ಝಾರಿಯದಲ್ಲಿನ ನಮ್ಮ ಮನೆಯಲ್ಲಿ 4-5 ತಿಂಗಳು ಕರೆಂಟ್ ಇದ್ದಿರಲಿಲ್ಲ. ನಾನು, ನನ್ನ ಅಕ್ಕ ಮತ್ತು ತಮ್ಮ ಒಂದಷ್ಟು ಹೊತ್ತು ಟಾರ್ಚ್ ಬೆಳಕಿನಲ್ಲಿ ಓದುತ್ತಿದ್ದೆವು. ಆದರೆ ಅದು ಹೆಚ್ಚೆಂದರೆ 30 – 45 ನಿಮಿಷಗಳ ಕಾಲ ಮಾತ್ರ ಉರಿಯುತ್ತಿತ್ತು. ನಂತರ ಅದಕ್ಕೆ ಚಾರ್ಜ್ ಮಾಡಬೇಕಿತ್ತು.”
ಸೋಮವಾರಿ ಬಾಸ್ಕೆ 13 ವರ್ಷದ ಸಂತಾಲ್ ಆದಿವಾಸಿ ಬಾಲಕಿಯಾಗಿದ್ದು, ಭಾಟಿನ್ ಮಿಡಲ್ ಶಾಲೆಯಲ್ಲಿ 8 ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಹೇಗಾದರೂ ಮಾಡಿ ಅವಳು ತನ್ನ ಓದನ್ನು ಮುಂದುವರೆಸುವ ಕನಸು ಕಾಣುತ್ತಿದ್ದಾಳೆ: "ನಾನು ಓದಲು ಬಯಸುತ್ತೇನೆ. ಅದೊಂದೇ ನನಗಿರುವ ಕನಸು."
ಝರಿಯಾ ಗ್ರಾಮವು ಜಾದುಗೋಡಾ ವಿಭಾಗಲ್ಲಿದ್ದು 1,000ಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ಇಲ್ಲಿನ ಸಾಕ್ಷರತಾ ಪ್ರಮಾಣವು ಶೇಕಡಾ 59ರಷ್ಟಿದೆ, ಇದು ಜಾರ್ಖಂಡ್ ರಾಜ್ಯದ ಸಾಕ್ಷರತಾ ಪ್ರಮಾಣಕ್ಕಿಂತ (66.41 ಶೇಕಡಾ) ಕಡಿಮೆಯಾಗಿದೆ. ಪೂರ್ವ ಸಿಂಗ್ಭೂಮ್ನಲ್ಲಿರುವ ಈ ಹಳ್ಳಿಯಲ್ಲಿ ಕೇವಲ ಪ್ರಾಥಮಿಕ ಶಾಲೆಯಷ್ಟೇ ಇದೆ, ಹೀಗಾಗಿ ಸೋಂಬಾರ್ ತನ್ನ ಮನೆಯಿಂದ ನಾಲ್ಕು ಕಿಲೋಮೀಟರ್ ದೂರ ಹೋಗಬೇಕಾಗುತ್ತದೆ.
ಈ ವರದಿಗಾರ ಹತ್ತಿರದ ಖಾಡಿಯಾ ಕೊಚಾ ಎಂಬ ಗ್ರಾಮಕ್ಕೆ ಭೇಟಿ ನೀಡಿದ್ದಾಗ, ಸೊಂಬಾರಿಯು ಸಬರ್ ಭಾಷೆಯಿಂದ ಹಿಂದಿಗೆ ಅನುವಾದ ಸಹಾಯ ಮಾಡಿದಳು ಮತ್ತು ಜಾರ್ಖಂಡ್‌ನ ಪೂರ್ವ ಸಿಂಗ್ಭೂಮ್ ಎನ್ನುವ ಈ ಪ್ರದೇಶದ ಸಬರ್ ಆದಿವಾಸಿಗಳೊಂದಿಗೆ ಮಾತನಾಡಲು ವರದಿಗಾರನಿಗೆ ಸಹಾಯ ಮಾಡಿದಳು. ಸಂತಾಲಿ ಭಾಷೆಯಲ್ಲದೆ ಸಬರ್, ಹೋ, ಹಿಂದಿ ಮತ್ತು ಬಂಗಾಳಿ ಭಾಷೆಗಳನ್ನು ಸಹ ಸೊಂಬಾರಿ ಮಾತನಾಡುತ್ತಾಳೆ.
