"ನನ್ನ ಬೆರಳುಗಳು ಮತದಾನ ಮಾಡಲು ಯೋಗ್ಯವೆನ್ನುವುದಾದರೆ ಆಧಾರ್ ಕಾರ್ಡ್ ಪಡೆಯುವಷ್ಟು ಯೋಗ್ಯತೆಯನ್ನೇಕೆ ಪಡೆದಿಲ್ಲ?" ಎಂದು ಕೇಳುತ್ತಿದ್ದಾಳೆ ಪಾರ್ವತಿ ದೇವಿ. ಐವತ್ತೊಂದರ ಪ್ರಾಯದ ಈಕೆ ವೋಟರ್ ಐಡಿ ಕಾರ್ಡ್ ಎಂದು ಸಾಮಾನ್ಯವಾಗಿ ಕರೆಯಲಾಗುವ ತನ್ನ ಭಾವಚಿತ್ರವುಳ್ಳ ಎಲೆಕ್ಟರ್ಸ್ ಫೋಟೋ ಐಡೆಂಟಿಟಿ ಕಾರ್ಡ್ (ಇ.ಪಿ.ಐ.ಸಿ) ಅನ್ನು ಎತ್ತಿಹಿಡಿದು ನಮಗೆ ತೋರಿಸುತ್ತಿದ್ದಾಳೆ. 1995 ರಿಂದ ಹಿಡಿದು ಇಂದಿನವರೆಗೂ ಪ್ರತೀ ಚುನಾವಣೆಯಲ್ಲೂ ಈ ವೋಟರ್ ಐಡಿ ಕಾರ್ಡಿನ ದಾಖಲೆಯಿಂದಾಗಿ ಆಕೆ ಮತದಾನ ಮಾಡಿದ್ದಾಳಂತೆ.
ಮೂರು ವರ್ಷದ ಹಿಂದೆ ಆದ ಕುಷ್ಠರೋಗದ ಸೋಂಕು ಪಾರ್ವತಿಯ ಬೆರಳುಗಳನ್ನು ವಿರೂಪಗೊಳಿಸಿದೆ. ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದ 2016-17 ರ ವಾರ್ಷಿಕ ವರದಿ ಯಲ್ಲಿ ಹೇಳಿರುವಂತೆ ಅಜಮಾಸು 86,000 ಮಂದಿ ಭಾರತೀಯರು ಕುಷ್ಠರೋಗಪೀಡಿತರಾಗಿದ್ದಾರೆ. ಈ ಸಂಖ್ಯೆಯು ದಾಖಲಾದ ಪ್ರಕರಣಗಳ ಸಂಖ್ಯೆ ಮಾತ್ರ ಎಂಬುದು ಗಮನಾರ್ಹ ಅಂಶ. ಇದಲ್ಲದೆ ಪ್ರತೀವರ್ಷವೂ ಹೊಸ ಕುಷ್ಠರೋಗದ ಪ್ರಕರಣಗಳು ಪತ್ತೆಯಾಗುತ್ತಿವೆ. ವಿಶ್ವ ಆರೋಗ್ಯ ಸಂಸ್ಥೆಯು ಹೇಳುವ ಪ್ರಕಾರ ಜಗತ್ತಿನಾದ್ಯಂತ ಐದರಲ್ಲಿ ಮೂರಕ್ಕೂ ಹೆಚ್ಚು ಕುಷ್ಠರೋಗದ ಪ್ರಕರಣಗಳು ಭಾರತದಲ್ಲೇ ಪ್ರತೀವರ್ಷವೂ ಬೆಳಕಿಗೆ ಬಂದಿವೆ.
ಹೀಗಾಗಿ ನ್ಯಾಯಯುತವಾಗಿ ದಕ್ಕಬೇಕಿರುವ 2500 ರೂಪಾಯಿಗಳ ವಿಕಲಚೇತನರ ಪಿಂಚಣಿಯನ್ನೂ ಸೇರಿದಂತೆ ರಾಜ್ಯ ಸರಕಾರದಿಂದ ನೀಡಲಾಗುವ ಬಹುತೇಕ ಸೌಲಭ್ಯಗಳತ್ತ ಕೈಚಾಚಲು ಒಂದು ಪವಾಡದ ಕೀಲಿಯಂತಿದ್ದ ಆಧಾರ್ ಕಾರ್ಡು ಪಾರ್ವತಿ ದೇವಿಗೀಗ ಅಕ್ಷರಶಃ ಗಗನಕುಸುಮವಾಗಿಬಿಟ್ಟಿದೆ.
