“ನಾನು ಮತ್ತೆ ನನ್ನಮ್ಮ ಇದೇ ವಿಷಯವಾಗಿ ನಿನ್ನೆ ರಾತ್ರಿ ಜಗಳವಾಡಿದೆವು” ಎನ್ನುತ್ತಾರೆ 21 ವರ್ಷ ವಯಸ್ಸಿನ ಆಶಾ ಬಸ್ಸಿ. “ಕಳೆದ ಮೂರೂವರೆ ವರ್ಷದಿಂದ ಮನೆಯಲ್ಲಿ ಓದು ಬಿಟ್ಟು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದಾರೆ” ಎಂದು ಆಕೆ ವಿವರಿಸುತ್ತಾರೆ.
ಯವತ್‌ಮಳ್ ನಗರದ ಸಾವಿತ್ರಿ ಜ್ಯೋತಿರಾವ್ ಸಮಾಜಕಾರ್ಯ ಮಹಾವಿದ್ಯಾಲಯದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಯಾಗಿರುವ ಆಶಾ ಸೋಷಿಯಲ್ ವರ್ಕ್ ವಿಷಯದಲ್ಲಿ ಪದವಿಗಾಗಿ ಓದುತ್ತಿದ್ದಾರೆ. ಅವರು ತಮ್ಮ ಕುಟುಂಬದಲ್ಲೇ ಔಪಚಾರಿಕ ಶಿಕ್ಷಣ ಪಡೆಯುತ್ತಿರುವವರಲ್ಲಿ ಮೊದಲಿಗರಲ್ಲಿ ಒಬ್ಬರು. “ನಮ್ಮಲ್ಲಿ ಬೇಗನೆ ಮದುವೆಯಾಗುವ ಹುಡುಗಿಯರನ್ನು ಹೊಗಳಲಾಗುತ್ತದೆ. ಆದರೆ ನಾನು ಓದಲು ಬಯಸುತ್ತೇನೆ. ಇದೊಂದೇ ನನಗೆ ಸ್ವಾತಂತ್ರ್ಯ ಕೊಡಬಲ್ಲ ದಾರಿ” ಎಂದು ಅವರು ಹೇಳುತ್ತಾರೆ.
ಆಶಾ ಮಹಾರಾಷ್ಟ್ರದ ಯವತ್ಮಾಲ್ ಜಿಲ್ಲೆಯ ಜೇವಾಲಿ ಗ್ರಾಮದವರಾಗಿದ್ದು, ಮಥುರಾ ಲಭಾನ್ ಸಮುದಾಯಕ್ಕೆ ಸೇರಿದವರು. ಈ ಸಮುದಾಯವನ್ನು ರಾಜ್ಯದಲ್ಲಿ ಡಿ-ಅಧಿಸೂಚಿತ ಬುಡಕಟ್ಟು (ವಿಮುಕ್ತ ಜಾತಿ) ಎಂದು ಗುರುತಿಸಲಾಗಿದೆ. ಅವರ ಪೋಷಕರು ರೈತರಾಗಿದ್ದು, ಜೇವಾಲಿಯಲ್ಲಿರುವ ತಮ್ಮ ಒಡೆತನದ ಭೂಮಿಯಲ್ಲಿ ಸೋಯಾ, ಹತ್ತಿ, ಗೋಧಿ ಮತ್ತು ರಾಗಿಯನ್ನು ಬೆಳೆಯುತ್ತಾರೆ.
ಕುಟುಂಬವು ತಮ್ಮ ನಾಲ್ಕು ಮಕ್ಕಳ ಪೋಷಣೆಗೆ ಕೃಷಿಯನ್ನು ಅವಲಂಬಿಸಿದೆ - ಮೂರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ. ಅವರಲ್ಲಿ ಆಶಾ ಹಿರಿಯರಾಗಿದ್ದು, ಅವರು ಯವತ್ಮಳ್ ನಗರದಲ್ಲಿ ತಮ್ಮ ಅಮ್ಮನ ಸಹೋದರ ಮತ್ತು ಅವರ ಪತ್ನಿಯೊಂದಿಗೆ ಉಳಿದುಕೊಂಡು ಪದವಿ ಓದುತ್ತಿದ್ದಾರೆ.
