ಬೆಲೆಗಳು ತುಂಬಾ ಇಳಿದಿದ್ದರೂ ಹಸುಗಳನ್ನು ಕೊಳ್ಳಲು ಮಾತ್ರ ಸದ್ಯ ಯಾರೂ ತಯಾರಿಲ್ಲ. ಅವುಗಳನ್ನು ಕೊಂಡರೆ ಅದರ ಮಾಂಸ ಮಾರುವುದು ತುಂಬಾ ಕಷ್ಟವೆಂದು ಅವರಿಗೆ ತಿಳಿದಿದೆ. “ಈ ಜಾನುವಾರುಗಳನ್ನು ನನ್ನ ಊರಿನಿಂದ ಬೇರೆ ಬೇರೆ ಸಂತೆಗಳಿಗೆ ಕೊಂಡೊಯ್ಯಲು ನಾನು ಸಾವಿರಾರು ರೂಪಾಯಿಗಳನ್ನು ವ್ಯಯಿಸಿದ್ದೇನೆ. ಅದುಲ್ ನನ್ನ ಊರಿನಿಂದ ನಾಲ್ಕು ಕಿಲೋಮೀಟರುಗಳ ದೂರದಲ್ಲಿದೆ. ಹೀಗಾಗಿ ಇಲ್ಲಿಗೆ ಜಾನುವಾರುಗಳ ಜೊತೆ ನಡೆದುಕೊಂಡೇ ಬಂದುಬಿಟ್ಟೆ. ಬೇರೆ ಸಂತೆಗಳೆಲ್ಲ ಸುಮಾರು 25 ಕಿಲೋಮೀಟರುಗಳ ಅಂತರದಲ್ಲಿದೆ. ಅಲ್ಲಿಗೆ ಹೋಗಲು ನಾನು ಬಂಡಿಯನ್ನು ಬಾಡಿಗೆಗೆ ಪಡೆಯಲೇಬೇಕು. ಮೊದಲೇ ಸಿಕ್ಕಾಪಟ್ಟೆ ಸಾಲ ತಲೆ ಮೇಲಿದೆ. ಹೇಗಾದರೂ ಮಾಡಿ, ಇವುಗಳನ್ನು ನಾನು ಮಾರಲೇ ಬೇಕು”, ಅಂತನ್ನುತ್ತಾನೆ ಕೋಥುಳೆ.
ಕೊಳ್ಳುವ ಗಿರಾಕಿಗಳ ಮೇಲೊಂದು ಕಣ್ಣಿಟ್ಟೇ ನಮ್ಮ ಜೊತೆಯಲ್ಲಿ ಮಾತನಾಡುತ್ತಾ ನಡೆದುಕೊಂಡು ಬರುತ್ತಿದ್ದಾನೆ ಕೋಥುಳೆ. ಅಂದಹಾಗೆ ಈಗ ಮಧ್ಯಾಹ್ನದ ಒಂದು ಗಂಟೆ. ನೆತ್ತಿ ಇನ್ನಿಲ್ಲದಂತೆ ಸುಡುತ್ತಿದೆ. ಆತ ಇಲ್ಲಿಗೆ ಬಂದಿದ್ದು ಬೆಳಿಗ್ಗೆ ಒಂಬತ್ತಕ್ಕೆ. “ಬಂದಾಗಿನಿಂದ ನಾನು ಒಂದು ಹನಿ ನೀರು ಸಹ ಕುಡಿದಿಲ್ಲ ಸ್ವಾಮಿ. ನೀರಿಗಾಗಿ ನಾನೇನಾದರೂ ಇವುಗಳನ್ನು ಬಿಟ್ಟು ಒಂದೈದು ನಿಮಿಷ ಹೋದರೆ, ಅದೇ ಸಮಯದಲ್ಲಿ ಯಾರಾದರೂ ಗಿರಾಕಿ ಬಂದು ಹೋದರೆ ಏನು ಮಾಡಲಿ?”, ಎನ್ನುವ ಅವನಲ್ಲಿ ಸಿಗುವ ಒಂದಿಬ್ಬರು ಗಿರಾಕಿಗಳನ್ನೂ ಕಳೆದುಕೊಳ್ಳುವ ಆತಂಕವಿದೆ.
ಹಾಗೆಂದು ಸಂತೆಯಲ್ಲಿ ಒದ್ದಾಡುತ್ತಿರುವುದು ಇವನೊಬ್ಬನೇ ಇಲ್ಲ. ಮಾರುಕಟ್ಟೆಯು ಜಾನುವಾರು ಮತ್ತು ರೈತರಿಂದ ತುಂಬಿಹೋಗಿದೆ. 45 ಡಿಗ್ರಿಯ ಬಿರುಬಿಸಿಲಿನಲ್ಲಿ ನಿಂತಿರುವ ರೈತರು ಹಸುಗಳನ್ನು ಮಾರಲು ತಮಗೆ ತಿಳಿದ ಎಲ್ಲಾ ವಿದ್ಯೆಯನ್ನು ಉಪಯೋಗಿಸುತ್ತಿದ್ದಾರೆ. ಅದುಲ್ ನಿಂದ 15 ಕಿಲೋಮೀಟರುಗಳ ದೂರದಲ್ಲಿರುವ ವಾಕುಲ್ನಿ ಗ್ರಾಮದ ಜನಾರ್ಧನ ಗೀತೆ (65), ತನ್ನ ಹಸುಗಳ ಅಂದವನ್ನು ಹೆಚ್ಚಿಸಲು ಅವುಗಳ ಕೊಂಬುಗಳನ್ನು ಚೂಪು ಮಾಡಿಸಿಕೊಂಡು ಬಂದಿದ್ದಾನೆ. ಭಂಡಾಸ್ ಜಾಧವ್ ನ ಬಳಿ ಈ ಕೊಂಬುಗಳನ್ನು ಚೂಪಾಗಿಸುವ ಯಂತ್ರವೊಂದಿದೆ. ಇದಕ್ಕಾಗಿ ಪ್ರತಿ ಪ್ರಾಣಿಗೆ ಈತ 200 ರೂಪಾಯಿಯ ದರವನ್ನು ನಿಗದಿಪಡಿಸಿದ್ದಾನೆ. ಗೀತೆಯ ಮಾತುಗಳಲ್ಲೇ ಹೇಳುವುದಾದರೆ, “ನಾನು ಇವುಗಳನ್ನು 65,000 ರೂಪಾಯಿಗಳಿಗೆ ಕೊಂಡಿದ್ದೆ. ಇವುಗಳಿಗೀಗ 40,000 ರೂಪಾಯಿ ಸಿಕ್ಕರೂ ನಾನು ಕೊಟ್ಟುಬಿಡಲು ಸಿದ್ಧ”, ಎನ್ನುತ್ತಿದ್ದಾನೆ ಈತ.
