ಇತ್ತೀಚೆಗೆ, ಮಹಾರಾಷ್ಟ್ರದ ಔರಂಗಬಾದ್‌ನಲ್ಲಿ ಮಧ್ಯಪ್ರದೇಶಕ್ಕೆ ಸೇರಿದ 16 ಕಾರ್ಮಿಕರು ರೈಲಿನಡಿ ಸಿಲುಕಿ ನಿದ್ರೆಯಲ್ಲಿರುವಾಗಲೇ ಮರಣಿಸಿದರು. ಈ ಕುರಿತು ನಮ್ಮ ಮೊದಲ ಪ್ರತಿಕ್ರಿಯೆ ಅವರನ್ನು ಹೀಗೆ ರೈಲು ಹಳಿಯ ಮೇಲೆ ನಡೆಯುವಂತೆ ಮಾಡಿದವರ್ಯಾರು ಎನ್ನುವುದಾಗಿರಬೇಕಿತ್ತು, ಆದರೆ ನಾವು ಕೇಳಿದ ಪ್ರಶ್ನೆಯೆಂದರೆ ಅವರನ್ನು ರೈಲು ಹಳಿಗಳ ಮೇಲೆ ಮಲಗಲು ಹೇಳಿದವರು ಯಾರು ಎಂದಾಗಿತ್ತು. ಈ ಪ್ರಶ್ನೆ ನಮ್ಮ ಕುರಿತು ಏನನ್ನು ಹೇಳುತ್ತದೆ?
ರೈಲಿನ ಕೆಳಗೆ ಅಪ್ಪಚ್ಚಿಯಾಗಿ ಹೋದ ಕಾರ್ಮಿಕರ ಹೆಸರುಗಳನ್ನು ಜನರೆದುರು ಇಡುವ ಕುರಿತು ಎಷ್ಟು ಇಂಗ್ಲಿಷ್ ಪತ್ರಿಕೆಗಳು ತಲೆಕೆಡಿಸಿಕೊಂಡವು? ಅವರು ಕೊನೆಗೂ ಹೆಸರಿಲ್ಲದವರಾಗಿ, ಮುಖವಿಲ್ಲದವರಾಗಿಯೇ ಈ ಜಗತ್ತಿನಿಂದ ಮರೆಯಾಗಬೇಕಾಯಿತು. ಇದು ನಾವು ಬಡವರನ್ನು ನಡೆಸಿಕೊಳ್ಳುವ ರೀತಿ. ಅದೇ ಒಂದು ವೇಳೆ ವಿಮಾನ ಅವಘಡವಾಗಿದ್ದರೆ, ಮಾಹಿತಿಗಳಿಗಾಗಿ ಸಹಾಯವಾಣಿಗಳನ್ನು ಪ್ರಾರಂಭಿಸಲಾಗುತ್ತಿತ್ತು. ಅದರಲ್ಲಿ 300 ಜನ ಮರಣ ಹೊಂದಿದ್ದರೂ ಅವರೆಲ್ಲರ ಹೆಸರುಗಳು ಪತ್ರಿಕೆಯಲ್ಲಿ ಕಾಣಿಸಿಕೊಳ್ಳುತ್ತಿತ್ತು. ಆದರೆ ಇವರು ಮಧ್ಯಪ್ರದೇಶದ 16 ಮಂದಿ, ಅವರಲ್ಲಿ ಎಂಡು ಜನರು ಗೊಂಡ್ ಆದಿವಾಸಿಗಳು. ಇವರ ಕುರಿತು ತಲೆ ಕೆಡಿಸಿಕೊಳ್ಳುವುದು ಯಾರಿಗೆ ಬೇಕಾಗಿದೆ? ಅವರು ಊರಿಗೆ ಹೋಗಲು ರೈಲು ನಿಲ್ದಾಣಕ್ಕೆ ಹೋದವರು ರೈಲುಗಳು ಇಲ್ಲವೆಂದು ತಿಳಿದು ಅದೇ ರೈಲುಹಾದಿಯಲ್ಲಿ ತಮ್ಮ ಮನೆಯ ದಾರಿಯನ್ನು ಸುಲಭವಾಗಿ ತಿಳಿಯಬಹುದು ಎನ್ನುವ ಕಾರಣಕ್ಕೆ ರೈಲು ಹಳಿಗಳ ಗುಂಟ ನಡೆದಿದ್ದಾರೆ. ಹೌದು ಅವರು ನಂತರ ಅದೇ ಹಳಿಗಳ ಮೇಲೆ ಮಲಗಿದ್ದಾರೆ, ಅದಕ್ಕೆ ಕಾರಣ ಅವರು ದಣಿದಿದ್ದರು. ಬಹುಶಃ ಆ ಮಾರ್ಗದಲ್ಲಿ ಯಾವುದೇ ರೈಲುಗಳು ಬರಲಿಕ್ಕಿಲ್ಲವೆನ್ನುವುದು ಅವರ ನಂಬಿಕೆಯಾಗಿದ್ದಿರಬಹುದು.