ಟಾರ್ಚ್ ಚಾರ್ಜ್ ಮಾಡಲು ತನ್ನ ಊರಾದ ಝಾರಿಯಾದಿಂದ ಒಂದು ಕಿಲೊಮೀಟರ್ ದೂರದಲ್ಲಿರುವ ಖಡಿಯಾ ಕೋಚಾ ಎನ್ನುವ ಊರಿಗೆ ಹೋಗುತ್ತೇನೆ ಎಂದು ಸೊಂಬಾರಿ ತಾನು ಟಾರ್ಚ್ ಜಾರ್ಜ್ ಮಾಡಿಸಲು ಪಡುವ ಪಾಡನ್ನು ಹಿಂದಿಯಲ್ಲಿ ವಿವರಿಸಿದಳು.
*****
"ಸಮಯಕ್ಕೆ ಸರಿಯಾಗಿ ಬಿಲ್ ಪಾವತಿಸಲು ಸಾಧ್ಯವಾಗದ ಕಾರಣ ನಮ್ಮ ಮನೆಯ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಅವರು [ವಿದ್ಯುತ್ ಇಲಾಖೆ] ನನ್ನ ಅಜ್ಜ ಗುರೈ ಬಾಸ್ಕೆ ಅವರ ಹೆಸರಿನಲ್ಲಿ 16,745 ರೂಪಾಯಿಗಳ ಬಿಲ್ ಕಳುಹಿಸಿದ್ದರು. ಇಷ್ಟು ದೊಡ್ಡ ಮೊತ್ತವನ್ನು ನಾವು ಹೇಗೆ ವ್ಯವಸ್ಥೆ ಮಾಡಲು ಸಾಧ್ಯ?
ಹೀಗಾಗಿ ನಮ್ಮ ಮನೆಯ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದರು.”
"ನಮ್ಮ ಊರಿನಲ್ಲಿ ವಿದ್ಯುತ್ ಸಂಪರ್ಕ ಹೊಂದಿರುವ ಕೆಲವೇ ಮನೆಗಳಿವೆ, ಆದರೆ ನಾವು ನಮ್ಮ ಟಾರ್ಚ್ ಮತ್ತು ಮೊಬೈಲ್ಗಳನ್ನು ಅವರ ಮನೆಗಳಲ್ಲಿ ಚಾರ್ಜ್ ಮಾಡಿಸಿಕೊಳ್ಳಲು ಅವರು ಸಿಟ್ಟಾಗುತ್ತಾರೆ. ಹೀಗಾಗಿ, ಟಾರ್ಚ್ ಚಾರ್ಜ್ ಮಾಡಲು ನೆರೆಯ ಊರಾದ ಖಾರಿಯಾ ಕೋಚಾಗೆ ಹೋಗುತ್ತೇನೆ. ಆ ಊರಿನಲ್ಲಾದರೆ ಅಲ್ಲಿನ ಯಾವುದೇ ಸಬರ್ ಆದಿವಾಸಿ ಕುಟುಂಬದ ಮನೆಯಲ್ಲಿ ಚಾರ್ಜ್ ಮಾಡಿಸಿಕೊಂಡು ಬರಬಹುದು.”
