ಹದಿಹರೆಯದ ವಯಸ್ಸಿನಲ್ಲಿ ಮಕ್ಕಳನ್ನು ಪಡೆಯದಂತೆ ನುಸ್ರತ್ ಬಾನೊ ಮಹಿಳೆಯರನ್ನು ಮನವೊಲಿಸುತ್ತಾರೆ; ಗರ್ಭನಿರೋಧಕವನ್ನು ಬಳಸುವಂತೆ ಮಾಡಲು ಆ ಮಹಿಳೆಯರ ಗಂಡನ ಮನೆಯವರೊಂದಿಗೆ ಹೋರಾಡಿದ್ದಾರೆ; ಮತ್ತು ಅವರು ಈ ಮಹಿಳೆಯರನ್ನು ಹೆರಿಗೆಗಾಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಬಿಹಾರದ ಅರೇರಿಯಾ ಜಿಲ್ಲೆಯ ರಾಂಪುರ್ ಗ್ರಾಮದ 35 ವರ್ಷದ ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತರಾದ (ಆಶಾ) ನುಸ್ರತ್, ಅವರ ಕೆಲಸದ ಕಠಿಣ ಭಾಗವೆಂದರೆ ಪುರುಷರನ್ನು ವ್ಯಾಸೆಕ್ಟಮಿಗೆ ಒಳಗಾಗುವಂತೆ ಮನವೊಲಿಸುವುದು.
ಸುಮಾರು 3,400 ಜನಸಂಖ್ಯೆಯನ್ನು ಹೊಂದಿರುವ ಫರ್ಬಿಸ್‌ಗಂಜ್ ಬ್ಲಾಕ್‌ನ ಈ ಗ್ರಾಮದಲ್ಲಿ "ಕಳೆದ ವರ್ಷ [2018], ಒಬ್ಬ ವ್ಯಕ್ತಿ ಮಾತ್ರ ಒಪ್ಪಿಕೊಂಡರು" ಎಂದು ಅವರು ನಮಗೆ ತಿಳಿಸಿದರು. "ಕೊನೆಗೆ ವ್ಯಾಸೆಕ್ಟಮಿ ಮುಗಿದಾಗ, ಅವನ ಹೆಂಡತಿ ನನ್ನನ್ನು ಚಪ್ಪಲಿಯಿಂದ ಹೊಡೆಯಲು ಬಂದಳು" ಎಂದು ನಾಲ್ಕು ಮಕ್ಕಳ ತಾಯಿ ನಗುತ್ತಾ ಹೇಳಿದರು.
ರಾಂಪುರದಲ್ಲಿರುವ ಈ ಹಿಂಜರಿಕೆ ಬಿಹಾರದ ಇತರ ಹಳ್ಳಿಗಳಲ್ಲಿಯೂ ಕಂಡುಬರುತ್ತದೆ. "ಅವರ ದೊಡ್ಡ ಭಯವೆಂದರೆ ಅವರನ್ನು ಜನರು ಗೇಲಿ ಮಾಡುವುದು ಮತ್ತು ಇತರ ಪುರುಷರು ಅವರನ್ನು ನೋಡಿ ನಗುವುದು" ಎಂದು ವಿನಯ್ ಕುಮಾರ್ ಕಳೆದ ವರ್ಷ ಹೇಳಿದ್ದರು, ಆಗ ಅವರು ಪ್ರತಿವರ್ಷ ನವೆಂಬರ್‌ನಲ್ಲಿ ಬಿಹಾರ ಸರ್ಕಾರವು ರಾಜ್ಯದಾದ್ಯಂತ ಪುರುಷರ ಸಂತಾನಹರಣ ಉತ್ತೇಜಿಸಲು ನಡೆಸುವ ಸಪ್ತಾಹದ ಎರಡನೇ ಹಂತದ ತಯಾರಿಯಲ್ಲಿದ್ದರು. ಪುರುಷರಿಗಿರುವ ಇನ್ನೊಂದು ಭಯವೆಂದರೆ "ಅವರು ದುರ್ಬಲರಾಗುತ್ತಾರೆ ಮತ್ತು ಮತ್ತೆ ಸಂಭೋಗ ನಡೆಸಲು ಸಾಧ್ಯವಾಗುವುದಿಲ್ಲ ಎಂದು ಅವರು ಭಾವಿಸುತ್ತಾರೆ, ಆದರೆ ಇದೊಂದು ಕಲ್ಪಿತ ನಂಬಿಕೆಯಾಗಿದೆ."
