“ಸರ್, ಕೆಲವು ಗಿರಾಕಿಗಳು ಇದ್ದಾರೆ ಅವರನ್ನು ಅಟೆಂಡ್ ಮಾಡ್ಲಾ ಪ್ಲೀಸ್? ನನ್ನ ಇಯರ್ ಪೋನ್ ಆನ್ ಇದೆ ನಿಮ್ಮ ಪಾಠ ಕೇಳಿಸಿಕೊಳ್ತಿರ್ತೀನಿ” ತನ್ನ ತರಕಾರಿ ಗಾಡಿಯಲ್ಲಿ ತರಕಾರಿ ಕೊಳ್ಳಲು ಕಾಯುತ್ತಿರುವ ಗ್ರಾಹಕರನ್ನು ವಿಚಾರಿಸಲು ಫೋನ್‌ನ ಮೈಕ್ ಸ್ವಲ್ಪ ಹೊತ್ತು ಅನ್‌ಮ್ಯೂಟ್ ಮಾಡಿ ಹೀಗೆ ಸಂಕೋಚದಿಂದ ತನ್ನ ಶಿಕ್ಷಕರ ಅನುಮತಿ ಕೇಳುತ್ತಾನೆ ಮುಝಾಪರ್. “ತಾಜೀ… ಸಬ್ಜೀ ಲೇ ಲೋ… [ತಾಜಾ ತರಕಾರಿ ಕೊಳ್ಳಿ..]” ಎಂದು ಇನ್ನೊಮ್ಮೆ ಜೋರಾಗಿ ಕೂಗಿ ಅವನು ಮತ್ತೆ ತನ್ನ ಸ್ಮಾರ್ಟ್‌ಫೋನ್‌ನಲ್ಲಿ ನಡೆಯುತ್ತಿರುವ ವಿಜ್ಞಾನದ ತರಗತಿಗೆ ಸೇರಿಕೊಳ್ಳುತ್ತಾನೆ.
ಹೀಗಿತ್ತು ಜೂನ್ 15ರಂದು ಮುಝಾಫರ್ ಶೇಖ್‌ನ ಮೊದಲ ಆನ್‌ಲೈನ್ ತರಗತಿ. “ನನಗೆ ಹಿನ್ನೆಲೆಯಲ್ಲಿ ಟ್ರಾಫಿಕ್ ಸದ್ದು, ಗಿರಾಕಿಗಳ ಚರ್ಚೆ, ವ್ಯಾಪಾರದ ಮಾತು ಸದಾ ಕೇಳಿಸುತ್ತಿರುತ್ತದೆ. ಆನ್‌ಲೈನ್ ಕ್ಲಾಸ್ ಕಡೆ ಗಮನ ಕೊಡುವುದೋ ಅಥವಾ ತರಕಾರಿ ಮಾರುವುದರ ಕಡೆ ಗಮನ ಕೊಡುವುದೋ ಎನ್ನುವುದರ ಕುರಿತು ಗೊಂದಲ ಕಾಡುತ್ತದೆ.” ಎನ್ನುತ್ತಾನೆ 8ನೇ ತರಗತಿಯ ವಿದ್ಯಾರ್ಥಿ, 14 ವರ್ಷದ ಮುಝಾಫರ್. ಅವನು ಈ ಆನ್ಲೈನ್ ತರಗತಿಗೆ ʼಹಾಜರಾಗಿದ್ದುʼ ಬೆಳಿಗ್ಗೆ ಹತ್ತು ಗಂಟೆಗೆ ತನ್ನ ತಳ್ಳುಗಾಡಿಯಲ್ಲಿ ಬದನೆಕಾಯಿ, ಬೀಟ್ರೂಟ್, ಸೌತೆಕಾಯಿ ಮತ್ತು ಕ್ಯಾಬೇಜ್ ಮತ್ತು ಇತರ ತರಕಾರಿಗಳನ್ನು ಮಾರುತ್ತಾ ಜನಸಂದಣಿಯಿಂದ ಕೂಡಿದ ಉತ್ತರ ಮುಂಬೈನ ಮಲಡ್‌ನಲ್ಲಿರುವ ಮಲ್ವಾನಿಯ ಮಾರ್ಕೆಟ್ ಒಂದರಲ್ಲಿ.
ಮುಝಾಫರ್ ತನ್ನ ಬಳಿ ಯಾವುದೇ ಸ್ಮಾರ್ಟ್ ಫೋನ್ ಇಲ್ಲದ ಕಾರಣ ಆನ್ಲೈನ್ ಕ್ಲಾಸ್‌ಗಾಗಿ ತನ್ನ ಗೆಳೆಯನೊಬ್ಬನಿಂದ ಕೆಲವು ಗಂಟೆಗಳ ಮಟ್ಟಿಗೆ ಫೋನ್ ಎರವಲು ಪಡೆದಿದ್ದಾನೆ. “ಇದೇ ಸಮಯಕ್ಕೆ ನನ್ನ ಅಣ್ಣ, ಮುಬಾರಕ್ [9ನೇ ತರಗತಿ ವಿದ್ಯಾರ್ಥಿ] ಅವನ ಫ್ರೆಂಡ್ ಮನೆಯಲ್ಲಿ ಆನ್ಲೈನ್ ತರಗತಿಗೆ ಹಾಜರಾಗಿದ್ದ. ಅಪ್ಪ ಕೆಲಸದಲ್ಲಿದ್ದರು. ನಾನು ಗಾಡಿಯನ್ನು ಮುಚ್ಚಿ ಹೋಗುವುದು ಸಾಧ್ಯವಿರಲಿಲ್ಲ. ಯಾಕೆಂದರೆ ನಾವು ಮೊನ್ನೆ ಜೂನ್ 10ರಿಂದಷ್ಟೇ ಮತ್ತೆ ವ್ಯಾಪಾರ ಮಾಡಲು ಪ್ರಾರಂಭಿಸಿದ್ದೇವೆ” ಎನ್ನುತ್ತಾನೆ.
