ್ನು ಹೊಂದಿರುವುದಿಲ್ಲ. ಸರ್ಕಾರಿ ಯೋಜನೆಗಳು ಅವರಿಗೆ ನಿಲುಕುತ್ತಿಲ್ಲ.

Left: The medicines cost Rs. 5,000. It had taken Amol nearly nine months to save Rs. 7,000 from his farm wages. Right: During the day, Amol seeks relief from the heat under a nearby peepal tree
PHOTO • Jyoti
Left: The medicines cost Rs. 5,000. It had taken Amol nearly nine months to save Rs. 7,000 from his farm wages. Right: During the day, Amol seeks relief from the heat under a nearby peepal tree
PHOTO • Jyoti

ಎಡಕ್ಕೆ: ಔಷಧಿಗೆಂದು 2,500 ರೂ.ಗಳನ್ನು ಖರ್ಚುಮಾಡಲಾಯಿತು. ಹೊಲದಲ್ಲಿನ ತನ್ನ ದುಡಿಮೆಯಿಂದ 5,000 ರೂ.ಗಳನ್ನು ಉಳಿಸಲು ಅಮೋಲ್‌ ಅವರಿಗೆ 6 ತಿಂಗಳು ಹಿಡಿಯಿತು. ಬಲಕ್ಕೆ: ಅಮೋಲ್‌, ಹಗಲು ಹೊತ್ತಿನಲ್ಲಿ, ಹತ್ತಿರದಲ್ಲಿನ ಆಲದ ಮರದ ಕೆಳಗೆ ಆಶ್ರಯವನ್ನು ಪಡೆಯುತ್ತಾರೆ

ಅಮೋಲ್‌ ವಾಪಸ್ಸು ಬಂದಾಗ, ಉಳಿದಿದ್ದ ಸುಮಾರು 4500 ರೂ.ಗಳಲ್ಲಿ, ಸುನೀತ, ಹತ್ತಿರದ ಕಿರಾಣಿ ಅಂಗಡಿಗೆ ತೆರಳಿ 20 ದಿನಗಳಿಗಾಗುವಷ್ಟು ಪಡಿತರವನ್ನು ಖರೀದಿಸಿದರು (ಎಂದಿನಂತೆ, ಗೋಧಿ ಹಿಟ್ಟು ಮತ್ತು ಅಕ್ಕಿಯ ಜೊತೆಗೆ ತೊಗರಿ ಬೇಳೆ, ಹೆಸರು ಕಾಳು, ಮೊಳಕೆ ಕಾಳು). “ದಿನಕ್ಕೆ ಮೂರು ಬಾರಿ ಆತನು ಬಹಳಷ್ಟು ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದ. ಇದರೊಂದಿಗೆ ಆತನಿಗೆ ಶಕ್ತಿಯ ಅವಶ್ಯಕತೆಯಿತ್ತು. ಇಲ್ಲದಿದ್ದಲ್ಲಿ, ನಾವು ಈ ವಸ್ತುಗಳನ್ನು ಕೊಳ್ಳಲಾರೆವು. ಈಗ ಬೇಳೆ ಕಾಳುಗಳೆಲ್ಲವೂ ಮುಗಿದಿವೆ. ಸ್ವಲ್ಪ ಅಕ್ಕಿಯು ಉಳಿದಿದೆ. ಉಪ್ಪು ಹಾಗೂ ಕೆಂಪು ಮೆಣಸಿನ ಪುಡಿಯೊಂದಿಗೆ ಅದನ್ನು ಬೇಯಿಸಿ ತಿನ್ನುತ್ತೇವೆ” ಎಂದರು ಸುನೀತ.

ಅಮೋಲ್‌, ಮನೆಯ ಪ್ರತ್ಯೇಕ ವಾಸವನ್ನು ಪ್ರಾರಂಭಿಸಿದಾಗ, ಅವರಿಗೆ ಕ್ರಮಾಚಾರಗಳ (protocol) ಸಂಪೂರ್ಣ ಅರಿವಿರಲಿಲ್ಲ. “ನನಗೆ ಕೇವಲ ಮುಖಗವಸನ್ನು ಧರಿಸುವಿಕೆ, ಅಂತರದ ಪಾಲನೆ ಹಾಗೂ ಔಷಧಿಗಳ ಸೇವನೆಯ ಬಗ್ಗೆ ಮಾತ್ರ ತಿಳುವಳಿಕೆಯಿತ್ತು. “ನಾನು ಬೇರೇನು ತಾನೇ ಮಾಡಬಹುದಿತ್ತು?” ಎಂಬುದು ಅವರ ಪ್ರಶ್ನೆ.

