“ನಾನು ಈ ಊರಿಗೆ ಯಾಕಾದರೂ ಮದುವೆಯಾದೆನೋ ಎಂದು ಪರಿತಪಿಸುತ್ತಿದ್ದೇನೆ.”
29 ವರ್ಷದ ನವ ವಧುವಾಗಿ ತನ್ನ ಅನುಭವವನ್ನು ಹಂಚಿಕೊಳ್ಳುತ್ತಿದ್ದಾರೆ. ಇದು ಅವರೊಬ್ಬರ ಅಭಿಪ್ರಾಯವಷ್ಟೇ ಅಲ್ಲ. ಶ್ರೀನಗರ ದಾಲ್ ಸರೋವರ ಪ್ರದೇಶದ ನಿವಾಸಿಗಳು ಇಲ್ಲಿಗೆ ಮದುವೆಯಾಗಿ ಬರಲು ಯಾರಿಗೂ ಇಷ್ಟವಿಲ್ಲ ಎನ್ನುತ್ತಾರೆ. “ನಾವು ಈಗಾಗಲೇ ಮೂರು ಕಡೆಯಿಂದ ಇಲ್ಲ ಅನ್ನಿಸಿಕೊಂಡಿದ್ದೇವೆ” ಎನ್ನುತ್ತಾರೆ ತನ್ನ ಹಿರಿಯ ಮಗನಿಗಾಗಿ ಹೆಣ್ಣು ಹುಡುಕುತ್ತಿರುವ ಗುಲ್ಷನ್ ನಜೀರ್. “ಮದುವೆ ದಲ್ಲಾಳಿಗಳು ಸಹ ಇಲ್ಲಿಗೆ ಬರುವುದನ್ನು ನಿಲ್ಲಿಸಿದ್ದಾರೆ.”
ಇದಕ್ಕೆ ಕಾರಣವೆಂದರೆ ನೀರಿನ ಕೊರತೆ ಎನ್ನುತ್ತಾರೆ ಈ ಬಾರೋ ಮೊಹಲ್ಲಾದ ತಾಯಿ. ತಮಾಷೆಯೆಂದರೆ ಈ ಊರು ರಾಜ್ಯದ ಅತಿದೊಡ್ಡ ಸಿಹಿ ನೀರಿನ ಸರೋವರನ್ನು ಹೊಂದಿದೆ.
"ಒಂಬತ್ತು ವರ್ಷಗಳ ಹಿಂದೆ, ನಾವು ನಮ್ಮ ದೋಣಿಗಳನ್ನು ತೆಗೆದುಕೊಂಡು ಹೋಗಿ ದಾಲ್ ಸರೋವರದ ವಿವಿಧ ಸ್ಥಳಗಳಿಂದ ನೀರನ್ನು ಸಂಗ್ರಹಿಸುತ್ತಿದ್ದೆವು" ಎಂದು ಬಡಗಿಯಾಗಿ ಕೆಲಸ ಮಾಡುತ್ತಿರುವ ಮುಷ್ತಾಕ್ ಅಹ್ಮದ್ ಹೇಳುತ್ತಾರೆ. "ಆಗೆಲ್ಲ ನೀರಿನ ಟ್ಯಾಂಕರುಗಳು ಇರಲಿಲ್ಲ."
ಆದರೆ ಕಳೆದ ಒಂದು ದಶಕದಿಂದೀಚೆಗೆ, ಮುಷ್ತಾಕ್, ಬೆಳಿಗ್ಗೆ 9 ಗಂಟೆಗೆ ಮುಖ್ಯ ರಸ್ತೆಯಲ್ಲಿ ಬರುವ ಸರ್ಕಾರಿ ನೀರಿನ ಟ್ಯಾಂಕರುಗಳಿಗಾಗಿ ಕಾಯುತ್ತಿದ್ದಾರೆ. ಗುಡೂ ಮೊಹಲ್ಲಾದಲ್ಲಿ ವಾಸಿಸುವ ಅವರ 10 ಸದಸ್ಯರ ಕುಟುಂಬವು ಅವರನ್ನು ಅವಲಂಬಿಸಿದೆ. ಪರಿಸ್ಥಿತಿಯನ್ನು ಸರಾಗವಾಗಿಸಲು, ಅವರು 20,000-25,000 ರೂ.ಗಳನ್ನು ಖರ್ಚು ಮಾಡಿ ನೀರು ಶೇಖರಣಾ ಟ್ಯಾಂಕುಗಳನ್ನು ಸಹ ಖರೀದಿಸಿದರು ಮತ್ತು ಪೈಪ್ ಲೈನ್ ಹಾಕಿಸಿದರು. "ಕಾಶ್ಮೀರದಲ್ಲಿ ಚಳಿಗಾಲದಲ್ಲಿ ದೊಡ್ಡ ಸಮಸ್ಯೆಯಾಗಿರುವ ವಿದ್ಯುತ್ ಇದ್ದರೆ ಮಾತ್ರ ಈ ವ್ಯವಸ್ಥೆ ಕಾರ್ಯನಿರ್ವಹಿಸುತ್ತದೆ" ಎಂದು ಅವರು ಹೇಳುತ್ತಾರೆ. ಈ ತಿಂಗಳು (ಮಾರ್ಚ್) ಟ್ರಾನ್ಸ್ಫಾರ್ಮರಿನಲ್ಲಿನ ದೋಷದಿಂದಾಗಿ ಅವರು ನೀರನ್ನು ಮತ್ತೆ ಬಕೆಟ್ ಮೂಲಕ ಸಾಗಿಸಬೇಕಾಯಿತು.






