ವಿನಯ್ ಅವರ ತವರು ರಾಜ್ಯದ ಜೆಹನ್ನಾಬಾದ್ ಜಿಲ್ಲೆಯ ಮಖ್ದಂಪುರ್ ಜಿಲ್ಲೆಯಲ್ಲಿ 3,400 ಜನಸಂಖ್ಯೆಯನ್ನು ಹೊಂದಿರುವ ಬಿರ್ರಾ ಗ್ರಾಮ. 38 ವರ್ಷದ ಇವರು ಕಳೆದ ವರ್ಷವನ್ನು ಸರ್ಕಾರದ ವಿಕಾಸ್ ಮಿತ್ರ ಉದ್ಯೋಗಿಯಾಗಿ ಕಳೆದಿದ್ದರು. ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿಯನ್ನು ಪ್ರಸಾರ ಮಾಡುವುದು ಮತ್ತು ಅವುಗಳ ಅನುಷ್ಠಾನಕ್ಕೆ ಸಹಕರಿಸುವುದು ಅವರ ಕರ್ತವ್ಯಗಳ ಪಟ್ಟಿಯಲ್ಲಿ ಸೇರಿದೆ. ಅವರ ಕರ್ತವ್ಯಗಳಲ್ಲಿ ಪುರುಷರನ್ನು ವ್ಯಾಸೆಕ್ಟಮಿಗಾಗಿ ಒಲಿಸುವ ತಲೆನೋವಿನ ಕೆಲಸವೂ ಸೇರಿದೆ. - ವ್ಯಾಸೆಕ್ಟಮಿಯೆನ್ನುವುದು ಒಂದು ಸಣ್ಣ ಶಸ್ತ್ರಚಿಕಿತ್ಸಾ ವಿಧಾನ, ಈ ಸಮಯದಲ್ಲಿ ಪುರುಷರ ವೀರ್ಯವನ್ನು ಸಾಗಿಸುವ ಸಣ್ಣ ನಾಳವನ್ನು ಮುಚ್ಚಲಾಗುತ್ತದೆ ಅಥವಾ ಸೀಲ್ ಮಾಡಲಾಗುತ್ತದೆ.
ಸಂತಾನಹರಣ ಶಸ್ತ್ರಚಿಕಿತ್ಸೆಯ ಮಟ್ಟವು ಮೂಲದಲ್ಲಿ ಕಡಿಮೆ ಇರುವ ಈ ರಾಜ್ಯದಲ್ಲಿ, ಮೂರನೇ (2005-06) ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯಲ್ಲಿ ಕೇವಲ 0.6 ಶೇಕಡಾ ಇದ್ದ ಪುರುಷ ಸಂತಾನಹರಣ ಚಿಕಿತ್ಸೆಯ ಪ್ರಮಾಣವು ನಾಲ್ಕನೇ (2015-16) ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯಲ್ಲಿ ನಗಣ್ಯವೆನ್ನಬಹುದಾದ ಶೇಕಡಾ 0ಗೆ ಇಳಿದಿದೆ. ಅದೇ ಅವಧಿಯಲ್ಲಿ, ಮಹಿಳೆಯರ ಸಂತಾನಹರಣ ಚಿಕಿತ್ಸೆಯ ಪ್ರಮಾಣವೂ ಕಡಿಮೆಯಾಗಿತ್ತು. 15ರಿಂದ 49 ವರ್ಷ ವಯಸ್ಸಿನ ವಿವಾಹಿತ ಮಹಿಳೆಯರಲ್ಲಿ ಇದು ಶೇಕಡಾ 23.8ರಿಂದ 20.7ಕ್ಕೆ ಇಳಿದಿದೆ. ಆದರೆ ಇದು ಪುರುಷ ಸಂತಾನಹರಣ ಚಿಕಿತ್ಸೆಗೆ ಹೋಲಿಸಿದರೆ ಹೆಚ್ಚು.
ಬಿಹಾರದ ಅಂಕಿ-ಸಂಖ್ಯೆಗಳು ರಾಷ್ಟ್ರವ್ಯಾಪಿ ದತ್ತಾಂಶ ಪ್ರವೃತ್ತಿಗಳನ್ನು ಪ್ರತಿಬಿಂಬಿಸುತ್ತವೆ: ಎನ್‌ಎಫ್‌ಎಚ್‌ಎಸ್ -4 ಪ್ರಕಾರ ಭಾರತದಾದ್ಯಂತ, ಪ್ರಸ್ತುತ ವಿವಾಹಿತ ಮಹಿಳೆಯರಲ್ಲಿ ಶೇಕಡಾ 36ರಷ್ಟು (15-49 ವಯೋಮಾನದವರಲ್ಲಿ) ಸಂತಾನ ಹರಣ ಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ದಾಖಲೆಯಾಗಿದ್ದರೆ, ಈ ಮಹಿಳೆಯರಲ್ಲಿ ಕೇವಲ 0.3ರಷ್ಟು ಮಾತ್ರ ಪುರುಷ ಸಂತಾನ ಹರಣ ಚಿಕಿತ್ಸೆಯನ್ನು ವರದಿ ಮಾಡಿದ್ದಾರೆ.
ದೇಶದಲ್ಲಿ ಕಾಂಡೋಮ್ ಬಳಕೆಯ ಪ್ರಮಾಣ ತೀರಾ ಕಡಿಮೆ - ಪ್ರಸ್ತುತ 15ರಿಂದ 49 ವರ್ಷ ವಯಸ್ಸಿನ ವಿವಾಹಿತ ಮಹಿಳೆಯರಲ್ಲಿ ಕೇವಲ 5.6ರಷ್ಟು ಜನರು ಮಾತ್ರ ಗರ್ಭನಿರೋಧಕ ಕ್ರಮವಾಗಿ ಕಾಂಡೋಮ್‌ಗಳನ್ನು ಬಳಸುತ್ತಾರೆ.







