ವಾರಣಾಸಿ ಜಿಲ್ಲೆಯ ಅನೇಯ್ ಗ್ರಾಮದ ಸುದಾಮಾ ಆದಿವಾಸಿ ನೇರವಾಗಿ ಹೇಳುತ್ತಾರೆ, "ನನಗೆ ಆಯ್ಕೆಯಿದ್ದರೆ, ನಾನು ಎಂದೂ ಆಸ್ಪತ್ರೆಗೆ ಕಾಲಿಡುತ್ತಿರಲಿಲ್ಲ, ಅಲ್ಲಿ ನಮ್ಮನ್ನು ಪ್ರಾಣಿಗಳಂತೆ ನೋಡಲಾಗುತ್ತದೆ, ವೈದ್ಯರು ನಮ್ಮನ್ನು ತಪಾಸಣೆ ಮಾಡುವುದಿಲ್ಲ ಮತ್ತು ನರ್ಸ್ಗಳು ಪರಸ್ಪರ , "ಈ ಜನರು ಹೇಗೆ ಬದುಕುತ್ತಾರೆ! ಈ ಗಬ್ಬು ಜನರು ಎಲ್ಲಿಂದ ಬರುತ್ತಾರೆ?ʼ ಎಂದು ತಮ್ಮಲ್ಲೇ ಮಾತನಾಡಿಕೊಳ್ಳುತ್ತಾರೆ." ಸುದಾಮಾ ಅವರು ಮನೆಯಲ್ಲಿ ತನ್ನ ಮೊದಲ ಐದು ಮಕ್ಕಳಿಗೆ ಹೇಗೆ, ಯಾವಾಗ ಮತ್ತು ಏಕೆ ಜನ್ಮ ನೀಡಿದರು ಎಂಬುದನ್ನು ನೆನಪಿಸಿಕೊಳ್ಳುತ್ತಾ ಈ ಎಲ್ಲಾ ವಿಷಯಗಳನ್ನು ಹೇಳುತ್ತಾರೆ.
ಕಳೆದ 19 ವರ್ಷಗಳಲ್ಲಿ ಸುದಾಮಾ ಅವರಿಗೆ ಒಂಬತ್ತು ಮಕ್ಕಳಿದ್ದಾರೆ. 49 ವರ್ಷ ವಯಸ್ಸಾಗಿದ್ದರೂ, ಅವರಿಗೆ ಮುಟ್ಟು ನಿಂತಿಲ್ಲ.
ಅವರು ಬರಗಾಂವ್ ಬ್ಲಾಕ್ನಲ್ಲಿರುವ ಗ್ರಾಮದ ಒಂದು ತುದಿಯಲ್ಲಿರುವ 57 ಕುಟುಂಬಗಳ ಮುಸಹರ್ ಬಸ್ತಿಯಲ್ಲಿ ವಾಸಿಸುತ್ತಿದ್ದಾರೆ. ಆ ನೆಲೆಯ ಇನ್ನೊಂದು ಬದಿಯಲ್ಲಿ ಮೇಲ್ಜಾತಿಯ ಠಾಕೂರರು, ಬ್ರಾಹ್ಮಣರು ಮತ್ತು ಗುಪ್ತರ ಮನೆಗಳಿವೆ. ಅಲ್ಲದೆ, ಇತರ ಪರಿಶಿಷ್ಟ ಜಾತಿಗಳಿಗೆ (ಚಮಾರ್, ಧಾರ್ಕರ್, ಪಾಸಿ) ಸೇರಿದ ಕೆಲವು ಕುಟುಂಬಗಳು ಮತ್ತು ಮುಸ್ಲಿಮರ ಕೆಲವು ಮನೆಗಳಿವೆ. ಈ ಸಮುದಾಯಗಳಿಗೆ ಸಂಬಂಧಿಸಿದ ಅನೇಕ ರೀತಿಯ ಸ್ಟೀರಿಯೊ ಟೈಪ್ಗಳು ಬಸ್ತಿಗಳಲ್ಲಿ ಕಂಡುಬರುತ್ತವೆ, ಉದಾಹರಣೆಗೆ ದೇಹದ ಅರ್ಧ ಭಾಗವಷ್ಟೇ ಬಟ್ಟೆ ತೊಟ್ಟ ಧೂಳಿನಿಂದ ಲೇಪಿತವಾದ ಮಕ್ಕಳು, ಅವರ ಸುತ್ತಲೂ ಝೇಂಕರಿಸುವ ನೊಣಗಳು, ಆಹಾರ ಅಂಟಿರುವ ಮುಖಗಳು ಮತ್ತು ಎಲ್ಲಾ ರೀತಿಯ ಶುಚಿತ್ವದ ಕೊರತೆ. ಆದರೆ, ಈ ಇಡೀ ದೃಶ್ಯವನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಬೇರೆಯದೇ ಕಥೆ ತಿಳಿಯುತ್ತದೆ.