ಆಶಾರ ಪೋಷಕರು ಕೆಲವು ಸ್ಥಳೀಯ ಶಿಕ್ಷಕರ ಒತ್ತಾಯದ ಮೇರೆಗೆ 7ನೇ ವಯಸ್ಸಿನಲ್ಲಿ ತಮ್ಮ ಮನೆಯ ಹತ್ತಿರದ ಜಿಲ್ಲಾ ಪರಿಷತ್ (ಜಿಪ) ಶಾಲೆಗೆ ಮಗಳನ್ನು ದಾಖಲಿಸಿದರು. ಅವರು 3ನೇ ತರಗತಿಯವರೆಗೆ ಅಲ್ಲಿ ಓದಿದರು, ನಂತರ ಜೇವಾಲಿಯಿಂದ 112 ಕಿ.ಮೀ ದೂರದಲ್ಲಿರುವ ಯವತ್ಮಳ್ ನಗರಕ್ಕೆ ತೆರಳಿದರು. ಅಲ್ಲಿ ಅವರು ಮಹಾರಾಷ್ಟ್ರ ರಾಜ್ಯ ಮಂಡಳಿಯೊಂದಿಗೆ ಸಂಯೋಜಿತವಾಗಿರುವ ಶಾಲೆಯಲ್ಲಿ ಓದಿದರು ಮತ್ತು ಅಂತಿಮವಾಗಿ ಹತ್ತಿರದ ಕಾಲೇಜಿಗೆ ಸೇರಿದರು.
“ಸಾಮಾನ್ಯವಾಗಿ ನಮ್ಮ ಸಮುದಾಯದ ಹೆಣ್ಣುಮಕ್ಕಳು 7ನೇ ತರಗತಿಯ ತನಕ ಓದುತ್ತಾರೆ, ನಂತರ ಅವರು ಕ್ರಮೇಣ ಶಾಲೆಯಿಂದ ಹೊರಗುಳಿಯುತ್ತಾರೆ. ಕೆಲವರಷ್ಟೇ ಕಾಲೇಜು ಮೆಟ್ಟಿಲು ಹತ್ತುತ್ತಾರೆ” ಎನ್ನುತ್ತಾರೆ ಆಶಾ. ಅವರ ತಂಗಿಗೂ ಮೂರು ವರ್ಷಗಳ ಕೆಳಗೆ ಮದುವೆ ಮಾಡಿಸಲಾಯಿತು.
“ನಮ್ಮದು ಸಂಪ್ರದಾಯವಾದಿ ಸಮುದಾಯ” ಎಂದು ಆಶಾ ಹೇಳುತ್ತಾರೆ. ಹುಡುಗಿಯರು ಇತರ ಜಾತಿಯವರನ್ನು ಪ್ರೇಮಿಸಿ ಮದುವೆಯಾಗಬಹುದು ಎನ್ನುವ ಮನೆಯವರ ಭಯವು ಹೆಣ್ಣುಮಕ್ಕಳನ್ನು ಮದುವೆಯ ಒತ್ತಡಕ್ಕೆ ದೂಡುತ್ತದೆ. “ಹುಡುಗಿಯೊಬ್ಬಳು ತನ್ನ ಪ್ರೇಮಿಯೊಂದಿಗೆ ಓಡಿ ಹೋದರೆ ಆಕೆಯ ಸ್ನೇಹಿತೆಯರನ್ನು ಸಹ ಶಾಲೆಯಿಂದ ಹೊರಗಿಡಲಾಗುತ್ತದೆ” ಎನ್ನುವ ಆಶಾ “ನಮ್ಮ ಸಮುದಾಯದಲ್ಲಿ ಇನ್ನೊಂದು ಜಾತಿಯ ಹುಡುಗನನ್ನು ಮದುವೆಯಾದ ಹುಡುಗಿಯ ಪರಿಚಯ ನನಗಿಲ್ಲ” ಎಂದು ಹೇಳುತ್ತಾರೆ.