ʼನಮ್ಮ ಊರಿನಲ್ಲಿ ವಿದ್ಯುತ್ ಸಂಪರ್ಕ ಹೊಂದಿರುವ ಕೆಲವೇ ಮನೆಗಳಿವೆ, ಟಾರ್ಚ್ ಚಾರ್ಜ್ ಮಾಡಲು ನೆರೆಯ ಊರಾದ ಖಾರಿಯಾ ಕೋಚಾಗೆ ಹೋಗುತ್ತೇನೆ. ಇದು ನಮ್ಮ ಮನೆಯಿಂದ ಒಂದು ಕಿಲೋಮೀಟರ್ ದೂರದಲ್ಲಿದೆ. ಟಾರ್ಚ್ ಚಾರ್ಜ್ ಮಾಡಿಸದಿದ್ದರೆ ನಾವು ಓದಲು ಸಾಧ್ಯವಿಲ್ಲʼ
"ಚಾರ್ಜ್ ಹಾಕಿ ಮನೆಗೆ ಮರಳಿದ ನಂತರ ಪಾಪಾ [ತಂದೆ] ಅಥವಾ ಚಾಚಾ [ಚಿಕ್ಕಪ್ಪ] ಮಾರುಕಟ್ಟೆಯಿಂದ ಹಿಂತಿರುಗುವವರೆಗೂ ಕಾಯುತ್ತೇನೆ, ಅವರು ಬಂದ ನಂತರ ನನಗೆ ಅವರ ಸೈಕಲ್ ಸಿಗುತ್ತದೆ. ಟಾರ್ಚ್ ಸಂಪೂರ್ಣವಾಗಿ ಚಾರ್ಜ್ ಆಗಲು 3-4 ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ ಮತ್ತುಸೈಕಲ್ ನನ್ನ ಕೈಗೆ ಬಂದ ಕೂಡಲೇ ಟಾರ್ಚ್ ತರಲು ಹೊರಡುತ್ತೇನೆ. ಅದಕ್ಕೆ ನಾನು ದಿನಾಲೂ ಚಾರ್ಜ್ ಹಾಕಲು ಪ್ರಯತ್ನ ಮಾಡಲೇಬೇಕು. ಇಲ್ಲವಾದರೆ ರಾತ್ರಿ ಓದುವುದು ಸಾಧ್ಯವಿಲ್ಲ ನನ್ನ ಅಕ್ಕ ರತ್ನಿ 10ನೇ ತರಗತಿಯಲ್ಲಿ ಓದುತ್ತಿದ್ದಾಳೆ ಮತ್ತು ತಮ್ಮ ಜಿತು 3ನೇ ತರಗತಿಯಲ್ಲಿದ್ದಾನೆ.
“ಕೆಲವೊಮ್ಮೆ ಖಾರಿಯಾ ಕೋಚಾಕ್ಕೆ ಹೋಗಲು ಸಾಧ್ಯವಾಗುವುದಿಲ್ಲ. ಅಂತಹ ದಿನಗಳಲ್ಲಿ ನಾವು ಟ್ಯಾರ್ಚಿನಲ್ಲಿ ಉಳಿದಿರಬಹುದಾದ ಚಾರ್ಜ್ ಬಳಸಿ ಓದುತ್ತೇವೆ ಅಥವಾ ಮೇಣದ ಬತ್ತಿ ಹಚ್ಚಿಕೊಳ್ಳುತ್ತೇವೆ.”
*****
“ಕೆಲವೊಮ್ಮೆ ಖಾರಿಯಾ ಕೋಚಾಕ್ಕೆ ಹೋಗಲು ಸಾಧ್ಯವಾಗುವುದಿಲ್ಲ. ಅಂತಹ ದಿನಗಳಲ್ಲಿ ನಾವು ಟ್ಯಾರ್ಚಿನಲ್ಲಿ ಉಳಿದಿರಬಹುದಾದ ಚಾರ್ಜ್ ಬಳಸಿ ಓದುತ್ತೇವೆ ಅಥವಾ ಮೇಣದ ಬತ್ತಿ ಹಚ್ಚಿಕೊಳ್ಳುತ್ತೇವೆ.”
ಭಾಟಿನ್ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿಗಳು ಭಾಟಿನ್ ಮತ್ತು ಝರಿಯಾದಂತಹ ಇತರ ಹತ್ತಿರದ ಹಳ್ಳಿಗಳಿಂದ ಬರುತ್ತಾರೆ. ಇಲ್ಲಿನ 232 ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ಬುಡಕಟ್ಟು ಸಮುದಾಯಕ್ಕೆ ಸೇರಿದವರು. “ನಾವು ಮಧ್ಯಾಹ್ನದ ಊಟವನ್ನು ಒದಗಿಸುತ್ತೇವೆ ಮತ್ತು ಮೊಟ್ಟೆ ಅಥವಾ ಹಣ್ಣುಗಳನ್ನು ವಿತರಿಸಲು ಆರಂಭಿಸಿದ ನಂತರ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಶಾಲೆಗೆ ಬರತೊಡಗಿದರು" ಎಂದು ಸೊಂಬಾರಿ ಓದುವ ಶಾಲೆಯ ಮುಖ್ಯೋಪಾಧ್ಯಾಯ ದಿನೇಶ್ ಚಂದ್ರ ಭಗತ್ ಹೇಳಿದರು.
