ಸುಮುಕನ್ ಅವರ ವಂಶಸ್ಥರು ಇಂದಿಗೂ ಅಳಿಕೋಡ್‌ನಲ್ಲಿ ವಾಸಿಸುತ್ತಿದ್ದಾರೆ

ಕಲ್ಲಿಯಶ್ಶೆರಿ ತನ್ನ ಹೋರಾಟವನ್ನು ಎಂದಿಗೂ ನಿಲ್ಲಿಸಿಲ್ಲ. 1947ರ ನಂತರವೂ ಅದರ ಹೋರಾಟ ನಿಂತಿರಲಿಲ್ಲ. ಕೇರಳದ ಉತ್ತರ ಮಲಬಾರ್‌ನ ಈ ಗ್ರಾಮವು ಅನೇಕ ರಂಗಗಳಲ್ಲಿ ಹೋರಾಡಿದೆ. ಸ್ವಾತಂತ್ರ್ಯ ಹೋರಾಟದ ತೀವ್ರ ಹೋರಾಟದಲ್ಲಿ ಅದು ಬ್ರಿಟಿಷರಿಗೆ ಸವಾಲು ಹಾಕಿತ್ತು. ಈ ಪ್ರದೇಶದ ರೈತ ಚಳವಳಿಯ ಹೃದಯಭಾಗವಾಗಿರುವ ಇದು ಜನ್ಮಿಗಳನ್ನು (ಊಳಿಗಮಾನ್ಯ ಭೂಮಾಲೀಕರು) ಎದುರುಹಾಕಿಕೊಂಡಿತು. ಎಡಪಂಥೀಯ ಪ್ರವಾಹಗಳ ಕೇಂದ್ರವಾಗಿ ಅದು ಜಾತಿಯನ್ನು ಕೂಡ ಎದುರಿಸಿತು.

ಈ ಹೋರಾಟಗಳಲ್ಲಿನ ಮುಖ್ಯ ವ್ಯಕ್ತಿಯಾಗಿದ್ದ ಕೆ.ಪಿ.ಆರ್. ರಾಯರಪ್ಪನ್, "1947ರಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಟವು ಒಮ್ಮೆಗೇ ಕೊನೆಗೊಂಡಿತು ಎಂದು ಹೇಗೆ ಹೇಳಲು ಸಾಧ್ಯ?" ಎಂದು ಕೇಳುತ್ತಾರೆ. ತನ್ನ 86ರ ಹರೆಯದಲ್ಲಿರುವ ರಾಯರಪ್ಪನ್‌ "ಭೂಸುಧಾರಣೆಯ ಹೋರಾಟ ಇನ್ನೂ ಮುಗಿದಿಲ್ಲ" ಎನ್ನುತ್ತಾ ತನ್ನ ಹೋರಾಟದ ಗುರಿಯ ಕುರಿತು ಮಾತನಾಡುತ್ತಾರೆ. ಈ ಹೋರಾಟದಲ್ಲೂ ತನ್ನ ಪಾತ್ರವಿರಬೇಕೆಂದು ಬಯಸುತ್ತಾರೆ. ಅವರು ತನ್ನ 83ನೇ ವಯಸ್ಸಿನಲ್ಲಿ ರಾಷ್ಟ್ರೀಯ ಸ್ವಾವಲಂಬನೆಗಾಗಿ ಕರೆ ನೀಡಿ ನಡೆದ ಮೆರವಣಿಗೆಯಲ್ಲಿ ಕಾಸರಗೋಡಿನಿಂದ ತಿರುವನಂತಪುರಕ್ಕೆ ಸುಮಾರು 500 ಕಿಲೋಮೀಟರ್ ದೂರ ನಡೆದಿದ್ದರು.

