ಕೆಲವು ತಿಂಗಳ ಹಿಂದೆ ವರ್ಸೊವ ಜೆಟ್ಟಿಯ ಮುಂಜಾನೆಯೊಂದರಲ್ಲಿ, ಬಂಡೆಯೊಂದರ ಕೊರಕಲಿನ ತುದಿಯಲ್ಲಿ ಕುಳಿತಿದ್ದ ರಾಂಜಿಭಾಯ್ ಅವರನ್ನು ಏನು ಮಾಡುತ್ತಿದ್ದೀರೆಂದು ಪ್ರಶ್ನಿಸಿದೆ. “ಹೀಗೇ ಸಮಯ ದೂಡುತ್ತಿದ್ದೇನೆ”ಎಂದು ಉತ್ತರಿಸಿದ ಆತ, ಆಗ ತಾನೇ ಹಿಡಿದಿದ್ದ ತೆಂಗ್ಡ (ಹೆಮ್ಮೀನಿನ ಒಂದು ಪ್ರಕಾರ) ಮೀನಿನೆಡೆಗೆ ಕೈ ತೋರಿಸುತ್ತಾ, “ಇದನ್ನು ಮನೆಗೆ ಒಯ್ದು ತಿನ್ನುತ್ತೇನೆ”ಎಂದರು. ಹಿಂದಿನ ರಾತ್ರಿ, ಕಡಲ ಖಾರಿಯಲ್ಲಿ ಒಡ್ಡಿದ್ದ ಬಲೆಯನ್ನು ಇತರೆ ಮೀನುಗಾರರು ಸ್ವಚ್ಛಗೊಳಿಸುತ್ತಿದ್ದುದನ್ನು ನೋಡಿದೆ. ಅವರು ಒಡ್ಡಿದ್ದ ಬಲೆಯಲ್ಲಿ ಪ್ಲಾಸ್ಟಿಕ್ ನ ರಾಶಿಯು ಸಿಲುಕಿತ್ತೇ ಹೊರತು ಅದರಲ್ಲಿ ಒಂದು ಮೀನೂ ಇರಲಿಲ್ಲ.
ಉತ್ತರ ಮುಂಬೈನ ಕೆ-ಪಶ್ಚಿಮ ಮೊಹಲ್ಲಾದಲ್ಲಿನ ಮೀನುಗಾರರ ಗ್ರಾಮ, ವರ್ಸೊವ ಕೊಲಿವಾಡಾದಲ್ಲಿ 70ಕ್ಕೂ ಹೆಚ್ಚು ವರ್ಷಗಳಿಂದ ನೆಲೆಸಿರುವ ಭಗ್ವಾನ್ ನಾಮ್ದೇವ್ ಭಂಜಿ ಅವರು, “ಇಂದು ಖಡಿಯಲ್ಲಿ (ಕಡಲ ಖಾರಿ) ಮೀನು ಹಿಡಿಯಲು ಸಾಧ್ಯವಿಲ್ಲ. ನಾವು ಚಿಕ್ಕವರಿದ್ದಾಗ ಇಲ್ಲಿನ ಕಡಲ ತೀರವು ಮಾರಿಷಸ್ನ ಕಡಲ ತೀರವನ್ನು ಹೋಲುತ್ತಿದ್ದು, ನೀರಿನಲ್ಲಿ ಎಸೆದ ನಾಣ್ಯವನ್ನು ಕಾಣಬಹುದಾಗಿದ್ದು, ನೀರು ಅಷ್ಟು ಸ್ವಚ್ಛವಾಗಿತ್ತು”ಎಂದು ತಿಳಿಸಿದರು.
ಭಗವಾನ್ ನ ನೆರೆಹೊರೆಯವರು ಬಲೆಗಳನ್ನು ಬೀಸಿ ಮೀನುಗಳನ್ನು ಹಿಡಿಯುತ್ತಿದ್ದರು. ಈಗೀಗ ಬಲೆಗಳನ್ನು ಸಮುದ್ರದಲ್ಲಿ ಆಳವಾಗಿ ಬೀಸಲಾಗುತ್ತದೆ. ಅವು ಚಿಕ್ಕವೂ ಹೌದು. “ಮೊದಲೆಲ್ಲಾ ನಮಗೆ ದೊಡ್ಡ ಮಂಜಿ ಮೀನುಗಳು ದೊರೆಯುತ್ತಿದ್ದವು. ಆದರೀಗ ಚಿಕ್ಕ ಮಂಜಿ ಮೀನುಗಳು ಮಾತ್ರವೇ ದೊರೆಯುತ್ತಿವೆ. ಇದು ನಮ್ಮ ಉದ್ಯಮದ ಮೇಲೆ ಮಹತ್ತರ ಪರಿಣಾಮವನ್ನು ಬೀರಿದೆ”ಎನ್ನುತ್ತಾರೆ ಕಳೆದ 25 ವರ್ಷಗಳಿಂದಲೂ ಮೀನಿನ ಮಾರಾಟದಲ್ಲಿ ತೊಡಗಿರುವ ಭಗ್ವಾನ್ ರ ಸೊಸೆ 48ರ ಪ್ರಿಯ ಭಾಂಜಿ.
ಕೊಲಿವಾಡದಲ್ಲಿ ಮೀನುಗಾರಿಕೆಯಲ್ಲಿ ನಿರತವಾದ 1,072 ಕುಟುಂಬಗಳು ಅಥವ 4,943 ಜನರಿದ್ದು (2010ರ ಕಡಲ ಮೀನುಗಾರಿಕಾ ಗಣತಿ) ಕಾಣೆಯಾಗುತ್ತಿರುವ ಅಥವ ಕ್ಷೀಣಿಸುತ್ತಿರುವ ಮತ್ಸ್ಯ ಸಂಪತ್ತಿನ ಬಗ್ಗೆ ಕಥೆಯೊಂದಿದೆ. ಇದಕ್ಕೆ ಅವರು ನೀಡುವ ಕಾರಣವು ಸ್ಥಳೀಯ ಮಟ್ಟದ ಮಾಲಿನ್ಯದಿಂದ ತೊಡಗಿ, ಜಾಗತಿಕ ಮಟ್ಟದ ತಾಪಮಾನದವರೆಗೂ ವ್ಯಾಪಿಸಿದೆ. ಈ ಎರಡೂ ಕಾರಣಗಳಿಂದಾಗಿ ವರ್ಸೊವದಲ್ಲಿನ ತೀರಗಳಲ್ಲಿನ ಹವಾಮಾನದಲ್ಲಿ ಬದಲಾವಣೆಗಳುಂಟಾಗಿವೆ.
ಮಲಡ್ ಕಡಲ ಖಾರಿಯ ಕಡಲ ತೀರದ ನೀರಿನಲ್ಲಿ, ಈ ಕೊಲಿವಾಡದ ನಿವಾಸಿಗಳು ಸುಮಾರು ಎರಡು ದಶಕಗಳ ಹಿಂದೆ ಸುಲಭವಾಗಿ ಹಿಡಿಯುತ್ತಿದ್ದ ಭಿಂಗ್ (ಬೃಹತ್ ಗಾತ್ರದ ಬೆಳ್ಳಿ ಮೀನು), ಪಲ (ಹಿಲ್ಸ ಶಡ್) ಮತ್ತು ಇತರೆ ಮೀನುಗಳು ಮಾನವನ ಹಸ್ತಕ್ಷೇಪದಿಂದಾಗಿ ನಿರ್ನಾಮವಾಗಿವೆ.