"ಆಧಾರ್ ಕಾರ್ಡಿದ್ದರೆ ನನಗೆ ಪಿಂಚಣಿ ಸಿಗುತ್ತದೆ ಎಂದು ಎರಡು ವರ್ಷದ ಹಿಂದೆ ನನ್ನ ಮಗ ಹೇಳಿದ್ದ. ಅಂದಿನಿಂದ ಈ ಕಾರ್ಡನ್ನು ಪಡೆಯಲು ನಾನು ಮಾಡಿದ ನಿರಂತರ ಪ್ರಯತ್ನಗಳು ಅಷ್ಟಿಷ್ಟಲ್ಲ. ಆದರೆ ಇವರೆಲ್ಲಾ ಹೇಳುವ ಪ್ರಕಾರ ನನ್ನ ಬೆರಳುಗಳು ಸರಿಯಾಗಿಲ್ಲದ ಕಾರಣದಿಂದಾಗಿ ನನಗೆ ಕಾರ್ಡು ಸಿಗೋದಿಲ್ಲವಂತೆ," ಎನ್ನುತ್ತಾರೆ ಪಾರ್ವತಿ.
'ನಮ್ಮ ಯಾವುದೇ ತಪ್ಪಿಲ್ಲದಿದ್ದರೂ ಭಗವಂತ ನಮ್ಮ ಕೈಗಳನ್ನು ಊನಮಾಡಿಬಿಟ್ಟ. ಹಾಗಿದ್ದ ಮಾತ್ರಕ್ಕೆ ನನ್ನಂಥವರು ಆಧಾರ್ ಕಾರ್ಡನ್ನು ಪಡೆಯಲು ಅರ್ಹರಲ್ಲವೇ?' ಎಂದು ಪಾರ್ವತಿ ದೇವಿ ಅಚ್ಚರಿಪಡುತ್ತಿದ್ದಾರೆ
2009 ರಲ್ಲಿ ಯೂನಿಕ್ ಐಡೆಂಟಿಫಿಕೇಷನ್ ಅಥಾರಿಟಿ ಆಫ್ ಇಂಡಿಯಾದ ಯೋಜನೆಯಡಿಯಲ್ಲಿ ಜಾರಿಗೆ ತರಲಾದ 12 ಸಂಖ್ಯೆಗಳುಳ್ಳ ವಿಶಿಷ್ಟ ಗುರುತು ಸಂಖ್ಯೆಯನ್ನು ಹೊಂದಿರುವ ಆಧಾರ್ ಕಾರ್ಡನ್ನು ಗಿಟ್ಟಿಸಿಕೊಳ್ಳಲು ಪಾರ್ವತಿ ದೇವಿ ಹೆಜ್ಜೆಯಿಡದ ಹಾದಿಗಳಿಲ್ಲ. ಮಾಯಾವತಿ ಕಾಲೋನಿಯಲ್ಲಿರುವ ಅಧಿಕೃತ ಆಧಾರ್ ವೆಂಡರುಗಳ ಕಾರ್ಯಾಲಯ, ಬ್ಲಾಕ್ ಕಾರ್ಯಾಲಯ, ಆಕೆ ಸ್ವತಃ ವಾಸಿಸುವ ಲಕ್ನೋದ ಚಿನ್ಹಟ್ ಬ್ಲಾಕ್ ಕೊಳಗೇರಿಯ ವ್ಯವಸ್ಥೆ... ಹೀಗೆ ಪಾರ್ವತಿ ದೇವಿ ತನ್ನಿಂದಾಗುವ ಎಲ್ಲವನ್ನೂ ಪ್ರಯತ್ನಿಸಿದ್ದಾಳೆ. "ನನ್ನ ಕೈಗಳು ಫಿಂಗರ್ ಪ್ರಿಂಟಿಂಗ್ ಯಂತ್ರದಲ್ಲಿಡಲು ಲಾಯಕ್ಕಲ್ಲವಂತೆ. ನನ್ನ ಗುರುತಿನ ದಾಖಲೆಯಾಗಿ ವೋಟರ್ ಕಾರ್ಡನ್ನು ಹಿಡಿದುಕೊಂಡು ಹೋದರೂ ಇವರುಗಳು ಒಪ್ಪುತ್ತಿಲ್ಲ. ವೋಟರ್ ಕಾರ್ಡಿನಲ್ಲಿರುವ ವ್ಯಕ್ತಿ ನಾನೇ ಆಗಿದ್ದ ಮೇಲೆ ಸಮಸ್ಯೆಯಾದರೂ ಏನು?," ಎಂದು ಅಚ್ಚರಿಪಡುತ್ತಿದ್ದಾರೆ ಪಾರ್ವತಿ.
