ಎಸ್.‌ ರಾಮಸ್ವಾಮಿ ನನಗೆ ಅವರ ಹಿರಿಯ ಸ್ನೇಹಿತನೊಬ್ಬನನ್ನು ಪರಿಚಯಿಸುತ್ತಿದ್ದರು. ಅವರು ತಮ್ಮ ಸ್ನೇಹಿತನ ಕುರಿತು ಬಹಳ ಹೆಮ್ಮೆಯಿಂದ ವಿವರಿಸುತ್ತಿದ್ದರು. ದಿನಪತ್ರಿಕೆಗಳು, ಐಎಎಸ್.‌ ಐಪಿಎಸ್‌ ಅಧಿಕಾರಿಗಳು ಮತ್ತು ಇನ್ನೂ ಅನೇಕರು ಅವರ ಈ ಹೆಮ್ಮೆಯ ಗೆಳೆಯನನ್ನು ಭೇಟಿಯಾಗಿ ಹೋಗಿದ್ದಾರೆ. ಅವರು ತಾನು ಹೇಳುತ್ತಿರುವ ವಿಷಯದಲ್ಲಿ ಯಾವ ವಿವರವೂ ತಪ್ಪಿ ಹೋಗದಂತೆ ಎಚ್ಚರವಹಿಸುತ್ತಿದ್ದರು. ಅಷ್ಟಕ್ಕೂ ಅವರು ನನಗೆ ಪರಿಚಯಿಸಲು ಹೊರಟಿದ್ದು ಓರ್ವ ಸೆಲೆಬ್ರಿಟಿಯನ್ನು.

ಅವರ ಸ್ನೇಹಿತನೆಂದರೆ 200 ವರ್ಷಗಳಷ್ಟು ಹಳೆಯದಾದ ಮರ: ಮಾಲಿಗಂಪಟ್ಟುವಿನ ದೊಡ್ಡ ಆಯಿರಂಕಾಚಿ

ಆಯಿರಂಕಾಚಿ ಎನ್ನುವುದು ಒಂದು ಪಳಂ ಮರ, ಹಲಸಿನ ಮರ. ಮತ್ತು ಈ ಮರ ಅಗಲ ಮತ್ತು ಎತ್ತರಕ್ಕಿದೆ. ಜೊತೆಗೆ ಫಲವತ್ತಾಗಿಯೂ ಇದೆ. ಮರಕ್ಕೆ ಒಂದು ಸುತ್ತು ಬರಲು 25 ಸೆಕೆಂಡ್‌ ಬೇಕಾಗುತ್ತದೆ. ಅದರ ಅತ್ಯಂತ ಹಳೆಯ ಕಾಂಡದಲ್ಲಿ ನೂರಕ್ಕೂ ಹೆಚ್ಚು ಹಸಿರು ಹಲಸಿನ ಕಾಯಿಗಳು ನೇತಾಡುತ್ತಿದ್ದವು. ಇಂತಹ ಮರದ ಮುಂದೆ ನಿಲ್ಲುವುದೇ ಒಂದು ಗೌರವ. ಅದರ ಸುತ್ತ ನಡೆಯುವುದು ನಮ್ಮ ಪಾಲಿನ ಸುಯೋಗ. ನನ್ನ ಪ್ರತಿಕ್ರಿಯೆಯನ್ನು ಕೇಳಿ ರಾಮಸ್ವಾಮಿ ನಸುನಕ್ಕರು. ಸಂತೋಷ ಮತ್ತು ಹೆಮ್ಮೆ ಅವರ ಸಮೃದ್ಧ ಮೀಸೆಯನ್ನೊಮ್ಮೆ ತಿರುವಿ ಕಣ್ಣುಗಳಿಗೆ ತಲುಪಿತು. ಅವರು ತಮ್ಮ ಬದುಕಿನ 71 ವರ್ಷಗಳಲ್ಲಿ ನನ್ನಂತಹ ಹಲವು ಅತಿಥಿಗಳನ್ನು ನೋಡಿದ್ದಾರೆ. ಅವರು ಮರದ ಕುರಿತು ಇನ್ನಷ್ಟು ಹೇಳತೊಡಗಿದರು.

“ನಾವು ಕಡಲೂರು ಜಿಲ್ಲೆ, ಪನ್ರುಟ್ಟಿ ಬ್ಲಾಕಿನ ಮಾಲಿಂಗಂಪಟ್ಟು ಎನ್ನುವ ಸಣ್ಣ ಊರಿನಲ್ಲಿದ್ದೇವೆ,” ಎಂದು ಖಾವಿಯ ಪಂಚೆ ಮತ್ತು ಬಡ ಹೆಗಲ ಮೇಲೊಂದು ಶಾಲು ಧರಿಸಿದ್ದ ಅವರು ಮರದ ಮುಂದೆ ನಿಂತು ಹೇಳತೊಡಗಿದರು. “ಈ ಮರವನ್ನು ನೆಟ್ಟವರು ನನ್ನ ಹಿರಿಯರು. ಸುಮಾರು ಐದು ತಲೆಮಾರಿನ ಹಿಂದಿನದು ಈ ಮರ. ನಾವು ಇದನ್ನು ʼಆಯಿರಂಕಾಚಿʼ, ಸಾವಿರ ಹಣ್ಣಿನ ಮರ ಎಂದು ಕರೆಯುತ್ತೇವೆ. ಈ ಮರ ವರ್ಷಕ್ಕೆ 200, 300 ಹಣ್ಣು ಬಿಡುತ್ತದೆ. ಮತ್ತು ಅವು 8 ರಿಂದ 10 ದಿನಗಳಲ್ಲಿ ಹಣ್ಣಾಗುತ್ತವೆ. ತೊಳೆಗಳು ರುಚಿಕರವಾಗಿರುತ್ತವೆ, ಬಣ್ಣವು ಸುಂದರವಾಗಿರುತ್ತದೆ, ಮತ್ತು ಹಣ್ಣಾಗದ ಕಾಯಿಗಳನ್ನು ಬಿರಿಯಾನಿಯಲ್ಲಿ ಬೇಯಿಸಬಹುದು." ಅವರು ಅರ್ಧ ನಿಮಿಷದಲ್ಲಿ ತನ್ನ ಮರದ ಸದ್ಗುಣಗಳನ್ನು ವಿವರಿಸಿದರು. ಅವರ ವಿವರಣೆಯೂ ಈ ಮರದಂತೆ ಹಲವು ವರ್ಷಗಳಿಂದ ಹದಗೊಳ್ಳುತ್ತಲೇ ಬಂದಿದೆ.

PHOTO • M. Palani Kumar

ಎಸ್. ರಾಮಸ್ವಾಮಿ ತನ್ನ ಪ್ರೀತಿಯ ಸಂಗಾತಿ, ಮಹಾನ್ ಆಯಿರಂಕಾಚಿಯೊಡನೆ, ಅವರ ತೋಟದಲ್ಲಿನ 200 ವರ್ಷಗಳಷ್ಟು ಹಳೆಯದಾದ ಹಲಸಿನ ಮರ

2022ರ ಏಪ್ರಿಲ್‌ ತಿಂಗಳ ಮಧ್ಯಭಾಗದಲ್ಲಿ ತಮಿಳುನಾಡಿನ ಕಡಲೂರು ಜಿಲ್ಲೆಯ ಪನ್ರುಟ್ಟಿ ಬ್ಲಾಕಿಗೆ ಪರಿ ಮೊದಲ ಬಾರಿ ಭೇಟಿ ನೀಡಿತ್ತು. ಅಲ್ಲಿ ಹಲಸು ಬೆಳೆಗಾರರು ಮತ್ತು ಮಾರಾಟಗಾರರನ್ನು ಭೇಟಿಯಾಗುವುದು ನಮ್ಮ ಉದ್ದೇಶವಾಗಿತ್ತು. ರಾಜ್ಯದ ಅತಿದೊಡ್ಡ ಹಣ್ಣಿನ ಉತ್ಪಾದಕನಾಗಿ, ಈ ಪಟ್ಟಣವು - ವಿಶೇಷವಾಗಿ ಹಲಸಿನ ಹಣ್ಣಿನ ಋತುವಿನಲ್ಲಿ, ಫೆಬ್ರವರಿಯಿಂದ ಜುಲೈ ತನಕ – ಸಾವಿರಾರು ಕೇಜಿಗಳಷ್ಟು ಹಣ್ಣನ್ನು ಮಾರಾಟ ಮಾಡುವ ಅಂಗಡಿಗಳಿಂದ ಕೂಡಿದೆ. ಇಲ್ಲಿನ ಮಾರಾಟಗಾರರು ಕಾಲುದಾರಿಯ ಅಂಗಡಿಗಳು ಮತ್ತು ಟ್ರಾಫಿಕ್‌ ಜಂಕ್ಷನ್ನುಗಳಲ್ಲಿ ಹಣ್ಣು ಮತ್ತು ಕಾಯಿಗಳನ್ನು ವಿಂಗಡಿಸುತ್ತಾರೆ. ಪನ್ರುಟ್ಟಿ ಪಟ್ಟಣದಲ್ಲಿ ʼಮಂಡಿʼಗಳಾಗಿ ಕಾರ್ಯನಿರ್ವಹಿಸುವ ಸುಮಾರು ಎರಡು ಡಜನ್‌ ಅಂಗಡಿಗಳು ಇವೆ. ಇವು ಇಲ್ಲಿನ ಬೃಹತ್‌ ವ್ಯವಹಾರವನ್ನು ನಿರ್ವಹಿಸುತ್ತವೆ. ಪ್ರತಿದಿನ, ಇಲ್ಲಿಗೆ ನೆರೆಯ ಹಳ್ಳಿಗಳಿಂದ ಲಾರಿಗಳಲ್ಲಿ ಹಲಸಿನ ಹಣ್ಣುಗಳು ಬರುತ್ತವೆ ಮತ್ತು ಚೆನ್ನೈ, ಮಧುರೈ, ಸೇಲಂ, ಮಹಾರಾಷ್ಟ್ರದ ಆಂಧ್ರಪ್ರದೇಶ ಮತ್ತು ಮುಂಬೈವರೆಗೆ ಸಗಟು ವ್ಯಾಪಾರಿಗಳಿಗೆ ಮಾರಾಟವಾಗುತ್ತವೆ.

ಆರ್. ವಿಜಯಕುಮಾರ್ ಅವರಿಗೆ ಸೇರಿದ ಅಂತಹ ಒಂದು ಮಂಡಿಯಲ್ಲಿ ನಾನು ರಾಮಸ್ವಾಮಿ ಮತ್ತು ಅವರ ಪರಂಪರಾಗತ ವೃಕ್ಷದ ಬಗ್ಗೆ ಕೇಳಲ್ಪಟ್ಟೆ. "ಹೋಗಿ ಅವರನ್ನು ಭೇಟಿಯಾಗಿ, ಅವರು ನಿಮಗೆ ಎಲ್ಲವನ್ನೂ ಹೇಳುತ್ತಾರೆ" ಎಂದು ನನಗೆ ಆಶ್ವಾಸನೆ ಕೊಟ್ಟ ವಿಜಯ ಕುಮಾರ್ ಅಲ್ಲೇ ರಸ್ತೆ ಬದಿಯ ಅಂಗಡಿಯಲ್ಲಿ ಚಹಾ ಕುಡಿಸಿ, "ನಿಮ್ಮೊಂದಿಗೆ ಅವರನ್ನು ಕರೆದೊಯ್ಯಿರಿ" ಎಂದು ಅವರು ಮುಂದಿನ ಬೆಂಚಿನಲ್ಲಿ ಕುಳಿತಿದ್ದ ಓರ್ವ ಹಿರಿಯ ರೈತನತ್ತ ಕೈ ತೋರಿಸಿದರು.

