"ಸಂಭ್ರಮಾಚರಣೆಗಳಿದ್ದಾಗಲೆಲ್ಲ ನಾನು ಹಾಡುಗಳನ್ನು ಸಂಯೋಜಿಸಲು ಪ್ರಾರಂಭಿಸುತ್ತೇನೆ."
ಕೊಹಿನೂರ್ ಬೇಗಮ್ ಅವರದು ಏಕ ವ್ಯಕ್ತಿ ಬ್ಯಾಂಡ್. ಅವರು ಹಾಡುಗಳಿಗೆ ಟ್ಯೂನ್ ಹಾಕುತ್ತಾರೆ ಮತ್ತು ಧೋಲ್ ನುಡಿಸುತ್ತಾರೆ. "ನನ್ನ ಸ್ನೇಹಿತರು ಒಟ್ಟುಗೂಡುತ್ತಾರೆ ಮತ್ತು ಕೋರಸ್ ಗೆ ಸೇರುತ್ತಾರೆ." ಎನ್ನುವ ಅವರ ಉತ್ಸಾಹಭರಿತ ಹಾಡುಗಳು ಕಾರ್ಮಿಕ, ಕೃಷಿ ಮತ್ತು ದೈನಂದಿನ ಜೀವನದ ದೈನಂದಿನ ಕೆಲಸಗಳನ್ನು ಒಳಗೊಂಡಿವೆ.
ಮುರ್ಷಿದಾಬಾದ್ ಜಿಲ್ಲೆಯಾದ್ಯಂತ ಪ್ರೀತಿಯಿಂದ ಕೊಹಿನೂರ್ ಆಪಾ (ಅಕ್ಕ)ದು ಕರೆಯಲ್ಪಡುವ ಅನುಭವಿ ಕಾರ್ಮಿಕ ಹಕ್ಕುಗಳ ಕಾರ್ಯಕರ್ತರಾದ ಅವರು ಬೆಲ್ದಂಗ-1 ಬ್ಲಾಕಿನ ಜಾನಕಿ ನಗರ ಪ್ರಾಥಮಿಕ್ ವಿದ್ಯಾಲಯ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟದ ಅಡುಗೆಯವರಾಗಿ ದುಡಿಯುತ್ತಿದ್ದಾರೆ.
"ನಾನು ಬಾಲ್ಯದಿಂದಲೂ ಕಷ್ಟದ ದಿನಗಳನ್ನು ನೋಡಿದ್ದೇನೆ. ಆದರೆ ಹಸಿವು ಮತ್ತು ಕಡುಬಡತನಕ್ಕೆ ನನ್ನನ್ನು ಸೋಲಿಸಲಾಗಲಿಲ್ಲ" ಎಂದು ಹಲವಾರು ಹಾಡುಗಳನ್ನು ರಚಿಸಿರುವ 55 ವರ್ಷದ ಅವರು ಹೇಳುತ್ತಾರೆ. ಓದಿ: ಬೀಡಿ ಕಾರ್ಮಿಕರು: ಜೀವನ ಮತ್ತು ಶ್ರಮದ ಹಾಡುಗಳು
ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ, ಹೆಚ್ಚಿನ ಮಹಿಳೆಯರು ತಮ್ಮ ಕುಟುಂಬಗಳನ್ನು ಪೋಷಿಸಲು ಬೀಡಿ ಕಟ್ಟುವ ಕೆಲಸ ಮಾಡುತ್ತಾರೆ. ಇಕ್ಕಟ್ಟಾದ ಭಂಗಿಗಳಲ್ಲಿ ದೀರ್ಘ ಗಂಟೆಗಳ ಕಾಲ ವಿಷಕಾರಿ ವಸ್ತುಗಳನ್ನು ನಿರ್ವಹಿಸುವ ಅವರ ಆರೋಗ್ಯದಲ್ಲಿ ತೀವ್ರ ಮತ್ತು ಬದಲಾಯಿಸಲಾಗದ ಕುಸಿತಕ್ಕೆ ಕಾರಣವಾಗುತ್ತದೆ. ಸ್ವತಃ ಬೀಡಿ ಕಾರ್ಮಿಕರಾಗಿರುವ ಕೊಹಿನೂರ್ ಆಪಾ ಈ ಕಾರ್ಮಿಕರಿಗೆ ಉತ್ತಮ ಕೆಲಸದ ಪರಿಸ್ಥಿತಿಗಳು ಮತ್ತು ಕಾರ್ಮಿಕ ಹಕ್ಕುಗಳಿಗಾಗಿ ಒತ್ತಾಯಿಸುವಲ್ಲಿ ಮುಂಚೂಣಿಯಲ್ಲಿದ್ದಾರೆ. ಇದನ್ನೂ ಓದಿ: ದಟ್ಟ ಹೊಗೆಯಲ್ಲಿ ಉಸಿರುಗಟ್ಟಿದ ಸ್ಥಿತಿಯಲ್ಲಿ ಬೀಡಿ ಕಟ್ಟುವ ಮಹಿಳೆಯರ ಆರೋಗ್ಯ
"ನನ್ನ ಬಳಿ ಭೂಮಿಯಿಲ್ಲ. ಬಿಸಿಯೂಟ ಕಾರ್ಮಿಕಳಾಗಿ ನಾನು ಗಳಿಸುವುದನ್ನು ಹೇಳದಿರುವುದೇ ಒಳ್ಳೆಯದು - ಏಕೆಂದರೆ ಇದು ಕಡಿಮೆ ವೇತನ ಪಡೆಯುವ ದಿನಗೂಲಿ ಕೆಲಸಗಾರರಿಗೂ ಹೋಲಿಕೆಯಾಗುವುದಿಲ್ಲ. ನನ್ನ ವ್ಯಕ್ತಿ [ಪತಿ ಜಮಾಲುದ್ದೀನ್ ಶೇಖ್] ತ್ಯಾಜ್ಯ ಸಂಗ್ರಾಹಕ. ನಾವು ನಮ್ಮ ಮೂವರು ಮಕ್ಕಳನ್ನು [ಕಷ್ಟಪಟ್ಟು] ಬೆಳೆಸಿದ್ದೇವೆ", ಎಂದು ಜಾನಕಿ ನಗರದಲ್ಲಿರುವ ತಮ್ಮ ಮನೆಯಲ್ಲಿ ನಮ್ಮೊಂದಿಗೆ ಮಾತನಾಡುತ್ತಾ ಅವರು ಹೇಳುತ್ತಾರೆ.
ಇದ್ದಕ್ಕಿದ್ದಂತೆ, ಒಂದು ಮಗು ಮೆಟ್ಟಿಲುಗಳ ಮೇಲೆ ತೆವಳುತ್ತಾ ನಾವು ಇರುವ ಟೆರೇಸ್ ಮೇಲೆ ಬಂದಾಗ ಅವರ ಮುಖ ಹೊಳೆಯಿತು. ಅದು ಕೊಹಿನೂರ್ ಆಪಾ ಅವರ ಒಂದು ವರ್ಷದ ಮೊಮ್ಮಗಳು. ಮಗು ತನ್ನ ಅಜ್ಜಿಯ ತೊಡೆಯ ಮೇಲೆ ಜಿಗಿಯುತ್ತದೆ, ಅವಳ ದಾದಿಯ (ತಂದೆಯ ಅಮ್ಮ) ಮುಖದಲ್ಲಿ ದೊಡ್ಡ ನಗುವನ್ನು ತರುತ್ತದೆ.
"ಬದುಕು ಎಂದ ಮೇಲೆ ಹೋರಾಟ ಇದ್ದೇ ಇರುತ್ತದೆ. ನಾವು ಭಯಪಡಬಾರದು. ನಮ್ಮ ಕನಸುಗಳಿಗಾಗಿ ನಾವು ಹೋರಾಡಬೇಕು" ಎಂದು ಅವರು ಸಣ್ಣ ಅಂಗೈಯನ್ನು ತನ್ನ ಕೈಗಳಲ್ಲಿ ಹಿಡಿದುಕೊಂಡು ಹೇಳುತ್ತಾರೆ. "ಇದು ನನ್ನ ಮಗುವಿಗೆ ಸಹ ತಿಳಿದಿದೆ. ಅಲ್ವಮ್ಮಾ?"
"ನಿಮ್ಮ ಕನಸುಗಳೇನು, ಆಪಾ?" ನಾವು ಕೇಳುತ್ತೇವೆ.
"ನನ್ನ ಕನಸುಗಳ ಬಗ್ಗೆ ಗೀತ್ [ಹಾಡು] ಕೇಳಿ" ಎಂದು ಅವರು ಪ್ರತಿಕ್ರಿಯಿಸಿದರು.