ಕಲ್ಲಿಯಶ್ಶೆರಿಯಲ್ಲಿ ಬದಲಾಣೆಯ ಅಲೆ ತಂದ ಎರಡು ಘಟನೆಗಳು ಅವರ ಮನಸಿನಲ್ಲಿ ಅಚ್ಚೊತ್ತಿದಂತಿವೆ. ಒಂದು 1920ರ ದಶಕದ ಆರಂಭದಲ್ಲಿ ಗಾಂಧಿಯವರ ಮಂಗಳೂರು ಭೇಟಿ. ಅವರ ಮಾತು ಕೇಳಲು ಶಾಲಾ ಮಕ್ಕಳು ಸೇರಿದಂತೆ ಅನೇಕರು ಅಲ್ಲಿಗೆ ಪ್ರಯಾಣ ಬೆಳೆಸಿದ್ದರು. "ನಾವೆಲ್ಲರೂ ಆಗ ಕಾಂಗ್ರೆಸ್ ಜೊತೆಗಿದ್ದೆವು" ಎಂದು ರಾಯರಪ್ಪನ್ ಹೇಳುತ್ತಾರೆ.

ಇನ್ನೊಂದು "ನಮ್ಮ ಬೋರ್ಡ್ ಶಾಲೆಗೆ ಪ್ರವೇಶ ಪಡೆಯಲು ಯತ್ನಿಸಿದ ಪುಟ್ಟ ದಲಿತ ಹುಡುಗ ಸುಮುಕನ್ ಮೇಲೆ ಹಲ್ಲೆ ನಡೆಸಿದ್ದು. ಶಾಲೆಗೆ ಬರುವ ಧೈರ್ಯ ಮಾಡಿದ್ದಕ್ಕಾಗಿ ಮೇಲ್ಜಾತಿಯ ಜನರು ಅವರು ಮತ್ತು ಅವರ ಸಹೋದರನ ಮೇಲೆ ಹಲ್ಲೆ ಮಾಡಿದ್ದರು."

ಜಾತಿ ದಬ್ಬಾಳಿಕೆಗೆ ಸಂಪನ್ಮೂಲಗಳ ನಿಯಂತ್ರಣದ ಜೊತೆ ಬಹಳ ನಿಕಟ ಸಂಬಂಧವಿದೆ. ಮುಖ್ಯವಾಗಿ ಭೂಮಿ. ಕಲ್ಲಿಯಶ್ಶೆರಿ ಮಲಬಾರ್ ಜಿಲ್ಲೆಯ ಚಿರಕ್ಕಲ್ ತಾಲ್ಲೂಕು ಜನ್ಮಿ ಜನರ ಭಯೋತ್ಪಾದನೆಯ ಭದ್ರಕೋಟೆ. 1928ರಲ್ಲಿ, ಮೇಲ್ಜಾತಿಯ ನಾಯರ್‌ಗಳು ಶೇಕಡಾ 72ರಷ್ಟು ಭೂಮಿಯನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಂಡಿದ್ದರು. ಅಲ್ಲಿ ಥಿಯ್ಯಾ ಮತ್ತು ಇತರ ಹಿಂದುಳಿದ ಸಮುದಾಯಗಳು ಜನಸಂಖ್ಯೆಯ ಶೇಕಡಾ 60ರಷ್ಟಿದೆ, ಆದರೆ ಕೇವಲ 6.55 ಶೇಕಡಾ ಭೂಮಿಯನ್ನಷ್ಟೇ ಹೊಂದಿದ್ದವು. ಆದರೂ ಇಲ್ಲಿ, ಭೂ ಸುಧಾರಣೆಯ ಹೋರಾಟ ಯಶಸ್ಸು ಕಾಣಲು 1960ರ ದಶಕದವರೆಗೂ ಕಾಯಬೇಕಾಯಿತು.

ಇಂದು ಥಿಯ್ಯಾ ಮತ್ತು ಇತರ ಹಿಂದುಳಿದ ಜಾತಿಗಳು ಮತ್ತು ದಲಿತರು 60 ಶೇಕಡಕ್ಕೂ ಹೆಚ್ಚು ಭೂಮಿಯ ಮೇಲೆ ನಿಯಂತ್ರಣ ಹೊಂದಿದ್ದಾರೆ.