ಸುತ್ತಮುತ್ತಲಿನ ಪ್ರದೇಶಗಳ ಸುಮಾರು 12 ನಾಲೆಗಳಿಂದ ಹರಿದು ಬರುವ ಸಂಸ್ಕರಿಸಲ್ಪಡದ ಮಲಿನ ಜಲ, ಕಾರ್ಖಾನೆಗಳ ರಾಡಿ ಮತ್ತು ವರ್ಸೊವ ಹಾಗೂ ಪಶ್ಚಿಮ ಮಲಡ್ನಲ್ಲಿನ ಎರಡು ಪುರಸಭೆಗಳ ತ್ಯಾಜ್ಯ ನೀರಿನ ಸಂಸ್ಕರಣಾ ಸೌಲಭ್ಯಗಳ ಮೂಲಕ ಹೊರಬರುವ ಕಲ್ಮಶಗಳು ಭಗ್ವಾನ್ ಅವರ ನೆನಪಿನಲ್ಲಿ ಒಂದೊಮ್ಮೆ ಸ್ವಚ್ಛತೆಯಿಂದ ಕೂಡಿದ್ದ ಖಾರಿಗೆ ಹರಿದುಬರುತ್ತಿವೆ. “ಕಡಲಜೀವಿಗಳು ಇಲ್ಲಿ ನಾಮಾವಶೇಷಗೊಂಡಿವೆ. ಈ ಕಲ್ಮಶಗಳು ಸಮುದ್ರದಲ್ಲಿ 20 ನಾವಿಕ ಮೈಲಿಗಳವರೆಗೂ ಹರಡಿದೆ. ಎಲ್ಲ ಕಡೆಗಳಿಂದಲೂ ಸಾಗಿ ಬರುವ ಹೊಲಸು ನೀರು, ಕಸ, ನಿರುಪಯುಕ್ತ ವಸ್ತುಗಳಿಂದಾಗಿ ನಿರ್ಮಲವಾಗಿದ್ದ ಖಾರಿಯು ಚರಂಡಿಯಂತಾಗಿದೆ”ಎನ್ನುತ್ತಾರೆ ಕೊಲಿವಾಡದ ಇತಿಹಾಸ, ಸಂಸ್ಕøತಿ ಮತ್ತು ಸ್ಥಳೀಯ ರಾಜಕೀಯವನ್ನು ಕುರಿತ ತಮ್ಮ ತಿಳುವಳಿಕೆಯಿಂದ ಸುತ್ತಮುತ್ತಲಿನಲ್ಲಿ ಪ್ರಸಿದ್ಧರಾಗಿರುವ ಭಗ್ವಾನ್. ಕಳೆದ ಕೆಲವು ವರ್ಷಗಳವರೆಗೂ ಸಹೋದರನ ಎರಡು ಮೀನುಗಾರಿಕಾ ದೋಣಿಗಳ ದುರಸ್ತಿ, ಮೀನುಗಳನ್ನು ಒಣಗಿಸುವುದು, ಬಲೆಗಳ ತಯಾರಿಕೆಗಳಲ್ಲಿ ಇವರು ತೊಡಗಿರುತ್ತಿದ್ದರು.
ರಾಡಿಯಿಂದ ಕೂಡಿದ ನೀರಿದ್ದಲ್ಲಿ ಕಡಲ ಖಾರಿ ಮತ್ತು ದಡದಲ್ಲಿ ಕರಗಿರುವ ಆಮ್ಲಜನಕದ ಪ್ರಮಾಣವು ಕಡಿಮೆಯಿದ್ದು, ಮಲದ ಕೀಟಾಣುಗಳು ಹೇರಳವಾಗಿರುತ್ತವೆ. ಹೀಗಾಗಿ ಇದರಲ್ಲಿ ಮೀನುಗಳು ಬದುಕುಳಿಯಲಾರವು. ನ್ಯಾಷನಲ್ ಎನ್ವಿರಾನ್ಮೆಂಟ್ ಎಂಜಿನಿಯರಿಂಗ್ ರಿಸರ್ಚ್ ಇನ್ಸ್ಟಿಟ್ಯೂಟ್ನ (NEERI) ವಿಜ್ಞಾನಿಗಳ ಹೇಳಿಕೆಯಂತೆ, “ಕಡಲಿನಲ್ಲಿ ಇಳಿವುಬ್ಬರವಿದ್ದಾಗ (low tide), ನೀರಿನಲ್ಲಿ ಕರಗಿರುವ ಆಮ್ಲಜನಕದ ಪ್ರಮಾಣವು ಕಡಿಮೆಯಿದ್ದು; ಕಡಲಿನಲ್ಲಿ ಪೂರ್ಣ ಉಬ್ಬರವಿದ್ದಾಗ ಆಮ್ಲಜನಕದ ಪ್ರಮಾಣವು ಸ್ವಲ್ಪಮಟ್ಟಿಗೆ ಉತ್ತಮ ಮಟ್ಟದಲ್ಲಿರುತ್ತದೆ...”
ಕಡಲಿನ ಮಾಲಿನ್ಯವು ಹವಾಮಾನ ಬದಲಾವಣೆಯೊಂದಿಗೆ ಮಿಳಿತಗೊಂಡು ದೀರ್ಘಕಾಲೀನ ಪರಿಣಾಮಗಳನ್ನು ಉಂಟುಮಾಡುತ್ತಿದೆ. ಏರುಗತಿಯಲ್ಲಿ ಸಾಗಿರುವ ಅಭಿವೃದ್ಧಿಪರ ಚಟುವಟಿಕೆಗಳು, ಕಡಲು ಹಾಗೂ ಕಡಲಿನ ದಡಕ್ಕೆ ಸಂಬಂಧಿಸಿದ ಕಲ್ಮಶ (ಶೇ. 80ಕ್ಕೂ ಹೆಚ್ಚಿನ ಕಲ್ಮಶವು ಭೂ ಆಧಾರಿತವಾಗಿರುತ್ತದೆ) ಹಾಗೂ ಹವಾಮಾನ ಬದಲಾವಣೆಗಳು ಕಡಲ ಹರಿವಿನ ಮೇಲೆ ಬೀರುವ ಪರಿಣಾಮದಿಂದಾಗಿ ಕಡಲಿನ ಜಡ ವಲಯಗಳ (ಆಮ್ಲಜನಕರಹಿತ ಪ್ರದೇಶಗಳು) ಹರಡುವಿಕೆಯು ತ್ವರಿತಗೊಳ್ಳುತ್ತಿದೆ ಎಂಬ ಅಂಶವನ್ನು, ವಿಶ್ವಸಂಸ್ಥೆಯ ಪರಿಸರ ಯೋಜನೆಯ ಭಾಗವಾಗಿ 2008ರಲ್ಲಿ ಮುದ್ರಿತಗೊಂಡ In Dead Water: merging of climate change with pollution, over-harvest and infestation in the world’s fishing grounds. “… the effects of pollution,” ಎಂಬ ಹೆಸರಿನ ಪುಸ್ತಕದಲ್ಲಿ ಗಮನಿಸಲಾಗಿದ್ದು, ಮ್ಯಾಂಗ್ರೋವ್ಗಳ ನಾಶ ಹಾಗೂ ಸಮುದ್ರ ತೀರದಲ್ಲಿ ಕೈಗೊಳ್ಳಲಾಗುತ್ತಿರುವ ನಿರ್ಮಾಣ ಚಟುವಟಿಕೆಗಳಿಂದಾಗಿ ಪರಿಸ್ಥಿತಿಯು ಮತ್ತಷ್ಟು ಉಲ್ಭಣಗೊಳ್ಳುತ್ತಿದೆ ಎಂದು ತಿಳಿಸಲಾಗಿದೆ.
