ಈ ಪ್ಯಾನೆಲ್ 'ಕಾಣುವ ಕೆಲಸಗಳ ನಡುವೆ ಕಾಣದೆ ಹೋಗುವ ಮಹಿಳೆಯರು' ಶೀರ್ಷಿಕೆಯ ಛಾಯಾಚಿತ್ರ ಪ್ರದರ್ಶನದ ಭಾಗವಾಗಿದ್ದು, ಇದರ ಅಡಿಯಲ್ಲಿ ಗ್ರಾಮೀಣ ಮಹಿಳೆಯರು ಮಾಡುವ ವಿವಿಧ ಕಾರ್ಯಗಳನ್ನು ಚಿತ್ರರೂಪದಲ್ಲಿ ದಾಖಲಿಸಲಾಗಿದೆ. ಈ ಎಲ್ಲಾ ಚಿತ್ರಗಳನ್ನು ಪಿ.ಸಾಯಿನಾಥ್ ಅವರು 1993ರಿಂದ 2002ರ ನಡುವೆ ತಮ್ಮ 10 ರಾಜ್ಯಗಳಲ್ಲಿನ ಓಡಾಟದಲ್ಲಿ ತೆಗೆದಿದ್ದಾರೆ. ಇಲ್ಲಿ, ಪರಿ ಈ ಛಾಯಾಚಿತ್ರ ಪ್ರದರ್ಶನದ ಡಿಜಿಟಲ್ ಪ್ರಾತಿನಿಧ್ಯವನ್ನು ಸೃಜನಾತ್ಮಕವಾಗಿ ರಚಿಸಿದೆ, ಇದನ್ನು ಹಲವು ವರ್ಷಗಳಿಂದ ದೇಶದ ಬಹುತೇಕ ಭಾಗಗಳಲ್ಲಿ ಪ್ರದರ್ಶಿಸಲಾಗಿದೆ.
ಜೀವಮಾನದ ಬಾಗುವಿಕೆ
ವಿಜಯನಗರಂನ ಹೊಲವೊಂದರಲ್ಲಿ ಕೆಲಸ ಮಾಡುತ್ತಿದ್ದ ಆಕೆ ಬಿಸಿಲಿಗೆ ದಣಿದು ಒಂದು ಕ್ಷಣ ಕೆಲಸ ನಿಲ್ಲಿಸಿದರು. ಆದರೆ ಆಗಲೂ ಬಾಗಿದಂತೆಯೇ ಇದ್ದರು. ಏಕೆಂದರೆ ಅವರಿಗೆ ಗೊತ್ತಿತ್ತು ಇನ್ನೊಂದು ಕ್ಷಣದಲ್ಲಿ ಮತ್ತೆ ಅದೇ ರೀತಿಯಲ್ಲಿ ಬಾಗಿ ನಿಂತು ಕೆಲಸ ಮಾಡಬೇಕೆಂದು.
ಇದೇ ಗೇರು ಹೊಲದಲ್ಲಿ ಅವರ ಗ್ರಾಮದ ಇತರ ಎರಡು ಗುಂಪುಗಳ ಮಹಿಳೆಯರೂ ಕೆಲಸ ಮಾಡುತ್ತಿದ್ದರು. ಒಂದು ಗುಂಪು ಜಮೀನಿನಿಂದ ಎರಡು ಕಿಲೋಮೀಟರ್ ದೂರದಲ್ಲಿರುವ ಅವರ ಮನೆಯಿಂದ ಊಟ ಮತ್ತು ನೀರನ್ನು ತಂದಿತು. ಇನ್ನೊಂದು ಗುಂಪು ವಿರುದ್ಧ ದಿಕ್ಕಿನಲ್ಲಿ ಕೆಲಸ ಮಾಡುತ್ತಿತ್ತು. ಕೆಲಸದಲ್ಲಿದ್ದ ಪ್ರತಿ ಮಹಿಳೆಯೂ ಬಾಗಿಕೊಂಡಿದ್ದರು.
ಒಡಿಶಾದ ರಾಯಗಡದಲ್ಲಿರುವ ಈ ಜಮೀನಿನಲ್ಲಿ ಗಂಡಸರೂ ಕೆಲಸ ಮಾಡುತ್ತಿದ್ದರು. ಕೆಮೆರಾ ಲೆನ್ಸ್ ಮೂಲಕ ನೋಡುವಾಗ ಅದೊಂದು ಅದ್ಭುತ ದೃಶ್ಯವಾಗಿತ್ತು. ಎಲ್ಲಾ ಗಂಡಸರು ನಿಂತಿದ್ದರು, ಮಹಿಳೆಯರೆಲ್ಲರೂ ಬಾಗಿದ್ದರು. ಒಡಿಶಾದ ನುವಾಪಾಡಾದಲ್ಲಿ ಈ ಮಹಿಳೆ ಕಳೆ ತೆಗೆಯುವುದನ್ನು ಮಳೆ ಬಂದರೂ ನಿಲ್ಲಿಸಲಿಲ್ಲ. ಸೊಂಟದವರೆಗೆ ಬಾಗಿಕೊಂಡು ತನ್ನ ಕೆಲಸ ಮುಗಿಸುತ್ತಿದ್ದರು. ಒಂದು ಕೈಯಲ್ಲಿ ಛತ್ರಿ ಹಿಡಿದು ಇನ್ನೊಂದು ಕೈಯಲ್ಲಿ ಕಳೆ ಕೀಳುತ್ತಿದ್ದರು.