"ಮೊದಲು ನಾವು ಗುಲಾಮರಂತೆ ಬದುಕುತ್ತಿದ್ದೆವು" ಎನ್ನುತ್ತಾರೆ 63 ವರ್ಷದ ಕುಂಞಂಬು ಹೇಳುತ್ತಾರೆ. ಅವರ ತಂದೆ ತಿಯಾ ಸಮುದಾಯಕ್ಕೆ ಸೇರಿದ ಕೃಷಿಕರಾಗಿದ್ದರು. "ಆಗ ನಮಗೆ ಅಂಗಿ ತೊಡಲು ಅವಕಾಶವಿರಲಿಲ್ಲ. ಕಂಕುಳಿನ ಕೆಳಗೆ ಕೇವಲ ಒಂದು ಟವೆಲ್‌ ಇಟ್ಟುಕೊಂಡಿರಬೇಕಿತ್ತು. ಮತ್ತು ಸ್ನಾನದ ಟವೆಲ್ಲಿನಂತಹ ಅರ್ಧ ಲುಂಗಿಯನ್ನಷ್ಟೇ ಉಡಬೇಕಿತ್ತು." ಇನ್ನೂ ಕೆಲವು ಕಡೆಗಳಲ್ಲಿ ಮಹಿಳೆಯರಿಗೆ ರವಿಕೆ ತೊಡಲು ಅವಕಾಶವಿರಲಿಲ್ಲ. "ನಾವು ಕೆಲವು ರಸ್ತೆಗಳಲ್ಲಿ ನಡೆದುಕೊಂಡು ಹೋಗುವಂತಿರಲಿಲ್ಲ. ನಮ್ಮ ಜಾತಿಗೆ ಅನುಗುಣವಾಗಿ ಮೇಲ್ಜಾತಿಯ ಜನರಿಂದ ದೈಹಿಕ ಅಂತರವನ್ನು ಕಾಪಾಡಿಕೊಳ್ಳಬೇಕಿತ್ತು."

ಕೆಳಜಾತಿಗಳನ್ನು ಶಾಲೆಯಿಂದ ಹೊರಗಿಡುವುದು ಕೂಡ ಇದೆಲ್ಲದರ ಒಂದು ಭಾಗವಾಗಿತ್ತು. ಸಂಪನ್ಮೂಲಗಳಿಂದ ಕೆಳತಳ್ಳಲ್ಪಟ್ಟ ಜಾತಿಗಳನ್ನು ದೂರವಿಡುವುದು ಇದೆಲ್ಲದರ ಗುರಿಯಾಗಿತ್ತು. ಅವರಿಗೆ ಯಾವುದೇ ರೀತಿಯ ಗೌರವವನ್ನು ನಿರಾಕರಿಸುವುದು ಕೂಡ ಇದರಲ್ಲಿ ಸೇರಿದೆ. ಅಲ್ಲಿ ಬಡವರ ವಿರುದ್ಧ ಜನ್ಮಿ ಭಯೋತ್ಪಾದನೆ ಸಾಮಾನ್ಯ ದೃಶ್ಯವಾಗಿತ್ತು.

ಸುಮುಕನ್‌ ಅವರ ಮೇಲಿನ ಹಲ್ಲೆ ಅಲ್ಲಿನ ಜನರ ಬದುಕಿಗೆ ಒಂದು ತಿರುವನ್ನು ನೀಡಿತು.

"ಅದರ ನಂತರ ಮಲಬಾರಿನ ಕಾಂಗ್ರೆಸ್‌ ನಾಯಕರೆಲ್ಲ ಇಲ್ಲಿಗೆ ದೌಡಾಯಿಸಿದರು. ಮಹಾನ್ ಕಾಂಗ್ರೆಸ್ ನಾಯಕರಾಗಿದ್ದ ಕೇಳಪ್ಪನ್‌ ಕೂಡ ಒಂದಿಷ್ಟು ಸಮಯ ಇಲ್ಲಿದ್ದರು. ಜಾತಿ ದೌರ್ಜನ್ಯದ ವಿರುದ್ಧ ಎಲ್ಲರೂ ಮಾತನಾಡಿದರು. ಇಲ್ಲಿಗೆ ಬಂದವರಲ್ಲಿ ಒಬ್ಬರಾಗಿದ್ಗ ಸಿ.ಎಫ್. ಆಂಡ್ರ್ಯೂಸ್ ಈ ವಿಷಯವನ್ನು ಬ್ರಿಟಿಷ್ ಸಂಸತ್ತಿನಲ್ಲಿ ಚರ್ಚೆಯಾಗುವಂತೆ ಮಾಡಿದರು. ಕೆಲವೇ ದಿನಗಳಲ್ಲಿ ಕಲ್ಲಿಶ್ಶೆರಿಯೆನ್ನುವುದು ದಲಿತ ಶಿಕ್ಷಣದ ಕೇಂದ್ರವಾಯಿತು." ಎಂದು ರಾಯರಪ್ಪನ್ ಹೇಳುತ್ತಾರೆ. ಅಲ್ಲಿನ ಜನರು ವಿವಿಧ ಜಾತಿಗಳೊಡನೆ ಸಹಭೋಜನವನ್ನೂ ಆಯೋಜಿಸಿದ್ದರು.