ಹುಡುಗನ ಅಪ್ಪ ಇಸ್ಲಾಮ್ ಜನವರಿಯಲ್ಲಿ ಗಾಡಿಯನ್ನು ಬಾಡಿಗೆಗೆ ಪಡೆದಿದ್ದಾರೆ. ಕುಟುಂಬದ ಖರ್ಚು ಹೆಚ್ಚುತ್ತಿದ್ದಿದ್ದರಿಂದ ಅವರು ಇನ್ನೊಂದು ಆದಾಯ ಮೂಲವನ್ನು ಹುಡುಕಿಕೊಳ್ಳಲೇಬೇಕಿತ್ತು. 40 ವರ್ಷದ ಇಸ್ಲಾಮ್ ಟ್ರಕ್ ಡ್ರೈವರ್ ಒಬ್ಬರ ಸಹಾಯಕನಾಗಿ ಕೆಲಸ ಮಾಡುತ್ತಿದ್ದರು. ಆದರೆ ಬಹಳ ಕಡಿಮೆ ಸಂಬಳದ ಕಾರಣ ಆ ಕೆಲಸವನ್ನು ಬಿಟ್ಟುಬಿಟ್ಟಿದ್ದರು. (ಆದರೆ ಜೂನ್ ನಂತರ ಮತ್ತೆ ಸೇರಿಕೊಂಡರು) ಹುಡುಗನ ಅಮ್ಮ ಹೇರ್‌ಕ್ಲಿಪ್ ತಯಾರಿಸುತ್ತಾರೆ ಮತ್ತು ಗೌನ್‌ಗಳನ್ನು ಹೊಲಿಯುತ್ತಾರೆ. ಇವರ ಏಳು ಸದಸ್ಯರ ಕುಟುಂಬದಲ್ಲಿ ಎರಡು ವರ್ಷದ ಹಸ್ನೈನ್, ಎರಡು ಹೆಣ್ಣು ಮಕ್ಕಳಾದ 7ನೇ ತರಗತಿ ಓದುತ್ತಿರುವ 13 ವರ್ಷದ ಫರ್ಝಾನ 6ನೇ ತರಗತಿ ಓದುತ್ತಿರುವ 12 ವರ್ಷದ ಅಫ್ಸಾನ ಇದ್ದಾರೆ.
ಆದರೆ ಗಾಡಿಯನ್ನು ಬಾಡಿಗೆಗೆ ಪಡೆದ ಎರಡು ತಿಂಗಳಿನಲ್ಲಿ ಕೊವಿಡ್-19 ಕಾರಣದಿಂದಾಗಿ ಕುಟುಂಬದ ಹೊಸ ತರಕಾರಿ ವ್ಯವಹಾರವನ್ನು ನಿಲ್ಲಿಸಬೇಕಾಗಿ ಬಂತು. “ಮೊದಲು ಗಾಡಿಯನ್ನು ಅಪ್ಪ ನೋಡಿಕೊಳ್ಳುತ್ತಿದ್ದರು,” ಎಂದು ಮುಝಾಫರ್ ಹೇಳುತ್ತಾನೆ. ಆಗ ಅವನು ಮತ್ತು ಅವನ ಅಣ್ಣ ಮುಬಾರಕ್ ಬೆಳಿಗ್ಗೆ 7ರಿಂದ ಮಧ್ಯಾಹ್ನದ ತನಕ ಶಾಲೆಗೆ ಹೋಗುತ್ತಿದ್ದರು. ಶಾಲೆಯಿಂದ ಬಂದ ನಂತರ ಅಣ್ಣ ತಮ್ಮಂದಿರಿಬ್ಬರೂ ಅಪ್ಪನಿಗೆ ವ್ಯಾಪಾರದಲ್ಲಿ ಸಹಾಯ ಮಾಡುತ್ತಿದ್ದರು.“ಹಿಂದಿನ ವರ್ಷದ ತನಕ ತಿಂಗಳಿಗೆ ನಮ್ಮ ಆದಾಯ 5,000 ಮಾತ್ರವೇ ಇತ್ತು,” ಎನ್ನುತ್ತಾರೆ ಮೊಮಿನಾ. ಕುಟುಂಬವು ಜೀವನ ನಿರ್ವಹಣೆಗಾಗಿ ಆಗಾಗ ಸಂಬಂಧಿಕರು ಮತ್ತು ನೆರೆಹೊರೆಯವರ ಸಹಾಯ ಪಡೆಯಬೇಕಾಗುತ್ತಿತ್ತು. ಮೊಮಿನಾ ಅವರಿಗೆ ತಮ್ಮ ನೆರೆಯವರು ಹೊಲಿಗೆ ಯಂತ್ರವೊಂದನ್ನು ನೀಡಿದಾಗ ಅವರು ಅದರಲ್ಲಿ ಗೌನ್ ಹೊಲಿಯಲು ಪ್ರಾರಂಭಿಸಿದರು ಜೊತೆಗೆ ಕ್ಲಿಪ್ ತಯಾರಿಸುತ್ತಿದ್ದರಿಂದ ತಿಂಗಳಿಗೆ ಒಟ್ಟು ಸುಮಾರು ಸಾವಿರ ರೂಪಾಯಿಗಳ ಆದಾಯ ದೊರೆಯುತ್ತಿತ್ತು. ಆದರೆ ಅವರ ಆ ಆದಾಯವು ಲಾಕ್‌ಡೌನ್ ಸಮಯದಲ್ಲಿ ನಿಂತುಹೋಯಿತು. “ದಿನಸಿ, ಲೈಟ್ ಬಿಲ್, ನೀರಿನ ಬಿಲ್, ಶಾಲೆಯ ಫೀಸ್ ಇವೆಲ್ಲವನ್ನೂ ನಿಭಾಯಿಸುವುದು ಬಹಳ ಕಷ್ಟವಾಗುತ್ತಿತ್ತು.” ಎಂದು ಅವರು ಹೇಳುತ್ತಾರೆ. “ಈ ಕಾರಣದಿಂದಾಗಿ ನಾವು ತರಕಾರಿ ವ್ಯಾಪಾರ ಪ್ರಾರಂಭಿಸಿದೆವು ಆದರೆ ಲಾಕ್‌ಡೌನ್ ಎಲ್ಲವನ್ನೂ ಹಾಳುಗೆಡವಿತು.”