ಕೋಥುಳೆಯ ಪ್ರಕಾರ ನೀರಿನ ತೀವ್ರ ಅಭಾವ ಮತ್ತು ಏರುತ್ತಲೇ ಇರುವ ಮೇವಿನ ದರದಿಂದ ಹೈನುಗಳನ್ನು ಸಾಕುವುದು ದುಸ್ತರವಾಗುತ್ತಿದೆ. ಮೇಲಾಗಿ ಆಕಳುಗಳನ್ನು ಸಾಕಲು ಗೋಶಾಲೆಯಂತಹ ವ್ಯವಸ್ಥೆಗಳೂ ಇಲ್ಲದಂತಾಗಿದೆ. ಫಡ್ನಾವೀಸ್ ನಿಷೇಧವನ್ನು ಜಾರಿಗೆ ತಂದಾಗ ಆಕಳುಗಳನ್ನು ನೋಡಿಕೊಳ್ಳಲು ಗೋಶಾಲೆಯಂತಿನ ವ್ಯವಸ್ಥೆಗಳನ್ನು ಮಾಡುತ್ತೇವೆ. ಇದರಿಂದಾಗಿ ಸಾಗುವಳಿ ಸಂಬಂಧಿ ಕೆಲಸಗಳಿಗಾಗಿ ಬಳಸಲು ಯೋಗ್ಯವಲ್ಲದ ಆಕಳುಗಳ ಖರ್ಚನ್ನು ರೈತರು ಸಂಭಾಳಿಸುವ ಬದಲು ಜಾನುವಾರುಗಳನ್ನು ಇಲ್ಲಿ ನೀಡಬಹುದು ಎಂದು ಹೇಳಿದ್ದರು. ಆದರೆ ಹಾಗಾಗಲೇ ಇಲ್ಲ. ಇದರಿಂದ ರೈತರ ಕಷ್ಟಗಳು ಅಕ್ಷರಶಃ ದುಪ್ಪಟ್ಟಾಗಿಬಿಟ್ಟಿವೆ. ಅತ್ತ ಜಾನುವಾರುಗಳನ್ನು ಮಾರಲು ಆಗುತ್ತಿಲ್ಲ. ಇತ್ತ ಉಳುಮೆಗೆ ಯೋಗ್ಯವಲ್ಲದ ವಯಸ್ಸಾದ ಹಸುಗಳನ್ನು ಸಾಕುವ ಖರ್ಚನ್ನು ರೈತರಿಗೆ ನೀಗಿಸಲೂ ಆಗುತ್ತಿಲ್ಲ ಎಂಬಂತಾಗಿದೆ.
“ಜಾನುವಾರುಗಳಿಗೆ ನೀರು ಮತ್ತು ಮೇವಿಗಾಗಿ ವಾರಕ್ಕೆ ಏನಿಲ್ಲವೆಂದರೂ 1000 ರೂಪಾಯಿಗಳ ಖರ್ಚಿದೆ. ನಮ್ಮ ಮಕ್ಕಳಿಗೆ ಗಂಜಿ ದಕ್ಕಿಸಲೇ ನಮ್ಮಿಂದ ಆಗುತ್ತಿಲ್ಲ, ಇನ್ನು ಹಸುಗಳನ್ನು ಹೇಗೆ ಸಾಕೋದು?”, ಎಂದು ಕೇಳುತ್ತಿದ್ದಾನೆ ಕೋಥುಳೆ.
ಈ ಗೋಮಾಂಸ ನಿಷೇಧವು ಗ್ರಾಮೀಣ ಪ್ರದೇಶಗಳಲ್ಲಿರುವ ಎಷ್ಟೋ ಜನರಿಗೆ ದೊಡ್ಡ ಪೆಟ್ಟನ್ನೇ ನೀಡಿದೆ. ಚರ್ಮ ಹದ ಮಾಡುವ ದಲಿತರು, ಜಾನುವಾರುಗಳನ್ನು ಸಾಗಿಸುವವರು, ಮಾಂಸ ಮಾರುವವರು, ಮೂಳೆಯಿಂದ ಔಷಧಿ ತಯಾರಿಸುವವರು… ಹೀಗೆ ಎಲ್ಲರೂ ಈ ನಡೆಯಿಂದ ಹೊಡೆತವನ್ನು ತಿಂದವರೇ ಆಗಿದ್ದಾರೆ.