ಶೀಟಿನಲ್ಲಿ ಕಟ್ಟಿದ್ದ ಜೋಪಡಿ ಮನೆಯ ನೆಲದ ಮೇಲೆ ಕುಳಿತುಕೊಂಡು ರುಬ್ಬುವ ಕಲ್ಲಿನಲ್ಲಿ ನರ್ಮದಾಬಾಯಿ ಟೊಮೆಟೋಗಳನ್ನು ರುಬ್ಬುತ್ತಿದ್ದರು. ಅವರ ಗಂಡ ಮೋಹನ್ ಲಾಲ್ ಟೊಮೆಟೋಗಳನ್ನು ಸಣ್ಣಗೆ ಕತ್ತರಿಸಿ ಪಕ್ಕದಲ್ಲಿ ಹಾಸಿದ್ದ ಬಟ್ಟೆಯ ಚೌಕದ ಮೇಲೆ ಹಾಕುತ್ತಿದ್ದರು. “ನಾವು ಇವುಗಳನ್ನು ರುಬ್ಬಿ ಚಟ್ನಿ ಮಾಡ್ಕೋತೀವಿ. ಒಮ್ಮೊಮ್ಮೆ ಹತ್ತಿರದ ಮನೆಯವರು ಅಕ್ಕಿನೋ, ಅನ್ನಾನೋ ಕೊಡ್ತಾರೆ. ಅದೂ ಇಲ್ದೇ ಇದ್ದಾಗ ಹೊಟ್ಟೆಯ ಹುಳಿತೇಗನ್ನು ಕಡಿಮೆ ಮಾಡ್ಕೊಳ್ಳೋಕೆ ಬರೀ ಚಟ್ನೀನೆ ತಿಂತೀವಿ,” ಕಳೆದ ಏಪ್ರಿಲ್ ಕೊನೆಯಲ್ಲಿ ಈ ಕುಟುಂಬವನ್ನು ಭೇಟಿ ಮಾಡಿದ್ದಾಗ ನರ್ಮದಾಬಾಯಿ ಹೇಳಿದ್ದರು. ಜಮ್ಮು ನಗರದ ಪಡುವಣದಲ್ಲಿರುವ ದುರ್ಗಾನಗರದ ಅಂಚಿನಲ್ಲಿರುವ ಮೂರು ಜೋಪಡಿಗಳಲ್ಲಿ ವಾಸವಾಗಿರುವ ಕಾರ್ಮಿಕರಿಗೆ ಹತ್ತಿರದ ಕಟ್ಟಡಗಳಲ್ಲಿ ವಾಸವಿದ್ದ ಜನರು ದಿನಸಿಗಳನ್ನು ಕೊಟ್ಟಿದ್ದರ ಕುರಿತು ಅಂದು ಮಾತಾಡಿದ್ದರು.
ಮಾರ್ಚಿ, 25ರಂದು ದೇಶಾದ್ಯಂತ ಕ್ರೂರ ಲಾಕ್ ಡೌನ್ ಹೇರಲಾಯಿತು. ಫೆಬ್ರವರಿಯವರೆಗೂ ಚಳಿಗಾಲದಲ್ಲಿ ಬಹುತೇಕ ಕೆಲಸವಿಲ್ಲದೇ ಕೂಡಿಟ್ಟುಕೊಂಡಿದ್ದ ಚಿಲ್ಲರೆ ಹಣದಲ್ಲೇ ಕಾಲಹಾಕಿದ್ದ ನರ್ಮದಾಬಾಯಿ ಚಂದ್ರ ಮತ್ತು ಮೋಹನ್ ಲಾಲ್ ಚಂದ್ರ, ಲಾಕ್ ಡೌನ್ ಹೇರಿದ ನಂತರ ಅವಶ್ಯಕ ದಿನಸಿಗಳನ್ನು ಕೊಳ್ಳಲೂ ಪರದಾಡುವಂತಾಯಿತು.