ಕೋವಿಡ್ -19 ಸಾಂಕ್ರಾಮಿಕ ಪಿಡುಗಿನ ಸಮಯದಲ್ಲಿ ಮದುವೆಯ ಒತ್ತಡ ಹೆಚ್ಚಾಯಿತು, ಈ ಸಮಯದಲ್ಲಿ ತಾನು ಜೇವಾಲಿ ಗ್ರಾಮದಲ್ಲೇ ಇದ್ದೆ ಎಂದು ಆಶಾ ಹೇಳುತ್ತಾರೆ. ಆ ಸಮಯದಲ್ಲಿ ಮದುವೆಗಾಗಿ ಕೆಲವು ಗಂಡುಗಳನ್ನು ಸಹ ನೋಡಲಾಗಿತ್ತು. "ಕೋವಿಡ್ ಸಮಯದಲ್ಲಿ, ನಾನಿರುವ ಪ್ರದೇಶದ 21 ವರ್ಷಕ್ಕಿಂತ ಕಡಿಮೆ ವಯಸ್ಸಿನ 30ಕ್ಕೂ ಹೆಚ್ಚು ಹುಡುಗಿಯರಿಗೆ ಮದುವೆ ಮಾಡಲಾಯಿತು" ಎಂದು ಆಶಾ ಹೇಳುತ್ತಾರೆ.
ಜೇವಾಲಿಯಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹವಿಲ್ಲದ ಕಾರಣ ಮದುವೆಯನ್ನು ಮುಂದೂಡಲು ಶಿಕ್ಷಣವನ್ನು ಒಂದು ಮಾನ್ಯ ಕಾರಣವನ್ನಾಗಿ ನೋಡುವುದಿಲ್ಲ. “ನನ್ನ ತಂಗಿಗೆ ಮದುವೆಯಾಗಿ ನನಗೆ ಮದುವೆಯಾಗದಿರುವ ಕಾರಣ ಜನರು ನನ್ನತ್ತ ಅನುಮಾನದಿಂದ ನೋಡುತ್ತಾರೆ” ಎಂದು ಆಶಾ ಹೇಳುತ್ತಾರೆ.
“ಏನೇ ಮಾಡಿದರೂ [ಶಿಕ್ಷಣದ ಸಲುವಾಗಿ] ನಾನೇ ಮಾಡಿಕೊಳ್ಳುತ್ತೇನೆ” ಎನ್ನುವ ಆಶಾರ ಮಾತಿನಲ್ಲಿ ಶಿಕ್ಷಣಕ್ಕೆ ಕುಟುಂಬದ ಬೆಂಬಲದ ಕೊರತೆಯಿರುವುದು ಎದ್ದು ಕಾಣುತ್ತದೆ. ಕುಟುಂಬದಲ್ಲಿ ಅವರೇ ಮೊದಲ ಪದವಿ ವಿದ್ಯಾರ್ಥಿಯಾಗಿರುವುದರಿಂದಾಗಿ ಅವರಿಗೆ ಅಷ್ಟಾಗಿ ಮನೆಯವರಿಂದ ಮಾರ್ಗದರ್ಶನವೂ ಸಿಗುವುದಿಲ್ಲ. ಆಕೆಯ ತಂದೆ ಬಾಲ್ಸಿಂಗ್ ಬಸ್ಸಿ 11ನೇ ತರಗತಿಯವರೆಗೆ ಮತ್ತು ತಾಯಿ ವಿಮಲ್ 5ನೇ ತರಗತಿಯವರೆಗೆ ಓದಿದ್ದಾರೆ. "ಈಗಲೂ, ನಾನು ಹೆಣ್ಣಾಗಿರುವುದರಿಂದಾಗಿ ಅವರು ನನ್ನ ಶಿಕ್ಷಣದಿಂದ ಹೆಚ್ಚಿನದೇನನ್ನೂ ಎದುರು ನೋಡುತ್ತಿಲ್ಲ” ಎಂದು ಆಶಾ ಹೇಳುತ್ತಾರೆ. ಶಿಕ್ಷಣವನ್ನು ಬಯಸುವುದೆಂದರೆ “ಲೋಟ್ಯಾಚ್ಚ ಕಾಮ್” ಆಗಿಬಿಟ್ಟಿದೆ – ಅದು ಸಾಕಷ್ಟು ದೈಹಿಕ ಮತ್ತು ಮಾನಸಿಕ ಹೋರಾಟವನ್ನು ಒಳಗೊಂಡಿದೆ.