ತೀಕ್ಷ್ಣವಲ್ಲದ/ಲಕ್ಷಣರಹಿತ ಕೋವಿಡ್‌-19ಗೆ ಸಂಬಂಧಿಸಿದಂತೆ, ಮನೆಯಲ್ಲಿನ ಪ್ರತ್ಯೇಕ ವಾಸವನ್ನು ಕುರಿತ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯದ ಪರಿಷ್ಕೃತ ಮಾರ್ಗದರ್ಶನ ಗಳ ಸೂಚನೆಯಂತೆ, “ರೋಗಿಗಳು ಸದಾ ಕಾಲವೂ ಮೂರು ಪದರಗಳ ವೈದ್ಯಕೀಯ ಮುಖಗವಸನ್ನು ಧರಿಸತಕ್ಕದ್ದು. ಅವು ಒದ್ದೆಯಾದಲ್ಲಿ ಅಥವಾ ಮಲಿನವಾಗಿ ಕಾಣುತ್ತಿದ್ದಲ್ಲಿ ಅಥವಾ ಬಳಸಿದ ಎಂಟು ಗಂಟೆಗಳ ತರುವಾಯ ಅವನ್ನು ವಿಸರ್ಜಿಸತಕ್ಕದ್ದು. ಆರೈಕೆ ಮಾಡುವವರು ರೋಗಿಯ ಕೊಠಡಿಯನ್ನು ಪ್ರವೇಶಿಸುವ ಸಂದರ್ಭಗಳಿದ್ದಲ್ಲಿ, ರೋಗಿ ಹಾಗೂ ಆರೈಕೆ ಮಾಡುವವರಿಬ್ಬರೂ ಎನ್‌-95 ಮುಖಗವಸಿನ ಬಳಕೆಯನ್ನು ಪರಿಗಣಿಸತಕ್ಕದ್ದು.”

ಅಮೋಲ್‌ ಹಾಗೂ ಸುನೀತ ಇವರಿಬ್ಬರೂ ಒಗೆಯಬಹುದಾದ ಪಾಲಿಪ್ರೋಪಿಲೀನ್‌ ಮುಖಗವಸುಗಳನ್ನು ಉಪಯೋಗಿಸುತ್ತಾರೆ. "ಶಿರೂರ್‌ ಮಾರುಕಟ್ಟೆಯಿಂದ 50 ರೂ.ಗಳಿಗೆ ಜನವರಿಯಲ್ಲಿ ಈ ಮುಖಗವಸುಗಳನ್ನು ಕೊಂಡುತಂದೆ. ಅದು ಸ್ವಲ್ಪ ಹರಿದಿದೆ. ದಿನಪೂರ್ತಿ ಅದನ್ನು ನಾನು ಉಪಯೋಗಿಸುತ್ತೇನೆ. ರಾತ್ರಿಯ ಹೊತ್ತಿನಲ್ಲಿ ಅದನ್ನು ಒಗೆದು, ಮುಂಜಾನೆ ಮತ್ತೆ ಅದನ್ನು ಧರಿಸುತ್ತೇನೆ” ಎಂದ ಅಮೋಲ್‌, ಆಗಿನಿಂದಲೂ ಅದೇ ಮುಖಗವಸನ್ನು ಧರಿಸುತ್ತಿದ್ದಾರೆ.