ಶೇಖ್ ಅವರಂತೆಯೇ ದೊಡ್ಡ ಸಂಖ್ಯೆಯ ವಲಸೆ ಕುಟುಂಬಗಳು ಅನೌಪಚಾರಿಕ ವಲಯದಲ್ಲಿ ತೊಡಗಿಕೊಂಡಿವೆ. ಅವರ ಕುಟುಂಬಗಳೂ ಲಾಕ್‌ಡೌನ್‌ನಿಂದಾಗಿ ತೀವ್ರ ತೊಂದರೆಗೆ ಒಳಗಾಗಿವೆ. “ಸಣ್ಣ ವ್ಯಾಪಾರಿಗಳು, ಬೀದಿ ವ್ಯಾಪಾರಿಗಳು ಮತ್ತು ದಿನಗೂಲಿ ಮಾಡುವವರು ಎಪ್ರಿಲ್ ತಿಂಗಳಿನಲ್ಲಿ ಲಾಕ್‌ಡೌನ್‌ನಿಂದಾಗಿ ಬಹಳ ಸಂಕಷ್ಟಕ್ಕೆ ಒಳಗಾಗಿದ್ದಾರೆ. ನಷ್ಟಕ್ಕೀಡಾಗಿರುವ 121.5 ಮಿಲಿಯನ್ ಕೆಲಸಗಳಲ್ಲಿ 91.2 ಮಿಲಿಯನ್ ಕೆಲಸಗಳು ಈ ವಲಯಕ್ಕೆ ಸಂಬಂಧಿಸಿವೆ,” ಎಂದು ಅಗಸ್ಟ್ 2020ರ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ( CMIE) ಯಲ್ಲಿನ ಲೇಖನವೊಂದು ಹೇಳುತ್ತದೆ.
ಲಾಕ್‌ಡೌನ್ ಸಮಯದಲ್ಲಿ ಸಾಕಷ್ಟು ಕುಟುಂಬಗಳು ತಮ್ಮ ತವರಿಗೆ ತೆರಳುವುದನ್ನು ಶೇಖ್ ಕುಟುಂಬವು ಗಮನಿಸಿತು. ಅವರೂ ಊರಿಗೆ ಮರಳುವ ಕುರಿತು ಯೋಚಿಸಿದ್ದರು. ಉತ್ತರ ಪ್ರದೇಶದ ಬಹರೈಚ್ ಜಿಲ್ಲೆಯ ಬಲಾಪುರ್ ಗ್ರಾಮಕ್ಕೆ ಸೇರಿದವರಾದ ಇವರು 1999ರಲ್ಲಿ ಮುಂಬಯಿಗೆ ಕೆಲಸ ಹುಡುಕಿ ಬಂದಿದ್ದರು. ಭೂರಹಿತರಾದ ಇವರು ತಮ್ಮ ಊರಿನಲ್ಲಿ ಕೃಷಿ ಕಾರ್ಮಿಕರಾಗಿದ್ದರು. “ನಾವೂ ಕೂಡ ಊರಿಗೆ ಹೋಗುವ ಕುರಿತು ಯೋಚಿಸಿದ್ದೆವು. ಆದರೆ ಬಸ್, ರೈಲು ಟಿಕೇಟ್ ಸಿಕ್ಕಿರಲಿಲ್ಲ. ನಂತರ ನಡೆದು ಮತ್ತು ಟೆಂಪೋದಲ್ಲಿ ಹೋಗುತ್ತಿದ್ದವರಿಗೆ ಆಕ್ಸಿಡೆಂಟ್ ಆದ ಸುದ್ದಿಗಳು ಬರತೊಡಗಿದವು. ಹೀಗಾಗಿ ನಾವು ತೊಂದರೆ ತೆಗೆದುಕೊಳ್ಳದಿರಲು ನಿರ್ಧರಿಸಿ ಎಲ್ಲವೂ ಮೊದಲಿನಂತಾಗುವ ತನಕ ಕಾಯುವುದೆಂದು ತೀರ್ಮಾನಿಸಿದೆವು.” ಎನ್ನುತ್ತಾರೆ ಮೊಮಿನಾ.
ತಂದೆ-ತಾಯಿ ಇಬ್ಬರಿಗೂ ಕೆಲಸವಿಲ್ಲದ ಕಾರಣ ಮುಝಾಫರ್ ಮತ್ತು ಮುಬಾರಕ್ ಲಾಕ್‌ಡೌನ್ ಮತ್ತು ಕರ್ಫ್ಯೂ ನಡುವೆ ಆಗಾಗ್ಗೆ ತರಕಾರಿ ವ್ಯಾಪಾರ ಮಾಡಲು ಪ್ರಯತ್ನಿಸಿದರು. “ಮನೆ ಹತ್ತಿರದ ಮಾರುಕಟ್ಟೆಯಲ್ಲಿ ಜನಸಂದಣಿಯನ್ನು ನಿಯಂತ್ರಿಸುತ್ತಿರುವಾಗ ಹವಾಲ್ದಾರ್ ಒಬ್ಬರು ಮುಬಾರಕ್‌ನ ಮೊಣಕೈಗೆ ಲಾಠಿಯಿಂದ ಹೊಡೆದರು. ಅದರ ನಂತರ ನಾವಿಬ್ಬರೂ ಮಾಲ್ವಾನಿ ಹತ್ತಿರದ ತಳ್ಳುಗಾಡಿಯೊಂದರಲ್ಲಿ ತರಕಾರಿ ಮಾರುವವರ ಬಳಿ ಒಂದು ತಿಂಗಳ ಮಟ್ಟಿಗೆ ಕೆಲಸಕ್ಕೆ ಸೇರಿಕೊಂಡೆವು.” ಮೇ ತಿಂಗಳ ತನಕ ಈ ಕೆಲಸಕ್ಕೆ ಇಬ್ಬರಿಗೂ ದಿನಕ್ಕೆ 50 ರೂಪಾಯಿಗಳ ಕೂಲಿ ದೊರೆಯುತ್ತಿತ್ತು.
ಜೂನ್‌ನಲ್ಲಿ ಲಾಕ್‌ಡೌನ್ ಸಡಿಲಗೊಳ್ಳುತ್ತಿದ್ದಂತೆ, ಇಬ್ಬರೂ ಗಾಡಿಯನ್ನು ಮತ್ತೆ ಬಾಡಿಗೆಗೆ ತೆಗೆದುಕೊಳ್ಳಲು ಪ್ರಾರಂಭಿಸಿದರು. ತಳ್ಳು ಗಾಡಿ ಮತ್ತು ಮುಖ್ಯ ಮಾರುಕಟ್ಟೆಯಿಂದ ತರಕಾರಿ ತರುತ್ತಿದ್ದ ಟೆಂಪೋದ ಬಾಡಿಗೆ ಮತ್ತು ತರಕಾರಿ ಖರೀದಿಯ ನಂತರ ಇಬ್ಬರಿಗೂ ಸೇರಿ ತಿಂಗಳ ಕೊನೆಯಲ್ಲಿ 3,000-4,000 ರೂಪಾಯಿಗಳು ಉಳಿಯುತ್ತಿದ್ದವು.
