ಅಬ್ದುಲ್ ರೆಹಮಾನ್ ಅವರ ಪಾಲಿನ ಜಗತ್ತು ವೃತ್ತಿಯಲ್ಲಿ, ವೈಯಕ್ತಿಕವಾಗಿ ಮತ್ತು ದೈಹಿಕವಾಗಿ ಅಕ್ಷರಶಃ ಕುಗ್ಗಿ ಹೋಗಿದೆ. ನಾಲ್ಕು ಖಂಡಗಳಲ್ಲಿ ಕಾರ್ಮಿಕ ಸಿಬ್ಬಂದಿ ತಂಡಗಳಲ್ಲಿ ಸೇವೆ ಸಲ್ಲಿಸಿದ ವಲಸೆ ಕಾರ್ಮಿಕ, ಇಂದು ಐದು ಕುಟುಂಬ ಸದಸ್ಯರೊಂದಿಗೆ 150 ಚದರ ಅಡಿಯ ಕೋಣೆಗೆ ಸೀಮಿತವಾಗಿದ್ದಾರೆ.
ಈ ಮುಂಬೈ ನಗರದ ಟ್ಯಾಕ್ಸಿ ಚಾಲಕ - ಅವರ ತಂದೆ ಗ್ರಾಮೀಣ ತಮಿಳುನಾಡಿನಿಂದ ಈ ನಗರಕ್ಕೆ ದಶಕಗಳ ಹಿಂದೆ ಬಂದಿದ್ದರು - ಈ ಹಿಂದೆ ಸೌದಿ ಅರೇಬಿಯಾ, ದುಬೈ, ಬ್ರಿಟನ್, ಕೆನಡಾ, ಇಂಡೋನೇಷ್ಯಾ, ಮಲೇಷ್ಯಾ ಮತ್ತು ಆಫ್ರಿಕಾದ ಕೆಲವು ಭಾಗಗಳಲ್ಲಿ ಬುಲ್ಡೋಜರುಗಳು ಮತ್ತು ಕಾರುಗಳನ್ನು ಓಡಿಸಿದ್ದಾರೆ. ಇಂದು, ಅವರನ್ನು ಕುರ್ಚಿಯಲ್ಲಿ ಕೂರಿಸಿಕೊಂಡು, ಮಾಹಿಮ್ ಕೊಳೆಗೇರಿ ಕಾಲೋನಿಯ ಕಿರಿದಾದ ಓಣಿಯಲ್ಲಿ ಹೊತ್ತುಕೊಂಡೇ ಸಿಯೋನ್ನಲ್ಲಿರುವ ಆಸ್ಪತ್ರೆಗೆ ಕರೆದೊಯ್ಯುವ ಟ್ಯಾಕ್ಸಿಯ ಬಳಿಗೆ ಕರೆದೊಯ್ಯಬೇಕಾಗಿದೆ.
ಆಸ್ಪತ್ರೆಗೆ ಹೊರಡುವ ಸಮಯ ಹತ್ತಿರವಾಗುತ್ತಿದ್ದಂತೆ ರೆಹಮಾನ್ ತನ್ನ ಕೋಣೆಯಿಂದ ಕೆಳಗಿಳಿಯುವ ಪ್ರಯತ್ನಕ್ಕೆ ತಯಾರಾಗಲು ಪ್ರಾರಂಭಿಸುತ್ತಾರೆ. ಕೋಣೆಯ ಹೊರಗೆ ಏಣಿ ಮೆಟ್ಟಿಲಿದೆ. ಅವರ ಮಗ ದೇಹದ ಕೆಳಭಾಗವನ್ನು ಹಿಡಿದುಕೊಂಡರೆ, ಅಕ್ಕನ ಮಗ ಅಥವಾ ನರೆಹೊರೆಯವರು ಯಾರಾದರೂ ಬಂದು ಮೇಲ್ಭಾಗವನ್ನು ಹಿಡಿದುಕೊಂಡು ಸಹಾಯ ಮಾಡುತ್ತಾರೆ. ನಂತರ ರೆಹಮಾನ್ ನಿಧಾನವಾಗಿ ಏಣಿ ಮೆಟ್ಟಿಲುಗಳನ್ನು ಇಳಿಯತೊಡಗುತ್ತಾರೆ. ಆ ಕಡಿದಾದ ಒಂಬತ್ತು ಮೆಟ್ಟಿಲುಗಳನ್ನು ಒಂದಾಗಿ ಇಳಿಯುವಾಗಲೂ ಅವರಿಗೆ ಜೀವ ಹೋಗಿ ಜೀವ ಬಂದಂತಾಗುತ್ತದೆ.
ಕೆಳಗಿನ ಇಕ್ಕಟ್ಟಿನ ಓಣಿಯಲ್ಲಿ ಅವರನ್ನು ಎತ್ತಿ ಬಣ್ಣ ಕಿತ್ತುಹೋಗಿರುವ ಪ್ಲಾಸ್ಟಿಕ್ ಚೇರ್ ಒಂದರಲ್ಲಿ ಕೂರಿಸುತ್ತಾರೆ. ಅವರ ಕತ್ತರಿಸಿದ ಕಾಲು ಕುರ್ಚಿಯ ಮೇಲಿರುತ್ತದೆ. ನಂತರ ಅವರ ಮಗ ಮತ್ತು ಇತರ ಇಬ್ಬರು ಸೇರಿ ಅವರನ್ನು ಕಿರಿದಾದ ಉದ್ದನೆಯ ಓಣಿಯ ಮೂಲಕ ಮಾಹಿಮ್ ಬಸ್ ಡಿಪೋ ಬಳಿಯ ರಸ್ತೆಯ ಕಡೆಗೆ ಒಯ್ಯುತ್ತಾರೆ. ಅಲ್ಲಿ, ಅವರು ಜೊತೆಗಿರುವವರ ಸಹಾದೊಡನೆ ಟ್ಯಾಕ್ಸಿಯ ಒಳಗೆ ಸೇರಿಕೊಳ್ಳುತ್ತಾರೆ.
ಇಲ್ಲಿಂದ ಐದು ಕಿಲೋಮೀಟರ್ ದೂರದಲ್ಲಿರುವ ಸಿಯೋನ್ನ ಸರ್ಕಾರಿ ಆಸ್ಪತ್ರೆಗೆ ಹೋಗಲು ವಿಧಿಸಲಾಗುವ ಟ್ಯಾಕ್ಸಿ ಶುಲ್ಕವು ಅವರ ಸಾಮರ್ಥ್ಯಕ್ಕೆ ಮೀರಿದ ಮೊತ್ತವಾಗಿದೆ. ಆದರೂ ಕಳೆದ ವರ್ಷದ ಕೆಲವು ತಿಂಗಳುಗಳ ಕಾಲ ಅವರು ವಾರಕ್ಕೊಮ್ಮೆ ಬ್ಯಾಂಡೇಜ್ ಬದಲಾಯಿಸಿಕೊಳ್ಳಲು ಆಸ್ಪತ್ರೆಗೆ ಹೋಗಬೇಕಿತ್ತು. ಈಗ ಗಾಯ ಸ್ವಲ್ಪ ವಾಸಿಯಾಗಿರುವುದರಿಂದಾಗಿ ಮೊದಲಿನಷ್ಟು ಆಸ್ಪತ್ರೆಗೆ ಹೋಗಬೇಕಿಲ್ಲವಾದರೂ ಆಗಾಗ ಹೋಗಿ ಬರಬೇಕಿರುತ್ತದೆ. ಹಾಗೆ ಪ್ರತಿ ಸಲ ಹೋಗುವಾಗಲೂ ಅವರು ಉತ್ತರ ಮುಂಬೈಯ ಮೋರಿ ರಸ್ತೆಯ ಕಾಲೋನಿಯ ಎರಡು ಮೂರು ಮಹಡಿಗಳ ಕಟ್ಟಡಗಳಿರುವ ಇಕ್ಕಟ್ಟಾದ ಓಣಿಯ ಮೂಲಕ ಕುರ್ಚಿಯ ಮೆರವಣಿಗೆ ಮೂಲಕ ಹೋಗಬೇಕಿರುತ್ತದೆ.