“ನನ್ನ ವಿದ್ಯೆಯ ವಿಷಯದಲ್ಲಿ ನಮ್ಮ ಮನೆಯ ಯಾರೂ ನನ್ನೊಂದಿಗೆ ನಿಂತಿಲ್ಲ” ಎನ್ನುವ ಆಶಾ “ಕನಿಷ್ಟ ಅಮ್ಮನಾದರೂ ʼತು ಕರ್, ಮಿ ತುಝ್ಯಾ ಪಾಟಿಶಿ ಆಹೆ [ನೀನು ಓದು, ನಿನ್ನ ಹಿಂದೆ ನಾನಿದ್ದೇನೆ]ʼ ಎನ್ನಬೇಕಿತ್ತು ಎನ್ನುವುದು ನನ್ನ ಬಯಕೆ” ಎನ್ನುತ್ತಾರೆ. ವಿಪರ್ಯಾಸವೆಂದರೆ ಅಮ್ಮನೇ ನನ್ನ ಓದಿನ ಬಲವಾದ ಟೀಕಾಕಾರ್ತಿ ಎನ್ನುತ್ತಾರೆ ಆಶಾ.
ಜೇವಾಲಿಗೆ ಹತ್ತಿರದ ಕಾಲೇಜು 12 ಕಿ.ಮೀ ದೂರದಲ್ಲಿರುವ ಬಿತ್ತರಗಾಂವ್ ಗ್ರಾಮದಲ್ಲಿದೆ. "ಶಾಲೆಗೆ ಒಬ್ಬಂಟಿಯಾಗಿ ಹೋಗಿ ಬರುವುದೆಂದರೆ ಪೋಷಕರು ತಮ್ಮ ಮಗಳ ಸುರಕ್ಷತೆಯ ಬಗ್ಗೆ ಭಯಪಡುತ್ತಾರೆ. ಹೀಗಾಗಿ ಹುಡುಗಿಯರು ಸಾಮಾನ್ಯವಾಗಿ ಗುಂಪಿನಲ್ಲಿ ಪ್ರಯಾಣಿಸುತ್ತಾರೆ" ಎಂದು ಆಶಾ ಹೇಳುತ್ತಾರೆ, ದೃಢವಾದ ಶೈಕ್ಷಣಿಕ ಮೂಲಸೌಕರ್ಯವು ಹುಡುಗಿಯರ ಶಿಕ್ಷಣಕ್ಕೆ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಇದು ಎತ್ತಿ ತೋರಿಸುತ್ತದೆ. “ಒಬ್ಬಳು ಶಾಲೆ ಬಿಟ್ಟರೆ ಉಳಿದ ಪೋಷಕರೂ ತಮ್ಮ ಮಗಳನ್ನು ಶಾಲೆ ಬಿಡಿಸುತ್ತಾರೆ. ಜೊತೆಗೆ ಹೋಗುವುದಕ್ಕೆ ಯಾರೂ ಇರುವುದಿಲ್ಲ ಎನ್ನುವುದು ಇದರ ಹಿಂದಿನ ಕಾರಣ."
