"ನಕ್ಷತ್ರಗಳನ್ನ ನಾವು ನೀವು ಕರೆಯೋ ಹೆಸರಿನಿಂದ ಕರೆಯೋದಿಲ್ಲ, ಅವುಗಳಿಗೆ ನಮ್ಮದೇ ಆದ ಹೆಸರುಗಳಿವೆ," ಎಂದು ಮಶ್ರುಭಾಯ್ ಹೇಳುತ್ತಾರೆ. "ತುಮ್ಹಾರ ಧ್ರುವ ತಾರಾ, ಹಮಾರಾ ಪರೋಡಿಯಾ [ನಿಮ್ಮ ಧ್ರುವ ತಾರೆ ನಮ್ಮಲ್ಲಿ ಪರೋಡಿಯಾ].
ನಾವು ವಾರ್ಧಾ ಜಿಲ್ಲೆಯ ಡೆನೋಡಾ ಗ್ರಾಮದಲ್ಲಿ ಅವರು ನಿರ್ಮಿಸಿದ್ದ ತಾತ್ಕಾಲಿಕ ಡೇರೆಯೊಂದರಲ್ಲಿ ಕುಳಿತು ಮಾತನಾಡುತ್ತಿದ್ದೆವು. ಇಲ್ಲಿಂದ ನಾಗಪುರಕ್ಕೆ 60 ಕಿ.ಮೀ ದೂರವಾದರೆ ಅವರ ಮನೆಯಿರುವ ಕಛ್‌ಗೆ 1,300 ಕಿಲೋಮೀಟರ್ ದೂರವಿದೆ.
ಅದು ಮಾರ್ಚ್ ತಿಂಗಳ ಆರಂಭ ಕಾಲ, ಚಳಿ ಹೊಸ್ತಿಲಿನ ಹೊರಗೆ ಕಾಲಿಡುತ್ತಿದ್ದರೆ ಬೇಸಿಗೆ ಕಾಲ ಒಳಗೆ ಬರುವ ಸಮಯ. ನಾವು ತಂಗಿದ್ದ ಈ ರಬರಿ ಡೇರೆಯ ಮೇಲೆ ಮುಸ್ಸಂಜೆಯ ಬೆಳಕು ಬೀಳುತ್ತಿತ್ತು. ಆಕಾಶದಲ್ಲಿ ಕಿತ್ತಳೆ ಬಣ್ಣ ಈ ಸಮಯದಲ್ಲಿ ಬಹಳ ಹೊತ್ತಿನ ತನಕ ಇರುತ್ತದೆ. ಪಲಾಶ್ ಅಥವಾ ಕೆಸುಡೋ (ಬ್ಯೂಟಿಯಾ ಮೊನೊಸ್ಪೆರ್ಮಾ) ಎಂಬ ಕಾಡಿನ ಬೆಂಕಿಂಯಂತೆ ಕಾಣುವ ಹೂವುಗಳು ನೆಲವನ್ನು ಕೇಸರಿ ಬಣ್ಣದಿಂದ ಅಲಂಕರಿಸಿದ್ದವು. ಬಣ್ಣಗಳ ಹಬ್ಬವಾ ಹೋಲಿಯೂ ಹತ್ತಿರದಲ್ಲೇ ಇತ್ತು.
ತಮ್ಮ ಜನರ ನಡುವೆ ಮಶ್ರು ಮಾಮಾ ಎಂದು ಪರಿಚಿತರಾಗಿರುವ ಅವರು ಮತ್ತು ನಾನು ವಿದರ್ಭದ ಈ ಭಾಗದಲ್ಲಿ ಕುಳಿತು ಸಂಜೆಯ ಆಕಾಶ ನೋಡುತ್ತಾ ಮನಸಿಗೆ ಬಂದ ವಿಷಯಗಳೆಲ್ಲದರ ಕುರಿತು ಮಾತನಾಡುತ್ತಿದ್ದೆವು. ಅದೊಂದು ಹತ್ತಿಯ ಹೊಲವಾಗಿತ್ತು ಮತ್ತು ನಾವು ಅದರ ನಡುವೆ ಮಂಚ ಹಾಕಿಕೊಂಡು ಕುಳಿತಿದ್ದೆವು. ನಕ್ಷತ್ರಗಳು, ನಕ್ಷತ್ರಪುಂಜಗಳು, ಬದಲಾಗುತ್ತಿರುವ ಹವಾಮಾನ ಮತ್ತು ಪರಿಸರ ವಿಜ್ಞಾನ, ಅವನ ಜನರು ಮತ್ತು ಪ್ರಾಣಿಗಳ ಅಸಂಖ್ಯಾತ ಮನಸ್ಥಿತಿಗಳು, ಕಠಿಣ ಮತ್ತು ಕಷ್ಟಕರವಾದ ಅಲೆಮಾರಿ ಜೀವನ, ಸದಾ ಚಲನೆಯಲ್ಲಿರುವ ಅವರಿಗೆ ತಿಳಿದಿರುವ ದಂತಕತೆಗಳು, ಜಾನಪದ ಕತೆಗಳು… ಹೀಗೆ ಮಾತುಗಳು ಸಾಗುತ್ತಲೇ ಇದ್ದವು.
ನಕ್ಷತ್ರಗಳಿಗೆ ರಬರಿ ಸಮುದಾಯ ವಿಶೇಷ ಮಹತ್ವವನ್ನು ನೀಡುತ್ತವೆ, ಏಕೆಂದರೆ ಅವರು ತಮ್ಮ ಮಾರ್ಗಗಳಿಗೆ ಮಾರ್ಗದರ್ಶನ ನೀಡಲು ಅವುಗಳನ್ನು ಅವಲಂಬಿಸಿದ್ದಾರೆ, ವಿಶೇಷವಾಗಿ ರಾತ್ರಿಯಲ್ಲಿ. "ಏಳು ನಕ್ಷತ್ರಗಳ ನಕ್ಷತ್ರಪುಂಜವಾದ ಸಪ್ತರ್ಷಿ ಮಂಡಲವನ್ನು ನಾವು ಹರನ್ [ಜಿಂಕೆ] ಎಂದು ಕರೆಯುತ್ತೇವೆ," ಎಂದು ಅವರು ವಿವರಿಸುತ್ತಾರೆ. "ಈ ಏಳು ನಕ್ಷತ್ರಗಳು ಮುಂಜಾನೆ ಹೊತ್ತಿಗೆ ಮಸುಕಾಗುತ್ತವೆ, ಆದರೆ ಅವು ಕತ್ತಲೆಯಿರುವಾಗ ಹೊಸ ಮುಂಜಾನೆಯ ಆಗಮನ, ಹೊಸ ಸವಾಲುಗಳು ಮತ್ತು ಅನೇಕ ಸಾಧ್ಯತೆಗಳನ್ನು ಘೋಷಿಸುತ್ತವೆ," ಎಂದು ಅವರು ತಾತ್ವಿಕವಾಗಿ ಹೇಳುತ್ತಾರೆ.











