ಒಂದು ಕಾಲದಲ್ಲಿ ವಿದೂಷಕನೆಂದರೆ ರಾಜನ ಇನ್ನೊಂದು ಜೀವ, ಅವನ ಮಿತ್ರ, ಅವನ ಸಲಹೆಗಾರ ಎಲ್ಲವೂ ಆಗಿರುತ್ತಿದ್ದನು. ಅವರು ತಮ್ಮ ನಡುವೆ ಹಲವು ಬಗೆಯ ಪ್ರೇಮದ, ಅನ್ನದ ಕತೆಗಳನ್ನು ಪರಸ್ಪರ ಹೇಳಿಕೊಳ್ಳುತ್ತಿದ್ದರು. ವಿದೂಷಕ ಬದುಕಿನ ಭಾಗವಾಗಿದ್ದ. ಹಾಗಿದ್ದರೆ ಇದೆಲ್ಲ ಹೇಗಾಯಿತು? ಕತ್ತಲೆಯ ಕಾರಾಗೃಹದಲ್ಲಿ ಕುಳಿತ ವಿದೂಷಕ ಯೋಚಿಸುತ್ತಿದ್ದಾನೆ. ರಾಜ ಇದ್ದಕ್ಕಿದ್ದಂತೆ ತಮ್ಮ ಸಂಬಂಧಕ್ಕೆ ನೀಡಿದ ತಿರುವಿಗೆ ಕಾರಣವೇನಿರಬಹುದೆಂದು. ರಾಜನು ಯಾಕೆ ಮನನೊಂದಿದ್ದಾನೆ? ಅವನೊಂದು ವಿವರಣೆಯನ್ನಾದರೂ ಕೊಡಬೇಕಲ್ಲವೆ? ಯಾಕೆ ಹೀಗೆ ದೂರವಾಗಿದ್ದು? ವಿದೂಷಕ ಈಗ ತನ್ನ ಸ್ಥಿತಿ ನೋಡಿಕೊಂಡು ತಾನೇ ನಗುವ ಸ್ಥಿತಿಯಲ್ಲಿರಲಿಲ್ಲ.
ಆದರೆ ರಾಜಧಾನಿಯಲ್ಲಿ ಸಂಗತಿಗಳು ನಾಟಕೀಯವಾಗಿ ಬದಲಾಗಿವೆ. ಅದು ಪ್ಲೇಟೊ ರಿಪಬ್ಲಿಕ್ ಇರಲಿ, ಓಷಿಯಾನಿಯಾವೋ ಅಥವಾ ಭಾರತವೋ ಎನ್ನುವುದು ಮುಖ್ಯವಲ್ಲ. ಈಗ ಮುಖ್ಯ ವಿಷಯವೆಂದರೆ ರಾಜನು ದೇಶದ ಎಲ್ಲೆಡೆ ನಗುವನ್ನು ಅಳಿಸಿ ಹಾಕಲು ಆದೇಶಿಸಿರುವುದು. ಇಲ್ಲಿ ವಿಡಂಬನೆ, ಹಾಸ್ಯ, ವ್ಯಂಗ್ಯ, ನಗೆ ಚಟಾಕಿ, ವ್ಯಂಗ್ಯ ಚಿತ್ರಗಳು, ವ್ಯಂಗ್ಯೋಕ್ತಿಗಳು ಹೀಗೆ ಎಲ್ಲ ಬಗೆಯ ನಗಿಸಬಲ್ಲ ಕಲೆಗಳ ಮೇಲೆ ನಿಷೇಧ ಹೇರಲಾಗಿದೆ.
ಈಗ ಸರಕಾರಿ ಪ್ರಾಯೋಜಿತ ಇತಿಹಾಸಗಳು ಒಪ್ಪಿತ ನಾಯಕರ ಜೀವನ ಚರಿತ್ರೆಗಳ ಹೊರತಾಗಿ ಬಹುಸಂಖ್ಯಾತರ ದೇವರುಗಳು ಮತ್ತು ಅಧಿಕೃತವಾಗಿ ಪ್ರಮಾಣೀಕರಿಸಿದ ದೇಶಭಕ್ತಿಯ ವೀರರನ್ನು ವೈಭವೀಕರಿಸುವ ಮಹಾಕಾವ್ಯಗಳನ್ನು (ನಗೆ ಪೋಲೀಸರು ಅಧಿಕೃತವಾಗಿ ಮತ್ತು ಸರಿಯಾಗಿ ಪರಿಶೀಲಿಸಿದ ನಂತರ) ಮಾತ್ರವೇ ಪ್ರದರ್ಶಿಸಬಹುದಾಗಿದೆ. ಮನಸ್ಸನ್ನು ಪ್ರಚೋದಿಸುವ ಅಥವಾ ಯೋಚನೆಗಳನ್ನು ಪ್ರಚೋದಿಸುವ ಯಾವುದೂ ಮನರಂಜನೆಯಾಗುವಂತಿಲ್ಲ. ನಗುವೆನ್ನುವುದು ಎಲ್ಲಿಯೂ ಕಾಣುವಂತಿಲ್ಲ. ಅದನ್ನು ನ್ಯಾಯಾಲಯದ ಕೋಣೆಗಳಿಂದ, ಸಂಸತ್ತಿನ ಭವನದಿಂದ, ಥಿಯೇಟರ್‌ಗಳಿಂದ, ಪುಸ್ತಕಗಳಿಂದ, ದೂರದರ್ಶನದಿಂದ, ಛಾಯಾಚಿತ್ರಗಳಿಂದ, ಮಕ್ಕಳ ಮುಖದಿಂದ ಹೀಗೆ ಎಲ್ಲೆಡೆಯಿಂದ ಅಳಿಸಿಹಾಕಲಾಗುವುದು.