ছোট ছোট কপির চারা
জল বেগরে যায় গো মারা
ছোট ছোট কপির চারা
জল বেগরে যায় গো মারা
চারিদিকে দিব বেড়া
ঢুইকবে না রে তোমার ছাগল ভেড়া
চারিদিকে দিব বেড়া
ঢুইকবে না তো তোমার ছাগল ভেড়া
হাতি শুঁড়ে কল বসাব
ডিপকলে জল তুলে লিব
হাতি শুঁড়ে কল বসাব
ডিপকলে জল তুলে লিব
ছেলের বাবা ছেলে ধরো
দমকলে জল আইনতে যাব
ছেলের বাবা ছেলে ধরো
দমকলে জল আইনতে যাব
এক ঘড়া জল বাসন ধুব
দু ঘড়া জল রান্না কইরব
এক ঘড়া জল বাসন ধুব
দু ঘড়া জল রান্না কইরব
চাঁদের কোলে তারা জ্বলে
মায়ের কোলে মাণিক জ্বলে
চাঁদের কোলে তারা জ্বলে
মায়ের কোলে মাণিক জ্বলে
ಪುಟ್ಟ ಪುಟ್ಟ ಸಸಿಗಳು
ಒಣಗುತ್ತಿವೆ ತೋಟದಲ್ಲಿ
ಎಲೆಕೋಸು,
ಹೂಕೋಸು
ಬಾಡಿ ಬಳಲಿ ನಿಂತಿವೆ
ನಿಮ್ಮ ಕುರಿಗಳ ದೂರವಿರಿಸಲು
ತೋಟಕ್ಕೆ ಬೇಲಿ ಕಟ್ಟುವೆ
ತೋಟಕ್ಕೆ ಬೇಲಿ ಕಟ್ಟಿ
ನಿಮ್ಮ ಕುರಿಗಳ ಓಡಿಸುವೆ
ಆನೆಯ ಸೊಂಡಿಲಿನಂತಹ ಡಿಪ್ಕೋಲ್* ತರುವೆ
ನಾನು ನೆಲದಡಿಯಿಂದ ನೀರು ಹರಿಸುವೆ
ಆನೆಯ ಸೊಂಡಿಲಿನಂತಹ ಡಿಪ್ಕೋಲ್* ತರುವೆ
ನಾನು ನೆಲದಡಿಯಿಂದ ನೀರು ಹರಿಸುವೆ
ಓ ನನ್ನ ಮಗನ ಅಪ್ಪನೇ, ನಮ್ಮ ಮಗನೊಡನೆ
ಆಡಿರಿ
ನಾನು ಹೋಗಿ ನೀರು ತರುವೆನು ಡೊಮ್ಕೋಲಿಗೆ ಹೋಗಿ
ಓ ನನ್ನ ಮಗನ ಅಪ್ಪನೇ, ನಮ್ಮ ಮಗನೊಡನೆ
ಆಡಿರಿ
ನಾನು ಹೋಗಿ ನೀರು ತರುವೆನು ಡೊಮ್ಕೋಲಿಗೆ ಹೋಗಿ
ಪಾತ್ರೆಗಳನ್ನು ತೊಳೆಯಲು ಕೊಡ ಬೇಕು ನನಗೆ
ಅಡುಗೆ ಮಾಡಲು ಎರಡು ಮಡಕೆ ಬೇಕು ನನಗೆ
ಪಾತ್ರೆಗಳನ್ನು ತೊಳೆಯಲು ಕೊಡ ಬೇಕು ನನಗೆ
ಅಡುಗೆ ಮಾಡಲು ಎರಡು ಮಡಕೆ ಬೇಕು ನನಗೆ
ಚಂದಿರನ ತೊಟ್ಟಿಲಿನಲ್ಲಿ ಹೊಳೆಯುತಿವೆ ತಾರಕೆ
ತಾಯಿಯ ಮಡಿಲಿನಲ್ಲಿ ಮಗುವೊಂದು ಅರಳಿದೆ
ಚಂದಿರನ ತೊಟ್ಟಿಲಿನಲ್ಲಿ ಹೊಳೆಯುತಿವೆ ತಾರಕೆ
ತಾಯಿಯ ಮಡಿಲಿನಲ್ಲಿ ಮಗುವೊಂದು ಅರಳಿದೆ
* ಡಿಪ್ಕೋಲ್:
ಹ್ಯಾಂಡ್ ಪಂಪ್
** ಡೊಮ್ಕೋಲ್: ಹ್ಯಾಂಡ್-ಪಂಪ್
ಹಾಡಿನ ಋಣ ಗಳು:
ಬಂಗಾಳಿ ಹಾಡು: ಕೊಹಿನೂರ್ ಬೇಗಂ
ಅನುವಾದ: ಶಂಕರ. ಎನ್. ಕೆಂಚನೂರು