ಸುಮಾರು ಒಂದು ತಿಂಗಳಿನಿಂದಲೂ ನಿಶಾ ಯಾದವ್ ತನ್ನ ಕುಟುಂಬದ ಪಡಿತರಕ್ಕಾಗಿ ಹೆಚ್ಚುವರಿ ಒಂದು ಕಿ.ಮೀ. ದೂರವನ್ನು ಕ್ರಮಿಸುತ್ತಿದ್ದಾರೆ. ನೆರೆಯಲ್ಲಿನ ಕಿರಾಣಿ ಅಂಗಡಿಯು ಅವರಿಗೆ ಯಾವುದೇ ದಿನಸಿಯನ್ನು ಮಾರುತ್ತಿಲ್ಲ. “ಪಾಪಾ ಆಸ್ಪತ್ರೆಗೆ ದಾಖಲಾದಾಗಿನಿಂದಲೂ ರಾಜನ್ವಾಲಾ, ನಮ್ಮನ್ನು ಆತನ ಅಂಗಡಿಗೆ ಬಿಟ್ಟುಕೊಳ್ಳುತ್ತಿಲ್ಲ”, ಎಂದು ಆಕೆ ತಿಳಿಸಿದರು.
“ನಮ್ಮ ತಂದೆ ಜೂನ್ ಕೊನೆಯ ಭಾಗದಲ್ಲಿ ಕೋವಿಡ್-೧೯ ರೋಗದಿಂದ ಬಾಧಿತರಾಗಿದ್ದಾಗ್ಯೂ, ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ನಾವು ಎರಡು ವಾರಗಳವರೆಗೆ ಸ್ವತಃ ಇತರರಿಂದ ಪ್ರತ್ಯೇಕವಾಗಿದ್ದೆವು. ಪಾಪಾ ಒಂದು ತಿಂಗಳ ಮೊದಲೇ ಗುಣಮುಖರಾಗಿದ್ದರೂ ಅಂಗಡಿಯ ಮಾಲೀಕನು, ನಾವು ಆತನ ಅಂಗಡಿಯನ್ನು ಪ್ರವೇಶಿಸಿದಲ್ಲಿ ವೈರಸ್ ಅನ್ನು ಹರಡುತ್ತೇವೆ ಎಂಬುದಾಗಿ ಈಗಲೂ ಹೇಳುತ್ತಿದ್ದಾನೆ. ಹೀಗಾಗಿ ಮಂಡಿಯವರೆಗೂ ಇರುವ ಈ ಮಳೆ ಹಾಗೂ ಪ್ರವಾಹದ ಕಲುಷಿತ ನೀರಿನಲ್ಲಿ ನಮ್ಮಲ್ಲೊಬ್ಬರು ನಡೆದುಕೊಂಡು ಹೋಗಿ, ಸುಮಾರು ಒಂದು ಮೈಲು ದೂರದಲ್ಲಿರುವ ಸಂಬಂಧಿಕರ ಮನೆಯಿಂದ ದಿನಸಿಗಳನ್ನು ತರಬೇಕಾಗಿದೆ”, ಎಂದರು ನಿಶಾ.
ಆರು ವರ್ಷಗಳ ಹಿಂದೆ, ೧೧ನೇ ತರಗತಿಯ ನಂತರ ಶಾಲೆಯನ್ನು ತೊರೆದ 24ರ ವಯಸ್ಸಿನ ನಿಶಾ, ಉತ್ತರ ಪ್ರದೇಶದ ಖುಷಿನಗರ ಜಿಲ್ಲೆಯ ಹಟ ಬ್ಲಾಕ್ನಲ್ಲಿನ ಸೊಹ್ಸ ಮಠಿಯ ಹಳ್ಳಿಯಲ್ಲಿ ವಾಸಿಸುತ್ತಿದ್ದಾರೆ. ಗೋರಖ್ಪುರ್ ನಗರದಿಂದ ಇದು ಕೇವಲ ೬೦ ಕಿ.ಮೀ. ದೂರದಲ್ಲಿದೆ. ಆಕೆಯ ಹಳ್ಳಿಯು ಮಾನ್ಸೂನ್ ಹಾಗೂ ಪ್ರವಾಹದಿಂದ ಹೆಚ್ಚಿನ ತೊಂದರೆಗೀಡಾಗಿದೆ.
“ನಮ್ಮ ಬುಅ-ಫೂಫ (ಚಿಕ್ಕಮ್ಮ-ಚಿಕ್ಕಪ್ಪ) ನಮಗೆಂದು ಆಹಾರ ಸಾಮಗ್ರಿಗಳನ್ನು ಕೊಳ್ಳುತ್ತಾರೆ. ನಂತರದಲ್ಲಿ ನಾವು ಅವರಿಗೆ ಹಣವನ್ನು ಪಾವತಿಸುತ್ತೇವೆ”, ಎಂದು ತಿಳಿಸುವಾಗಲೂ ನಿಶಾ, ಮೂರು-ನಾಲ್ಕು ಬಾರಿ ಸಲ್ವಾರ್ನ ಕೆಳಭಾಗವನ್ನು ಮಡಿಸುತ್ತಿದ್ದರು. ಆಕೆಯು ಪ್ರವಾಹದ ನೀರಿನಲ್ಲೇ ಅವರ ಮನೆಗೆ ತೆರಳುತ್ತಿದ್ದರು. ಮನೆಯಲ್ಲಿ ಸಂಜೆಯ ಚಹಾ ತಯಾರಿಸಲು ಸಕ್ಕರೆ ಮುಗಿದುಹೋಗಿತ್ತು.