ಮಾಲಿಗಂಪಟ್ಟು ಅಲ್ಲಿಂದ ಸುಮಾರು ಐದು ಕಿಲೋಮೀಟರ್ ದೂರದಲ್ಲಿತ್ತು. ಇಲ್ಲಿಗೆ ತಲುಪಲು ನಮಗೆ ಕಾರಿನಲ್ಲಿ 10 ನಿಮಿಷಗಳು ಹಿಡಿದವು, ಮತ್ತು ರೈತ ನಮಗೆ ನಿಖರವಾದ ದಾರಿಯನ್ನು ತೋರಿಸಿದರು. "ಬಲಕ್ಕೆ ತಿರುಗಿ, ಆ ರಸ್ತೆಯಲ್ಲಿ ಹೋಗಿ, ಇಲ್ಲಿ ನಿಲ್ಲಿ, ಅದು ರಾಮಸ್ವಾಮಿ ಇರುವ ಸ್ಥಳ," ಎಂದು ಸುಂದರವಾದ ಕಪ್ಪು ಬಿಳುಪು ನಾಯಿಯಿಂದ ರಕ್ಷಿಸಲ್ಪಡುತ್ತಿರುವ ದೊಡ್ಡ ಮನೆಯನ್ನು ತೋರಿಸುತ್ತಾ ಹೇಳಿದರು. ವರಾಂಡದಲ್ಲಿ ಉಯ್ಯಾಲೆ, ಕೆಲವು ಕುರ್ಚಿಗಳು, ಸುಂದರವಾಗಿ ಕೆತ್ತಿದ ಮುಂಭಾಗದ ಬಾಗಿಲು ಮತ್ತು ಅನೇಕ ಸೆಣಬಿನ ಚೀಲಗಳು ಕೃಷಿ ಉತ್ಪನ್ನಗಳಿಂದ ತುಂಬಿದ್ದವು. ಗೋಡೆಗಳು ಛಾಯಾಚಿತ್ರಗಳು, ಕ್ಯೂರಿಯೋಗಳು ಮತ್ತು ಕ್ಯಾಲೆಂಡರುಗಳಿಂದ ಕೂಡಿದ್ದವು.

ರಾಮಸ್ವಾಮಿಯವರು ನಮ್ಮನ್ನು ನಿರೀಕ್ಷಿಸಿರಲಿಲ್ಲ, ಆದರೆ ಅವರು ಹೋಗಿ ಅನೇಕ ಪುಸ್ತಕಗಳು ಮತ್ತು ಚಿತ್ರಗಳನ್ನು ತರಲು ಹೊರಡುತ್ತಾ, ಕುಳಿತುಕೊಳ್ಳುವಂತೆ ನಮ್ಮನ್ನು ಆಹ್ವಾನಿಸಿದರು. ಹೆಚ್ಚು ಬೇಡಿಕೆಯ ತಜ್ಞರಾಗಿ, ಅವರು ಕುತೂಹಲಭರಿತ ಸಂದರ್ಶಕರಿಗೆ ಒಗ್ಗಿಕೊಂಡಿದ್ದರು. ಮತ್ತು ಆ ಬೆಚ್ಚಗಿನ ಏಪ್ರಿಲ್ ಮುಂಜಾವಿನಲ್ಲಿ, ಪ್ಲಾಸ್ಟಿಕ್ ಕುರ್ಚಿಯ ಮೇಲೆ ಕುಳಿತು, ಕರುವಾಡು (ಒಣಗಿದ ಮೀನು) ಮಾರುವ ಇಬ್ಬರು ಹೆಂಗಸರ ಪಕ್ಕದಲ್ಲಿ, ಹಲಸಿನ ಹಣ್ಣಿನ ಕುರಿತು ಒಂದೆರಡು ವಿಷಯಗಳಲ್ಲಿ ಅರಿವು ಮೂಡಿಸಿದರು...

*****

PHOTO • Aparna Karthikeyan
PHOTO • M. Palani Kumar

ರಾಮಸ್ವಾಮಿ ಅವರು ಕಡಲೂರು ಜಿಲ್ಲೆಯ ಪನ್ರುಟ್ಟಿ ಬ್ಲಾಕ್‌ನ ಮಾಲಿಗಂಪಟ್ಟು ಕುಗ್ರಾಮದಲ್ಲಿ ವಿಶ್ವದ ಅತಿದೊಡ್ಡ ಹಣ್ಣುಗಳಲ್ಲಿ ಒಂದಾದ ಹಲಸನ್ನು ಬೆಳೆಯುತ್ತಾರೆ. ಅತ್ಯಂತ ಹಳೆಯ ಮರವಾದ ಆಯಿರಂಕಾಚಿಯನ್ನು ಅವರ ಪೂರ್ವಜರು ಐದು ತಲೆಮಾರುಗಳ ಹಿಂದೆ ಅವರ ತೋಟದಲ್ಲಿ ನೆಟ್ಟರು

ಜಗತ್ತಿನ ಅತಿದೊಡ್ಡ ಹಣ್ಣುಗಳಲ್ಲಿ ಒಂದಾದ ಇದನ್ನು 'ಜಾಕ್(ಹಲಸು)' ಎಂದು ಆಡುಮಾತಿನಲ್ಲಿ ಕರೆಯಲಾಗುತ್ತದೆ, ಇದು ದಕ್ಷಿಣ ಭಾರತದ ಪಶ್ಚಿಮ ಘಟ್ಟಗಳ ಮೂಲದ ಹಣ್ಣು. ಈ ಹೆಸರು ಪೋರ್ಚುಗೀಸ್ ಜಾಕಾದಿಂದ ಬಂದಿದೆ. ಇದನ್ನು ಮಲಯಾಳಂ ಪದವಾದ ಚಕ್ಕದಿಂದ ತೆಗೆದುಕೊಳ್ಳಲಾಯಿತು. ಮತ್ತೆ ಇದರ ವೈಜ್ಞಾನಿಕ ಹೆಸರು ಸ್ವಲ್ಪ ಸಂಕೀರ್ಣವಾಗಿದೆ: ಆರ್ಟೊಕಾರ್ಪಸ್ ಹೆಟೆರೊಫಿಲಸ್ .

ಆದರೆ ಅಂತರರಾಷ್ಟ್ರೀಯ ಸಮುದಾಯವು ಮುಳ್ಳಿನಿಂದ ಕೂಡಿದ, ಹಸಿರಾಗಿರುವ, ವಿಚಿತ್ರವಾಗಿ ಕಾಣುವ ಹಣ್ಣನ್ನು ಗಮನಿಸುವ ಮೊದಲೇ, ತಮಿಳು ಕವಿಗಳು ಅದನ್ನು ತಮ್ಮ ಕವಿತೆಗಳಲ್ಲಿ ತಂದಿದ್ದರು. ಪ ಲಾ ಪಳಮ್ ಎಂದು ಕರೆಯಲ್ಪಡುವ ಈ ಬೃಹತ್ ಹಣ್ಣು 2,000 ವರ್ಷಗಳ ಹಿಂದೆ ಬರೆದ ಪ್ರೇಮ ಕವಿತೆಗಳಲ್ಲಿ ಕುತೂಹಲಕಾರಿಯಾಗಿ ಕಾಣಿಸಿಕೊಂಡಿದೆ.

ನಿನ್ನ ತಣ್ಣನೆಯ ಬಟ್ಟಲ ಕಂಗಳಲ್ಲಿ ನೀರು ಹರಿಯಲು ಬಿಟ್ಟು
ಅವನು ತನ್ನ ಪ್ರಸಿದ್ಧ ದೇಶಕ್ಕೆ ತೆರಳುತ್ತಾನೆ
ಅವನ ದೇಶದ ಬೆಟ್ಟಗಳ ತುಂಬಾ ಹಲಸಿನ ಮರಗಳು
ಆ ಮರಗಳ ತುಂಬಾ ಘಮ್ಮೆನ್ನುವ ಹಲಸಿನ ಹಣ್ಣುಗಳು
ಕಲ್ಲು ಬಿರುಕಿನ ನಡುವೆ ಬೀಳುವ ಹಣ್ಣುಗಳು
ಜೇನು ತಟ್ಟಿಗಳ ಹರಿದು ಬೀಳಿಸುವವು

ಐಂಕುರುನೂರು - 214 , ಸಂಗಮ ಕಾವ್ಯ

ಭಾಷಾಂತರಕಾರ ಚೆಂತಿಲ್ ನಾಥನ್ "ಕಪಿಲರ ಅದ್ಭುತ ಕವಿತೆ" ಎಂದು ಕರೆಯುವ ಮತ್ತೊಂದು ಪದ್ಯದಲ್ಲಿ, ದೊಡ್ಡ ಮಾಗಿದ ಹಲಸಿನ ಹಣ್ಣನ್ನು ಮಹಾನ್ ಪ್ರೇಮಕ್ಕೆ ಹೋಲಿಸಲಾಗಿದೆ.

ಸಣ್ಣ ಕೊಂಬೆಯಲ್ಲಿ ದೊಡ್ಡ ಹಣ್ಣು ತೂಗುವಂತೆ
ಆಕೆಯ ದುರ್ಬಲ ಬದುಕು , ಆದರೆ ಆಕೆಯ ಜೀವನ ಪ್ರೀತಿ ಅದಮ್ಯ!

ಕುರುಂತೋಕೈ - 18 , ಸಂಗಮ್ ಕಾವ್ಯ

ಕ್ರಿ.ಪೂ. 400ರ ಆಸುಪಾಸಿನ ಬೌದ್ಧ ಮತ್ತು ಜೈನ ಸಾಹಿತ್ಯದಲ್ಲಿ ಹಲಸಿನ ಹಣ್ಣಿನ ಜೊತೆಗೆ ಬಾಳೆಹಣ್ಣು, ದ್ರಾಕ್ಷಿ ಮತ್ತು ಕಿತ್ತಳೆಯಂತಹ ಇತರ ಹಣ್ಣುಗಳ ಬಗ್ಗೆಯೂ ಉಲ್ಲೇಖಿಸಲಾಗಿದೆ ಎಂದು ಕೆ.ಟಿ. ಅಚ್ಚಯ್ಯ ಇಂಡಿಯನ್ ಫುಡ್: ಎ ಹಿಸ್ಟಾರಿಕಲ್ ಕಂಪ್ಯಾನಿಯನ್ ಎಂಬ ಕೃತಿಯಲ್ಲಿ ಬರೆದಿದ್ದಾರೆ .

PHOTO • M. Palani Kumar

ತೋಟದ ಒಳಗೆ, ಕುಣಿಯುವ ನೆರಳುಗಳ ನಡುವೆ, ರಾಮಸ್ವಾಮಿ ನಿಂತು ಹಳೆಯ ಮರಗಳಾಚೆಗಿನ ಜಗತ್ತನ್ನು ನೋಡುತ್ತಿದ್ದಾರೆ

ಅಲ್ಲಿಂದ ಸೀದಾ 16ನೇ ಶತಮಾನಕ್ಕೆ ಬಂದರೆ. ಆಗ ಚಕ್ರವರ್ತಿ ಬಾಬರ್ (ಈತ ಒಬ್ಬ "ಅದ್ಭುತ ದಿನಚರಿ ಲೇಖಕ"), ಹಿಂದೂಸ್ತಾನದ ಹಣ್ಣುಗಳನ್ನು "ನಿಖರವಾಗಿ ವರ್ಣಿಸಿದ್ದಾನೆ" ಎಂದು ಅಚ್ಚಯ್ಯ ಬರೆಯುತ್ತಾರೆ. ಅವನು ಹಲಸಿನ ಹಣ್ಣಿನ ದೊಡ್ಡ ಅಭಿಮಾನಿಯಂತೆ ಕಾಣುವುದಿಲ್ಲ, ಏಕೆಂದರೆ ಅವನು ಅದನ್ನು "ಕುರಿಯ ಹೊಟ್ಟೆಗೆ ತುಂಬಿಸಿ ಮಾಡುವ ಗಿಪಾ [ಹಗ್ಗಿಸ್ ಅಥವಾ ಪುಡ್ಡಿಂಗ್]ಗೆ ಹೋಲಿಸುತ್ತಾನೆ ಮತ್ತು  ಅದನ್ನು "ಅತಿಯಾಗಿ ಸಿಹಿ" ಎಂದು ಕರೆಯುತ್ತಾನೆ.

