ನೀವು ನಮ್ಮನ್ನು ಬೇರುಸಹಿತ ಕಿತ್ತು ನೀರಿನಲ್ಲಿ ಮುಳುಗಿಸಬಹುದು. ಆದರೆ ಅದಾದ ಕೆಲವು ದಿನಗಳಲ್ಲೇ ನಿಮ್ಮ ಪಾಲಿಗೆ ನೀರಿರುವುದಿಲ್ಲ – ಎಂದು ನಾನೊಂದು ಕಡೆ ಬರೆದಿದ್ದೆ. ನೀವು ನಮ್ಮ ನೆಲ, ನೀರನ್ನು ಕದಿಯಬಹುದು, ಆದರೂ ನಾವು ನಿಮ್ಮ ಮುಂದಿನ ಪೀಳಿಗೆಗಾಗಿ ಹೋರಾಡುತ್ತೇವೆ ಹಾಗೂ ಜೀವವನ್ನೂ ತೆರುತ್ತೇವೆ. ನೀರು, ಕಾಡು ಮತ್ತು ಭೂಮಿಗಾಗಿ ನಮ್ಮ ಹೋರಾಟಗಳು ಕೇವಲ ನಮ್ಮ ಸಲುವಾಗಿಯಲ್ಲ, ನಮ್ಮಲ್ಲಿ ಯಾರೂ ಪ್ರಕೃತಿಯಿಂದ ಬೇರೆಯಾಗಿಲ್ಲ. ಆದಿವಾಸಿ ಬದುಕು ಪ್ರಕೃತಿಯೊಂದಿಗೆ ಮಿಳಿತವಾಗಿರುತ್ತದೆ. ಇವುಗಳ ಹೊರತಾದ ಆದಿವಾಸಿ ಬದುಕಿಲ್ಲ. ಹೀಗಾಗಿ ನಾವು ಪ್ರಕೃತಿಯಿಂದ ನಮ್ಮನ್ನು ಬೇರೆಯಾಗಿಸಿಕೊಂಡು ನೋಡುವುದಿಲ್ಲ. ನಾನು ದೆಹ್ವಾಲಿ ಭಿಲಿಯಲ್ಲಿ ಬರೆಯುವ ಅನೇಕ ಕವಿತೆಗಳಲ್ಲಿ, ನಮ್ಮ ಜನರ ಮೌಲ್ಯಗಳನ್ನು ಸಂರಕ್ಷಿಸಲು ಪ್ರಯತ್ನಿಸಿದ್ದೇನೆ.
ನಮ್ಮ ಆದಿವಾಸಿ ಸಮುದಾಯಗಳ ಲೋಕದೃಷ್ಟಿಯು ಮುಂದಿನ ಪೀಳಿಗೆಗೆ ಅಡಿಪಾಯವಾಗಬಹುದು. ನೀವು ಸಾಮೂಹಿಕ ಆತ್ಮಹತ್ಯೆಗೆ ಸಿದ್ಧರಿಲ್ಲದಿದ್ದರೆ, ಆ ಬದುಕಿಗೆ, ಆ ಲೋಕದೃಷ್ಟಿಗೆ ಹಿಂತಿರುಗುವುದನ್ನು ಬಿಟ್ಟು ನಿಮಗೆ ಬೇರೆ ಆಯ್ಕೆಗಳಿಲ್ಲ.