ಕೆಲವು ವರ್ಷಗಳಿಂದ ಮುಂಬೈನಲ್ಲಿಯೂ ಸಹ ರಸ್ತೆಗಳು, ಕಟ್ಟಡಗಳು ಹಾಗೂ ಇನ್ನಿತರ ಕಾರ್ಯಯೋಜನೆಗಳಿಗಾಗಿ ಮ್ಯಾಂಗ್ರೋವ್ನ ಬೃಹತ್ ಪ್ರದೇಶವನ್ನು ಬರಿದುಮಾಡಲಾಗುತ್ತಿದೆ. ಮ್ಯಾಂಗ್ರೋವ್ಗಳು ಮೀನುಗಳು ಮೊಟ್ಟೆಯನ್ನಿಡುವ ಅತ್ಯಂತ ಪ್ರಮುಖ ಸ್ಥಳವಾಗಿದೆ. ಇಂಡಿಯನ್ ಜರ್ನಲ್ ಆಫ್ ಮರೀನ್ ಸೈನ್ಸಸ್ನ 2005ರ ವಿದ್ವತ್ಪ್ರಬಂಧವೊಂದರಲ್ಲಿ; “ಮ್ಯಾಂಗ್ರೋವ್ ಕಾಡುಗಳು ಕಡಲ ಜೀವಿಗಳಿಗೆ ಆಸರೆ ನೀಡುವುದಷ್ಟೇ ಅಲ್ಲದೆ, ಕಡಲ ತೀರವನ್ನು ಸವಕಳಿಯಿಂದ ರಕ್ಷಿಸುತ್ತದೆಯಲ್ಲದೆ, ಕಡಲ ಜೀವಿಗಳ ಸಂವರ್ಧನೆ, ತಳಿವರ್ಧನೆ ಹಾಗೂ ಆಹಾರದ ತಾಣವೂ ಹೌದು”ಎಂಬುದಾಗಿ ತಿಳಿಸಲಾಗಿದೆ. 1990ರಿಂದ 2001ರವರೆಗಿನ ಕೇವಲ 11 ವರ್ಷಗಳಲ್ಲಿ ಮುಂಬೈನ ಉಪನಗರ ಪ್ರದೇಶವೊಂದರಲ್ಲೇ 36.54 ಚದರ ಕಿ.ಮೀ.ಗಳಷ್ಟು ಮ್ಯಾಂಗ್ರೋವ್ ಪ್ರದೇಶವು ನಾಶಹೊಂದಿದೆ ಎಂಬ ಅಂಶವನ್ನೂ ತಿಳಿಸಲಾಗಿದೆ.
“ಮೀನುಗಳು ಮೊಟ್ಟೆಗಳನ್ನಿಡಲು ತೀರಕ್ಕೆ (ಮ್ಯಾಂಗ್ರೋವ್ಗಳೆಡೆಗೆ) ಬರುತ್ತಿದ್ದವು. ಈಗ ಅದು ಸಾಧ್ಯವಾಗುತ್ತಿಲ್ಲ. ಸಾಧ್ಯವಿರುವ ಎಲ್ಲ ಮ್ಯಾಂಗ್ರೋವ್ಗಳನ್ನೂ ನಾವು ನಿರ್ನಾಮ ಮಾಡಿದ್ದೇವೆ. ಈಗ ಉಳಿದಿರುವುದು ಕೆಲವು ಮಾತ್ರ. ಉಪನಗರದ ದಡದಗುಂಟ ಕಂಡುಬರುವ ಕಟ್ಟಡಗಳು ಹಾಗೂ ಲೋಖಂಡವಾಲ, ಆದರ್ಶ ನಗರ ಮುಂತಾದ ಅಲ್ಲಿನ ಇಡೀ ಪ್ರದೇಶವು ಮೊದಲಿಗೆ ಮ್ಯಾಂಗ್ರೋವ್ ಪ್ರದೇಶವಾಗಿತ್ತು”ಎನ್ನುತ್ತಾರೆ ಭಗವಾನ್.
ಇದರ ಪರಿಣಾಮವಾಗಿ, ಮಲಡ್ ಖಾರಿ ಮತ್ತು ಹತ್ತಿರದ ಕಿನಾರೆಗಳಲ್ಲಿ ಕೆಲವಾರು ವರ್ಷಗಳಿಂದ ಮೀನುಗಾರರು ಕಡಲಿನಲ್ಲಿ ಹೆಚ್ಚು ಆಳದವರೆಗೂ ಸಾಗುವ ಪರಿಸ್ಥಿತಿಯು ತಲೆದೋರಿದೆ. ಏರುತ್ತಿರುವ ತಾಪಮಾನ, ಚಂಡಮಾರುತಗಳಿಂದ ಕೂಡಿದ ಬಿರುಗಾಳಿ ಮತ್ತು ಮೀನು ಹಿಡಿಯುವ ದೋಣಿಗಳಲ್ಲಿ ಯಾವುದೇ ಬದ್ಧತೆಯಿಲ್ಲದಂತೆ ಅಗಾಧ ಪ್ರಮಾಣದಲ್ಲಿ ಮೀನುಗಳನ್ನು ಹಿಡಿಯುತ್ತಿರುವ ಕಾರಣದಿಂದಾಗಿ, ಕಡಲಿನಾಳದಲ್ಲೂ ಮೀನುಗಾರರ ಉದ್ಯಮಕ್ಕೆ ಧಕ್ಕೆಯುಂಟಾಗಿದೆ.
ವರ್ಸೊವ ಕೊಲಿವಾಡದಲ್ಲಿ ಕಡಲ ಮಾಲಿನ್ಯ ಮತ್ತು ಪರಿಸರ ಬದಲಾವಣೆಯ ಅಧ್ಯಯನದಲ್ಲಿ ನಿರತರಾದ ಗುಂಪಿನಲ್ಲಿ ಒಬ್ಬರಾದ ಮುಂಬೈನ 61ರ ಕೇತಕಿ ಭಡ್ಗಾಂವ್ಕರ್, “ಇದಕ್ಕೂ ಮೊದಲು, ಮೀನುಗಳನ್ನು ಹಿಡಿಯಲು ಅವರು ಕಡಲಿನಾಳಕ್ಕೆ ತೆರಳುವ ಅವಶ್ಯಕತೆಯಿರಲಿಲ್ಲ (ತೀರದಿಂದ 20 ಕಿ.ಮೀ.ಗಿಂತಲೂ ಹೆಚ್ಚಿನ ದೂರಕ್ಕೆ). ಕಡಲ ಕಿನಾರೆಯ ಪರಿಸರವು ಅತ್ಯಂತ ಸಮೃದ್ಧವಾಗಿತ್ತು. ಕಡಲಿನಾಳದ ಮೀನುಗಾರಿಕೆಯು ಆರ್ಥಿಕ ದೃಷ್ಟಿಯಿಂದ ಕಾರ್ಯಸಾಧುವಲ್ಲ. ದೊಡ್ಡ ದೋಣಿಗಳಲ್ಲಿ ಹೆಚ್ಚಿನ ಪ್ರಮಾಣದ ಬಂಡವಾಳ, ನಾವಿಕರ ಸಮೂಹ ಮುಂತಾದವು ಇದಕ್ಕೆ ಅವಶ್ಯ. ಅಲ್ಲದೆ ಸಾಕಷ್ಟು ಮೀನಿನೊಂದಿಗೆ ಅವರು ಹಿಂದಿರುಗುವ ಭರವಸೆಯೂ ಇಲ್ಲ”ಎಂದು ತಿಳಿಸುತ್ತಾರೆ.