ಯವತ್ಮಳ್ ನಗರಕ್ಕೆ ಓದಲು ಬಂದ ದಿನಗಳು ಸುಲಭವಾಗಿರಲಿಲ್ಲ ಎಂದು ಆಶಾ ನೆನಪಿಸಿಕೊಳ್ಳುತ್ತಾರೆ. ಅವರು ಮಥುರಾ ಲಭಾನ್ ಎನ್ನುವ ಉಪಭಾಷೆಯಲ್ಲಿ ಮಾತನಾಡುತ್ತಿದ್ದರು. ಇದು ಅವರ ಬೋಧನಾ ಮಾಧ್ಯಮವಾದ ಮರಾಠಿಗಿಂತಲೂ ಭಿನ್ನವಾಗಿತ್ತು. ಇದರಿಂದಾಗಿ ಅವರಿಗೆ ತರಗತಿಯಲ್ಲಿ ಅಥವಾ ಶಾಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಕಷ್ಟವೆನ್ನಿಸುತ್ತಿತ್ತು. “ನನ್ನ ಸಹಪಾಠಿಗಳು ನನ್ನ ಭಾಷೆಯನ್ನು ಅಪಹಾಸ್ಯ ಮಾಡುತ್ತಿದ್ದರು” ಎನ್ನುವ ಆಶಾ, “ತರಗತಿಯಲ್ಲಿ ನನ್ನ ಭಾಷೆಯಲ್ಲಿ ಮಾತನಾಡಿದರೆ ಅವರು ನನ್ನನ್ನು ನೋಡಿ ನಗಬಹುದು ಎಂದು ನಾನು ಹೆದರುತ್ತಿದ್ದೆ” ಎಂದು ಹೇಳುತ್ತಾರೆ.
ಈ ಹಿಂಜರಿಕೆಯು ಶಾಲೆಯಲ್ಲಿ ಆಶಾರ ಪ್ರಗತಿಯನ್ನು ತಡೆಯಿತು. "6ನೇ ತರಗತಿಯವರೆಗೆ ನಾನು ಮರಾಠಿ ವರ್ಣಮಾಲೆಗಳನ್ನು ಬರೆಯಲು ಮಾತ್ರ ಕಲಿತಿದ್ದೆ ಮತ್ತು ಪೂರ್ಣ ವಾಕ್ಯಗಳನ್ನು ಬರೆಯಲು ಬರುತ್ತಿರಲಿಲ್ಲ. ನನಗೆ 5 ನೇ ತರಗತಿಯವರೆಗೆ ಕುತ್ರ [ನಾಯಿ] ಮತ್ತು ಮಂಜಾರ್ [ಬೆಕ್ಕು] ರೀತಿಯ ಮೂಲ ಪದಗಳನ್ನು ಸಹ ಓದಲು ಬರುತ್ತಿರಲಿಲ್ಲ ".
ಆದರೆ 10ನೇ ತರಗತಿಯ ಮಹಾರಾಷ್ಟ್ರ ರಾಜ್ಯ ಬೋರ್ಡ್ ಸೀನಿಯರ್ ಸೆಕೆಂಡರಿ ಸ್ಕೂಲ್ ಸರ್ಟಿಫಿಕೇಟ್ (ಎಸ್ಎಸ್ಸಿ) ಪರೀಕ್ಷೆಯಲ್ಲಿ ಶೇಕಡಾ 79ರಷ್ಟು ಅಂಕಗಳನ್ನು ಗಳಿಸಿದಾಗ ಅವರ ಎಲ್ಲಾ ಹಿಂಜರಿಕೆಗಳು ಮಾಯವಾದವು ಮತ್ತು ತನಗೆ ಶಿಕ್ಷಣ ಮುಂದುವರೆಸಲು ಸಹಾಯ ಮಾಡುವಂತೆ ತನ್ನ ಮಾವನ ಮನವೊಲಿಸುವಲ್ಲಿ ಯಶಸ್ವಿಯಾದರು. 12ನೇ ತರಗತಿಯಲ್ಲಿ ಅವರು ಶೇ.63ರಷ್ಟು ಅಂಕ ಗಳಿಸಿದ್ದರು.
