ನಾನು ಬೆಳೆದ ಮುಂಬೈನ ಕೊಳೆಗೇರಿಯಲ್ಲಿನ ನಮ್ಮ ನೆರೆಯ ಕಿರಾಣಿ ಅಂಗಡಿಯು ಪ್ರತಿ ಸಂಜೆ, ಸುಮಾರು 6ರ ಹೊತ್ತಿಗೆ ಜನರಿಂದ ತುಂಬಿರುತ್ತಿತ್ತು. ಆಗ 2000ದ ಇಸವಿ. ಒಂದು ಕೆ.ಜಿ. ಅಕ್ಕಿ, ಒಂದು ರೂ. ಬೆಲೆಯ ಮೆಣಸಿನ ಪುಡಿ ಹಾಗೂ ಉಪ್ಪು, ಒಂದು ಅಥವಾ ಎರಡು ರೂ.ಗಳ ಅಡಿಗೆ ಎಣ್ಣೆ, 25-50 ಪೈಸೆಯ ಕಪ್ಪು ಸಾಸಿವೆ ಮತ್ತು ಅರಿಶಿಣದ ಪುಡಿ, ಒಂದು ಅಥವಾ ಎರಡು ಈರುಳ್ಳಿ, ಕಾಲು ಕೆ.ಜಿ. ತೊಗರಿ ಬೇಳೆ ಮತ್ತು ಗೋಧಿ ಹಿಟ್ಟು ಹಾಗೂ ಸ್ಟೋವ್ ಅನ್ನು ಉರಿಸಲು ಕೊಂಚ ಸೀಮೆಎಣ್ಣೆಗಾಗಿ ದೊಡ್ಡ ಅಂಗಡಿಯಲ್ಲಿ ಚಿಕ್ಕ ಖರೀದಿದಾರರು ಕಿಕ್ಕಿರಿದಿದ್ದರು.
ಜನರು ತಮ್ಮ 150 ರೂ.ಗಳ ದಿನಗೂಲಿಯಿಂದ, ಪ್ರತಿದಿನ ಅಲ್ಪಸ್ವಲ್ಪ ಸಾಮಾನುಗಳನ್ನಷ್ಟೇ ಕೊಳ್ಳುತ್ತಿದ್ದರು. ಆ ದಿನಗಳಲ್ಲಿ, 25 ಹಾಗೂ 50 ಪೈಸೆಯ ನಾಣ್ಯಗಳಿನ್ನೂ ಚಾಲ್ತಿಯಲ್ಲಿದ್ದವು. ಕಿರಾಣಿ ಅಂಗಡಿಯಲ್ಲಿ ಕೆಳದರ್ಜೆಯ ಒಂದು ಕೆ.ಜಿ. ಅಕ್ಕಿ ಹಾಗೂ ತೊಗರಿ ಬೇಳೆಯ ಬೆಲೆ ಕ್ರಮವಾಗಿ, 20 ಹಾಗೂ 24 ರೂ.ಗಳು. ಬಹುತೇಕ ಖರೀದಿದಾರರು ಇವೆರಡರ ಅರ್ಧ ಅಥವಾ ಕಾಲು ಕೆ.ಜಿ.ಯಷ್ಟನ್ನು ಮಾತ್ರವೇ ಖರೀದಿಸುತ್ತಿದ್ದರು. ಏಕೆ ಹೀಗೆಂದು ನನಗೆ ತಿಳಿದಿಲ್ಲ, ಆದರೆ ನಮ್ಮ ಪಡಿತರ ಅಂಗಡಿಯಲ್ಲಿ ಕೇವಲ ಸಕ್ಕರೆ, ತಾಳೆ ಎಣ್ಣೆ ಮತ್ತು ಸೀಮೆಎಣ್ಣೆಯಷ್ಟೇ ದೊರೆಯುತ್ತಿದ್ದು, ಉಳಿದುದನ್ನು ನಾವು ಖಾಸಗಿ ಕಿರಾಣಿ ಅಂಗಡಿಯಿಂದ ಕೊಳ್ಳುತ್ತಿದ್ದೆವು.