ಅದೇ ತಿಂಗಳು ಇಸ್ಲಾಮ್ ಕೂಡ ತಮ್ಮ ಲಾರಿ ಚಾಲಕರ ಸಹಾಯಕನ ಕೆಲಸಕ್ಕೆ ಮರಳಿದರು. ಅದೇ ಮೊದಲಿನ ತಿಂಗಳ 4,000 ರೂಪಾಯಿಗಳ ಸಂಬಳದೊಂದಿಗೆ. “ಅವರು ಮುಂಬಯಿಯಿಂದ ಹೊರಗೆ 9-10 (2-3 ದಿನಗಳ) ಟ್ರಿಪ್ ಹೋಗುತ್ತಾರೆ. ಇದರ ನಡುವೆ ಆಗಾಗ ಮನೆಗೆ ಬಂದು 2-3 ಗಂಟೆಗಳ ವಿರಾಮ ಪುಡೆದು ಮತ್ತೆ ಮುಂದಿನ ಟ್ರಿಪ್‌ಗೆ ಮರಳುತ್ತಾರೆ. ಅವರು ಹಗಲು ರಾತ್ರಿ ದುಡಿಯುತ್ತಾರೆ” ಎಂದು ಮೊಮಿನಾ ಹೇಳುತ್ತಾರೆ.
ಮೊಮಿನಾ ಕೂಡಾ ಅದೇ ಸಮಯದಲ್ಲಿ ತಮ್ಮ ಕೆಲಸವನ್ನು ಪುನರಾರಂಭಿಸಿದರು. ಆದರೆ ತಿಂಗಳಲ್ಲಿ ಕೆಲವೇ ದಿನಗಳು ಮಾತ್ರ ಕೆಲಸ ಮಾಡುತ್ತಿದ್ದರು. “ಜುಲೈ ತಿಂಗಳಿನಿಂದ ನನಗೆ ಒಂದಿಷ್ಟು ಕೆಲಸ ಸಿಗಲು ಪ್ರಾರಂಭವಾಗಿದೆ ಆದರೆ 10 ದಿನಗಳ ಕಾಲ ಮಾತ್ರ ಸಿಗುತ್ತದೆ. ಮಾರ್ಚ್ ತಿಂಗಳಿಗೂ ಮೊದಲು ತಿಂಗಳಿಗೆ 20 ದಿನಗಳ ಕೆಲಸ ದೊರೆಯುತ್ತಿತ್ತು.” ಎನ್ನುತ್ತಾರೆ. “ಕೆಲಸ ನೀಡುವವರು ಹೇಳುವಂತೆ ಹಲವು ಫ್ಯಾಕ್ಟರಿಗಳು ನಷ್ಟದಿಂದಾಗಿ ಮುಚ್ಚಿವೆ ಹೀಗಾಗಿ ಈಗ ಕಡಿಮೆ ಬೇಡಿಕೆಯಿದೆ.”
ಆದರೆ ಅವರ ಜೀವನೋಪಾಯದ ದಾರಿಗಳು ಒಂದೊಂದಾಗಿ ತೆರೆದುಕೊಳ್ಳುತ್ತಿವೆ. ಮುಝಾಫರ್ ಮತ್ತು ಮುಬಾರಕ್ ಓದುತ್ತಿರುವ ಇಂಗ್ಲಿಷ್ ಮಾಧ್ಯಮ ಶಾಲೆ - ಗುರುಕುಲ ಇಂಗ್ಲಿಷ್ ಸ್ಕೂಲ್ ಎಂಡ್ ಜ್ಯೂನಿಯರ್ ಕಾಲೇಜ್ ಇನ್ನೂ ತೆರೆದಿಲ್ಲ. ಈ ಶಾಲೆಯು ಅವರ ಮಾಲ್ವಾನಿಯ ಅಂಬುಜವಾಡಿ ಸ್ಲಮ್‌ನಿಂದ ಒಂದು ಕಿಲೋಮೀಟರ್ ದೂರದಲ್ಲಿದೆ. ಇದೊಂದು ಸರಕಾರೇತರ ಸಂಸ್ಥೆಯು ನಡೆಸುತ್ತಿರುವ ಶಾಲೆಯಾಗಿದ್ದು ಕಿಂಡರ್‌ಕಾರ್ಟನ್‌ನಿಂದ 12ನೇ ತರಗತಿಯವರೆಗೆ 928 ವಿದ್ಯಾರ್ಥಿಗಳಿದ್ದಾರೆ. ಶಾಲೆಯು ತರಗತಿಗಳನ್ನು ಜೂನ್ ತಿಂಗಳಿನಿಂದ ಆನ್ಲೈನ್ ತರಗತಿಗಳ ಮೂಲಕ ಮತ್ತೆ ಪ್ರಾರಂಭಿಸಿದೆ.
“ನಮ್ಮ ಬಳಿ ಒಂದು ಸಾಧಾರಣ ಫೋನ್ ಇದೆ. ಹೀಗಾಗಿ ಖಾಲಾ ಅವರ [ಅತ್ತೆ] ಮೊಬೈಲ್ ಎರವಲು ಪಡೆದಿದ್ದೇವೆ.” ಎಂದು ಮುಬಾರಕ್ ವಿವರಿಸುತ್ತಾನೆ. ಆದರೆ ಒಂದು ಫೋನ್ ಎಲ್ಲರಿಗೂ ಸಾಲುವುದಿಲ್ಲ. ಅದರಲ್ಲೂ ಎಲ್ಲ ಮಕ್ಕಳಿಗೂ ಒಂದೇ ಸಮಯದಲ್ಲಿ ಕ್ಲಾಸ್ ಇದ್ದಾಗ. ಹೀಗಾಗಿ ಫರ್ಝಾನಾ ಮತ್ತು ಅಫ್ಸಾನಾ ತಮ್ಮ ಸ್ನೇಹಿತರ ಮನೆಗೆ ಹೋಗಿ ಅಲ್ಲಿ ತರಗತಿಗೆ ಹಾಜರಾಗುತ್ತಾರೆ. ಈ ಸಹೋದರಿಯರು ಅಂಬುಜವಾಡಿಯಿಂದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿರುವ ಮುನ್ಸಿಪಲ್ ಕಾರ್ಪೊರೇಷನ್ ನಡೆಸುವ ಎಮ್.ಎಚ್.ಬಿ. ಉರ್ದು ಶಾಲೆಯಲ್ಲಿ ಓದುತ್ತಾರೆ.