ಆದರೆ ಈ ಪ್ರಮುಖ ಹೋರಾಟಗಳಿಗಿಂತ ತೀರಾ ಮೊದಲೇನಲ್ಲ ಇಲ್ಲಿಗೆ ಹತ್ತಿರದ ಆಜಾನೂರಿನಲ್ಲಿ 30 ಮತ್ತ 40ರ ದಶಕದಲ್ಲಿ ಶಾಲೆಯೊಂದನ್ನು ಮೂರು ಬಾರಿ ಕೆಡವಲಾಗಿತ್ತು. ಶಾಲೆಗೆ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲಾಗುತ್ತಿದೆಯೆನ್ನುವ ಕಾರಣಕ್ಕೆ ಜನ್ಮಿಗಳಿಂದ ಎರಡು ಬಾರಿ ದಾಳಿಗೊಳಗಾದರೆ, ಒಮ್ಮೆ ಈ ಶಾಲೆ "ರಾಷ್ಟ್ರೀಯವಾದಿಗಳು ಮತ್ತು ಕಮ್ಯುನಿಸ್ಟರಿಗೆ ಆಶ್ರಯ ನೀಡುತ್ತಿದೆಯೆಂದು" ಪೊಲೀಸ್‌ ಬಳಸಿ ಕೆಡವಲಾಗಿತ್ತು.

ಆ ಅನುಮಾನಗಳಲ್ಲಿ ಬಹಳ ಸತ್ಯವಿತ್ತು. “ಈ ಪ್ರದೇಶಗಳಲ್ಲಿ ಎಡಪಂಥೀಯ ಚಳವಳಿಗಳು ಒಂದು ಸ್ಥಾಪಿತ ರಚನೆಯ ಮಾದರಿಯಲ್ಲಿ ಬೇರುಬಿಡುತ್ತಿದ್ದವು. ನಾವು ಒಂದು ಹಳ್ಳಿಗೆ ಹೋದಾಗ ಅಲ್ಲಿ ರಾತ್ರಿ ಶಾಲೆ ಸ್ಥಾಪಿಸುತ್ತಿದ್ದೆವು. ಜೊತೆಗೆ ಒಂದು ಓದಿನಮನೆ ಮತ್ತು ರೈತರ ಸಂಘಟನೆಯನ್ನೂ ಕಟ್ಟುತ್ತಿದ್ದೆವು. ಈ ರೀತಿಯಲ್ಲೇ ಮಲಬಾರ್‌ ಪ್ರದೇಶದಲ್ಲಿ ಎಂಡಪಂಥೀಯ ವಿಚಾರಧಾರೆ ಬೆಳೆದಿದ್ದು” ಎನ್ನುತ್ತಾರೆ ಒಂದು ಕಾಲದ ಶಿಕ್ಷಕ ಮತ್ತು ಪ್ರಸ್ತುತ ಪೂರ್ಣಕಾಲಿಕ ರಾಜಕಾರಣಿಯಾಗಿರು ಹತ್ತಿರದ ಕರಿವೆಲ್ಲೂರಿನ ಅಗ್ನಿ ಶರ್ಮನ್‌ ನಂಬೂದಿರಿ. “ಕಲ್ಲಿಶ್ಶೆರಿಯಲ್ಲಿ ಹೋರಾಟ ಯಶಸ್ವಿಯಾಗಲು ಇದೇ ಮಾದರಿ ಕಾರಣ” ಎಂದು ಮುಂದುವರೆದು ರಾಯರಪ್ಪನ್‌ ಹೇಳುತ್ತಾರೆ.