ತಮಿಳುನಾಡಿನಲ್ಲಿ, ಇದು ಇಂದಿಗೂ ಜನಪ್ರಿಯ ಹಣ್ಣಾಗಿ ಉಳಿದಿದೆ. ತಮಿಳು ಭಾಷೆಯು ಒಗಟುಗಳು ಮತ್ತು ಗಾದೆಗಳನ್ನು ಈ ಹಣ್ಣು ಮಧುರವಾಗಿಸಿದೆ, ಇದು ತಮಿಳು ದೇಶದ ಮೂರು ಹಣ್ಣುಗಳಾದ ಮಾ, ಪಳ, ವಾಳೈ (ಮಾವು, ಹಲಸು, ಬಾಳೆಹಣ್ಣು) ಎಂಬ ಮೂರು ಹಣ್ಣುಗಳನ್ನು ಒಳಗೊಂಡಿರುವ ಗಾದೆಯಲ್ಲಿ ಪಾಲು ಪಡೆದಿದೆ. ಇರಾ. ಪಂಚವರ್ಣಂ, ಹಲಸು ಕುರಿತ ತನ್ನ ಅತ್ಯುತ್ತಮ ಮತ್ತು ಸಮಗ್ರ ಕೃತಿ ಪಳ ಮರಂ: ಹಣ್ಣುಗಳ ರಾಜದಲ್ಲಿ , ಇತರ ಅನೇಕ ಗಾದೆಗಳನ್ನು ಉಲ್ಲೇಖಿಸಿದ್ದಾನೆ. ಒಂದು ಸುಂದರವಾದ ಸಾಲು ಹೀಗೆ ಹೇಳುತ್ತದೆ:

ಮುಳ್ಳುಕುಳ್ಳೈ ಮುತ್ತುಕುಳೈಯಂ. ಅದು ಎನ್ನಾ ? ಪಲಪಳಂ.
(ಮುಳ್ಳುಗಳ ಒಳಗೆ ಮುತ್ತಿನ ಬೆಳೆ ಏನದು? ಹಲಸಿನ ಹಣ್ಣು.)

ಈ ಹಣ್ಣು ಇತ್ತೀಚೆಗೆ ಹಲವು ಪುಸ್ತಕಗಳಲ್ಲೂ ಸ್ಥಳ ಪಡೆಯುತ್ತಿದೆ. ಇಂಟರ್‌ನ್ಯಾಷನಲ್ ಜರ್ನಲ್ ಆಫ್ ಫುಡ್ ಸೈನ್ಸ್‌ ಪತ್ರಿಕೆಯಲ್ಲಿನ 2019 ರ ಪ್ರಬಂಧದಲ್ಲಿ, ಆರ್.ಎ.ಎಸ್.ಎನ್. ರಣಸಿಂಘೆ ಹೇಳುತ್ತಾರೆ, "ಹಣ್ಣುಗಳು, ಎಲೆಗಳು ಮತ್ತು ತೊಗಟೆಗಳು ಸೇರಿದಂತೆ ಹಲಸಿನ ಮರದ ಹಲವಾರು ಭಾಗಗಳನ್ನು ಅದರ ಆಂಟಿಕಾರ್ಸಿನೋಜೆನಿಕ್, ಆಂಟಿಮೈಕ್ರೋಬಿಯಲ್, ಆಂಟಿಫಂಗಲ್, ಆಂಟಿ-ಇನ್ಫ್ಲಮೇಟರಿ, ಗಾಯ ಗುಣಪಡಿಸುವಿಕೆ ಮತ್ತು ಹೈಪೋಗ್ಲೈಸಿಮಿಕ್ ಪರಿಣಾಮಗಳಿಂದಾಗಿ ಸಾಂಪ್ರದಾಯಿಕ ಔಷಧಿಗಳಲ್ಲಿ ಇದನ್ನು ವ್ಯಾಪಕವಾಗಿ ಬಳಸಲಾಗಿದೆ." ಆದರೂ, ಅದು "ಬೆಳೆಯುವ ಪ್ರದೇಶಗಳಲ್ಲಿ ವಾಣಿಜ್ಯ ಪ್ರಮಾಣದ ಸಂಸ್ಕರಣೆಯಲ್ಲಿ ಕಡಿಮೆ ಬಳಕೆಯಾಗಿದೆ."

*****

PHOTO • M. Palani Kumar
PHOTO • M. Palani Kumar

ಎಡ: ರಾಮಸ್ವಾಮಿಯವರ ತೋಟದಲ್ಲಿನ ಒಂದು ಹಲಸಿನ ಗಿಡ. ಬಲ: ಹಲಸಿನ ಹಂಗಾಮಿನಲ್ಲಿ ಮುಳ್ಳುಗಳಿಂದ ಕೂಡಿದ ಹಸಿರು ಕಾಯಿಗಳು ಈ ಹಿರಿಯ ಮರದ ಕಾಂಡವನ್ನು ಮುಚ್ಚತೊಡಗುತ್ತವೆ

ಕಡಲೂರು ಜಿಲ್ಲೆಯಲ್ಲಿರುವ ಪನ್ರುಟ್ಟಿ ಬ್ಲಾಕ್ ತಮಿಳುನಾಡಿನ ಹಲಸಿನ ರಾಜಧಾನಿಯಾಗಿದೆ. ಮತ್ತು ಹಲಸಿನ ಹಣ್ಣು ಮತ್ತು ಅದರ ಭೌಗೋಳಿಕತೆಯ ಬಗ್ಗೆ ರಾಮಸ್ವಾಮಿಯ ಜ್ಞಾನವು ಆಳವಾಗಿದೆ. ಮರವು ಎಲ್ಲಿ ಉತ್ತಮವಾಗಿ ಬೆಳೆಯುತ್ತದೆ ಎಂಬುದನ್ನು ಅವರು ವಿವರಿಸುತ್ತಾರೆ. ಅಂದರೆ, ನೀರಿನ ಮಟ್ಟವು ನೆಲದಿಂದ 50 ಅಡಿಗಳಷ್ಟು ಕೆಳಗಿರುವಲ್ಲಿ ಇದು ಬೆಳೆಯುತ್ತದೆ; ಮಳೆಯೊಂದಿಗೆ ನೀರಿನ ಮಟ್ಟ ಏರಿದರೆ, ಬೇರುಗಳು ಕೊಳೆಯುತ್ತವೆ. "ಗೋಡಂಬಿ ಮತ್ತು ಮಾವಿನ ಮರಗಳು ನೀರನ್ನು ತಡೆದುಕೊಳ್ಳಬಹುದು, ಆದರೆ ಹಲಸಿನಿಂದ ಸಾಧ್ಯವಿಲ್ಲ" ಎಂದು ಅವರು ಹೇಳುತ್ತಾರೆ. ಪ್ರವಾಹ ಉಂಟಾದರೆ, ಮರದ ಕಥೆ ಮುಗಿದಂತೆ.

ಅವರ ಅಂದಾಜಿನ ಪ್ರಕಾರ, ಅವರ ಊರಾದ ಮಾಲಿಗಂಪಟ್ಟುವಿನ 20 ಕಿಲೋಮೀಟರ್ ವ್ಯಾಪ್ತಿಯಲ್ಲಿನ ಕೃಷಿ ಪ್ರದೇಶದ ನಾಲ್ಕನೇ ಒಂದು ಭಾಗದಷ್ಟು ಭಾಗವನ್ನು  ಹಲಸಿನ ಕೃಷಿಗೆ ಬಿಟ್ಟುಕೊಡಲಾಗಿದೆ. ತಮಿಳುನಾಡಿನ ಜಿ ಓವರ್ನ್ಮೆಂಟ್ನ 2022-23ರ ಕೃಷಿ ನೀತಿ ಟಿಪ್ಪಣಿಯ ಪ್ರಕಾರ, ರಾಜ್ಯದಲ್ಲಿ 3,180 ಹೆಕ್ಟೇರ್ ಪ್ರದೇಶದಲ್ಲಿ ಹಲಸಿನ ಬೆಳೆ ಬೆಳೆಯುತ್ತದೆ. ಅವುಗಳಲ್ಲಿ 718 ಹೆಕ್ಟೇರ್ ಕಡಲೂರು ಜಿಲ್ಲೆಯಲ್ಲಿವೆ.

2020-21ರಲ್ಲಿ, ಭಾರತದಲ್ಲಿ ಒಟ್ಟು 1 ಲಕ್ಷ ಹೆಕ್ಟೇರುಗಳಲ್ಲಿ ಹಲಸು ಬೆಳೆಯಲಾಗಿದೆ. ಕಡಲೂರು ಜಿಲ್ಲೆಯು ಇದರಲ್ಲಿ ಚಾಂಪಿಯನ್ ಆಗಿರದೇ ಇರಬಹುದು, ಆದರೆ ಈ ಪ್ರದೇಶದಲ್ಲಿ, ಹಲಸು ಒಂದು ಪ್ರಮುಖ ಬೆಳೆಯಾಗಿದೆ. ಮತ್ತು ತಮಿಳುನಾಡಿನಲ್ಲಿ ಬಳಕೆಯಾಗುವ ಪ್ರತಿ ನಾಲ್ಕು ಹಲಸಿನ ಹಣ್ಣುಗಳಲ್ಲಿ ಒಂದು ಹಣ್ಣು ಇಲ್ಲಿಂದ ಬರುತ್ತದೆ.

ಪಳ ಮರಮ್‌ ನ ಆರ್ಥಿಕ ಮೌಲ್ಯವೆಷ್ಟು? ರಾಮಸ್ವಾಮಿ ಅದರಲ್ಲಿ ಕೆಲವನ್ನು ವಿವರಿಸುತ್ತಾರೆ. 15 ಅಥವಾ 20 ವರ್ಷದ ಹಳೆಯ ಮರಕ್ಕೆ ವರ್ಷಕ್ಕೆ 12,500 ರೂಪಾಯಿಗಳ ಗುತ್ತಿಗೆ ಮೌಲ್ಯವಿದೆ ಎಂದು ಅವರು ಹೇಳುತ್ತಾರೆ. "ಐದು ವರ್ಷಗಳಷ್ಟು ಹಳೆಯದಾದ ಮರಗಳಿಗೆ ಈ ಬೆಲೆ ಸಿಗುವುದಿಲ್ಲ. ಅವು ಕೇವಲ ಮೂರು ಅಥವಾ ನಾಲ್ಕು ಹಣ್ಣುಗಳನ್ನು ಮಾತ್ರ ನೀಡುತ್ತವೆ. ಆದರೆ 40 ವರ್ಷ ಹಳೆಯ ಮರವು 50ಕ್ಕೂ ಹೆಚ್ಚು ಹಣ್ಣುಗಳನ್ನು ಹೊಂದಿರುತ್ತದೆ."

ಮರವು ಬೆಳೆದಂತೆ, ಅದರ ಇಳುವರಿಯೂ ಬೆಳೆಯುತ್ತದೆ.

