ಎರಡು ವರ್ಷಗಳ ಹಿಂದೆ ಬಿಹಾರದ ದರ್ಭಾಂಗ ಜಿಲ್ಲೆಯ ಮೋಹನ್ ಬಹೆರ ಎಂಬ ತಮ್ಮ ಪತಿಯ ಹಳ್ಳಿಯಲ್ಲಿ ಪಡಿತರ ಚೀಟಿಗಾಗಿ ರುಕ್ಸಾನ ಖಾತುನ್ ಅರ್ಜಿಯನ್ನು ಸಲ್ಲಿಸಿದ್ದರು. ಆ ತಿಂಗಳು ಪರಿವಾರದ ಪಕ್ಕಾ ಮನೆಯ ನಿರ್ಮಾಣವು ಪೂರ್ಣಗೊಂಡಿತು. ರುಕ್ಸಾನ ಆಧಾರ್ ಕಾರ್ಡಿಗೂ ಅರ್ಜಿ ಸಲ್ಲಿಸಿ, ಅದನ್ನು ಪಡೆದುಕೊಂಡರು. ಇದಕ್ಕೆ ಹಿಂದೆ ಎರಡು ಬಾರಿ ಆಕೆ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದ್ದಾಗ್ಯೂ ಅದು ಅವರ ಕೈಸೇರಲೇ ಇಲ್ಲ.
ಇದು ಆಗಸ್ಟ್ 2018ರಲ್ಲಿನ ಮೂರನೆಯ ಪ್ರಯತ್ನವಾಗಿದ್ದು, ಆಕೆಯು ಕಾಯಲು ಸಿದ್ಧರಿದ್ದರು.
30 ವರ್ಷದ ರುಕ್ಸಾನ ಹಾಗೂ 34ರ ವಯಸ್ಸಿನ ಆಕೆಯ ಪತಿ, ಮೊಹಮ್ಮದ್ ವಕೀಲ್, ಕಷ್ಟಪಟ್ಟು ದುಡಿಯುತ್ತಿದ್ದು, ತಮ್ಮ ಜೀವನವನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದರು. ಪಶ್ಚಿಮ ದೆಹಲಿಯಲ್ಲಿನ ಪಟೇಲ್ ನಗರದಲ್ಲಿ ರುಕ್ಸಾನ ಅವರ ಐದು ಮನೆಗಳಲ್ಲಿನ ಕೆಲಸ ಹಾಗೂ ವಕೀಲ್ ಅವರ ದರ್ಜಿಯ ಕೆಲಸಗಳಿಂದ ತಿಂಗಳಿಗೆ 27,000 ರೂ.ಗಳ ಒಟ್ಟಾರೆ ಆದಾಯವನ್ನು ಅವರಿಬ್ಬರೂ ಮನೆಗೆ ತರುತ್ತಿದ್ದರು. ಆರು ಜನರ ತಮ್ಮ ಕುಟುಂಬದ ಖರ್ಚನ್ನು ನಿಭಾಯಿಸಿ 12, 8, 2, ವರ್ಷದ ಮೂವರು ಪುತ್ರಿಯರು ಹಾಗೂ 10 ವರ್ಷದ ಒಬ್ಬ ಮಗ), ಹಳ್ಳಿಯಲ್ಲಿನ ವಕೀಲ್ ಅವರ ತಾಯಿಗೆ 2,000 ರೂ.ಗಳನ್ನು ಕಳುಹಿಸಿದ ನಂತರವೂ ಈ ದಂಪತಿಯು ಪ್ರತಿ ತಿಂಗಳು ಸ್ವಲ್ಪ ಹಣವನ್ನು ಉಳಿಸುತ್ತಿದ್ದರು.
