“ನನ್ನ ಹಿರಿಯ ಮಗ (ಆಟೋ ರಿಕ್ಷಾ ಚಾಲಕ) ಮತ್ತು ನನ್ನ ಸೊಸೆ, ಬೆಳಿಗ್ಗೆ ಪೋಲೀಸರು ಗಸ್ತು ತಿರುಗುವ ಮೊದಲೇ ತಮ್ಮ ಕೆಲಸಗಳಿಗಾಗಿ ಹೊರಹೋಗುತ್ತಾರೆ. ನನ್ನ ಮಗನು ಆಟೋದಲ್ಲಿ, ಸೊಸೆಯನ್ನು ಆಕೆಯು ಅಡಿಗೆಯ ಕೆಲಸವನ್ನು ನಿರ್ವಹಿಸುವ ಮನೆಗೆ ಕರೆದೊಯ್ಯುತ್ತಾನೆ. ಅವರು ಸಂಜೆಗೆ ಮನೆಗೆ ಮರಳುತ್ತಾರೆ,” ಎಂಬುದಾಗಿ ಹಿರಿಯ ವಯಸ್ಸಿನ ಹೆಂಗಸೊಬ್ಬರು ನನಗೆ ತಿಳಿಸಿದರು. ಶ್ರಮಿಕ ವರ್ಗದ ಜನರು ಹೀಗೆ ರಹಸ್ಯವಾಗಿ ಬೆವರುಹರಿಸುತ್ತಿದ್ದು, ಸ್ಥಿತಿವಂತರು ಈ ಸರ್ವವ್ಯಾಪಿ ವ್ಯಾಧಿಯನ್ನು ತಮ್ಮ ಜೀವನಕ್ಕೆ ಅತ್ಯಂತ ಅಗತ್ಯವಾಗಿದ್ದ ಬಿಡುವು ಎಂಬುದಾಗಿ ಭಾವಿಸುತ್ತಾರೆ. ಮಾರ್ಚ್ 19ರಂದು ಸೂಪರ್ಮಾರ್ಕೆಟ್ನ ಹೊರಗಡೆ ವ್ಯಕ್ತಿಯೊಬ್ಬರು, “ಕೊರೊನಾ ವೈರಸ್ ರಜಾ ದಿನಗಳು ಪ್ರಾರಂಭಗೊಂಡಿವೆ” ಎನ್ನುತ್ತಿದ್ದುದನ್ನು ನಾನು ಆಲಿಸಿದೆ.
ನಮ್ಮ ಮನೆಯ ಬಾಲ್ಕನಿಯಿಂದ ಸಂಗಮೇಶ್ ನಗರದ ಪಕ್ಷಿನೋಟವನ್ನು ನಾವು ಕಾಣಬಹುದು. ನಮ್ಮ ನೆರೆಹೊರೆಯ ಕುಟುಂಬಗಳು ಒಂದು ಅಥವಾ ಎರಡು ಕೋಣೆಗಳ ಒತ್ತೊತ್ತಾಗಿರುವ ಮನೆಗಳಲ್ಲಿ ವಾಸಿಸುತ್ತವೆ. ತಮ್ಮ ಬಹುತೇಕ ಸಮಯವನ್ನು ಅವರು ಮನೆಯ ಹೊರಗಡೆ ಕಳೆಯುತ್ತಾರೆ. ನಮ್ಮ ಕೆಲವು ನೆರೆಹೊರೆಯವರಿಗೆ ದೈಹಿಕ ಅಂತರವನ್ನು ಕಾಯ್ದುಕೊಳ್ಳುವ ಮಹತ್ವವನ್ನು ವಿವರಿಸಲು ನಾವು ಪ್ರಯತ್ನಿಸಿದೆವಾದರೂ, ಸದಾಕಾಲವೂ ಬೇಸಿಗೆಯಿರುವ ಅನಂತಪುರದಲ್ಲಿನ ಶುದ್ಧಗಾಳಿಯ ಕೊರತೆಯಿರುವ ಮನೆಯಲ್ಲಿ, ದಿನಗಟ್ಟಲೆ ಫ್ಯಾನಿನ ಕೆಳಗೆ ಬಂಧಿಯಾಗಿರುವುದು ಸುಲಭವಲ್ಲ. ನಮ್ಮ ಅಕ್ಕಪಕ್ಕದಲ್ಲಿನ ಜನರು ಆಟೋ ಚಾಲಕರು, ತರಕಾರಿ ಮಾರುವವರು, ಹಂದಿಗಳನ್ನು ಸಾಕುವವರು, ಉಪಾಧ್ಯಾಯರು ಮತ್ತು ಮನೆಕೆಲಸದ ಉದ್ಯೋಗದಲ್ಲಿರುವವರು. ಇತರೆ ಅನೇಕರು ಬುಟ್ಟಿಗಳನ್ನು ಅಥವಾ ಕೇರುವ ಮೊರಗಳನ್ನು ಹೆಣೆಯುತ್ತಾರೆ. ಈ ಕೊನೆಯ ಎರಡು ಗುಂಪಿನವರಿಗೆ ಪ್ರತಿದಿನವೂ ಮನೆಯಿಂದಲೇ ಕೆಲಸವನ್ನು ನಿರ್ವಹಿಸುವ (work-from-home) ದಿನವಾಗಿರುತ್ತದೆ. ಲಾಕ್ಡೌನ್ ಹೊರತಾಗಿಯೂ ಅವರು ತಮ್ಮ ಕೆಲಸವನ್ನು ಮುಂದುವರಿಸುತ್ತಾರೆ.
ಬಹುತೇಕ ದಿನಗಳಲ್ಲಿ, ಇಲ್ಲಿನ ಮಕ್ಕಳು ಬೇಗನೇ ಎದ್ದು, ಅನಂತಪುರದಲ್ಲಿ ಅತ್ಯಂತ ಪ್ರಮುಖ ಹಾಗೂ ದುರ್ಲಭ ವಸ್ತುವೆನಿಸಿರುವ ನೀರನ್ನು ಹಿಡಿಯಲು ತಮ್ಮ ತಂದೆ ತಾಯಿಗಳಿಗೆ ನೆರವಾಗುತ್ತಾರೆ. ರೂಪಾಂತರಗೊಳಿಸಿದ ಆಟೋ ರಿಕ್ಷಾಗಳ ಹಿಂಬದಿಯಲ್ಲಿ, ಕೆಲವು ಸ್ಥಳೀಯ ಕಂಪನಿಗಳು ‘ಪರಿಶುದ್ಧ ಕುಡಿಯುವ ನೀರನ್ನು’ ಮಾರುತ್ತವೆ. ಅವರಲ್ಲೊಬ್ಬರು, 2014ರ ತೆಲುಗು ಚಲನಚಿತ್ರದ ಉಲ್ಲಾಸಭರಿತ ಹಾಡೊಂದನ್ನು ಧ್ವನಿವರ್ಧಕದಲ್ಲಿ ಕೇಳಿಸುವ ಮೂಲಕ ಪ್ರತಿದಿನದ ತಮ್ಮ ಉತ್ಪನ್ನದ ಆಗಮನವನ್ನು ಸಾರುತ್ತಾರೆ. ಮಾರ್ಚ್ 30ರಂದು ಸಹ ಇದನ್ನು ಕಾಣಬಹುದಿತ್ತು. ಕೆಲವು ಸ್ತ್ರೀಯರು, ತಮ್ಮ ಪ್ಲಾಸ್ಟಿಕ್ ಬಿಂದಿಗೆಗಳನ್ನು ನೀರಿನಿಂದ ತುಂಬಿಸಿಕೊಂಡರು. ಇತರೆ ಮೂಲಗಳಲ್ಲಿನ ನೀರು, ‘ಬ್ಯಾಕ್ಟೀರಿಯ ಮತ್ತು ವೈರಸ್ನಿಂದ’ ಕಲುಷಿತಗೊಂಡಿರುವ ಈ ಸಮಯದಲ್ಲಿ, ತಮ್ಮ ‘ಪರಿಶುದ್ಧ’ ನೀರನ್ನು ಕೊಳ್ಳುವಂತೆ ಮೊದಲೇ ಧ್ವನಿಮುದ್ರಿಸಿದ್ದ ಕಂಪನಿಯ ಪ್ರಕಟಣೆಯು ಜನರನ್ನು ಪ್ರಚೋದಿಸುತ್ತಿತ್ತು.
