ಅಲ್ಲಿ ಹೊಳಪಿನ ಕೆಂಪು ಬಣ್ಣದ ಹಿನ್ನೆಲೆಯಲ್ಲಿ KFC ಎಂದು ಬರೆಯಲಾಗಿತ್ತು.
ಇಲ್ಲಿನ ರುಚಿಕರವಾದ ಆಹಾರಕ್ಕೆ ಕಾರಣರಾದ ವ್ಯಕ್ತಿ ಇತರ ಕೆಎಫ್ಸಿ ಫ್ರಾಂಚೈಸಿಗಳ ದಿವಂಗತ ಕರ್ನಲ್ ಸ್ಯಾಂಡರ್ಸ್ ಅಲ್ಲ, ಅಲ್ಲಿ 'ಕೆ' ಎಂದರೆ 'ಕೆಂಟುಕಿ'. ಈ ಏಕ ಅಂತಸ್ತಿನ ರೆಸ್ಟೋರೆಂಟನ್ನು ಕುಲಮೋರಾದ 32 ವರ್ಷದ ಬಿಮನ್ ದಾಸ್ ನಡೆಸುತ್ತಿದ್ದಾರೆ.
ಅಧಿಕೃತವಾಗಿ ನಾತುನ್ ಕುಲಮೊರಾ ಚಪೋರಿ ಎಂದು ಕರೆಯಲ್ಪಡುವ ಇದು ಅಸ್ಸಾಂನ ಮಜುಲಿ ನದಿ ದ್ವೀಪದಲ್ಲಿರುವ ಒಂದು ಹಳ್ಳಿಯಾಗಿದೆ. ಕುಲಮೊರಾದ ನಿವಾಸಿಗಳಾದ 480 ಜನರು ಮುಖ್ಯವಾಗಿ ರೈತರು ಮತ್ತು ಕೃಷಿ ಕಾರ್ಮಿಕರು (ಜನಗಣತಿ 2011), ಆದರೆ ದ್ವೀಪಕ್ಕೆ ಭೇಟಿ ನೀಡುವ ಸಂದರ್ಶಕರು ಸಹ ತ್ವರಿತ ಊಟಕ್ಕಾಗಿ ಕೆಎಫ್ಸಿಯನ್ನು ಹುಡುಕುತ್ತಾರೆ. ಇದು ಇಲ್ಲಿ ಎಲ್ಲಾ ಪ್ರಯಾಣ ಮಾರ್ಗದರ್ಶಿಗಳ ನಡುವೆ ಹೆಚ್ಚು ರೇಟಿಂಗ್ ಪಡೆದಿದೆ.
"ನಾನು 2017ರಲ್ಲಿ ಕೆಎಫ್ಸಿಯನ್ನು ಪ್ರಾರಂಭಿಸಿದೆ, ಆಗ ಒಂದು ಗಾಡಿಯಲ್ಲಿ ವ್ಯಾಪಾರ ನಡೆಸುತ್ತಿದ್ದೆ" ಎಂದು ಬಿಮನ್ 2022ರ ಮೇ ತಿಂಗಳ ಬೇಸಿಗೆಯ ಬಿಸಿಲಿನ ಮಧ್ಯಾಹ್ನ ಊಟದ ವ್ಯಾಪಾರಕ್ಕಾಗಿ ತಮ್ಮ ರೆಸ್ಟೋರೆಂಟ್ ತೆರೆಯುವಾಗ ಹೇಳಿದರು. ಹೊರಗಿನ ಮತ್ತು ಒಳಗಿನ ಗೋಡೆಗಳಿಗೆ ಕೆಂಪು ಹೊಳೆಯುವ ಕೆಂಪು ಬಣ್ಣವನ್ನು ಬಳಿಯಲಾಗಿದೆ. ಸುಡುವ ಬಿಸಿಲಿನಲ್ಲಿ ಆಡುಗಳು, ಹೆಬ್ಬಾತುಗಳು ಮತ್ತು ಜಾನುವಾರುಗಳು ಹೊರಗೆ ತಿರುಗಾಟದಲ್ಲಿದ್ದವು.