ಮಾರ್ಗದರ್ಶಿ ಸೂಚನೆಗಳು ಸಹ, “ಆಕ್ಸಿಮೀಟರ್‌ನೊಂದಿಗೆ ರಕ್ತದಲ್ಲಿನ ಆಮ್ಲಜನಕದ ಪರಿಪೂರ್ಣತೆಯನ್ನು (saturation) ಕುರಿತಂತೆ ಸ್ವಯಂ-ನಿಗಾವಣೆಯನ್ನು ಬಲವಾಗಿ ಪ್ರತಿಪಾದಿಸುತ್ತದೆ.” “ಅದು ನಮ್ಮ ಬಳಿ ಇಲ್ಲ. ನಮ್ಮಲ್ಲಿ ಇದು ಇದ್ದಾಗ್ಯೂ, ಮನೆಯಲ್ಲಿ ಯಾರಿಗೂ ಅದನ್ನು ಓದಲು ಬರುವುದಿಲ್ಲ” ಎಂಬುದಾಗಿ ಅಮೋಲ್‌ ತಿಳಿಸಿದರು. ಇವರ ಕುಟುಂಬವು ಸದಾ ಒಂದೆಡೆಯಿಂದ ಮತ್ತೊಂದೆಡೆಗೆ ಸ್ಥಳಾಂತರಗೊಳ್ಳುತ್ತಲೇ ಇರುವುದರಿಂದ ಇವರಾಗಲಿ ಇವರ ಒಡಹುಟ್ಟಿದವರಾಗಲಿ ಶಾಲೆಗೆ ಎಂದಿಗೂ ದಾಖಲಾಗಲೇ ಇಲ್ಲ.

ಇಲ್ಲಿನ ೨೫ ಭಿಲ್‌ ಪರ್ಧಿ ಕುಟುಂಬಗಳಲ್ಲಿನ ಪ್ರತಿಯೊಂದರಲ್ಲೂ, ಸುಮಾರು ನಾಲ್ಕು ಸದಸ್ಯರಿರುತ್ತಾರೆ. ಪುಣೆಯಿಂದ 70 ಕಿ.ಮೀ. ದೂರದಲ್ಲಿರುವ ಈ ವಾಸಸ್ಥಳದಲ್ಲಿ ಮೇ 20ರವರೆಗೆ, ಮೂರು ಜನರು ಪಾಸಿಟಿವ್‌ ಎಂದು ತಿಳಿದುಬಂದಿತು. ಅಮೋಲ್‌ ಅವರು ಇವರಲ್ಲಿ ಮೂರನೆಯವರು.

With Amol in 'isolation', his mother Sunita (left) and siblings remained in their own small hut nearby (right)
PHOTO • Jyoti
With Amol in 'isolation', his mother Sunita (left) and siblings remained in their own small hut nearby (right)
PHOTO • Jyoti

ಅಮೋಲ್‌, ‘ಪ್ರತ್ಯೇಕ ವಾಸ’ದಲ್ಲಿದ್ದ ಕಾರಣ, ಆತನ ತಾಯಿ ಸುನೀತ (ಎಡಕ್ಕೆ) ಮತ್ತು ಆತನ ಒಡಹುಟ್ಟಿದವರು, ಹತ್ತಿರದ ತಮ್ಮ ಸ್ವಂತ ಗುಡಿಸಲಿನಲ್ಲಿ (ಬಲಕ್ಕೆ) ವಾಸಿಸತೊಡಗಿದರು

ಶಿರೂರ್‌ ಗ್ರಾಮೀಣ ಆಸ್ಪತ್ರೆಯಲ್ಲಿ, ಕ್ಷಿಪ್ರ ಪ್ರತಿಜನಕ ಪರೀಕ್ಷೆಯ (rapid antigen test) ನಂತರ, ಏಪ್ರಿಲ್‌ 29ರಂದು ಸಂತೋಷ್‌ ಧುಲೆ ಹಾಗೂ ನಂತರದಲ್ಲಿ ಏಪ್ರಿಲ್‌ ೩೦ರಂದು ಅವರ ಪತ್ನಿ ಸಂಗೀತ, ಅನುಕ್ರಮವಾಗಿ, ಕೋವಿಡ್‌ ಪಾಸಿಟಿವ್‌ ಎಂದು ತಿಳಿದುಬಂದಿತು. “ನಮ್ಮಿಬ್ಬರಿಗೂ ಕೆಮ್ಮು, ಜ್ವರ ಹಾಗೂ ಮೈ ಕೈ ನೋವು ಕಾಣಿಸಿಕೊಂಡಿತು. ಆಸ್ಪತ್ರೆಯಲ್ಲಿ ಹಾಸಿಗೆಯು ಲಭ್ಯವಿಲ್ಲವೆಂಬುದಾಗಿಯೂ ನಮಗೆ ತಿಳಿಸಲಾಯಿತು” ಎಂದರು ಸಂಗೀತ.