ಮಹಾರಾಷ್ಟ್ರದ ತೀರ ಪ್ರದೇಶಗಳಲ್ಲಿನ ಹಲವು ವಲಯಗಳಲ್ಲಿ ಅರೇಬಿಯನ್ ಸಮುದ್ರದ ತಾಪಮಾನದಿಂದಾಗಿ ಸಮುದ್ರದಆಳದಲ್ಲಿನ ಮೀನುಗಾರಿಕೆಯೂ ಅನಿಶ್ಚಿತವಾಗಿದೆ. ಅದರ ಮೇಲ್ಮೈ ಉಷ್ಣತೆಯು 1992ರಿಂದ 2013ರ ಅವಧಿಯಲ್ಲಿ, ದಶಕವೊಂದಕ್ಕೆ ಸರಾಸರಿ 0.13ರಿಂದ 0.6 ಡಿಗ್ರಿ ಸೆಲ್ಸಿಯಸ್ನಷ್ಟು ಏರಿಕೆಯಾಗಿದೆಯೆಂದು ಜಿಯೋಫಿಸಿಕ್ಸ್ ರಿಸರ್ಚ್ ಲೆಟರ್ಸ್ ಎಂಬ ನಿಯತಕಾಲಿಕೆಯ ವಿದ್ವತ್ಪ್ರಬಂಧದಲ್ಲಿ ತಿಳಿಸಲಾಗಿದೆ. ಸದರಿ ಸಂಸ್ಥೆಯ ಮುಂಬೈ ಕೇಂದ್ರದಲ್ಲಿ ಸುಮಾರು 4 ದಶಕಗಳಿಂದಲೂ ತಮ್ಮನ್ನು ತೊಡಗಿಸಿಕೊಂಡಿರುವ ಡಾ. ವಿನಯ್ ದೇಶ್ಮುಖ್ ಅವರು, ಸಾಗರದ ಜೀವರಾಶಿಯ ಮೇಲೆ ಇದು ತನ್ನ ಪ್ರಭಾವವನ್ನು ಬೀರಿದೆಯೆನ್ನುತ್ತಾರೆ. “ದಕ್ಷಿಣದಲ್ಲಿ ದೊರೆಯುವ ‘ಭೂತಾಯಿ’ ಎಂಬ ಮೀನು, ಉತ್ತರದತ್ತ (ಕಡಲ ತೀರದ ಉದ್ದಕ್ಕೂ) ಸಾಗುತ್ತಿದೆ. ದಕ್ಷಿಣದ ಮತ್ತೊಂದು ಪ್ರಕಾರವಾದ ಬಂಗುಡೆ (mackerel) ಮೀನು, ನೀರಿನ ಆಳಕ್ಕೆ (20 ಮೀಟರ್ಗಿಂತಲೂ ಕೆಳಗೆ) ಸಾಗುತ್ತಿದೆ.” ಅರೇಬಿಯನ್ ಸಮುದ್ರದ ಉತ್ತರ ಹಾಗೂ ಆಳವಾದ ಭಾಗಗಳಲ್ಲಿನ ನೀರು ತಂಪಾಗಿರುತ್ತದೆ.
ಮುಂಬೈ ಮತ್ತು ಮಹಾರಾಷ್ಟ್ರಗಳಲ್ಲಿನ ಸಮುದ್ರದ ನೀರಿನ ತಾಪಮಾನವು ಜಾಗತಿಕ ಹವಾಮಾನದ ಸ್ವರೂಪದೊಂದಿಗೆ ಪರಸ್ಪರ ಸಂಬಂಧವನ್ನು ಹೊಂದಿದೆ. ಹವಾಮಾನ ಬದಲಾವಣೆಯನ್ನು ಕುರಿತ ಅಂತರ್-ಸರ್ಕಾರಿ ತಜ್ಞರ ಸಮಿತಿಯು (IPCC) 1971ರಿಂದ 2010ರ ಅವಧಿಯಲ್ಲಿ, ಜಗತ್ತಿನ ಸಾಗರಗಳ 75 ಮೀಟರ್ ಮೇಲ್ಭಾಗದ ತಾಪಮಾನವು, ದಶಕವೊಂದಕ್ಕೆ 0.09ರಿಂದ 0.13 ಡಿಗ್ರಿ ಸೆಲ್ಸಿಯಸ್ನಷ್ಟು ಏರಿಕೆಯಾಗಿದೆಯೆಂದು ತಿಳಿಸುತ್ತದೆ.
ಸಮುದ್ರದ ತಾಪಮಾನದಲ್ಲಿನ ಈ ಏರಿಕೆಯು, ಜೈವಿಕ ವಿಧಾನವನ್ನು ಪ್ರಭಾವಿಸಿದೆ. ಗಮನಾರ್ಹವಾದ ಈ ಬದಲಾವಣೆಯು “ಅಪರಿವರ್ತನೀಯ”ಎಂಬುದಾಗಿ ಡಾ. ದೇಶ್ಮುಖ್ ತಿಳಿಸುತ್ತಾರೆ. “ನೀರು ತಂಪಾಗಿದ್ದು, ತಾಪಮಾನವು ಸುಮಾರು 27 ಡಿಗ್ರಿಗಳಿದ್ದಾಗ ಮೀನುಗಳು ಪ್ರೌಢಾವಸ್ಥೆಗೆ ತಲುಪುವುದು ನಿಧಾನವಾಗುತ್ತದೆ. ನೀರು ಬಿಸಿಯಾಗುತ್ತಿದ್ದಂತೆ, ಮೀನು ಶೀಘ್ರವಾಗಿ ಪ್ರೌಢಾವಸ್ಥೆಗೆ ತಲುಪುತ್ತದೆ. ಅಂದರೆ ಅವು ಅವಧಿಗೆ ಮೊದಲೇ ಮೊಟ್ಟೆಗಳನ್ನಿಡುವ ಹಾಗೂ ವೀರ್ಯೋತ್ಪಾದನೆಯ ಪ್ರಕ್ರಿಯೆಗಳು ಆರಂಭಗೊಳ್ಳುತ್ತವೆ. ಹೀಗಾಗಿ ಮೀನಿನ ಶರೀರದ ಬೆಳವಣಿಗೆಯು ಕುಂಠಿತಗೊಳ್ಳುತ್ತದೆ. ಈ ವಿದ್ಯಮಾನಗಳನ್ನು ನಾವು ಬಂಗುಲಿ [ಬುಮ್ಮುಲಿ(?)] ಮತ್ತು ಮಂಜಿ ಮೀನುಗಳಲ್ಲಿ ಸ್ಪಷ್ಟವಾಗಿ ಗಮನಿಸಬಹುದು.” ಪ್ರೌಢಾವಸ್ಥೆಗೆ ತಲುಪಿದ ಮಂಜಿ ಮೀನು, ಮೂರು ದಶಕಗಳ ಹಿಂದೆ, ಸುಮಾರು 350-500 ಗ್ರಾಂನಷ್ಟಿರುತ್ತಿದ್ದು, ಈಗ ಕೇವಲ 200-280 ಗ್ರಾಂನಷ್ಟು ಮಾತ್ರವೇ ತೂಗುತ್ತದೆ ಎಂಬುದಾಗಿ ಡಾ. ದೇಶ್ಮುಖ್ ಮತ್ತು ಸ್ಥಳೀಯ ಮೀನುಗಾರರು ತಿಳಿಸುತ್ತಾರೆ. ತಾಪಮಾನ ಮುಂತಾದ ಕಾರಣಗಳಿಂದಾಗಿ ಇದರ ಗಾತ್ರವು ಕ್ಷೀಣಿಸಿದೆ.
ಮಹಾರಾಷ್ಟ್ರದ ಕಡಲತೀರ ಹಾಗೂ ಅರೇಬಿಯನ್ ಸಮುದ್ರದಲ್ಲಿನ 0.4ರಿಂದ 0.6 ಡಿಗ್ರಿ ಸೆಲ್ಸಿಯಸ್ ತಾಪಮಾನದಿಂದಾಗಿ ಸಮುದ್ರದ ಆಳದಲ್ಲಿನ ಮೀನುಗಾರಿಕೆಯ ಬಗ್ಗೆಯೂ ಖಾತರಿಯಿಲ್ಲದಂತಾಗಿದೆ.
