ಭಾರತದ ಕೃಷಿ ಸಮಸ್ಯೆ ಈಗ ಕೇವಲ ಕೃಷಿ ಸಮಸ್ಯೆ ಆಗಿ ಉಳಿದಿಲ್ಲ.
ಅದೀಗ ಇಡಿಯ ಸಮಾಜದ ಸಂಕಟ ಅಥವಾ ಇಡಿಯ ನಾಗರಿಕತೆಯ ಸಂಕಟವೂ ಅಗಿರಬಹುದು, ಯಾಕೆಂದರೆ ಈ ನೆಲದ ಅತಿದೊಡ್ಡ ಗುಂಪಾಗಿರುವ ಸಣ್ಣ ರೈತರು ಮತ್ತು ಕಾರ್ಮಿಕರು ತಮ್ಮ ಬದುಕಿಗಾಗಿ ಹೋರಾಟ ಆರಂಭಿಸಿದ್ದಾರೆ. ಕೃಷಿ ಸಮಸ್ಯೆ ಎಂಬುದು ಇನ್ನೂ ಎಷ್ಟು ಭೂಮಿಯಲ್ಲಿ ಕೃಷಿ ಕಡಿಮೆ ಆಗುತ್ತಾ ಬಂದಿದೆ ಎಂಬುದರ ಅಳತೆ ಆಗಿ ಉಳಿದಿಲ್ಲ; ಅಥವಾ ಮನುಷ್ಯ ಜೀವ, ಉದ್ಯೋಗ ಅಥವಾ ಉತ್ಪಾದಕತೆ ನಷ್ಟದ ಅಂದಾಜಾಗಿಯೂ ಉಳಿದಿಲ್ಲ. ಅಸಲಿಗೆ ಅದು ನಮ್ಮದೇ ಮನುಷ್ಯತ್ವದ ನಷ್ಟದ ಅಳತೆ ಆಗಿ ಎದುರು ಬಂದು ನಿಂತಿದೆ. ಮಾನವೀಯತೆಯ ಪರಿಧಿ ಕುಸಿಯುತ್ತಿರುವುದರ ದ್ಯೋತಕವೂ ಹೌದದು. ಕಳೆದ 20 ವರ್ಷಗಳಲ್ಲಿ ನಾವು ನಮ್ಮ ಕಣ್ಣೆದುರೇ 3,00,000 ರೈತರು ಆತ್ಮಹತ್ಯೆ ಮಾಡಿಕೊಂಡದ್ದನ್ನು ಮತ್ತು ಈ ಇಲ್ಲದವರ ದಯನೀಯ ಸ್ಥಿತಿ ಇನ್ನಷ್ಟು ಬಿಗಡಾಯಿಸಿದ್ದನ್ನು ಕಂಡಿದ್ದೇವೆ. ಆದರೆ ಕೆಲ – ‘ಮಹಾ ಅರ್ಥಶಾಸ್ತ್ರಜ್ಞರು’ – ನಮ್ಮ ಸುತ್ತಲೇ ನಡೆದಿರುವ ಈ ದುರಂತವನ್ನು ಕುರಿತು ಕುಹಕವಾಡಿದ್ದನ್ನೂ, ಇಂತಹದೊಂದು ಸಂಕಟ ಇದೆ ಎಂಬುದನ್ನೇ ನಿರಾಕರಿಸಿದ್ದನ್ನೂ ಕೂಡ ನಾವು ಕಂಡಿದ್ದೇವೆ.