ಹಲವು ವರ್ಷಗಳಿಂದ ಅಬ್ದುಲ್ ರೆಹಮಾನ್ ಅಬ್ದುಲ್ ಸಮದ್ ಶೇಖ್ ಪ್ರತಿದಿನ ಬೆಳಿಗ್ಗೆ ಈ ಓಣಿಯಲ್ಲಿ ತನ್ನ ಪಾರ್ಕಿಂಗ್ ಮಾಡಿದ ಟ್ಯಾಕ್ಸಿಯ ಬಳಿ ಧಾವಿಸಿ 12 ಗಂಟೆಗಳ ಕೆಲಸದ ದಿನವನ್ನು ಪ್ರಾರಂಭಿಸುತ್ತಿದ್ದರು. ಮಾರ್ಚ್ 2020ರಲ್ಲಿ ಲಾಕ್ಡೌನ್ ಪ್ರಾರಂಭವಾಗುವುದರೊಂದಿಗೆ, ಅವರು ಕ್ಯಾಬ್ ಓಡಿಸುವುದನ್ನು ನಿಲ್ಲಿಸಿದರು ಆದರೆ ಕೆಲವೊಮ್ಮೆ " ದೋಸ್ತ್ ಲೋ ಗ್ , " ಸ್ನೇಹಿತರು ಮತ್ತು ಸಹೋದ್ಯೋಗಿಗಳನ್ನು ಭೇಟಿಯಾಗಲು ಪರಿಚಿತ ಚಾಯ್ ಸ್ಟಾಲ್ಗಳಿಗೆ ಹೋಗುತ್ತಿದ್ದರು. ಅವರ ಮಧುಮೇಹವು ಉಲ್ಬಣಗೊಳ್ಳುತ್ತಿತ್ತು, ಅವರು ಅನಾರೋಗ್ಯದಿಂದ ಬಳಲುತ್ತಿದ್ದರು, ಮತ್ತು ಲಾಕ್ಡೌನ್ ಸಡಿಲಗೊಂಡಾಗಲೂ ಕೆಲಸವನ್ನು ಪುನರಾರಂಭಿಸಲು ಸಾಧ್ಯವಾಗಲಿಲ್ಲ. ಆದರೆ ಅವರು ಚಲನಶೀಲರಾಗಿಯೇ ಉಳಿದಿದ್ದರು.
ನಂತರ ಅವರು ತನ್ನ ಕಾಲಿನ ಮೇಲೆ ಪೆನ್ನಿನಿಂದ ಚುಕ್ಕಿಯಿಟ್ಟಂತೆ ಕಾಣುವ ಸಣ್ಣ ಮಚ್ಚೆಯೊಂದನ್ನು ಗಮನಿಸಿದರು. ಒಂದಷ್ಟು ಆಂಟಿ ಬಯೋಟಿಕ್ಸ್ ತೆಗೆದುಕೊಂಡರೆ ಸರಿಯಾಗುತ್ತದೆಂದು ವೈದ್ಯರು ಹೇಳಿದ ಕಾರಣ ರೆಹಮಾನ್ ಆ ಕುರಿತು ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ. “ಆದರೆ ಅದು ಪ್ರಯೋಜನಕ್ಕೆ ಬರಲಿಲ್ಲ,” ಎನ್ನುತ್ತಾರವರು. ಕಾಲ್ಬೆಳರಿನ ಮಧ್ಯದಲ್ಲಿದ್ದ ಅದು ಸ್ಥಿರವಾಗಿ ಬೆಳೆಯತೊಡಗಿತು. “ಕಾಲಿನಲ್ಲಿ ವಿಪರೀತ ನೋವು ಕಾಣತೊಡಗಿತು. ನಡೆಯುವಾಗ ಕಾಲಿಗೆ ಸೂಜಿ ಅಥವಾ ಮೊಳೆಯಿಂದ ಚುಚ್ಚಿದ ಅನುಭವವಾಗುತ್ತಿತ್ತು,” ಎನ್ನುತ್ತಾರವರು.
ಹಲವಾರು ಬಾರಿ ಡಾಕ್ಟರುಗಳ ಭೇಟಿ, ಎಕ್ಸ್-ರೇಗಳು ಮತ್ತು ಪರೀಕ್ಷೆಯ ನಂತರ ಆ ಕಪ್ಪಾದ ಚರ್ಮವನ್ನು ತೆಗೆದುಹಾಕಲಾಯಿತು. ಆದರೆ ಅದರಿಂದಲೂ ಪ್ರಯೋಜನವಾಗಲಿಲ್ಲ. ಅದಾದ ಒಂದು ತಿಂಗಳಿಗೆ, 2021ರ ಆಗಸ್ಟ್ ತಿಂಗಳಿನಲ್ಲಿ ಅವರ ಕಾಲ್ಬೆರಳನ್ನು ಕತ್ತರಿಸಿ ತೆಗೆಯಲಾಯಿತು. ಕೆಲವು ವಾರಗಳ ನಂತರ ಅದರ ಪಕ್ಕದ ಬೆರಳುಗಳನ್ನು ಸಹ ಕತ್ತರಿಸಿ ತೆಗೆಯಲಾಯಿತು. ರಕ್ತಸಂಚಾರ ತೀವ್ರವಾಗಿ ನಿಂತುಹೋದ ಕಾರಣ ಅಕ್ಟೋಬರ್ ತಿಂಗಳ ಸುಮಾರಿಗೆ ರೆಹ್ಮಾನ್ ಅವರ ಬಲಗಾಲಿನ ಅರ್ಧದಷ್ಟನ್ನು ಕತ್ತರಿಸಿ ತೆಗೆಯಲಾಯಿತು. “ಪಾಂಚೋ ಉಂಗ್ಲಿಯಾ ಉಡಾ ದಿಯಾ [ಐದೂ ಬೆರಳುಗಳನ್ನು ಕತ್ತರಿಸಿ ತೆಗೆದರು], ಎಂದು ಕೋಣೆಯಲ್ಲಿನ ಚಾಪೆಯ ಮೇಲೆ ಕುಳಿತಿದ್ದ ಅವರು ನಿಟ್ಟುಸಿರು ಬಿಡುತ್ತಾ ಹೇಳಿದರು.