ಸುಮಾರು ಮೂವತ್ತು ವರ್ಷಗಳ ಹಿಂದೆ ಬಿಹಾರದ ಮುಜಾಫರ್ ಪುರ್ ಜಿಲ್ಲೆಯ ಬರೈತ ಉದಯನಗರವೆಂಬ ಹಳ್ಳಿಯಿಂದ ಪಾರ್ವತಿ ದೇವಿ ಲಕ್ನೋಗೆ ವಲಸೆ ಬಂದಿದ್ದಳು. ಹೀಗೆ ಆಕೆ ಲಕ್ನೋಗೆ ಕಾಲಿಟ್ಟಿದ್ದು ಜಗದೀಶ್ ಮಹತೋ ಎಂಬಾತನ ನವವಧುವಾಗಿ. ಅಂದಿನಿಂದ ತ್ಯಾಜ್ಯ ವಿಲೇವಾರಿಯ ಕಾರ್ಮಿಕಳಾಗಿ ಪ್ಲಾಸ್ಟಿಕ್, ಕಬ್ಬಿಣ, ಕಾಗದ, ಗಾಜುಗಳಂಥಾ ವಸ್ತುಗಳನ್ನು ಕಸದ ರಾಶಿಯಿಂದ ಪ್ರತ್ಯೇಕಿಸುವ ವೃತ್ತಿಯನ್ನು ಹೊಟ್ಟೆಪಾಡಿಗಾಗಿ ಮಾಡುತ್ತಾ ಬಂದಿದ್ದಾಳೆ ಪಾರ್ವತಿ. 11 ರಿಂದ 27 ರ ಪ್ರಾಯದ ಮಕ್ಕಳಿರುವ ಪಾರ್ವತಿ ತಾನು ಆರು ಮಕ್ಕಳನ್ನು ಹೆತ್ತಾಗಲೂ ಬೆರಳೆಣಿಕೆಯ ದಿನಗಳ ವಿಶ್ರಾಂತಿಯನ್ನು ತೆಗೆದುಕೊಂಡಿದ್ದನ್ನು ಬಿಟ್ಟರೆ ನಿರಂತರವಾಗಿ ಪಕ್ಕಾ ಶ್ರಮಿಕಳಂತೆ ದುಡಿಯುತ್ತಾ ಬಂದಿದ್ದಾಳೆ. ಹೀಗೆ ಕಸ ವಿಲೇವಾರಿ ಮಾಡುವ ಡೀಲರುಗಳಿಗೆ ತ್ಯಾಜ್ಯವನ್ನು ಮಾರಾಟ ಮಾಡಿದರೆ ಆಕೆಗೆ ಸಿಗುತ್ತಿದ್ದಿದ್ದು ದಿನಕ್ಕೆ 50 ರಿಂದ 100 ರೂಪಾಯಿಗಳಷ್ಟಿನ ಅಲ್ಪ ಆದಾಯ. ಮುಂಜಾನೆ 4 ಕ್ಕೆ ಶುರುವಾಗುವ ಪಾರ್ವತಿಯ ದಿನವು ತನ್ನೆಲ್ಲಾ ಮನೆಕೆಲಸಗಳನ್ನು ಮುಗಿಸಿಕೊಂಡು ಕೊನೆಯಾಗುವುದು ರಾತ್ರಿ 11 ರ ನಂತರವೇ.