1930ರ ದಶಕದ ಮಧ್ಯಭಾಗದಲ್ಲಿ, ಎಡಪಂಥೀಯರು ಉತ್ತರ ಮಲಬಾರ್‌ನಲ್ಲಿ ಕಾಂಗ್ರೆಸ್ ಮೇಲೆ ಹಿಡಿತ ಸಾಧಿಸಿದ್ದರು. 1939ರ ಹೊತ್ತಿಗೆ, ರಾಯರಪ್ಪನ್ ಮತ್ತು ಅವರ ಸ್ನೇಹಿತರು ಹೋರಾಟದ ಮೂಲಕ ಕಮ್ಯುನಿಸ್ಟ್ ಪಕ್ಷದ ಸದಸ್ಯರಾಗಿ ಹೊರಹೊಮ್ಮಿದರು. ಶಿಕ್ಷಣ ನಿರಾಕರಣೆಯೇ ಆಯುಧವಾಗಿದ್ದ ಸ್ಥಳದಲ್ಲಿ, ಆ ಕಾಲದ ಶಿಕ್ಷಕರ ಒಕ್ಕೂಟವು ಪ್ರಮುಖ ರಾಜಕೀಯ ಪಾತ್ರವನ್ನು ವಹಿಸಿತು.

"ಈ ಕಾರಣಕ್ಕಾಗಿಯೇ ರಾತ್ರಿ ಶಾಲೆ, ಓದುವ ಕೋಣೆ ಮತ್ತು ಕೃಷಿಕರ ಸಂಘದ ಮಾದರಿಯನ್ನು ಅನುರಿಸಲಾಗುತ್ತಿತ್ತು" ಎಂದು ಪಿ ಯಶೋಧ ಹೇಳುತ್ತಾರೆ. "ಎಲ್ಲಕ್ಕಿಂತ ಹೆಚ್ಚಾಗಿ ನಾವು ಶಿಕ್ಷಕರು" ಎನ್ನುವ ಅವರು ತಮ್ಮ 81ನೇ ವಯಸ್ಸಿನಲ್ಲಿಯೂ 60 ವರ್ಷಗಳ ಹಿಂದೆ ಹೋರಾಟಕ್ಕೆ ಧುಮುಕುವಾಗ ಇದ್ದಂತಹ ಕಿಚ್ಚನ್ನು ಕಾಯ್ದುಕೊಂಡಿದ್ದಾರೆ. ತನ್ನ ಹದಿನೈದನೇ ವಯಸ್ಸಿನಲ್ಲಿ ಅವರು ತಮ್ಮ ತಾಲೂಕಿನ ಮೊದಲ ಮತ್ತು ಏಕೈಕ ಮಹಿಳಾ ಶಿಕ್ಷಕಿಯಾಗಿದ್ದರು. ಜೊತೆಗೆ ಮಲಬಾರ್‌ ಪ್ರಾಂತ್ಯದ ಅತ್ಯಂತ ಕಿರಿಯ ಶಿಕ್ಷಕಿಯಾಗಿದ್ದರು. ಅದಕ್ಕೂ ಮೊದಲು ಅವರ ಶಾಲೆಗೆ ಸೇರಿದ ಮೊದಲ ವಿದ್ಯಾರ್ಥಿನಿಯಾಗಿದ್ದರು.

"ನನ್ನ ರಾಜಕೀಯ ಶಿಕ್ಷಣದ ಆರಂಭವು ನನ್ನ ಶಾಲೆಯ ಇಬ್ಬರು ಅತ್ಯುತ್ತಮ ವಿದ್ಯಾರ್ಥಿಗಳನ್ನು ನಮ್ಮೆಲ್ಲರ ಮುಂದೆ ಹೊಡೆದಾಗ ಪ್ರಾರಂಭವಾಯಿತು. ಅವರು ಮಾಡಿದ್ದ ತಪ್ಪೆಂದರೆ ʼಮಹಾತ್ಮಾ ಗಾಂಧಿ ಕೀ ಜೈʼ ಅಂದಿದ್ದು." ಇಬ್ಬರಿಗೂ 36 ಬೆತ್ತದೇಟುಗಳನ್ನು ನೀಡಲಾಗಿತ್ತು. ಕಾನೂನು ಕೇವಲ 12 ಬೆತ್ತದೇಟುಗಳಿಗೆ ಮಾತ್ರ ಅನುಮತಿಸುತ್ತಿದ್ದ ಕಾರಣ ಚಿಂತನ್ ಕುಟ್ಟಿ ಮತ್ತು ಪದ್ಮನಾಭಯ್ಯ ವಾರಿಯರ್ ಅವರಿಗೆ ಮೂರು ದಿನಗಳ ಕಾಲ ದಿನವೊಂದಕ್ಕೆ 12 ಬೆತ್ತದೇಟುಗಳನ್ನು ನೀಡಲಾಗಿತ್ತು. ಇದರೊಂದಿಗೆ ಒಕ್ಕಲು ಮನೆಯಿಂದ ಕುಟುಂಬವೊಂದನ್ನು ಒಕ್ಕಲೆಬ್ಬಿಸಿದ್ದು ನನಗೆ ಬಹಳ ನೋವು ನೀಡಿತ್ತು."

