ಇಲ್ಲ, ಕಿಶನ್ ಜೀ ಲಾರಿಯ ಹಿಂಬಾಗಿಲು ಅಥವಾ ಗೇಟ್ ಅಥವಾ ಆ ಭಾಗವನ್ನು ಏನೆಂದು ಕರೆಯುತ್ತಾರೋ ಅದರ ಮೂಲಕ ಲಾರಿಯ ಒಳಗೆ ಇಣುಕಿ ನೋಡಲು ಪ್ರಯತ್ನಿಸುತ್ತಿರಲಿಲ್ಲ. ಉತ್ತರಪ್ರದೇಶದ ಮೊರಾದಾಬಾದ್ ನಗರದ ಹೊರಗಿರುವ ಈ ಚಿಕ್ಕ ಬಸ್ತಿಯಲ್ಲಿನ ಕೆಲವು ಗೋದಾಮುಗಳಲ್ಲಿ ಸರಂಜಾಮುಗಳನ್ನು ಇಳಿಸಿ ರಸ್ತೆಯಲ್ಲಿ ನಿಂತಿದ್ದ ಈ ಲಾರಿ ಖಾಲಿಯಿತ್ತು.
ಕಿಶನ್ ಜೀ ತನ್ನ 70ರ ಪ್ರಾಯದಲ್ಲಿರುವ ಬೀದಿ ಬದಿ ವ್ಯಾಪಾರಿ. ಅವರು ಕಡಲೆಕಾಯಿ ಮತ್ತು ಮನೆಯಲ್ಲಿ ತಯಾರಿಸಿದ ಕೆಲವು ಕುರುಕಲು ತಿಂಡಿಯನ್ನು ಸಣ್ಣ ಗಾಡಿಯೊಂದರಲ್ಲಿ ಮಾರುತ್ತಾರೆ. "ಮನೆಯಲ್ಲಿ ಏನೋ ಮರೆತು ಬಂದಿದ್ದೆ ಅದನ್ನು ತರಲೆಂದು ಮನೆಗೆ ಹೋಗಿ ಬರುವಷ್ಟರಲ್ಲಿ ಈ ದೊಡ್ಡ ದೊಡ್ಡ ಲಾರಿಯು ನನ್ನ ಅರ್ಧ ಗಾಡಿಯ ಮೇಲೆ ಕುಳಿತಿದೆ." ಎಂದು ಅವರು ನಮಗೆ ಹೇಳಿದರು.
ಲಾರಿ ಚಾಲಕ ತನ್ನ ಲಾರಿಯನ್ನು ಹಿಂದಕ್ಕೆ ಮುಂದಕ್ಕೆ ಚಲಾಯಿಸಿ ಅಲ್ಲಿ ಪಾರ್ಕ್ ಮಾಡಿದ್ದ. ತನ್ನ ಲಾರಿ ಗಾಡಿಯ ಮೇಲೆ ನಿಂತಿರುವುದನ್ನೂ ಗಮನಿಸಿದ ಅವನು ಮತ್ತು ಕ್ಲೀನರ್ ಅಲ್ಲಿಂದ ಊಟಕ್ಕೆಂದೋ ಅಥವಾ ಸ್ನೇಹಿತರ ಭೇಟಿಗೆಂದೋ ತೆರಳಿದ್ದರು. ಆದರೆ ಲಾರಿ ಕಿಶನ್ ಜೀ ಅವರ ಗಾಡಿಯ ಅರ್ಧ ಭಾಗಕ್ಕಿಂತ ಹೆಚ್ಚು ಲಾರಿಯಡಿಯಿತ್ತು. ಅದನ್ನು ಹೊರತೆಗೆಯಲು ಕಿಶನ್ ಜೀ ಹಲವು ಪ್ರಯತ್ನ ಮಾಡಿದರು. ಆದರೆ ಅದು ಸಾಧ್ಯವಾಗಲಿಲ್ಲ. ಕಣ್ಣು ಸರಿಯಾಗಿ ಕಾಣದ ಅವರು ಲಾರಿಯ ಅಡಿಭಾಗವನ್ನು ಇಣುಕಿ ನೋಡುತ್ತಿದ್ದರು. ಆ ಮೂಲಕ ಅವರು ತನ್ನ ಗಾಡಿ ಎಲ್ಲಿ ಸಿಕ್ಕಿಕೊಂಡಿದೆ ಮತ್ತು ಹೇಗೆ ಹೊರ ತೆಗೆಯಬಹುದು ಎನ್ನುವುದನ್ನು ತಿಳಿಯಲು ಪ್ರಯತ್ನಿಸುತ್ತಿದ್ದರು.
