ವಂದನಾ ಕೋಲಿ ಮತ್ತು ಗಾಯತ್ರಿ ಪಾಟೀಲ್ ಅವರು ಸೋಮವಾರ ಬೆಳಗಿನ 7 ಗಂಟೆ ಸುಮಾರಿಗೆ ಸುಡುವ ಬಿಸಿಲಿನಲ್ಲಿ ಮುಂಬೈನ ಸಾಸೂನ್ ಡಾಕ್ ಬಳಿಯ ಜೆಟ್ಟಿಯಲ್ಲಿ ಮೀನುಗಳನ್ನು ಹೊತ್ತು ಬರುವ ದೋಣಿಗಾಗಿ ಆತಂಕದಿಂದ ಕಾಯುತ್ತಿದ್ದರು.
ಅವರು ಕೊಲಾಬಾದ ಕೋಲಿವಾಡ ಪ್ರದೇಶದ ತಮ್ಮ ಮನೆಯಿಂದ ಆ ಬೆಳಿಗ್ಗೆ ಮೀನುಗಳನ್ನು ಕೊಂಡುಕೊಳ್ಳಲು ಢಕ್ಕೆಗೆ ಸುಮಾರು ಎರಡು ಕಿಲೋಮೀಟರ್ ನಡೆದು ಬರುತ್ತಾರೆ. ಇದು ಅವರ ವಾರದ ಐದು ದಿನಗಳ ದಿನಚರಿಯಾಗಿದೆ - ತಾಜಾ ಮೀನುಗಳನ್ನು ಖರೀದಿಸುವುದು ಮತ್ತು ಹತ್ತಿರದ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದು (ಮಂಗಳವಾರ ಮತ್ತು ಗುರುವಾರ, ಅನೇಕ ಜನರು ಮೀನು ತಿನ್ನುವುದಿಲ್ಲ, ಹೀಗಾಗಿ ಆ ದಿನಗಳಲ್ಲಿ ಮಾರಾಟ ಕಡಿಮೆಯಿರುತ್ತದೆ) ಎಂದು ಅವರು ಹೇಳುತ್ತಾರೆ.
53 ವರ್ಷದ ವಂದನಾ ಹೇಳುತ್ತಾರೆ, “ಭಾನುವಾರದಂದು ವ್ಯಾಪಾರ ಒಂದಷ್ಟು ಹೆಚ್ಚಿರುತ್ತದೆ, ಆದರೆ ನಿನ್ನೆಯ ವ್ಯಾಪಾರ ಲಾಭ ತರಲಿಲ್ಲ. ಆ ನಷ್ಟವನ್ನು ಹೇಗಾದರೂ ಸರಿದೂಗಿಸಬೇಕು ಇಲ್ಲದಿದ್ದರೆ ಈ ವಾರದ ರೇಷನ್ ಖರೀದಿಸಲು ಕಷ್ಟವಾಗುತ್ತದೆ.” ಅವರು ಮತ್ತು 51 ವರ್ಷದ ಗಾಯತ್ರಿ, ಇಬ್ಬರೂ ಕೋಲಿ ಸಮುದಾಯಕ್ಕೆ ಸೇರಿದವರು (ಮಹಾರಾಷ್ಟ್ರದಲ್ಲಿ ಹಿಂದುಳಿದ ವರ್ಗದಡಿ ಪಟ್ಟಿ ಮಾಡಲಾಗಿದೆ) ಮತ್ತು ಕಳೆದ 28 ವರ್ಷಗಳಿಂದ ಆತ್ಮೀಯ ಸ್ನೇಹಿತರು.
ಬೋಟ್ಗಳು ಜೆಟ್ಟಿಗೆ ಬರಲಾರಂಭಿಸಿದಂತೆ ಅಲ್ಲಿ ಕಾಯುತ್ತಿದ್ದ ಸುಮಾರು 40-50 ಮಹಿಳೆಯರು ಮೀನು ಖರೀದಿಗೆಂದು, ದೋಣಿ ಮಾಲೀಕರು ಅಥವಾ ಮೀನುಗಾರರಿಗೆ ಮೀನು ಮಾರಾಟ ಮಾಡಲು ಹರಾಜಿಗೆ ಸಹಾಯ ಮಾಡುವ ಮಧ್ಯವರ್ತಿಗಳ/ಹರಾಜುದಾರರ ಸುತ್ತಲೂ ಜಮಾಯಿಸಲು ಪ್ರಾರಂಭಿಸಿದರು. ವಂದನಾ, "200 ರೂಪಾಯಿಗೆ ಕೊಡು (ಚಲ್, ಆತಾ ದೇ 200 ಮಾಧೆ)". ಕೊನೆಗೆ ಒಂದು ಪಾಲು ಸೀಗಡಿಯನ್ನು 240 ರೂಪಾಯಿಗಳಿಗೆ ಖರೀದಿಸಿದರು. ಬೆಳಗಿನ 9 ಗಂಟೆ ಸುಮಾರಿಗೆ, ತೀವ್ರ ಚೌಕಾಸಿಯ ನಂತರ, ಅವರು ಮತ್ತು ಗಾಯತ್ರಿ ಸೀಗಡಿಗಳು, ಸಮುದ್ರ ಸೀಗಡಿ ಮತ್ತು ಬೊಂಬಿಲ್ಗಳನ್ನು ಸಂಗ್ರಹಿಸಿದರು. ದಿನದ ಬೆಲೆಯನ್ನು ಅವಲಂಬಿಸಿ ಅವರು ಪ್ರತಿ ದಿನ 7ರಿಂದ 10 ಕೆಜಿ ಮೀನು ಖರೀದಿಸುತ್ತಾರೆ.
ವಂದನಾ ಗಾಯತ್ರಿಗೆ ಸಂಕೇತ ನೀಡುತ್ತಾಳೆ: " ಘೆತ್ಲಾ, ನಿಘೂಯಾ (ತಗೊಂಡಾಯ್ತು, ಹೋಗೋಣ)."










