ಹೇಮಂತ್ ಕವಾಲೆ ತಮ್ಮ ಹೆಸರಿನ ಮುಂದೆ ಮತ್ತೊಂದು ವಿಶೇಷಣವನ್ನು ಸೇರಿಸಬೇಕೆಂದಿದ್ದಾರೆ.
"ನಾನೊಬ್ಬ ವಿದ್ಯಾವಂತ, ನಿರುದ್ಯೋಗಿ, ಮತ್ತು...ಅವಿವಾಹಿತ," ಎಂದು 30 ವರ್ಷ ವಯಸ್ಸಿನ ಈ ಯುವಕ ತಮ್ಮ ಹಾಗೂ ತಮ್ಮಂತ ಯುವ ರೈತರ ಪರಿಸ್ಥಿತಿಯ ಬಗ್ಗೆ ವ್ಯಂಗ್ಯವಾಡುತ್ತಾರೆ.
“ಸು-ಶಿಕ್ಷಿತ್. ಬೇರೋಜ್ಗಾರ್. ಅವಿವಾಹಿತ್.” ಅವರು ಪ್ರತೀ ಪದವನ್ನು ಒತ್ತಿ ಒತ್ತಿಹೇಳುತ್ತಾರೆ. ಅವರ ಪಾನ್ ಗೂಡಂಗಡಿಯಲ್ಲಿ ಅವರ ಸುತ್ತ ಇರುವ 30 ರ ಹರೆಯದ ಸ್ನೇಹಿತರು ನಗುತ್ತಾ, ತಮ್ಮ ಬ್ಯಾಚುಲರ್ ಜೀವನದ ಬಗೆಗಿನ ಅಸಮಧಾನ ಹಾಗೂ ಮುಜುಗರವನ್ನು ಮರೆಮಾಚುತ್ತಾರೆ. ಅವರ ಮೇಲೂ ಜೋಕ್ ಇದೆಯಂತೆ.
"ಅದು ನಮ್ಮ ದೊಡ್ಡ ಸಮಸ್ಯೆ," ಎಂದು ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಓದಿರುವ ಕವಾಲೆ ಹೇಳುತ್ತಾರೆ.
ನಾವು ಕೃಷಿಕರ ಆತ್ಮಹತ್ಯೆಯಿಂದ ಕಂಗಾಲಾಗಿರುವ ಪೂರ್ವ ಮಹಾರಾಷ್ಟ್ರದ ವಿದರ್ಭದ ಹತ್ತಿಗೆ ಹೆಸರುವಾಸಿಯಾಗಿರುವ ಯವತ್ಮಾಲ್-ದರ್ವಾ ರಸ್ತೆಯಲ್ಲಿರುವ ಸೆಲೋಡಿ ಎಂಬ ಹಳ್ಳಿಯಲ್ಲಿದ್ದೇವೆ. ಇದು ಕೃಷಿ ಬಿಕ್ಕಟ್ಟು ಮತ್ತು ವ್ಯಾಪಕ ವಲಸೆಯಿಂದ ತತ್ತರಿಸಿ ಹೋಗಿರುವ ಗ್ರಾಮ. ಈ ಗ್ರಾಮದ ಮುಖ್ಯ ಚೌಕದಲ್ಲಿರುವ ಕವಾಲೆಯವರ ಗೂಡಂಗಡಿಯ ನೆರಳಿನಲ್ಲಿ ಯುವಕರ ಗುಂಪು ಸಮಯ ಕಳೆಯುತ್ತಿದೆ. ಇವರೆಲ್ಲರೂ ಪದವೀಧರರು ಇಲ್ಲವೇ, ಸ್ನಾತಕೋತ್ತರ ಪದವೀಧರರು. ಇವರೆಲ್ಲರ ಹೆಸರಿನಲ್ಲಿಯೂ ಕೃಷಿ ಭೂಮಿ ಇದೆ. ಆದರೆ ಎಲ್ಲರೂ ನಿರುದ್ಯೋಗಿಗಳು, ಯಾರಿಗೂ ಮದುವೆಯಾಗಿಲ್ಲ.
