"ಏಯ್ ಗಚ್, ಏಯ್ ಘೊರ್, ಈ ಮಾತೀರ್ ಜೆ ಮಾಯಾ, ಸೀ ಮಾಯಾ ಲಿಯೇ ಅಮ್ರಾ ಕುಥಾಯ್ ಜಾಬೋ? [ಈ ಮರ... ಈ ಮನೆ... ಈ ಮಣ್ಣಿನ ಕೋಮಲತೆ... ಈ ಪ್ರೀತಿಯನ್ನು ನಾವು ನಮ್ಮೊಂದಿಗೆ ಎಲ್ಲಿಗೆ ಕೊಂಡೊಯ್ಯಬೇಕು?]"
ಅಪಂಕುರಿ ಹೆಂಬ್ರಮ್ ಆಕ್ರೋಶ ಮತ್ತು ನೋವಿನಲ್ಲಿದ್ದಾರೆ. "ಇದೆಲ್ಲವೂ ನನ್ನದು" ಎಂದು ಈ ಸಂತಾಲ್ ಆದಿವಾಸಿ ಹೇಳುತ್ತಾರೆ, ಹಾಗೆ ಹೇಳುವಾಗ ಅವರ ಕಣ್ಣು ಸುತ್ತಲಿನ ಪರಿಸರವನ್ನು ತೋರಿಸುತ್ತಿತ್ತು. "ನನಗೆ ನನ್ನದೇ ಆದ ಭೂಮಿಯಿದೆ" ಎಂದು 40 ವರ್ಷದ ಅವರು ಭೂಮಿಯ ಕಡೆ ತೋರಿಸುತ್ತಾ ಹೇಳಿದರು. ಅವರ 5-6 ಬಿಘಾ (ಸರಿಸುಮಾರು ಒಂದೂವರೆ ಎಕರೆ) ಭೂಮಿಯನ್ನು ಭತ್ತವನ್ನು ಬೆಳೆಯಲು ಬಳಸಲಾಗುತ್ತದೆ.
“ಇಷ್ಟು ವರ್ಷಗಳಲ್ಲಿ ನಾನಿಲ್ಲಿ ನಿರ್ಮಿಸಿದ ಎಲ್ಲವನ್ನೂ ನೀಡುವುದು ಸರ್ಕಾರಕ್ಕೆ ಸರ್ಕಾರಕ್ಕೆ ಸಾಧ್ಯವೇ” ಪಶ್ಚಿಮ ಬಂಗಾಳದ ಬಿರ್ಭುಮ್ ಜಿಲ್ಲೆಯ ದಿಯೋಚಾ ಪಾಚಮಿ (ದಿಯೂಚಾ ಪಾಚ್ಮಿ ಎಂದೂ ಕರೆಯಲಾಗುತ್ತದೆ) ರಾಜ್ಯ ಕಲ್ಲಿದ್ದಲು ಗಣಿಗಾರಿಕೆ ಯೋಜನೆಯು ಅಪಂಕುರಿಯವರ ಊರಾದ ಹರಿನ್ಸಿಂಗಾ ಸೇರಿದಂತೆ 10 ಗ್ರಾಮಗಳನ್ನು ಅಳಿಸಿಹಾಕಲು ಯೋಜಿಸಿದೆ.
“ಇದೆಲ್ಲವನ್ನೂ ಬಿಟ್ಟು ನಾವೆಲ್ಲಿಗೆ ಹೋಗಬೇಕು? ನಾವು ಎಲ್ಲಿಗೂ ಹೋಗುವುದಿಲ್ಲ” ಎಂದು ಅಪಂಕುರಿ ದೃಢವಾಗಿ ಹೇಳುತ್ತಾರೆ. ಅವರು ಮತ್ತು ಅವರಂತಹ ಸಾಮಾನ್ಯ ಮಹಿಳೆಯರು ಪೊಲೀಸ್ ಮತ್ತು ರಾಜ್ಯ ಸರ್ಕಾರದಂತಹ ಬಲಾಢ್ಯರ ವಿರುದ್ಧ ಸಂಘಟಿತ ಶಕ್ತಿಯನ್ನು ಬಳಸಿಕೊಂಡು ಪ್ರತಿಭಟನಾ ಮೆರವಣಿಗೆಗಳು ಮತ್ತು ಸಭೆಗಳನ್ನು ಆಯೋಜಿಸುತ್ತಿದ್ದಾರೆ. ಅವರು ತಮ್ಮ ಹೋರಾಟದಲ್ಲಿ ಕೋಲು, ಪೊರಕೆ, ಅಡುಗೆ ಮನೆ ಬಳಕೆ ಕತ್ತಿ, ಕೃಷಿ ಉಪಕರಣಗಳು (ಮಚ್ಚಿನಂತಹವು) ಇವುಗಳನ್ನು ರಕ್ಷಣಾತ್ಮಕವಾಗಿ ಹೋರಾಟದಲ್ಲಿ ಬಳಸಿಕೊಳ್ಳುತ್ತಿದ್ದಾರೆ.
ಅಂದು ಚಳಿಯ ಮಧ್ಯಾಹ್ನ ಹರಿನ್ಸಿಂಗ ಗ್ರಾಮದಲ್ಲಿ ಮಧ್ಯಾಹ್ನದ ಸೂರ್ಯ ಪ್ರಕಾಶಮಾನವಾಗಿ ಹೊಳೆಯುತ್ತಿದ್ದ. ಅಪಂಕುರಿ ತಮ್ಮ ಪಕ್ಕದ ಮನೆಯ ಅಂಗಳದಲ್ಲಿ ನಿಂತು ನಮ್ಮೊಡನೆ ಮಾತನಾಡುತ್ತಿದ್ದರು. ಇಟ್ಟಿಗೆ ಗೋಡೆ ಮತ್ತು ಹೆಂಚಿನ ಛಾವಣಿ ಹೊಂದಿದ್ದ ಮನೆ ಊರಿನ ಬಾಗಿಲಿನಲ್ಲೇ ಇತ್ತು.
“ಅವರು ನಮ್ಮ ನೆಲ ತೆಗೆದುಕೊಳ್ಳಬೇಕೆಂದರೆ ಮೊದಲು ನಮ್ಮ ಜೀವವನ್ನು ತೆಗೆಯಬೇಕು” ಎಂದು ಲಬ್ಸಾ ಹೆಂಬ್ರಮ್ ಹೇಳುತ್ತಾರೆ. ಅವರು ಅನ್ನದ ಗಂಜಿ ಮತ್ತು ರಾತ್ರಿ ಉಳಿದ ತರಕಾರಿ ಪಲ್ಯ ಊಟ ಮಾಡುತ್ತಿದ್ದರು. 40 ವರ್ಷದ ಲಬ್ಸಾ ಕ್ರಷರ್ ಕ್ವಾರಿಯೊಂದರಲ್ಲಿ ಕೆಲಸ ಮಾಡುತ್ತಾರೆ. ಅಲ್ಲಿ ದಿನವೊಂದಕ್ಕೆ 200ರಿಂದ 500 ರೂಪಾಯಿಗಳ ತನಕ ಸಂಬಳವಿದೆ.