"ಖಂಡಿತವಾಗಿಯೂ ಕಳೆದ 50 ವರ್ಷಗಳಲ್ಲಿ ಪ್ರಮುಖ ಬದಲಾವಣೆಗಳು ನಡೆದಿವೆ" ಎಂದು ಸ್ಥಳೀಯವಾಗಿ ʼಯಶೋಧಾ ಟೀಚರ್‌ʼ ಎಂದು ಕರೆಯಲ್ಪಡುವ ಅವರು ಹೇಳುತ್ತಾರೆ. "ಸ್ವಾತಂತ್ರ್ಯವು ಬದಲಾವಣೆಯ ಕಡಲನ್ನೇ ಹೊತ್ತು ತಂದಿತು."

ಶಿಕ್ಷಣವೆನ್ನುವುದು ಅಪರೂಪದ ಸವಲತ್ತಾಗಿದ್ದ ಹಳ್ಳಿ, ಕಲ್ಲಿಯಶ್ಶೆರಿ ಇಂದು ಸಾಕಷ್ಟು ಸಾಧನೆ ಮಾಡಿದೆ. ಸಾಕ್ಷರತೆಯು 100ರ ಹತ್ತಿರದಲ್ಲಿದೆ. ಗಂಡು ಮತ್ತು ಹೆಣ್ಣು ಇಬ್ಬರೂ ಶೇಕಡಾ ಇಲ್ಲಿ ಸಾಕ್ಷರರು. ಇಲ್ಲಿನ ಪ್ರತಿ ಮಗು ಶಾಲೆಗೆ ಹೋಗುತ್ತದೆ.

"21,000 ಜನಸಂಖ್ಯೆ ಹೊಂದಿರುವ ಈ ಪಂಚಾಯತ್‌ನಲ್ಲಿ 16 ಗ್ರಂಥಾಲಯಗಳಿವೆ" ಎಂದು ಓದುವ ಕೋಣೆಯ ಗ್ರಂಥಪಾಲರಾದ ಕೃಷ್ಣನ್ ಪಿಳ್ಳೈ ಸಾಕಷ್ಟು ಹೆಮ್ಮೆಯಿಂದ ಹೇಳುತ್ತಾರೆ. ಎಲ್ಲಾ 16 ಗ್ರಂಥಾಲಯಗಳು ಹಾಗೂ ಓದುವ ಕೋಣೆಗಳು ಪ್ರತಿ ಸಂಜೆ ಸಾಕಷ್ಟು ಕಾರ್ಯನಿರತವಾಗಿರುತ್ತವೆ. ಹೆಚ್ಚು ಮಲಯಾಳಂ ಪುಸ್ತಕಗಳೇ ಇವೆಯಾದರೂ ಒಂದಷ್ಟು ಇಂಗ್ಲೀಷ್‌ ಪುಸ್ತಕಗಳನ್ನು ಸಹ ಇಲ್ಲಿ ನೋಡಬಹುದು: ಹ್ಯಾನ್ ಸುಯಿನ್, ಚಾರ್ಲ್ಸ್ ಡಿಕನ್ಸ್, ಟಾಲ್‌ಸ್ಟಾಯ್, ಲೆನಿನ್, ಮಾರ್ಲೋ.ಈ ವೈವಿಧ್ಯಮಯ ಅಭಿರುಚಿಗಳು ವಿಚಿತ್ರ ರೀತಿಯಲ್ಲಿ ಪ್ರತಿಬಿಂಬಿಸುತ್ತವೆ. ಇದು ಭಾರತೀಯ ಹಳ್ಳಿಯಾದರೂ, ಅಲ್ಲಿ ನೀವು ‘ಶಾಂಗ್ರಿ ಲಾʼ  ಹೆಸರಿನ ಮನೆಗಳನ್ನು ಸಹ ಕಾಣುತ್ತೀರಿ