ಜಾರ್ಖಂಡ್ ಶಿಕ್ಷಣ ಯೋಜನಾ ಮಂಡಳಿಯ ಅಡಿಯಲ್ಲಿ ಜಾರ್ಖಂಡ್ ಸರ್ಕಾರವು ವಿದ್ಯಾರ್ಥಿಗಳಿಗೆ ಉಚಿತವಾಗಿ ಸಮವಸ್ತ್ರವನ್ನು ಒದಗಿಸುತ್ತದೆ. 1ರಿಂದ 5 ನೇ ತರಗತಿಯ ಪ್ರತಿ ಮಗುವಿಗೆ ಶಾಲಾ ಸಮವಸ್ತ್ರ, ಶೂ ಮತ್ತು ಸಾಕ್ಸ್ ಖರೀದಿಸಲು 600 ರೂ. 6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಬಟ್ಟೆಗೆ 400 ರೂ., ಸ್ವೆಟರ್‌ಗೆ 200 ರೂ., ಶೂ ಮತ್ತು ಸಾಕ್ಸ್ ಗೆ 160 ರೂಪಾಯಿಗಳನ್ನು ನೀಡುತ್ತದೆ.
ಝರಿಯಾ ಗ್ರಾಮದ ಶೇಕಡಾ 94.39ರಷ್ಟು ಜನಸಂಖ್ಯೆಯು ಸಂತಾಲ್, ಮುಂಡಾ, ತಂತಿ ಮತ್ತು ಲೋಹರ್ ಸಮುದಾಯಗಳಿಗೆ ಸೇರಿದೆ ಮತ್ತು ಅವರಲ್ಲಿ ಸಂತಾಲ್ ಆದಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೆಚ್ಚಿನ ಗ್ರಾಮಸ್ಥರು ತಮ್ಮ ಮನೆಗಳನ್ನು ದಿನಗೂಲಿ ಕಾರ್ಮಿಕರಾಗಿ ಸಂಪಾದಿಸುವ ಹಣದಿಂದ ನಡೆಸುತ್ತಿದ್ದರೆ, ಅಲ್ಪ- ಸ್ವಲ್ಪ ಭೂಮಿಯನ್ನು ಹೊಂದಿರುವ ಕುಟುಂಬಗಳು ತಮ್ಮ ಸ್ವಂತ ಬಳಕೆಗಾಗಿ ಭತ್ತವನ್ನು ಬೆಳೆಯುತ್ತವೆ.
"ನನ್ನ ತಂದೆ ದಿವಾರಾಮ್ ಬಾಸ್ಕೆ ದಿನಗೂಲಿ ಕಾರ್ಮಿಕರಾಗಿದ್ದು, ಕೇಬಲ್ ಹಾಕಲು ಗುಂಡಿಗಳನ್ನು ಅಗೆಯುವ ಕೆಲಸ ಮಾಡುತ್ತಾರೆ. ಅವರಿಗೆ ಕೆಲಸ ಸಿಕ್ಕ ದಿನ 300-350 ರೂ.ಗಳ ದಿನಗೂಲಿ ಸಿಗುತ್ತದೆ. ನಮ್ಮ ಮನೆ ಈ ರೀತಿ ನಡೆಯುತ್ತದೆ. ನನ್ನ ಅಜ್ಜ ಸುಮಾರು 7 ಎಕರೆ ಭೂಮಿಯನ್ನು ಹೊಂದಿದ್ದಾರೆ, ಆದರೆ ಭೂಮಿ ಕಲ್ಲಿನಿಂದ ತುಂಬಿಕೊಂಡಿದೆ; ಈ ಕಾರಣದಿಂದಾಗಿ, ನಾವು ನಮ್ಮ ಹೊಲದಲ್ಲಿ ಮನೆ ಬಳಕೆಗಾಗಿ ಒಂದಷ್ಟು ಭತ್ತವನ್ನು ಮಾತ್ರ ಬೆಳೆಯಲು ಸಾಧ್ಯವಾಗುತ್ತದೆ.