ಅಂದಿನಿಂದ, ಆಗಾಗ್ಗೆ ಆಸ್ಪತ್ರೆಗೆ ಭೇಟಿ ನೀಡುವುದನ್ನು ಹೊರತುಪಡಿಸಿ, ಅವರ ಜಗತ್ತು ಆ ಸಣ್ಣ ಗಾಳಿಯಿಲ್ಲದ ಮೊದಲ ಮಹಡಿಯ ಕೋಣೆಗೆ ಸೀಮಿತಗೊಂಡಿದೆ. " ಬಸ್, ಅಕೇಲಾ ಪ ಡಾ ರೆಹ್ತಾ ಹೂಂ [ಸುಮ್ನೆ ಒಬ್ಬನೇ ಬಿದ್ದಿರ್ತೀನಿ]," ಎಂದು ಅವರು ಹೇಳುತ್ತಾರೆ. "ಸಮಯವನ್ನು ಕಳೆಯಲು ನನಗೆ ಯಾವುದೇ ಮಾರ್ಗವಿಲ್ಲ. ನಮ್ಮ ಬಳಿ ಟಿವಿ ಇದೆ, ಆದರೆ ಅದನ್ನು ಚಲಾಯಿಸಲು ಸಾಧ್ಯವಾಗುವುದಿಲ್ಲ... ನಾನು ಯೋಚಿಸುತ್ತಲೇ ಇರುತ್ತೇನೆ... ನನ್ನ ಸ್ನೇಹಿತರು, ನಾನು ನನ್ನ ಮಕ್ಕಳಿಗಾಗಿ ಖರೀದಿಸಿದ ವಸ್ತುಗಳನ್ನು ನಾನು ನೆನಪಿಸಿಕೊಳ್ಳುತ್ತೇನೆ... ಆದರೆ ಇದನ್ನೆಲ್ಲಾ ನೆನಪಿಸಿಕೊಂಡು ನಾನೇನು ಮಾಡಲಿ?"
ನಾಲ್ಕು ದಶಕಗಳ ಕಾಲ, ತನ್ನ ಅರ್ಧ ಪಾದವನ್ನು ಕಳೆದುಕೊಳ್ಳುವವರೆಗೆ ಮತ್ತು ಅವರ ಆರೋಗ್ಯ ಕ್ಷೀಣಿಸಲು ಪ್ರಾರಂಭಿಸುವವರೆಗೆ, ರೆಹಮಾನ್ ಅವರು ಜಗತ್ತು ಆ ಕೋಣೆ ಮತ್ತು ಓಣಿಯನ್ನು ದಾಟಿ ನಗರದ ದೂರದ ಮೂಲೆಗಳಿಗೆ ತನ್ನ ಟ್ಯಾಕ್ಸಿ ಹೋಗುವಲ್ಲಿಯವರೆಗೂ ವಿಸ್ತರಿಸಿತ್ತು. 18 ವರ್ಷದವರಾಗಿದ್ದಾಗ, ರೆಹಮಾನ್ ನಗರದ ಬೀದಿಗಳಲ್ಲಿ ಇತರ ಟ್ಯಾಕ್ಸಿ ಚಾಲಕರಿಂದ ಡ್ರೈವಿಂಗ್ ಕಲಿತಿದ್ದರು. ಸ್ವಲ್ಪ ಸಮಯದ ನಂತರ, "30-50 ರೂಪಾಯಿಗಳನ್ನು ಸಂಪಾದಿಸಲು" ಅವರು ಪ್ರತಿದಿನ ಕೆಲವು ಗಂಟೆಗಳ ಕಾಲ ಟ್ಯಾಕ್ಸಿಯನ್ನು ಬಾಡಿಗೆಗೆ ಪಡೆದರು. ಅವರು 20 ವರ್ಷದವರಾಗಿದ್ದಾಗ, ಮುಂಬೈನ ಸಾರ್ವಜನಿಕ ಬಸ್ ಸೇವೆಯಾದ ಬೆಸ್ಟ್ನಲ್ಲಿ ಕ್ಲೀನರ್ ಮತ್ತು ಮೆಕ್ಯಾನಿಕ್ ಸಹಾಯಕರಾಗಿ ಕೆಲಸ ಕಂಡುಕೊಂಡಿದ್ದರು.
ಎಂಟು ವರ್ಷಗಳ ನಂತರ, ಅಂದರೆ 1992ರ ಸುಮಾರಿಗೆ, ಅವರ ಸಂಬಳವು ರೂ. 1,750 ಆಗಿದ್ದಾಗ, ಸೌದಿ ಅರೇಬಿಯಾದಲ್ಲಿ ಒಬ್ಬ ಏಜೆಂಟ್ ಮೂಲಕ ಉದ್ಯೋಗವನ್ನು ಕಂಡುಕೊಂಡರು. "ಆ ದಿನಗಳಲ್ಲಿ ಇದು ತುಂಬಾ ಕಷ್ಟಕರವಾಗಿತ್ತು" ಎಂದು ಅವರು ಹೇಳುತ್ತಾರೆ. "ಅಲ್ಲಿ [ಸೌದಿಯಲ್ಲಿ] ನಾನು ತಿಂಗಳಿಗೆ 2,000-3000 ರೂಪಾಯಿಗಳನ್ನು ಸಂಪಾದಿಸುತ್ತಿದ್ದೆ, ಮತ್ತು ಮನೆಯನ್ನು ನಡೆಸಲು ತಿಂಗಳಿಗೆ 500 ರೂ [ನನ್ನ ಬೆಸ್ಟ್ ಸಂಬಳಕ್ಕಿಂತ ಹೆಚ್ಚು] ಸಹ ಸಾಕಾಗುತ್ತಿತ್ತು."
ರೆಹಮಾನ್ ಅಲ್ಲಿ ಬುಲ್ಡೋಜರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದರು ಮತ್ತು ಕೆಲವೊಮ್ಮೆ ಬಾಡಿಗೆ ಕಾರನ್ನು ಓಡಿಸುತ್ತಿದ್ದರು. "ನನ್ನ ಪ್ರಾಯೋಜಕರು [ಉದ್ಯೋಗದಾತರು] ಉತ್ತಮ ವ್ಯಕ್ತಿಯಾಗಿದ್ದರು" ಎಂದು ಅವರು ಹೇಳುತ್ತಾರೆ, ಅವರು ವಸತಿಯನ್ನು ಒದಗಿಸಿದರು ಮತ್ತು ಇತರ ದೇಶಗಳಲ್ಲಿ ಕೆಲಸ ಮಾಡಲು ತಮ್ಮ ಸಿಬ್ಬಂದಿಯನ್ನು ಕಳುಹಿಸುತ್ತಿದ್ದರು. ಮುಂದೆ, ರೆಹಮಾನ್ ಪ್ರಪಂಚದಾದ್ಯಂತದ ವಿವಿಧ ಕಾರ್ಯಸ್ಥಳಗಳಲ್ಲಿ ನೆಲೆಸಿದ್ದರು.
ಅವರ ತಿರುಗಾಟದ ನೆನಪಿನ ಫೋಟೊಗಳಲ್ಲಿ ಕೆಲವು ಮಸುಕಾಗಿದ್ದರೆ, ಇನ್ನೂ ಕೆಲವು ಸುರುಳಿಯಾಗಿದ್ದವು. ಆ ಚಿತ್ರಗಳನ್ನೆಲ್ಲ ಅವರ ಪತ್ನಿ ತಾಜುನ್ನೀಸಾ ಪ್ಲಾಸ್ಟಿಕ್ ಕವರಿನಿಂದ ಹೊರತೆಗೆದರು. ಆ ಚಿತ್ರಗಳಲ್ಲಿ ಸಂತ್ರಪ್ತ ನಗುವಿನ ರೆಹಮಾನ್ ಕಾರು, ಬುಲ್ಡೋಜರ್ಗಳಿಗೆ ಒರಗಿ, ಅದರಲ್ಲಿ ಕುಳಿತು ಹೀಗೆ ವಿವಿಧ ಭಂಗಿಗಳಲ್ಲಿದ್ದರು. ಇನ್ನೊಂದರಲ್ಲಿ ಸ್ನೇಹಿತರೊಡನೆ ಅಂಗಡಿಯಲ್ಲಿ ಕುಳಿತಿದ್ದರು. ಆಗ ಅವರು ಎತ್ತರಕ್ಕೆ ಕಟ್ಟುಮಸ್ತಾಗಿದ್ದರು. ಆದರೆ ಈಗ 57 ವರ್ಷದವರಾಗಿರುವ ರೆಹಮಾನ್ ಕೇವಲ ಹಾಸಿಗೆಗೆ ಸೀಮಿತರಾಗಿ ದಿನದಿಂದ ದಿನಕ್ಕೆ ಕುಸಿದು ಹೋಗುತ್ತಿದ್ದಾರೆ.