ಈ ಬೆಳೆಯ ವಿಷಯದಲ್ಲಿ ಪ್ರತಿ ಮರದಿಂದ ಸಿಗುವ ಸಂಪಾದನೆಯನ್ನು ಹೇಳುವುದು ಸ್ವಲ್ಪ ಕಷ್ಟದ ಕೆಲಸ. ಮತ್ತು ಇದರ ಲೆಕ್ಕಾಚಾರ ಸ್ವಲ್ಪ ವಿಚಿತ್ರವಾಗಿಯೂ ಇದೆ. ಆ ದಿನ ಬೆಳಗ್ಗೆ ಪನ್ರುಟ್ಟಿಯಲ್ಲಿನ ಮಂಡಿಯಲ್ಲಿದ್ದ ರೈತರ ಗುಂಪು ಇದರ ವ್ಯವಹಾರವನ್ನು ವಿವರಿಸುತ್ತಾ, ಪ್ರತಿ 100 ಮರಗಳಿಂದ ಅವರು 2 ಲಕ್ಷದಿಂದ 2.5 ಲಕ್ಷ ರೂ.ಗಳವರೆಗೆ ಸಂಪಾದಿಸುವುದಾಗಿ ವಿವರಿಸಿದರು. ಇದರಲ್ಲಿ ರಸಗೊಬ್ಬರ, ಕೀಟನಾಶಕ, ಕಾರ್ಮಿಕರ ಕೂಲಿ, ಸಾರಿಗೆ ಮತ್ತು ಕಮಿಷನ್ ವೆಚ್ಚ - 50,000ರಿಂದ 70,000 ರೂ.

ರಾಮಸ್ವಾಮಿಯವರ ಸಂಗ್ರಹದಲ್ಲಿನ ಮಾಲಿಗಂಪಟ್ಟುವಿನ 200 ವರ್ಷ ಹಳೆಯ ಆಯಿರಂಕಾಚಿಯ ಚಿತ್ರ

ಮತ್ತೆ ಉಳಿದ ಲೆಕ್ಕವೂ ಭಿನ್ನವಾಗಿದೆ. ಮರವೊಂದರಲ್ಲಿ ಸಿಗುವ ಹಣ್ಣಿನ ಸಂಖ್ಯೆ,ಒಂದು ಹಣ್ಣಿನ ಬೆಲೆ, ಒಂದು ಟನ್ನಿನ ಬೆಲೆ ಹೀಗೆ ಯಾವುದನ್ನೂ ಇಷ್ಟೇ ಎಂದು ಊಹಿಸಲು ಸಾಧ್ಯವಿಲ್ಲ. ಶ್ರೇಣಿಯನ್ನು ನೋಡಿ: ಒಂದು ಹಣ್ಣು ಅದು ಅದರ ಹಂಗಾಮಿನ ಉತ್ತುಂಗ ಮತ್ತು ಆರಂಭವನ್ನು ಅವಲಂಬಿಸಿ 150 ರಿಂದ 500 ರೂಪಾಯಿಗಳನ್ನು ಪಡೆಯುತ್ತದೆ. ಮತ್ತು ಇದು ಗಾತ್ರದಲ್ಲಿ 8ರಿಂದ 15 ಕಿಲೋಗಳವರೆಗೆ 'ಸಾಮಾನ್ಯ'ವಾಗಿ ಇರುತ್ತವೆ. ಕೆಲವು 50 ಕಿಲೋ ಇರುವುದೂ ಇದೆ. ಇನ್ನೂ ಕೆಲವೊಮ್ಮೆ 80 ಕಿಲೋ ತನಕ ತೂಗುತ್ತವೆ. (ಪನ್ರುಟ್ಟಿಯಲ್ಲಿ) ಏಪ್ರಿಲ್ 2022ರಲ್ಲಿ ಒಂದು ಟನ್ ಹಲಸಿನ ಬೆಲೆ 30,000 ರೂಪಾಯಿಗಳಾಗಿತ್ತು. ಮತ್ತು ಸಾಮಾನ್ಯವಾಗಿ, ಯಾವಾಗಲೂ ಅಲ್ಲದಿದ್ದರೂ, ಒಂದು ಟನ್‌ಗೆ 100 ಹಣ್ಣುಗಳು ಇರುತ್ತವೆ.

ತದನಂತರ ಬೆಲೆಬಾಳುವ ಮರದ ದಿಮ್ಮಿ ಇದೆ. 40 ವರ್ಷ ಪ್ರಾಯದ ಮರವು "ಅದರ ದಿಮ್ಮಿಯನ್ನು ಮಾರಿದಾಗ 40,000 ರೂಪಾಯಿಗಳನ್ನು ಪಡೆಯುತ್ತದೆ," ಎಂದು ರಾಮಸ್ವಾಮಿ ವಿವರಿಸುತ್ತಾರೆ. ಮತ್ತು ಹಲಸಿನ ಮರವು ಅತ್ಯುತ್ತಮವಾದದ್ದು ಎಂದು ಅವರು ಹೇಳುತ್ತಾರೆ. ಇದು ಬಲವಾದ ಮರ ಮತ್ತು ನೀರು ನಿರೋಧಕವಾದದ್ದು, "ತೇಗಕ್ಕಿಂತ ಉತ್ತಮವಾಗಿದೆ." ಉತ್ತಮ ಮರದ ದಿಮ್ಮಿ ಎಂದು ಅರ್ಹತೆ ಪಡೆಯಲು, ಮರವು ಆರು ಅಡಿ ಎತ್ತರ, ದಪ್ಪವಾಗಿರಬೇಕು (ತನ್ನ ಕೈಗಳನ್ನು ಒಂದೆರಡು ಅಡಿಗಳಷ್ಟು ಚಾಚುತ್ತಾ), ಮತ್ತು ಯಾವುದೇ ದೋಷಗಳಿಲ್ಲದೆ ಇರಬೇಕು. ಖರೀದಿದಾರರು ಮರವನ್ನು ನೋಡಿದ ನಂತರವೇ ದರವನ್ನು ನಿಗದಿಪಡಿಸುತ್ತಾರೆ. ಅದು ಕಿಟಕಿಯ ಚೌಕಟ್ಟುಗಳಾಗಿ ಬಳಸಬಹುದಾದ ಉತ್ತಮ ಕೊಂಬೆಗಳನ್ನು ಹೊಂದಿದ್ದರೆ - "ಈ ರೀತಿ" ಎಂದು ರಾಮಸ್ವಾಮಿ ತನ್ನ ಹಿಂದಿನ ಕಿಟಕಿಯನ್ನು ತೋರಿಸುತ್ತಾರೆ - ಆಗ ಅದು ಮರದ ಮೌಲ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ.

ಅವರ ಹಿರಿಯರು ಕಟ್ಟಿದ ಮನೆಯ ಬಾಗಿಲಿನ ದಾರಂದವನ್ನು ಹಲಸಿನ ಮರದಿಂದಲೇ ತಯಾರಿಸಲಾಗಿತ್ತು. ಈಗ ಅವರು ವಾಸಿಸುತ್ತಿರುವ ಮನೆಯಲ್ಲಿನ ಅಲಂಕಾರಿಕ ಕೆಲಸಗಳನ್ನು ಅವರ ಸ್ವಂತ ಹೊಲದಲ್ಲಿ ಬೆಳೆದ ತೇಗದ ಮರದಿಂದ ತಯಾರಿಸಲಾಗಿದೆ. “ಹಳೆಯದು ಒಳಗಿದೆ,” ಎಂದು ಅವರು ಹೇಳಿದರು. ನಂತರ ಅದನ್ನು ನನಗೆ ತೋರಿಸಿದರು. ಎರಡು ದಪ್ಪನೆಯ ಬಾಗಿಲಿನ ಚೌಕಟ್ಟುಗಳು ತಮ್ಮ ವಯಸ್ಸನ್ನು ಹೇಳುತ್ತಿದ್ದವು. ಅವುಗಳ ಮೇಲೆ ಚುಕ್ಕೆಗಳು ಮತ್ತು ಗೀಚುಗಳಿದ್ದವು. ಅದನ್ನು ತೋರಿಸುತ್ತಾ “ಇವುಗಳು 175 ವರ್ಷಗಳಷ್ಟು ಹಳೆಯವು,” ಎಂದು ಹೆಮ್ಮೆ ಭರಿತ ಧ್ವನಿಯಲ್ಲಿ ಹೇಳಿದರು.

ನಂತರ, ಅವರು ನನಗೆ ಹಳೆಯ ಕಂ ಜಿರಾ ಎಂಬ ಸಂಗೀತ ವಾದ್ಯವನ್ನು ತೋರಿಸಿದರು, ಅದು ಹಲಸಿನ ಮರದಿಂದ ಮಾಡಲ್ಪಟ್ಟಿತ್ತು, ಚೌಕಟ್ಟಿನಲ್ಲಿ ತಾಳಗಳನ್ನು ಹೊಂದಿತ್ತು - ಒಂದು ಬದಿಯಲ್ಲಿ ಉಡುಂಬು ಥೋಳ್ (ಉಡದ ಚರ್ಮ) ದಿಂದ ಮುಚ್ಚಲ್ಪಟ್ಟ ಸಿಲಿಂಡರಾಕಾರದ ಬಾಯಿ. ವೀಣೈ ಮತ್ತು ಮೃ ದಂಗಮ್ ನಂತಹ ಇತರ ಸಂಗೀತ ವಾದ್ಯಗಳಿಗೂ ಹಲಸಿಗೆ ಆದ್ಯತೆ ನೀಡಲಾಗುತ್ತದೆ. "ಇದು ನನ್ನ ತಂದೆಗೆ ಸೇರಿದ್ದು" ಎಂದು ರಾಮಸ್ವಾಮಿ ತನ್ನ ಕೈಗಳಲ್ಲಿ ಕಂ ಜಿರಾವನ್ನು ತಿರುಗಿಸುತ್ತಾ ಹೇಳಿದರು. ತಾಳಗಳು ಮೆಲ್ಲ ಸ್ವರ ನುಡಿಸುತ್ತಾ ಮಿನುಗಿದವು.

ಮರಗಳು ಮತ್ತು ಬೆಳೆಗಳ ಬಗ್ಗೆ ಅವರ ವ್ಯಾಪಕ ಜ್ಞಾನದ ಹೊರತಾಗಿ, ರಾಮಸ್ವಾಮಿ ಓರ್ವ ನಾಣ್ಯಶಾಸ್ತ್ರಜ್ಞರು ಕೂಡಾ ಹೌದು. ಅವರು ನಾಣ್ಯಗಳನ್ನು ಸಂಗ್ರಹಿಸುತ್ತಾರೆ. ಅವರು ಪುಸ್ತಕಗಳನ್ನು ಹೊರತರುತ್ತಾರೆ, ಆ ಪುಸ್ತಕದಲ್ಲಿ ಆ ನಾಣ್ಯಗಳ ವರ್ಷಗಳನ್ನು ದಾಖಲಿಸಲಾಗುತ್ತದೆ. ಅವರು 65,000 ಮತ್ತು 85,000 ರೂಪಾಯಿಗಳನ್ನು ನೀಡಿ ಖರೀದಿಸಿದ ನಾಣ್ಯಗಳನ್ನು ತೋರಿಸಿದರು. "ಆದರೆ ನಾನು ಅವುಗಳನ್ನು ಮಾರಲಿಲ್ಲ" ಎಂದು ಅವರು ಮುಗುಳ್ನಕ್ಕರು. ನಾನು ನಾಣ್ಯಗಳನ್ನು ಮೆಚ್ಚುತ್ತಿರುವಾಗ, ಅವರ ಪತ್ನಿ ನನಗೆ ತಿಂಡಿಗಳನ್ನು ನೀಡಿದರು. ಸುವಾಸನೆಯ ಗೋಡಂಬಿಗಳು ಮತ್ತು ಎಳಂಧ ಪಳಂ (ಬೋರೆ ಹಣ್ಣು)ಪ್ಲೇಟಿನಲ್ಲಿತ್ತು. ಅವು ರುಚಿಕರ, ಉಪ್ಪು ಮತ್ತು ಪ್ರಚೋದನೆಯ ಗುಣ ಹೊಂದಿದ್ದವು. ಮತ್ತು ಭೇಟಿಯ ಬಗ್ಗೆ ಹೇಳುವುದಾದರೆ ಉಳಿದ ಎಲ್ಲದರಂತೆ, ತೃಪ್ತಿಕರವಾಗಿತ್ತು.

