ಪ್ರತಿದಿನ ಬೆಳಿಗ್ಗೆ ಎರಡು ಬಾರಿ, ಶಾಲೆಗೆ ಹೋಗುವಾಗ ಮತ್ತು ಹಿಂದಿರುಗುವಾಗ, ಅಲ್ಲಿಯ ಜನರು ಒಂದೇ ಲೈನಿನಲ್ಲಿ ಕಷ್ಟ ಪಟ್ಟು ನಡೆಯುತ್ತಾರೆ, ಅವರಲ್ಲಿ ಹೆಚ್ಚಿನವರು ಬರಿಗಾಲಿನಲ್ಲಿ, ಒಂದು ಕೈಯಲ್ಲಿ ಛತ್ರಿಗಳನ್ನು ಹಿಡಿದುಕೊಂಡು ಮತ್ತು ಭಾರವಾದ ಚೀಲಗಳನ್ನು ಹೆಗಲ ಮೇಲೆ ಹಾಕಿಕೊಳ್ಳುತ್ತಾರೆ. 30 ಸೆಕೆಂಡುಗಳ ಅಪಾಯಕಾರಿ ನಡಿಗೆಯ ನಂತರ, ಅವರ ಪಾದಗಳು ಉಳಿದಿರುವ ಸೇತುವೆಯ ಸುರಕ್ಷಿತ ಕಾಂಕ್ರೀಟ್ ಮೇಲ್ಮೈಯನ್ನು ಸ್ಪರ್ಶಿಸುತ್ತವೆ. ನಂತರ ಅವರು ಅವಾರೆ ಹಳ್ಳಿಯಲ್ಲಿರುವ ಅವರ ಶಾಲೆಯಿಂದ ಎರಡು ಕಿಲೋಮೀಟರ್ ಔರೆ ಪಲ್ಹೇರಿ ಕುಗ್ರಾಮದಲ್ಲಿರುವ ತಮ್ಮ ಮನೆಗಳನ್ನು ತಲುಪಲು ಮಣ್ಣಿನ ಹಾದಿಯಲ್ಲಿ ನಡೆಯುತ್ತಾರೆ.
"ಕೆಳಗೆ ನೋಡಿದಾಗ ನನಗೆ ಭಯವಾಗುತ್ತದೆ, ತಲೆಸುತ್ತು ಬರುತ್ತದೆ. ಹಾಗಾಗಿ ನಾನು ನನ್ನ ಬಾಬಾ ಅವರ [ತಂದೆಯ] ಕೈಯನ್ನು ತುಂಬಾ ಬಿಗಿಯಾಗಿ ಹಿಡಿದಿರುತ್ತೇನೆ,” ಎಂದು ಯಶ್ ಹೇಳುತ್ತಾನೆ.ಔರೆ ಪಲ್ಹೇರಿಯ 77 ನಿವಾಸಿಗಳು (ಅವಾರೆ ಗ್ರಾಮ ಪಂಚಾಯತ್ ಕಚೇರಿ ಡೇಟಾ) 2005ರವರೆಗೆ ಈ ಬಿಗಿಹಗ್ಗದ ನಡಿಗೆಯನ್ನು ನಡೆಯಬೇಕಾಗಿರಲಿಲ್ಲ. ಒಂದು ಸಣ್ಣ ಸೇತುವೆಯು ಭಟ್ಸಾ ನದಿಯ ಈ ಹೊಳೆಯನ್ನು ದಾಟಲು ಅವಕಾಶ ಮಾಡಿಕೊಟ್ಟಿತ್ತು. ಆದರೆ ಅದೇ ವರ್ಷ ಜುಲೈ 28ರಂದು, ಭಾರೀ ಮಳೆಯಿಂದಾಗಿ 1998ರಲ್ಲಿ ಥಾಣೆ ಜಿಲ್ಲಾ ಮಂಡಳಿಯು ನಿರ್ಮಿಸಿದ ಸೇತುವೆಯ ಕೆಲವು ಭಾಗವನ್ನು ಕೊಚ್ಚಿಕೊಂಡು ಹೋಯಿತು. ಆ ಮುರಿದ ಭಾಗದಲ್ಲಿ ಎರಡು ಕಿರಿದಾದ ಬದಿಯ ಗೋಡೆಗಳು – ಸೇತುವೆಗಳ ಕಂಬಗಳು ಮಾತ್ರ ಉಳಿದಿವೆ.