ಮುಝಾಫರ್ ಮತ್ತು ಮುಬಾರಕ್ ಇಬ್ಬರೂ ಸರದಿಯಂತೆ ವ್ಯಾಪಾರ ಮಾಡುತ್ತಾ ಆನ್ಲೈನ್ ತರಗತಿಗಳಿಗೆ ಹಾಜರಾಗುತ್ತಾರೆ. ಮೊದಲ ಆನ್ಲೈನ್ ಕ್ಲಾಸಿನಲ್ಲಿ ಆದ ಅಡಚಣೆಗಳನ್ನು ತಪ್ಪಿಸಲು ಅಂಬುಜವಾಡಿಯಲ್ಲಿನ ತಮ್ಮ ಒಂದು ಕೋಣೆಯ ಮನೆಯಲ್ಲಿ ತರಗತಿಗೆ ಹಾಜರಾಗುತ್ತಾರೆ. ಪ್ರತಿದಿನ ಆರೇಳು ಗಂಟೆಗಳ ಕೆಲಸದ ನಡುವೆ ದಿನಕ್ಕೆ ಮೂರು ಗಂಟೆಗಳ ತನಕ ಆನ್ಲೈನ್ ಕ್ಲಾಸ್ ಅಟೆಂಡ್ ಮಾಡುವುದು ಬಹಳ ಸವಾಲಿನ ಕೆಲಸ.
ಅಣ್ಣ-ತಮ್ಮ ಇಬ್ಬರೂ ಸರದಿಯಂತೆ ಮುಖ್ಯ ಮಾರುಕಟ್ಟೆಯಿಂದ ಸಗಟು ತರಕಾರಿ ಖರೀದಿಗೆ ಇತರ ರೈತರೊಂದಿಗೆ ಬಾಡಿಗೆ ಹಂಚಿಕೊಂಡು ಟೆಂಪೋದಲ್ಲಿ ಹೋಗುತ್ತಾರೆ. ಇದಕ್ಕಾಗಿ ಅವರು ಅಂಬುಜವಾಡಿಯಿಂದ 40 ಕಿಮೀ ದೂರದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (APMC) ವಶಿ, ನವಿಮುಂಬೈ ಇಲ್ಲಿಗೆ ಹೋಗಬೇಕು. ಅವರು ಇದನ್ನು ಮೊದಲು ತಂದೆ ಗಾಡಿ ಬಾಡಿಗೆಗೆ ಪಡೆದು ವ್ಯಾಪಾರ ಮಾಡುತ್ತಿದ್ದಾಗಲೂ ಮಾಡುತ್ತಿದ್ದರು. “ನಾವು ರಾತ್ರಿ ಸುಮಾರು 12 ಗಂಟೆಯ ಹೊತ್ತಿಗೆ ಹೊರಡುತ್ತೇವೆ, ಬೆಳಗಿನ ಜಾವ 5-5:30ರ ಹೊತ್ತಿಗೆ ಮನೆಗೆ ಮರಳುತ್ತೇವೆ.” ಎಂದು ಮುಝಾಪರ್ ವಿವರಿಸುತ್ತಾನೆ. “ಹೆಚ್ಚಾಗಿ ಮಾರುಕಟ್ಟೆಗೆ ನಾನೇ ಹೋಗುತ್ತೇನೆ, ತರಕಾರಿ ಕೊಳ್ಳುವಾಗ ಮುಬಾರಕ್ ಹೆಚ್ಚು ಚೌಕಾಶಿ ಮಾಡುವುದಿಲ್ಲ. ಬೆಳಗಿನ 7:30ಕ್ಕೆ ಎದ್ದು ಶುಚಿಯಾಗಿ ನಂತರ ತರಕಾರಿಗಳನ್ನು ಗಾಡಿಯಲ್ಲಿ ಜೋಡಿಸುತ್ತೇವೆ.”
ಸಗಟು ಮಾರುಕಟ್ಟೆಯಲ್ಲಿ ದೀರ್ಘ ರಾತ್ರಿ ಕಳೆದ ನಂತರ, ಮರುದಿನ ಬೆಳಿಗ್ಗೆ ಅಥವಾ ಮಧ್ಯಾಹ್ನ ಆನ್‌ಲೈನ್ ತರಗತಿಗಳಿಗೆ ಹಾಜರಾಗಿ ಎಚ್ಚರವಾಗಿರಲು ಮತ್ತು ಅದರಲ್ಲಿ ಗಮನವಿರಿಸಲು ಅಪಾರ ಪ್ರಯತ್ನದ ಅಗತ್ಯವಿದೆ. “ತರಗತಿಯ ಸಮಯದಲ್ಲಿ ಕಣ್ಣುಗಳು ಭಾರವಾಗುತ್ತವೆ. ಆದರೆ ನಾನು ನನ್ನ ಕಣ್ಣುಗಳಿಗೆ ನೀರು ಸಿಂಪಡಿಸಿಕೊಳ್ಳುತ್ತೇನೆ ಅಥವಾ ತಲೆ ಅಲ್ಲಾಡಿಸಿ ನಿದ್ರೆಯನ್ನು ನಿಯಂತ್ರಿಸುತ್ತೇನೆ” ಎಂದು ಮುಬಾರಕ್ ಹೇಳುತ್ತಾನೆ.
15-20 ಕಿಲೋ ತರಕಾರಿಗಳನ್ನು ಹೊಂದಿರುವ ಭಾರವಾದ ಗಾಡಿಯನ್ನು ಎಲ್ಲೆಡೆ ತಳ್ಳಿಕೊಂಡು ಹೋಗುವುದು ಬಹಳ ಶ್ರಮದಾಯಕ ಕೆಲಸ. “ನನ್ನ ಭುಜ ನೋಯುತ್ತದೆ, ನನ್ನ ಅಂಗೈ ಉರಿಯುತ್ತದೆ. ಬರೆಯುವಾಗ ಅದು ನೋವುಂಟು ಮಾಡುತ್ತದೆ ”ಎಂದು ಮಾಲ್ವಾನಿಯ ಕಿರಿದಾದ ಬೀದಿಗಳಲ್ಲಿ ಕೈಗಾಡಿ ತಳ್ಳುತ್ತಾ ಮುಝಾಫರ್ ಹೇಳುತ್ತಾನೆ. "ನಾವು ಸರದಿಯಂತೆ ಕೆಲಸ ಮಾಡುತ್ತೇವೆ. ಇಂದು [ನವೆಂಬರ್ 28] ಮುಬಾರಕ್ ಬೆಳಿಗ್ಗೆ ತರಗತಿಯನ್ನು ಹೊಂದಿದ್ದಾನೆ. ಹಾಗಾಗಿ ನಾನು ಕೆಲಸಕ್ಕೆ ಬಂದೆ. ನನ್ನ ಕ್ಲಾಸ್ ಮಧ್ಯಾಹ್ನ 1.30ಕ್ಕೆ ಶುರುವಾಗುತ್ತದೆ.”
