ಕೋವಿಡ್ -19 ದೃಢಪಟ್ಟ ಎಂಟು ದಿನಗಳ ನಂತರ, ರಾಮ್ಲಿಂಗ್ ಸನಾಪ್ ಅವರು ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಯಲ್ಲಿ ನಿಧನರಾದರು. ಆದರೆ ಅವರನ್ನು ಕೊಂದಿದ್ದು ವೈರಸ್ ಅಲ್ಲ.
40 ವರ್ಷದ ರಾಮ್ಲಿಂಗ್ ಸಾಯುವ ಕೆಲವೇ ಗಂಟೆಗಳ ಮೊದಲು, ಆಸ್ಪತ್ರೆಯಿಂದ ಪತ್ನಿ ರಾಜುಬಾಯಿಗೆ ಫೋನ್ ಮಾಡಿದ್ದರು. "ಅವರ ಚಿಕಿತ್ಸೆಗೆ ಎಷ್ಟು ವೆಚ್ಚವಾಗುತ್ತಿದೆ ಎನ್ನುವುದು ತಿಳಿದಾಗ ಅವರು ಕಣ್ಣೀರು ಹಾಕಿದರು" ಎಂದು ಅವರ ಸೋದರಳಿಯ, 23 ವರ್ಷದ ರವಿ ಮೊರಾಳೆ ಹೇಳುತ್ತಾರೆ. "ಆಸ್ಪತ್ರೆಯ ಬಿಲ್ ಪಾವತಿಸಲು ಅವರು ತನ್ನ ಎರಡು ಎಕರೆ ಕೃಷಿ ಭೂಮಿಯನ್ನು ಮಾರಾಟ ಮಾಡಬೇಕಾಗಬಹುದೆಂದು ಅವರ ಎಣಿಸಿದ್ದರು."
ಮೇ 13ರಂದು ಮಹಾರಾಷ್ಟ್ರದ ಬೀಡ್ ನಗರದ ದೀಪ್ ಹಾಸ್ಪಿಟಲ್ಗೆ ಸೇರಿದ್ದ ರಾಮಲಿಂಗ್ ಅವರ ಚಿಕಿತ್ಸೆಗೆ ಆಸ್ಪತ್ರೆ 1.6 ಲಕ್ಷ ರೂಪಾಯಿಗಳಷ್ಟು ಶುಲ್ಕ ವಿಧಿಸಿತ್ತು ಎಂದು ರಾಜುಬಾಯಿಯ ಸಹೋದರ ಪ್ರಮೋದ್ ಮೊರಾಳೆ ಹೇಳುತ್ತಾರೆ. ನಾವು ಅದನ್ನು ಹೇಗೋ ಎರಡು ಕಂತುಗಳಲ್ಲಿ ಪಾವತಿಸಿದ್ದೆವು, ಆದರೆ ಆಸ್ಪತ್ರೆಯು ಇನ್ನೂ 2 ಲಕ್ಷ ರೂಪಾಯಿಗಳನ್ನು ಕೇಳುತ್ತಿತ್ತು" ಎಂದು ಅವರು ಹೇಳುತ್ತಾರೆ. “ಆಸ್ಪತ್ರೆಯವರು ರೋಗಿಯ ಕುಟುಂಬದವರ ಬಳಿ ಇದನ್ನು ಹೇಳುವ ಬದಲು, ರೋಗಿಯ ಬಳಿಯೇ ಹೇಳಿದರು. ಅವರಿದ್ದ ಪರಿಸ್ಥಿತಿಯಲ್ಲಿ ಅವರಿಗೆ ಇದನ್ನು ಹೇಳುವ ಅಗತ್ಯವೇನಿತ್ತು?”
ಕುಟುಂಬದ ವಾರ್ಷಿಕ ಆದಾಯಕ್ಕಿಂತ ದುಪ್ಪಟ್ಟಾದ ಆಸ್ಪತ್ರೆಯ ಬಿಲ್ಲಿನ ಯೋಚನೆ ರಾಮ್ಲಿಂಗ್ ಅವರಿಗೆ ಅಘಾತ ತಂದಿತ್ತು. ಮೇ 21ರ ಮುಂಜಾನೆ ಅವರು ಕೋವಿಡ್ ವಾರ್ಡ್ನಿಂದ ಹೊರನಡೆದು ಆಸ್ಪತ್ರೆಯ ಕಾರಿಡಾರ್ನಲ್ಲಿ ನೇಣು ಹಾಕಿಕೊಂಡರು.
ಮೇ 20ರ ರಾತ್ರಿ ಕರೆ ಮಾಡಿದಾಗ 35 ವರ್ಷದ ರಾಜುಬಾಯಿ ತನ್ನ ದುಃಖಿತ ಗಂಡನನ್ನು ಸಮಾಧಾನಪಡಿಸಲು ಪ್ರಯತ್ನಿಸಿದ್ದರು. ಅವರು ತಮ್ಮ ಗಂಡನ ಬಳಿ ಮೋಟಾರ್ ಸೈಕಲ್ ಮಾರೋಣ ಅಥವಾ ಪಶ್ಚಿಮ ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಯಿಂದ ಹಣವನ್ನು ಮುಂಗಡ ಪಡೆಯಬಹುದು ಎಂದು ಅವರು ಹೇಳಿ ಸಂತೈಸಿದ್ದರು. ಅವರ ಚೇತರಿಕೆ ತನಗೆ ಎಲ್ಲಕ್ಕಿಂತ ಮುಖ್ಯವಾದುದು ಎಂದು ಅವರು ಹೇಳಿದ್ದರು. ಆದರೆ ಬಹುಶಃ ರಾಮ್ಲಿಂಗ್ಗೆ ಹಣ ಮರಳಿಸುವ ಕುರಿತು ಭರವಸೆಯಿರಲಿಲ್ಲ.
ಪ್ರತಿ ವರ್ಷ, ರಾಮ್ಲಿಂಗ್ ಮತ್ತು ರಾಜುಬಾಯಿ ಬೀಡ್ ಜಿಲ್ಲೆಯ ಕೈಜ್ ತಾಲ್ಲೂಕಿನಲ್ಲಿರುವ ತಮ್ಮ ಹಳ್ಳಿಯಿಂದ ಪಶ್ಚಿಮ ಮಹಾರಾಷ್ಟ್ರದ ಕಬ್ಬಿನ ಹೊಲಗಳಲ್ಲಿ ಕೆಲಸ ಮಾಡಲು ವಲಸೆ ಹೋಗುತ್ತಿದ್ದರು. ಅವರು ನವೆಂಬರ್ ನಿಂದ ಏಪ್ರಿಲ್ ವರೆಗೆ 180 ದಿನಗಳ ಕಠಿಣ ಶ್ರಮಕ್ಕೆ ಸುಮಾರು 60,000 ಇಬ್ಬರು ಸೇರಿ ದುಡಿಯುತ್ತಿದ್ದರು. ಅವರ ಅನುಪಸ್ಥಿತಿಯಲ್ಲಿ, 8ರಿಂದ 16 ವರ್ಷ ವಯಸ್ಸಿನ ಅವರ ಮೂರು ಮಕ್ಕಳನ್ನು ರಾಮ್ಲಿಂಗ್ ಅವರ ವಿಧುರ ತಂದೆಯ ಬಳಿ ಬಿಡುತ್ತಿದ್ದರು.