*****

PHOTO • M. Palani Kumar

ಹಲಸಿನ ಹಣ್ಣನ್ನು ಕೊಯ್ಲು ಮಾಡುವುದು ಒಂದು ಸಂಕೀರ್ಣ ಮತ್ತು ಕೌಶಲದ ಪ್ರಕ್ರಿಯೆಯಾಗಿದೆ. ಒಂದು ದೊಡ್ಡ ಹಣ್ಣನ್ನು ಕೊಯ್ಯಲು ತೋಟಗಾರರೊಬ್ಬರು ಮರವನ್ನು ಹತ್ತಿರುವುದು

PHOTO • M. Palani Kumar

ಹಣ್ಣುಗಳು ದೊಡ್ಡದಾಗಿ ಮತ್ತು ಎತ್ತರದ ಸ್ಥಳದಲ್ಲಿದ್ದರೆ, ಅವುಗಳನ್ನು ಕತ್ತರಿಸಿ ಹಗ್ಗದಿಂದ ನಿಧಾನವಾಗಿ ಇಳಿಸಲಾಗುತ್ತದೆ

ಆಯಿರಂಕಾಚಿಯು ಪ್ರಸಿದ್ಧ ಸಂಪರ್ಕಕ್ಕೆ ಗುತ್ತಿಗೆಗೆ ಒಳಪಟ್ಟಿದೆ. "ಆದರೆ ನಾವು ಸ್ವಲ್ಪ ಫಸಲನ್ನು ತೆಗೆದುಕೊಂಡರೆ ಅವರು ತಲೆಕೆಡಿಸಿಕೊಳ್ಳುವುದಿಲ್ಲ. ಅಥವಾ ಅದೆಲ್ಲವನ್ನೂ ತೆಗೆದುಕೊಂಡರೂ ಸಹ" ಎಂದು ಅವರು ನಗುತ್ತಾರೆ. ಇದನ್ನು ಆಯಿರಂಕಾಚಿ ಎಂದು ಕರೆಯಲಾಗುತ್ತದೆ  - 1,000 ಹಣ್ಣು - ವಾರ್ಷಿಕ ಬೆಳೆ ಆ ಸಂಖ್ಯೆಯ ಮೂರನೇ ಒಂದು ಭಾಗದಿಂದ ಐದನೇ ಒಂದು ಭಾಗದ ನಡುವೆ ಇರುತ್ತದೆ. ಆದರೆ ಇದು ಪ್ರಸಿದ್ಧ ಮರವಾಗಿದೆ ಮತ್ತು ಅದರ ಹಣ್ಣಿಗೆ ಬೇಡಿಕೆ ಇದೆ. ಪ್ರತಿ ಮಧ್ಯಮ ಗಾತ್ರದ ಹಣ್ಣು ಸುಮಾರು 200 ತೊಳೆಗಳನ್ನು ಹೊಂದಿರುತ್ತದೆ. "ಇದು ತಿನ್ನಲು ರುಚಿಕರವಾಗಿದೆ ಮತ್ತು ಅಡುಗೆ ಮಾಡಲು ಉತ್ತಮವಾಗಿದೆ" ಎಂದು ರಾಮಸ್ವಾಮಿ ಬಹಳ ಸಂತೋಷದಿಂದ ಹೇಳುತ್ತಾರೆ.

ಸಾಮಾನ್ಯವಾಗಿ, ಮರವು ಹಳೆಯದಾದಷ್ಟೂ, ಕಾಂಡವು ದಪ್ಪವಾಗಿರುತ್ತದೆ ಮತ್ತು ಹೆಚ್ಚಿನ ಸಂಖ್ಯೆಯ ಹಣ್ಣುಗಳನ್ನು ನೀಡುತ್ತದೆ ಎಂದು ರಾಮಸ್ವಾಮಿ ಹೇಳುತ್ತಾರೆ. "ಮರಗಳನ್ನು ನೋಡಿಕೊಳ್ಳುವ ಜನರಿಗೆ ಪ್ರತಿಯೊಂದು ಮರದಲ್ಲಿ ಎಷ್ಟು ಹಣ್ಣುಗಳನ್ನು ಪಕ್ವವಾಗಲು ಬಿಡಬೇಕು ಎನ್ನವುದು ತಿಳಿದಿದೆ. ಒಂದು ಎಳೆಯ ಮರದಲ್ಲಿ ಹೆಚ್ಚು ಕಾಯಿ ಬೆಳೆಯುತ್ತಿದ್ದರೆ, ಅವೆಲ್ಲವೂ ಚಿಕ್ಕದಾಗಿಯೇ ಉಳಿಯುತ್ತವೆ," ಎನ್ನುತ್ತಾ ತೆಂಗಿನಕಾಯಿಯ ಗಾತ್ರಕ್ಕೆ ತನ್ನ ಕೈಗಳನ್ನು ಹತ್ತಿರಕ್ಕೆ ತಂದರು. ಸಾಮಾನ್ಯವಾಗಿ, ರೈತರು ಹಲಸನ್ನು ಬೆಳೆಯಲು ಕೆಲವು ರಾಸಾಯನಿಕಗಳನ್ನು ಬಳಸುತ್ತಾರೆ. ಇದನ್ನು ನೂರಕ್ಕೆ ನೂರರಷ್ಟು ಸಾವಯವವಾಗಿ ಬೆಳೆಸುವುದು ಅಸಾಧ್ಯವಲ್ಲ - ಆದರೆ ಅದು ಕಷ್ಟ ಎಂದು ರಾಮಸ್ವಾಮಿ ಹೇಳುತ್ತಾರೆ.

"ಒಂದು ದೊಡ್ಡ ಮರದಲ್ಲಿ ಕಡಿಮೆ ಹಣ್ಣುಗಳನ್ನು ಬೆಳೆಯಲು ಬಿಟ್ಟರೆ, ಪ್ರತಿ ಹಲಸಿನ ಹಣ್ಣು ದೊಡ್ಡದಾಗುತ್ತದೆ ಮತ್ತು ಭಾರವಾಗಿರುತ್ತದೆ. ಆದರೆ ಅಪಾಯಗಳು ಸಹ ಹೆಚ್ಚು - ಅವು ಕೀಟಗಳಿಂದ ದಾಳಿಗೊಳಗಾಗಬಹುದು, ಮಳೆಯಿಂದ ಹಾನಿಗೊಳಗಾಗಬಹುದು, ಚಂಡಮಾರುತದ ಸಮಯದಲ್ಲಿ ಕೆಳಗೆ ಬೀಳಬಹುದು. ನಾವು ತುಂಬಾ ದುರಾಸೆಗೆ ಒಳಗಾಗುವುದಿಲ್ಲ" ಎಂದು ಅವರು ನಗುತ್ತಾರೆ.

ಅವನು ಹಲಸಿನ ಹಣ್ಣಿನ ಬಗ್ಗೆ ಒಂದು ಪುಸ್ತಕವನ್ನು ತೆರೆದು ನನಗೆ ಚಿತ್ರಗಳನ್ನು ತೋರಿಸುತ್ತಾ, "ಅವರು ದೊಡ್ಡ ಹಣ್ಣುಗಳನ್ನು ಹೇಗೆ ಸಂರಕ್ಷಿಸುತ್ತಾರೆ ಎಂದು ನೋಡಿ... ಹಣ್ಣನ್ನು ಹಿಡಿಯಲು ಬುಟ್ಟಿಯನ್ನು ತಯಾರಿಸುತ್ತಾರೆ, ಮತ್ತು ನಂತರ ಅದನ್ನು ಹಗ್ಗಗಳಿಂದ ಮೇಲಿನ ಕೊಂಬೆಗೆ ಜಾಗರೂಕತೆಯಿಂದ ಕಟ್ಟುತ್ತಾರೆ. ಈ ರೀತಿಯಾಗಿ, ಹಣ್ಣನ್ನು ಕಾಪಾಡಲಾಗುತ್ತದೆ ಮತ್ತು ಹೀಗೆ ಮಾಡಿದಾಗ ಹಣ್ಣು ಬೀಳುವುದಿಲ್ಲ. ಅವರು ಅದನ್ನ ಕೀಳುವಾಗ, ಹಗ್ಗಗಳಿಂದ ನಿಧಾನವಾಗಿ ಕೆಳಗಿಳಿಸುತ್ತಾರೆ. ಒಟ್ಟಾರೆ ಜಾಗರೂಕತೆ ವಹಿಸುತ್ತಾರೆ," ಎಂದು ಅವರು ಹೇಳುತ್ತಾ, ಮನುಷ್ಯನಷ್ಟು ಎತ್ತರ ಮತ್ತು ಅಗಲವಾದ ದೈತ್ಯಾಕಾರದ ಹಲಸಿನ ಹಣ್ಣನ್ನು ಇಬ್ಬರು ಪುರುಷರು ಮೇಲೆ ಇಟ್ಟುಕೊಂಡು ಸಾಗಿಸುತ್ತಿರುವ ಚಿತ್ರವನ್ನು ತೋರಿಸಿದರು. ಯಾವುದೇ ಹಣ್ಣಿನ ಕಾಂಡಕ್ಕೆ ಹಾನಿಯಾಗಿದೆಯೇ ಎಂದು ನೋಡಲು ರಾಮಸ್ವಾಮಿ ಪ್ರತಿದಿನ ತನ್ನ ಮರಗಳನ್ನು ಪರಿಶೀಲಿಸುತ್ತಾರೆ. "ಹಾಗೇನಾದರೂ ಆಗಿದ್ದಲ್ಲಿ ನಾವು ತಕ್ಷಣವೇ ಹಗ್ಗದ ಬುಟ್ಟಿಯನ್ನು ಮಾಡಿ ಅದನ್ನು ಹಣ್ಣಿನ ಕೆಳಗೆ ಕಟ್ಟುತ್ತೇವೆ."