ಕಲ್ಲಿಶ್ಶೆರಿಯಲ್ಲಿ ಪಶ್ಚಿಮ ಏಷ್ಯಾದಲ್ಲಿ ಅರಾಫತ್‌ ಏನು ತಪ್ಪು ಮಾಡಿದರೆನ್ನುವುದರ ಕುರಿತು ಎಂಟನೇ ತರಗತಿಯವರೆಗೆ ಓದಿದವರು ನಿಮ್ಮೊಂದಿಗೆ ವಾದಿಸಬಲ್ಲರು. ಇಲ್ಲಿ ಪ್ರತಿಯೊಬ್ಬರಿಗೂ ಎಲ್ಲದರ ಬಗ್ಗೆ ಅಭಿಪ್ರಾಯವಿದೆ ಮತ್ತು ಅವರಲ್ಲಿ ತಾನು ಏನು ಯೋಚಿಸುತ್ತಾರೆಂದು ಹೇಳಲು ಯಾರೂ ಸಂಕೋಚಪಡುವುದಿಲ್ಲ.

"ಸ್ವಾತಂತ್ರ್ಯ ಹೋರಾಟ ಮತ್ತು ಶಿಕ್ಷಣದ ಜೊತೆಗೆ, ಭೂ ಸುಧಾರಣೆಯ ಸಂಘಟಿತ ಆಂದೋಲನವು ಎಲ್ಲವನ್ನೂ ಬದಲಾಯಿಸಿತು" ಎಂದು ರಾಯರಪ್ಪನ್ ಹೇಳುತ್ತಾರೆ. ಅದರ ಲಾಭವನ್ನು ಪಡೆದವರಲ್ಲೊಬ್ಬರಾದ ಥಿಯ್ಯಾ ರೈತ ಕೆ.ಕುಞಂಬು ಕೂಡ ಇದನ್ನು ಒಪ್ಪುತ್ತಾರೆ. "ಇದು ಸಾಕಷ್ಟು ಬದಲಾವಣೆ ತಂದಿತು," ಅವರು ಹೇಳುತ್ತಾರೆ. "ಭೂ ಸುಧಾರಣೆಯು ಇಲ್ಲಿ ಜಾತಿ ಶ್ರೇಣಿಯನ್ನು ಮುರಿಯಿತು. ಇದು ನಮಗೆ ಹೊಸ ಸ್ಥಾನಮಾನವನ್ನು ನೀಡಿತು. ಈ ಮೊದಲು ನಾವು ಜನ್ಮಿಗಳ ಮರ್ಜಿಯಡಿ ಬದುಕುತ್ತಿದ್ದೆವು. ಉಳುವವನಿಗೇ ಭೂಮಿಯೆನ್ನುವ ಕಾನೂನು ಅದನ್ನು ಬದಲಾಯಿಸಿತು. ಈಗ ಆಸ್ತಿ ಮಾಲಿಕರಷ್ಟೇ ನಾವೂ ಸಮಾನರು ಎನ್ನುವ ಭಾವ ನಮ್ಮಲ್ಲಿ ಮೂಡಿದೆ." ಬಹುಮುಖ್ಯವಾಗಿ, ಇದು ಬಡವರಿಗೆ ಆಹಾರ, ಶಿಕ್ಷಣ ಮತ್ತು ಆರೋಗ್ಯದ ಆರೋಗ್ಯ ಸೌಲಭ್ಯದ ವಿಷಯದಲ್ಲಿ ದೊಡ್ಡ ಬದಲಾವಣೆಯನ್ನು ತಂದಿದೆ.

