“ಕೊರೋನಾದಿಂದಾಗಿ ನಾನು ಇಲ್ಲಿಯವರೆಗೆ ದುರ್ಗಾ ವಿಗ್ರಹದ ಯಾವುದೇ ಆರ್ಡರ್ ಗಳನ್ನು ಸ್ವೀಕರಿಸಿಲ್ಲ. ಆದರೆ ಕೆಲವನ್ನು ನಾನೇ ಸ್ವಂತವಾಗಿ ಮಾಡಿದ್ದೇನೆ. ಅವು ಮಾರಾಟವಾಗಬಹುದು ಎಂದುಕೊಂಡಿದ್ದೇನೆ” ಎಂದು ಉತ್ತರ ಕೋಲ್ಕತ್ತಾದ ಕುಂಬಾರರು ಮತ್ತು ವಿಗ್ರಹ ತಯಾರಕರ ಐತಿಹಾಸಿಕ ನೆರೆಹೊರೆಯಾದ ಕುಮಾರ್ತುಲಿಯದಲ್ಲಿರುವ ಕೃಷ್ಣ ಸ್ಟುಡಿಯೊದ ತಪಸ್ ಪಾಲ್ ಹೇಳಿದರು. ”ನೀವು ನನಗೆ ಎಂಟು ವರ್ಷಗಳಿಂದ ಗೊತ್ತು, ನೀವು ಎಂದಾದರೂ ಜೂನ್ ಮಧ್ಯದಲ್ಲಿ ವಿಗ್ರಹಗಳಿಲ್ಲದ ನನ್ನ ಸ್ಟುಡಿಯೋವನ್ನು ನೋಡಿದ್ದೀರಾ?" ಎಂದು ಅವರು ಕೇಳುತ್ತಿದ್ದರು.
ಆಗಲೇ ಕುಮಾರ್ತುಲಿಯಲ್ಲಿನ ಸುಮಾರು 450 ಸ್ಟುಡಿಯೋಗಳು (ಸ್ಥಳೀಯ ಕುಶಲಕರ್ಮಿಗಳ ಸಂಘದಲ್ಲಿ ನೋಂದಾಯಿಸಲ್ಪಟ್ಟಿವೆ) ಬಿದಿರು ಮತ್ತು ಒಣಹುಲ್ಲಿನ ಚೌಕಟ್ಟುಗಳಿಂದ ತುಂಬಿ, ಅದರ ಮೇಲೆ ಜೇಡಿಮಣ್ಣನ್ನು ಹಾಕಿ ಪ್ರತಿಮೆಗೆ ರೂಪ ನೀಡಿವೆ. ಅಕ್ಟೋಬರ್‌ನಲ್ಲಿ ದುರ್ಗಾ ಪೂಜೆ ಆಚರಣೆಗಳು ಪ್ರಾರಂಭವಾಗುವ ಕೆಲವೇ ವಾರಗಳ ಮೊದಲು ವಿಗ್ರಹಗಳಿಗೆ ಬಣ್ಣ ಮತ್ತು ಆಭರಣಗಳಿಂದ ಅಲಂಕರಿಸಲಾಗುತ್ತದೆ.(ನೋಡಿ: Journey through Kumartuli)
ಪ್ರತಿ ವರ್ಷವೂ ಈ ಎಲ್ಲ ಸಿದ್ಧತೆಗಳು ಮಾರ್ಚ್/ಏಪ್ರಿಲ್‌ನಲ್ಲಿ ಪ್ರಾರಂಭವಾಗುತ್ತವೆ. ಆದರೆ ಈ ವರ್ಷ ಕೋವಿಡ್ -19 ಸಾಂಕ್ರಾಮಿಕದಿಂದಾಗಿ ಕುಮಾರ್ತುಲಿಯಲ್ಲಿನ ಪೂರ್ವ ನಿರ್ಧರಿತ ವೇಳಾಪಟ್ಟಿಗೆ ಅಡ್ಡಿಯಾಗಿದೆ. "ಇದು ನಮಗೆ ಭೀಕರ ವರ್ಷವಾಗಿದೆ. ಏಪ್ರಿಲ್‌ನಿಂದ ನಮ್ಮ ನಷ್ಟಗಳು ಹೆಚ್ಚಾಗತೊಡಗಿದವು. ಮೊದಲನೆಯದಾಗಿ, ಅನ್ನಪೂರ್ಣ ದೇವಿಯಂತಹ ಮನೆಯ ದೇವತೆಗಳ ವಿಗ್ರಹಗಳು ಬಂಗಾಳಿ ಹೊಸ ವರ್ಷದಲ್ಲಿ [ಪೊಯಿಲಾ ಬೈಸಾಖ್, ಈ ವರ್ಷ ಏಪ್ರಿಲ್ 15ರಂದು] ಮಾರಾಟವಾಗದೆ ಹಾಗೆಯೇ ಉಳಿದಿವೆ. ಇಡೀ ಕಾಲೊನಿ ಸುಮಾರು 100 ವಿಗ್ರಹಗಳನ್ನು ತಯಾರಿಸಿತ್ತು, ಆದರೆ ಅವುಗಳಲ್ಲಿ ಕೇವಲ 8-10 ವಿಗ್ರಹಗಳು ಮಾತ್ರ ಮಾರಾಟವಾಗಿವೆ. ಇದರಿಂದಾಗಿ ಇದರ ಮೇಲಿನ ಹೂಡಿಕೆಯೆಲ್ಲ ಈಗ ನಷ್ಟವಾಗಿದೆ. ಇನ್ನೊಂದೆಡೆಗೆ ದುರ್ಗಾಮೂರ್ತಿಗಳಿಗೆ ಇನ್ನೂ ಯಾವುದೇ ಆರ್ಡರ್ ಕೂಡ ಬಂದಿಲ್ಲ' ಎಂದು ಕಳೆದ 20 ವರ್ಷಗಳಿಂದ ಪ್ರತಿಮೆಗಳ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಮೃತ್ಯುಂಜಯ್ ಮಿತ್ರ ಅವರು ಹೇಳುತ್ತಿದ್ದರು.
ಮೃತ್ಯುಂಜಯ್ ಮಿತ್ರರಂತೆ, ಇಲ್ಲಿನ ಕುಂಬಾರರು 18ನೇ ಶತಮಾನದಿಂದಲೂ ದುರ್ಗಾ ದೇವಿಯ ಜೇಡಿಮಣ್ಣಿನ ವಿಗ್ರಹಗಳನ್ನು ತಯಾರಿಸುತ್ತಿದ್ದಾರೆ, ಕೋಲ್ಕತ್ತಾದ ಶ್ರೀಮಂತ ಭೂಮಾಲೀಕರು ಮತ್ತು ವ್ಯಾಪಾರಿಗಳು ತಮ್ಮ ಮನೆಗಳಲ್ಲಿ ದುರ್ಗಾ ಪೂಜೆ ಆಚರಣೆಗಳಿಗಾಗಿ ಕುಂಬಾರರನ್ನು ನೇಮಿಸಿಕೊಳ್ಳಲು ಪ್ರಾರಂಭಿಸಿದರು. ಈ ಕುಶಲಕರ್ಮಿಗಳಲ್ಲಿ ಹೆಚ್ಚಿನವರು ನಾಡಿಯಾ ಜಿಲ್ಲೆಯ ಕೃಷ್ಣನಗರ ಪಟ್ಟಣದವರು. ನಗರದಲ್ಲಿ ಅವರ ಕಲೆಗೆ ಬೇಡಿಕೆ ಹೆಚ್ಚಾದಾಗ, ಈ ಕುಶಲಕರ್ಮಿಗಳು ಉತ್ತರ ಕೋಲ್ಕತ್ತಾದ ಕಡೆಗೆ ಹೂಗ್ಲಿ ನದಿಯ ಸಮೀಪವಿರುವ ಕುಮಾರ್ತುಲಿಯಲ್ಲಿ ವಲಸೆ ಬಂದು ನೆಲೆಸಿದರು.