ಈಗ ಕಳೆದೆರಡು ವರ್ಷಗಳಿಂದ ರಾಷ್ಟ್ರೀಯ ಅಪರಾಧಗಳ ದಾಖಲಾತಿ ಬ್ಯೂರೊ (NCRB) ರೈತರ ಆತ್ಮಹತ್ಯೆಯ ಅಂಕಿಅಂಶಗಳನ್ನೇ ಬಿಡುಗಡೆ ಮಾಡಿಲ್ಲ. ಕಳೆದ ಕೆಲವು ವರ್ಷಗಳಿಂದ ಕೆಲವು ಪ್ರಮುಖ ರಾಜ್ಯಗಳು ಒದಗಿಸಿದ ತಿರುಚಲಾದ ಅಂಕಿ-ಅಂಶಗಳ ಕಾರಣದಿಂದಾಗಿ ಏಜನ್ಸಿಯ ಲೆಕ್ಕಾಚಾರಗಳೂ ಹಾದಿ ತಪ್ಪಿವೆ. ಉದಾಹರಣೆಗೆ ಛತ್ತೀಸ್ ಗಢ ಮತ್ತು ಪಶ್ಚಿಮ ಬಂಗಾಲದಂತಹ ಕೆಲವು ರಾಜ್ಯಗಳು ತಮ್ಮಲ್ಲಿ ‘ರೈತರ ಆತ್ಮಹತ್ಯೆ ಶೂನ್ಯ’ ಎಂದು ದಾಖಲಿಸಿಕೊಂಡಿವೆ. 2014ರಲ್ಲಿ 12 ರಾಜ್ಯಗಳು ಮತ್ತು 6 ಕೇಂದ್ರಾಡಳಿತ ಪ್ರದೇಶಗಳು ತಮ್ಮಲ್ಲಿ ‘ರೈತರ ಆತ್ಮಹತ್ಯೆ ಶೂನ್ಯ’ ಎಂದು ಹೇಳಿವೆ. 2014 ರ NCRB ವರದಿಯಲ್ಲಿ ರೈತರ ಆತ್ಮಹತ್ಯೆಯ ಸಂಖ್ಯೆಗಳನ್ನು ಕಡಿಮೆ ತೋರಿಸಬೇಕೆಂಬ ನಿಟ್ಟಿನಲ್ಲಿ ದೊಡ್ಡ ಪ್ರಮಾಣದಲ್ಲಿ ಅಂಕಿಸಂಖ್ಯೆಗಳ ಆಟ ಆಡುವ ನಾಚಿಕೆಗೇಡು ಸಂಗತಿ ನಿರಾತಂಕವಾಗಿ ನಡೆದಿದೆ.
ಇಷ್ಟಿದ್ದರೂ ಆತ್ಮಹತ್ಯೆಗಳೇನೂ ಕಮ್ಮಿಯಾಗಿಲ್ಲ.
ಇನ್ನು ಇದೇ ವೇಳೆ ರೈತರು ಮತ್ತು ಕಾರ್ಮಿಕರ ಪ್ರತಿಭಟನೆಗಳೂ ಕಾವು ಪಡೆಯುತ್ತಿವೆ. ಮಧ್ಯಪ್ರದೇಶದಲ್ಲಿ ರೈತರಿಗೆ ಗುಂಡಿಕ್ಕಲಾಗಿದೆ. ಮಹಾರಾಷ್ಟ್ರದಲ್ಲಿ ರೈತರನ್ನು ವಂಚಿಸಿ ಮೂದಲಿಸಲಾಗಿದೆ. ನೋಟುರದ್ಧತಿಯಂತೂ ದೇಶದಾದ್ಯಂತ ರೈತರ ಧೃತಿಗೆಡಿಸಿದೆ. ಗ್ರಾಮೀಣ ಭಾಗಗಳಲ್ಲಿ ಸಿಟ್ಟು ಮತ್ತು ನೋವು ಮಡುಗಟ್ಟುತ್ತಿದೆ. ರೈತರು ಮಾತ್ರವಲ್ಲದೆ ಕಾರ್ಮಿಕರೂ ಕೂಡ MNREGA ವಿನ್ಯಾಸದಲ್ಲಿ ಆಗಿರುವ ಬದಲಾವಣೆಗಳು ತಮಗೆ ಹಾನಿಕರ ಎಂದು ಕಂಡುಕೊಂಡಿದ್ದಾರೆ. ಮೀನುಗಾರರು, ಅರಣ್ಯವಾಸಿಗಳು, ಕುಶಲಕಾರ್ಮಿಕರು, ಶೋಷಣೆಗೊಳಗಾಗಿರುವ ಅಂಗನವಾಡಿ ಕಾರ್ಯಕರ್ತೆಯರು ಅಲ್ಲದೇ ತಮ್ಮ ಮಕ್ಕಳು ಹೋಗುತ್ತಿರುವ ಸರ್ಕಾರಿ ಶಾಲೆಗಳನ್ನು ಸರ್ಕಾರವೇ ಕೊಲ್ಲುತ್ತಿರುವ ಪರಿಗೆ ದಿಗ್ಭ್ರಮೆ ಹೊಂದಿರುವ ಹೆತ್ತವರು, ತಮ್ಮ ಉದ್ಯೋಗಗಳು ಅಪಾಯದಲ್ಲಿರುವ ಸರ್ಕಾರದ ಸಣ್ಣಪುಟ್ಟ ಹುದ್ದೆಗಳಲ್ಲಿರುವ, ಸಂಚಾರ ಮತ್ತು ಸಾರ್ವಜನಿಕ ವಲಯದ ಸಿಬ್ಬಂದಿಗಳಿಂದ ಪ್ರತಿರೋಧಗಳು ಕಂಡುಬರುತ್ತಿದೆ.