ಕೆಲವೊಮ್ಮೆ, ಕಾಳಜಿಯ ಹೊರತಾಗಿಯೂ, ಹಣ್ಣುಗಳು ಪುಡಿಪುಡಿಯಾಗುತ್ತವೆ. ಇವುಗಳನ್ನು ಸಂಗ್ರಹಿಸಿ ಪಶು ಆಹಾರವಾಗಿ ಬಳಸಲಾಗುತ್ತದೆ. "ಆ ಹಲಸಿನ ಹಣ್ಣುಗಳನ್ನು ನೋಡಿ? ಅವು ಕೆಳಗೆ ಬಿದ್ದ ಹಣ್ಣುಗಳು ಮತ್ತು ಅವುಗಳನ್ನು ಮಾರಾಟ ಮಾಡಲು ಸಾಧ್ಯವಿಲ್ಲ. ನನ್ನ ಹಸುಗಳು ಮತ್ತು ಮೇಕೆಗಳು ಸಂತೋಷದಿಂದ ಅದನ್ನು ತಿನ್ನುತ್ತವೆ." ಕರುವಾಡು ಮಾರುವ ಮಹಿಳೆಯರು ಅಷ್ಟು ಹೊತ್ತಿಗೆ ತಮ್ಮ ಮಾರಾಟವನ್ನು ಮುಗಿಸಿದ್ದರು. ಮೀನನ್ನು ಕಬ್ಬಿಣದ ಹುರುಪೆಗಳ ಮೇಲೆ ತೂಕ ಮಾಡಿ ಅಡುಗೆಮನೆಗೆ ಒಯ್ಯಲಾಯಿತು. ಮಾರಾಟಗಾರರಿಗೆ ದೋಸೆಗಳನ್ನು ನೀಡಲಾಯಿತು. ಅವರು ನಮ್ಮ ಸಂಭಾಷಣೆಯನ್ನು ಕೇಳುತ್ತಾ ನಡು-ನಡುವೆ ಮಾತನಾಡುತ್ತಾ ತಿನ್ನತೊಡಗಿದರು. "ನಮಗೆ ಹಲಸಿನ ಹಣ್ಣನ್ನು ಕೊಡಿ, ನಮ್ಮ ಮಕ್ಕಳು ಅದನ್ನು ತಿನ್ನಲು ಬಯಸುತ್ತಾರೆ" ಎಂದು ಅವರು ರಾಮಸ್ವಾಮಿಗೆ ಹೇಳಿದರು. "ಮುಂದಿನ ತಿಂಗಳು ಬಂದು ತೆಗೆದುಕೊಂಡು ಹೋಗಿ," ಎಂದು ಅವರು ಉತ್ತರಿಸಿದರು.

PHOTO • Aparna Karthikeyan

ನೆರೆಯ ರೈತನೊಬ್ಬ ತನ್ನ ಫಸಲನ್ನು ರಾಮಸ್ವಾಮಿಯವರ ತೋಟದ ಪ್ರವೇಶದ್ವಾರದಲ್ಲಿ ಸಾಲಾಗಿ ಜೋಡಿಸಿರುವುದು

ಒಮ್ಮೆ ಹಣ್ಣುಗಳನ್ನು ಕಟಾವು ಮಾಡಿದ ನಂತರ, ಅವುಗಳನ್ನು ಮಂಡಿಯಲ್ಲಿರುವ ಕಮಿಷನ್ ಏಜೆಂಟರಿಗೆ ಕಳುಹಿಸಲಾಗುತ್ತದೆ ಎಂದು ರಾಮಸ್ವಾಮಿ ವಿವರಿಸುತ್ತಾರೆ. "ಖರೀದಿದಾರರು ಬಂದಾಗ ಅವರು ನಮಗೆ ಕರೆ ಮಾಡುತ್ತಾರೆ, ಮತ್ತು ನಮಗೆ ದರ ಒಪ್ಪಿಗೆಯೇ ಎಂದು ಪರಿಶೀಲಿಸುತ್ತಾರೆ. ನಾವು ಒಪ್ಪಿದರೆ, ಅವರು ಅದನ್ನು ಮಾರಾಟ ಮಾಡುತ್ತಾರೆ ಮತ್ತು ನಮಗೆ ಹಣವನ್ನು ನೀಡುತ್ತಾರೆ. ಮಾರಾಟವು ತರುವ ಪ್ರತಿ 1,000 ರೂಪಾಯಿಗಳಿಗೆ ಅವರು 50 ಅಥವಾ 100 ರೂಪಾಯಿಗಳನ್ನು ತೆಗೆದುಕೊಳ್ಳುತ್ತಾರೆ," ಎಂದು ಅವರು ಹೇಳುತ್ತಾರೆ, "ಮತ್ತು ಎರಡೂ ಪಕ್ಷಗಳಿಂದ ಕಮಿಷನ್‌ ಪಡೆಯಲಾಗುತ್ತದೆ." ಆ 5 ಅಥವಾ 10 ಪ್ರತಿಶತವನ್ನು ಪಾವತಿಸಲು ರಾಮಸ್ವಾಮಿಯವರಿಗೆ ಬೇಸರವಿಲ್ಲ, ಏಕೆಂದರೆ ಅದು "ರೈತರನ್ನು ಸಾಕಷ್ಟು ತಲೆನೋವಿನಿಂದ ರಕ್ಷಿಸುತ್ತದೆ. ಖರೀದಿದಾರನು ಬರುವವರೆಗೆ ನಾವು ಅಲ್ಲೇ ನಿಲ್ಲಬೇಕಾಗಿಲ್ಲ. ಕೆಲವೊಮ್ಮೆ, ಇದು ಒಂದು ದಿನಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳಬಹುದು. ನಮಗೆ ಮಾಡಲು ಇತರ ಕೆಲಸಗಳಿವೆ, ಅಲ್ಲವೇ? ನಾವು ಕೇವಲ ಪನ್ರುಟ್ಟಿ ಪಟ್ಟಣದಲ್ಲಿ ಕಾಯುತ್ತಿರಲು ಸಾಧ್ಯವಿಲ್ಲ!"

ಎರಡು ದಶಕಗಳ ಹಿಂದೆ, ಜಿಲ್ಲೆಯಲ್ಲಿ ಇನ್ನೂ ಅನೇಕ ಬೆಳೆಗಳು ಇದ್ದವು ಎಂದು ರಾಮಸ್ವಾಮಿ ಹೇಳುತ್ತಾರೆ. "ನಾವು ಸಾಕಷ್ಟು ಮರಗೆಣಸು ಮತ್ತು ನೆಲಗಡಲೆಯನ್ನು ಬೆಳೆದಿದ್ದೇವೆ. ಹೆಚ್ಚು ಹೆಚ್ಚು ಗೋಡಂಬಿ ಕಾರ್ಖಾನೆಗಳು ಬರುತ್ತಿದ್ದಂತೆ, ಕಾರ್ಮಿಕರ ಕೊರತೆ ಉಂಟಾಯಿತು. ಅದನ್ನು ನಿಭಾಯಿಸಲು, ಅನೇಕ ರೈತರು ಹಲಸಿನ ಹಣ್ಣಿನ ಮೊರೆಹೋದರು. "ಹಲಸಿನ ಹಣ್ಣಿಗೆ ಹೆಚ್ಚು ಕೆಲಸದ ದಿನಗಳಿರುವುದಿಲ್ಲ. ಅದಕ್ಕೂ ಜನ ಸಿಗುವುದಿಲ್ಲ,” ಎನ್ನುತ್ತಾ ಒಣಗಿದ ಮೀನುಗಳನ್ನು ಮಾರುವ ಇಬ್ಬರು ಮಹಿಳೆಯರ ಕಡೆಗೆ ಬೊಟ್ಟು ಮಾಡಿ ತೋರಿಸುತ್ತಾ, "ಅವರು ಕೂಡಾ ಬೇರೆ ಹಳ್ಳಿಗಳಿಂದ ಬಂದವರು."

ಆದರೆ ರೈತರು ಸಹ ಹಲಸಿನಿಂದ ದೂರ ಸರಿಯುತ್ತಿದ್ದಾರೆ ಎಂದು ಅವರು ಗಮನಸೆಳೆದರು. ರಾಮಸ್ವಾಮಿ ಐದು ಎಕರೆ ಪ್ರದೇಶದಲ್ಲಿ ಸುಮಾರು ೧೫೦ ಮರಗಳನ್ನು ಹೊಂದಿದ್ದಾರೆ. ಅದೇ ಭೂಮಿ ಗೋಡಂಬಿ, ಮಾವು ಮತ್ತು ಹುಣಸೆ ಮರಗಳಿಂದ ಕೂಡಿದೆ. "ಹಲಸು ಮತ್ತು ಗೋಡಂಬಿಯನ್ನು ಗುತ್ತಿಗೆಗೆ ಕೊಡಲಾಗಿದೆ. ನಾವು ಮಾವು ಮತ್ತು ಹುಣಸೆಹಣ್ಣನ್ನು ಕೊಯ್ಲು ಮಾಡುತ್ತೇವೆ" ಎಂದು ಅವರು ಹೇಳುತ್ತಾರೆ. ಅವರು ಪಳ ಮರಮ್‌ ಗಳ ಸಂಖ್ಯೆಯನ್ನು ಕಡಿಮೆ ಮಾಡಲು ಯೋಜಿಸಿದ್ದಾರೆ . "ಅದಕ್ಕೆ ಕಾರಣ ಬಿರುಗಾಳಿ. ಥಾಣೆ ಚಂಡಮಾರುತದ ಸಮಯದಲ್ಲಿ, ನಾನು ಸುಮಾರು 200 ಮರಗಳನ್ನು ಕಳೆದುಕೊಂಡೆ. ನಾವು ಅವುಗಳನ್ನು ಕಡಿದುಹಾಕಬೇಕಾಯಿತು... ಈ ಪ್ರದೇಶದಲ್ಲಿ ಅನೇಕ ಮರಗಳು ಬಿದ್ದಿವೆ. ಈಗ ನಾವು ಹಲಸಿನ ಜಾಗದಲ್ಲಿ ಗೋಡಂಬಿಯನ್ನು ನೆಡುತ್ತೇವೆ."

ಗೋಡಂಬಿ ಮತ್ತು ಇತರ ಕೆಲವು ಬೆಳೆಗಳು ಬಿರುಗಾಳಿಯನ್ನು ತಡೆದು ನಿಲ್ಲುತ್ತವೆಂದು ಅವುಗಳನ್ನು ಬೆಳೆಯುವುದಲ್ಲ, ಆದರೆ ಅವು ಮೊದಲ ವರ್ಷದಿಂದ ಬೆಳೆಯನ್ನು ಉತ್ಪಾದಿಸುತ್ತವೆ ಎಂಬ ಕಾರಣಕ್ಕಾಗಿ. ಮತ್ತು ಗೋಡಂಬಿಗೆ ಬಹಳ ಕಡಿಮೆ ನಿರ್ವಹಣೆಯ ಅಗತ್ಯವಿದೆ. ಕಡಲೂರು ಜಿಲ್ಲೆಯು ಚಂಡಮಾರುತಗಳಿಗೆ ತುತ್ತಾಗುತ್ತಿರುತ್ತದೆ, ಮತ್ತು ನಾವು ಪ್ರತಿ ದಶಕ ಅಥವಾ ಅದಕ್ಕಿಂತ ಮೊದಲು ದೊಡ್ಡ ಬಿರುಗಾಳಿಗಳನ್ನು ಎದುರಿಸುತ್ತೇವೆ. 15 ವರ್ಷಕ್ಕಿಂತ ಹಳೆಯದಾದ ಹಲಸಿನ ಮರಗಳು, ಸಾಕಷ್ಟು ಹಣ್ಣುಗಳನ್ನು ನೀಡುತ್ತವೆ, ಅವು ಮೊದಲು ಬೀಳುತ್ತವೆ. ಅದು ಬಿದ್ದಾಗ ಬಹಳ ನಷ್ಟ ಮತ್ತು ನೋವಾಗುತ್ತದೆ," ಎಂದು ಅವರು ತಮ್ಮ ತಲೆಯನ್ನು ಅಲ್ಲಾಡಿಸುತ್ತಾ, ನಷ್ಟವನ್ನು ಸೂಚಿಸಲು ತಮ್ಮ ಕೈಯಿಂದ ಸನ್ನೆ ಮಾಡಿದರು.