ಆದರೆ ಆಕೆಯ ಸದ್ಯದ ದಿನಗಳು ಮಾತ್ರ ಬದಲಾಗಿವೆ. ಮನೆಯ ಹೊರಭಾಗದ ಕೋಣೆಯೊಂದರಲ್ಲಿ ಮರದ ಮಂಚವೊಂದನ್ನಿಟ್ಟುಕೊಂಡು ಅದರಲ್ಲೇ ತನ್ನ ಬಹಳಷ್ಟು ಸಮಯವನ್ನು ಕಳೆಯುತ್ತಿದ್ದಾಳೆ ಪಾರ್ವತಿ ದೇವಿ. ಹೊರಜಗತ್ತನ್ನು ನೋಡಲು ಆಕೆಗೆ ಕಿಟಕಿಯಂತಿರುವುದು ಕೋಣೆಯ ತೆಳುವಾದ ಪರದೆಯನ್ನು ಸರಿಸಿದಾಗ ಮಾತ್ರ. ಬಹಳಷ್ಟು ಬಾರಿ ತನ್ನ ದಿನಗಳು ಮುಗಿದು ಹೋದಂತೆನಿಸಿದಾಗ ಆಕೆಗೆ ಸಂಕಟವಾಗುತ್ತದೆ. ಹಾಗಾದಾಗಲೆಲ್ಲಾ ಒಂದೆರಡು ತಾಸುಗಳ ಕಾಲ ಕಸ ಹೆಕ್ಕಲು ಆಕೆ ಹೊರಗೆ ಹೋಗುವುದುಂಟಂತೆ.
"ಒಂದು ಕಾಲದಲ್ಲಿ ಇಡೀ ಮನೆಯನ್ನು ನಾನೊಬ್ಬಳೇ ಸಂಭಾಳಿಸುತ್ತಿದ್ದೆ. ಈಗ ದಿನಸಿ ಸಾಮಾನುಗಳನ್ನು ತರುವುದೂ ಕೂಡ ಕಷ್ಟವೆಂಬಂತಾಗಿದೆ," ಎನ್ನುತ್ತಿದ್ದಾರೆ ಪಾರ್ವತಿ. ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿ.ಡಿ.ಎಸ್) ನಿಂದ ಸಬ್ಸಿಡಿ ದರದಲ್ಲಿ ಸಿಗುವ 35 ಕಿಲೋ ಧವಸಧಾನ್ಯ (20 ಕಿಲೋ ಗೋಧಿ ಮತ್ತು 15 ಕಿಲೋ ಅಕ್ಕಿ) ಗಳನ್ನು ಪಡೆಯಲು ಆಕೆಯ ಬಳಿ ಅಂತ್ಯೋದಯ ಕಾರ್ಡಿದೆ. ಆದರೆ ಆಧಾರ್ ಕಾರ್ಡಿಲ್ಲದೆ ಪಿ.ಡಿ.ಎಸ್ ನ ದಿನಸಿ ಅಂಗಡಿಯಲ್ಲೂ ತನ್ನ ಗುರುತಿನ ದಾಖಲೆಯನ್ನು ನೀಡಲು ಈಗ ಪಾರ್ವತಿ ವಿಫಲಳಾಗಿದ್ದಾಳೆ.