ಲಾಕ್ಡೌನ್ನ ನಿಯತ ಕ್ರಮಗಳು ನಿಧಾನವಾಗಿ ಬದಲಾಗುತ್ತಿದ್ದಾಗ್ಯೂ, ಪ್ರತ್ಯೇಕತೆಗೆ ಸಂಬಂಧಿಸಿದಂತೆ, ನಗರ ಪ್ರದೇಶದ ಪ್ರವೃತ್ತಿಯನ್ನು ಕೇಂದ್ರೀಕರಿಸಿದ ಸರ್ಕಾರದ ಸೂಚನೆಗಳನ್ನು ಪಾಲಿಸುವುದು, ಜನರಿಗೆ ಕಷ್ಟದಾಯಕ. ಮಕ್ಕಳು ಬೀದಿಯಲ್ಲಿ ತಮ್ಮ ಆಟಗಳನ್ನು (ಯಾವುದೇ ಪರಿಕರಗಳ ಅವಶ್ಯಕತೆಯಿಲ್ಲದ ಕಣ್ಣಾಮುಚ್ಚಾಲೆ, ಕಳ್ಳ ಪೋಲೀಸ್) ಮುಂದುವರಿಸುತ್ತಾರೆ. ಈ ಮಕ್ಕಳಿಗೆ ಲಾಕ್ಡೌನ್ ಎಂಬುದು ರಜೆಯ ಮುಂದುವರಿಕೆಯಂತೆ. ತಿನಿಸುಗಳನ್ನು ಮಾರುವವರು ತೀರ ಇತ್ತೀಚೆಗಷ್ಟೇ ಮಾರಾಟಕ್ಕೆ ಬರುವುದನ್ನು ನಿಲ್ಲಿಸಿದ್ದಾರೆ. ಹುರಿದ ಕಡಲೆಬೀಜದ ಗುಣಗಾನ ಮಾಡುತ್ತಾ ನಮ್ಮ ಬೀದಿಗೆ ತನ್ನ ಪ್ರವೇಶವನ್ನು ತಿಳಿಯಪಡಿಸುತ್ತಿದ್ದ ಮಾರಾಟಗಾರನು, ಮಾರ್ಚ್ ೨೧ರಂದು ಬರುವುದನ್ನು ನಿಲ್ಲಿಸಿದ್ದಾನೆ. ಮಾರ್ಚ್ ೨೮ರಿಂದ ಐಸ್ಕ್ರೀಂ ಮಾರಾಟಗಾರನು ಸಹ ಕಾಣಿಸಿಕೊಂಡಿರುವುದಿಲ್ಲ. ತರಕಾರಿ ಮಾರಾಟಗಾರನು ತನ್ನ ಮಾರಾಟವನ್ನು ಮುಂದುವರಿಸಿದ್ದಾನೆ.
ನಮ್ಮ ನೆರೆಹೊರೆಯಲ್ಲಿನ ಮನೆಗಳಲ್ಲಿ ಸ್ಥಳಾವಕಾಶವಿಲ್ಲದ ಕಾರಣ, ಅವರೆಲ್ಲರೂ ಇಡೀ ದಿನ ಒಟ್ಟಾಗಿ ಮನೆಯೊಳಗೆ ಇರುವುದು ಅಸಾಧ್ಯವಾಗಿದೆ. ಅತ್ಯವಶ್ಯ ವಸ್ತುಗಳ ದಾಸ್ತಾನು ಅಥವಾ ‘ಸಾಮಾಜಿಕ ಅಂತರವನ್ನು’ ಪಾಲಿಸುವುದೂ ಸಹ ಸಾಧ್ಯವಾಗದ ಮಾತು. ವಯಸ್ಕರು, ನೆಲದಲ್ಲಿ ದಾಳದಿಂದ (dice) ಕೊರೆದ ಚೌಕಗಳ ಸುತ್ತಲೂ ಕುಳಿತು, ತಮ್ಮ ನೆಚ್ಚಿನ ಮೇಕ-ಪುಲಿ ಎಂಬ ಮಣೆ ಆಟದಲ್ಲಿ (board game) ತೊಡಗುವುದನ್ನು ಮುಂದುವರಿಸಿದ್ದಾರೆ.