ಉತ್ತರ ಪ್ರದೇಶದಲ್ಲಿ ಪರಿಶಿಷ್ಟ ಜಾತಿಯಡಿ ಪಟ್ಟಿ ಮಾಡಲಾಗಿರುವ ಮುಸಹರ್ ಸಮುದಾಯದವರು ಮೂಲತಃ ಕೃಷಿ ಮತ್ತು ಅದರ ಉತ್ಪನ್ನಗಳಿಗೆ ಭಾರೀ ಹಾನಿಯುಂಟುಮಾಡುವ ಇಲಿಗಳನ್ನು ಹಿಡಿಯುವಲ್ಲಿ ನಿಪುಣರಾಗಿದ್ದರು. ಕಾಲಾನಂತರದಲ್ಲಿ, ಅವರ ಈ ವ್ಯವಹಾರವನ್ನು ತಿರಸ್ಕಾರದಿಂದ ನೋಡತೊಡಗಲಾಯಿತು. ಇದರೊಂದಿಗೆ, ಜನರು ಅವರನ್ನು 'ಇಲಿ ತಿನ್ನುವವರು' ಎಂದು ತಿಳಿದುಕೊಳ್ಳಲು ಪ್ರಾರಂಭಿಸಿದರು ಮತ್ತು ಇದು 'ಮುಸಾಹರ್' ಪದದ ಅರ್ಥವೂ ಸಹ ಇದೇ ಆಗಿದೆ. ಈ ಸಮುದಾಯವು ಇತರ ಸಮುದಾಯಗಳ ಬಹಿಷ್ಕಾರ ಮತ್ತು ಅವಮಾನವನ್ನು ಎದುರಿಸಬೇಕಾಗಿದೆ ಮತ್ತು ಸರ್ಕಾರಗಳು ಅವರನ್ನು ನಿರ್ಲಕ್ಷಿಸಿವೆ, ಇದರಿಂದಾಗಿ ಈ ಸಮುದಾಯವು ಎಲ್ಲಾ ರೀತಿಯ ಅಭಾವಗಳೊಡನೆ ಹೋರಾಡುತ್ತಿದೆ. ನೆರೆಯ ರಾಜ್ಯವಾದ ಬಿಹಾರದಲ್ಲಿ ಅವರನ್ನು 'ಮಹಾದಲಿತ್' ವರ್ಗದಲ್ಲಿ ಸೇರಿಸಲಾಗಿದೆ. ಈ ಸಮುದಾಯಗಳು ಪರಿಶಿಷ್ಟ ಜಾತಿಗಳಲ್ಲಿ ಅತ್ಯಂತ ಬಡವರಾಗಿದ್ದು, ಅವರೂ ಅತಿ ಹೆಚ್ಚು ತಾರತಮ್ಯವನ್ನು ಎದುರಿಸುತ್ತಿದ್ದಾರೆ.