ಆಶಾರ ಶೈಕ್ಷಣಿಕ ಸಾಧನೆಗಳು, ಅವರ ಸುತ್ತಲಿನವರಿಗೆ ಆಗಲೂ ಮುಖ್ಯವೆನ್ನಿಸಿರಲಿಲ್ಲ - "ನನ್ನ ಪೋಷಕರು ತಮ್ಮ ಮಗಳು ನಗರದಲ್ಲಿ ಪದವಿ ಪದವಿಯನ್ನು ಪಡೆಯುತ್ತಿದ್ದಾಳೆ ಎಂದು ಹೆಮ್ಮೆಯಿಂದ ಹೇಳಲು ಸಾಧ್ಯವಿಲ್ಲ ಏಕೆಂದರೆ ಇದು ನಮ್ಮ ಸಮಾಜದಲ್ಲಿ ಯೋಗ್ಯ ಸಾಧನೆಯಲ್ಲ."
ಈ ಬೇಗನೇ ಮದುವೆ ಮಾಡುವ ರಿವಾಜಿನಿದಾಗಿ ಹೆಣ್ಣುಮಕ್ಕಳಲ್ಲಿನ ಶಿಕ್ಷಣದ ಉತ್ಸಾಹವೇ ಕುಗ್ಗಿ ಹೋಗುತ್ತದೆ. ”16 ನೇ ವಯಸ್ಸಿನಲ್ಲಿ ಮದುವೆಯಾಗುವುದು ಖಚಿತವಾಗಿದ್ದರೆ, ಹುಡುಗಿಯರು ಶಿಕ್ಷಣ ಪಡೆಯಲು ಏಕೆ ಕಷ್ಟಪಡುತ್ತಾರೆ?" ಎಂದು ಆಶಾ ಕೇಳುತ್ತಾರೆ. ಆದರೂ ಅವರು ತನ್ನ ಮಹತ್ವಾಕಾಂಕ್ಷೆಯ ಕುರಿತು ಉತ್ಸಾಹ ಕಳೆದುಕೊಂಡಿಲ್ಲ. ತನ್ನ ಶಿಕ್ಷಣದ ಕುರಿತು ಆತ್ಮವಿಶ್ವಾಸ ಹೊಂದಿರುವ ಅವರು, “ಶಿಕ್ಷಣ ಪಡೆದರಷ್ಟೇ ನಾನು ಸುರಕ್ಷಿತ ಭವಿಷ್ಯದ ಕನಸನ್ನು ಕಾಣಲು ಸಾಧ್ಯ: ಎನ್ನುತ್ತಾರೆ.
ಆಶಾ ಓದುವುದನ್ನು ಆನಂದಿಸುತ್ತಾರೆ. ಸರಿತಾ ಅವಾದ್ ಅವರ ಹಮ್ರಸ್ತಾ ನಕರ್ತಾನಾ ಮತ್ತು ಸುನೀತಾ ಬಾರ್ಡೆ ಅವರ ಫಿಂದ್ರಿ ಅವರ ಕೆಲವು ನೆಚ್ಚಿನ ಪುಸ್ತಕಗಳು, ಈ ಪುಸ್ತಕಗಳು ಅಂಚಿನಲ್ಲಿರುವ ಮಹಿಳೆಯರ ಬದುಕಿನ ಕುರಿತಾದ ಕತೆಗಳನ್ನು ಹೇಳುತ್ತವೆ. ಅವರು ಮಹಿಳಾ ಅಧ್ಯಯನದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆಯಲು ಬಯಸುತ್ತಾರೆ ಮತ್ತು ಈಗಾಗಲೇ ಸೋನಿಪತ್‌ನ ಅಶೋಕ ವಿಶ್ವವಿದ್ಯಾಲಯದಲ್ಲಿ ಯಂಗ್ ಇಂಡಿಯಾ ಫೆಲೋ ಆಗಿ ಆಯ್ಕೆಯಾಗಿದ್ದಾರೆ.