ಭಾರತದಲ್ಲಿ ಶ್ರಮಿಕ ಕಾರ್ಮಿಕರ ಸಂಖ್ಯೆಯನ್ನು ಗಮನಿಸಿದರೆ, ಸರ್ಕಾರವು ಅವರೆಲ್ಲರೊಂದಿಗೆ ಯಾವ ರೀತಿಯ ಸಂವಹನವನ್ನು ಹೊಂದಿದೆ ಎಂದು ನೀವು ಭಾವಿಸುತ್ತೀರಿ?
130 ಕೋಟಿಯಷ್ಟು ಜನಸಂಖ್ಯೆಯಿರುವ ಈ ದೇಶಕ್ಕೆ ಅದರ ದೈನಂದಿನ ಚಟುವಟಿಕೆಗಳನ್ನು ಸ್ಥಗಿತಗೊಳಿಸಲು ನಾವು ನೀಡಿದ್ದು ಕೇವಲ ನಾಲ್ಕು ಗಂಟೆಗಳ ಸಮಯ. ಹಿರಿಯ ನಾಗರಿಕ ಸೇವಾಧಿಕಾರಿಯಾಗಿದ್ದ ಎಂ.ಜಿ. ದೇವಸಹಾಯಂ ಅವರು ಹೇಳುವಂತೆ "ಒಂದು ಸಣ್ಣ ಕಾಲಾಳು ಪಡೆಯನ್ನು ಪ್ರಮುಖ ಕಾರ್ಯವೊಂದಕ್ಕೆ ಮುನ್ನುಗ್ಗಿಸುವ ಮೊದಲು ನಾಲ್ಕು ಗಂಟೆಗಳಿಗಿಂತಲೂ ಹೆಚ್ಚಿನ ಕಾಲಾವಕಾಶ ನೀಡಲಾಗಿರುತ್ತದೆ." ಆದರೆ ಇಷ್ಟು ದೊಡ್ಡ ಜನಸಂಖ್ಯೆಗೆ ನೀಡಿದ್ದು ತೀರಾ ಕಡಿಮೆ ಸಮಯ. ನಾವು ವಲಸೆ ಕಾರ್ಮಿಕರ ತೀರ್ಮಾನವನ್ನು ಒಪ್ಪುತ್ತೇವೋ, ಬಿಡುತ್ತೇವೋ ಅದು ಬೇರೆ ವಿಷಯ, ಆದರೆ ಅವರು ಹಾಗೆ ಹೊರಡಲು ಮಾಡಿದ ತೀರ್ಮಾನ ಸರಿಯಾಗಿಯೇ ಇತ್ತು. ಯಾಕೆಂದರೆ ಸರಕಾರಗಳು, ಕಾರ್ಖಾನೆ ಮಾಲಿಕರು ಮತ್ತು ನಮ್ಮಂತಹ ಮಧ್ಯಮ ವರ್ಗದ ಉದ್ಯೋಗದಾತರು ಎಷ್ಟು ನಂಬಿಕಸ್ಥರಲ್ಲದವರು, ಕ್ರೂರಿಗಳು ಎನ್ನುವುದನ್ನು ಪ್ರತಿಕ್ಷಣವೂ ಅವರೆದುರು ಸಾಬೀತುಗೊಳಿಸುತ್ತಿದ್ದೇವೆ. ಮತ್ತು ಅವರು ಹಾಗೆ ಊರುಗಳಿಗೆ ಹೋಗುವುದನ್ನು ಕಾನೂನಿನ ಮೂಲಕ ತಡೆಯುವುದರೊಂದಿಗೆ ನಾವು ಅದನ್ನು ಮತ್ತಷ್ಟು ಸಾಬೀತುಗೊಳಿಸುತ್ತಿದ್ದೇವೆ.