PHOTO • Aparna Karthikeyan
PHOTO • Aparna Karthikeyan

ಎಡಕ್ಕೆ: ರಾಮಸ್ವಾಮಿಯವರು ಹಲವಾರು ವರ್ಷಗಳಿಂದ ಸಂಗ್ರಹಿಸಿದ ಹಲಸಿನ ಹಣ್ಣಿನ ಬಗ್ಗೆ ವಿಸ್ತೃತವಾದ ಸಾಹಿತ್ಯದ ಸಂಗ್ರಹವು ಕೆಲವು ಅಪರೂಪದ ಪುಸ್ತಕಗಳನ್ನು ಒಳಗೊಂಡಿದೆ. ಬಲಗಡೆ: ನಾಣ್ಯಶಾಸ್ತ್ರಜ್ಞರೂ ಆಗಿರುವ ರಾಮಸ್ವಾಮಿ ಅವರ ಬಳಿ ನಾಣ್ಯಗಳ ಆಕರ್ಷಕ ಸಂಗ್ರಹವಿದೆ

ಕಡಲೂರಿನ ಜಿಲ್ಲಾ ಡಯಾಗ್ನೋಸ್ಟಿಕ್ ವರದಿಯು ಒಂದು ವಿವರಣೆಯನ್ನು ನೀಡುತ್ತದೆ : ಉದ್ದವಾದ ಕರಾವಳಿಯನ್ನು ಹೊಂದಿರುವ ಈ ಜಿಲ್ಲೆಯು "ವಾಯುಭಾರ ಕುಸಿತಗಳು ಮತ್ತು ಪ್ರವಾಹಕ್ಕೆ ಕಾರಣವಾಗುವ ಪರಿಣಾಮವಾಗಿ ಉಂಟಾಗುವ ಮಳೆಗೆ ತುತ್ತಾಗುತ್ತದೆ" ಎಂದು ಅದು ಹೇಳುತ್ತದೆ.

2102ರ ಪತ್ರಿಕಾ ವರದಿಗಳು ಥಾಣೆ ಚಂಡಮಾರುತದ ವಿನಾಶವನ್ನು ದಾಖಲಿಸಿವೆ. ಇದು ಡಿಸೆಂಬರ್ 11, 2011ರಂದು ಕಡಲೂರು ಜಿಲ್ಲೆಯನ್ನು ಅಪ್ಪಳಿಸಿತು ಮತ್ತು "ಜಿಲ್ಲೆಯಾದ್ಯಂತ ಎರಡು ಕೋಟಿಗೂ ಹೆಚ್ಚು  ಹಲಸು, ಮಾವು, ಬಾಳೆ, ತೆಂಗು ಮತ್ತು ಗೋಡಂಬಿ ಮರಗಳನ್ನು ನೆಲಸಮ ಮಾಡಿತು" ಎಂದು ಬಿಸಿನೆಸ್ ಲೈನ್ ವರದಿ ಮಾಡಿದೆ. ಮರ ಬೇಕಿದ್ದವರು ಬಂದು ಕೇಳಿ ಕೊಂಡು ಹೋಗುತ್ತಿದ್ದುದನ್ನು ರಾಮಸ್ವಾಮಿ ನೆನಪಿಸಿಕೊಳ್ಳುತ್ತಾರೆ. "ನಮಗೆ ಯಾವುದೇ ಹಣ ಬೇಕಾಗಿರಲಿಲ್ಲ. ಬಿದ್ದ ಮರಗಳನ್ನು ನೋಡಿ ನಮಗೆ ಸಹಿಸಲಾಗಲಿಲ್ಲ... ಹೀಗಾಗಿ ಅನೇಕ ಜನರು ಬಂದು ತಮ್ಮ ಮನೆಯನ್ನು ಪುನರ್ನಿರ್ಮಿಸಲು ಅದನ್ನು ತೆಗೆದುಕೊಂಡು ಹೋದರು."

*****

ರಾಮಸ್ವಾಮಿಯವರ ಹಲಸಿನ ತೋಟವು ಅವರ ಮನೆಯಿಂದ ಕೇವಲ ಒಂದು ನಡಿಗೆಯ ದೂರದಲ್ಲಿದೆ. ಅವರ ನೆರೆಹೊರೆಯ ರೈತ ತಾನು ಬೆಳೆದ ಹಣ್ಣುಗಳನ್ನು ಕತ್ತರಿಸಿ ಸಾಲಾಗಿ ನಿಲ್ಲಿಸುತ್ತಿದ್ದ. ಅದು ಮಕ್ಕಳು ರೈಲಿನಾಟ ಆಡುವಾಗ ಒಬ್ಬರನ್ನೊಬ್ಬರು ಹಿಡಿದು ನಿಂತಂತೆ ಕಾಣುತ್ತಿತ್ತು - ಒಂದರ ಹಿಂದೆ ಒಂದು ಹಲಸಿನ ಹಣ್ಣುಗಳು ತಮ್ಮನ್ನು ಮಾರುಕಟ್ಟೆಗೆ ಕರೆದೊಯ್ಯುವ ಟ್ರಕ್ಕಿಗಾಗಿ ಕಾಯುತ್ತಿದ್ದವು. ನಾವು ತೋಪಿಗೆ ಪ್ರವೇಶಿಸಿದ ತಕ್ಷಣ, ತಾಪಮಾನವು ಕುಸಿಯಿತು; ಅಲ್ಲಿನ ವಾತಾವರಣ ಬಹಳ ತಂಪಾಗಿತ್ತು.

ರಾಮಸ್ವಾಮಿ ನಡೆಯುತ್ತಲೇ ಮಾತನಾಡುತ್ತಿದಿದ್ದರು: ಮರಗಳು, ಸಸ್ಯಗಳು, ಹಣ್ಣುಗಳ ಬಗ್ಗೆ ಅವರ ಬಳಿ ಮುಗಿಯದಷ್ಟು ಮಾತುಗಳಿವೆ. ಅವರ ತೋಟಕ್ಕೆ ಭೇಟಿ ನೀಡುವುದು ಭಾಗಶಃ ಶೈಕ್ಷಣಿಕ ಪ್ರವಾಸದಂತೆ, ಅದಕ್ಕಿಂತ ಹೆಚ್ಚಾಗಿ ಅದೊಂದು ಪಿಕ್ನಿಕ್. ಅವರು ತಿನ್ನಲು ಅನೇಕ ರೀತಿಯ ಉತ್ಪನ್ನಗಳನ್ನು ನಮಗೆ ಕೊಡುತ್ತಿದ್ದರು: ದಪ್ಪ ಮತ್ತು ರಸಭರಿತವಾದ ಗೇರು ಹಣ್ಣುಗಳು; ಸಕ್ಕರೆಯಿಂದ ತುಂಬಿದ ಹನಿಆಪಲ್; ಜೊತೆಗೆ ಹುಳಿ ಮತ್ತು ಸಿಹಿಯಾದ ಹುಣಸೆಹಣ್ಣು ಹೀಗೆ ಒಂದೊಂದಾಗಿ ನೀಡುತ್ತಿದ್ದರು,

ನಂತರ ಲವಂಗದ ಎಲೆಗಳನ್ನು ಹೊಸಕಿ ಮೂಸಿ ನೋಡುವಂತೆ ತಿಳಿಸಿದರು. ಮತ್ತೆ ಕುಡಿಯುವ ನೀರು ಬೇಕೇ ಎಂದು ಕೇಳಿದರು. ಮತ್ತೆ ಅವರೇ ಕೆರೆಯ ಬಳಿ ಓಡಿ ಮೋಟಾರ್‌ ಆನ್‌ ಮಾಡಿದರು. ದಪ್ಪ ಕೊಳವೆಯಿಂದ ಚಮ್ಮಿದ ಹೊಳೆಯುವ ನೀರನ್ನು ನಾವು ಬೊಗಸೆ ತುಂಬಾ ಕುಡಿದೆವು. ಅದು ಸಿಹಿಯಾಗಿರಲಿಲ್ಲ ಆದರೆ ರುಚಿಯಾಗಿತ್ತು. ನಗರದ ಕ್ಲೋರಿನ್‌ ನೀರಿನಂತಿರಲಿಲ್ಲ. ನಗುತ್ತಾ ಮೋಟಾರ್‌ ಆಫ್‌ ಮಾಡಿದ ಅವರು ನಮ್ಮನ್ನ ಮುಂದಿನ ಪ್ರಯಾಣಕ್ಕೆ ಕರೆದೊಯ್ದರು.

PHOTO • M. Palani Kumar

ಮಾಲಿಗಂಪಟ್ಟು ಗ್ರಾಮದ ತಮ್ಮ ಮನೆಯಲ್ಲಿ ರಾಮಸ್ವಾಮಿ

ನಾವು ಜಿಲ್ಲೆಯ ಅತ್ಯಂತ ಹಳೆಯ ಮರವಾದ ಆಯಿಯರಂಕಾಚಿ ಬಳಿ ಮತ್ತೆ ಬಂದೆವು. ಅದರ ದರವು ದಪ್ಪ ಮತ್ತು ದೊಡ್ಡದಾಗಿತ್ತು, ಇದು ಆಶ್ಚರ್ಯಕರ ವಿಷಯವಾಗಿದೆ. ಆದಾಗ್ಯೂ, ಮರವು ತನ್ನ ವಯಸ್ಸನ್ನು ತೋರಿಸುತ್ತದೆ. ಕೆಲೆವೆಡೆ ಬೊಡ್ಡೆಗಳನ್ನು ಹೊಂದಿದ್ದರೆ, ಕೆಲವೆಡೆ ರಂಧ್ರಗಳನ್ನು ಹೊಂದಿದೆ. ಆದರೆ ಅದರ ಬುಡದಲ್ಲಿ, ಅದು ಹಲವಾರು ತಿಂಗಳುಗಳವರೆಗೆ, ತನ್ನ ಕಾಂಡದ ಸುತ್ತಲೂ ಬೆಳೆಯುವ ಹಲಸಿನ ಹಣ್ಣಿನ ಉಡುಪನ್ನು ಧರಿಸುತ್ತದೆ. "ಮುಂದಿನ ತಿಂಗಳು, ಇದು ತುಂಬಾ ಭವ್ಯವಾಗಿ ಕಾಣುತ್ತದೆ" ಎಂದು ರಾಮಸ್ವಾಮಿ ಭರವಸೆ ನೀಡಿದರು.

ತೋಟದಲ್ಲಿ ಅನೇಕ ಭವ್ಯವಾದ ಮರಗಳಿವೆ. "ಮೇಲೆ ಶೇಕಡಾ 43 ರಷ್ಟು ʼಸಕ್ಕರೆ ಹಲಸುʼ ಇದೆ. ನಾನು ಅದನ್ನು ಪರೀಕ್ಷಿಸಿದ್ದೇನೆ," ಎಂದು ಅವರು ತೋರಿಸುತ್ತಾ ಮತ್ತೊಂದು ಮೂಲೆಗೆ ನಡೆದರು. ನೆರಳುಗಳು ನೆಲದ ಮೇಲೆ ನರ್ತಿಸುತ್ತವೆ, ಕೊಂಬೆಗಳು ಗಿರಕಿ ಹೊಡೆಯುತ್ತವೆ, ಪಕ್ಷಿಗಳು ಹಾಡುತ್ತವೆ. ಮರದ ಕೆಳಗೆ ಮಲಗಿ ಜಗತ್ತನ್ನು ನೋಡುವುದು ಪ್ರಲೋಭನಕಾರಿ ಅನುಭವ, ಆದರೆ ರಾಮಸ್ವಾಮಿ ಆಗಲೇ ಪ್ರಭೇದಗಳ ಬಗ್ಗೆ ಮಾತನಾಡತೊಡಗಿದ್ದರು, ಮಾವುಗಳಿಗಿಂತ ಭಿನ್ನವಾಗಿ - ನೀಲಂ ಮತ್ತು ಬೆಂಗಳೂರದಂತಹ ಪ್ರಭೇದಗಳು ತುಂಬಾ ವಿಭಿನ್ನ ರುಚಿಯನ್ನು ಹೊಂದಿವೆ ಮತ್ತು ಸುಲಭವಾಗಿ ಬಿಡಿಸಬಹುದು - ಹಲಸಿನ ಹಣ್ಣುಗಳನ್ನು ಬಿಡಿಸುವುದು ಕಷ್ಟ.