“ನನ್ನಮ್ಮ ನಮ್ಮ ಮನೆ ನೋಡಿಕೊಳ್ಳುತ್ತಾರೆ. ಅವರು ಸೌದೆ ತರುವ ಸಲುವಾಗಿ ಆಗಾಗ ಕಾಡಿಗೆ ಹೋಗಬೇಕಿರುತ್ತದೆ. ಅಂತಹ ಸಮಯದಲ್ಲಿ ಮನೆಯ ಕೆಲಸಗಳನ್ನು ನಾನು ನೋಡಿಕೊಳ್ಳುತ್ತೇನೆ. ಇದೇ ಕಾರಣದಿಂದಾಗಿ ನಾನು ಒಮ್ಮೊಮ್ಮೆ ಶಾಲೆಗೆ ರಜೆ ಹಾಕಬೇಕಾಗಿ ಬರುತ್ತದೆ. ನನ್ನ ಅಮ್ಮ ಬಬ್ಲು ಚಾಚಾ [ತಾಯಿಯ ಸಹೋದರ] ನಡೆಸುವ ಸಣ್ಣ ತಿಂಡಿ ಅಂಗಡಿಗೆ ಅಡುಗೆ ಮಾಡಿ ಕೊಡುತ್ತಾರೆ. ಮಾರಾಟವನ್ನು ಅವಲಂಬಿಸಿ ಅವರು ಆ ಮೂಲಕ ದಿನಕ್ಕೆ 50 – 60 ರೂಪಾಯಿಗಳನ್ನು ಗಳಿಸುತ್ತಾರೆ. ಅಪ್ಪನೂ ಕೆಲಸ ಇಲ್ಲದ ದಿನಗಳಲ್ಲಿ ಬಬ್ಲೂ ಚಾಚಾನಿಗೆ ಸಹಾಯ ಮಾಡುತ್ತಾರೆ. ಅವರು ನಮ್ಮ ಸಮುದಾಯದವರಲ್ಲವಾದರೂ ನಮ್ಮ ಕುಟುಂಬದ ಒಂದು ಭಾಗದಂತಿದ್ದಾರೆ.”
ಕೊವಿಡ್-19ರ ಸಮಯದಲ್ಲಿ 87 ಶೇಕಡಾದಷ್ಟು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯಲ್ಲಿ ಸ್ಮಾರ್ಟ್ ಫೋನ್ ಬಳಸುವುದಕ್ಕೆ ಅನುಕೂಲವಿರಲಿಲ್ಲ, ಎನ್ನುತ್ತದೆ ಶಾಲಾ ಶಿಕ್ಷಣದ ಕುರಿತಾದ ವರದಿ: ತರಗತಿಯಲ್ಲಿ ಕತ್ತಲೆ: ಜಾರ್ಖಂಡ್ ರಾಜ್ಯದ ಶಾಲಾ ಬಿಕ್ಕಟ್ಟು . “ಕೊವಿಡ್ ಬಿಕ್ಕಟ್ಟಿನ ಸಮಯದಲ್ಲಿ ಬಡ ಮತ್ತು ಬುಡಕಟ್ಟು ಮಕ್ಕಳು ಶಿಕ್ಷಣ ಪಡೆಯಲಾಗದೆ ಅಸಹಾಯಕರಾಗಿದ್ದರು. ಶಿಕ್ಷಣ ಇಲಾಖೆ ಅವರನ್ನು ಅಂತಹ ಪರಿಸ್ಥಿತಿಗೆ ನೂಕಿತ್ತು. ನಾವು ಪೂರ್ತಿಯಾಗಿ ಆನ್ ಲೈನ್ ಶಿಕ್ಷಣದ ಮೇಲೆ ಅವಲಂಬಿತರಾಗಿದ್ದೆವು. ಇದು ಬಡ ಮಕ್ಕಳಿಗೆ ಮಾಡಿದ ಅನ್ಯಾಯ.”