ಅವನ ಶಾಲೆಯ ಸಾಕಷ್ಟು ಮಕ್ಕಳಿಗೆ ಇಂತಹ ತೊಡಕುಗಳಿವೆ. “ನಮ್ಮ ಸುಮಾರು 50 ವಿದ್ಯಾರ್ಥಿಗಳು ಹೋಟೆಲ್, ನಿರ್ಮಾಣ ಸ್ಥಳಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ತರಕಾರಿ ಮಾರುತ್ತಿದ್ದಾರೆ. ಅವರು ಆಗಾಗ ತಾವು ಕೆಲಸದಿಂದ ಬಳಲಿದ್ದು ನಿದ್ರೆ ಬರುತ್ತಿದೆಯೆಂದು ಹೇಳುತ್ತಾರೆ. ಅವರಿಗೆ ತರಗತಿಯ ಸಮಯದಲ್ಲಿ ಮನಸ್ಸನ್ನು ಓದಿನಲ್ಲಿ ಕೇಂದ್ರಿಕರಿಸುವುದು ಬಹಳ ಕಷ್ಟವಾಗುತ್ತದೆ.” ಎನ್ನುತ್ತಾರೆ ಗುರುಕುಲ ಇಂಗ್ಲಿಷ್ ಸ್ಕೂಲ್ ಎಂಡ್ ಜ್ಯೂನಿಯರ್ ಕಾಲೇಜಿನ ಸಂಸ್ಥಾಪಕರು ಮತ್ತು ಪ್ರಾಂಶುಪಾಲರಾಗಿರುವ ಫರೀದ್ ಶೇಖ್.
“ಮಾಲ್ವಾನಿ, ಧಾರಾವಿ, ಮನ್ಖುರ್ದ್ ಮತ್ತು ಗೊವಂಡಿ ಕೊಳಗೇರಿಗಳ ಹಲವು ಮಕ್ಕಳು ಲಾಕ್‌ಡೌನ್ ಸಮಯದಲ್ಲಿ ಕೆಲಸಕ್ಕೆ ಹೋಗಲು ಪ್ರಾರಂಭಿಸಿದ್ದಾರೆ ಮತ್ತು ಈಗಲೂ ಅವರು ಕೆಲಸ ಮಾಡುತ್ತಿದ್ದಾರೆ” ಎಂದು ಮುಂಬೈ ಮೂಲದ ಎನ್‌ಜಿಒ ಫ್ರಥಮ್‌ನ ಮುಖ್ಯಸ್ಥ ನವನಾಥ್ ಕಾಂಬ್ಳೆ ಹೇಳುತ್ತಾರೆ. ಅವರ ಸಂಸ್ಥೆಯು ಕೊಳಗೇರಿಯಲ್ಲಿ ಬದುಕುವ ಮಕ್ಕಳ ವಿದ್ಯೆಗಾಗಿ ಕೆಲಸ ಮಾಡುತ್ತದೆ. “ತಮ್ಮಲ್ಲಿ ಆನ್ಲೈನ್ ತರಗತಿಗಳಿಗೆ ಹಾಜರಾಗಲು ಬೇಕಿರುವ ಸಾಧನಗಳಿಲ್ಲದಿರುವುದು ಮತ್ತು ಪೋಷಕರ ನಿರುದ್ಯೋಗ ಇದಕ್ಕೆ ಮುಖ್ಯ ಕಾರಣಗಳು”
ಅವರಲ್ಲಿ 17 ವರ್ಷದ ರೋಷ್ನಿ ಖಾನ್ ಕೂಡಾ ಒಬ್ಬಳು. ಈಕೆಯೂ ಅಂಬುಜವಾಡಿಯಲ್ಲಿ ಶೇಖ್ ಅವರ ಮನೆಯಿಂದ ಹತ್ತು ನಿಮಿಷದ ನಡಿಗೆಯ ದೂರದಲ್ಲಿರುವ ಮನೆಯಲ್ಲಿ ವಾಸಿಸುತ್ತಾರೆ. ಈಕೆ ಗುರುಕುಲ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದು ಲಾಕ್‌ಡೌನ್ ಸಮಯದಲ್ಲಿ ಆನ್ಲೈನ್ ತರಗತಿಗಳಿಗೆ ಹಾಜರಾಗಲು ತಾನು ಒಂದು ಸೆಕೆಂಡ್ ಹ್ಯಾಂಡ್ ಮೊಬೈಲ್ ಖರೀದಿಸುವ ಸಲುವಾಗಿ ಕೇಕ್ ಅಂಗಡಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದಾಳೆ. ಆಕೆಯ ತಂದೆ ಸಾಬಿರ್ ವೆಲ್ಡರ್ ಆಗಿದ್ದು ತಾಯಿ ರುಕ್ಸಾನಾ ಮನೆಗೆಲಸಗಳನ್ನು ಮಾಡುತ್ತಾರೆ. ರೋಷ್ನಿಯ ಪೋಷಕರು 1970ರಿಂದ ಮುಂಬೈನಲ್ಲಿದ್ದು. ಇವರು ಮೂಲತಃ ಬಿಹಾರದ ಮಾಧೇಪುರ ಜಿಲ್ಲೆಯ ಕಲೊತಾಹ ಗ್ರಾಮದವರು.“ಅಪ್ಪನ ಬಳಿ ಸಾಧಾರಣವಾದ ಮೊಬೈಲ್ ಇತ್ತು, ಮಾರ್ಚ್ ತಿಂಗಳಿನಲ್ಲಿ ಅವರ ಕೆಲಸ ನಿಂತುಹೋಗಿದೆ, ಹೀಗಾಗಿ ಹೊಸ ಮೊಬೈಲ್ ಕೊಳ್ಳುವುದು ಸಾಧ್ಯವಿಲ್ಲ.” ಎಂದು ರೋಷ್ನಿ ಹೇಳುತ್ತಾಳೆ. ಅವಳು ಪ್ಯಾಕಿಂಗ್, ಮಾರಾಟ ಮತ್ತು ಕೇಕ್ ಡೆಕೊರೇಷನ್ ಕೆಲಸ ಮಾಡುವ ಕೇಕ್ ಅಂಗಡಿಯು ಅಂಬುಜವಾಡಿಯಿಂದ 5 ಕಿಲೋಮೀಟರ್ ಮಲಾಡ್‌ನಲ್ಲಿದೆ. “ನನ್ನ ಸ್ನೇಹಿತೆ ಮಾರ್ಚ್ ತಿಂಗಳಿನಲ್ಲಿ ಈ ಕೆಲಸದ ಕುರಿತು ತಿಳಿಸಿದಳು, ಹೀಗೆ ನಾನು ಕೆಲಸಕ್ಕೆ ಸೇರಿದೆ.” ಎಂದು ಹತ್ತಿರದಲ್ಲೇ ನಿಂತಿದ್ದ ಶೇರ್ ಆಟೋ ಕಡೆ ನಡೆಯುತ್ತಾ ಹೇಳಿದಳು. ಪ್ರತಿದಿನ ಅವಳು ರಿಕ್ಷಾಕ್ಕೆ ಒಂದು ಬದಿಯ ದಾರಿಗೆ 20 ರೂಪಾಯಿ ಖರ್ಚು ಮಾಡಬೇಕಾಗುತ್ತದೆ.