ಚಾಲಕ ಮತ್ತು ಆತನ ಸಹಾಯಕ ಎಲ್ಲಿ ಹೋಗಿರಬಹುದೆಂದು ನಾವು ಯೋಚಿಸುತ್ತಿದ್ದೆವು. ಕಿಶನ್ ಜೀಯವರಿಗೂ ಅವರು ಎಲ್ಲಿ ಹೋಗಿದ್ದಾರೆಂದು ತಿಳಿದಿರಲಿಲ್ಲ. ಆದರೆ ಅವರು ಕ್ಲೀನರ್ ಮತ್ತು ಚಾಲಕನ ಪೂರ್ವಜರನ್ನೆಲ್ಲ ನೆನಪಿಸಿಕೊಳ್ಳುತ್ತಾ ಅವರಿಬ್ಬರ ಜನ್ಮ ಜಾಲಾಡುತ್ತಿದ್ದರು. ವಯಸ್ಸು ಅವರಲ್ಲಿನ ವರ್ಣರಂಜಿತ ಶಬ್ಧಕೋಶವನ್ನು ಒಂದಿಷ್ಟೂ ಮಸುಕಾಗಿಸಿರಲಿಲ್ಲ.
ದೇಶದೆಲ್ಲೆಡೆ ಇಂತಹ ತಳ್ಳು ಗಾಡಿಗಳಲ್ಲಿ ವ್ಯಾಪಾರ ಮಾಡುವ ಇಂತಹ ಸಾವಿರಗಟ್ಟಲೆ ಕಿಶನ್ ಜೀ ಗಳಿದ್ದಾರೆ. ಈ ದೇಶದಲ್ಲಿ ಎಷ್ಟು ಕಿಶನ್ಜೀಗಳಿದ್ದಾರೆನ್ನುವ ಯಾವುದೇ ಅಧಿಕೃತ ಅಂದಾಜು ಇಲ್ಲ. ನಿಸ್ಸಂಶಯವಾಗಿ, 1998ರಲ್ಲಿ ಈ ಫೋಟೋ ತೆಗೆದಾಗಲೂ ನನಗೆ ತಿಳಿದಿರಲಿಲ್ಲ. "ಈಗ ನನ್ನ ವಯಸ್ಸಿನ ಕಾರಣಕ್ಕೆ ಬಹಳ ದೂರದವರೆಗೆ ಗಾಡಿ ತಳ್ಳಿಕೊಂಡು ಹೋಗುವುದು ಕಷ್ಟ. ಹಾಗಾಗಿ ನಾನು ಇಲ್ಲೇ ಸುತ್ತಲಿನ ಮೂರ್ನಾಲ್ಕು ಬಸ್ತಿಗಳಲ್ಲಷ್ಟೇ ವ್ಯಾಪಾರ ಮಾಡುತ್ತೇನೆ." ಎಂದು ಅವರು ಹೇಳಿದ್ದರು. "ಈಗೀಗ 80 ರೂಪಾಯಿ ಸಿಕ್ಕಿದರೆ ಅದು ನನ್ನ ಮಟ್ಟಿಗೆ ಒಳ್ಳೆಯ ದಿನ" ಎನ್ನುವುದು ಅವರ ಭಾವನೆ.
ಗಾಡಿಯನ್ನು ಅದು ಸಿಕ್ಕಿಕೊಂಡಿದ್ದ ಜಾಗದಿಂದ ಬಿಡಿಸಲು ನಾವು ಸಹಾಯ ಮಾಡಿದೆವು. ಅವರು ತನ್ನ ಗಾಡಿಯನ್ನು ಮುಂದಕ್ಕೆ ತಳ್ಳಿಕೊಂಡು ಹೋಗುವುದನ್ನು ನೋಡುತ್ತಾ ಅವರಿಗೆ ಇಂದು 80 ರೂಪಾಯಿ ದೊರೆತು ಈ ದಿನವೂ ಅವರ ಪಾಲಿನ ಒಳ್ಳೆಯ ದಿನವಾಗಿರಲೆಂದು ಹಾರೈಸಿದೆವು.
ಅನುವಾದ: ಶಂಕರ. ಎನ್. ಕೆಂಚನೂರು