ಯವತ್ಮಳ್ ನಗರ ಆಶಾರ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. “ನನ್ನ ಸಂಬಂಧಿಕರು ಸಮಾಜ ಸೇವೆ ವಿಷಯದಲ್ಲಿ ಪಡೆಯುವುದನ್ನು ಕೀಳು ಎಂದು ಭಾವಿಸಬಹುದು ಆದರೆ ಅದು ನನಗೆ ಬಹಳಷ್ಟು ಲಾಭ ತಂದುಕೊಟ್ಟಿದೆ” ಎಂದು ಅವರು ಹೇಳುತ್ತಾರೆ. ಮಥುರಾ ಲಭಾನ್ ಸಮುದಾಯಕ್ಕೆ ಸೇರಿದ ಮನೆಗಳ ಗುಂಪನ್ನು ತಾಂಡೆ ಎಂದು ಕರೆಯಲಾಗುತ್ತದೆ. ಇವು ಸಾಮಾನ್ಯವಾಗಿ ಊರುಗಳಿಂದ ದೂರವಿರುತ್ತವೆ. "ಈ ಪ್ರತ್ಯೇಕತೆಯಿಂದಾಗಿ ನಮಗೆ ಆಧುನಿಕ, ಪ್ರಗತಿಪರ ಚಿಂತನೆಯೊಂದಿಗೆ ಸಂಪರ್ಕದಲ್ಲಿರಲು ಸಾಧ್ಯವಾಗುತ್ತಿಲ್ಲ" ಎಂದು ಆಶಾ ಹೇಳುತ್ತಾರೆ. ಕಾಲೇಜಿನಲ್ಲಿ ಅವರ ಶಿಕ್ಷಕರು ಶ್ರದ್ಧೆಯಿಂದ ಮಾರ್ಗದರ್ಶನ ನೀಡಿದರು, ವಿಶೇಷವಾಗಿ ಮರಾಠಿ ಕಲಿಸಿದ ಪ್ರೊಫೆಸರ್ ಘನಶ್ಯಾಮ್ ದರಾನೆ.
"ಮಹಿಳೆಯರಿಗೆ ಸಾಧಿಸುವ ಸಾಮರ್ಥ್ಯವಿಲ್ಲ ಎನ್ನುವ ನಂಬಿಕೆಯಿದೆ" ಎಂದು ಆಶಾ ದುಃಖಕ್ಕಿಂತ ಹೆಚ್ಚು ಆಕ್ರೋಶದಿಂದ ಹೇಳುತ್ತಾರೆ. "ನಾನು ಅದನ್ನು ಬದಲಾಯಿಸಲು ಬಯಸುತ್ತೇನೆ" ಎಂದು ಅವರು ಹೇಳುತ್ತಾರೆ, "ನಾನು ಏನನ್ನಾದರೂ ಸಾಧಿಸಿ ನಂತರ ನನ್ನ ಹಳ್ಳಿಗೆ ಹಿಂತಿರುಗಿ ಹುಡುಗಿಯರಲ್ಲಿ ಪ್ರಗತಿಪರ ಬದಲಾವಣೆಯನ್ನು ತರಲು ಬಯಸುತ್ತೇನೆ. ನಾನು ಓಡಿಹೋಗಲು ಬಯಸುವುದಿಲ್ಲ."
ಆದರೆ ಅದಕ್ಕೂ ಮೊದಲು ಅವರು ಮುಂಬರುವ ಮದುವೆಯ ಹಂಗಾಮನ್ನು ಎದುರಿಸಬೇಕಿದೆ. ಈ ಸಮಯದಲ್ಲಿ ಮದುವೆಯ ಒತ್ತಡ ಹೆಚ್ಚಿರುತ್ತದೆ ಎನ್ನುತ್ತಾರೆ ಆಶಾ. “ಆ ಸಮಯವನ್ನು ಎದುರಿಸಲು ನನಗೆ ಬಹಳ ಶಕ್ತಿ ಬೇಕಾಗುತ್ತದೆ.”
ಅನುವಾದ: ಶಂಕರ. ಎನ್. ಕೆಂಚನೂರು