ಡಾ. ದೇಶ್ಮುಖ್ರ ಮಾತಿನಲ್ಲಿ, ಅತಿಯಾದ ಮೀನುಗಾರಿಕೆಯೂ ಸಹ ಅತಿ ದೊಡ್ಡ ಅಪರಾಧವೆನಿಸಿದೆ. ದೋಣಿಗಳ ಸಂಖ್ಯೆಯು ಹೆಚ್ಚಾಗಿದ್ದು, ಮೀನು ಹಿಡಿಯುವ ದೋಣಿ (ಕೆಲವು ದೋಣಿಗಳು ಕೊಲಿವಾಡದಲ್ಲಿನ ಸ್ಥಳೀಯರಿಗೆ ಸೇರಿವೆ) ಮತ್ತು ಇತರೆ ದೊಡ್ಡ ದೋಣಿಗಳು ಕಡಲಿನಲ್ಲಿ ಹೆಚ್ಚಿನ ಸಮಯವನ್ನು ವ್ಯಯಿಸುತ್ತಿವೆ. 2000ದ ಇಸವಿಯಲ್ಲಿ ದೋಣಿಗಳು ಕಡಲಿನಲ್ಲಿ 6ರಿಂದ 8 ದಿನಗಳನ್ನು ವ್ಯಯಿಸುತ್ತಿದ್ದು; 10ರಿಂದ 15 ದಿನಗಳಿಗೆ ಏರಿಕೆಯಾದ ಈ ಅವಧಿಯು, ಇದೀಗ 16ರಿಂದ 20 ದಿನಗಳವರೆಗೂ ಸಾಗಿದೆ. ಇದು, ಪ್ರಸ್ತುತದಲ್ಲಿ ಸಮುದ್ರದಲ್ಲಿನ ಮೀನಿನ ಸಂತತಿಗೆ ಒತ್ತಡವನ್ನು ಹೇರುತ್ತಿದೆ. ಮೀನು ಹಿಡಿಯುವ ದೋಣಿಯಿಂದಾಗಿ ಕಡಲಿನ ಕೆಳ ಎಲ್ಲೆಯ ಅವನತಿಯತ್ತ ಸಾಗುತ್ತಿದೆ. ಈ ದೋಣಿಯು ಭೂಮಿಯನ್ನು (ಸಮುದ್ರದ ನೆಲ) ಸವರುವ ಕಾರಣ, ಗಿಡಗಳು ಬುಡಮೇಲಾಗುತ್ತಿದ್ದು ಜೀವಿಗಳ ಸಹಜ ಬೆಳವಣಿಗೆಗೆ ಇದು ಮಾರಕವಾಗಿದೆ.
ದೇಶ್ಮುಖ್ ಅವರು ತಿಳಿಸುವಂತೆ, 2003ರಲ್ಲಿ ಮೀನುಗಾರಿಕೆಯು ತನ್ನ ಪರಾಕಾಷ್ಠೆಯನ್ನು ತಲುಪಿದ್ದು; ಸುಮಾರು 4.5 ಲಕ್ಷ ಟನ್ಗಳಷ್ಟು ಮೀನುಗಳನ್ನು ಹಿಡಿಯಲಾಗಿದೆ. 1950ರಿಂದ ದಾಖಲಾಗಿರುವ ಮೀನುಗಾರಿಕೆಯ ಮಾಹಿತಿಯನ್ನು ಪರಿಶೀಲಿಸಿದಾಗ, ಇದು ಅತ್ಯಂತ ಹೆಚ್ಚಿನ ಪ್ರಮಾಣದ ಮೀನುಗಾರಿಕೆಯೆಂಬುದಾಗಿ ತಿಳಿದುಬರುತ್ತದೆ. ಏರುಗತಿಯಲ್ಲಿ ಸಾಗಿರುವ ಮೀನುಗಾರಿಕೆಯಿಂದಾಗಿ, ಪ್ರತಿ ವರ್ಷವೂ ಮೀನಿನ ಲಭ್ಯತೆಯ ಪ್ರಮಾಣವು ಕುಂಠಿತಗೊಳ್ಳುತ್ತಿದ್ದು, 2017ರಲ್ಲಿ ಇದರ ಪ್ರಮಾಣ 3.81 ಲಕ್ಷ ಟನ್ನಷ್ಟಿದೆ.
ಕಡಲಿನಾಳದ ಮೀನುಗಾರಿಕೆಯಿಂದಾಗಿ, ಮೀನಿನ ಸಹಜ ವಾಸಸ್ಥಾನವು ಅವನತಿಗೀಡಾಗಿದ್ದು, ಸಾಗರದ ಸಮಸ್ತ ಜೀವವೈವಿಧ್ಯತೆಯ ಪ್ರಮುಖ ನೆಲೆಗಳು ಅಪಾಯಕ್ಕೆ ಸಿಲುಕಿವೆ. (ಮಾಲಿನ್ಯ ಮತ್ತು ಮ್ಯಾಂಗ್ರೋವ್ ಕಾಡುಗಳ ನಾಶವನ್ನೊಳಗೊಂಡಂತೆ) ಸಮುದ್ರ ಮಟ್ಟದಲ್ಲಿನ ಏರಿಕೆ, ಬಿರುಗಾಳಿಯ ಆವರ್ತನ ಮತ್ತು ತೀವ್ರತೆಯ ನಿಟ್ಟಿನ ಮಾನವ ಚಟುವಟಿಕೆಗಳ ಪರಿಣಾಮವು ಮತ್ತಷ್ಟು ತೀವ್ರಗೊಳ್ಳುತ್ತಿದೆ ಎಂಬುದಾಗಿ, In Dead Water, “making them more vulnerable to climate change” ಎಂಬ ಪುಸ್ತಕದಲ್ಲಿ ತಿಳಿಸಲಾಗಿದೆ.
ಈ ಎರಡೂ ಅಂಶಗಳಿಗೆ ಅರೇಬಿಯನ್ ಸಮುದ್ರವು ಸಾಕ್ಷಿಯಾಗಿದ್ದು; ಅದರ ಫಲವಾಗಿ, ವರ್ಸೊವದಲ್ಲಿನ ಕೊಲಿವಾಡದಲ್ಲಿಯೂ ತತ್ಸಂಬಂಧಿತ ಪರಿಣಾಮಗಳುಂಟಾಗುತ್ತಿವೆ. ಮಾನವಜನ್ಯ ಪರಿಸರ ಸಂಬಂಧಿತ ಪರಿಣಾಮಗಳು; ಅರೇಬಿಯನ್ ಸಮುದ್ರದಲ್ಲಿ ತೀವ್ರ ಬಿರುಸಿನಿಂದ ಕೂಡಿದ ಚಂಡಮಾರುತಗಳ ಸಾಧ್ಯತೆಯನ್ನು ಹೆಚ್ಚಿಸಿವೆ ಎಂಬುದಾಗಿ ನೇಚರ್ ಕ್ಲೈಮೆಟ್ ಛೇಂಜ್ನಲ್ಲಿ 2017ರಲ್ಲಿ ಪ್ರಕಟಗೊಂಡ ವಿದ್ವತ್ಪ್ರಬಂಧದಲ್ಲಿ ತಿಳಿಸಲಾಗಿದೆ.
ಮುಂಬೈನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪರಿಸರ ಅಧ್ಯಯನ ಶಾಖೆಯಲ್ಲಿ ಸಂಯೋಜಕರಾಗಿರುವ ಪ್ರೊ. ಡಾ. ಪಾರ್ಥಸಾರಥಿಯವರು ತಿಳಿಸುವಂತೆ, ಈ ಚಂಡಮಾರುತಗಳು ಮೀನುಗಾರರ ಸಮುದಾಯಕ್ಕೆ ತೀವ್ರ ಸ್ವರೂಪದ ಹೊಡೆತವನ್ನು ನೀಡಿವೆ. “ಮೀನುಗಳ ಲಭ್ಯತೆಯು ಕುಂಠಿತಗೊಂಡಿರುವ ಕಾರಣ, ಮೀನುಗಾರರು ಸಮುದ್ರದಾಳಕ್ಕೆ ತೆರಳುವುದು ಅನಿವಾರ್ಯವಾಗಿದೆ. ಆದರೆ ಅವರ ದೋಣಿಗಳು (ಕೆಲವು) ಚಿಕ್ಕವಿದ್ದು, ಸಮುದ್ರದಾಳದಲ್ಲಿ ಅವು ಕಾರ್ಯಸಾಧುವಲ್ಲ. ಹೀಗಾಗಿ ಬಿರುಗಾಳಿ ಹಾಗೂ ಚಂಡಮಾರುತಗಳಲ್ಲಿ ಅವು ಹಾನಿಗೀಡಾಗುತ್ತವೆ. ಮೀನುಗಾರಿಕೆಯು ಹೆಚ್ಚು ಅನಿಶ್ಚಿತವಾಗಿದ್ದು ಗಂಡಾಂತರಕಾರಿಯಾಗಿದೆ.”
