ದಸರಾ ಹಬ್ಬದ ದಿನಗಳೆಂದರೆ ಮುಂಜಾನೆಯ ಪ್ರಾರ್ಥನೆ ಮತ್ತು ಪೂಜಾ ಕಾರ್ಯಗಳಲ್ಲಿ ಪಾಲ್ಗೊಳ್ಳಲು ವಿದ್ಯಾರ್ಥಿಗಳೆಲ್ಲರೂ ಶಾಲಾ ಮುಖ್ಯ ಆವರಣದಲ್ಲಿ ಸೇರುವುದು ಇಲ್ಲಿಯ ವಾಡಿಕೆ.
`ಕಟ್ಟೈಕುಟ್ಟು ಗುರುಕುಲಂ' ಎಂಬುದು ತಮಿಳುನಾಡಿನ ಕಂಚೀಪುರಂ ಜಿಲ್ಲೆಯಲ್ಲಿರುವ ಒಂದು ವಸತಿ ನಾಟಕ ಶಾಲೆ. ಸುತ್ತಲೂ ಹಚ್ಚಹಸಿರಿನಿಂದ ಕಂಗೊಳಿಸುತ್ತಿದ್ದು ಪುಂಜಾರ ಸಂತಕಲ್ ಎಂಬ ಹಳ್ಳಿಯಲ್ಲಿರುವ ಈ ಶಾಲೆಯು ಚೆನ್ನೈಯಿಂದ ಸುಮಾರು ಎಂಭತ್ತೈದು ಕಿಲೋಮೀಟರುಗಳ ದೂರದಲ್ಲಿದ್ದು, ಆಟೋ ಹಿಡಿದು ಬರುವುದಾದರೆ ಕಂಚೀಪುರಂನಿಂದ ಮೂವತ್ತೈದು ಕಿಲೋಮಿಟರುಗಳ ದೂರದಲ್ಲಿದೆ. ಸಾಮಾನ್ಯ ಶಾಲೆಗಳಲ್ಲಿರುವಂತೆ ಹನ್ನೆರಡನೆಯ ತರಗತಿಯವರೆಗಿನ ಶಿಕ್ಷಣವನ್ನು ನೀಡುವುದಲ್ಲದೆ ತಮಿಳುನಾಡಿನ ರಂಗಭೂಮಿಯ ಪ್ರಕಾರಗಳಲ್ಲೊಂದಾದ `ಕಟ್ಟೈಕುಟ್ಟು'ನ್ನೂ ಇಲ್ಲಿ ವಿದ್ಯಾರ್ಥಿಗಳಿಗೆ ಕಲಿಸಿಕೊಡಲಾಗುತ್ತದೆ. ಈ ಸ್ಥಳದ ವಿಶೇಷತೆಯೆಂದರೆ ಕಟ್ಟೈಕುಟ್ಟು ಗುರುಕುಲಂನ ವಿದ್ಯಾರ್ಥಿ ಸಮೂಹದಲ್ಲಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಹಿನ್ನೆಲೆಯಿಂದ ಬಂದ ವಿದ್ಯಾರ್ಥಿಗಳದ್ದೇ ಸಿಂಹಪಾಲು.
ಮುಂಜಾನೆಯ ಏಳೂ ಮೂವತ್ತರಿಂದ ಸಂಜೆಯ ಐದರವರೆಗಿನ ಸಮಯವು ಗುರುಕುಲಂನ ಚಟುವಟಿಕೆಗಳ ಸಮಯ. ಈ ಸಮಯವನ್ನು ಸಾಮಾನ್ಯವಾದ ಪಠ್ಯ ವಿಷಯ, ಕಟ್ಟೈಕುಟ್ಟು ಮತ್ತು ಸಂಗೀತದ ತರಬೇತಿಗಳಿಗಾಗಿ ಸಮರ್ಪಕವಾಗಿ ವಿಂಗಡಿಸಲಾಗಿದೆ. ಇತರ ಶಾಲೆಗಳಂತೆ ಗುರುಕುಲಂನಲ್ಲೂ ಪೂರ್ವಾಹ್ನದ ಸಮಯವನ್ನುಅಧ್ಯಯನ ಸಂಬಂಧಿ ಚಟುವಟಿಕೆಗಳಿಗಾಗಿ ಮೀಸಲಿಟ್ಟಿದ್ದರೆ ಅಪರಾಹ್ನದ ನಂತರದ ಸಮಯವನ್ನು ಪಠ್ಯೇತರ ಚಟುವಟಿಕೆಗಳಿಗಾಗಿ ಮೀಸಲಿಡಲಾಗಿದೆ.


