ಈಗ ರೆಹಮಾನ್ ಸದಾ ಮಲಗಿ ಅಥವಾ ಕಾಲ ಕಳೆಯುತ್ತಿರುತ್ತರಾದರೂ, ಬಹುಶಃ ಅವರ ಮನಸ್ಸು ಮಾತ್ರ ಆ ಕಿರಿದಾದ ಹಾದಿಯಲ್ಲಿ ದೂರದ ದೇಶಗಳಿಗೆ ಅಲೆದಾಡುತ್ತಿರುತ್ತದೆ. ಅಲ್ಲಿನ ಜೀವನ ಆರಾಮದಾಯಕವಾಗಿತ್ತು ಎನ್ನುತ್ತಾರೆ ಅವರು. “ನನ್ನ ಕೋಣೆಯಲ್ಲಿ [ಸೌದಿಯಲ್ಲಿ] ಎಸಿ ಇತ್ತು, ನಾನು ಓಡಿಸಿದ ಕಾರಿನಲ್ಲಿ ಎಸಿ ಇತ್ತು. ಊಟಕ್ಕೆ ಅನ್ನ ಮತ್ತು ಅಖ್ಖ ಮುರ್ಗ್ [ಇಡೀ ಕೋಳಿ] ಸಿಗುತ್ತಿತ್ತು. ಯಾವುದೇ ಟೆನ್ಷನ್ ಇರಲಿಲ್ಲ, ನಾನು ಕೆಲಸದಿಂದ ಹಿಂತಿರುಗಿ, ಸ್ನಾನ, ಊಟ, ನಿದ್ರೆ ಮಾಡಿ ನೆಮ್ಮದಿಯಿಂದ ಇರುತ್ತಿದ್ದೆ. ಇಲ್ಲಿ, ನಮ್ಮ ನೆರೆಹೊರೆಯಲ್ಲಿ ನಿರಂತರವಾದ ದೊಡ್ಡ ಸದ್ದುಗಳು ಮತ್ತು ಜಗ್ಡಾ [ಜಗಳಗಳು], ಯಾರೂ ಚುಪ್-ಚಾಪ್ [ಮೌನವಾಗಿ] ಕುಳಿತುಕೊಳ್ಳುವುದಿಲ್ಲ. ಇಲ್ಲಿರುವ ಫ್ಯಾನ್ನ ಗಾಳಿಯು ನನಗೆ ನೋವನ್ನು ನೀಡುತ್ತದೆ, ನನ್ನನ್ನು ನಿರ್ಜೀವಗೊಳಿಸುತ್ತದೆ.”
ರೆಹಮಾನ್ 2013ರಲ್ಲಿ ಭಾರತಕ್ಕೆ ಮರಳಿದರು, ಏಕೆಂದರೆ, ಸೌದಿಯ ಉದ್ಯೋಗದಾತರು 15 ವರ್ಷಗಳಿಗಿಂತ ಹೆಚ್ಚು ಕಾಲ ಇತರ ದೇಶಗಳ ಕಾರ್ಮಿಕರನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಹೇಳುತ್ತಾರೆ. ಅವರು ಅಲ್ಲಿಂದ ಮರುಳುವ ಸಮಯದಲ್ಲಿ ಈಗಿರುವ ಮನೆಯಲ್ಲೇ ವಾಸವಿದ್ದರು. ಅವರ ತಾಯಿ 1985ರಲ್ಲಿ ಅದನ್ನು ಖರೀದಿಸಿದ್ದರು. ಬೆಸ್ಟ್ ಕಂಪನಿಯಲ್ಲಿ ಕೆಲಸಕ್ಕಿದ್ದ ತಂದೆ ಮರಣಹೊಂದಿದಾಗ ಸಿಕ್ಕಿದ 25,000 ರೂಪಾಯಿಗಳ ಪ್ರಾವಿಡೆಂಟ್ ಫಂಡ್ ಹಣವನ್ನು ಸೇರಿಸಿ ಆ ಮನೆಯನ್ನು ಖರೀದಿಸಿದ್ದರು. (ಅಲ್ಲಿಯವರೆಗೆ ಕುಟುಂಬವು ವಡಾಲದಲ್ಲಿನ ಸ್ಟಾಫ್ ಕ್ವಾರ್ಟ್ರಸಿನಲ್ಲಿ ವಾಸವಿತ್ತು. ರೆಹಮಾನ್ ಅಲ್ಲಿಯೇ ಏಳನೇ ತರಗತಿಯವರೆಗೆ ಓದಿದ್ದರು). "ನಾವು ಇಲ್ಲಿಗೆ ಸ್ಥಳಾಂತರಗೊಂಡಾಗ, ಈ ಕೋಣೆಯಲ್ಲಿ ನಾವು 10 ಮಂದಿ ಇದ್ದೆವು" ಎಂದು ಅವರು ಹೇಳುತ್ತಾರೆ. (ಡಿಸೆಂಬರ್ 2021ರವರೆಗೆ, ರೆಹಮಾನ್ ಮತ್ತು ತಾಜುನ್ನೀಸಾ, ಅವರ ನಾಲ್ಕು ಮಕ್ಕಳು ಮತ್ತು ಅವರ ತಾಯಿ ಇದ್ದರು, ಅವರ ತಾಯಿ ಆ ತಿಂಗಳು ನಿಧನರಾದರು.)
ಅವರು ಮಾಹಿಮ್ಗೆ ಸ್ಥಳಾಂತರಗೊಂಡ ನಂತರ, ಅವರ ತಾಯಿ ಮನೆಕೆಲಸಗಾರರಾಗಿ ಕೆಲಸ ಮಾಡಲಾರಂಭಿಸಿದರು (ಅವರ ಸಹೋದರಿಯರೂ ಕೊನೆಗೆ ಇದೇ ಕೆಲಸಕ್ಕೆ ಸೇರಿಕೊಂಡರು). ಮುಂದಿನ ವರ್ಷಗಳಲ್ಲಿ, ಬೀದಿ ವ್ಯಾಪಾರಿಗಳಾಗಿದ್ದ ಇಬ್ಬರು ಸಹೋದರರು ಅಪಘಾತಗಳಲ್ಲಿ ಸಾವನ್ನಪ್ಪಿದರು. ರೆಹಮಾನ್ ಮತ್ತು ಅವರ ಉಳಿದ ಇಬ್ಬರು ಸಹೋದರರು - ಅವರಲ್ಲಿ ಒಬ್ಬರು ಎಸಿ ಮೆಕ್ಯಾನಿಕ್, ಇನ್ನೊಬ್ಬರು ಮರದ ಪಾಲಿಶ್ ಮಾಡುವವರು - ಮಾಹಿಮ್ ಸ್ಲಂ ಕಾಲೋನಿಯಲ್ಲಿ ಮೂರು ಹಂತದ ಕಟ್ಟಡದಲ್ಲಿ ವಾಸಿಸುತ್ತಿದ್ದಾರೆ. ಮಧ್ಯದ ಮಹಡಿಯಲ್ಲಿ ರೆಹಮಾನ್, ಸಹೋದರರು 'ಊಪರ್-ನೀಚೆ', ದಟ್ಟಣೆಯ ಕೋಣೆಗಳಲ್ಲಿ, ಮೇಲೆ ಮತ್ತು ಕೆಳಗೆ ಬದುಕುತ್ತಿದ್ದಾರೆ.