ಸಮುದ್ರ ಮಟ್ಟದಲ್ಲಿನ ಏರಿಕೆಯೂ ಸಹ ತತ್ಸಂಬಂಧಿತ ಸಮಸ್ಯೆಗಳಲ್ಲಿ ಒಂದೆಂಬುದಾಗಿ ಹೇಳಬಹುದು. ಭಾರತದ ಕರಾವಳಿಯಗುಂಟ ಸಮುದ್ರ ಮಟ್ಟವು ಕಳೆದ 50 ವರ್ಷಗಳಲ್ಲಿ 8.5 ಸೆಂ.ಮೀ.ನಷ್ಟು ಏರಿಕೆಯಾಗಿದೆ ಅಥವ ವರ್ಷವೊಂದಕ್ಕೆ ಈ ಏರಿಕೆಯು ಸುಮಾರು 1.7 ಮಿ.ಮೀ.ನಷ್ಟಿದೆ (2019ರ ನವೆಂಬರ್ನಲ್ಲಿ ಲೋಕಸಭೆಯಲ್ಲಿ ಮಂಡಿಸಲಾದ ಪ್ರಶ್ನೆಗೆ ಸರ್ಕಾರವು ರಾಜ್ಯ ಸಭೆಯಲ್ಲಿ ಹೀಗೆಂದು ಉತ್ತರಿಸಿದೆ). ಐ.ಪಿ.ಸಿ.ಸಿ ದತ್ತಾಂಶಗಳು ಮತ್ತು ಪ್ರೊಸೀಡಿಂಗ್ಸ್ ಆಫ್ ದಿ ನ್ಯಾಷನಲ್ ಅಕಾದೆಮಿ ಆಫ್ ಸೈನ್ಸಸ್ (USA) ಎಂಬ ನಿಯತಕಾಲಿಕೆಯ 2018ರ ವಿದ್ವತ್ಪ್ರಬಂಧದಲ್ಲಿ, ಕಳೆದ 25 ವರ್ಷಗಳಲ್ಲಿ ಪ್ರತಿ ವರ್ಷವೂ ಜಾಗತಿಕ ಸಮುದ್ರ ಮಟ್ಟವು ಇದಕ್ಕಿಂತಲೂ ಹೆಚ್ಚಿಗೆ ಅಂದರೆ, ಸುಮಾರು 3ರಿಂದ 3.6 ಮಿ.ಮೀ.ನಷ್ಟು ಏರಿಕೆಯನ್ನು ಕಂಡಿದೆ ಎಂಬುದಾಗಿ ತಿಳಿಸಲಾಗಿದೆ. ಈ ಏರಿಕೆಯಲ್ಲಿ ಪ್ರಾದೇಶಿಕ ವ್ಯತ್ಯಾಸಗಳಿದ್ದು; ಸಮುದ್ರದಲ್ಲಿನ ಉಬ್ಬರವಿಳಿತಗಳು; ಗುರುತ್ವಾಕರ್ಷಣೆ, ಭೂ ಪರಿಭ್ರಮಣ ಮುಂತಾದವುಗಳನ್ನು ಅವಲಂಬಿಸಿದೆಯಾದರೂ, ಸಮುದ್ರ ಮಟ್ಟದಲ್ಲಿನ ಏರಿಕೆಯು ಇದೇ ಮಟ್ಟದಲ್ಲಿದ್ದಲ್ಲಿ; ಜಗತ್ತಿನ ಸುತ್ತಲಿನ ಸಮುದ್ರ ಮಟ್ಟವು 2100ರ ಹೊತ್ತಿಗೆ ಸುಮಾರು 65 ಸೆಂ.ಮೀ.ನಷ್ಟು ಏರಿಕೆಯಾಗಬಹುದು.
ವರ್ಸೊವ, ಕಡಲ ಚಾಚಿನ ತುದಿಯಲ್ಲಿ ನೆಲೆಗೊಂಡಿರುವ ಕಾರಣ, ಸಮುದ್ರ ಮಟ್ಟದಲ್ಲಿನ ಏರಿಕೆಯು ಹೆಚ್ಚು ಅಪಾಯಕಾರಿಯೆಂಬುದಾಗಿ ಡಾ. ದೇಶ್ಮುಖ್ ಎಚ್ಚರಿಸುತ್ತಾರೆ. ಮೀನುಗಾರರು ತಮ್ಮ ದೋಣಿಗಳನ್ನಿಡುವ ತಾಣವು ಕಡಲ ಬಿರುಗಾಳಿಯುಕ್ತ ಹವಾಮಾನಕ್ಕೆ ಪಕ್ಕಾಗುವ ಸಾಧ್ಯತೆಯಿದೆ.
ಸಮುದ್ರ ಮಟ್ಟದಲ್ಲಿನ ಈ ಏರಿಕೆಯನ್ನು ವರ್ಸೊವ ಕೊಲಿವಾಡದಲ್ಲಿನ ಅನೇಕರು ಗಮನಿಸಿದ್ದಾರೆ. 30 ವರ್ಷಗಳಿಂದಲೂ ಮೀನಿನ ಮಾರಾಟದಲ್ಲಿ ನಿರತರಾಗಿರುವ ರಾಜಹನ್ಸ್ ತಪ್ಕೆ ಅವರು ತಿಳಿಸುವಂತೆ, ಮೀನುಗಳ ಲಭ್ಯತೆಯು ಕಡಿಮೆಯಾಗಿರುವ ಕಾರಣದಿಂದಾಗಿ, ಜನರು (ಕಟ್ಟಡಗಳನ್ನು ನಿರ್ಮಿಸುವವರು ಹಾಗೂ ಸ್ಥಳೀಯರು) ಭೂಮಿಯನ್ನು ಹಿಂಪಡೆದು, ನಾವು ಮೀನುಗಳನ್ನು ಒಣಗಿಸುತ್ತಿದ್ದ ಜಾಗದಲ್ಲಿ ಮನೆಗಳನ್ನು ಕಟ್ಟತೊಡಗಿದ್ದಾರೆ (ಮರಳಿನ ಮೇಲೆ). ಈ ಪ್ರಕ್ರಿಯೆಯಿಂದಾಗಿ, ಕಡಲ ಚಾಚಿನಲ್ಲಿನ ನೀರಿನ ಮಟ್ಟದಲ್ಲಿ ಏರಿಕೆಯಾಗುತ್ತಿದ್ದು, ದಡದಗುಂಟ ನಾವು ಈ ಪ್ರಕ್ರಿಯೆಯನ್ನು ಕಾಣಬಹುದಾಗಿದೆ.
ಮುಂಬೈ ನಗರದಲ್ಲಿ ಮಳೆಯ ಪ್ರಮಾಣವು ಹೆಚ್ಚಿನ ಪ್ರಮಾಣದಲ್ಲಿದ್ದಾಗ; ಮ್ಯಾಂಗ್ರೋವ್ಗಳ ನಷ್ಟ, ನಿರ್ಮಾಣ ಕಾರ್ಯಕ್ಕಾಗಿ ಭೂಮಿಯ ಹಿಂಪಡೆಯುವಿಕೆ, ಸಮುದ್ರ ಮಟ್ಟದಲ್ಲಿನ ಹೆಚ್ಚಳ ಮುಂತಾದವುಗಳ ಸಂಯುಕ್ತ ಪರಿಣಾಮವು ಮೀನುಗಾರಿಕಾ ಸಮುದಾಯದ ಮೇಲೆ ತೀವ್ರ ಪರಿಣಾಮಗಳನ್ನು ಬೀರುತ್ತದೆ. ಉದಾಹರಣೆಗೆ 2019ರ ಆಗಸ್ಟ್ 3ರಂದು, ಮುಂಬೈನಲ್ಲಿ 204 ಮಿ.ಮೀ.ನಷ್ಟು ಮಳೆಯಾಗಿದ್ದು; ದಶಕದಲ್ಲಿನ 24 ಗಂಟೆಗಳ ಅವಧಿಯ ಆಗಸ್ಟ್ ಮಾಹೆಯ ಮೂರನೇ ಅತಿ ಹೆಚ್ಚಿನ ಮಳೆಸುರಿತವೆಂಬುದಾಗಿ ಹೇಳಲಾಗಿದ್ದು, ಅತಿ ಹೆಚ್ಚಿನ 4.9 ಮೀಟರ್ಗಳ (ಸುಮಾರು 16 ಅಡಿ) ಪೂರ್ಣ ಉಬ್ಬರವು ದಾಖಲಿಸಲ್ಪಟ್ಟಿದೆ. ಆ ದಿನದಂದು, ಬಲವಾದ ಅಲೆಗಳಿಂದಾಗಿ ವರ್ಸೊವದ ಕೊಲಿವಾಡದ ಬಂದರಿನಲ್ಲಿದ್ದ ಚಿಕ್ಕ ದೋಣಿಗಳು ಮುರಿದುಬಿದ್ದು, ಮೀನುಗಾರರ ಸಮುದಾಯವು ತೀವ್ರ ಹಾನಿಗೀಡಾಯಿತು.
