ಹುಡುಗಿಯರು ತರಕಾರಿಯನ್ನು ಬೆಳೆದರೆ, ಹುಡುಗರಾದ ನಾವು ಅದನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತೇವೆ ಎನ್ನುತ್ತಾನೆ, ಲಕ್ಷ್ಮಿಕಾಂತ ರೆಡ್ಡಿ.
ಆತ್ಮವಿಶ್ವಾಸವನ್ನುಳ್ಳ ಆತ, ವ್ಯವಹಾರ ಕುಶಲಿಯಷ್ಟೇ ಅಲ್ಲದೆ, ವಾಕ್ಪಟುವೂ ಹೌದು. ಪ್ರಧಾನ ಮಂತ್ರಿ, ಪ್ರತಿಪಕ್ಷದ ನಾಯಕ ಹಾಗೂ ಪ್ರಸ್ತುತದಲ್ಲಿ ಆರೋಗ್ಯ ಸಚಿವನ ಸ್ಥಾನಗಳನ್ನು ನಿರ್ವಹಿಸಿದ್ದರಿಂದಾಗಿ ಆತನಿಗೆ ಈ ವಿಶೇಷ ಗುಣಗಳು ಸಿದ್ಧಿಸಿವೆ.
ಲಕ್ಷ್ಮಿಕಾಂತನ ಹೆಸರು ಮನೆಯವರಿಟ್ಟ ಹೆಸರಲ್ಲವೆಂಬುದು ಆಶ್ಚರ್ಯಕರವೇನಲ್ಲ. ಆತನ ವಯಸ್ಸು 17.
ಆತ ಹಾಗೂ ಆತನ ಸಂಗಡಿಗರಾದ ಇತರೆ ಸಚಿವರು, ಸಂಸತ್ತಿನ ಯಶಸ್ಸನ್ನು ಅವಲೋಕಿಸಲು ಅಲ್ಲಿ ನೆರೆದಿರುವ ಶ್ರೋತೃಗಳನ್ನು ಸಂಬೋಧಿಸಿ ಮಾತನಾಡುತ್ತಿದ್ದಾರೆ.
ಅನೇಕ ಪ್ರಮುಖ ಶಾಲೆಗಳಲ್ಲಿನ ಮಾದರಿ ವಿಶ್ವಸಂಸ್ಥೆಯ ಅಣಕು ಪ್ರದರ್ಶನಕ್ಕೆ ವ್ಯತಿರಿಕ್ತವಾಗಿ, ಇಲ್ಲಿನ ಸಂಸತ್ ಸದಸ್ಯರು ಒಂದು ವರ್ಷದಲ್ಲಿ ಕೇವಲ ಒಂದು ಬಾರಿಗಷ್ಟೇ ಸೀಮಿತಗೊಳ್ಳದೆ, ಅನೇಕ ಬಾರಿ ಒಟ್ಟಾಗಿ ಸೇರಬೇಕೆಂದು ನಿರೀಕ್ಷಿಸಲಾಗುತ್ತದೆ. ಇಲ್ಲಿ ಅವರು ವಿಧ್ಯುಕ್ತ ಪೋಷಾಕನ್ನು ಧರಿಸಿ ವಿದೇಶಾಂಗ ನೀತಿಯ ಚರ್ಚೆಯನ್ನೇನು ನಡೆಸುವುದಿಲ್ಲ. ಅಂತೆಯೇ, ಜಾಗತಿಕ ಜ್ವಲಂತ ಸಮಸ್ಯೆಗಳಿಗೆ ಪ್ರತಿಷ್ಠಿತ ಸಲಹೆಯನ್ನೂ ನೀಡುವುದಿಲ್ಲ. ಇದಕ್ಕೆ ಬದಲಾಗಿ, ಶಿಕ್ಷಣ, ಆರೋಗ್ಯ ಮುಂತಾದ ಅನೇಕ ಶಾಖೆಗಳ ಮುಖ್ಯಸ್ಥರಾಗಿ ತಮ್ಮ ದಿನನಿತ್ಯದ ಆಗುಹೋಗುಗಳನ್ನು ಕುರಿತಂತೆ ಅವರು ಕೆಲವು ನಿರ್ಣಯಗಳನ್ನು ಕೈಗೊಳ್ಳುತ್ತಾರೆ. ವಯಸ್ಕರ ಹಸ್ತಕ್ಷೇಪವು ಕನಿಷ್ಠ ಪ್ರಮಾಣದಲ್ಲಿರಬೇಕೆಂಬ ಪ್ರಮುಖವಾದೊಂದು ಪರಿಚ್ಛೇದದಡಿಯಲ್ಲಿ ಇವೆಲ್ಲವನ್ನೂ ನಿರ್ವಹಿಸಲಾಗುತ್ತದೆ.
ಈ ಮಂತ್ರಿವರ್ಯರು ನವದೆಹಲಿಯ ಉನ್ನತ ದರ್ಜೆಯ ಮನೆಗಳಲ್ಲಿ ವಾಸಿಸುವುದಿಲ್ಲ. ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ವೆಪ್ಪನಪಲ್ಲಿ ತಾಲ್ಲೂಕಿನ ಬೆಟ್ಟಗಳ ನಡುವಿನ ನಚಿಕುಪ್ಪಂ ಹಳ್ಳಿಯೇ ಇವರ ವಾಸಸ್ಥಾನ. ಅಲ್ಲದೆ, ತಮ್ಮ ಸರ್ಕಾರಿ ಸಮಸ್ಥಾನಿಕರಂತೆ (ಕೌಂಟರ್‍ಪಾರ್ಟ್) ಇವರೆಂದಿಗೂ ಸುದ್ದಿಗಳನ್ನು ಸೃಷ್ಟಿಸುವುದಿಲ್ಲ.