ಮುಂಜಾನೆ 8ರಿಂದ ಪ್ರಾರಂಭಗೊಂಡ ಬಿಡುವಿಲ್ಲದ ದುಡಿಮೆಯಿಂದ ಹೈರಾಣಾಗಿದ್ದ ಗ್ರಾಹಕರು, 3-4 ಜನರ ಅಂದಿನ ಹಸಿವನ್ನು ನೀಗಿಸಲು 70-80ರ ಬೆಲೆಯ ದಿನಸಿಯನ್ನು ಕೊಳ್ಳುತ್ತಿದ್ದರು. ತಿಂಗಳ ಕೊನೆಗೆ ಮನೆಯ ಮಾಸಿಕ ಬಾಡಿಗೆ, ವಿದ್ಯುತ್ ಬಿಲ್ಲು ಮತ್ತು ನೀರಿನ ವೆಚ್ಚವನ್ನು ಲೆಕ್ಕಹಾಕಿದ ಬಳಿಕ ಉಳಿದ ಕೂಲಿಯ ಹಣವನ್ನು ಹಳ್ಳಿಯಲ್ಲಿನ ತಮ್ಮ ಪರಿವಾರಗಳಿಗೆ, ಅಂಚೆ ಅಥವಾ ಅಲ್ಲಿಗೆ ಪ್ರಯಾಣಿಸುತ್ತಿದ್ದ ವ್ಯಕ್ತಿಗಳ ಮೂಲಕ ಕಳುಹಿಸುತ್ತಿದ್ದರು – ಇದು 2,000 ರೂ.ಗಳನ್ನು ಮೀರುತ್ತಿದ್ದುದು ಅಪರೂಪ.
ಅಂದಿನ ದುಡಿಮೆ, ಅಂದೇ ಖರ್ಚಾಗುತ್ತಿತ್ತು – ಇದೇ ಅವರ ಬುದುಕು. ಹಸಿರು ಮೆಣಸಿನ ಕಾಯಿ ಮತ್ತು ನಿಂಬೆ ಹಣ್ಣುಗಳ ಮಾರಾಟದ ದೈನಂದಿನ ಸಂಪಾದನೆಯಿಂದ ನಮ್ಮ ಮನೆಯೂ ನಡೆಯುತ್ತಿತ್ತು. ನನ್ನ ಅಮ್ಮ, ಸ್ವಲ್ಪ ಪ್ರಮಾಣದ ಮೆಣಸಿನ ಪುಡಿ, ಉಪ್ಪು ಮತ್ತು ಅಕ್ಕಿಯನ್ನು ತರಲು ಪ್ರತಿ ಸಂಜೆ ನನ್ನನ್ನು ಕಳುಹಿಸುತ್ತಿದ್ದಳು. ಅಂಗಡಿಯ ಅಜ್ಜಿಯು, ಒಂಭತ್ತು ವರ್ಷದ ನನ್ನೆಡೆಗೆ ತಿರುಗಿ, “ನಿನಗೇನು ಬೇಕು” ಎಂದು ಕೇಳುವವರೆಗೂ ನಾನು ಆಕೆಯನ್ನೇ ದಿಟ್ಟಿಸುತ್ತಿದ್ದೆ.
ಪಡಿತರ ಅಂಗಡಿಯ ಅನೇಕ ಮುಖಗಳು ನನಗೆ ಪರಿಚಿತವಾದವು. ಹೀಗಾಗಿ, ನಾವು ಪರಸ್ಪರ ದೃಷ್ಟಿ ಬೀರಿ, ಮುಗುಳ್ನಗುತ್ತಿದ್ದೆವು. ಅವರಲ್ಲಿನ ಅನೇಕರು ನನಗೆ ತಿಳಿದಿದ್ದ ಏಕೈಕ ಭಾಷೆಯಾದ ಮರಾಠಿಯಲ್ಲಿ ಮಾತನಾಡುತ್ತಿರಲಿಲ್ಲ. ಸಿನಿಮಾಗಳಲ್ಲಿ ಕಂಡುಬರುವಂತೆ ಹಿಂದಿಯಲ್ಲಿ ಮಾತನಾಡುತ್ತಿದ್ದರು. ಅವರು ಮಹಾರಾಷ್ಟ್ರದವರಲ್ಲ, ಬೇರೆ ರಾಜ್ಯದವರೆಂಬುದು ನನಗೆ ತಿಳಿದಿರಲಿಲ್ಲ.
ನಾವು 10x10 ಅಡಿಯ ಖೋಲಿ(ಒಂದು ಕೊಠಡಿಯ ಮನೆ)ಯಲ್ಲಿ ವಾಸಿಸುತ್ತಿದ್ದೆವು. ಪರಸ್ಪರ ಅಂಟಿಕೊಂಡಂತಿರುವ, ಕೊಳವೆಯಂತಹ ಕಿರಿದಾದ ಇಂತಹ ಅನೇಕ ವಸತಿಗಳು ಇಂದಿಗೂ ಈ ನಗರದಲ್ಲಿವೆ. ಈ ಕೆಲವು ಬಾಡಿಗೆ ಕೊಠಡಿಗಳಲ್ಲಿ, 10-12 ಜನರು ಒಟ್ಟಾಗಿ ವಾಸಿಸುತ್ತಾರೆ. ಈ ನಿವಾಸಿಗಳಲ್ಲಿನ ಎಲ್ಲರೂ ಗಂಡಸರು ಎಂಬ ಅಂಶವು ಆಗಾಗ ಕಂಡುಬರುತ್ತದೆ.