“ದೋಣಿಗಳನ್ನಿಡುವ ಕೊಲಿವಾಡದ ಭಾಗವನ್ನು ಹಿಂಪಡೆಯಲಾಗಿದೆಯಾದರೂ, ಕಳೆದ ಏಳು ವರ್ಷಗಳಲ್ಲಿ; ನೀರು ಆ ದಿನದಂದು ಏರಿದ ಮಟ್ಟಕ್ಕೆ ಎಂದಿಗೂ ಏರಿಕೆಯನ್ನು ಕಂಡಿರಲಿಲ್ಲ”ಎನ್ನುತ್ತಾರೆ ವರ್ಸೊವ ಮಹೆಶ್ಮರಿ ಲಘು ನೌಕ ಸಂಘಟನೆಯ ಅಧ್ಯಕ್ಷರಾದ ದಿನೇಶ್ ಧಂಗ. ಈ ಸಂಘಟನೆಯು 148 ಚಿಕ್ಕ ದೋಣಿಗಳಲ್ಲಿ ಕೆಲಸವನ್ನು ನಿರ್ವಹಿಸುವ ಸುಮಾರು 250 ಮೀನುಗಾರರನ್ನು ಒಳಗೊಂಡಿದೆ. “ಪೂರ್ಣ ಉಬ್ಬರದಿಂದಾಗಿ ಉಂಟಾದ ಬಿರುಗಾಳಿಯಲ್ಲಿ, ನೀರಿನ ಮಟ್ಟದಲ್ಲಿ ಏರಿಕೆಯುಂಟಾಯಿತು. ಕೆಲವು ದೋಣಿಗಳು ಮುಳುಗಿದವಲ್ಲದೆ, ಕೆಲವು ಮುರಿದುಬಿದ್ದವು. ಮೀನುಗಾರರು ತಮ್ಮ ಬಲೆಗಳನ್ನು ಕಳೆದುಕೊಂಡರಲ್ಲದೆ, ನೀರು ಕೆಲವು ದೋಣಿಗಳ ಎಂಜಿನ್ನುಗಳಿಗೆ ನುಗ್ಗಿತು.” ದೋಣಿಗೆ ಸುಮಾರು 45,000 ರೂ.ಗಳಷ್ಟು ಬೆಲೆಯಿದ್ದು, ಪ್ರತಿಯೊಂದು ಬಲೆಯ ಬೆಲೆಯು 2,500 ರೂ.ಗಳಷ್ಟಿದೆ ಎಂಬುದಾಗಿ ದಿನೇಶ್ ತಿಳಿಸುತ್ತಾರೆ.
ಈ ಎಲ್ಲವೂ ವರ್ಸೊವ ಮೀನುಗಾರರ ಸಮುದಾಯದ ಜೀವನೋಪಾಯದ ಮೇಲೆ ಮಹತ್ತರ ಪರಿಣಾಮವನ್ನು ಬೀರಿದೆ. “ಈಗ ನಾವು 10 ಟೊಕ್ರಿಗಳನ್ನು (ಬುಟ್ಟಿಗಳು) ಮಾರುಕಟ್ಟೆಗೆ ಕೊಂಡೊಯ್ಯುತ್ತಿದ್ದು; ಇದಕ್ಕೂ ಮೊದಲು (ಸುಮಾರು 2 ದಶಕಗಳ ಹಿಂದೆ) 20 ಟೊಕ್ರಿಗಳನ್ನು ಕೊಂಡೊಯ್ಯುತ್ತಿದ್ದೆವು. ಈ ವ್ಯತ್ಯಾಸವು ಗಮನಾರ್ಹವಾದುದು”ಎನ್ನುತ್ತಾರೆ ಪ್ರಿಯ ಭನ್ಜಿ.
ಮೀನುಗಳ ಲಭ್ಯತೆಯ ಪ್ರಮಾಣವು ಕುಂಠಿತಗೊಂಡ ಕಾರಣ, ಸ್ತ್ರೀಯರು ಬಂದರಿನ ಬಳಿ ಸಗಟು ಮಾರುಕಟ್ಟೆಯಲ್ಲಿ ಕೊಳ್ಳುವ ಮೀನಿನ ದರವು ಹೆಚ್ಚಾಗಿದೆ. ಹೀಗಾಗಿ ಅವರ ಲಾಭಾಂಶವು ಅವಿರತವಾಗಿ ಕಡಿಮೆಯಾಗುತ್ತಿದೆ. “ಇದಕ್ಕೂ ಮೊದಲು ನಾವು ಹಿಡಿಯುತ್ತಿದ್ದ ಸುಮಾರು ಒಂದು ಅಡಿ ಉದ್ದದ ಅತಿ ದೊಡ್ಡ ಮೀನನ್ನು, (ಮಂಜಿ) 500 ರೂ. ಗಳಿಗೆ ಮಾರುತ್ತಿದ್ದೆವು. ಈಗ ಅದೇ ಬೆಲೆಗೆ 6 ಇಂಚು ಉದ್ದದ ಮಂಜಿ ಮೀನನ್ನು ಮಾರುತ್ತಿದ್ದೇವೆ. ಮಂಜಿ ಮೀನಿನ ಗಾತ್ರವು ಕಡಿಮೆಯಾಗಿದ್ದು, ಬೆಲೆಯು ಹೆಚ್ಚಾಗಿದೆ” ಎನ್ನುತ್ತಾರೆ ಪ್ರಿಯ. ಈಕೆಯು ಮೀನಿನ ಮಾರಾಟದಲ್ಲಿ ತೊಡಗುವ ಮೂರು ದಿನಗಳಲ್ಲಿ, ದಿನವೊಂದಕ್ಕೆ 500ರಿಂದ 600 ರೂ.ಗಳನ್ನು ಗಳಿಸುತ್ತಾರೆ.
ಮೀನುಗಾರಿಕೆಯ ಕ್ಷೀಣಗತಿಯ ಆದಾಯವನ್ನು ನಿಭಾಯಿಸಲು, ಮೀನುಗಾರರ ಅನೇಕ ಕುಟುಂಬಗಳು ಇತರೆ ಕೆಲಸಗಳಲ್ಲಿ ತೊಡಗಿವೆ. ಪ್ರಿಯಾಳ ಪತಿ ವಿದ್ಯುತ್, ಕೇಂದ್ರ ಸರ್ಕಾರದ ಲೆಕ್ಕಪತ್ರ ಇಲಾಖೆಯಲ್ಲಿ ದುಡಿಯುತ್ತಿದ್ದು, (ಮುಂಚಿತವಾಗಿ ಸೇವಾನಿವೃತ್ತಿಯನ್ನು ಪಡೆಯುವವರೆಗೆ) ಅವರ ಸಹೋದರ ಗೌತಮ್, ಏರ್ ಇಂಡಿಯಾದಲ್ಲಿ, ಉಗ್ರಾಣ ನಿರ್ವಾಹಕರಾಗಿ (store manager) ದುಡಿಯುತ್ತಿದ್ದಾರೆ. ಆತನ ಪತ್ನಿಯು, ಅಂಧೇರಿ ಮಾರುಕಟ್ಟೆಯಲ್ಲಿ ಮೀನಿನ ವ್ಯಾಪಾರದಲ್ಲಿ ತೊಡಗಿದ್ದಾರೆ. “ಮೀನುಗಾರಿಕೆಯು ಕಾರ್ಯಸಾಧುವಲ್ಲದ ಕಾರಣ ಈಗ ಅವರು ಕಛೇರಿಯ ಕೆಲಸಗಳಲ್ಲಿ ತೊಡಗಿದ್ದಾರೆ. ಆದರೆ ಇದರ ಹೊರತಾಗಿ ಇತರೆ ವೃತ್ತಿಯು ತಿಳಿದಿಲ್ಲವಾಗಿ, ನಾನು ಮತ್ತಾವ ಉದ್ಯೋಗದಲ್ಲೂ ತೊಡಗಲಾರೆ”ಎನ್ನುತ್ತಾರೆ ಪ್ರಿಯ.