ರೋಷ್ನಿ ತನ್ನ ತಿಂಗಳ ಸಂಬಳ 5,000 ದಿಂದ 2,500 ರೂಪಾಯಿಗಳನ್ನು ತೆತ್ತು ಮೇ ತಿಂಗಳ ನಡುವಿನಲ್ಲಿ ಸೆಕೆಂಡ್ ಹ್ಯಾಂಡ್ ಮೊಬೈಲ್ ಒಂದನ್ನು ಕೊಂಡಿದ್ದಾಳೆ. ಅದರ ನಂತರವೂ ಮನೆ ನಡೆಸಲು ಪೋಷಕರಿಗೆ ಸಹಾಯ ಮಾಡುವ ಸಲುವಾಗಿ ದುಡಿಯುವುದನ್ನು ಮುಂದುವರೆಸಿದ್ದಾಳೆ.
ಆದರೆ ಅವಳ ಬೆಳಿಗ್ಗೆ 11ರಿಂದ ಸಂಜೆ 6 ಗಂಟೆಯ ತನಕದ ಕೆಲಸವು ಶಾಲೆಯ ವೇಳಾಪಟ್ಟಿಯೊಂದಿಗೆ ಹೊಂದಿಕೊಳ್ಳುವುದಿಲ್ಲ. “ವಾರದಲ್ಲಿ ಸುಮಾರು 2-3 ಮಧ್ಯಾಹ್ನದ ತರಗತಿಗಳನ್ನು ತಪ್ಪಿಸಿಕೊಳ್ಳುತ್ತೇನೆ” ಎನ್ನುತ್ತಾಳೆ. “ತಪ್ಪಿ ಹೋದ ಪಾಠಗಳನ್ನು ನಾನೇ ಓದಿಕೊಂಡು ಅನುಮಾನಗಳಿದ್ದಲ್ಲಿ ನನ್ನ ಶಿಕ್ಷಕರಿಗೆ ಕರೆ ಮಾಡಿ ಪರಿಹರಿಸಿಕೊಳ್ಳುತ್ತೇನೆ.”
ಸತತ ಏಳು ಗಂಟೆಗಳ ಕಾಲ ನಿಂತು ಕೆಲಸ ಮಾಡಿ ದಣಿದು ಹೋಗುತ್ತಾಳೆ ರೋಷ್ನಿ. “ನನಗೆ ಬಹಳ ದಣಿವಾಗಿರುತ್ತದೆ. ಹೋಮ್‌ವರ್ಕ್ ಮುಗಿಸಲು ಆಗುವುದಿಲ್ಲ. ನಾನು ಒಮ್ಮೊಮ್ಮೆ ಊಟ ಮಾಡದೆ ಮಲಗುತ್ತೇನೆ. ಕೆಲವೊಮ್ಮೆ ಎನ್ನಿಸುತ್ತದೆ ನಾನು ಈಗಾಗಲೇ ಸಂಪಾದಿಸುತ್ತಿದ್ದೇನೆ[ಕೆಲಸವಿದೆ] ಮತ್ತೆ ನಾನ್ಯಾಕೆ ಓದಬೇಕು?” ಆಕೆ ಕೇಳುತ್ತಾಳೆ.
ಈ ರೀತಿ ಓದಿನಲ್ಲಿ ಆಸಕ್ತಿ ಕಳೆದುಕೊಳ್ಳುವುದು ಸಹಜವೆಂದು ಪ್ರಥಮ್‌ನ ನವನಾಥ್ ಕಾಂಬ್ಳೆ ಹೇಳುತ್ತಾರೆ. “ಸ್ಲಮ್‌ನ ಕಾರ್ಮಿಕ ಮಕ್ಕಳು ಓದಿನಲ್ಲಿ ಹೆಚ್ಚು ಆಸಕ್ತಿ ಹೊಂದಿರುವುದಿಲ್ಲ. ಅದರಲ್ಲೂ ಒಳ್ಳೆಯ ಶಿಕ್ಷಣದಿಂದ ವಂಚಿತರಾದಾಗ ಇದು ಇನ್ನಷ್ಟು ಹೆಚ್ಚಾಗುತ್ತದೆ ಮತ್ತು ಬಾಲ ಕಾರ್ಮಿಕರ ಸಂಖ್ಯೆ ಹೆಚ್ಚಾಗುತ್ತದೆ.
ರೋಷ್ನಿ ಮೂವರು ಒಡಹುಟ್ಟಿದವರನ್ನು ಹೊಂದಿದ್ದು ರಿಹಾನ 7ನೇ ತರಗತಿ, ಸುಮೈರಾ 5ನೇ ತರಗತಿ, ರಿಝ್ವಾನ್ 4ನೇ ತರಗತಿಯಲ್ಲಿ ಓದುತ್ತಿದ್ದಾರೆ. ಎಲ್ಲರೂ ಎಮ್.ಎಚ್.ಬಿ. ಶಾಲೆಯಲ್ಲಿ ಓದುತ್ತಿದ್ದಾರೆ. “ಅವರೆಲ್ಲ ಅವರ ಸ್ನೇಹಿತರ ಮನೆಯಲ್ಲಿ ಆನ್ಲೈನ್ ಕ್ಲಾಸ್‌ಗೆ ಹಾಜರಾಗುತ್ತಾರೆ, ಯಾಕೆಂದರೆ ಮೊಬೈಲನ್ನು ನಾನು ಕೆಲಸಕ್ಕೆ ಕೊಂಡು ಹೋಗುತ್ತೇನೆ.” ಎಂದು ಹೇಳುತ್ತಾಳೆ.