ಮನೆಯಲ್ಲಿನ ಪ್ರತ್ಯೇಕ ವಾಸವಷ್ಟೇ ಅವರಿಗಿದ್ದ ಆಯ್ಕೆ. ಆರೋಗ್ಯ ಸಚಿವಾಲಯದ ಮಾರ್ಗದರ್ಶಿ ಸೂಚನೆಗಳು, ಇಂತಹ ಸಂದರ್ಭಗಳಲ್ಲಿನ ಜಿಲ್ಲಾ ಪ್ರಾಧಿಕಾರದ ಪಾತ್ರದ ಬಗ್ಗೆ ಸ್ಪಷ್ಟವಾಗಿ ತಿಳಿಸಿವೆ. “ಕ್ಷೇತ್ರದಲ್ಲಿನ ಸಿಬ್ಬಂದಿಗಳು/ಕಣ್ಗಾವಲು ತಂಡಗಳು, ಮನೆಯಲ್ಲಿ ಪ್ರತ್ಯೇಕವಾಸದಲ್ಲಿರುವವರ ಆರೋಗ್ಯ ಪರಿಸ್ಥಿತಿಯ ಬಗ್ಗೆ ವ್ಯಕ್ತಿಗತ ಭೇಟಿಯ ಮೂಲಕ ನಿಗಾವಹಿಸತಕ್ಕದ್ದು. ಇದರೊಂದಿಗೆ, ರೋಗಿಗಳಿಗೆಂದೇ ಮುಡುಪಾಗಿಟ್ಟ ಕರೆ ಕೇಂದ್ರದ (call center) ಮೂಲಕ ಅವರ ಬಗ್ಗೆ ದಿನನಿತ್ಯದ ಮೇಲ್ವಿಚಾರಣೆಯೂ ಅವಶ್ಯ.”

ಹತ್ತಿರದಲ್ಲಿನ ಚವ್ಹನ್‌ವಾಡಿ ಹಳ್ಳಿಯಿಂದ ಯಾವುದೇ ಆರೋಗ್ಯ ಕಾರ್ಯಕರ್ತರು ಇಲ್ಲಿಯವರೆಗೂ ಈ ವಾಸಸ್ಥಳವನ್ನು ಭೇಟಿಮಾಡಿರುವುದಿಲ್ಲ. “ಕೇವಲ ೨೦೨೦ರ ಏಪ್ರಿಲ್‌ನಲ್ಲಿ ಗ್ರಾಮ ಸೇವಕ ಹಾಗೂ ಆಶಾ ಕಾರ್ಯಕರ್ತರು ಕೊರೊನಾ ವೈರಸ್‌ ಬಗ್ಗೆ ನಮಗೆ ಅರಿವನ್ನು ಮೂಡಿಸಲು ಇಲ್ಲಿಗೆ ಬಂದಿದ್ದರಷ್ಟೆ” ಎನ್ನುತ್ತಾರೆ ಸಂತೋಷ್‌.

ಆದಾಗ್ಯೂ, ಆರೋಗ್ಯಾಧಿಕಾರಿ ಡಾ. ಡಿ. ಬಿ. ಮೋರೆ ಅವರು, “ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರ ಸಹಾಯದೊಂದಿಗೆ ಮನೆಯಲ್ಲಿ ಪ್ರತ್ಯೇಕವಾಸದಲ್ಲಿರುವ ಎಲ್ಲ ರೋಗಿಗಳೊಂದಿಗೆ ನಾವು ಸಂಪರ್ಕದಲ್ಲಿದ್ದೇವೆ. ಹಳ್ಳಿಗಳ ಹೊರವಲಯಗಳಲ್ಲಿ ಕೆಲವು ರೋಗಿಗಳು ಅಲಕ್ಷಿತರಾಗಿದ್ದಲ್ಲಿ, ಅದನ್ನೂ ನಾವು ನಿರ್ವಹಿಸುತ್ತೇವೆ” ಎನ್ನುತ್ತಾರೆ.