"50-60 ವರ್ಷಗಳಲ್ಲಿ ದೊಡ್ಡ ಬದಲಾವಣೆಗಳಾಗಿವೆ" ಎಂದು ದಿವಂಗತ ಸುಮುಕನ್ ಅವರ ಪತ್ನಿ ಪನ್ನಯ್ಯನ್ ಜಾನಕಿ ಹೇಳುತ್ತಾರೆ. "ನನ್ನ ಸ್ವಂತ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಕಷ್ಟಕರವಾಗಿತ್ತು. ಸ್ವಾತಂತ್ರ್ಯದ ವರ್ಷಗಳು ದೊಡ್ಡ ಮಟ್ಟದ ಬದಲಾವಣೆ ತಂದಿವೆ."

ಸುಮುಕನ್ 16 ವರ್ಷಗಳ ಹಿಂದೆ ನಿಧನರಾಗಿದ್ದಾರೆ. ಅವರ ಕುಟುಂಬ ಈಗಲೂ ಅಳಿಕೋಡ್‌ನಲ್ಲಿ ವಾಸಿಸುತ್ತಿದೆ. ಸುಮುಕನ್ ಅವರ ಮಗಳು ದೂರವಾಣಿ ವಿನಿಮಯ ಕೇಂದ್ರದಲ್ಲಿ ಮೇಲ್ವಿಚಾರಕಿಯಾಗಿ ಕೆಲಸ ಮಾಡುತ್ತಾರೆ. ಅವರ ಅಳಿಯ ಕುಂಞಿರಾಮನ್ ಅವರು ಕ್ಯಾಲಿಕಟ್ಟಿನಲ್ಲಿ ಅಂಚೆ ಕಚೇರಿಗಳ ಹಿರಿಯ ಅಧೀಕ್ಷಕರಾಗಿ ನಿವೃತ್ತರಾಗಿದ್ದಾರೆ. ಅವರು ಹೇಳುತ್ತಾರೆ, "ಈಗ ಇಲ್ಲಿ ಸ್ಥಾಪಿಸಲಾಗಿರುವ ಸಾಮಾಜಿಕ ವ್ಯವಸ್ಥೆಯಲ್ಲಿ ಯಾವುದೇ ತಾರತಮ್ಯವಿಲ್ಲ. ಪ್ರಸ್ತುತ ನಮ್ಮ ಕುಟುಂಬದ ಬಳಿ ಎರಡು ಎಂಬಿಬಿಎಸ್, ಎರಡು ಎಲ್ಎಲ್‌ಬಿ ಮತ್ತು ಬಿಎಸ್ಸಿ ಪದವಿಯಿದೆ ..."

PHOTO • P. Sainath

ಕೆ.ಪಿ.ಆರ್. ರಾಯಾರಪ್ಪನ್ (ಬಲ ತುದಿ) ಸುಮುಕನ್ ಅವರ ಕೆಲವು ಮೊಮ್ಮಕ್ಕಳೊಂದಿಗೆ. ಕುಟುಂಬವು "ಎರಡು ಎಂಬಿಬಿಎಸ್, ಎರಡು ಎಲ್ಎಲ್ಬಿ ಮತ್ತು ಬಿಎಸ್ಸಿ" ಪದವಿಗಳನ್ನು ಹೊಂದಿದೆ

P. Sainath

ପି. ସାଇନାଥ, ପିପୁଲ୍ସ ଆର୍କାଇଭ୍ ଅଫ୍ ରୁରାଲ ଇଣ୍ଡିଆର ପ୍ରତିଷ୍ଠାତା ସମ୍ପାଦକ । ସେ ବହୁ ଦଶନ୍ଧି ଧରି ଗ୍ରାମୀଣ ରିପୋର୍ଟର ଭାବେ କାର୍ଯ୍ୟ କରିଛନ୍ତି ଏବଂ ସେ ‘ଏଭ୍ରିବଡି ଲଭସ୍ ଏ ଗୁଡ୍ ଡ୍ରଟ୍’ ଏବଂ ‘ଦ ଲାଷ୍ଟ ହିରୋଜ୍: ଫୁଟ୍ ସୋଲଜର୍ସ ଅଫ୍ ଇଣ୍ଡିଆନ୍ ଫ୍ରିଡମ୍’ ପୁସ୍ତକର ଲେଖକ।

ଏହାଙ୍କ ଲିଖିତ ଅନ୍ୟ ବିଷୟଗୁଡିକ ପି.ସାଇନାଥ
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

ଏହାଙ୍କ ଲିଖିତ ଅନ୍ୟ ବିଷୟଗୁଡିକ Shankar N. Kenchanuru