ಅವರ ಸಹೋದರಿಯರು ಮದುವೆಯಾದ ನಂತರ ದೂರ ಹೋದರು. ವಿದೇಶದಲ್ಲಿ ಕೆಲಸ ಮಾಡುವಾಗ ರೆಹಮಾನ್ ವರ್ಷಕ್ಕೊಮ್ಮೆ ಅಥವಾ ಎರಡು ವರ್ಷಗಳಿಗೊಮ್ಮೆ ಭಾರತಕ್ಕೆ ಭೇಟಿ ನೀಡುತ್ತಿದ್ದರು. ಆ ಸಮಯದಲ್ಲಿ, ತನ್ನ ಸಂಬಳ ಮತ್ತು ಉಳಿತಾಯವನ್ನು ಅವರಿಗೆ ಮದುವೆ ಮಾಡಿಸಲು ಕೊಟ್ಟಿದ್ದಾಗಿ (ಮತ್ತು ನಂತರ ಸೊಸೆಯಂದಿರ ಮದುವೆಗೂ)ಒಂದಷ್ಟು ಹೆಮ್ಮೆಯಿಂದ ಹೇಳುತ್ತಾರೆ.
ರೆಹಮಾನ್ ಸೌದಿ ಅರೇಬಿಯಾದಿಂದ ಹಿಂದಿರುಗಿದಾಗ ಅವರ ಬಳಿ ರೂ. 8 ಲಕ್ಷಗಳಷ್ಟು ಉಳಿತಾಯದ ಹಣವಿತ್ತು. ಇದು ಅವರ ಹಲವು ವರ್ಷಗಳ ಉಳಿತಾಯವಾಗಿತ್ತು (ಅವರ ಮಾಸಿಕ ಆದಾಯವು ಸುಮಾರು 18,000 ರೂ.ಗಳಷ್ಟಿತ್ತು, ಅದರಲ್ಲಿ ಹೆಚ್ಚಿನದನ್ನು ಅವರು ಮನೆಗೆ ಕಳುಹಿಸುತ್ತಿದ್ದರು.) ಈ ಉಳಿತಾಯದ ಹೆಚ್ಚಿನ ಭಾಗವನ್ನು ಕುಟುಂಬದ ಮದುವೆಗಳಿಗೆ ಬಳಸಲಾಯಿತು. ಅವರು ಟ್ಯಾಕ್ಸಿ ಪರ್ಮಿಟ್ ಸಹ ಖರೀದಿಸಿದರು, ಮತ್ತು ಬ್ಯಾಂಕಿನಿಂದ 3.5 ಲಕ್ಷ ರೂ. ಸಾಲ ಮಾಡಿ ಸ್ಯಾಂಟ್ರೋ ಕಾರು ಖರೀದಿಸಿದರು. ಅವರೇ ಟ್ಯಾಕ್ಸಿ ಓಡಿಸುತ್ತಿದ್ದರು ಮತ್ತು ಕೆಲವೊಮ್ಮೆ ಬಾಡಿಗೆಗೆ ನೀಡುತ್ತಿದ್ದರು ಮತ್ತು ಆ ಮೂಲಕ ದಿನಕ್ಕೆ 500-600 ರೂ. ದುಡಿಯುತ್ತಿದ್ದರು. ಎರಡು ವರ್ಷಗಳ ನಂತರ, ಕಾರಿನ ನಿರ್ವಹಣಾ ವೆಚ್ಚವನ್ನು ನಿಭಾಯಿಸಲು ಅವರಿಂದ ಸಾಧ್ಯವಾಗಲಿಲ್ಲ, ಜೊತೆಗೆ ಆರೋಗ್ಯದ ಸಮಸ್ಯೆಯೂ ಕಾಡಿದ್ದರಿಂದಾಗಿ, ರೆಹಮಾನ್ ಕ್ಯಾಬ್ ಮಾರಿ ಬಾಡಿಗೆ ಟ್ಯಾಕ್ಸಿ ಓಡಿಸಲು ಪ್ರಾರಂಭಿಸಿದರು, ಅದರಿಂದ ದಿನಕ್ಕೆ ಸುಮಾರು 300 ರೂ. ಗಳಿಸುತ್ತಿದ್ದರು.
ಇದೆಲ್ಲ2015ರಲ್ಲಿ ನಡೆದಿದ್ದು. “ಅಂದಿನಿಂದ ಲಾಕ್ಡೌನ್ ತನಕವೂ [ಮಾರ್ಚ್ 2020] ನಾನು ಇದೇ ಕೆಲಸ ಮಾಡುತ್ತಿದ್ದೆ.” ಎನ್ನುತ್ತಾರವರು. “ನಂತರ ಎಲ್ಲವೂ ನಿಂತುಹೋಯಿತು.” ಆ ಸಮಯದಲ್ಲಿ ಆಗಾಗ ಸ್ನೇಹಿತರನ್ನು ಮಾತನಾಡಿಸಿಕೊಂಡು ಬರಲು ಹೋಗುತ್ತಿದ್ದರಾದರೂ, “ನಾನು ಹೆಚ್ಚಾಗಿ ಮನೆಯಲ್ಲೇ ಇರುತ್ತಿದ್ದೆ,” ಎಂದು ಮುಂದುವರೆದು ಹೇಳುತ್ತಾರೆ. ಕುಟುಂಬವು ಲಾಕ್ಡೌನ್ ಸಮಯದಲ್ಲಿ ಸಂಘಸಂಸ್ಥೆಗಳು ಮತ್ತು ಸ್ಥಳೀಯ ನೀಡಿದ ದಿನಸಿ ವಸ್ತುಗಳಿಂದ ದಿನ ಕಳೆಯಿತು. ಜೊತೆಗೆ ಆಗಾಗ ಸ್ನೇಹಿತರು ಮತ್ತು ಶ್ರೀಮಂತ ಸಂಬಂಧಿಕರಿಂದಲೂ ಕೆಲವು ನೂರು ರೂಪಾಯಿಗಳನ್ನು ಸಾಲವಾಗಿ ಪಡೆಯುತ್ತಿದ್ದರು.
ರೆಹಮಾನ್ ಸೌದಿ ಅರೇಬಿಯಾದಲ್ಲಿದ್ದಾಗ ಮಧುಮೇಹ ಪತ್ತೆಯಾಗಿತ್ತು, ಅವರು ಔಷಧೋಪಚಾರದಲ್ಲಿದ್ದರು, ಆದರೆ ಅವರ ಆರೋಗ್ಯವು ಬಹುತೇಕ ನಿಯಂತ್ರಣದಲ್ಲಿತ್ತು. 2013ರಲ್ಲಿ ಅವರು ಭಾರತಕ್ಕೆ ಹಿಂದಿರುಗಿದ ನಂತರ, ಅದು ಇಳಿಮುಖವಾಗಲು ಪ್ರಾರಂಭಿಸಿತು ಎಂದು ಅವರು ಹೇಳುತ್ತಾರೆ. ಇದರಿಂದಾಗಿ ಅವರು ಸಾಗರೋತ್ತರ ಉದ್ಯೋಗಕ್ಕಾಗಿ ಮತ್ತೆ ಪ್ರಯತ್ನಿಸುವುದನ್ನು ನಿಲ್ಲಿಸಬೇಕಾಯಿತು. ಆದರೆ ಲಾಕ್ಡೌನ್ನೊಂದಿಗೆ ಅವರ ಜಗತ್ತು ನಿಜವಾಗಿಯೂ ಸಣ್ಣದಾಯಿತು. ದೀರ್ಘಾವಧಿಯವರೆಗೆ ಮಲಗಿದ್ದರಿಂದ ಅವರಿಗೆ ಬೆಡ್ ಸೋರ್ಸ್ (ಒಂದೆಡೆ ಮಲಗಿ ಉಂಟಾಗುವ ಹುಣ್ಣು, ಗಾಯ) ಬಂದಿತು. ಆ ಗಾಯಗಳಿಗೂ ಸಿಯಾನ್ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಬೇಕಾಯಿತು.
ಇದಾದ ಕೆಲವೇ ದಿನಗಳಲ್ಲಿ ರೆಹಮಾನ್ ತಮ್ಮ ಬಲಗಾಲಿನ ಮಧ್ಯದ ಬೆರಳಿನ ಮೇಲೆ ಕಪ್ಪು ಚುಕ್ಕೆಯೊಂದು ಮೂಡಿರುವುದನ್ನು ಗಮನಿಸಿದರು.
ಹಲವು ಆಸ್ಪತ್ರೆ ಭೇಟಿಗಳ ನಡುವೆ, ಅವರು ಸ್ಥಳೀಯ ವೈದ್ಯರೊಬ್ಬರನ್ನು ಸಂಪರ್ಕಿಸಿದರು, ಅವರು ತೀವ್ರವಾದ ಮಧುಮೇಹದಿಂದಾಗಿ ರಕ್ತ ಪೂರೈಕೆಗೆ ಅಡಚಣೆಯಾಗಿದೆಯೆಂದು ಹೇಳಿದರು ಮತ್ತುಈ ಅಡಚಣೆಗಳನ್ನು ತೆಗೆದುಹಾಕಲು ಆಂಜಿಯೋಪ್ಲ್ಯಾಸ್ಟಿ ಮಾಡಿಸುವಂತೆ ಸಲಹೆ ನೀಡಿದರು. ಈ ಚಿಕಿತ್ಸೆಯನ್ನು ಅಂತಿಮವಾಗಿ ಸಿಯಾನ್ ಆಸ್ಪತ್ರೆಯಲ್ಲಿ ಅಕ್ಟೋಬರ್ 2021ರಲ್ಲಿ ಮಾಡಿಸಲಾಯಿತು, ಕೆಲವು ವಾರಗಳ ನಂತರ ಅವರ ಅರ್ಧ ಪಾದವನ್ನು ಕತ್ತರಿಸಲಾಯಿತು. "ರಕ್ತದ ಸಂಚಾರ ಸುಧಾರಿಸಿತು, ನೋವು ಕಡಿಮೆಯಾಯಿತು, ಕಪ್ಪು ಬಣ್ಣವು ಮರೆಯಾಯಿತು" ಎಂದು ರೆಹಮಾನ್ ಹೇಳುತ್ತಾರೆ, "ಆದರೂ ಕಾಲಿನಲ್ಲಿ ಸ್ವಲ್ಪ ನೋವು ಮತ್ತು ತುರಿಕೆ ಉಳಿದಿದೆ." ಸ್ಥಳೀಯ ಸಂಸ್ಥೆಯು ಗಾಯದ ಡ್ರೆಸ್ಸಿಂಗ್ ಮಾಡಲು ಅಟೆಂಡೆಂಟ್ಗೆ ವ್ಯವಸ್ಥೆ ಮಾಡಿತು, ಇದರಿಂದ ಆಸ್ಪತ್ರೆಗೆ ಭೇಟಿ ನೀಡುವ ಶ್ರಮ ಒಂದಷ್ಟು ಕಡಿಮೆಯಾಯಿತು.
ತನ್ನ ಕಾಲಿನ ಸಮಸ್ಯೆ ಪರಿಹಾರವಾಗುತ್ತಿದ್ದರಿಂದಾಗಿ ಅವರು ಒಂದಷ್ಟು ನಿರಾಳರಾಗತೊಡಗಿದ್ದರು. ಬದುಕಿನ ಬಗ್ಗೆ ಭರವಸೆ ಮೂಡತೊಡಗಿತ್ತು. (ಈ ನಡುವೆ ಒಂದೆಡೆ ಮಲಗಿದ್ದರಿಂದಾಗಿ ಉಂಟಾಗಿದ್ದ ಹೊಟ್ಟೆಯ ಸಮಸ್ಯೆಯ ಕಾರಣಕ್ಕೆ ಒಂದಷ್ಟು ದಿನಗಳನ್ನು ಕೆಇಎಮ್ ಆಸ್ಪತ್ರೆಯಲ್ಲಿ ಕಳೆದಿದ್ದರು. “ಒಮ್ಮೆ ಸ್ವಲ್ಪ ಚಮ್ಡಾ[ಚರ್ಮ] ಬೆಳೆದರೆ ಈ ತರಹದ ಕಾಲಿಗೆ ಹಾಕಿಕೊಳ್ಳಲು ಬೂಟ್ ಸಿಗುತ್ತದೆ ಎಂದು ಕೇಳಿದ್ದೇನೆ,” ಎಂದರು. ”ಅದರ ಬೆಲೆಯ ಕುರಿತಾಗಿಯೂ ವಿಚಾರಿಸಿದ್ದೇನೆ. ಅದು ಸಿಕ್ಕಿದರೆ ನಾನು ಮತ್ತೆ ನಡೆಯಬಲ್ಲೆ…” ತಾಜುನ್ನೀಸಾ ಒಂದು ವ್ಹೀಲ್ ಛೇರ್ ವ್ಯವಸ್ಥೆ ಮಾಡಿಸಿಕೊಳ್ಳುವ ಯೋಚನೆಯಲ್ಲಿದ್ದಾರೆ.
ತನ್ನ ಕಾಲಿನ ಸಮಸ್ಯೆ ಪರಿಹಾರವಾಗುವಂತೆ ಕಾಣತೊಡಗಿದಾಗ ಅವರಿಗೆ ಮತ್ತೆ ಬದುಕಿನಲ್ಲಿ ಭರವಸೆ ಮೂಡತೊಡಗಿತ್ತು. ತನ್ನ ಅಕ್ಕ ಮತ್ತು ಕುಟುಂಬದ ಇತರರು ವಾಸವಿರುವ ತಮಿಳುನಾಡಿನ ಉಳಂದೂರ್ ಪೇಟೆ ತಾಲೂಕಿನ ಇಳವನರಸುಕೋಟೆಗೆ ಹಿಂದೆ ಹೋಗಿದ್ದ ಕುರಿತಾಗಿ ಹೇಳಿದರು. ಅವರಿಗೆ ಸಂತೋಷ ಕೊಡುತ್ತಿರುವ ವಿಷಯವೆಂದರೆ ಸಹೋದರ ಸಹೋದರಿಯರು ಅವರ ಆರೋಗ್ಯದ ಕುರಿತು ತೋರುತ್ತಿರುವ ಕಾಳಜಿ. ಅವರು ತನ್ನ ಆರೋಗ್ಯದ ಕುರಿತು ಕೇಳಿದಾಗ “ಮನಸ್ಸಿಗೆ ಆಹ್ಲಾದವೆನ್ನಿಸುತ್ತದೆ,” ಎನ್ನುತ್ತಾರವರು.
