ಮೊದಲ ಸಲ ಕೈಯಿಂದ ಎಳೆಯುವ ರಿಕ್ಷಾ ನಡೆಸುವುದನ್ನು ಲಲ್ಲನ್ ಪಾಸ್ವಾನ್ ಕಲಿಯಲು ಪ್ರಯತ್ನಿಸಿದಾಗ, ಇತರ ರಿಕ್ಷಾ ನಡೆಸುವವರು ಪ್ರಯಾಣಿಕರಂತೆ ಹಿಂಭಾಗದಲ್ಲಿ ಕುಳಿತು ಅಭ್ಯಾಸ ಮಾಡಲು ಸಹಾಯ ಮಾಡಿದರು. "ನಾನು ಮೊದಲ ಬಾರಿಗೆ [ರಿಕ್ಷಾದ ಮುಂಭಾಗದ ತುದಿಯನ್ನು] ಮೇಲಕ್ಕೆತ್ತಿ ಅದನ್ನು ಮುಂದೆ ಎಳೆಯಲು ಪ್ರಯತ್ನಿಸಿದಾಗ ಸಾಧ್ಯವಾಗಿರಲಿಲ್ಲ. ನಂತರ ಸರಿಯಾಗಿ ಕಲಿಯಲು ನನಗೆ ಎರಡು ಮೂರು ದಿನಗಳು ಬೇಕಾದವು" ಎಂದು ಅವರು ಹೇಳುತ್ತಾರೆ.
ಕುತ್ತಿಗೆಯ ಸುತ್ತ ಹಾಕಿಕೊಂಡಿದ್ದ ಗಮ್ಚಾದಿಂದ ಬೆವರೊರೆಸಿಕೊಳ್ಳುತ್ತಾ ನಂತರ ತಾನು ರಿಕ್ಷಾ ಉರುಳಿ ಬೀಳದಂತೆ ಬ್ಯಾಲೆನ್ಸ್ ಮಾಡುವುದನ್ನು ಹೇಗೆ ಕಲಿತೆನೆನ್ನುವುದನ್ನು ವಿವರಿಸುತ್ತಾರೆ. "ನೀವು ಹ್ಯಾಂಡಲ್ಗಳನ್ನು [ಮುಂಭಾಗದಲ್ಲಿ] ಪ್ರಯಾಣಿಕರಿಂದ ಸಾಧ್ಯವಾದಷ್ಟೂ ದೂರದಲ್ಲಿ ಹಿಡಿದರೆ, ರಿಕ್ಷಾ ಉರುಳುವುದಿಲ್ಲ" ಎಂದು ಅವರು ಹೇಳುತ್ತಾರೆ. ರಿಕ್ಷಾ ಉರುಳುವುದಿಲ್ಲವೆನ್ನುವ ವಿಶ್ವಾಸ ಮೂಡಲು ಅವರಿಗೆ ಒಂದಷ್ಟು ಸಮಯ ಬೇಕಾಯಿತು. ಆದರೆ ಈಗ "ನನಗೆ ಯಾವುದೇ ರೀತಿಯ ಭಯವಿಲ್ಲ. ಈಗ ಇಬ್ಬರನ್ನು ಕೂರಿಸಿಕೊಂಡು ಸುಲಭವಾಗಿ ಎಳೆಯಬಲ್ಲೆ. ಮೂರು ಜನರನ್ನು ಕೂಡ ಎಳೆಯಬಲ್ಲೆ ಆದರೆ ಮೂರನೇಯವರು ಚಿಕ್ಕವರಾಗಿರಬೇಕು."
ಆ ಆರಂಭಿಕ ಪ್ರಯತ್ನಗಳಿಗೆ ಈಗ ಸರಿಸುಮಾರು 15 ವರ್ಷಗಳಾಗಿವೆ. ಆ ಮೊದಲ ಪಾಠಗಳನ್ನು ಕಲಿಯುವ ಸಮಯದಲ್ಲಿ, ಲಲ್ಲನ್ ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ರಘು ನಾಥಪುರ ಗ್ರಾಮದಿಂದ ನಗರಕ್ಕೆ ಬಂದಿದ್ದರು. ಅವರು 9ನೇ ತರಗತಿಯವರೆಗೆ ಓದು ಮುಗಿಸಿದ್ದರು ಮತ್ತು ಕುಟುಂಬದ ಒಂದು ಬಿಘಾ ಭೂಮಿಯಲ್ಲಿ (ಎಕರೆಗಿಂತ ಕಡಿಮೆ) ಗೋಧಿ ಮತ್ತು ಭತ್ತವನ್ನು ಬೆಳೆಯುತ್ತಿದ್ದರು. ಆದರೆ ಕೃಷಿ ಸಾಕಷ್ಟು ಆದಾಯವನ್ನು ತಂದುಕೊಡಲಿಲ್ಲ, ಹೀಗಾಗಿ ಪಾಸ್ವಾನ್ ಕೆಲಸ ಹುಡುಕಿಕೊಂಡು ಕೋಲ್ಕತ್ತಾಗೆ ಬಂದರು.