43ರ ಸುನಿಲ್ ಕಪಟಿಲ್ ಅವರ ಕುಟುಂಬವು ದೋಣಿಯೊಂದನ್ನು ನಿರ್ವಹಿಸುತ್ತಿದ್ದು; ಆದಾಯದ ಗಳಿಕೆಗಾಗಿ ಇತರೆ ಮಾರ್ಗಗಳನ್ನು ಅರಸಿಕೊಂಡಿದೆ. ಕೆಲವು ತಿಂಗಳ ಹಿಂದೆ ತನ್ನ ಸ್ನೇಹಿತ ದಿನೇಶ್ ಧಂಗ ಅವರ ಜೊತೆಗೂಡಿ ಇವರೂ ಗಣಪತಿ ವಿಗ್ರಹ ತಯಾರಿಕೆಯ ಉದ್ಯಮದಲ್ಲಿ ತೊಡಗಿದ್ದಾರೆ. “ಈ ಹಿಂದೆ ಹತ್ತಿರದ ಸ್ಥಳಗಳಿಗೆ ಸುಮಾರು ಒಂದು ಗಂಟೆಯ ಅವಧಿಗೆ ನಾವು ಮೀನುಗಾರಿಕೆಗೆ ತೆರಳುತ್ತಿದ್ದೆವು. ಈಗ 2-3 ಗಂಟೆಗಳ ಕಾಲ ಪ್ರಯಾಣಿಸಬೇಕಿದೆ. ದಿನವೊಂದಕ್ಕೆ 2-3 ಬುಟ್ಟಿಗಳಷ್ಟು ಮೀನಿನೊಂದಿಗೆ ನಾವು ಹಿಂದಿರುಗುತ್ತಿದ್ದೆವು. ಈಗ ಒಂದು ಬುಟ್ಟಿ ಮೀನನ್ನು ಹಿಡಿಯುವುದೂ ದುಸ್ತರವೆನಿಸಿದೆ. ಕೆಲವು ಬಾರಿ ದಿನವೊಂದಕ್ಕೆ ನಾವು 1,000 ರೂ.ಗಳನ್ನು ಸಂಪಾದಿಸುತ್ತಿದ್ದು, 50 ರೂ. ಗಳ ಸಂಪಾದನೆಯೂ ಕೆಲವೊಮ್ಮೆ ದುರ್ಲಭವಾಗಿದೆ.” ಎನ್ನುತ್ತಾರೆ ಸುನಿಲ್.
ಆದಾಗ್ಯೂ, ವರ್ಸೊವ ಕೊಲಿವಾಡದ ಅನೇಕರು ಪೂರ್ಣಾವಧಿ ಮೀನುಗಾರರಾಗಿಯೇ ಉಳಿದಿದ್ದು, ಸಮುದ್ರ ಮಟ್ಟದ ಏರಿಕೆ, ತಾಪಮಾನದಲ್ಲಿನ ಹೆಚ್ಚಳ, ಮಿತಿಮೀರಿದ ಮೀನುಗಾರಿಕೆ, ಮಾಲಿನ್ಯ, ಮ್ಯಾಂಗ್ರೋವ್ಗಳ ಕಣ್ಮರೆಯ ವಿರುದ್ಧ ಸೆಣಸುತ್ತಲೇ ಮೀನಿನ ಲಭ್ಯತೆ ಹಾಗೂ ಅದರ ಗಾತ್ರದಲ್ಲಿನ ಕುಸಿತದೊಂದಿಗೇ ಮೀನಿನ ವ್ಯಾಪಾರದಲ್ಲಿ ತೊಡಗಿದ್ದಾರೆ. ಕುಟುಂಬದ ವರಮಾನವನ್ನು ಸರಿದೂಗಿಸಲು, 8ನೇ ತರಗತಿಯ ನಂತರ ಶಾಲೆಯನ್ನು ತೊರೆಯಬೇಕಾಗಿ ಬಂದ 28ರ ರಾಕೇಶ್ ಸುಕಛ, ಕೇವಲ ಮೀನುಗಾರಿಕೆಯನ್ನು ಮಾತ್ರವೇ ಅವಲಂಬಿಸಿರುವವರಲ್ಲಿ ಒಬ್ಬರಾಗಿದ್ದಾರೆ. “ಕಾಡಿನಲ್ಲಿ ಸಿಂಹವು ಎದುರಾದಲ್ಲಿ; ಅದನ್ನೆದುರಿಸಬೇಕು. ನೀವು ಓಡಿದಲ್ಲಿ, ಅದು ನಿಮ್ಮನ್ನು ತಿಂದುಹಾಕುತ್ತದೆ. ಅದನ್ನು ಜಯಿಸಿದಲ್ಲಿ ನೀವು ಧೈರ್ಯವಂತರೆನಿಸುತ್ತೀರಿ. ಅಂತೆಯೇ ಕಡಲನ್ನೂ ಎದುರಿಸತಕ್ಕದ್ದು”ಎಂಬುದಾಗಿ ನಮ್ಮ ತಾತ ಕಥೆಯೊಂದನ್ನು ಹೇಳುತ್ತಿದ್ದರೆಂಬುದಾಗಿ ಅವರು ತಿಳಿಸುತ್ತಾರೆ.
ಈ ಕಥಾನಕಕ್ಕೆ ನೀಡಿದ ಸಹಾಯಕ್ಕಾಗಿ ನಾರಾಯಣ್ ಕೊಲಿ, ಜೈ ಭಡ್ಗಾಂವ್ಕರ್, ನಿಖಿಲ್ ಆನಂದ್, ಸ್ಟಾಲಿನ್ ದಯಾನಂದ್ ಮತ್ತು ಗಿರಿಶ್ ಜಥರ್ ಅವರುಗಳಿಗೆ ಲೇಖಕರು ಕೃತಜ್ಞತೆಗಳನ್ನು ಸಲ್ಲಿಸಲು ಬಯಸುತ್ತಾರೆ.
ದೇಶದಾದ್ಯಂತ ಹವಾಮಾನ ವೈಪರೀತ್ಯಗಳ ಬಗೆಗಿನ ಪರಿಯ ವರದಿಗಾರಿಕೆಯು ಪ್ರಾಜೆಕ್ಟ್ ಯು.ಎನ್.ಡಿ.ಪಿ ಯ ಸಹಕಾರದಿಂದ ನಡೆಯಲ್ಪಡುತ್ತಿದ್ದು ಹವಾಮಾನ ವೈಪರೀತ್ಯದ ಗಂಭೀರ ಪರಿಣಾಮಗಳನ್ನು ಜನಸಾಮಾನ್ಯರ ಅನುಭವದ ಮಾತುಗಳಲ್ಲಿ ದಾಖಲಿಸುವ ಗುರಿಯನ್ನಿಟ್ಟುಕೊಂಡಿದೆ.
ಈ ಲೇಖನವನ್ನು ಮರುಪ್ರಕಟಿಸುವ ಆಸಕ್ತಿಯಿದೆಯೇ? ಇದಕ್ಕಾಗಿ ಈ ಇ-ಮೈಲ್ ಗಳನ್ನು ಸಂಪರ್ಕಿಸಿ:
[email protected]
with a cc to
[email protected]
.
ಅನುವಾದ: ಶೈಲಜ ಜಿ. ಪಿ.