ನಲವತ್ತೆಂಟು ವರ್ಷದ ನರ್ಮದಾಬಾಯಿ ಜಮ್ಮುವಿನಲ್ಲಿ ಕಟ್ಟಡ ಕಾರ್ಮಿಕಳಾಗಿ ದುಡಿಯುತ್ತಾರೆ. ತಿಂಗಳಲ್ಲಿ ಸುಮಾರು 20-25 ದಿನ, ದಿನಕ್ಕೆ 400 ರೂಪಾಯಿಯಂತೆ ಗಳಿಸುತ್ತಾರೆ. ಗಾರೆ ಕೆಲಸ ಮಾಡುವ ಮೋಹನ್ ಲಾಲ್ ಅವರಿಗೆ 52 ವರ್ಷವಾಗಿದ್ದು ದಿನಕ್ಕೆ 600 ರೂಪಾಯಿ ಗಳಿಸುತ್ತಾರೆ. “ಚಳಿಗಾಲ ಕಳೆದು ಇನ್ನೇನು ಫೆಬ್ರವರಿಯ ಕೊನೆಗೆ ಕೆಲಸಗಳು ಸುರುವಾಗ್ಬೇಕು ಅನ್ನೋದ್ರೊಳಗೆ ಲಾಕ್ಡೌನ್ ಮಾಡಿದ್ರು. ಕೈಯಲ್ಲಿದ್ದ ಪುಡಿಗಾಸೂ ಖಾಲಿಯಾಗಿ ಪರದಾಡುವಂತಾಗಿಬಿಟ್ಟೆವು” ಎಂದು ಮೋಹನ್ ಲಾಲ್ ಹೇಳಿದರು.
ಪಕ್ಕದ ಜೋಪಡಿಯಲ್ಲಿ ಮೋಹನ್ ಲಾಲರ ತಮ್ಮ ನಲವತ್ತು ಪ್ರಾಯ ದಾಟಿದ ಅಶ್ವಿನಿ ಕುಮಾರ್ ಚಂದ್ರ ಮತ್ತು ನಲವತ್ತು ವಯಸ್ಸಿನ ರಾಜಕುಮಾರಿ ವಾಸವಿದ್ದಾರೆ. ಅಶ್ವಿನಿ ಕೂಡ ಕಟ್ಟಡ ಕಾರ್ಮಿಕನಾಗಿದ್ದು ದಿನಕ್ಕೆ 600 ರೂಪಾಯಿ ದುಡಿಯುತ್ತಾರೆ. ಕಟ್ಟಡ ನಿರ್ಮಾಣ ಸ್ಥಳದಲ್ಲಿ ಮತ್ತು ಹತ್ತಿರದ ಹೊಲ ಮತ್ತು ತೋಟಗಳಲ್ಲಿ ಕೆಲಸ ಮಾಡುವ ರಾಜಕುಮಾರಿ ದಿನಕ್ಕೆ 400 ರೂಪಾಯಿ ದುಡಿಯುತ್ತಾರೆ.
ಈ ಎರಡೂ ಸಂಸಾರಗಳು ಜಮ್ಮುವಿಗೆ ಬಂದದ್ದು ಛತ್ತೀಸ್ ಗಢದ ಜಂಜಗೀರ್-ಚಂಪಾ ಜಿಲ್ಲೆಯ ನವಗಢ ತಾಲ್ಲೂಕಿನ ಬರ್ಬತಾ ಎನ್ನುವ ಹಳ್ಳಿಯಿಂದ. ನರ್ಮದಾಬಾಯಿ ಮತ್ತು ಮೋಹನ್ ಲಾಲ್ 2002ರ ಭೀಕರ ಬರಗಾಲದ ಕಾರಣದಿಂದ ವಲಸೆ ಬರಬೇಕಾಯಿತು. “ಬರ ನಮ್ಮ ಸರ್ವಸ್ವವನ್ನೂ ನಾಶ ಮಾಡ್ತು. ಜನಗಳ, ಜಾನುವಾರುಗಳ ಪ್ರತಿಯೊಬ್ಬರ ಹೊಟ್ಟೆಪಾಡಿಗೆ ಬೆಂಕಿ ಬಿತ್ತು. ಬಹುತೇಕ ಎಲ್ಲವನ್ನೂ ಕಳ್ಕೊಂಡು ನಾವು ಊರು ಬಿಡಲೇಬೇಕಾಯಿತು.” ಎಂದು ಮೋಹನ್ ಲಾಲ್ ಹೇಳಿದರು.







