ಗೋಕುಲ್ ಹಗಲು ರಾತ್ರಿ ಬೆಂಕಿಯೆದುರು ದುಡಿಯುತ್ತಾರೆ. ಅವರು ಕಬ್ಬಿಣವನ್ನು ಕೆಂಪಗೆ ಕಾಯಿಸಿ, ಬಡಿದು ಅದಕ್ಕೆ ರೂಪರೇಖೆಯನ್ನು ನೀಡುತ್ತಾರೆ. ಬೆಂಕಿಯಿಂದ ಹೊರಡುವ ಕಿಡಿಗಳು ಅವರ ಬಟ್ಟೆ ಮತ್ತು ಶೂಗಳ ಮೇಲೆ ರಂಧ್ರವನ್ನು ಉಂಟುಮಾಡಿವೆ. ಅವರ ಕೈಗಳ ಮೇಲಿನ ಸುಟ್ಟಗಾಯಗಳು ಭಾರತದಆರ್ಥಿಕತೆಯ ಚಕ್ರಗಳನ್ನು ಚಲಿಸುವಂತೆ ಮಾಡುವಲ್ಲಿ ಅವರ ಕಠಿಣ ಪರಿಶ್ರಮದ ಪಾಲಿರುವುದಕ್ಕೆಸಾಕ್ಷಿ ಹೇಳುತ್ತಿದ್ದವು.
ಬಜೆಟ್ ಕುರಿತು ಅವರನ್ನು ಕೇಳಿದಾಗ, ಅವರು ಮರಳಿ “ಕ್ಯಾ ಹುಂದಾ ಹೈ [ಹಾಗಂದ್ರೆ ಏನು]?” ಎಂದು ಕೇಳಿದರು.
2025ರ ಬಜೆಟ್ ಮಂಡಿಸಿ ಆಗಷ್ಟೇ 48 ಗಂಟೆಗಳು ಕಳೆದಿರಬಹುದು. ಅದರ ಕುರಿತಾದ ಸುದ್ದಿಗಳು ದೇಶಾದ್ಯಂತ ಮಿಂಚಿನಂತೆ ಹರಡುತ್ತಿತ್ತು. ಆದರೆ ಬಗ್ರಿಯಾ ಸಮುದಾಯದ ಅಲೆಮಾರಿ ಕಮ್ಮಾರ ಗೋಕುಲ್ ಪಾಲಿಗೆ ಇದು ಯಾವ ಬದಲಾವಣೆಯನ್ನೂ ತಂದಿರಲಿಲ್ಲ.
"ನೋಡಿ, ಯಾರೂ ನಮಗಾಗಿ ಏನನ್ನೂ ಮಾಡಿಲ್ಲ. ಸುಮಾರು 700-800 ವರ್ಷಗಳು ಇದೇ ರೀತಿ ಕಳೆದಿವೆ. ನಮ್ಮ ತಲೆಮಾರುಗಳು ಪಂಜಾಬಿನ ಮಣ್ಣಿನಲ್ಲಿ ಹೂತುಹೋಗಿವೆ. ಯಾರೂ ನಮಗೆ ಏನನ್ನೂ ನೀಡಿಲ್ಲ" ಎಂದು ನಲವತ್ತರ ಹರೆಯದ ಈ ಕಮ್ಮಾರ ಹೇಳುತ್ತಾರೆ.