26ರ ಸಂಗೀತ ಹಾಗೂ 28ರ ಸಂತೋಷ್‌, ತಮ್ಮ ಹುಲ್ಲುಮಾಡಿನ ಗುಡಿಸಲಿನಲ್ಲಿ ಎರಡು ವಾರಗಳ ಪ್ರತ್ಯೇಕ ವಾಸವನ್ನು ಮುಗಿಸಿದರು. ಅವರಿಗೆ ಸುಮಾರು ಒಂಭತ್ತು ಕಿ.ಮೀ. ದೂರದ ನಿಮೊನ್‌ ಹಳ್ಳಿಯಲ್ಲಿನ ಜಿಲ್ಲಾ ಪರಿಷತ್‌ ಶಾಲೆಗೆ ಹೋಗುತ್ತಿರುವ 10 ವರ್ಷದ ಮಗ ಮತ್ತು 13 ವರ್ಷದ ಮಗಳಿದ್ದಾಳೆ. ಈ ಗುಡಿಸಲುಗಳ ಸಮುದಾಯದಲ್ಲಿ 4ನೇ ತರಗತಿಯವರೆಗೆ ವಿದ್ಯಾಭ್ಯಾಸವನ್ನು ಪೂರೈಸಿರುವ ವ್ಯಕ್ತಿಯೆಂದರೆ, ಸಂತೋಷ್‌ ಒಬ್ಬರೇ. ಈ ಭಿಲ್‌ ಕುಟುಂಬವೂ ಸಹ ಕೆಲವು ವರ್ಷಗಳಿಗೊಮ್ಮೆ ವಾಸಸ್ಥಳಗಳನ್ನು ಸ್ಥಳಾಂತರಿಸುತ್ತಿದ್ದಾಗ್ಯೂ, ಸಂತೋಷ್‌, ತಮ್ಮ ಮಕ್ಕಳು ಶಾಲೆಗೆ ಹಾಜರಾಗುವುದನ್ನು ಖಾತರಿಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

“ಆದರೆ ಈಗ ಎಲ್ಲವೂ ಆನ್‌ಲೈನ್‌ ಆಗಿರುವುದರಿಂದಾಗಿ, ಅವರ ವಿದ್ಯಾಭ್ಯಾಸವು ಸ್ಥಗಿತಗೊಂಡಿದೆ” ಎಂದರು ಸಂಗೀತ. ಆಕೆ ಹಾಗೂ ಸಂತೋಷ್‌, ತಮ್ಮ ಗುಡಿಸಲ ಬಳಿಯಲ್ಲಿನ ಬಯಲು ಪ್ರದೇಶದ ತುಂಡು ನೆಲದಲ್ಲಿ ಹಸಿರು ಮೆಣಸಿನಕಾಯಿ ಅಥವಾ ಹೀರೇಕಾಯಿ ಬೆಳೆಯುತ್ತಿದ್ದಾರೆ. “ಇವೆರಡರಲ್ಲಿ ಒಂದು ತರಕಾರಿಯ 20-25 ಕೆ.ಜಿ.ಯಷ್ಟನ್ನು ಪ್ರತಿ ತಿಂಗಳೂ ಬೆಳೆಯುತ್ತೇವೆ” ಎಂಬುದಾಗಿ ಸಂಗೀತ ಮಾಹಿತಿ ನೀಡಿದರು. ಅವರು ಇವುಗಳನ್ನು ಶಿರೂರ್‌ನ ಮಾರುಕಟ್ಟೆಯಲ್ಲಿ ಚಿಲ್ಲರೆ ಮಾರಾಟಗಾರರಿಗೆ ಮಾರುತ್ತಾರೆ. ಫಸಲು ಹಾಗೂ ಬೆಲೆಗೆ ತಕ್ಕಂತೆ ಅವರಿಗೆ ಇದರಿಂದ ತಿಂಗಳೊಂದಕ್ಕೆ 3 ಸಾವಿರದಿಂದ 4 ಸಾವಿರ ರೂ.ಗಳವರೆಗೆ ಆದಾಯವಿದೆ.

