ಮತ್ತು ಅವರ ದಣಿದ ಕಣ್ಣುಗಳು ಏನನ್ನು ನೋಡುತ್ತವೆ?
ಚದುರಿಹೋದ ಕನಸುಗಳು!
ಛಿದ್ರಗೊಂಡ ಸ್ವರ್ಗದ ಯೋಜನೆ!
(ಶ್ರೀರಂಗಂ ಶ್ರೀನಿವಾಸರಾಯರ 1935ರ 'ಪರಾಜಿತುಲು' ಕವಿತೆಯ ಅನುವಾದ)
ಬೆಳಿಗ್ಗೆ 5:00 ಗಂಟೆಗೆ, ಮನೆ ನೆಲಸಮ ಮಾಡುವ ತಂಡವು ಬಂದಿಳಿಯಿತು. "ನಮ್ಮ ಸಾಮಾನು ಸರಂಜಾಮುಗಳನ್ನು ತೆಗೆದುಕೊಳ್ಳಲು ಬಿಡದೆ ಅವರು ನಮ್ಮನ್ನು ಮನೆಯಿಂದ ಹೊರಹಾಕಿದರು," ಎಂದು ಆ ಪ್ರದೇಶದ ಕೂಲಿ ಕಾರ್ಮಿಕರಾದ ಡಿ. ಗಂಗುಲಮ್ಮ ಹೇಳುತ್ತಾರೆ. ಅವರು ಆಂಧ್ರಪ್ರದೇಶದ ಅನಂತಪುರ ನಗರದಲ್ಲಿರುವ ವಿಜಯನಗರ ಕಾಲೋನಿಯಲ್ಲಿ ವಾಸಿಸುತ್ತಿದ್ದಾರೆ. "ಅವರು ನಮ್ಮ ಬದುಕನ್ನು ಬೀದಿಗೆ ಎಸೆದಿದ್ದಾರೆ."
ಎಂಟು ಬುಲ್ಡೋಜರುಗಳು ಮತ್ತು ಎಂಟು ಮಹಿಳಾ ಪೇದೆಗಳು ಸೇರಿದಂತೆ ಸುಮಾರು 200 ಪೊಲೀಸ್ ಸಿಬ್ಬಂದಿ ಬೆಳಿಗ್ಗೆ 9.00ರ ಸುಮಾರಿಗೆ ಸ್ಥಳದಲ್ಲಿ ಹಾಜರಿದ್ದರು ಎಂದು ನಿವಾಸಿಗಳು ಹೇಳುತ್ತಾರೆ. ನಂತರ ಅವರು 300 ಗುಡಿಸಲುಗಳಲ್ಲಿ ಸುಮಾರು 150 ಗುಡಿಸಲುಗಳನ್ನು ನೆಲಸಮಗೊಳಿಸಿದರು. ಇವುಗಳಲ್ಲಿ ಅನೇಕ ಮನೆಗಳನ್ನು ಕಳೆದ 3-4 ವರ್ಷಗಳಲ್ಲಿ ನಿರ್ಮಿಸಲಾಗಿದೆ. ಕಾಲೊನಿನಲ್ಲಿ ಬಹಳ ಬಡ ಕುಟುಂಬಗಳು ವಾಸಿಸುತ್ತಿದ್ದವು.
ನಾಶವಾದ ಮನೆಗಳ ಹಿಂದೆ, ಮುರಿದ ಪ್ಲಾಸ್ಟಿಕ್ ಬಕೆಟುಗಳು, ಹರಿದ ಪುಸ್ತಕಗಳು, ಒಡೆದ ದೇವರ ಚಿತ್ರಗಳು, ಕಲೆಯಾದ ಬಟ್ಟೆಗಳನ್ನು ಎಲ್ಲೆಂದರಲ್ಲಿ ಹರಡಲಾಗಿದೆ.