“ಒಂದು ವೇಳೆ ನಾನು ಆ ಮರವನ್ನು ಬೀಜ ಮಾಡಲು ಹೊರಟೆ ಎಂದಿಟ್ಟುಕೊಳ್ಳಿ,” ಎಂದು ಒಂದು ಸಹಿ ಹಣ್ಣಿನ ಮರವನ್ನು ತೋರಿಸುತ್ತಾ, “ನಾನು ಆ ಮರದ ಬೀಜಗಳ ಮೇಲೆ ಭರವಸೆ ಇಡುವಂತಿಲ್ಲ, ಯಾಕೆಂದರೆ ಒಂದು ಹಣ್ಣಿನಲ್ಲಿ ನೂರಾರು ಬೀಜಗಳಿದ್ದರೂ, ಅವು ತಮ್ಮ ಪೋಷಕ ಮರದ ಗುಣವನ್ನು ಹೊಂದಿಲ್ಲದೆ ಇರಬಹುದು!” ಕಾರಣ? ಕ್ರಾಸ್-‌ ಪಾಲಿನೇಶನ್.‌ ಬೇರೆ ಮರದ ಪರಾಗವು ಇನ್ನೊಂದನ್ನು ಫಲವತ್ತಾಗಿಸಬಹುದು ಮತ್ತು ವೈವಿಧ್ಯತೆಯನ್ನು ಗೊಂದಲಗೊಳಿಸಬಹುದು

"ನಾವು ಋತುವಿನ ಮೊದಲ ಅಥವಾ ಕೊನೆಯ ಹಣ್ಣನ್ನು ತೆಗೆದುಕೊಳ್ಳುತ್ತೇವೆ," ಎಂದು ಅವರು ಹೇಳುತ್ತಾರೆ, "200 ಅಡಿ ತ್ರಿಜ್ಯದಲ್ಲಿ ಬೇರೆ ಯಾವುದೇ ಹಲಸಿನ ಮರಗಳಿಲ್ಲ ಎಂದು ನಮಗೆ ಖಾತ್ರಿಯಾದಾಗ - ಮತ್ತು ಅದನ್ನು ಬೀಜಗಳಿಗಾಗಿ ಮಾತ್ರ ಬಳಸಲಾಗುತ್ತದೆ." ಇಲ್ಲದಿದ್ದರೆ, ರೈತರು ಅದೇ ಅನುಕೂಲಕರ ಲಕ್ಷಣಗಳನ್ನು ಪಡೆಯಲು ಕಸಿಯನ್ನು ಅವಲಂಬಿಸುತ್ತಾರೆ - ಉದಾಹರಣೆಗೆ ಸಿಹಿ ಮತ್ತು ಸೊಳ್ಳೈ (ತೊಳೆ)ಯ ದೃಢತೆ.

ಈ ಸಂಕೀರ್ಣತೆಗೆ ಮತ್ತೊಂದು ಪದರವಿದೆ - ಒಂದೇ ಹಣ್ಣು ವಿಭಿನ್ನ ಸಮಯಗಳಲ್ಲಿ (45 ದಿನಗಳು ಅಥವಾ 55 ಅಥವಾ 70 ರಲ್ಲಿ) ವಿಭಿನ್ನ ರುಚಿಯನ್ನು ಹೊಂದಿರುತ್ತದೆ. ಹಲಸಿನ ಹಣ್ಣು ನಿರ್ದಿಷ್ಟವಾಗಿ ಶ್ರಮದಾಯಕ ಬೆಳೆಯಾಗಿರದೆ ಇರಬಹುದು, ಆದರೆ ಅದರ ಅಲ್ಪಕಾಲದ ಶೆಲ್ಫ್ ಬಾಳಿಕೆಯನ್ನು ಗಮನಿಸಿದರೆ ಇದು ಒಂದು ಗೊಂದಲ ಹುಟ್ಟಿಸುವ ಬೆಳೆಯಾಗಿದೆ. "ನಮಗೆ ಬೇಕಾಗಿರುವುದು ಕೋಲ್ಡ್ ಸ್ಟೋರೇಜ್ ಸೌಲಭ್ಯ." ಇದು ಬೆಳೆಗಾರರು ಮತ್ತು ವ್ಯಾಪಾರಿಗಳ ಸಾಮಾನ್ಯ ಪಲ್ಲವಿಯಾಗಿದೆ. "ಮೂರು ದಿನ ಅಥವಾ ಐದು ದಿನಗಳ ನಂತರ ಹಣ್ಣು ಕೊಳೆತುಹೋಗುತ್ತದೆ," ಎಂದು ರಾಮಸ್ವಾಮಿ ಹೇಳುತ್ತಾರೆ. "ನೋಡಿ, ನಾನು ನನ್ನ ಗೇರು ಬೀಜವನ್ನು ಇಟ್ಟುಕೊಂಡು ಒಂದು ವರ್ಷದ ನಂತರ ಮಾರಬಹುದು. ಆದರೆ ಇದು ಒಂದು ವಾರವೂ ಉಳಿಯಲಾರದು!"

ಆಯಿರಂಕಾಚಿಗೆ ಇದು ಅಚ್ಚರಿಯ ವಿಷಯವಿರಬಹುದು, ಅದು 200 ವರ್ಷಗಳಿಂದ ನಿಂತಿದೆ…

PHOTO • M. Palani Kumar

ಎಡ: ರಾಮಸ್ವಾಮಿಯವರ ಸಂಗ್ರಹದಿಂದ ಆಯಿರಂಕಾಚಿಯ ಹಳೆಯ ಛಾಯಾಚಿತ್ರ. ಬಲಕ್ಕೆ: 2022ರಲ್ಲಿ ರಾಮಸ್ವಾಮಿ ಅವರ ತೋಟದಲ್ಲಿರುವ ಅದೇ ಮರ

ಈ ಸಂಶೋಧನಾ ಅಧ್ಯಯನಕ್ಕೆ ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯವು ತನ್ನ ಸಂಶೋಧನಾ ಧನಸಹಾಯ ಕಾರ್ಯಕ್ರಮ 2020ರ ಭಾಗವಾಗಿ ಧನಸಹಾಯ ನೀಡುತ್ತದೆ.

ಮು ಖ್ಯ ಚಿತ್ರ: ಎಂ.ಪಳನಿ ಕುಮಾರ್

ಅನುವಾದ : ಶಂಕರ . ಎನ್ . ಕೆಂಚನೂರು

Aparna Karthikeyan

ଅପର୍ଣ୍ଣା କାର୍ତ୍ତିକେୟନ ହେଉଛନ୍ତି ଜଣେ ସ୍ୱାଧୀନ ସାମ୍ବାଦିକା, ଲେଖିକା ଓ ପରୀର ବରିଷ୍ଠ ଫେଲୋ । ତାଙ୍କର ତଥ୍ୟ ଭିତ୍ତିକ ପୁସ୍ତକ ‘ନାଇନ୍‌ ରୁପିଜ୍‌ ଏ ଆୱାର୍‌’ରେ ସେ କ୍ରମଶଃ ଲୋପ ପାଇଯାଉଥିବା ଜୀବିକା ବିଷୟରେ ବର୍ଣ୍ଣନା କରିଛନ୍ତି । ସେ ପିଲାମାନଙ୍କ ପାଇଁ ପାଞ୍ଚଟି ପୁସ୍ତକ ରଚନା କରିଛନ୍ତି । ଅପର୍ଣ୍ଣା ତାଙ୍କର ପରିବାର ଓ କୁକୁରମାନଙ୍କ ସହିତ ଚେନ୍ନାଇରେ ବାସ କରନ୍ତି ।

ଏହାଙ୍କ ଲିଖିତ ଅନ୍ୟ ବିଷୟଗୁଡିକ ଅପର୍ଣ୍ଣା କାର୍ତ୍ତିକେୟନ୍
Photographs : M. Palani Kumar

ଏମ୍‌. ପାଲାନି କୁମାର ‘ପିପୁଲ୍‌ସ ଆର୍କାଇଭ୍‌ ଅଫ୍‌ ରୁରାଲ ଇଣ୍ଡିଆ’ର ଷ୍ଟାଫ୍‌ ଫଟୋଗ୍ରାଫର । ସେ ଅବହେଳିତ ଓ ଦରିଦ୍ର କର୍ମଜୀବୀ ମହିଳାଙ୍କ ଜୀବନୀକୁ ନେଇ ଆଲେଖ୍ୟ ପ୍ରସ୍ତୁତ କରିବାରେ ରୁଚି ରଖନ୍ତି। ପାଲାନି ୨୦୨୧ରେ ଆମ୍ପ୍ଲିଫାଇ ଗ୍ରାଣ୍ଟ ଏବଂ ୨୦୨୦ରେ ସମ୍ୟକ ଦୃଷ୍ଟି ଓ ଫଟୋ ସାଉଥ ଏସିଆ ଗ୍ରାଣ୍ଟ ପ୍ରାପ୍ତ କରିଥିଲେ। ସେ ପ୍ରଥମ ଦୟାନିତା ସିଂ - ପରୀ ଡକ୍ୟୁମେଣ୍ଟାରୀ ଫଟୋଗ୍ରାଫୀ ପୁରସ୍କାର ୨୦୨୨ ପାଇଥିଲେ। ପାଲାନୀ ହେଉଛନ୍ତି ‘କାକୁସ୍‌’(ଶୌଚାଳୟ), ତାମିଲ୍ ଭାଷାର ଏକ ପ୍ରାମାଣିକ ଚଳଚ୍ଚିତ୍ରର ସିନେମାଟୋଗ୍ରାଫର, ଯାହାକି ତାମିଲ୍‌ନାଡ଼ୁରେ ହାତରେ ମଇଳା ସଫା କରାଯିବାର ପ୍ରଥାକୁ ଲୋକଲୋଚନକୁ ଆଣିଥିଲା।

ଏହାଙ୍କ ଲିଖିତ ଅନ୍ୟ ବିଷୟଗୁଡିକ M. Palani Kumar
Editor : P. Sainath

ପି. ସାଇନାଥ, ପିପୁଲ୍ସ ଆର୍କାଇଭ୍ ଅଫ୍ ରୁରାଲ ଇଣ୍ଡିଆର ପ୍ରତିଷ୍ଠାତା ସମ୍ପାଦକ । ସେ ବହୁ ଦଶନ୍ଧି ଧରି ଗ୍ରାମୀଣ ରିପୋର୍ଟର ଭାବେ କାର୍ଯ୍ୟ କରିଛନ୍ତି ଏବଂ ସେ ‘ଏଭ୍ରିବଡି ଲଭସ୍ ଏ ଗୁଡ୍ ଡ୍ରଟ୍’ ଏବଂ ‘ଦ ଲାଷ୍ଟ ହିରୋଜ୍: ଫୁଟ୍ ସୋଲଜର୍ସ ଅଫ୍ ଇଣ୍ଡିଆନ୍ ଫ୍ରିଡମ୍’ ପୁସ୍ତକର ଲେଖକ।

ଏହାଙ୍କ ଲିଖିତ ଅନ୍ୟ ବିଷୟଗୁଡିକ ପି.ସାଇନାଥ
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

ଏହାଙ୍କ ଲିଖିତ ଅନ୍ୟ ବିଷୟଗୁଡିକ Shankar N. Kenchanuru