ಹೊಗೆಯುಗುಳುತ್ತಿರುವ ಮಣ್ಣಿನ ಒಲೆ, ಬಟ್ಟೆಗಳು, ಪಾತ್ರೆಗಳು, ಹೊದಿಕೆಗಳು, ಹೊಲದ ಪರಿಕರಗಳು ಮತ್ತು ಇತರೆ ಮನೆಬಳಕೆಯ ವಸ್ತುಗಳನ್ನೊಳಗೊಂಡ, ನಾಲ್ಕು ಜನರು ವಾಸಿಸುವ ಅವರ ಚಿಕ್ಕ ಗುಡಿಸಲಿನಲ್ಲಿ, ಅಂತರವನ್ನು (distancing) ಪಾಲಿಸುವುದು ಅಸಾಧ್ಯವೇ ಸರಿ.

'Our settlement doesn’t even have electricity or water', says Santosh; he and Sangeeta were the first to test positive in this Pardhi settlement
PHOTO • Jyoti
'Our settlement doesn’t even have electricity or water', says Santosh; he and Sangeeta were the first to test positive in this Pardhi settlement
PHOTO • Jyoti

‘ನಮ್ಮ ವಾಸಸ್ಥಳದಲ್ಲಿ ವಿದ್ಯುಚ್ಛಕ್ತಿ ಅಥವಾ ನೀರು ಲಭ್ಯವಿಲ್ಲ’ಎನ್ನುತ್ತಾರೆ ಸಂತೋಷ್‌; ಪರ್ಧಿ ವಾಸಸ್ಥಳದಲ್ಲಿ ಕೋವಿಡ್‌ ಪಾಸಿಟಿವ್‌ ಎಂದು ತಿಳಿದುಬಂದವರಲ್ಲಿ ಸಂತೋಷ್‌ ಹಾಗೂ ಸಂಗೀತ ಮೊದಲಿಗರು

ಸಚಿವಾಲಯದ ಮಾರ್ಗದರ್ಶಿ ಸೂಚನೆಗಳು, ‘ಅಡ್ಡ ವಾತಾಯನವನ್ನೊಳಗೊಂಡಂತೆ ಸೂಕ್ತ ವಾತಾಯನ ವ್ಯವಸ್ಥೆಯಿರುವ ಕೊಠಡಿಯಲ್ಲಿ ರೋಗಿಯನ್ನು ಇರಿಸತಕ್ಕದ್ದು ಹಾಗೂ ತಾಜಾ ಗಾಳಿಯು ಒಳಗೆ ಬರಲು ಅನುವಾಗುವಂತೆ ಕಿಟಕಿಗಳನ್ನು ತೆರೆದಿಡಬೇಕು’ ಎನ್ನುತ್ತವೆ.

“ನಮ್ಮ ಗುಡಿಸಲು ಬಹಳ ಚಿಕ್ಕದು. ಕಿಟಿಕಿಯಿಲ್ಲ. ಕೋವಿಡ್‌ ಪಾಸಿಟಿವ್‌ ಎಂದು ತಿಳಿಯುತ್ತಿದ್ದಂತೆ ನಾವು ಮೊದಲು ಮಕ್ಕಳ ಬಗ್ಗೆ ಚಿಂತಿತರಾಗಿದ್ದೆವು” ಎಂದರು ಸುನೀತ. ಏಪ್ರಿಲ್‌ ೨೮ರಂದು ಅವರು ತಮ್ಮಿಬ್ಬರು ಮಕ್ಕಳನ್ನು ಅದೇ ವಾಸಸ್ಥಳದಲ್ಲಿರುವ ಸಂತೋಷ್‌ ಅವರ ಸಹೋದರನ ಮನೆಗೆ ಕಳುಹಿಸಿದರು.