ಅವರ ದೀರ್ಘಕಾಲದ ಅನಾರೋಗ್ಯವು ಅವರ ಕುಟುಂಬದ ಮೇಲೆ ಆಳವಾದ ಪರಿಣಾಮ ಬೀರಿದೆ. ಲಾಕ್ಡೌನ್ ಅವಧಿಗಳ ನಂತರವೂ ಯಾವುದೇ ಆದಾಯವಿಲ್ಲದೆ, ಅವರು ಇನ್ನೊಬ್ಬರ ಸಹಾಯವನ್ನು ಅವಲಂಬಿಸಿದ್ದಾರೆ. ಇತ್ತೀಚಿನವರೆಗೂ ಗೃಹಿಣಿಯಾಗಿದ್ದ ತಾಜುನಿಸ್ಸಾ, 48, ಸ್ಥಳೀಯ ಬಾಲವಾಡಿಯಲ್ಲಿ ಅಲ್ಪಾವಧಿ ಕ್ಲೀನರ್ ಆಗಿ ತಿಂಗಳಿಗೆ 300 ರೂ. ಸಂಪಾದಿಸುತ್ತಿದ್ದಾರೆ. "ನಾನು ಮನೆಕೆಲಸವನ್ನು ಹುಡುಕಬೇಕಾಗಿದೆ" ಎಂದು ಅವರು ಹೇಳುತ್ತಾರೆ. "ಬಹುಶಃ ನಾವು ನಮ್ಮ ಹಿರಿಯ ಮಗನನ್ನು ಟೈಲರಿಂಗ್ ಕೆಲಸಕ್ಕೆ ಕಳುಹಿಸಲಿದ್ದೇವೆ."
ಅವರ ಹಿರಿಯ ಮಗ ಅಬ್ದುಲ್ ಅಯಾನ್ಗೆ ಈಗ 15 ವರ್ಷ. ಆ ಹುಡುಗ ದೊಡ್ಡವನಾಗಿದ್ದರೆ, "ಅವನನ್ನು ದುಬೈಗೆ ಕೆಲಸಕ್ಕೆ ಕಳುಹಿಸಲು ಪ್ರಯತ್ನಿಸುತ್ತಿದ್ದೆವು" ಎಂದು ರೆಹಮಾನ್ ಹೇಳುತ್ತಾರೆ. "ನಮ್ಮ ಸ್ಥಿತಿ ಭೀಕರವಾಗಿದೆ" ಎಂದು ತಾಜುನಿಸ್ಸಾ ಹೇಳುತ್ತಾರೆ. "ನಾವು [ಲಾಕ್ಡೌನ್ನಿಂದಾಗಿ] ಸುಮಾರು 19,000 ರೂಪಾಯಿಗಳ ಲೈಟ್ ಬಿಲ್ ಬಾಕಿಯಾಗಿದೆ, ಆದರೆ ವಿದ್ಯುತ್ ಇಲಾಖೆಯ ವ್ಯಕ್ತಿ ನಮ್ಮ ಮನೆಗೆ ಭೇಟಿ ನೀಡಿದಾಗ ಮತ್ತು ನಮ್ಮ ಪರಿಸ್ಥಿತಿ ನೋಡಿ ಬಿಲ್ ಪಾವತಿಸಲು ಸಮಯ ನೀಡಿದರು. ಮಕ್ಕಳ ಶಾಲಾ ಶುಲ್ಕವನ್ನು ಪೂರ್ಣವಾಗಿ ಪಾವತಿಸಲಾಗಿಲ್ಲ, ಅದಕ್ಕೂ ಸಮಯ ಕೊಡುವಂತೆ ಕೇಳಿದ್ದೇವೆ. [ಗ್ಯಾಸ್] ಸಿಲಿಂಡರ್ ಮುಗಿಯುತ್ತಿದೆ. ನಮ್ಮ ಮನೆ ಹೇಗೆ ನಡೆಸುವುದು, ನಾವು ನಮ್ಮ ಮಕ್ಕಳನ್ನು ಹೇಗೆ ನೋಡಿಕೊಳ್ಳುವುದು?"
ಅವರ ಕಿರಿಯ ಮಗ, ಎಂಟು ವರ್ಷದ ಅಬ್ದುಲ್ ಸಮದ್ ಮತ್ತು ಕಿರಿಯ ಮಗಳು, 12 ವರ್ಷದ ಅಫ್ಶಾ, ಸುಮಾರು ಎರಡು ವರ್ಷಗಳಿಂದ ಆನ್ಲೈನ್ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗಲಿಲ್ಲ (ಎಲ್ಲಾ ನಾಲ್ಕು ಮಕ್ಕಳನ್ನು ಹತ್ತಿರದ ಶಾಲೆಗಳಿಗೆ ದಾಖಲಿಸಲಾಗಿದೆ). "ಈಗ ತರಗತಿಯಲ್ಲಿ ಏನು ನಡೆಯುತ್ತಿದೆ ಎಂದು ನನಗೆ ಅರ್ಥವಾಗುತ್ತಿಲ್ಲ" ಎಂದು ಇತ್ತೀಚೆಗೆ ಶಾಲೆಗಳು ಪುನರಾರಂಭಗೊಂಡ ನಂತರ ಅಫ್ಶಾ ಹೇಳಿದಳು.
16 ವರ್ಷದ ಹಿರಿಯ ಮಗಳು, 11 ನೇ ತರಗತಿಯಲ್ಲಿ ಓದುತ್ತಿರುವ ದಾನಿಯಾ, ತಮ್ಮ ಸೋದರಸಂಬಂಧಿ ಮತ್ತು ಸ್ನೇಹಿತರ ಮೊಬೈಲ್ ಫೋನುಗಳನ್ನು ಬಳಸಿಕೊಂಡು (ಅಯಾನ್ನಂತೆ) ಓದುವಲ್ಲಿ ಯಶಸ್ವಿಯಾದಳು. ಅವಳು ಬ್ಯೂಟಿಷಿಯನ್ ಆಗಿ ತರಬೇತಿ ಪಡೆಯಲು ಬಯಸುತ್ತಾಳೆ ಮತ್ತು ಈಗಾಗಲೇ ಮೆಹೆಂದಿ ಹಚ್ಚುವುದರಲ್ಲಿ ಪರಿಣತಿ ಹೊಂದಿದ್ದಾಳೆ, ಅದರಿಂದ ಒಂದಷ್ಟು ಗಳಿಸುವ ಭರವಸೆ ಹೊಂದಿರುವುದಾಗಿ ಅವಳು ಹೇಳುತ್ತಾಳೆ.
ರೆಹಮಾನ್ ಯಾವಾಗಲೂ ತನ್ನ ಕುಟುಂಬದ ಕುರಿತು ತೀವ್ರವಾಗಿ ಚಿಂತಿಸುತ್ತಿರುತ್ತಾರೆ. "ನನ್ನ ನಂತರ ಅವರ ಗತಿ ಏನು? ನನ್ನ ಕಿರಿಯ ಮಗನಿಗೆ ಕೇವಲ ಎಂಟು ವರ್ಷ..." ಮತ್ತೊಂದು ನುಜ್ಜುಗುಜ್ಜಾಗಿಸುವ ಮತ್ತು ಅವರನ್ನು ಕಾಡುವ ನಿರಂತರ ಚಿಂತೆಯೆಂದರೆ, ಅವರ ಕೊಳೆಗೇರಿ ಕಾಲೋನಿಯನ್ನು ಒಂದು ದಿನ ಪುನರಾಭಿವೃದ್ಧಿ ಯೋಜನೆಗಾಗಿ ನೆಲಸಮಗೊಳಿಸಬಹುದು ಎಂಬುದು. ಹೊಸದಾಗಿ ಕಟ್ಟಿದಾಗ ಇಡೀ ಕುಟುಂಬಕ್ಕೆ ಒಂದು ಘಟಕ/ಕೋಣೆಯನ್ನು ನೀಡಲಾಗುತ್ತದೆ, ಅವರ ಭಯವೆಂದರೆ, ಅವರು ಮತ್ತು ಅವರ ಸಹೋದರರು ಮೂರು ಕೋಣೆಗಳಲ್ಲಿ ವಾಸಿಸುತ್ತಾರೆ. "ನನ್ನ ಸಹೋದರರು ಇದನ್ನು ಮಾರಿ ಬೇರೆಡೆ ನೆಲೆಸಲು ಬಯಸಿದರೆ ಏನು ಮಾಡುವುದು? ಅವರು ನನ್ನ ಕುಟುಂಬಕ್ಕೆ 3-3 ಲಕ್ಷಗಳನ್ನು ಕೊಟ್ಟು ಇಲ್ಲಿಂದ ಹೊರಡಿ ಎನ್ನಬಹುದು, ಹಾಗೇನಾದರೂ ಆದರೆ ಕುಟುಂಬ ಎಲ್ಲಿಗೆ ಹೋಗುವುದು?" ಎಂದು ಅವರು ಕೇಳುತ್ತಾರೆ.