ಜೂನ್ 18ರಂದು ನಾನು ಈ ಹೆಗ್ಗುರುತಾಗಿರುವ ಕುಂಬಾರರ ಪ್ರದೇಶಕ್ಕೆ ತಲುಪಿದಾಗ, ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್ ಮೇ 20ರಂದು ಅಂಫಾನ್ ಚಂಡಮಾರುತವು ನಗರಕ್ಕೆ ಅಪ್ಪಳಿಸಿದ್ದರ ಪರಿಣಾಮವಾಗಿ ಬಿದ್ದಿರುವ ಮರವನ್ನು ತೆರವುಗೊಳಿಸುತ್ತಿತ್ತು. ಇಲ್ಲದಿದ್ದರೆ ಜನ ಜಂಗುಳಿ ಪ್ರದೇಶದಲ್ಲಿ ನೀರವ ಮೌನ ಮತ್ತು ಬಹುತೇಕ ಕುಶಲಕರ್ಮಿಗಳ ಸ್ಟುಡಿಯೋಗಳು ಹಾಗೆಯೇ ಮುಚ್ಚಲ್ಪಟ್ಟಿರುತ್ತಿದ್ದವು. ತೆರೆದಿದ್ದ ಕೆಲವು ಸ್ಟುಡಿಯೋಗಳಲ್ಲಿ ಈಗ ವಿಗ್ರಹ ತಯಾರಿಸುವ ಯಾವುದೇ ಕೆಲಸ ನಡೆಯುತ್ತಿಲ್ಲ. ಚೂರಾದ ಮತ್ತು ಅಪೂರ್ಣಗೊಂಡಿರುವ ದೇವತೆಗಳ ಪ್ರತಿಮೆಗಳು ಬೀದಿಗಳಲ್ಲಿ ಹಾಗೆಯೇ ಬಿದ್ದಿವೆ. ಇದು ಕಳೆದ ವರ್ಷಗಳ ಯಾವುದೇ ಜೂನ್‌ಗಿಂತ ಭಿನ್ನವಾಗಿತ್ತು. ಇನ್ನೊಂದೆಡೆಗೆ ವಿಗ್ರಹಗಳಿಗೆ ಆಭರಣಗಳನ್ನು ಮಾರಾಟ ಮಾಡುವ ಅಂಗಡಿಗಳು ತೆರೆದಿದ್ದರೂ ಅಲ್ಲಿ ಗ್ರಾಹಕರಿಲ್ಲ.
ಕುಮಾರ್ತುಲಿಯಲ್ಲಿ ನಾನು ಭೇಟಿಯಾದ ಕುಶಲಕರ್ಮಿಗಳು ತಮ್ಮ ಸಾಮೂಹಿಕ ವ್ಯವಹಾರವು 2019 ರಲ್ಲಿ 40 ಕೋಟಿ ರೂ.ಗಳಷ್ಟಿತ್ತು ಎಂದು ಹೇಳುತ್ತಿದ್ದರು. ಇದರಲ್ಲಿ ಪ್ರಮುಖ ಭಾಗವು ದುರ್ಗಾ ವಿಗ್ರಹಗಳ ಮಾರಾಟದಿಂದ ಬರುತ್ತದೆ. ಇದಲ್ಲದೆ ಅವರು ಇತರ ದೇವತೆಗಳ ಪ್ರತಿಮೆಗಳನ್ನು ಸಹ ತಯಾರಿಸುತ್ತಾರೆ ಮತ್ತು ಕೆಲವೊಮ್ಮೆ ಚಲನಚಿತ್ರಗಳಿಗೆ ಮಣ್ಣಿನ ಆಕೃತಿಗಳನ್ನು ಮಾಡಲು ಅವರನ್ನು ನಿಯೋಜಿಸಲಾಗುತ್ತದೆ. ಇನ್ನೂ ಅವರಲ್ಲಿ ಕೆಲವರು ಮಣ್ಣಿನ ಪಾತ್ರೆಗಳು ಮತ್ತು ಗೃಹೋಪಕರಣಗಳನ್ನು ಸಹ ತಯಾರಿಸುತ್ತಾರೆ.ಕೋವಿಡ್ -19 ಸಾಂಕ್ರಾಮಿಕದಿಂದಾದ ಲಾಕ್ ಡೌನ್ ಗೂ ಮೊದಲು ಅವರು ಈ ವರ್ಷ ಮಾರಾಟದಲ್ಲಿ ಬೆಳವಣಿಗೆಯನ್ನು ನಿರೀಕ್ಷಿಸಿದ್ದರು, ಆದರೆ ಈಗ ಎಲ್ಲವೂ ಕೊರೊನಾದಿಂದಾಗಿ ಸ್ಥಗಿತಗೊಂಡಿದೆ.