*****
“ಡಿಸೆಂಬರ್ ತಿಂಗಳು ಆಗಷ್ಟೇ ಆರಂಭವಾಗಿತ್ತು. ಆಗ ನಾನು ನಮ್ಮ ಶಾಲೆಯಲ್ಲಿನ ಕ್ರಿಸ್ಮಸ್ ಪಿಕ್ನಿಕ್ಕಿಗೆ ಹೋಗುವುದು ಹೇಗೆ ಎನ್ನುವ ಚಿಂತೆಯಲ್ಲಿದ್ದೆ. ನನಗೆ ನನ್ನ ಸಹಾಪಾಠಿಗಳೊಡನೆ ಹೋಗಿ ಜಮ್ಷೆಡ್‌ಪುರದ ಡಿಮ್ನಾ ಅಣೆಕಟ್ಟನ್ನು ನೋಡಿಬರಬೇಕೆನ್ನುವುದು ನನ್ನ ಆಸೆಯಾಗಿತ್ತು. ಆದರೆ ಅದಕ್ಕೆ 200 ರೂಪಾಯಿ ಕೊಡಬೇಕಿತ್ತು. ಅಷ್ಟು ಹಣ ಕೊಡುವುದು ನನ್ನ ಕುಟುಂಬಕ್ಕೆ ಕಷ್ಟವಿತ್ತು. ಹೀಗಾಗಿ ನಾನು ಮನೆಯಲ್ಲಿ ಹಣ ಕೇಳಿರಲಿಲ್ಲ. ನಾನು ಬೇರೆಯವರ ಹೊಲದಲ್ಲಿ ಭತ್ತದ ಕೊಯ್ಲಿನ ಕೆಲಸಕ್ಕೆ ಹೋಗಿ ದಿನಕ್ಕೆ 100 ರೂ. ದುಡಿಯುತ್ತಿದ್ದೆ. ಹೀಗೆ ನಾನೇ ಕಷ್ಟಪಟ್ಟು ದುಡಿದು 200 ರೂಪಾಯಿ ಹೊಂದಿಸಿ ಶಾಲೆಗೆ ಪ್ರವಾಸದ ಹಣ ನೀಡಿದ್ದೆ. ಕೊನೆಗೂ ಸ್ನೇಹಿತರ ಜೊತೆ ಹೋಗಿ ಅಣೆಕಟ್ಟು ನೋಡಿ ಸ್ನೇಹಿತರೊಡನೆ ಸಂಭ್ರಮಿಸಿ ಬಂದೆ.
“ಕೊರೋನಾ ಪಿಡುಗಿನ ಸಮಯದಲ್ಲಿ ನಮ್ಮ ಶಾಲೆಯನ್ನು ಮುಚ್ಚಲಾಗಿತ್ತು. ಈಗ ಒಂದು ವರ್ಷದ ಈಚೆಗಷ್ಟೇ ತೆರೆಯಲಾಯಿತು. ಲಾಕ್ ಡೌನ್ ಸಮಯದಲ್ಲಿ ನನಗೆ ಸರಿಯಾಗಿ ಓದಲು ಸಾಧ್ಯವಾಗಲಿಲ್ಲ. ಹೀಗಾಗಿ ಹಿಂದಿನ ಪರೀಕ್ಷೆಯಲ್ಲಿ ನನಗೆ ಒಳ್ಳೆಯ ಅಂಕ ಪಡೆಯಲು ಸಾಧ್ಯವಾಗಲಿಲ್ಲ. ಈಗ ಒಳ್ಳೆಯ ಅಂಕ ಪಡೆಯಲೇಬೇಕೆನ್ನುವ ಛಲದಲ್ಲಿದ್ದೇನೆ.”
“ಈ ವರ್ಷದ ಪರೀಕ್ಷೆ ಮುಗಿಸಿದ ನಂತರ, ಮುಂದಿನ ಓದಿಗಾಗಿ ನಾನು ಜಾದುಗೊರಾದಲ್ಲಿರುವ ಶಾಲೆಗೆ ಸೇರಬೇಕಾಗುತ್ತದೆ. ಇದು ನಮ್ಮೂರಿನಿಂದ 7-8 ಕಿಲೋಮೀಟರ್ ದೂರದಲ್ಲಿದೆ. ಅಲ್ಲಿ ನಾನು ಹೈಸ್ಕೂಲಿಗೆ ಸೇರುತ್ತೇನೆ.”
“ನಾನು ದೊಡ್ಡವಳಾದ ನಂತರ ಲಾಯರ್ ಅಥವಾ ಪೊಲೀಸ್ ಆಫೀಸರ್ ಆಗುತ್ತೇನೆ.”
ಅನುವಾದ: ಶಂಕರ. ಎನ್. ಕೆಂಚನೂರು