"ನನ್ನ ಪಾದದ ಬದಲು ದೇಹದ ಬೇರೆ ಯಾವುದೇ ಭಾಗಕ್ಕೆ ಈ ರೀತಿಯಾಗಿದ್ದರೆ, ನನ್ನ ಕೈ ಹೋಗಿದ್ದರೂ ಸಹ, ನಾನು ಕನಿಷ್ಠ ನಡೆದು, ಎಲ್ಲಿಗಾದರೂ ಹೋಗಬಹುದಾಗಿತ್ತು" ಎಂದು ಅವರು ಹೇಳುತ್ತಾರೆ. ಈಗ ನಾನು ಇನ್ನು ಎಷ್ಟು ದಿನ ಬದುಕಿರುತ್ತೇನೆಂದು ನನಗೆ ತಿಳಿದಿಲ್ಲ. ನನ್ನ ಮಕ್ಕಳ ಭವಿಷ್ಯದ ಬಗ್ಗೆ ನನ್ನ ಭರವಸೆಗಳು ಸತ್ತುಹೋಗಿವೆ, ಆದರೆ ನಾನು ಇರುವವರೆಗೂ, ಅವರು ಓದಬೇಕೆಂದು ಬಯಸುತ್ತೇನೆ. ನಾನು ಸಾಲ ಮಾಡುತ್ತೇನೆ ಮತ್ತು ಬೇಡುತ್ತೇನೆ ಮತ್ತು ಹೇಗಾದರೂ ಮಾಡಿ ಇದೆಲ್ಲವನ್ನೂ ನಿರ್ವಹಿಸುತ್ತೇನೆ."
ಫೆಬ್ರವರಿ ಮಧ್ಯಭಾಗದಲ್ಲಿ, ಸಿಯಾನ್ ಆಸ್ಪತ್ರೆಗೆ ಪುನರಾವರ್ತಿತ ಭೇಟಿ ನೀಡಿದಾಗ, ವೈದ್ಯರು ರೆಹಮಾನ್ ಅವರ ಸಕ್ಕರೆ ಮಟ್ಟವು ಅಪಾಯಕಾರಿಯಾಗಿ ಹೆಚ್ಚಾಗಿರುವುದರಿಂದ ಅವರನ್ನು ಅಡ್ಮಿಟ್ ಮಾಡಬೇಕು ಎಂದು ಸಲಹೆ ನೀಡಿದರು. ಅವರು ಅಲ್ಲಿ ಒಂದು ತಿಂಗಳು ಕಳೆದರು ಮತ್ತು ಮಾರ್ಚ್ 12ರಂದು ಮನೆಗೆ ಕಳುಹಿಸಲ್ಪಟ್ಟರು - ಮಧುಮೇಹವು ಈಗಲೂ ನಿಯಂತ್ರಣಕ್ಕೆ ಬಂದಿಲ್ಲ, ಅವರ ಬಲಗಾಲಿನಲ್ಲಿ ಈಗ ಕೇವಲ ಮೂಳೆ ಮತ್ತು ಚರ್ಮಷ್ಟೇ ಇದೆ.
"ಬಲಗಾಲಿನ ಉಳಿದ ಚರ್ಮವು ಮತ್ತೆ ಕಪ್ಪು ಬಣ್ಣಕ್ಕೆ ತಿರುಗುತ್ತಿದೆ, ಮತ್ತು ಅದು ಸಹ ನೋವುಂಟುಮಾಡುತ್ತಿದೆ" ಎಂದು ಅವರು ಹೇಳುತ್ತಾರೆ. "ವೈದ್ಯರು ಇಡೀ ಪಾದವನ್ನು ಕತ್ತರಿಸಬೇಕಾಗಬಹುದು ಎಂದು ಭಾವಿಸುತ್ತಾರೆ."
ಮಾರ್ಚ್ 14 ರ ರಾತ್ರಿ, ನೋವು ಅಸಹನೀಯವಾಯಿತು, "ಅಳುವ ಹಂತಕ್ಕೆ" ತಲುಪಿದ್ದೆ ಎಂದು ರೆಹಮಾನ್ ಹೇಳುತ್ತಾರೆ, ಮತ್ತು ಆಸ್ಪತ್ರೆಯನ್ನು ತಲುಪಲು ಅವರನ್ನು ಮತ್ತೆ ಮಧ್ಯರಾತ್ರಿಗೆ ಕುರ್ಚಿಯ ಮೇಲೆ ಟ್ಯಾಕ್ಸಿಗೆ ಒಯ್ಯಬೇಕಾಯಿತು. ಹೆಚ್ಚಿನ ಪರೀಕ್ಷೆಗಳನ್ನು ನಡೆಸಲಾಗಿದೆ, ಚುಚ್ಚುಮದ್ದು ಮತ್ತು ಔಷಧಿಗಳು ನೋವು ತಿರುಗಿ ಬರುವ ಮೊದಲು ಒಂದಷ್ಟು ಕಡಿಮೆಗೊಳಿಸುತ್ತವೆ. ಮತ್ತೊಂದಷ್ಟು ಸ್ಕ್ಯಾನ್ಗಳು ಮತ್ತು ಪರೀಕ್ಷೆ ಹಾಗೂ ಮತ್ತು ಬಹುಶಃ ಇನ್ನೊಂದು ಶಸ್ತ್ರಚಿಕಿತ್ಸೆಗಾಗಿ ಅವರು ಶೀಘ್ರದಲ್ಲೇ ಆಸ್ಪತ್ರೆಗೆ ಮರಳಬೇಕಾಗುತ್ತದೆ.
ಅವರು ದಿನದಿಂದ ದಿನಕ್ಕೆ ಹೆಚ್ಚು ದಣಿಯುತ್ತಿದ್ದಾರೆ ಮತ್ತು ಖಿನ್ನತೆಗೆ ಒಳಗಾಗುತ್ತಿದ್ದಾರೆ. ಇದೆಲ್ಲವೂ ಬಗೆಹರಿಯುತ್ತದೆ ಎಂದು ಕುಟುಂಬವು ಉತ್ಸಾಹದಿಂದ ಆಶಿಸುತ್ತಿದೆ. "ಇನ್ಶಾ ಅಲ್ಲಾ," ರಹಮಾನ್ಭಾಯ್ ಹೇಳುತ್ತಾರೆ.
ಕವರ್ ಫೋಟೊ
: ಸಂದೀಪ್ ಮಂಡಲ್
ಈ ಸ್ಟೋರಿಯ
ತಯಾರಿಗಾಗಿ ಲಕ್ಷ್ಮಿ ಕಾಂಬ್ಳೆಯವರು ನೀಡಿದ ಉದಾರ ಸಹಾಯ
ಮತ್ತು ಸಮಯಕ್ಕಾಗಿ ಧನ್ಯವಾದಗಳು.
ಅನುವಾದ: ಶಂಕರ. ಎನ್. ಕೆಂಚನೂರು