ಹಸಿರು ಬೆಟ್ಟಗಳು, ಸಣ್ಣ ಜಲಪಾತಗಳು ಮತ್ತು ಶುದ್ಧ ಗಾಳಿಯ ಹಿನ್ನೆಲೆಯಲ್ಲಿ, ಯುವಕನೊಬ್ಬ ತನ್ನ ಎಮ್ಮೆಗಳು ಮೇಯುವುದನ್ನು ನೋಡುತ್ತಿದ್ದ.
“ನೀವು ಯಾವುದಾದರೂ ಸರ್ವೇ ಮಾಡುತ್ತಿದ್ದೀರಾ?” ನಾನು ಆತನ ಬಳಿ ಹೋದಾಗ ನನಗೆ ಎದುರಾದ ಮೊದಲ ಪ್ರಶ್ನೆಯಿದು.
ನಾನು “ಇಲ್ಲ,” ಎನ್ನುತ್ತಾ, ನಾನಿಲ್ಲಿ ಅಪೌಷ್ಟಿಕತೆಯ ಕುರಿತು ವರದಿ ಮಾಡಲು ಬಂದಿದ್ದೇನೆ ಎಂದು ಹೇಳಿದೆ.
ನಾವು ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿರುವ ಮೊಖಾಡಾ ತಾಲೂಕಿನಲ್ಲಿದ್ದು, ಅಲ್ಲಿ 5,221 ಮಕ್ಕಳನ್ನು ತೀವ್ರ ಕಡಿಮೆ ತೂಕದ ಮಕ್ಕಳು ಎಂದು ಗುರುತಿಸಲಾಗಿದೆ – ಇದು ಈ ರಾಜ್ಯದಲ್ಲಿಯೇ ಎರಡನೇ ಅತಿ ಹೆಚ್ಚು ಎಂದು ಈ ವರದಿ ತಿಳಿಸಿದೆ.
ನಾವಿದ್ದ ಸ್ಥಳದಿಂದ ಈ ರಾಜ್ಯದ ರಾಜಧಾನಿ ಮುಂಬಯಿಗೆ ಕೇವಲ 157 ಕಿಲೋಮೀಟರ್ ದೂರವಿದೆ ಆದರೆ ಇಲ್ಲಿನ ಪರಿಸರಕ್ಕೂ ಅಲ್ಲಿನ ಪರಿಸರಕ್ಕೂ ಅಜಗಜಾಂತರ ವ್ಯತ್ಯಾಸವಿದೆ.
ರೋಹಿದಾಸ್ ಕಾ ಠಾಕೂರ್ ಸಮುದಾಯಕ್ಕೆ ಸೇರಿದವರಾಗಿದ್ದು, ಅವರನ್ನು ಮಹಾರಾಷ್ಟ್ರದಲ್ಲಿ ಪರಿಶಿಷ್ಟ ಪಂಗಡ ಎಂದು ಪಟ್ಟಿ ಮಾಡಲಾಗಿದೆ. ಪಾಲ್ಘರ್ ಜಿಲ್ಲೆಯಲ್ಲಿ ಶೇ.38ರಷ್ಟು ಜನರು ಬುಡಕಟ್ಟು ಜನಾಂಗದವರು. ಎಮ್ಮೆ ಮೇಯಿಸುತ್ತಿದ್ದ ಈ ಯುವಕ ತನ್ನ ಸರಿಯಾದ ವಯಸ್ಸನ್ನು ನನಗೆ ತಿಳಿಸಲು ವಿಫಲನಾದ, ಆದರೆ ಅವನು 20ರ ದಶಕದ ಉತ್ತರಾರ್ಧದಲ್ಲಿರುವಂತೆ ತೋರುತ್ತಿತ್ತು. ಆತ ತನ್ನ ಭುಜಕ್ಕೆ ಕೊಡೆಯೊಂದನ್ನು ನೇತುಹಾಕಿಕೊಂಡಿದ್ದ, ಕೈಯಲ್ಲಿ ಕೋಲು ಹಿಡಿದಿದ್ದ ಆತ ಕೊರಳ ಸುತ್ತ ಒಂದು ಟವೆಲ್ ಸುತ್ತಿಕೊಂಡಿದ್ದ. ತನ್ನ ಎರಡು ಎಮ್ಮೆಗಳನ್ನು ಮೇಯಿಸುತ್ತಾ ಅಲ್ಲಿ ನಿಂತಿದ್ದ. "ಮಳೆಗಾಲದ ದಿನಗಳಲ್ಲಿ ಮಾತ್ರ ಅವುಗಳಿಗೆ ಹೊಟ್ಟೆ ತುಂಬಾ ತಿನ್ನಲು ದೊರೆಯುತ್ತದೆ," ಎಂದು ಅವರು ಹೇಳುತ್ತಾರೆ. "ಬೇಸಿಗೆಯಲ್ಲಿ ಅವು [ಆಹಾರವನ್ನು ಹುಡುಕಲು] ಸಾಕಷ್ಟು ಅಲೆದಾಡಬೇಕಾಗುತ್ತದೆ."