“ನಮ್ಮ ವಾಸಸ್ಥಳದಲ್ಲಿ ವಿದ್ಯಚ್ಛಕ್ತಿ ಅಥವಾ ನೀರು ಸಹ ಲಭ್ಯವಿಲ್ಲ. ಸ್ವಚ್ಛತೆಯನ್ನು ಕಾಯ್ದುಕೊಳ್ಳುವುದು ನಮ್ಮ ನಿಲುಕಿಗೆ ಮೀರಿದ್ದು” ಎನ್ನುತ್ತಾರೆ ಸಂತೋಷ್‌. ಮಾರ್ಗದರ್ಶಿ ಸೂಚನೆಗಳು, “ಕನಿಷ್ಠ 40 ಸೆಕೆಂಡುಗಳವರೆಗೆ ಸಾಬೂನು ಹಾಗೂ ನೀರನ್ನು ಬಳಸಿ ಕೈಯನ್ನು ತೊಳೆದುಕೊಳ್ಳಿ. ಕೈಗಳು ಮಲಿನವಾಗಿಲ್ಲದಿದ್ದಲ್ಲಿ, ಸರಾಯಿ ಆಧಾರಿತ ದ್ರಾವಣದಿಂದ ಕೈಯನ್ನು ಉಜ್ಜಬಹುದು” ಎಂದು ತಿಳಿಸುತ್ತವೆ.

ಈ ಪರಿವಾರವು ಅರ್ಧ ಕಿ.ಮೀ. ದೂರದ ಬಾವಿಯೊಂದರಿಂದ ನೀರನ್ನು ತರಬೇಕು. “ಸದಾ ನೀರಿನ ಕೊರತೆಯಿದ್ದು, ಬೇಸಿಗೆಯಲ್ಲಿ ಇದು ಮಿತಿಮೀರುತ್ತದೆ” ಎನ್ನುತ್ತಾರೆ ಸಂಗೀತ.

ಕೋವಿಡ್‌ನ ಸೌಮ್ಯ ಲಕ್ಷಣಗಳ ಚಿಕಿತ್ಸೆಗಾಗಿ ಅಮೋಲ್‌ ಅವರಂತೆಯೇ ಸಂಗೀತ ಹಾಗೂ ಸಂತೋಷ್‌ ಅವರಿಗೂ 10 ದಿನಗಳ ಔಷಧವನ್ನು ಗೊತ್ತುಮಾಡಲಾಗಿದ್ದು, ಅದಕ್ಕಾಗಿ ಅವರು 10,000 ರೂ.ಗಳನ್ನು ಖರ್ಚುಮಾಡಿದರು. “ನನ್ನ ಬಳಿ 4,000 ರೂ.ಗಳಿದ್ದವು. ಹೀಗಾಗಿ, ಶಿರೂರಿನ ನನ್ನ ಸ್ನೇಹಿತ 10 ಸಾವಿರ ರೂ.ಗಳ ಸಾಲವನ್ನು ಹಾಗೂ, ತುರ್ತು ಸಂದರ್ಭದಲ್ಲಿ ಹೆಚ್ಚುವರಿ ಹಣವನ್ನು ಸಹ ನೀಡಿದ” ಎಂಬುದಾಗಿ ಸಂತೋಷ್‌ ತಿಳಿಸಿದರು.

ಮೇ ೨೨ರವರೆಗೆ ಪುಣೆ ಜಿಲ್ಲೆಯಲ್ಲಿ 992,671 ಕೋವಿಡ್‌ ಪಾಸಿಟಿವ್‌ ಪ್ರಕರಣಗಳು ದಾಖಲಾಗಿದ್ದು (ಮಾರ್ಚ್‌ 2020ರಿಂದ), ಇದರಲ್ಲಿ, 210,046 ಪ್ರಕರಣಗಳು ಗ್ರಾಮೀಣ ಪ್ರದೇಶಗಳಲ್ಲಿ ಕಂಡುಬಂದಿವೆಯಲ್ಲದೆ, 2,755 ಜನರು ಸಾವಿಗೀಡಾಗಿದ್ದಾರೆ ಎಂಬುದಾಗಿ ಜಿಲ್ಲಾ ಪರಿಷತ್ತಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ ಆಯುಷ್‌ ಪ್ರಸಾದ್‌ ಅವರು ನನಗೆ ತಿಳಿಸಿದರು. “ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತದೆ” ಎಂತಲೂ ಅವರು ತಿಳಿಸಿದರು. ಡಾ. ಡಿ. ಬಿ. ಮೋರೆ ಅವರೂ ಸಹ, ಶಿರೂರಿನ ಗ್ರಾಮೀಣ ಭಾಗದಲ್ಲಿ, ದೈನಂದಿನ ಪಾಸಿಟಿವ್‌ ಪ್ರಕರಣಗಳು ಕಡಿಮೆಯಾಗುತ್ತಿವೆ ಎಂದರು.

