ಸಾತ್ಜಲಿಯಾದಲ್ಲಿರುವ ಈ ಏಕೈಕ ಅಂಚೆ ಕಛೇರಿ ನಿಮ್ಮ ಕಣ್ಣಿಗೆ ಬೀಳದೆ ಇರಬಹುದು. ಆದರೆ ಈ ಮಣ್ಣಿನ ಗುಡಿಸಲಿನ ಹೊರಗೆ ನೇತಾಡುತ್ತಿರುವ ಕೆಂಪು ಬಣ್ಣ ಬಳಿದಿರುವ ಲೋಹದ ಟಪಾಲು ಪೆಟ್ಟಿಗೆ ಮಾತ್ರ ನಿಮ್ಮ ಗಮನವನ್ನು ಸೆಳೆಯುತ್ತದೆ.
ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿರುವ ಈ 80 ವರ್ಷ ಹಳೆಯ ಉಪ ಅಂಚೆ ಕಚೇರಿಯು ಏಳು ಗ್ರಾಮ ಪಂಚಾಯತ್‌ಗಳಿಗೆ ಕೆಲಸ ಮಾಡುತ್ತದೆ. ಈ ಮಣ್ಣಿನ ಗುಡಿಸಲು ಸುಂದರ್‌ಬನ್ಸ್‌ನಲ್ಲಿ ವಿನಾಶವನ್ನೇ ಸೃಷ್ಟಿಸಿದ ಐಲಾ ಮತ್ತು ಅಂಫಾನ್‌ನಂತಹ ಸೂಪರ್ ಸೈಕ್ಲೋನ್‌ಗಳನ್ನೂ ತಡೆದುಕೊಂಡಿದೆ. ಈ ಅಂಚೆ ಕಛೇರಿಯು ಇಲ್ಲಿ ಉಳಿತಾಯ ಖಾತೆಗಳನ್ನುಇಟ್ಟುಕೊಂಡಿರುವ ಊರಿನ ಅನೇಕರ ಜೀವನಾಡಿ. ಗುರುತಿನ ಚೀಟಿಗಳಂತಹ ಅವರ ಬೇರೆ ಬೇರೆ ಸರ್ಕಾರಿ ದಾಖಲೆಗಳು ಅಂಚೆಯ ಮೂಲಕ ಇಲ್ಲಿಗೆ ಬರುತ್ತವೆ.
ಗೋಸಬಾ ಬ್ಲಾಕ್ ಮೂರು ನದಿಗಳಿಂದ ಆವೃತವಾಗಿದೆ. ವಾಯುವ್ಯದಲ್ಲಿ ಗೋಮತಿ, ದಕ್ಷಿಣದಲ್ಲಿ ದತ್ತ ಮತ್ತು ಪೂರ್ವದಲ್ಲಿ ಗಂದಾಲ್ ನದಿಗಳು ಹರಿಯುತ್ತವೆ. ಲಕ್ಸ್ಬಗಾನ್ ಗ್ರಾಮದ ನಿವಾಸಿ ಜಯಂತ್ ಮಂಡಲ್, "ಈ ಪೋಸ್ಟ್ ಆಫೀಸ್ ಈ ದ್ವೀಪ ಪ್ರದೇಶದಲ್ಲಿರುವ ನಮ್ಮಂತವರ ಏಕೈಕ ಭರವಸೆ [ಸರ್ಕಾರಿ ದಾಖಲೆಗಳನ್ನು ಪಡೆಯಲು]," ಎಂದು ಹೇಳುತ್ತಾರೆ.
ಸದ್ಯ ಪೋಸ್ಟ್‌ಮಾಸ್ಟರ್ ಆಗಿರುವ ನಿರಂಜನ ಮಂಡಲ್ 40 ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗಿಂತ ಮೊದಲು ಅವರ ತಂದೆ ಪೋಸ್ಟ್‌ಮಾಸ್ಟರ್ ಆಗಿದ್ದರು. ಪ್ರತಿದಿನ ಬೆಳಿಗ್ಗೆ ಅವರು ತನ್ನ ಮನೆಯಿಂದ ಕೆಲ ನಿಮಿಷಗಳ ಕಾಲ ನಡೆದು ತಾವು ಕೆಲಸ ಮಾಡುವ ಈ ಅಂಚೆ ಕಛೇರಿಗೆ ಬರುತ್ತಾರೆ. ಅಂಚೆ ಕಚೇರಿಯ ಸಮೀಪವೇ ಇರುವ ಚಹಾದ ಅಂಗಡಿಗೆ ದಿನವಿಡೀ ಜನರು ಬಂದು ಹೋಗುತ್ತಿರುತ್ತಾರೆ, ಹಾಗಾಗಿ ಅಂಚೆ ಕಚೇರಿಗೆ ಯಾರಾದರೊಬ್ಬರು ಬಂದೇ ಬರುತ್ತಾರೆ.