ಇವರಲ್ಲಿ ಹೆಚ್ಚಿನವರು ಪುಣೆ, ಮುಂಬೈ, ನಾಗಪುರ ಅಥವಾ ಅಮರಾವತಿಯಂತಹ ದೂರದ ನಗರಗಳಲ್ಲಿ ತಮ್ಮ ಭವಿಷ್ಯವನ್ನು ನೋಡುತ್ತಿದ್ದಾರೆ. ಇಲ್ಲಿ ಕಡಿಮೆ ಸಂಬಳಕ್ಕೆ ಕೆಲಕಾಲ ದುಡಿದಿದ್ದಾರೆ. ಉದ್ಯೋಗಕ್ಕಾಗಿ ರಾಜ್ಯ ಅಥವಾ ಕೇಂದ್ರ ಸರ್ಕಾರದ ಸಾರ್ವಜನಿಕ ಸೇವಾ ಆಯೋಗ ಅಥವಾ ಇತರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ವಿಫಲರಾಗಿದ್ದಾರೆ.
ಈ ಭಾಗದ, ಬಹುಶ ದೇಶದಾದ್ಯಂತ ಇರುವ ಅನೇಕ ಯುವಕರಂತೆ, ಕವಾಲೆಯವರೂ ಒಳ್ಳೆಯ ಉದ್ಯೋಗ ಸಿಗಲು ಉತ್ತಮ ಶಿಕ್ಷಣ ಬೇಕು ಎಂದು ಯೋಚಿಸಿದ್ದರು.
ಈಗ ಮದುವೆಯಾಗಲು ಹೆಣ್ಣು ಸಿಗಬೇಕಾದರೆ ಖಾಯಂ ಸರ್ಕಾರಿ ನೌಕರಿ ಬೇಕು ಎಂದು ನಂಬಿದ್ದಾರೆ.
ಆಗಾಗ ಬೇರೆ ಕೆಲಸಗಳನ್ನು ಮಾಡುತ್ತಾ, ಕವಾಲೆಯವರು ಹಳ್ಳಿಯಲ್ಲಿರುವ ತಮ್ಮ ಕುಟುಂಬಕ್ಕೆ ಸೇರಿದ ಜಮೀನಿನ ಹಿಂದೆ ಬಿದ್ದಿದ್ದಾರೆ, ವ್ಯಾಪಾರ ಮಾಡಲು ಗ್ರಾಮದಲ್ಲಿಯೇ ಒಂದು ಅಂಗಡಿಯನ್ನೂ ತೆರೆದಿದ್ದಾರೆ.
"ನಾನು ಪಾನ್ ಗೂಡಂಗಡಿಯೊಂದನ್ನು ತೆರೆಯಲು ನಿರ್ಧರಿಸಿದೆ, ರಸವಂತಿ [ಕಬ್ಬಿನ ಜ್ಯೂಸ್ ಮಾರುವ ಸ್ಟಾಲ್] ನಡೆಸಲು ಸ್ನೇಹಿತನನ್ನು ಕೇಳಿಕೊಂಡೆ ಮತ್ತು ನಂಗೆ ಸ್ವಲ್ಪ ವ್ಯಾಪಾರವಾಗಲಿ ಎಂದು ತಿಂಡಿಗಳನ್ನು ಮಾರುವ ಅಂಗಡಿಯನ್ನು ಹಾಕಲು ಇನ್ನೊಬ್ಬ ಸ್ನೇಹಿತನನ್ನು ಕೇಳಿದೆ," ಎಂದು ತೀಕ್ಷ್ಣ ಬುದ್ಧಿಯ ಕವಾಲೆಯವರು ಹೇಳುತ್ತಾರೆ. "ಪುಣೆಯಲ್ಲಿ ಇದ್ದು ಒಂದು ಪೂರ್ತಿ ಚಪಾತಿ ತಿನ್ನುವ ಬದಲು, ನನ್ನ ಹಳ್ಳಿಯಲ್ಲಿಯೇ ಇದ್ದು ಬೇಕಾದಾಗ ಅರ್ಧ ಚಪಾತಿ ತಿನ್ನುವುದೇ ಉತ್ತಮ," ಎಂದು ಅವರು ಹೇಳುತ್ತಾರೆ.