“ನಮ್ಮ ವಾಸಸ್ಥಳದಲ್ಲಿ ಮತ್ತೊಬ್ಬರು ಕೋವಿಡ್‌ ಪಾಸಿಟಿವ್‌ ಎಂಬುದಾಗಿ ತಿಳಿದುಬಂದಿದೆ” ಎಂದು ಮೇ 22ರಂದು ಅಮೋಲ್‌ ದೂರವಾಣಿಯ ಮೂಲಕ ತಿಳಿಸಿದರು.

ಅವರ ಎರಡು ವಾರಗಳ ಪ್ರತ್ಯೇಕವಾಸವು ಮುಗಿದಿದ್ದು, ಅವರ ತಾಯಿ ಹಾಗೂ ಒಡಹುಟ್ಟಿದವರಿಗೆ ಕೋವಿಡ್‌ನ ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳಲಿಲ್ಲ. ಆದರೆ ಅವರು ನೆರೆಯವರ ಖಾಲಿ ಗುಡಿಸಲಿನಲ್ಲಿನ ತಮ್ಮ ವಾಸವನ್ನು ಮುಂದುವರಿಸಿದ್ದಾರೆ. “ನನ್ನ ಆರೋಗ್ಯವು ಸುಧಾರಿಸುತ್ತಿದೆ ಎನಿಸುತ್ತದೆ. ಆದರೆ ಮುನ್ನೆಚ್ಚರಿಕೆಯಿಂದಾಗಿ ಇನ್ನೂ ಎರಡು ವಾರಗಳವರೆಗೆ ಈ ಗುಡಿಸಲಿನಲ್ಲೇ ವಾಸಿಸುತ್ತೇನೆ” ಎಂದರವರು.

ಸಂಪಾದಕರ ಟಿಪ್ಪಣಿ: ನಾವು ಈ ಲೇಖನವನ್ನು ಮೊದಲು ಪ್ರಕಟಿಸಿದ ನಂತರ, ಅಮೋಲ್‌ ಅವರ ಪರಿವಾರದಿಂದ ಮತ್ತಷ್ಟು ವಿವರಣೆಗಳನ್ನು ಪಡೆಯಲಾಗಿ, ಅಮೋಲ್‌ ಬರ್ಡೆ ಅವರು ಔಷಧಿಗಳಿಗಾಗಿ ವ್ಯಯಿಸಿದ ಹಣ ಮತ್ತು ಅವರ ಪರಿವಾರದ ಆದಾಯದ ಕೆಲವು ವಿವರಗಳನ್ನು ನಾವು ಪರಿಷ್ಕರಿಸಿದ್ದೇವೆ.

ಅನುವಾದ: ಶಂಕರ. ಎನ್. ಕೆಂಚನೂರು

Jyoti

ଜ୍ୟୋତି ପିପୁଲ୍‌ସ ଆର୍କାଇଭ ଅଫ୍‌ ରୁରାଲ ଇଣ୍ଡିଆର ଜଣେ ବରିଷ୍ଠ ସାମ୍ବାଦିକ ଏବଂ ପୂର୍ବରୁ ସେ ‘ମି ମରାଠୀ’ ଏବଂ ‘ମହାରାଷ୍ଟ୍ର1’ ଭଳି ନ୍ୟୁଜ୍‌ ଚ୍ୟାନେଲରେ କାମ କରିଛନ୍ତି ।

ଏହାଙ୍କ ଲିଖିତ ଅନ୍ୟ ବିଷୟଗୁଡିକ Jyoti
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

ଏହାଙ୍କ ଲିଖିତ ଅନ୍ୟ ବିଷୟଗୁଡିକ Shankar N. Kenchanuru