"ಪಾರ್ವತಿ ಇಲ್ಲಿಗೆ ಬರುತ್ತಿದ್ದ ದಿನಗಳಿಂದಲೂ ನನಗೆ ಪರಿಚಿತರು. ಆದರೆ ನಿಯಮಗಳನ್ನು ಪಾಲಿಸಲೇಬೇಕಲ್ಲವೇ?," ಎನ್ನುತ್ತಾರೆ ದಿನಸಿ ಅಂಗಡಿಯ ಮಾಲಕರಾಗಿರುವ ಫೂಲ್ಚಂದ್ ಪ್ರಸಾದ್. ಹೀಗೆ ಹೇಳುತ್ತಲೇ ಪಾರ್ವತಿಯ ನೆರೆಕರೆಯವರೂ ಆಗಿರುವ ಸುರ್ಜಿ ಸಾಹನಿ ಎಂಬ ತರಕಾರಿ ವ್ಯಾಪಾರಿಯೊಬ್ಬರ ಬೆರಳಿನ ಗುರುತನ್ನು ಹೊಂದಿಸಲು ಫೂಲ್ಚಂದ್ ತಡಕಾಡುತ್ತಿದ್ದಾರೆ. ಸಾಹನಿಯ ಬೆರಳಿನ ಗುರುತುಗಳು ಯಂತ್ರದಲ್ಲಿ ಆಗಲೇ ಇಟ್ಟಿರುವ ಮಾದರಿಯೊಂದಿಗೆ ಹೊಂದಿಕೆಯಾದಲ್ಲಿ ಮಾತ್ರ ಪುಟ್ಟದಾದ ಜಾಗವೊಂದು ಬೀಪ್ ಎನ್ನಲಿದೆ. "ಈ ಯಂತ್ರ ಹೇಳಿದಂತೆ ನಾವು ಕೇಳಬೇಕಷ್ಟೇ," ಭುಜಗಳನ್ನು ಕೊಂಚ ಎತ್ತರಿಸುತ್ತಾ ನೀರಸವಾಗಿ ಹೇಳುತ್ತಿದ್ದಾರೆ ಫೂಲ್ಚಂದ್. (ದಿನವಿಡೀ ತರಕಾರಿಗಳ ಸಿಪ್ಪೆ ಸುಲಿದು ಸಾಹನಿಯ ಕೈಬೆರಳುಗಳ ಚರ್ಮ ಒರಟಾದ ಪರಿಣಾಮವಾಗಿ ಈ ಪ್ರಕ್ರಿಯೆಯು ಮತ್ತಷ್ಟು ಸಮಯವನ್ನು ತೆಗೆದುಕೊಳ್ಳುತ್ತಿದೆ.)
ಸದ್ಯ ಪಾರ್ವತಿಗೆ ದಿನಸಿಯ ಸರಕುಗಳು ಸಿಗಬೇಕೆಂದರೆ ಜೊತೆಗೊಬ್ಬ ಕುಟುಂಬಸ್ಥ ಇರಲೇಬೇಕು. ಮತ್ತು ಹೀಗೆ ಜೊತೆಗೆ ಬಂದ ವ್ಯಕ್ತಿಯ ಕೈಅಚ್ಚುಗಳು 'ಎಲ್ಲವನ್ನೂ ನಿರ್ಧರಿಸುವ ಈ ಯಂತ್ರ'ದಲ್ಲಿ ಹೊಂದಿಕೆಯೂ ಆಗಬೇಕು. ಹೀಗಾಗಿ ದಿನಸಿ ಅಂಗಡಿಯ ಈ ಇಡೀ ಪ್ರಕ್ರಿಯೆಯೇ ಪಾರ್ವತಿಗೆ ಬಲು ಸಂಕೀರ್ಣವಾಗಿಬಿಟ್ಟಿದೆ. ಪಾರ್ವತಿಯ ಇಬ್ಬರು ಹೆಣ್ಣುಮಕ್ಕಳು ಮದುವೆಯಾಗಿ ಮುಂಬೈನಲ್ಲಿ ನೆಲೆಯಾಗಿದ್ದಾರೆ. ಇನ್ನಿಬ್ಬರು ಗಂಡು ಮಕ್ಕಳು ನಿರುದ್ಯೋಗಿಗಳಾಗಿದ್ದು ತನ್ನ ಮತ್ತು ಸಹೋದರಿಯರ ಮನೆಗೆ ಆಗೊಮ್ಮೆ ಈಗೊಮ್ಮೆ ಹೋಗಿಬರುತ್ತಿರುತ್ತಾರೆ. ಆಕೆಯ ಪತಿ ಮನೆಯಿಂದ ಐದು ಕಿಲೋಮೀಟರು ದೂರವಿರುವ ವಿವಾಹ ಸಭಾಂಗಣವೊಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ 3000 ರೂಪಾಯಿಗಳ ಮಾಸಿಕ ಪಗಾರಕ್ಕಾಗಿ ದುಡಿಯುತ್ತಿದ್ದಾನೆ. ಆತನಿಗೆ ತಿಂಗಳಿಗೆ ಸಿಗುವ ಎರಡು ರಜೆಗಳಲ್ಲಿ ಒಂದು ರಜೆ ದಿನವಿಡೀ ದಿನಸಿ ಅಂಗಡಿಯೆದುರು ಸಾಮಾನು ಕೊಳ್ಳಲು ನಿಂತಿರುವ ಜನರ ಸಾಲಿನಲ್ಲೇ ಕಳೆದುಹೋಗುತ್ತದೆ. ಪಾರ್ವತಿಯ ಮತ್ತೊಬ್ಬ ಮಗನಾದ, 20 ರ ಪ್ರಾಯದ ರಾಮ್ ಕುಮಾರ್ ಕೂಡ ತ್ಯಾಜ್ಯ ಹೆಕ್ಕುವ ಕಾರ್ಮಿಕನಾಗಿ ದುಡಿಯುತ್ತಿದ್ದಾನೆ. ಈ ಒಂದು ಕೆಲಸಕ್ಕಾಗಿ ರಜೆ ಹಾಕುವುದೆಂದರೆ ಆತನಿಗೆ ವ್ಯಥೆಯುಂಟಾಗುತ್ತದೆ. ಮಾಸಿಕ 700 ರೂಪಾಯಿಗಳ ಫೀಸು ಕೊಡುವ ಸಾಮಥ್ರ್ಯವಿರದಿದ್ದ ಕಾರಣ ಈಕೆಯ 11 ರ ಹರೆಯದ ಕೊನೆಯ ಮಗನಾಗಿರುವ ರಾಮ್ ಆಧಾರ್ ನ ವಿದ್ಯಾಭ್ಯಾಸವು ಅರ್ಧಕ್ಕೇ ನಿಂತುಬಿಟ್ಟಿದೆ. ಈತನೂ ಕೂಡ ಆಧಾರ್ ಕಾರ್ಡಿಗಾಗಿ ಅರ್ಜಿ ಹಾಕಿದ್ದಾನೆ. ಇನ್ನೇನು ಕೈಸೇರುವುದೊಂದು ಬಾಕಿಯಷ್ಟೇ.
"ಈ ಆಧಾರ್ ಅನ್ನೋದು ಚೆನ್ನಾಗಿರಲೂಬಹುದೇನೋ. ಆದರೆ ಭಗವಂತ ನಮ್ಮ ಕೈಗಳನ್ನು ಊನಮಾಡಿಬಿಟ್ಟ ಎಂಬ ಒಂದೇ ಕಾರಣಕ್ಕಾಗಿ ನಮಗೆ ಈ ಸೌಲಭ್ಯವನ್ನು ನೀಡದಿರುವುದು ಎಷ್ಟು ಸರಿ? ಹಾಗೆ ನೋಡಿದರೆ ಈ ಸೌಲಭ್ಯವು ನಿಜಕ್ಕೂ ಬೇಕಿರುವುದು ನಮ್ಮಂಥವರಿಗಲ್ಲವೇ?" ಎನ್ನುತ್ತಾ ನಿಟ್ಟುಸಿರಾಗುತ್ತಿದ್ದಾರೆ ಪಾರ್ವತಿ ದೇವಿ.
ಅನುವಾದ : ಪ್ರಸಾದ್ ನಾಯ್ಕ್
ಕ್ರೇಝಿ ಫ್ರಾಗ್ ಮೀಡಿಯಾ ಈ ಅನುವಾದದ ರೂವಾರಿ. ಸಮಾನಮನಸ್ಕ ಬರಹಗಾರರನ್ನು ಮತ್ತು ಪತ್ರಕರ್ತರನ್ನು ಹೊಂದಿರುವ ಸಮೂಹವಿದು. ಬೆಂಗಳೂರು ಮೂಲದ ಆನ್ಲೈನ್ ನ್ಯೂಸ್ ಮೀಡಿಯಾ ಹಬ್ ಆಗಿರುವ ಕ್ರೇಝಿ ಫ್ರಾಗ್ ಮೀಡಿಯಾ ಸುದ್ದಿಗಳನ್ನು, ಕ್ರಿಯೇಟಿವ್ ಕಂಟೆಂಟ್ ಗಳನ್ನು, ಬ್ಯುಸಿನೆಸ್ ಸೊಲ್ಯೂಷನ್ ಗಳನ್ನು ನೀಡುತ್ತಾ ಪ್ರಸ್ತುತ ಕನ್ಸಲ್ಟೆನ್ಸಿ ಸೇವೆಗಳನ್ನು ಒದಗಿಸುತ್ತಿದೆ.