ಕೆಲವು ತಿಂಗಳು, ಅವರು ಕಚೇರಿಗಳಲ್ಲಿ ಕೆಲಸ ಹುಡುಕಲು ಪ್ರಯತ್ನಿಸಿದರು. "ನನಗೆ ಯಾವುದೇ ಕೆಲಸ ಸಿಗದಿದ್ದಾಗ, ನನ್ನ ಹಳ್ಳಿಯ ಕೆಲವು ರಿಕ್ಷಾ ಎಳೆಯುವವರು ನನ್ನನ್ನು ಈ ಕೆಲಸಕ್ಕೆ ಪರಿಚಯಿಸಿದರು" ಎಂದು ಅವರು ಹೇಳುತ್ತಾರೆ.
ಸುಮಾರು 40ರ ಹರೆಯದ ಪಾಸ್ವಾನ್, ಈಗ ದಕ್ಷಿಣ ಕೋಲ್ಕತ್ತಾದ ಕಾರ್ನ್ಫೀಲ್ಡ್ ರಸ್ತೆ ಮತ್ತು ಎಕ್ಡಾಲಿಯಾ ರಸ್ತೆಯ ನಡುವಿನಲ್ಲಿರುವ ರಿಕ್ಷಾ ಸ್ಟ್ಯಾಂಡ್ನಿಂದ ಕಾರ್ಯನಿರ್ವಹಿಸುತ್ತಿದ್ದು, ಅಲ್ಲಿ ಸುಮಾರು 30 ಮಂದಿ ರಿಕ್ಷಾ ಎಳೆಯುವವರು ತಮ್ಮ ರಿಕ್ಷಾಗಳೊಂದಿಗೆ ಪ್ರಯಾಣಿಕರಿಗಾಗಿ ಕಾಯುತ್ತಾರೆ. ಮಾರ್ಚ್ನಲ್ಲಿ ಪ್ರಾರಂಭವಾದ ರಾಷ್ಟ್ರವ್ಯಾಪಿ ಕೋವಿಡ್ -19 ಲಾಕ್ಡೌನ್ ಸಮಯದಲ್ಲಿ ಅವರಲ್ಲಿ ಹಲವರು ತಮ್ಮ ಗ್ರಾಮಗಳಿಗೆ ಮರಳಿದರು ಎಂದು ಪಾಸ್ವಾನ್ ಹೇಳುತ್ತಾರೆ. "ಕೊರೋನಾದಿಂದಾಗಿ ಕೆಲಸ ಸರಿಯಾಗಿ ಆಗುತ್ತಿಲ್ಲ. ಅವರು ಇಲ್ಲಿ ಏನು ಮಾಡುತ್ತಾರೆ? ಹೀಗಾಗಿ ಮನೆಗೆ ಹೋದರು.”
ಲಲ್ಲನ್ ಕೊಲ್ಕತ್ತಾದಲ್ಲಿಯೇ ಉಳಿದುಕೊಂಡರು, ಏಕೆಂದರೆ ಅವರು ಊರಿನಲ್ಲಿ ಪಕ್ಕಾ ಮನೆ ನಿರ್ಮಿಸಲು ತನ್ನ ಗ್ರಾಮದ ಮಹಾಜನರಿಂದ 1 ಲಕ್ಷ ರೂಪಾಯಿಗಳನ್ನು ಸಾಲವಾಗಿ ಪಡೆದಿದ್ದಾರೆ. ಅವರು ಹಿಂತಿರುಗಿ ಹೋದರೆ, ಸಾಲ ನೀಡಿದವರು ಹಣ ಹಿಂದಿರುಗಿಸುವಂತೆ ಕೇಳುತ್ತಿದ್ದರು. ಆದರೆ ಸದ್ಯಕ್ಕೆ ಅದನ್ನು ಹಿಂತಿರುಗಿಸುವ ಪರಿಸ್ಥಿತಿಯಲ್ಲಿಲ್ಲ.