ಅವೃ ಪೋಷಕರು ಸೆಪ್ಟೆಂಬರ್ ತಿಂಗಳ ನಡುವಿನಲ್ಲಿ ಮತ್ತೆ ದುಡಿಯಲು ಪ್ರಾರಂಭಿಸಿದ್ದಾರೆ. ಆದರೆ ಮೊದಲಿನಷ್ಟು ಕೆಲಸ ಈಗ ಇಲ್ಲ. “ನಾನು ನಾಲ್ಕು ಮನೆಗಳಲ್ಲಿ ಕೆಲಸ ಮಾಡುತ್ತಿದ್ದೆ, ಈಗ ಒಂದು ಮನೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಉಳಿದ ಮನೆಗಳವರು ಇನ್ನೂ ಕರೆದಿಲ್ಲ.” ಎನ್ನುತ್ತಾರೆ ರುಕ್ಸಾನಾ. ಇದರರ್ಥ ತಿಂಗಳಿಗೆ ಅವರು ಹೆಚ್ಚೆಂದರೆ ಒಂದು ಸಾವಿರ ದುಡಿಯುತ್ತಾರೆ. ಮಾರ್ಚ್‌ಗೆ ಮೊದಲು ತಿಂಗಳಿಗೆ 4,000 ರೂಪಾಯಿಗಳನ್ನು ಸಂಪಾದಿಸುತ್ತಿದ್ದರು.
“ರೋಷ್ನಿಯ ತಂದೆಗೂ 15 [ದಿನಕ್ಕೆ 400 ರೂಪಾಯಿಗಳು] ದಿನಗಳ ಕೆಲಸವಿರುತ್ತದೆ. ಮಾರ್ಚಿಗೂ ಮೊದಲೂ ಮಾಲ್ವಾನಾ ಲೇಬರ್ ನಾಕಾದಲ್ಲಿ ನಿಲ್ಲುತ್ತಿದ್ದಾಗ ತಿಂಗಳಿಗೆ 25 ದಿನಗಳ ಕೆಲಸವಿರುತ್ತಿತ್ತು.” ಎಂದು ರುಕ್ಸಾನಾ ಹೇಳುತ್ತಾರೆ. ಅಲ್ಲಿಗೆ ಅವರ ಒಟ್ಟು ತಿಂಗಳ ಆದಾಯ ರೋಷ್ನಿಯದೂ ಸೇರಿ 12,000 ರೂಪಾಯಿಗಳು. ಲಾಕ್‌ಡೌನ್‌ಗೂ ಮೊದಲು ರೋಷ್ನಿ ದುಡಿಯದೆಯೇ ಕುಟುಂಬವು 14,000 ರೂಪಾಯಿಗಳ ಆದಾಯ ಗಳಿಸುತ್ತಿತ್ತು.
“ನಮ್ಮ ಆದಾಯ ಕಡಿಮೆಯಾಗಿದೆ ಆದರೆ ಖರ್ಚುಗಳು ಕಡಿಮೆಯಾಗಿಲ್ಲ.” ಎಂದು ದಿನಸಿ, ಶಾಲೆ ಫೀಸ್‌ಗಳು, ವಿದ್ಯುತ್ ಬಿಲ್, ಅಡುಗೆ ಗ್ಯಾಸ್ ಇತ್ಯಾದಿಯ ಖರ್ಚುಗಳನ್ನು ಉಲ್ಲೇಖಿಸಿ ರುಕ್ಸಾನಾ ಹೇಳುತ್ತಾರೆ. (ಕುಟುಂಬ ಪ್ರಸ್ತುತ ಯಾವುದೇ ರೇಷನ್ ಕಾರ್ಡ್ ಹೊಂದಿಲ್ಲ. ಅದಕ್ಕಾಗಿ ಅರ್ಜಿ ಸಲ್ಲಿಸುವ ಕುರಿತಾಗಿಯೂ ಅವರು ಯೋಚಿಸಿಲ್ಲ.)
ತನ್ನ ಮಗಳ ಮೇಲೆ ಬಿದ್ದಿರುವ ದುಡಿಮೆಯ ಭಾರದ ಕುರಿತು ರುಕ್ಸಾನಾ ಚಿಂತೆಗೊಳಗಾಗಿದ್ದಾರೆ. “ರೋಷ್ನಿ ಬಹಳ ಸಣ್ಣವಳು. ನನಗೆ ಅವಳದೇ ಚಿಂತೆಯಾಗಿದೆ. ಇದು ಅವಳಿಗೆ ಅತಿ ದೊಡ್ಡ ಜವಬ್ದಾರಿಯಾಗಿದೆ” ಎನ್ನುತ್ತಾರೆ.
ಈ ನಡುವೆ ರೋಷ್ನಿ ಮುಝಾಫರ್ ಮಮತ್ತು ಮುಬಾರಕ್‌ರಂತೆಯೇ ಆನ್ಲೈನ್ ಕ್ಲಾಸ್ ಮತ್ತು ಕೆಲಸದ ನಡುವೆ ಹೆಣಗಾಡುತ್ತಿದ್ದಾಳೆ. ನಗರದ ಶಾಲೆಗಳು (ಕನಿಷ್ಟ) ಡಿಸೆಂಬರ್ 31ರ ತನಕ ಮುಚ್ಚಿರಲಿವೆ. ಹೀಗೆಂದು ಮುಂಬೈನ ಮುಂಬೈನ ಮುನ್ಸಿಪಲ್ ಕಾರ್ಪೊರೇಷನ್ ಘೋಷಿಸಿದೆ.
“ನಾವು ಕೆಲಸ ಮಾಡುತ್ತಾ ಓದುವುದರ ಕುರಿತು ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಇದು ಎಷ್ಟೇ ಕಾಲ ಮುಂದುವರೆದರೂ ನಾವು ಓದನ್ನು ನಿಲ್ಲಿಸುವುದಿಲ್ಲ,” ಎಂದು ಆನ್ಲೈನ್ ಕ್ಲಾಸ್ ಅಟೆಂಡ್ ಮಾಡಲು ಮನೆಯತ್ತ ಮರಳುತ್ತಿದ್ದ ಮುಝಾಫರ್ ಹೇಳುತ್ತಾನೆ. “ಅದೇನೇ ಇರಲಿ, ಈಗ ದಣಿದಿರುವಾಗ ಓದುವುದು ನಮಗೆ ಅಭ್ಯಾಸವಾಗಿದೆ. ಮುಂದೆಯೂ ಹೇಗೋ ಇದನ್ನು ನಿಭಾಯಿಸುತ್ತೇವೆ.”
ಅನುವಾದ: ಶಂಕರ ಎನ್. ಕೆಂಚನೂರು