ಇವರ ದುಡಿಮೆಯ ಶ್ರಮದ ಪ್ರತಿಫಲದಿಂದಾಗಿ, ಪಶ್ಚಿಮ ದೆಹಲಿಯಲ್ಲಿನ ಹೊಸ ರಂಜೀತ್ ನಗರ್ ಪ್ರದೇಶದಲ್ಲಿ ವಕೀಲ್ ತಮ್ಮ ಸ್ವಂತ ಹೊಲಿಗೆ ಅಂಗಡಿಯನ್ನು ತೆರೆದರು. ಹೊಲಿಗೆ ಅಂಗಡಿಯಲ್ಲಿನ ತನ್ನ ನೌಕರಿಯಿಂದ ಗಳಿಸುತ್ತಿದ್ದ 12,000 ರೂ.ಗಳಿಗಿಂತಲೂ ಹೆಚ್ಚಿನ ಹಣವನ್ನು ಸಂಪಾದಿಸುವುದು ಅವರ ಆಶಯವಾಗಿತ್ತು. ಇದು ನಡೆದದ್ದು, 2020ರ ಮಾರ್ಚ್ 15ರಂದು.
ಅದಾದ ಕೇವಲ ಒಂದು ವಾರದ ನಂತರದಲ್ಲಿ, ಭಾರತದಾದ್ಯಂತ ರಾಷ್ಟ್ರವ್ಯಾಪಿ ಲಾಕ್ಡೌನ್ ವಿಧಿಸಲಾಯಿತು.
ರುಕ್ಸಾನ ಅವರ ಉದ್ಯೋಗದಾತರು ಆಕೆಗೆ ಕೆಲಸಕ್ಕೆ ಬರುವುದನ್ನು ನಿಲ್ಲಿಸುವಂತೆ ತಿಳಿಸಿದರು. ಲಾಕ್ಡೌನ್ ಅವಧಿಯಲ್ಲಿ ಆಕೆಗೆ ಸಂಬಳವನ್ನು ನೀಡುವುದಿಲ್ಲವೆಂಬುದು ತಕ್ಷಣವೇ ಸ್ಪಷ್ಟವಾಯಿತು. ಐದು ಮನಗೆಳಲ್ಲಿನ ಕೆಲಸದಿಂದ ದೊರೆಯುತ್ತಿದ್ದ 15,000 ರೂ.ಗಳಿಗೆ ಬದಲಾಗಿ, ಒಂದು ಮನೆಯಲ್ಲಿ ಅಡಿಗೆಯ ಕೆಲಸವನ್ನು ಮುಂದುವರಿಸಿದ ಕಾರಣ, 2,400 ರೂ.ಗಳ ಸಂಪಾದನೆಯಷ್ಟೇ ಸಾಧ್ಯವಾಯಿತು. ಜೂನ್ ತಿಂಗಳಲ್ಲಿ ಆ ಕೆಲಸವೂ ಆಕೆಗೆ ಇಲ್ಲವಾಯಿತು. ಆದರೆ ತಕ್ಷಣವೇ ಮತ್ತೊಂದೆಡೆ ಅಡಿಗೆ ಹಾಗೂ ಸ್ವಚ್ಛತಾ ಕಾರ್ಯಕ್ಕಾಗಿ ಆಕೆ ನಿಯುಕ್ತಿಗೊಂಡರು. ರೋಗವನ್ನು ವ್ಯಾಪಕವಾಗಿ ಹರಡುತ್ತಿರುವವರ ಬಗ್ಗೆ ಕಳವಳಕ್ಕೀಡಾಗಿದ್ದ ಹೊಸ ಉದ್ಯೋಗದಾತರು, ರುಕ್ಸಾನ, ಮಸೀದಿಗೆ ಭೇಟಿ ನೀಡಿದ್ದರೇ ಎಂಬುದನ್ನು ತಿಳಿಯಬಯಸಿದರು. “ನನಗೆ ಇದರಿಂದ ಬೇಸರವಾಗಲಿಲ್ಲ. ಪ್ರತಿಯೊಬ್ಬರೂ ಕೊರೊನಾದಿಂದ ಭಯಭೀತರಾಗಿದ್ದಾರೆ. ಹಾಗಾಗಿ ಆಕೆಯ ಕಳವಳವು ನನಗೆ ಅರ್ಥವಾಯಿತು” ಎಂದರು ರುಕ್ಸಾನ.