ನೀವು ಭಯವನ್ನು ಸೃಷ್ಟಿಸಿದಿರಿ. ಇಡೀ ದೇಶದಲ್ಲಿ ಸಂಪೂರ್ಣ ಅವ್ಯವಸ್ಥೆಯನ್ನು ಸೃಷ್ಟಿಸಿದಿರಿ, ಅದು ಲಕ್ಷಾಂತರ ಜನರನ್ನು ಬೀದಿಗೆ ತಂದಿತು. ಮುಚ್ಚಿದ ಕಲ್ಯಾಣ ಮಂಟಪಗಳು, ಶಾಲೆಗಳು ಮತ್ತು ಕಾಲೇಜುಗಳು ಮತ್ತು ಸಮುದಾಯ ಕೇಂದ್ರಗಳನ್ನು ನಾವು ನಿರಾಶ್ರಿತರು ಮತ್ತು ಮನೆಯಿಲ್ಲದ ಜನರಿಗೆ ಆಶ್ರಯ ತಾಣಗಳಾಗಿ ಪರಿವರ್ತಿಸಬಹುದಿತ್ತು. ಆದರೆ ಬದಲಿಗೆ ನಾವು ಸ್ಟಾರ್ ಹೋಟೆಲ್‌ಗಳನ್ನು ವಿದೇಶಿಯರಿಗಾಗಿ ಕ್ವಾರಂಟೈನ್ ಕೇಂದ್ರಗಳಾಗಿ ಪರಿವರ್ತಿಸಿದ್ದೇವೆ.
ನಾವು ವಲಸೆ ಕಾರ್ಮಿಕರಿಗೆಂದು ರೈಲುಗಳನ್ನು ವ್ಯವಸ್ಥೆ ಮಾಡಿ ಅದಕ್ಕೂ ಪೂರ್ಣ ಶುಲ್ಕವನ್ನು ವಿಧಿಸುತ್ತೇವೆ. ನಂತರ ನಂತರ ನಾವು ಎಸಿ ರೈಲು ಮತ್ತು ರಾಜಧಾನಿ ಕ್ಲಾಸ್ ದರವಾದ ರೂ. 4,500 ಶುಲ್ಕ ವಿಧಿಸುತ್ತೇವೆ. ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಲೆಂದೇ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಕಾಯ್ದಿರಿಸಬಹುದು ಎಂದು ಹೇಳುತ್ತೀರಿ, ಅವರೆಲ್ಲರೂ ಸ್ಮಾರ್ಟ್‌ಫೋನ್ ಹೊಂದಿದ್ದಾರೆ ಮತ್ತು ಅದರ ಮೂಲಕ ಟಿಕೇಟ್ ಖರೀದಿ ಮಾಡುತ್ತಾರೇನೋ ಎನ್ನುವಂತೆ.
ನಂತರ ಕರ್ನಾಟಕದ ಮುಖ್ಯಮಂತ್ರಿ ಬಿಲ್ಡರ್‌ಗಳನ್ನು ಭೇಟಿ ಮಾಡಿದ ನಂತರ ರೈಲುಗಳನ್ನು ರದ್ದುಗೊಳಿಸುತ್ತಾರೆ. ಇದಕ್ಕೆ ಕಾರಣ ಬಿಲ್ಡರ್‌ಗಳು ತಮ್ಮ ಗುಲಾಮರು ಓಡಿ ಹೋಗುತ್ತಿದ್ದಾರೆಂದು ದೂರು ಹೇಳಿಕೊಂಡಿದ್ದು. ಈಗ ನೀವು ಅದೇ ಗುಲಾಮರ ದಂಗೆಯ ಸಾಕ್ಷಿಗಳಾಗುತ್ತಿದ್ದೀರಿ.
ನಮ್ಮದು ಬಡವರಿಗೆ ಒಂದು ಬಗೆಯ ನೀತಿಯಾದರೆ ಉಳಿದವರಿಗೆ ಇನ್ನೊಂದು ನೀತಿ. ನೀವು ಅಗತ್ಯ ಸೇವೆಗಳ ಪಟ್ಟಿ ಮಾಡುವಾಗ ಬಡವರು ಬಹಳ ಅಗತ್ಯವೆಂದು ಪರಿಗಣಿಸುತ್ತೀರಿ. ಬಡ ದಾದಿಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಮಿಕರು, ವಿದ್ಯುತ್ ಕಾರ್ಮಿಕರು, ಇಂಧನ ಕಾರ್ಮಿಕರು ಮತ್ತು ಕಾರ್ಖಾನೆಯ ಕಾರ್ಮಿಕರು ಇವರೆಲ್ಲರೂ ಅಗತ್ಯವೆಂದು ಎನ್ನಿಸುತ್ತದೆ ಆದರೆ ವೈದ್ಯರಲ್ಲ. ಇದ್ದಕ್ಕಿದ್ದಂತೆ ಈ ದೇಶದ ಶ್ರೀಮಂತ ವರ್ಗ ಎಷ್ಟು ಅನಗತ್ಯ ಎಂದು ನೀವು ತಿಳಿದುಕೊಳ್ಳುತ್ತೀರಿ.








